WFTW Body: 

ನಾವು ವರ್ಷದ ಅಂತ್ಯವನ್ನು ತಲಪುತ್ತಿರುವ ಈ ಸಮಯದಲ್ಲಿ, ಕೆಲವರು ತಮ್ಮ ಹಿಂದಿನ ದಿನಗಳ ಪಾಪದ ಜೀವಿತವು ದೇವರನ್ನು ನಿರಾಶೆ ಗೊಳಿಸಿದ್ದರಿಂದಾಗಿ, ಈಗ ದೇವರು ತಮಗಾಗಿ ಸಿದ್ಧಗೊಳಿಸಿರುವ ಉತ್ತಮ ಯೋಜನೆಯನ್ನು ಬಹುಶಃ ತಾವು ಸಫಲಗೊಳಿಸಲಾರೆವು ಎಂದು ಭಾವಿಸಬಹುದು.

ಈ ವಿಷಯದಲ್ಲಿ ನಾವು ನಮ್ಮ ಸ್ವಂತ ತಿಳುವಳಿಕೆ ಅಥವಾ ಸ್ವಂತ ವಿವೇಚನೆಯನ್ನು ಅವಲಂಬಿಸದೆ, ದೇವರ ವಾಕ್ಯ ಏನು ಹೇಳುತ್ತದೆಂದು ನೋಡೋಣ. ಮೊದಲನೆಯದಾಗಿ, ಸತ್ಯವೇದದ ಆರಂಭ ಹೇಗೆ ಆಗುತ್ತದೆಂದು ನೋಡಿರಿ. "ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು" (ಆದಿಕಾಂಡ 1:1). ದೇವರು ಆ ಆಕಾಶ ಮತ್ತು ಭೂಮಿಯನ್ನು ಸೃಷ್ಟಿಸಿದಾಗ ಅವು ಪರಿಪೂರ್ಣವಾಗಿ ಇದ್ದಿರಬೇಕು, ಏಕೆಂದರೆ ದೇವರ ಕೈಕೆಲಸವು ಯಾವತ್ತೂ ದೋಷಯುಕ್ತ ಅಥವಾ ಅಪರಿಪೂರ್ಣವಾಗಿ ಇರುವುದಿಲ್ಲ. ಆದರೆ ಅವರು ಸೃಷ್ಟಿಸಿದ ಕೆಲವು ದೇವದೂತರು ತಪ್ಪುದಾರಿಯಲ್ಲಿ ನಡೆದರು. ಈ ವಿಷಯವನ್ನು ಯೆಶಾಯ 14:11-15 ಮತ್ತು ಯೆಹೆಜ್ಕೇಲ. 28:13-18ರಲ್ಲಿ ವಿವರಿಸಲಾಗಿದೆ. ಇದರ ನಂತರ ಉಂಟಾದ ಪರಿಸ್ಥಿತಿಯನ್ನು, "ಭೂಲೋಕವು ಕ್ರಮವಿಲ್ಲದೆಯೂ, ಬರಿದಾಗಿಯೂ ಮತ್ತು ಕತ್ತಲಾಗಿಯೂ ಇತ್ತು" ಎಂದು ಆದಿಕಾಂಡ 1:2ರಲ್ಲಿ ವಿವರಿಸಲಾಗಿದೆ. ಆದಿಕಾಂಡ 1ರ ಮೂಂದಿನ ಭಾಗವು ವಿವರಿಸುವುದು ಏನೆಂದರೆ, ಆ ಕ್ರಮವಿಲ್ಲದ, ಬರಿದಾಗಿದ್ದ ಮತ್ತು ಕತ್ತಲಾಗಿದ್ದ ಜಗತ್ತನ್ನು ದೇವರು ಹೇಗೆ ಅತ್ಯಂತ ಸುಂದರವಾಗಿ ಪರಿವರ್ತಿಸಿ, ಕೊನೆಗೆ ಸ್ವತಃ ಅವರೇ "ಬಹಳ ಒಳ್ಳೇದಾಗಿದೆ" ಎಂದು ಹೇಳುವಂತೆ ಮಾಡಿದರು, ಎನ್ನುವದನ್ನು (ಆದಿಕಾಂಡ 1:31).

