ಅಪೋಸ್ತಲರ ಕೃತ್ಯಗಳು 1:1ರ ವಾಕ್ಯವು ನಮಗೆ ಒಂದು ಮುಖ್ಯವಾದ ವಿಷಯವನ್ನು ಕಲಿಸುತ್ತದೆ. ಅಪೊಸ್ತಲರ ಕೃತ್ಯಗಳ ಪುಸ್ತಕವನ್ನು ಬರೆದ ಲೂಕನು ಪೌಲನ ಸಹೋದ್ಯೋಗಿಯಾಗಿದ್ದನು ಮತ್ತು ಇದನ್ನು ಬರೆಯುವುದಕ್ಕೆ ಮೊದಲು ಆತನು ಲೂಕನ ಸುವಾರ್ತೆಯ ಪುಸ್ತಕವನ್ನು ಬರೆದನು. ಆತನು ಇವೆರಡು ಪುಸ್ತಕಗಳನ್ನು ಥೆಯೊಫಿಲನು ಎಂಬ ವ್ಯಕ್ತಿಗೆ ಬರೆದನು. ಅಪೊಸ್ತಲರ ಕೃತ್ಯಗಳ ಆರಂಭದಲ್ಲಿ, ಲೂಕನು ತಾನು ಬರೆದ ಸುವಾರ್ತೆಯನ್ನು ಉಲ್ಲೇಖಿಸುತ್ತಾ, "ಥೆಯೊಫಿಲನೇ, ನಾನು ರಚಿಸಿದ ಮೊದಲನೆಯ ಚರಿತ್ರೆಯಲ್ಲಿ ಯೇಸುವು ಮಾಡುವದಕ್ಕೆ ಮತ್ತು ಕಲಿಸುವದಕ್ಕೆ ಪ್ರಾರಂಭಿಸಿದ ಎಲ್ಲವನ್ನು ವಿವರಿಸಿದ್ದೇನೆ ..." ಎನ್ನುತ್ತಾನೆ. ನೀವು ಲೂಕನು ಬರೆದ ಸುವಾರ್ತೆಗೆ ಒಂದು ಶೀರ್ಷಿಕೆಯನ್ನು ನೀಡುವಂತೆ ಆತನನ್ನು ಕೇಳಿದ್ದರೆ ಆತನು, "ಯೇಸುವು ಮಾಡುವದಕ್ಕೆ ಮತ್ತು ಉಪದೇಶಿಸುವದಕ್ಕೆ ಪ್ರಾರಂಭಿಸಿದ ಎಲ್ಲಾ ಸಂಗತಿಗಳು" ಎಂದು ಹೇಳುತ್ತಿದ್ದನು. "ಯೇಸುವು ಬೋಧಿಸಿದ ಎಲ್ಲಾ ಸಂಗತಿಗಳು" ಎಂದಲ್ಲ, ಆದರೆ "ಆತನು ಕಾರ್ಯರೂಪದಲ್ಲಿ ಮಾಡಿದ ಮತ್ತು ಕಲಿಸಿದ ಎಲ್ಲಾ ಸಂಗತಿಗಳು." ಯೇಸುವಿನ ಜೀವಿತದ ಒಂದು ಮೂಲತತ್ವ ಏನೆಂದರೆ, ಅವರು ತಾನು ಮಾಡದಿದ್ದ ಸಂಗತಿಯನ್ನು ಇತರರಿಗೆ ಕಲಿಸಲಿಲ್ಲ. ಅವರ ಮೂಲತತ್ವದ ಸಾರಾಂಶ: ಮಾಡು ಮತ್ತು ಅನಂತರ ಕಲಿಸು. ಬೋಧಿಸು ಮತ್ತು ಮಾಡು ಎಂದಲ್ಲ, ಆದರೆ ಮಾಡು ಮತ್ತು ಕಲಿಸು. ಬೋಧಿಸಿದ್ದನ್ನು ಮಾಡುವುದು ಯೇಸುವಿನ ಪದ್ಧತಿಯಾಗಿರಲಿಲ್ಲ; ಅವರು ಈಗಾಗಲೇ ಅಭ್ಯಾಸಿಸಿದ್ದನ್ನು ಮತ್ತು ಈಗಲೂ ಮಾಡುತ್ತಿದ್ದುದನ್ನು ಬೋಧಿಸಿದರು. ಇದೇ ಆ ಮೂಲತತ್ವವು.
