WFTW Body: 

ನಾವು ಇಬ್ರಿ. 10:5ರಲ್ಲಿ, "ದೇವರಿಗೆ ನಮ್ಮ ಕಾಣಿಕೆಗಳು ಇಷ್ಟವಾಗುವುದಿಲ್ಲ" ಎಂಬುದಾಗಿ ಓದುತ್ತೇವೆ. ದೇವರು ಜನರ ಕಾಣಿಕೆಗಳನ್ನು ಇಷ್ಟಪಡುತ್ತಾರೆ ಎಂದು ಪದೇ ಪದೇ ಬೋಧಿಸುವ ಬೋಧಕರ ಮಾತಿನಿಂದ ಹಿಂಸೆಗೆ ಒಳಗಾಗಿರುವ ಜನರಿಗೆ, ನಾನು ಈ ವಚನವನ್ನು ತೋರಿಸಲು ಬಯಸುತ್ತೇನೆ. ದೇವರು ನಮ್ಮಿಂದ ಏನನ್ನು ಬಯಸುತ್ತಾರೆಂದು ಇಲ್ಲಿ ತೋರಿಸಲಾಗಿದೆ? ನಮ್ಮ ದೇಹ ಸಮರ್ಪಣೆಯನ್ನು ಅವರು ಬಯಸುತ್ತಾರೆ. ಹಳೆಯ ಒಡಂಬಡಿಕೆಯಲ್ಲಿ, "ನಿಮ್ಮ ಆದಾಯದ ದಶಮ ಭಾಗವನ್ನು ಲೇವಿಯರಿಗೆ ಕೊಡಿರಿ" ಎಂಬ ಆಜ್ಞೆಗೆ ಒತ್ತು ನೀಡಲಾಗಿತ್ತು. ಹೊಸ ಒಡಂಬಡಿಕೆಯಲ್ಲಿ, "ನಿಮ್ಮ ದೇಹಗಳನ್ನು ದೇವರಿಗೆ ಸಮರ್ಪಿಸಿರಿ" (ರೋಮಾ. 12:1) ಎಂಬ ವಚನಕ್ಕೆ ಒತ್ತು ನೀಡಲಾಗಿದೆ. ಜನರು ಆದಾಯದ ದಶಮ ಭಾಗವನ್ನು ಕೊಡುವಂತೆ ಒತ್ತಾಯಿಸುವ ಕ್ರೈಸ್ತಸಭೆಯು, ಹಳೆಯ ಒಡಂಬಡಿಕೆಗೆ ಸೇರಿದ ಒಂದು ಸಭೆಯಾಗಿದೆ.

ನಮ್ಮ ದೇಹವನ್ನು - ಅಂದರೆ, ನಮ್ಮ ಕಣ್ಣುಗಳು, ನಮ್ಮ ಕೈಗಳು, ನಮ್ಮ ನಾಲಿಗೆಗಳು, ಇತ್ಯಾದಿ - ದೇವರಿಗೆ ಸಜೀವ ಯಜ್ಞವಾಗಿ ಸಮರ್ಪಿಸುವ ವಿಚಾರಕ್ಕೆ ಪ್ರತಿಯೊಂದು ಹೊಸ ಒಡಂಬಡಿಕೆಯ ಸಭೆಯು ಒತ್ತು ಕೊಡಬೇಕು. ಇಂದು ದೇವರು ನಮ್ಮ ದೇಹವನ್ನು ಕಾಣಿಕೆಯಾಗಿ ಬಯಸುತ್ತಾರೆ, ಲೌಕಿಕ ವಸ್ತುಗಳನ್ನು ಅಲ್ಲ. ಶಿಲುಬೆಯ ಮೇಲೆ ಕ್ರಿಸ್ತನ ಮರಣವು