ನಾವು ಆದಿಕಾಂಡ 1:2-3 ವಚನಗಳಲ್ಲಿ ಓದುವಂತೆ, (ಅ) ದೇವರಾತ್ಮನು ಭೂಮಿಯ ಮೇಲೆ ಚಲಿಸಿದನು, ಮತ್ತು (ಆ) ದೇವರು ಮಾತನಾಡಿದರು. ಇವೆರಡು ವಿಷಯಗಳೇ ಪರಿವರ್ತನೆ ಉಂಟಾಗಲು ಮೂಲಕಾರಣಗಳಾಗಿದ್ದವು. ಇದು ನಮಗೆ ಇಂದಿನ ದಿನಕ್ಕಾಗಿ ಕೊಡುವ ಸಂದೇಶವೇನು? ಇಷ್ಟು ಮಾತ್ರ - ನಾವು ಎಷ್ಟು ಬಾರಿ ಸೋಲನ್ನು ಅನುಭವಿಸಿದ್ದರೂ ಸಹ ಅಥವಾ ನಾವು ಬಹಳ ಕಳಪೆಯಾದ ರೀತಿಯಲ್ಲಿ ಕೆಲಸಗಳನ್ನು ಮಾಡಿದ್ದರೂ ಸಹ, ದೇವರು ನಮ್ಮ ಜೀವನದಲ್ಲಿ ಅದ್ಭುತ ಮಹಿಮೆಯುಳ್ಳ ಸಂಗತಿಗಳನ್ನು ಮಾಡಲು ಶಕ್ತರಾಗಿದ್ದಾರೆ. ದೇವರು ಆಕಾಶ ಮತ್ತು ಭೂಮಿಯನ್ನು ಸೃಷ್ಟಿಸಿದಾಗ ಅವುಗಳಿಗಾಗಿ ಅತಿಶ್ರೇಷ್ಠವಾದ ಒಂದು ನಕಾಶೆಯನ್ನು ಸಿದ್ಧಗೊಳಿಸಿದ್ದರು. ಆದರೆ ದೇವದೂತರ ಮುಖ್ಯಸ್ಥನು ಬಿದ್ದುಹೋದದ್ದರಿಂದ ಈ ನಕಾಶೆಯನ್ನು ಪಕ್ಕಕ್ಕೆ ಇರಿಸಬೇಕಾಯಿತು. ಆದರೂ ಸಹ ದೇವರು ಭೂಮ್ಯಾಕಾಶಗಳನ್ನು ಮರುಸೃಷ್ಟಿಸಿ, ಅವುಗಳಿಂದ ಬಹಳ ಶ್ರೇಷ್ಠವಾದ ಫಲಿತಾಂಶವನ್ನು ಉಂಟುಮಾಡುವುದರಲ್ಲಿ ಸಫಲರಾದರು.

ಇದರ ನಂತರ ದೇವರು ಆದಾಮ ಮತ್ತು ಹವ್ವಳನ್ನು ಸೃಷ್ಟಿಸಿ ಹೊಸ ಆರಂಭವನ್ನು ತಂದರು. ಅವರಿಗಾಗಿಯೂ ಸಹ ದೇವರು ಒಂದು ಶ್ರೇಷ್ಠವಾದ ಯೋಜನೆಯನ್ನು ಮಾಡಿದ್ದರು ಎಂಬುದರಲ್ಲಿ ಸಂಶಯವಿಲ್ಲ, ಆದರೆ ಆ ಯೋಜನೆಯಲ್ಲಿ ಅವರು ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ತಿನ್ನುವುದು ಮಾತ್ರ ಸೇರಿರಲಿಲ್ಲ. ಆದರೆ ಆದಾಮ-ಹವ್ವರು ದೇವರಿಗೆ ಅವಿಧೇಯರಾದರು ಮತ್ತು ದೇವರು ಅವರಿಗಾಗಿ ಮಾಡಿದ್ದ ಆ ಮೊದಲನೇ ಯೋಜನೆಯನ್ನು