ಇದರ ಆಧಾರದ ಮೇಲೆ, ಅಪೊಸ್ತಲರ ಕೃತ್ಯಗಳ ಪುಸ್ತಕಕ್ಕೆ ಒಂದು ಶೀರ್ಷಿಕೆಯನ್ನು ನೀಡುವಂತೆ ನೀವು ಲೂಕನನ್ನು ಕೇಳಿದ್ದರೆ, ಆತನು ಯಾವ ಶೀರ್ಷಿಕೆಯನ್ನು ನೀಡುತ್ತಿದ್ದನೆಂದು ನೀವು ಭಾವಿಸುತ್ತೀರಿ? ಲೂಕನ ಸುವಾರ್ತೆಯು "ಯೇಸುವು ತನ್ನ ಭೌತಿಕ ಶರೀರದ ಮೂಲಕ ಜೀವಿಸಿ ಕಲಿಸಲು ಆರಂಭಿಸಿದ ಎಲ್ಲಾ ಸಂಗತಿಗಳು" ಎಂದಾಗಿದ್ದರೆ, ಆಗ ಅಪೊಸ್ತಲರ ಕೃತ್ಯಗಳ ಪುಸ್ತಕವು, "ಯೇಸುವು ತನ್ನ ಆತ್ಮಿಕ ಶರೀರ, ಅಂದರೆ ತನ್ನ ಕ್ರೈಸ್ತಸಭೆಯ ಮೂಲಕ ಮಾಡುತ್ತಾ ಮತ್ತು ಬೋಧಿಸುತ್ತಾ ಮುಂದುವರಿಸಿದ ಎಲ್ಲಾ ಸಂಗತಿಗಳು"ಎಂದಾಗಿರುತ್ತದೆ. ನಾವು ಮಾಡಬೇಕಾದ ಸೇವೆ ಇದೇ ಆಗಿದೆ - ಯೇಸುವು ತನ್ನ ಮೂವತ್ಮೂರು ವರ್ಷಗಳ ಭೂಲೋಕದ ಜೀವಿತವನ್ನು ಜೀವಿಸಿ ಅನಂತರ ಬೋಧಿಸಲು ಆರಂಭಿಸಿದ ಎಲ್ಲವನ್ನು ನಾವು ಮಾಡಲು ಪ್ರಾರಂಭಿಸಿ ನಂತರ ಅದನ್ನು ಇತರರಿಗೆ ಕಲಿಸುತ್ತಾ ಮುಂದುವರಿಯುವುದು. ಈ ಕಾರಣಕ್ಕಾಗಿ ಕ್ರೈಸ್ತಸಭೆಯು ಯೇಸು ಕ್ರಿಸ್ತನ ದೇಹವೆಂದು ಕರೆಯಲ್ಪಡುತ್ತದೆ. ಇದಕ್ಕಾಗಿಯೇ ನಾವು ಯೇಸುವು ಕಲಿಸಿದ ಎಲ್ಲವನ್ನು ಅರ್ಥ ಮಾಡಿಕೊಳ್ಳುವುದು ಅವಶ್ಯವಾಗಿದೆ. ಏಕೆಂದರೆ ನಾವು ಅದನ್ನು ಜೀವಿಸಿ ನಂತರ ಅದನ್ನು ಇತರರಿಗೆ ಕಲಿಸಬೇಕಿದೆ.
