WFTW Body: 

ಲೂಕ 18:13ರಲ್ಲಿ ಸುಂಕದವನು ಈ ರೀತಿಯಾಗಿ ಪ್ರಾರ್ಥಿಸುತ್ತಾನೆ - "ದೇವರೇ, ಪಾಪಿಯಾದ ನನ್ನನ್ನು ಕರುಣಿಸು". ಸುಂಕದವನು ತನ್ನನ್ನು "ಪಾಪಿ" ಎಂದು ಕರೆದುಕೊಂಡನು. ಆತನು ಹೇಳಿದ್ದರ ಅರ್ಥ ಏನೆಂದರೆ - ತನ್ನನ್ನು ತನ್ನ ಸುತ್ತಲಿರುವ ಎಲ್ಲರಿಗೆ ಹೋಲಿಸಿಕೊಂಡರೆ, ಅವರೆಲ್ಲರೂ ಭಕ್ತರು ಎಂಬುದಾಗಿ! ಆತನ ದೃಷ್ಟಿಯಲ್ಲಿ, ಇಡೀ ಭೂಲೋಕದಲ್ಲಿ ಆತನೊಬ್ಬನೇ ಪಾಪಿಯಾಗಿದ್ದನು! ಈ ಮನುಷ್ಯನು ನೀತಿವಂತನೆಂದು ನಿರ್ಣಯಿಸಲ್ಪಟ್ಟು ಮನೆಗೆ ಹೋದನು, ಎಂಬುದಾಗಿ ಯೇಸು ಹೇಳಿದರು. ದೇವರು ಇಂತಹ ಜನರನ್ನು ಮಾತ್ರ ನೀತಿವಂತರೆಂದು ನಿರ್ಣಯಿಸುತ್ತಾರೆ.