ಹಳೆಯ ಒಡಂಬಡಿಕೆಯ ಪಸ್ಕದ ಕುರಿಯ ಯಜ್ಞಕ್ಕೆ ಸಮನಾದಂತೆ, ಹೊಸ-ಒಡಂಬಡಿಕೆಯಲ್ಲಿ ನಮ್ಮ ದೇಹಗಳನ್ನು ದೇವರಿಗೆ ಒಪ್ಪಿಸುವುದು ಹಳೆಯ ಒಡಂಬಡಿಕೆಯ ದಶಮ ಭಾಗಕ್ಕೆ ಸರಿಹೋಲುವ ಕಾಣಿಕೆಯಾಗಿದೆ. ನಾವು ಈಗ ಭೂಲೋಕದಲ್ಲಿ ದೇವರ ಕಾರ್ಯಕ್ಕಾಗಿ ಹಣವನ್ನು ಕೊಡುವ ಅವಶ್ಯಕತೆ ಇಲ್ಲವೆಂದು ಈ ಮಾತಿನ ಅರ್ಥವೇ? ನೀವು ಕೊಡುವಂತದ್ದು ಒಳ್ಳೆಯ ಸಂಗತಿಯೇ ಆಗಿದೆ, ಆದರೆ ದೇವರಿಗೆ ಬೇಕಾಗಿರುವದು ಕೇವಲ ಸಂತೋಷವಾಗಿ ಕೊಡುವಂಥ ಕಾಣಿಕೆ ಮಾತ್ರ (2 ಕೊರಿ. 9:7). ಏನೇ ಆದರೂ, ಮೊದಲನೆಯದಾಗಿ ಅವರಿಗೆ ಬೇಕಾಗಿರುವಂಥದ್ದು ನಿಮ್ಮ ದೇಹವಾಗಿದೆ. ಅವರಿಗೆ ತಮ್ಮ ದೇಹವನ್ನು ಒಪ್ಪಿಸಿ ಕೊಡುವಂಥವರು ಸಾಮಾನ್ಯವಾಗಿ ತಮ್ಮ ಸಮಸ್ತವನ್ನೂ ಸಲ್ಲಿಸುತ್ತಾರೆ. ಆದರೆ ಕೊಡುವಂಥದ್ದನ್ನು ಹರ್ಷದಿಂದಲೂ, ಉಲ್ಲಾಸದಿಂದಲೂ ಕೊಡುವುದು ಅವಶ್ಯವಾಗಿದೆ.

ಯೇಸುವು ಈ ಲೋಕಕ್ಕೆ ಬಂದಾಗ, ಅವರು ತನ್ನ ತಂದೆಗೆ ದಶಮ ಭಾಗವನ್ನು ಮತ್ತು ಲೌಕಿಕ ವಸ್ತುಗಳನ್ನು ಕಾಣಿಕೆಯಾಗಿ ಕೊಡಲು ಬರಲಿಲ್ಲ (ಇಬ್ರಿ. 10:5). ಅವರು ತನ್ನ ದೇಹವನ್ನು ದೇವರಿಗೆ ಯಜ್ಞವಾಗಿ ಕೊಡುವುದಕ್ಕೆ ಬಂದರು. ಅದಲ್ಲದೆ ಅವರು ಹೊಸ ಒಡಂಬಡಿಕೆಯ ಮಧ್ಯಸ್ಥರು ಆಗಿದ್ದಾರೆ ಮತ್ತು ಅವರು ನಮಗೆ ಕಲಿಸಿದ್ದು ಏನೆಂದರೆ, ದೇವರು ನಮ್ಮಿಂದ ಪ್ರಾಥಮಿಕವಾಗಿ ನಮ್ಮ ದೇಹವನ್ನು ಬಯಸುತ್ತಾರೆ ಎಂಬುದಾಗಿ.