ನಿಷ್ಫಲಗೊಳಿಸಿದರು. ಇಷ್ಟು ನಡೆದ ಮೇಲೆ, ಅವರು ದೇವರ ಶ್ರೇಷ್ಠ ಯೋಜನೆಯನ್ನು ಪೂರ್ಣಗೊಳಿಸುವುದು ಅಸಾಧ್ಯವಾದ ಮಾತೆಂದು ನಮ್ಮ ವಿವೇಚನೆ ಹೇಳಬಹುದು. ಆದರೆ ದೇವರು ಅವರಿಗೆ ಇನ್ನು ಮುಂದೆ ತನ್ನ ಶ್ರೇಷ್ಠ ಮಟ್ಟಕ್ಕಿಂತ ಕೀಳಾದ ಮಟ್ಟದಲ್ಲಿ ಜೀವಿಸುವಂತೆ ಆಜ್ಞಾಪಿಸಲಿಲ್ಲ. ಇಲ್ಲ. ದೇವರು ಆದಿಕಾಂಡ 3:15ರಲ್ಲಿ ಅವರಿಗೆ, "ಸ್ತ್ರೀಯ ಸಂತಾನವು ಸರ್ಪದ ತಲೆಯನ್ನು ಜಜ್ಜುವುದು" ಎಂಬ ವಾಗ್ದಾನವನ್ನು ನೀಡಿದರು. ಅದು ಕಲ್ವಾರಿಯ ಶಿಲುಬೆಯ ಮೇಲೆ ಕ್ರಿಸ್ತನು ಲೋಕದ ಪಾಪಗಳಿಗಾಗಿ ಸಾಯುವುದು ಮತ್ತು ಸೈತಾನನನ್ನು ಸೋಲಿಸುವ ವಾಗ್ದಾನವಾಗಿತ್ತು.

ಅನಾದಿ ಕಾಲದಿಂದಲೇ ಕ್ರಿಸ್ತನ ಮರಣವು ದೇವರ ಪರಿಪೂರ್ಣ ಯೋಜನೆಯಲ್ಲಿ ಸೇರಿತ್ತು ಎಂದು ನಮಗೆ ತಿಳಿದಿದೆ. ಆತನು "ಜಗದುತ್ಪತ್ತಿಗೆ ಮೊದಲೇ ಕೊಯ್ಯಲ್ಪಟ್ಟ ಕುರಿಯಾಗಿದ್ದನು" (ಪ್ರಕಟನೆ 13:8). ಆದರೆ ಆದಾಮ-ಹವ್ವರ ಪಾಪದ ಮೂಲಕ ದೇವರ ಯೋಜನೆ ನಿಷ್ಫಲವಾದ ಕಾರಣಕ್ಕಾಗಿ ಕ್ರಿಸ್ತನು ಸಾಯಬೇಕಾಯಿತು, ಎಂದೂ ಸಹ ನಮಗೆ ತಿಳಿದಿದೆ. ನಾವು ಇದನ್ನು ಗಮನಿಸಿ ನೋಡಿದಾಗ ಅರಿವಾಗುವುದು ಏನೆಂದರೆ, ಲೋಕದ ಪಾಪಗಳಿಗಾಗಿ ಮರಣಹೊಂದಲು ಕ್ರಿಸ್ತನನ್ನು ಕಳುಹಿಸುವ ದೇವರ ಪರಿಪೂರ್ಣ ಯೋಜನೆಯು ಆದಾಮನ ಅವಿಧೇಯತೆಯ ಮೂಲಕವಾಗಿಯೇ ಪೂರ್ಣಗೊಂಡಿತು, ಆದಾಮನ ಅವಿಧೇಯತೆ ಹೊರತಾಗಿ ಅಲ್ಲ! ಆದಾಮ ಮತ್ತು ಹವ್ವರು ಪಾಪಮಾಡದೇ ಇದ್ದಿದ್ದರೆ, ಕಲ್ವಾರಿಯ ಶಿಲುಬೆಯ ಮೇಲೆ ತೋರಿಸಲ್ಪಟ್ಟ ದೇವರ ಆಳವಾದ ಪ್ರೀತಿಯ ಪರಿಚಯ ನಮಗೆ ಆಗುತ್ತಿರಲಿಲ್ಲ.