"ನೀತೀಕರಿಸಲ್ಪಡುವುದು" ಎಂಬುದರ ನಿಜವಾದ ಅರ್ಥವನ್ನು ನಿಮ್ಮ ಬಳಿ ಸ್ವಲ್ಪ ಹಂಚಿಕೊಳ್ಳ ಬಯಸುತ್ತೇನೆ. ಇದು ಒಂದು ಸುಂದರವಾದ, ಬಿಡುಗಡೆಗೊಳಿಸುವಂತಹ ಪದ (ಲೂಕ 18:14) . ನೀವು ಒಂದು ಪುಸ್ತಕದ ಹಾಳೆಗಳನ್ನು ನೋಡುವುದಾದರೆ, ಪ್ರತಿಯೊಂದು ಹಾಳೆಯ ಎಡಭಾಗದ ಅಂಚು ಹೇಗೆ ನೇರವಾಗಿರುತ್ತದೋ, ಹಾಗೆಯೇ ಬಲಭಾಗದ ಅಂಚು ಸಹ ನೇರವಾಗಿರುವುದನ್ನು ನೋಡಿದ್ದೀರಾ? ಕಂಪ್ಯೂಟರ್ ಭಾಷೆಯಲ್ಲಿ ಇದನ್ನು "ಸರಿಹೊಂದಿಸುವುದು" ಎಂದು ಕರೆಯಲಾಗುತ್ತದೆ! ಪ್ರತಿಯೊಂದು ಸಾಲಿನಲ್ಲಿ ಅಕ್ಷರಗಳ ಸಂಖ್ಯೆಯು ವ್ಯತ್ಯಾಸವಾಗಿದ್ದರೂ ಸಹ, ಬಲಭಾಗದ ಅಂಚನ್ನು ಕಂಪ್ಯೂಟರ್ ನೇರವಾಗಿ ಮಾಡುತ್ತದೆ. ನೀವು ಕಂಪ್ಯೂಟರ್‌ನಲ್ಲಿ "ಸರಿಹೊಂದಿಸದೆ" ಏನನ್ನಾದರೂ ಬರೆಯಲು ಹೋದರೆ, ಬಲಗಡೆ ಭಾಗದಲ್ಲಿ ಸರಿಯಾದ ಜೋಡಣೆ ಇಲ್ಲದಿರುವುದನ್ನು ಕಾಣುವಿರಿ. ನಾವು ಹಿಂದೆ ಬೆರಳಚ್ಚು ಯಂತ್ರಗಳನ್ನು ಉಪಯೋಗಿಸುವಾಗ ನಮ್ಮ ಹಾಳೆಗಳು ಹಾಗೆಯೇ ಬರುತ್ತಿದ್ದವು. ಪ್ರತಿ ಸಾಲು ಸಮನಾದ ಉದ್ದದಲ್ಲಿ ಇರುವಂತೆ ಒಂದು ಹಾಳೆಯನ್ನಾದರೂ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಪ್ರಸ್ತುತ "ಸರಿಹೊಂದಿಸುವುದು" ಎಂಬ ಅದ್ಭುತವನ್ನು ನಾವು ನೋಡುವಾಗ, ಅದು ಪ್ರತಿ ಸಾಲಿನ ಕೊನೆಯಲ್ಲಿ ಬರುವ ಪದಕ್ಕೆ ಒಂದು ’ಅಡ್ಡಗೆರೆ’ (hyphen) ಹಾಕಿ ವಿಭಜಿಸುವ ಮೂಲಕ ಆಗುವುದಿಲ್ಲ. ಇಲ್ಲ. ನೀವು ಪುಸ್ತಕದ ಹಾಳೆಗಳನ್ನು ನೋಡುವುದಾದರೆ, ಅಲ್ಲಿ ವಿಭಜಿಸುವ ’ಹೈಫನ್’ಗಳು ನಿಮಗೆ ಕಾಣಸಿಗುವುದಿಲ್ಲ - ’ಹೈಫನ್’ಗಳನ್ನು ಬಳಸಿದರೆ ಅದು ಅಂದವಾಗಿ ಕಾಣುವದಿಲ್ಲ. ಕಂಪ್ಯೂಟರ್ ಪದಗಳ ಮಧ್ಯದ ಅಂತರವನ್ನು (spacing) ಸರಿಪಡಿಸುತ್ತದೆ, ಇದರಿಂದ ಎಲ್ಲಾ ಸಾಲುಗಳು ಕ್ರಮವಾಗಿ "ಸರಿಹೊಂದುತ್ತವೆ". ನೀವು ಈಗಾಗಲೇ 30 ಸಾಲುಗಳನ್ನು ಕಂಪ್ಯೂಟರ್‌ನಲ್ಲಿ ’ಸರಿಹೊಂದಿಕೆ’ ಇಲ್ಲದೆ ಬರೆದಿದ್ದರೂ, ಕೊನೆಯಲ್ಲಿ ನೀವು ಕಂಪ್ಯೂಟರ್‌ಗೆ ಎಲ್ಲಾ ಸಾಲುಗಳನ್ನು ಸರಿಹೊಂದಿಸುವಂತೆ ಆದೇಶ ನೀಡಬಹುದು - ಒಂದು ಕೀಲಿಯನ್ನು ಒತ್ತುವದರ ಮೂಲಕ ಕಂಪ್ಯೂಟರ್ ಒಂದು ಕ್ಷಣದಲ್ಲೇ ಎಲ್ಲಾ ಸಾಲುಗಳನ್ನು ಕ್ರಮವಾಗಿ ಸರಿಪಡಿಸುತ್ತದೆ!! ದೇವರು ನಮ್ಮನ್ನು ನೀತೀಕರಿಸಿದಾಗ, ಇದನ್ನೇ ನಮಗೂ ಮಾಡುತ್ತಾರೆ. ಒಂದು ವೇಳೆ ನೀವು ನಿಮ್ಮ ಹಿಂದಿನ ಜೀವಿತವನ್ನು ಹಾಳು ಮಾಡಿಕೊಂಡಿರಬಹುದು ಮತ್ತು ನಿಮ್ಮ ಹಿಂದಿನ ಜೀವಿತದ ಪ್ರತಿಯೊಂದು ದಿನವೂ ಕ್ರಮವಿಲ್ಲದ್ದಾಗಿ ಕೊನೆಗೊಂಡಿರಬಹುದು. ಆದರೆ ನೀವು ಕ್ರಿಸ್ತನ ಬಳಿಗೆ ಬಂದರೆ, ದೇವರು ನಿಮ್ಮನ್ನು ಕ್ಷಣ ಮಾತ್ರದಲ್ಲಿ "ನೀತೀಕರಿಸುತ್ತಾರೆ"! ನಿಮ್ಮ ಹಿಂದಿನ ಜೀವಿತದ ಪ್ರತಿಯೊಂದು ಸಾಲು ಪರಿಪೂರ್ಣವಾಗುತ್ತದೆ - ಅದರ ಬದಲಾವಣೆ ಹೇಗಿರುತ್ತದೆ ಎಂದರೆ, ನಿಮ್ಮ ಇಡೀ ಜೀವಿತದಲ್ಲಿ ನೀವು ಪಾಪವನ್ನೇ ಮಾಡಲಿಲ್ಲ, ಎಂಬಂತೆ - ಕ್ರಮವಿಲ್ಲದ ದಿನಗಳು ಕಾಣೆಯಾಗಿ, ಕೇವಲ ಪರಿಪೂರ್ಣವಾದ ದಿನಗಳು ಕಂಡುಬರುತ್ತವೆ.