ಮುಂದೆ ಅಪೊಸ್ತಲರ ಕೃತ್ಯಗಳಲ್ಲಿ ಇದರ ಒಂದು ಶ್ರೇಷ್ಠವಾದ ನಿರೂಪಣೆಯಿದೆ. ಅಪೋಸ್ತಲರ ಕೃತ್ಯಗಳು 10:4ರಲ್ಲಿ, ದೇವರು ರೋಮ್ ರಾಜ್ಯದ ಶತಾಧಿಪತಿಯಾದ ಕೊರ್ನೇಲ್ಯನಿಗೆ, "ನಿನ್ನ ಪ್ರಾರ್ಥನೆಗಳು ದೇವರ ಮುಂದೆ ಜ್ಞಾಪಕಾರ್ಥವಾಗಿ ಬಂದಿವೆ ಮತ್ತು ನೀನು ಬಡಜನರಿಗೆ ಮಾಡಿದ ದಾನಧರ್ಮಗಳು ಸಹ ದೇವರ ಮುಂದೆ ಜ್ಞಾಪಕಾರ್ಥವಾಗಿ ಬಂದಿವೆ," ಎಂದು ತಿಳಿಸಲು ಒಬ್ಬ ದೇವದೂತನನ್ನು ಕಳುಹಿಸಿದರು. ಆದರೆ ಆತನು ಕೊರ್ನೇಲ್ಯನಿಗೆ ಸುವಾರ್ತೆಯನ್ನು ಯಾಕೆ ನೀಡಲಿಲ್ಲ? ಆ ದೇವದೂತನು ಕೊರ್ನೇಲ್ಯನನ್ನು, "ನೀನೊಬ್ಬ ಪಾಪಿಯಾಗಿದ್ದಿ, ನಿನ್ನ ಪಾಪಗಳಿಗಾಗಿ ಕ್ರಿಸ್ತನು ಸತ್ತನು ಮತ್ತು ಮೂರನೆಯ ದಿನದಲ್ಲಿ ಎದ್ದನು, ನೀನು ಆತನನ್ನು ನಿನ್ನ ಕರ್ತನನ್ನಾಗಿ ಸ್ವೀಕರಿಸಬೇಕು, ಪಶ್ಚಾತ್ತಾಪ ಪಡಬೇಕು ಮತ್ತು ಆತನನ್ನು ನಂಬಬೇಕು, ಇವೆಲ್ಲವೂ ನಿನಗೆ ತಿಳಿದಿದೆಯೇ?" ಎಂದು ಏಕೆ ಪ್ರಶ್ನಿಸಲಿಲ್ಲ? ಆ ದೇವದೂತನು ಅದನ್ನು ಹೇಳಲು ಸಾಧ್ಯವಿರಲಿಲ್ಲ. ಅವನು, "ನಿನ್ನ ಪ್ರಾರ್ಥನೆಗಳೂ ನಿನ್ನ ದಾನಧರ್ಮಗಳೂ ಮೇಲೆ ಏರಿವೆ, ಈಗ ನೀನು ಯಾರನ್ನಾದರೂ ಕಳುಹಿಸಿ ಪೇತ್ರನನ್ನು ಕರೆಯಿಸಬೇಕು; ಆತನು ಯೊಪ್ಪ ಎಂಬ ದೂರದ ಊರಿನಲ್ಲಿದ್ದಾನೆ. ಪೇತ್ರನು ಇಲ್ಲಿಗೆ ಬರಲು ಕೆಲವು ದಿನಗಳು ಬೇಕಾಗಬಹುದು, ಆದರೆ ನೀನು ಅವನಿಗಾಗಿ ಕಾಯಬೇಕು,"ಎಂದು ಮಾತ್ರ ಹೇಳಬಹುದಾಗಿತ್ತು. ಇದರ ನಂತರ ದೇವದೂತನು ಹೊರಟುಹೋದನು. ಪೇತ್ರನು ಕೊರ್ನೇಲ್ಯನಿಗೆ ಹೇಳಬೇಕಾಗಿದ್ದ ಮಾತನ್ನು ಆ ದೇವದೂತನೇ ನಿಖರವಾಗಿ ಹೇಳಬಹುದಾಗಿತ್ತೆಂದು ನಿಮಗೆ ಅನ್ನಿಸುವುದಿಲ್ಲವೇ? ದೇವದೂತನಿಗೆ ಸುವಾರ್ತೆಯು ಬಹಳ ಸ್ಪಷ್ಟವಾಗಿ ತಿಳಿದಿತ್ತು. ಸರ್ವಶಕ್ತನಾದ ದೇವರು ದೇವದೂತನು ಕೊರ್ನೇಲ್ಯನಿಗೆ ಸುವಾರ್ತೆಯನ್ನು ಸಾರಲು ಅನುಮತಿಸದಿದ್ದುದಕ್ಕೆ ಒಂದು ಬಹಳ ಮುಖ್ಯವಾದ ಕಾರಣವಿದೆ. ಕೊರ್ನೇಲ್ಯನು ಸುವಾರ್ತೆಯನ್ನು ಕೇಳಿಸಿಕೊಳ್ಳಲು ಪೇತ್ರನು ಬರುವ ವರೆಗೂ ಅನೇಕ ದಿನಗಳ ಕಾಲ ಕಾಯಬೇಕಿತ್ತು, ಯಾಕೆಂದರೆ ಆ ದೇವದೂತನು ಸುವಾರ್ತೆಯನ್ನು ಅನುಭವಿಸಿರಲಿಲ್ಲ. ಪೇತ್ರನು ಹೇಳಿದ ಮಾತನ್ನು, ಅಂದರೆ, "ನಾನೊಬ್ಬ ಪಾಪಿಯಾಗಿದ್ದೆ, ಆದರೆ ಯೇಸುವು ನನಗಾಗಿ ಸತ್ತನು, ಮತ್ತು ಆತನ ರಕ್ತವು ನನ್ನ ಪಾಪವನ್ನು ಶುದ್ಧೀಕರಿಸಿತು, ಮತ್ತು ನಾನು ಕ್ಷಮಿಸಲ್ಪಟ್ಟೆನು," ಎಂಬುದಾಗಿ ಆ ದೇವದೂತನು ಹೇಳಲು ಸಾಧ್ಯವಿರಲಿಲ್ಲ.