ಹಾಗಾದರೆ ಸತ್ಯವೇದದ ಮೊದಲ ಪುಟಗಳಿಂದ ಮೊದಲುಗೊಂಡು ದೇವರು ನಮಗೆ ಸಾರಿ ಹೇಳಲು ಪ್ರಯತ್ನಿಸುತ್ತಿರುವ ಸಂದೇಶವೇನು? ಇಷ್ಟು ಮಾತ್ರ: ದೇವರು ಸೋತು ಹೋಗಿರುವ ಒಬ್ಬ ಮನುಷ್ಯನನ್ನು ಕೈಗೆತ್ತಿಕೊಂಡು, ಆತನನ್ನು ಒಂದು ಮಹಿಮಾನ್ವಿತ ಮಟ್ಟಕ್ಕೆ ಏರಿಸಬಲ್ಲರು ಮತ್ತು ತಾನು ಆತನಿಗಾಗಿ ಸಿದ್ಧಪಡಿಸಿರುವ ಪರಿಪೂರ್ಣ ಯೋಜನೆಯನ್ನು ಆತನ ಜೀವನದಲ್ಲಿ ಸಾಕಾರ ಮಾಡಬಲ್ಲರು. ಆದರೆ ನೀವು, "ನಾನು ನನ್ನ ಜೀವನವನ್ನು ಸಂಪೂರ್ಣವಾಗಿ ಕೆಡಿಸಿಕೊಂಡಿದ್ದೇನೆ. ಈಗ ನನ್ನ ಜೀವನದಲ್ಲಿ ದೇವರು ಅವರ ಪರಿಪೂರ್ಣ ಯೋಜನೆಯನ್ನು ಸಫಲಗೊಳಿಸಲು ಸಾಧ್ಯವಿದೆಯೆಂದು ನಾನು ನಂಬಲಾರೆ" ಎಂದು ಹೇಳಿದರೆ - ಆಗ ದೇವರಿಗೆ ತನ್ನ ಯೋಜನೆಯನ್ನು ಪೂರೈಸುವದು ಅಸಾಧ್ಯವಾಗುತ್ತದೆ. "ಇದಕ್ಕೆ ಕಾರಣ ಅವರಲ್ಲಿ ಸಾಮರ್ಥ್ಯವಿಲ್ಲ ಎಂದಲ್ಲ, ಆದರೆ ಅವರು ನಿಮಗಾಗಿ ಅದನ್ನು ಮಾಡಬಲ್ಲರು ಎಂಬ ನಂಬಿಕೆ ನಿಮ್ಮ ಹೃದಯದಲ್ಲಿ ಇಲ್ಲವಾದುದರಿಂದ."

ಯೇಸುವು ಹೇಳಿದ ಮಾತು ಏನೆಂದರೆ, ದೇವರು ನಮಗಾಗಿ ಮಾಡಲು ಅಸಾಧ್ಯವಾದದ್ದು ಯಾವುದೂ ಇಲ್ಲ - "ನಂಬುವವನಿಗೆ ಎಲ್ಲವೂ ಆಗುವದು." ನಮ್ಮ ಪ್ರತಿಯೊಂದು ವ್ಯವಹಾರಕ್ಕೂ "ನೀವು ನಂಬಿದಂತೆ ನಿಮಗೆ ಆಗಲಿ" (ಮತ್ತಾಯ 9:29) ಎಂಬ ದೇವರ ನಿಯಮವು ಅನ್ವಯಿಸುತ್ತದೆ. ನಾವು ನಂಬಿದ್ದನ್ನು ಪಡೆಯುತ್ತೇವೆ. ನಾವು ಯಾವುದನ್ನು ದೇವರು ನಮಗಾಗಿ ಮಾಡುವದು ಅಸಾಧ್ಯವೆಂದು ನಂಬುತ್ತೇವೋ, ಅದು ನಮ್ಮ ಜೀವನದಲ್ಲಿ ನೆರವೇರುವದೇ ಇಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಕ್ರಿಸ್ತನ ನ್ಯಾಯಾಸನದ ಮುಂದೆ ನೀವು ನೋಡುವುದು ಏನೆಂದರೆ, ನಿಮಗಿಂತ ಹೆಚ್ಚಾಗಿ ಜೀವನವನ್ನು ಕೆಡಿಸಿಕೊಂಡ ಮತ್ತೊಬ್ಬ ವಿಶ್ವಾಸಿಯು, ದೇವರು ಆತನಿಗಾಗಿ ಇರಿಸಿದ ಪರಿಪೂರ್ಣ ಯೋಜನೆಯನ್ನು ಪೂರೈಸಿರುತ್ತಾನೆ - ಇದಕ್ಕೆ ಒಂದೇ ಒಂದು ಕಾರಣ: ಕ್ರಮವಿಲ್ಲದೆಯೂ, ಬರಿದಾಗಿಯೂ ಇದ್ದ ತನ್ನ ಜೀವನವನ್ನು ದೇವರು ಕೈಗೆತ್ತಿಕೊಂಡು, ಅದರಿಂದ ಅತಿ ಶ್ರೇಷ್ಠವಾದುದನ್ನು ಮಾಡಬಲ್ಲರೆಂದು ಆತನು ನಂಬಿದ್ದನು.

