WFTW Body: 

ಆತ್ಮದಲ್ಲಿ ಬಡವರಾಗಿರುವವರು ಪರಲೋಕ ರಾಜ್ಯಕ್ಕೆ ಬಾಧ್ಯರಾಗಿದ್ದಾರೆಂದು ಯೇಸುವು ಹೇಳಿದರು (ಮತ್ತಾ. 5:3). ಆತ್ಮದಲ್ಲಿ ಬಡವರು ಯಾರೆಂದರೆ ಯಾರು ತಮ್ಮ ಮಾನವ ಕೊರತೆಯನ್ನು ಅಥವಾ ಬಲಹೀನತೆಯನ್ನು ಅರಿತುಕೊಂಡಿರುತ್ತಾರೋ ಮತ್ತು ಈ ಕಾರಣಕ್ಕಾಗಿ ಯಾರು ತಮ್ಮನ್ನು ದೇವರ ಚಿತ್ತಕ್ಕೆ ಸಂಪೂರ್ಣವಾಗಿ ಒಪ್ಪಿಸಿಕೊಡುತ್ತಾರೋ, ಅಂಥವರು.

ಈ ರೀತಿಯಾಗಿ ನೋಡಿದರೆ, ಯೇಸುವು ತನ್ನ ಆತ್ಮದಲ್ಲಿ ನಿರಂತರವಾಗಿ ಬಡವರಾಗಿದ್ದರು. ಮನುಷ್ಯನು ಹೇಗೆ ಜೀವಿಸಬೇಕೆಂದು ದೇವರ ಸಂಕಲ್ಪವಾಗಿತ್ತೋ, ಯೇಸುವು ಆ ರೀತಿಯಾಗಿ ಜೀವಿಸಿದರು - ಅಂದರೆ, ಅವರು ನಿರಂತರವಾಗಿ ದೇವರನ್ನು ಆಶ್ರಯಿಸಿಕೊಂಡು, ದೇವರ ಮಾರ್ಗದರ್ಶನದ ಹೊರತಾಗಿ ತನ್ನ ಸ್ವಂತ ಮನಸ್ಸಿನ ಶಕ್ತಿಯನ್ನು ಉಪಯೋಗಿಸಿಕೊಳ್ಳಲು ನಿರಾಕರಿಸುತ್ತಾ ಜೀವಿಸಿದರು. ಅವರು ನುಡಿದ ಕೆಲವು ಮಾತುಗಳನ್ನು ಪರಿಗಣಿಸಿರಿ:

"ಮಗನಾದ ಯೇಸುವು ತನ್ನಷ್ಟಕ್ಕೇ (ಸ್ವಂತ ಇಷ್ಟದ ಪ್ರಕಾರ) ಏನೂ ಮಾಡಲಾರನು .... ನಾನು ಯಾವುದನ್ನೂ ನನ್ನ ಸ್ವಂತ ನಿರ್ಣಯದಿಂದ ಮಾಡಲಾರೆನು, ತಂದೆಯು ಬೋಧಿಸಿದ ಹಾಗೆ ನಾನು ಮಾತನಾಡುತ್ತೇನೆ ... ನಾನು ನನ್ನಷ್ಟಕ್ಕೇ ಬರಲಿಲ್ಲ, ತಂದೆಯು ನನ್ನನ್ನು ಕಳುಹಿಸಿದ್ದಾರೆ .... ನಾನು ನನ್ನ ಇಷ್ಟದ ಪ್ರಕಾರ ಮಾತನಾಡಲಿಲ್ಲ, ನನ್ನನ್ನು ಕಳುಹಿಸಿಕೊಟ್ಟ ತಂದೆಯೇ ಹೀಗೆ ಹೀಗೆ ಮಾತನಾಡಬೇಕು ಎಂಬುದಾಗಿ ನನಗೆ ಆಜ್ಞೆಯನ್ನು ಕೊಟ್ಟಿದ್ದಾರೆ .... ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಆಡುವದಿಲ್ಲ; ತಂದೆಯು ನನ್ನಲ್ಲಿ ಇದ್ದುಕೊಂಡು ತನ್ನ ಕ್ರಿಯೆಗಳನ್ನು ನಡಿಸುತ್ತಾರೆ" (ಯೋಹಾ. 5:19,30; 8:28,42; 12:49; 14:10).