"ನಾವು ಕಾರ್ಯರೂಪದಲ್ಲಿ ಮಾಡಿ ಅನಂತರ ಬೋಧಿಸಬೇಕು, ನಾವು ಮಾಡದಿರುವ ಕಾರ್ಯವನ್ನು ಬೋಧಿಸಬಾರದು, ಎಂದು ಯೇಸುವು ಬಯಸುತ್ತಾರೆ. ನಾವು ಬೋಧಿಸುವುದರ ಮೂಲಕ ಪ್ರಾರಂಭಿಸುವುದಿಲ್ಲ; ನಾವು ಕಾರ್ಯರೂಪದಲ್ಲಿ ಮಾಡುವುದರ ಮೂಲಕ ಪ್ರಾರಂಭಿಸುತ್ತೇವೆ"
ದೇವದೂತನು ಆ ಮಾತನ್ನು ಹೇಳಲು ಸಾಧ್ಯವಾಗದ್ದರಿಂದ, ಅವನು ಬೋಧಿಸಲು ಸಾಧ್ಯವಿರಲಿಲ್ಲ. ಅವನು ಮನಸ್ಸಿನಲ್ಲಿ ಮಾತ್ರ ಅರಿತುಕೊಂಡಿದ್ದ ಸತ್ಯವನ್ನು ಬೋಧಿಸಲು ಸಾಧ್ಯವಿರಲಿಲ್ಲ. ಬಹುಶಃ ಆ ದೇವದೂತನು ಪೇತ್ರನಿಗಿಂತ ಉತ್ತಮವಾಗಿ ಬೋಧನೆ ಮಾಡಬಹುದಾಗಿತ್ತು; ಅದು ಪ್ರಾಮುಖ್ಯವಲ್ಲ. ಅವನಿಗೆ ಸುವಾರ್ತೆಯ ಅನುಭವ ಇರಲಿಲ್ಲ. ಹಾಗಾಗಿ ಅವನು ಬೋಧಿಸಲು ಅನುಮತಿಯನ್ನು ಹೊಂದಿರಲಿಲ್ಲ; ಇದು ನಮಗೆ ಒಂದು ಮೂಲತತ್ವವನ್ನು ಕಲಿಸುತ್ತದೆ: ನಾವು ಅನುಭವಿಸದೇ ಇರುವ ಸಂಗತಿಯನ್ನು ಬೋಧಿಸಲು ದೇವರು ನಮಗೆ ಅನುಮತಿ ನೀಡುವುದಿಲ್ಲ. ತಾವು ಅಭ್ಯಾಸ ಮಾಡದಿರುವ ಅಥವಾ ಅನುಭವಿಸದೇ ಇರುವ ಸಂಗತಿಯನ್ನು ಬೋಧಿಸುವ ಜನರಿಗೆ ಒಂದು ಪದವಿದೆ, ಹೊಸ ಒಡಂಬಡಿಕೆಯಲ್ಲಿ ಅವರನ್ನು "ಕಪಟಿ" ಎಂದು ಕರೆಯಲಾಗುತ್ತದೆ. ಕಪಟಿಗಳಾದ ಅನೇಕ ಬೋಧಕರು ಇದ್ದಾರೆ.