ದೇವರು ಜೀವನದಲ್ಲಿ ಸೋತಿರುವವನಿಗೂ ತನ್ನ ಅತ್ಯುತ್ತಮ ಕೊಡುಗೆಯನ್ನು ನೀಡುತ್ತಾರೆ, ಎಂಬ ವಿಷಯ ಬಹಳ ವರ್ಷಗಳನ್ನು ಪೋಲುಮಾಡಿದ ದುಂದುಗಾರ ಮಗನ ಕಥೆಯಲ್ಲಿ ಕಂಡುಬರುತ್ತದೆ. ತಂದೆಯು ತನ್ನ ಆಸ್ತಿಯನ್ನು ಪೋಲು ಮಾಡಿದ್ದ ಆ ಮಗನು ಹಿಂದಿರುಗಿದಾಗ, "ಶ್ರೇಷ್ಠವಾದ ನಿಲುವಂಗಿಯನ್ನು ತಟ್ಟನೆ ತಂದು ಇವನಿಗೆ ತೊಡಿಸಿರಿ," ಎಂದು ಹೇಳುತ್ತಾನೆ. ಇದು ಸುವಾರ್ತಾ ಸಂದೇಶವಾಗಿದೆ - ಬಿಡುಗಡೆ ಮತ್ತು ಒಂದು ಹೊಸ ಆರಂಭ, ಕೇವಲ ಒಂದು ಬಾರಿಯಲ್ಲ, ಆದರೆ ಪದೇ ಪದೇ - ಏಕೆಂದರೆ ದೇವರು ಯಾರನ್ನೂ ಕೈಬಿಡುವುದಿಲ್ಲ. ತೋಟದ ಯಜಮಾನನು ಕೆಲಸದ ಕೂಲಿ ಆಳುಗಳನ್ನು ಗೊತ್ತುಮಾಡುವ ಸಂದರ್ಭವೂ ಸಹ ಇದನ್ನೇ ತೋರಿಸಿಕೊಡುತ್ತದೆ (ಮತ್ತಾಯ 20:1-16). ಕೇವಲ ಒಂದು ತಾಸು ದುಡಿದ ಜನರಿಗೂ ಒಂದು ಇಡೀ ದಿನದ ಕೂಲಿ ಸಿಗುತ್ತದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ತಮ್ಮ ಜೀವಿತದ 90% ಭಾಗವನ್ನು ಹಾಳು ಮಾಡಿದ್ದವರು (12 ತಾಸುಗಳಲ್ಲಿ 11), ತಮ್ಮ ಜೀವಿತದಲ್ಲಿ ಮಿಕ್ಕಿದ್ದ 10% ಭಾಗವನ್ನು ದೇವರಿಗಾಗಿ ಮಹಿಮಾನ್ವಿತ ರೀತಿಯಲ್ಲಿ ಉಪಯೋಗಿಸಲು ಸಾಧ್ಯವಾಯಿತು. ಇದು ಸೋಲಿನ ಅನುಭವ ಹೊಂದಿರುವ ಪ್ರತಿಯೊಬ್ಬನಿಗೆ ಅತಿ ಉತ್ಸಾಹದಾಯಕ ವಿಷಯವಾಗಿದೆ.