"ತಂದೆಯಾದ ದೇವರ ಚಿತ್ತ ಹಾಗೂ ಅವರು ನಿರ್ಣಯಿಸಿದ ಕಾಲಕ್ಕೆ ತಕ್ಕಂತೆ ಯೇಸುವಿನ ಜೀವನದ ಪ್ರತಿಯೊಂದು ಅಂಶವೂ ನಿಯಂತ್ರಿಸಲ್ಪಟ್ಟಿತ್ತು"

ಯೇಸುವು ಅಗತ್ಯತೆಯನ್ನು ನೋಡಿದ ಮಾತ್ರಕ್ಕೆ ಅದರಂತೆ ಎಂದಿಗೂ ನಡೆಯಲಿಲ್ಲ. ಅವರು ಅಗತ್ಯತೆಯನ್ನು ನೋಡಿ, ಅದರ ಬಗ್ಗೆ ಕಾಳಜಿ ವಹಿಸುತ್ತಿದ್ದರು, ಆದರೆ ತನ್ನ ತಂದೆಯು ತಮಗೆ ಹೇಳಿದಾಗ ಮಾತ್ರ ಅದಕ್ಕನುಗುಣವಾಗಿ ನಡೆಯುತ್ತಿದ್ದರು.

ಲೋಕಕ್ಕೆ ರಕ್ಷಕನ ಅಗತ್ಯತೆ ಅತಿಯಾಗಿ ಇರುವಾಗ, ಯೇಸು ಪರಲೋಕದಲ್ಲಿ ಕಡಿಮೆ ಅಂದರೂ ನಾಲ್ಕು ಸಾವಿರ ವರ್ಷಗಳು ಕಾಯ್ದರು, ನಂತರ ತನ್ನ ತಂದೆಯು ಕಳುಹಿಸಿದಾಗ, ಅವರು ಭೂಲೋಕಕ್ಕೆ ಬಂದರು (ಯೋಹಾನ 8:42). "ತಕ್ಕ ಕಾಲ ಬಂದಾಗ, ದೇವರು ಸಮಯವನ್ನು ನಿರ್ಧರಿಸಿದಾಗ, ತನ್ನ ಮಗನನ್ನು ಕಳುಹಿಸಿಕೊಟ್ಟರು" (ಗಲಾತ್ಯ 4:4 - TLB ಅನುವಾದ). ದೇವರು ಪ್ರತಿಯೊಂದಕ್ಕೂ ಸರಿಯಾದ ಸಮಯವನ್ನು ನೇಮಿಸಿದ್ದಾರೆ (ಪ್ರಸಂಗಿ 3:1). ದೇವರೊಬ್ಬನಿಗೆ ಮಾತ್ರ ಆ ಸಮಯ ತಿಳಿದಿರುತ್ತದೆ, ಮತ್ತು ಯೇಸು ಮಾಡಿದ ಹಾಗೆ, ಪ್ರತಿಯೊಂದರಲ್ಲಿಯೂ ದೇವರ ಚಿತ್ತವನ್ನು ನಾವು ಹುಡುಕಿದಲ್ಲಿ , ನಾವು ತಪ್ಪಾಗಿ ನಡೆಯುವುದಿಲ್ಲ.

ಯೇಸು ಭೂಲೋಕಕ್ಕೆ ಬಂದಾಗ ಆತನು ಸುಮ್ಮನೆ ಎಲ್ಲಾ ಕಡೆ ಹೋಗಿ ತನಗೆ ಒಳ್ಳೇ ದೆಂದು ತೋರಿದ್ದನ್ನೆಲ್ಲ ಮಾಡಲಿಲ್ಲ. ಆತನ ಮನಸ್ಸು ಸಂಪೂರ್ಣವಾಗಿ ಶುದ್ಧವಾಗಿದ್ದಾಗ್ಯೂ ಆತನು ತನ್ನ ಮನಸ್ಸಿಗೆ ತೋಚಿದ ಒಳ್ಳೆಯ ಆಲೋಚನೆಯಂತೆ ನಡೆಯಲೇ ಇಲ್ಲ. ಆತನು ತನ್ನ ಮನಸ್ಸನ್ನು ಪವಿತ್ರಾತ್ಮನ ಸೇವಕನನ್ನಾಗಿ ಮಾಡಿದನು.