ಯೇಸುವು ಪರಲೋಕದಲ್ಲಿ ಇದ್ದಾಗ ಯಾವತ್ತೂ ದೇಹಧಾರಿಯಾಗಿ ಇರಲಿಲ್ಲ. ಅವರು ಈ ಲೋಕಕ್ಕೆ ಬಂದಾಗ ತಂದೆಯು ಅವರಿಗೆ ಒಂದು ದೇಹವನ್ನು ಕೊಟ್ಟರು. ಅವರು ಆ ದೇಹದ ಮೂಲಕ ಏನು ಮಾಡಬೇಕಿತ್ತು? ಧರ್ಮ ಪ್ರಚಾರಕನಾಗಿ ಆಫ್ರಿಕಾ ಭೂಖಂಡದಂತ ತೊಡಕಿನ ಸ್ಥಳಕ್ಕೆ ಹೋಗಿ ತಂದೆಯನ್ನು ತಾನು ಪ್ರೀತಿಸುವುದಾಗಿ ಸಾಬೀತು ಮಾಡಬೇಕಿತ್ತೇ? ಅಥವಾ ಪ್ರತಿದಿನ 4 ಘಂಟೆಗಳ ಕಾಲ ಪ್ರಾರ್ಥನೆಯನ್ನೂ, ವಾರಕ್ಕೆ ಎರಡು ದಿನ ಉಪವಾಸವನ್ನೂ ಮಾಡಬೇಕಿತ್ತೇ? ಇಂಥದ್ದು ಯಾವುದೂ ಇಲ್ಲ. ಅವರು ಹೇಳಿದ ಮಾತು, "ಇಗೋ, ದೇವರೇ, ನಿನ್ನ ಚಿತ್ತವನ್ನು ನೆರವೇರಿಸುವುದಕ್ಕೆ ಬಂದಿದ್ದೇನೆ - ನಿನಗೆ ಯಜ್ಞ ನೈವೇದ್ಯಗಳನ್ನು ಸಮರ್ಪಿಸುವುದಕ್ಕೆ ಅಲ್ಲ" (ಇಬ್ರಿ. 10:7). ಯೇಸುವು ಈ ರೀತಿಯಾಗಿ ತನ್ನ ದೇಹವನ್ನು ಉಪಯೋಗಿಸಿದರು - ಮತ್ತು ನಾವೂ ಸಹ ನಮ್ಮ ದೇಹಗಳನ್ನು ಹಾಗೆಯೇ ಉಪಯೋಗಿಸಬೇಕು. ನಾವು ನಮ್ಮ ದೇಹವನ್ನು ದೇವರಿಗೆ ಸಮರ್ಪಿಸಿದಾಗ, ದೇಹದ ಪ್ರತಿಯೊಂದು ಅಂಗವೂ ಅವರ ಚಿತ್ತಕ್ಕೆ ಅನುಸಾರವಾಗಿ ನಡೆದುಕೊಳ್ಳಬೇಕು - ನಮ್ಮ ಕಣ್ಣುಗಳು, ಕೈಗಳು, ನಾಲಿಗೆಗಳು, ನಮ್ಮ ಆಕಾಂಕ್ಷೆಗಳು, ಬಯಕೆಗಳು, ಇತ್ಯಾದಿ. ಇದರ ನಂತರ ದಿನನಿತ್ಯವೂ ದೇವರ ಚಿತ್ತವನ್ನು ಅನುಸರಿಸಿ ನಡೆಯುವುದೇ ನಮ್ಮ ಜೀವನದ ಆಕಾಂಕ್ಷೆ ಆಗಿರುತ್ತದೆ.

ದೇವರ ಚಿತ್ತವು ನಮ್ಮಿಂದ ಮೊದಲನೆಯದಾಗಿ ಏನನ್ನು ನಿರೀಕ್ಷಿಸುತ್ತದೆ? "ದೇವರ ಚಿತ್ತವೇನೆಂದರೆ ನೀವು ಶುದ್ಧರಾಗಿ ಇರಬೇಕೆಂಬುದೇ" (1 ಥೆಸ. 4:3). ನಮ್ಮೆಲ್ಲರಿಗಾಗಿ ದೇವರ ಚಿತ್ತದ ಮೊದಲ ಅಂಶ ಇದಾಗಿದೆ. ಮುಂದೆ ನಮ್ಮ ಸೇವೆಗೆ ಸಂಬಂಧಿಸಿದಂತೆ, ನಾವು ಅಲ್ಲಿ ಇಲ್ಲಿ ಓಡಾಡುತ್ತಾ ದೇವರಿಗಾಗಿ ಏನಾದರೂ ಮಾಡಲಿಕ್ಕೆ ತವಕಿಸುವುದು ಸರಿಯಲ್ಲ. ದೇವರ ಸೇವೆಯಲ್ಲೂ ಸಹ ನಾವು ದೇವರ ಚಿತ್ತವನ್ನೇ ಪಾಲಿಸಬೇಕು. ಯೇಸುವು ನಮಗೆ ಕಲಿಸಿಕೊಟ್ಟ ಪ್ರಾರ್ಥನೆ ಏನೆಂದರೆ, "ನಿನ್ನ ಚಿತ್ತವು ಪರಲೋಕದಲ್ಲಿ ನೇರವೇರುವ ಪ್ರಕಾರ ಭೂಲೋಕದಲ್ಲೂ ನೆರವೇರಲಿ." ಪರಲೋಕದಲ್ಲಿ ದೇವದೂತರು ಅಲ್ಲಿ ಇಲ್ಲಿ ಓಡಾಡುತ್ತಾ, ದೇವರಿಗಾಗಿ ಏನಾದರೂ ಮಾಡಲು ತೊಡಗುವುದಿಲ್ಲ. ಯೇಸುವೂ ಸಹ ಭೂಲೋಕದಲ್ಲಿ ತನ್ನ ತಂದೆಗಾಗಿ ಏನಾದರೂ ಮಾಡಬೇಕೆಂದು ಸಿಕ್ಕಾಪಟ್ಟೆ ಓಡಲಿಲ್ಲ. ಅವರು ತನ್ನ ತಂದೆಯ ಚಿತ್ತವನ್ನು ಹುಡುಕಿ, ಅದನ್ನು ಮಾತ್ರ ಪೂರೈಸಿದರು.