ನಾವು ಮೊದಲು ಆಚರಣೆ ಮಾಡಿ ಅನಂತರ ಅದನ್ನು ಬೋಧನೆ ಮಾಡುವುದನ್ನು ಯೇಸುವು ನಮ್ಮಿಂದ ಬಯಸುತ್ತಾರೆ ಮತ್ತು ಮಾಡದೇ ಇರುವುದನ್ನು ಬೋಧಿಸುವುದಲ್ಲ. ನಾವು ಬೋಧನೆ ಮಾಡುವುದಕ್ಕೆ ಮುಂಚೆ, ಯೇಸುವು ಹೇಳಿದಂತೆ ನಡೆಯಬೇಕು. ನೀವು ನಿಮ್ಮ ಜೀವಿತದಲ್ಲಿ ಯೇಸುವಿನ ಬೋಧನೆಯನ್ನು ಅನುಸರಿಸದೇ ಇದ್ದರೆ, ನೀವು ಸತ್ಯವೇದದ ವಿಶ್ವವಿದ್ಯಾನಿಲಯಕ್ಕೆ ಹೋಗಿ ಮೂರು ವರ್ಷಗಳು ವ್ಯಾಸಂಗ ಮಾಡಿ, ಒಂದು ಪದವಿಯನ್ನು ಗಳಿಸಿದೊಡನೆ, ನೀವು ಜನರಿಗೆ ಸತ್ಯವೇದವನ್ನು ಕಲಿಸುತ್ತೀರೆಂದು ಯೋಚಿಸಬಾರದು. ನನಗೆ ಒಂದು ಘಟನೆ ನೆನಪಿಗೆ ಬರುತ್ತದೆ: ಒಂದು ಸತ್ಯವೇದ ಕಾಲೇಜಿನಲ್ಲಿ ನಾಲ್ಕು ವರ್ಷದ ವ್ಯಾಸಂಗ ಮುಗಿಸಿ ಪದವಿಯನ್ನು ಗಳಿಸಿದ್ದ ಒಬ್ಬ ವಿದ್ಯಾರ್ಥಿಯ ಜೊತೆ ನಾನು ಮಾತನಾಡುತ್ತಿದ್ದೆ. ಅವನು ತನ್ನ ತರಗತಿಯ ಅತ್ಯುತ್ತಮ ವಿದ್ಯಾರ್ಥಿಯಾಗಿದ್ದನು. ನಾನು ಆ ಪದವಿ-ಪ್ರಧಾನ ಸಮಾರಂಭದಲ್ಲಿ ಭಾಷಣ ಮಾಡಿದ ನಂತರ, ಆತನು ಬಂದು ನನ್ನನ್ನು ಭೇಟಿಯಾದಾಗ ನಾನು ಅವನನ್ನು ಪ್ರಶ್ನಿಸಿದೆ. "ಈ ನಾಲ್ಕು ವರ್ಷಗಳ ವ್ಯಾಸಂಗದ ನಂತರ, ನಿನ್ನ ಅಂತರಂಗದ ಆತ್ಮಿಕ ಜೀವನ ಹೇಗಿದೆ?" ಅವನು ತುಂಬಾ ಪ್ರಾಮಾಣಿಕವಾಗಿ ಉತ್ತರಿಸಿದನು: "ನಾನು ಇಲ್ಲಿಗೆ ಮೊದಲಿಗೆ ಬಂದಿದ್ದಕ್ಕಿಂತ ಈಗ ಹೆಚ್ಚು ಪಾಪಗಳಲ್ಲಿ ಸೋತಿದ್ದೇನೆ".ನಾನು ಅವನನ್ನು ಕೇಳಿದೆ: "ಈಗ ನೀನು ಪದವಿಯನ್ನು ಪಡೆದುಕೊಂಡಿದ್ದೀ. ನೀನು ಒಬ್ಬ ಸಭಾಪಾಲಕನಾಗಿ ಹೋಗಿ ಜನರಿಗೆ ಏನು ಬೋಧಿಸುತ್ತೀ? ಇಬ್ರಿಯ ಮತ್ತು ಗ್ರೀಕ್ ಶಬ್ಧಾರ್ಥಗಳನ್ನೋ, ಅಥವಾ ಕಣ್ಣುಗಳು ಮಾಡುವ ಪಾಪವನ್ನು ಹೇಗೆ ಗೆಲ್ಲುವುದು ಎಂಬುದನ್ನೋ, ಮತ್ತು ಕೋಪವನ್ನು ಹೇಗೆ ತಡೆಹಿಡಿಯುವುದು ಎಂಬುದನ್ನೋ?" ಇದು ಜನರಿಗೆ ಅವಶ್ಯವಾಗಿದೆ, ಏಕೆಂದರೆ ಯೇಸುವು ಇದನ್ನೇ ಕಲಿಸಿದರು. ನೀನು ನಿನ್ನ ಸ್ವಂತ ಜೀವಿತದಲ್ಲಿ ಇವುಗಳ ಮೇಲೆ ಜಯ ಸಾಧಿಸದೇ ಹೋದರೆ, ನೀನು ಜನರಿಗೆ ಕೇವಲ ತಾತ್ವಿಕ ವಿಷಯಗಳನ್ನು ಮಾತ್ರ ಕಲಿಸಬಹುದು."