ನಿಮ್ಮ ಎಲ್ಲಾ ವಿಫಲತೆಗಳಿಗಾಗಿ ದೇವರ ಚಿತ್ತಾನುಸಾರವಾದ ದುಃಖ ನಿಮ್ಮ ಜೀವನದಲ್ಲಿದ್ದರೆ, ಮತ್ತು ನೀವು ದೇವರನ್ನು ನಂಬಿದರೆ, ಆಗ ನೀವು ಹಲವಾರು ಸೋಲುಗಳನ್ನು ಅನುಭವಿಸಿದ್ದರೂ, ದೇವರು ನಿಮಗೆ ನೀಡುವ ವಾಗ್ದಾನ, "ನಿಮ್ಮ ಪಾಪಗಳನ್ನು ನನ್ನ ನೆನಪಿಗೆ ಎಂದಿಗೂ ತರುವದಿಲ್ಲ," ಎಂದಾಗಿದೆ (ಇಬ್ರಿಯ. 8:12). ನಿಮ್ಮ ತಪ್ಪುಗಳು ಅಥವಾ ಸೋಲುಗಳು ಎಂಥವುಗಳಾಗಿದ್ದರೂ, ನೀವು ದೇವರೊಂದಿಗೆ ಒಂದು ಹೊಸ ಆರಂಭವನ್ನು ಮಾಡಬಹುದು. ಆದರೆ ನೀವು ಈಗಾಗಲೇ 1,000 ಹೊಸ ಆರಂಭಗಳನ್ನು ಕೈಗೊಂಡು ಅವುಗಳಲ್ಲಿ ಮತ್ತೆ ಮತ್ತೆ ಸೋಲು ಅನುಭವಿಸಿದ್ದರೂ ಸಹ, ಈ ದಿನ ನೀವು 1,001ನೇ ಹೊಸ ಆರಂಭವನ್ನು ಮಾಡಬಹುದು. ದೇವರು ನಿಮ್ಮ ಜೀವನದಲ್ಲಿ ಒಂದು ಮಹಿಮೆಯುಳ್ಳ ಕಾರ್ಯವನ್ನು ಮಾಡಲು ಸಿದ್ಧರಿದ್ದಾರೆ. ಹಾಗಾಗಿ, ದೇವರನ್ನು ನಂಬದೆ ಹೋಗದಿರಿ. ಅವರು ತನ್ನ ಅನೇಕ ಮಕ್ಕಳಿಗಾಗಿ ಅನೇಕ ಮಹತ್ಕಾರ್ಯಗಳನ್ನು ಮಾಡದಿರುವುದಕ್ಕೆ ಕಾರಣ, ಹಿಂದೆ ಅವರು ದೇವರಿಂದ ದೂರ ಸರಿದದ್ದು ಅಲ್ಲ, ಆದರೆ ಈಗ ಅವರು ಆತನನ್ನು ನಂಬದೆ ಇರುವದು. ಹಾಗಾದರೆ ನಾವು "ದೃಢನಂಬಿಕೆಯುಳ್ಳವರಾಗಿ ದೇವರನ್ನು ಘನಪಡಿಸೋಣ" (ರೋಮಾ. 4:20), ಮತ್ತು ಈ ವರೆಗೆ ನಾವು ಅಸಾಧ್ಯವೆಂದು ಭಾವಿಸಿದ ಸಂಗತಿಗಳಿಗಾಗಿ ಮುಂದಿನ ದಿನಗಳಲ್ಲಿ ದೇವರಲ್ಲಿ ನಂಬಿಕೆ ಇರಿಸೋಣ. ಎಲ್ಲಾ ಜನರು - ಯೌವನಸ್ಥರ ಜೊತೆಗೆ ವಯಸ್ಸಿನಲ್ಲಿ ಹಿರಿಯರು ಸಹ - ತಮ್ಮ ಹಿಂದಿನ ಸೋಲುಗಳು ಲೆಕ್ಕವಿಲ್ಲದಷ್ಟು ಇದ್ದರೂ, ಆ ತಪ್ಪುಗಳನ್ನು ಒಪ್ಪಿಕೊಂಡು, ತಮ್ಮನ್ನು ತಗ್ಗಿಸಿಕೊಂಡು ದೇವರ ಮೇಲೆ ಭರವಸೆ ಇಟ್ಟರೆ, ನಿರೀಕ್ಷೆಯನ್ನು ಇರಿಸಿಕೊಳ್ಳಬಹುದು.