ಯೇಸುವು 18ನೇ ವಯಸ್ಸಿನಿಂದ 30ನೇ ವಯಸ್ಸಿನ ವರೆಗೆ ಒಬ್ಬ ಬಡಗಿಯಾಗಿ ದುಡಿಯುವಂತೆ ತಂದೆಯು ಹೇಳಿದಾಗ, ಅವರು ಅದನ್ನೇ ಮಾಡಿದರು. ಅವರು ಅಷ್ಟು ವರ್ಷ ಪ್ರಾಪಂಚಿಕ ವೃತ್ತಿಯನ್ನು ಯಥಾರ್ಥವಾಗಿ ಮಾಡಿದ ನಂತರ, ತಂದೆಯು ಅವರನ್ನು 3 1/2 ವರ್ಷಗಳ ಕಾಲ ಸಂಚಾರ ಮಾಡಿ ಬೋಧಿಸುವಂತೆ ಕಳುಹಿಸಿದರು. 12 ವರ್ಷಗಳ ಕಾಲ ಬೆಂಚು-ಮೇಜುಗಳನ್ನು ತಯಾರಿಸುತ್ತಿದ್ದಾಗ ಆಗಲೀ, ಸುವಾರ್ತೆಯನ್ನು ಬೋಧಿಸುತ್ತಾ ಮತ್ತು ರೋಗಿಗಳನ್ನು ಗುಣಪಡಿಸುತ್ತಾ ಇದ್ದಾಗ ಆಗಲೀ, ಯೇಸುವು ತನ್ನ ತಂದೆಗೆ ಸಮನಾಗಿ ಪ್ರಿಯನಾಗಿದ್ದನು.

ಯೇಸುವು ಭೂಲೋಕಕ್ಕೆ ಒಬ್ಬ ಧರ್ಮ-ಪ್ರಚಾರಕನಾಗಲು ಅಥವಾ ಪೂರ್ಣಾವಧಿ ಸೇವಕನಾಗಲು ಬರಲಿಲ್ಲ. ತಂದೆಯ ಚಿತ್ತ ಏನೇ ಆಗಿದ್ದರೂ, ಅದನ್ನು ನೆರವೇರಿಸುವುದು ಮಾತ್ರ ಅವರು ಬಂದ ಉದ್ದೇಶವಾಗಿತ್ತು. ಬಡಗಿಯ ಕೆಲಸ ತನ್ನ ತಂದೆಯ ಚಿತ್ತವಾಗಿದ್ದಾಗ, ಅವರು ಅದನ್ನು ಮಾಡಿದರು. ಪೂರ್ಣಾವಧಿ ಸೇವಾಕಾರ್ಯ ತಂದೆಯ ಚಿತ್ತವಾಗಿದ್ದಾಗ, ಅವರು ಅದನ್ನು ಮಾಡಿದರು. ನಾವು ಸಹ ತಂದೆಯ ಚಿತ್ತವನ್ನು ಮಾಡಲು ಬದ್ಧರಾಗಿ ನಮ್ಮನ್ನು ಒಪ್ಪಿಸಿಕೊಳ್ಳಬೇಕು ಮತ್ತು ಯಾವುದೋ ಒಂದು ನಿರ್ದಿಷ್ಟ ಕೆಲಸವನ್ನು ಮಾಡಲಿಕ್ಕೆ ಅಲ್ಲ. ದೇವರು ನಿಮಗೆ ಒಬ್ಬ ಬಡಗಿಯಾಗಲು ಕರೆ ಕೊಡಬಹುದು ಮತ್ತು ಒಬ್ಬ ಧರ್ಮ-ಬೋಧಕನಾಗಿ ಕರೆ ಕೊಡದೆ ಇರಬಹುದು. ನೀವು ಇದಕ್ಕೆ ಸಿದ್ಧರಿದ್ದೀರಾ?