ಇದು ಅನೇಕ ಬೋಧಕರ ಮತ್ತು ಸಭಾಪಾಲಕರ ದುಃಸ್ಥಿತಿಯಾಗಿದೆ ಮತ್ತು ಅದಕ್ಕಾಗಿಯೇ ಹಲವು ವರ್ಷಗಳಿಂದ ಪ್ರಸಿದ್ಧನಾಗಿದ್ದ ಒಬ್ಬ ಬೋಧಕ ಅಥವಾ ಸಭಾಪಾಲಕನು ಅನೇಕ ವರ್ಷಗಳಿಂದ ತನ್ನ ಜೀವನದಲ್ಲಿ ವ್ಯಭಿಚಾರ ನಡೆಸುತ್ತಿದ್ದುದಾಗಿ ಒಪ್ಪಿಕೊಳ್ಳುವುದು ಕಂಡುಬರುತ್ತದೆ. ಸಭೆಯ ಸದಸ್ಯರು ಈ ಮನುಷ್ಯನ ಆತ್ಮಿಕ ಅಶುದ್ಧತೆಯನ್ನು ಗ್ರಹಿಸಲು ಏಕೆ ಸಾಧ್ಯವಾಗಲಿಲ್ಲ? ಏಕೆಂದರೆ ಅವರು ಆ ಬೋಧಕನ ಬೋಧನೆಯ ವಾಕ್ಚಾತುರ್ಯ ಮತ್ತು ಜ್ಞಾನದ ಕಡೆಗೆ ಆಕರ್ಷಿತರಾಗಿದ್ದರು. ನಾನು ಆಜ್ಞಾಪಿಸಿದ್ದೆಲ್ಲವನ್ನು ಅನುಸರಿಸುವಂತೆ ಅವರಿಗೆ ಬೋಧಿಸಿರಿ ಎಂದು ಯೇಸು ಹೇಳಿದರು.
ಯೇಸು ತನ್ನ ಶ್ರೇಷ್ಠ ಆಜ್ಞೆಯಲ್ಲಿ, "ನಾನು ನಿಮಗೆ ಆಜ್ಞಾಪಿಸಿದ ಎಲ್ಲವನ್ನೂ ಅನುಸರಿಸಲು ಅವರಿಗೆ ಕಲಿಸಿರಿ" ಎಂದು ಹೇಳಿದಾಗ, ಆತನು ಕಪಟತನದಿಂದ ಮುಕ್ತರಾಗಿರಲು ನಮಗೆ ಹೇಳುತ್ತಿದ್ದನು. ನಾವು ಮಾಡದಿರುವ ಕಾರ್ಯಗಳ ಬಗ್ಗೆ ಎಂದಿಗೂ ಬೋಧಿಸಬೇಡಿರಿ ಮತ್ತು ನಮ್ಮ ಜೀವನದಲ್ಲಿ ನಾವು ಮಾಡಿರುವಂಥದ್ದನ್ನು ಮಾತ್ರ ಇತರರಿಗೆ ಕಲಿಸಿರಿ, ಎಂದು ಆತನ ಮಾತಿನ ಅರ್ಥವಾಗಿದೆ.