ತನಗೆ ದೇವರ ವಾಕ್ಯವು 12 ನೇ ವಯಸ್ಸಿನಲ್ಲೇ ಬಹಳ ಚೆನ್ನಾಗಿ ಗೊತ್ತಿದ್ದರೂ ಸಹ ತನ್ನ ಮುಂದಿನ 18 ವರ್ಷಗಳನ್ನು ಒಬ್ಬ ಬಡಗಿಯಾಗಿ ,ತನ್ನ ತಾಯಿಯೊಂದಿಗೆ ವಾಸ ಮಾಡುತ್ತಾ ಮೇಜು ಮತ್ತು ಕುರ್ಚಿಗಳನ್ನು ಮಾಡುತ್ತಾ ಕಳೆದನು. ತನ್ನ ಸುತ್ತ ಸಾಯುತ್ತಿರುವ ಮನುಷ್ಯರಿಗೆ ಅವಶ್ಯವಾದ ತಕ್ಕ ಸಂದೇಶ ತನ್ನ ಬಳಿ ಇದ್ದರೂ ಆತನು ಬೋಧನೆ ಮಾಡುವ ಸೇವೆಗೆಂದು ಹೊರಗೆ ಹೋಗಲಿಲ್ಲ. ಯಾಕೆ? ಯಾಕೆಂದರೆ ತನ್ನ ತಂದೆಯ ಸಮಯವು ಇನ್ನೂ ಬಂದಿರಲಿಲ್ಲ.

ಯೇಸು ಸ್ವಾಮಿ ಕಾಯುವುದಕ್ಕೆ ಹೆದರಲಿಲ್ಲ.

ಭರವಸವಿಡುವವನು ಆತುರಪಡನು (ಯೆಶಾ. 28:16) ಮತ್ತು ತಂದೆಯ ಸಮಯ ಬಂದಾಗ, ಯೇಸು ಸ್ವಾಮಿ ತಮ್ಮ ಬಡಗಿಯ ಅಂಗಡಿಯಿಂದ(ವೃತ್ತಿಯಿಂದ) ಹೊರಬಂದು ಬೋಧಿಸಲು ಪ್ರಾರಂಭಿಸಿದರು. ಸ್ವಾಮಿಯು ಆಗಾಗ್ಗೆ ತಾನು ಮಾಡಬೇಕಾದ ಕೆಲವು ಕಾರ್ಯಗಳ ಬಗ್ಗೆ ಹೇಳುತ್ತಿದ್ದರು, ನನ್ನ ಸಮಯವು ಇನ್ನೂ ಬಂದಿಲ್ಲ (ಯೋಹಾ. 2:4; 7:6). ಯೇಸುವಿನ ಜೀವಿತದಲ್ಲಿ ಎಲ್ಲವೂ ಸಮಯ ಮತ್ತು ತಂದೆಯ ಚಿತ್ತದಿಂದ ನಿಯಂತ್ರಿಸಲ್ಪಟ್ಟಿತ್ತು.

ಮನುಷ್ಯನ ಅಗತ್ಯತೆಯಿಂದಾಗಿ ಸ್ವತಃ ಯೇಸುವು ಯಾವುದೇ ಕಾರ್ಯವನ್ನು ಮಾಡಲಿಲ್ಲ. ಏಕೆಂದರೆ, ಆಗ ಅದನ್ನು ತಾನಾಗಿಯೇ ಅಂದರೆ ತನ್ನ ಆತ್ಮದ ಬಲದಿಂದ ನಡೆಯುವಂತಾಗುತ್ತಿತ್ತು. ಮನುಷ್ಯರ ಅಗತ್ಯವನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿತ್ತು. ಆದರೆ ಅದರಲ್ಲಿ ದೇವರ ಚಿತ್ತವನ್ನು ಮಾಡಬೇಕಾಗಿತ್ತು.

ಯೇಸು ತನ್ನ ಸ್ನೇಹಿತರು ಸೂಚಿಸಿದ ಅನೇಕ ಒಳ್ಳೆಯ ಕೆಲಸಗಳನ್ನು ಮಾಡಲಿಲ್ಲ. ಏಕೆಂದರೆ ಅವರು ಮನುಷ್ಯರನ್ನು ಆಲಿಸಿ ಒಳ್ಳೆಯದನ್ನು ಮಾಡಿದ್ದರೆ, ತನ್ನ ತಂದೆ ತನಗಾಗಿ ಹೊಂದಿದ್ದ ಉತ್ತಮವಾದದ್ದನ್ನು ತಾನು ಕಳೆದುಕೊಳ್ಳುತ್ತೇನೆ ಎಂದು ಆತನಿಗೆ ತಿಳಿದಿತ್ತು.