ಯೇಸುವು, "ಇಗೋ, ದೇವರೇ, ನಿನ್ನ ಚಿತ್ತವನ್ನು ನೆರವೇರಿಸುವುದಕ್ಕೆ ಬಂದಿದ್ದೇನೆ," ಎಂದು ಹೇಳಿದರು. ಅವರು ಮೊದಲನೇ ಒಡಂಬಡಿಕೆಯನ್ನು ತೆಗೆದುಹಾಕಿ, ಎರಡನೇ ಒಡಂಬಡಿಕೆಯನ್ನು ಈ ರೀತಿಯಾಗಿ ಸ್ಥಾಪಿಸಿದರು (ಇಬ್ರಿ. 10:8,9). ಮೊದಲ ಒಡಂಬಡಿಕೆಯಲ್ಲಿ ಬಹಳಷ್ಟು ಧಾರ್ಮಿಕ ಚಟುವಟಿಕೆಗಳು ಸೇರಿದ್ದವು - ಮುಖ್ಯವಾಗಿ ದೇವರ ಗುಡಾರ ಮತ್ತು ದೇವಾಲಯದ ಒಳಗಡೆ. ಆದರೆ ಯೇಸುವಿನ ಭೂಲೋಕದ ಜೀವಿತ ಅವಧಿಯ ಶೇಖಡಾ 90ರಷ್ಟು ಭಾಗದಲ್ಲಿ ಆತನು ಯಾವ ಧಾರ್ಮಿಕ ಕಾರ್ಯವನ್ನೂ ಮಾಡಲಿಲ್ಲ. ಆತನು ತಾಯಿಗೆ ಸಹಾಯ ಮಾಡುತ್ತಾ ಮತ್ತು ತನ್ನ ಕುಟುಂಬವನ್ನು ಪೋಷಿಸುತ್ತಾ - 30 ವರ್ಷಗಳ ಕಾಲ - ತನ್ನ ಮನೆಯಲ್ಲಿ ಜೀವಿಸಿದನು. ಇದರ ನಂತರ 3 1/2 ವರ್ಷಗಳ ಕಾಲ ಆತನು ಬೋಧಕನಾಗಿದ್ದನು. ಈ ರೀತಿಯಾಗಿ ಆತನು ತನ್ನ ತಂದೆಯು ಕೊಟ್ಟ ಕೆಲಸವನ್ನು ನೆರವೇರಿಸಿ, ತಂದೆಯನ್ನು ಮಹಿಮೆ ಪಡಿಸಿದನು (ಯೋಹಾ. 17:4 ನೋಡಿರಿ). ನಾವು ಇಲ್ಲಿ ತಿಳಕೊಳ್ಳ ಬೇಕಾದದ್ದು ಏನೆಂದರೆ, ನಿಮ್ಮ ಮನೆಯಲ್ಲಿ ತಾಯಿಗೆ ಸಹಾಯ ಮಾಡುವುದು ದೇವರ ದೃಷ್ಟಿಯಲ್ಲಿ ರೋಗಿಗಳನ್ನು ಗುಣಪಡಿಸುವಷ್ಟೇ ಮುಖ್ಯವಾದ ಕೆಲಸವಾಗಿದೆ. ಹೊಸ ಒಡಂಬಡಿಕೆಯಲ್ಲಿ, ನೀವು ಒಂದು ನಿರ್ದಿಷ್ಟ ಸಮಯದಲ್ಲಿ ಏನು ಮಾಡಬೇಕೆಂದು ದೇವರು ಬಯಸುತ್ತಾರೋ, ಅದು ದೇವರ ಚಿತ್ತವಾಗಿರುತ್ತದೆ - ಮತ್ತು ನೀವು ಆ ನಿರ್ದಿಷ್ಟ ಸಮಯದಲ್ಲಿ ನಿರ್ವಹಿಸಬಹುದಾದ ಅತಿ ಪರಿಶುದ್ಧ ಕಾರ್ಯ ಅದಾಗಿದೆ.