ಇದೊಂದು ವಿಸ್ಮಯಕಾರಿ ಸಂಗತಿ ಅಲ್ಲವೇ? ಕಂಪ್ಯೂಟರ್ ನಮ್ಮ ಹಾಳೆಗಳಿಗೆ ಮಾಡುವಂತೆಯೇ, ದೇವರು ನಮ್ಮ ಜೀವಿತದಲ್ಲಿ ಮಾಡುತ್ತಾರೆ. ಇಲ್ಲಿ ನಾವು "ನೀತೀಕರಿಸಲ್ಪಡುವುದು" ಎಂಬ ಪದದ 20ನೇ ಶತಮಾನದ ಉದಾಹರಣೆಯನ್ನು ಕಾಣುತ್ತೇವೆ.

ಇನ್ನೂ ಒಂದು ವಿಸ್ಮಯಕರ ಸಂಗತಿಯನ್ನು ನಾನು ಹೇಳಬಯಸುತ್ತೇನೆ. ಒಂದು ಬಾರಿ ನಾವು ಕಂಪ್ಯೂಟರ್‌ಗೆ "ಸರಿಹೊಂದಿಸು" ಎಂದು ಆದೇಶಿಸಿದ ನಂತರ, ನಾವು ಬರೆಯುವ ಪ್ರತಿ ಸಾಲು ತಾನಾಗಿಯೇ ’ಸರಿಹೊಂದುತ್ತದೆ’ ಮತ್ತು ಪ್ರತಿ ಸಾಲು ಪರಿಪೂರ್ಣವಾಗಿ ಬೇರೆ ಸಾಲಿನೊಟ್ಟಿಗೆ ಹೊಂದಿಕೂಳ್ಳುತ್ತದೆ. ನಮ್ಮ ಹಿಂದಿನ ಸಂಗತಿಗಳು ಹೇಗೆ ನೀತೀಕರಿಸಲ್ಪಟ್ಟವೋ, ಹಾಗೆಯೇ ನಮ್ಮ ಭವಿಷ್ಯಕ್ಕೂ ನೀತೀಕರಣವು ಅನ್ವಯಿಸುತ್ತದೆ. ಇದೊಂದು ನಿಜಕ್ಕೂ ವಿಸ್ಮಯಕರ ಸುವಾರ್ತೆಯಾಗಿದೆ!

ಈಗ ದೇವರು ನಮ್ಮನ್ನು ಕ್ರಿಸ್ತನಲ್ಲಿ ನೋಡುತ್ತಾನೆ. ಇನ್ನು ಮುಂದೆ ಹೆಮ್ಮೆಪಟ್ಟುಕೊಳ್ಳುವಂತಹ ನಮ್ಮ ಸ್ವಂತದ ನೀತಿವಂತಿಕೆ ನಮ್ಮಲ್ಲಿ ಇರುವದಿಲ್ಲ. ಕ್ರಿಸ್ತನು ತಾನೇ ನಮ್ಮ ನೀತಿಕರ್ತನಾಗಿದ್ದಾನೆ. ದೇವರು ನಮ್ಮನ್ನು ನೀತೀಕರಿಸಿದಾಗ, ನಾವು ನಮ್ಮ ಇಡೀ ಜೀವಿತದಲ್ಲಿ ಪಾಪ ಅಥವಾ ಒಂದೇ ಒಂದು ತಪ್ಪನ್ನೂ ಮಾಡದವರಂತೆ ಆಗುತ್ತೇವೆ. ಮತ್ತು ಕ್ರಿಸ್ತನ ರಕ್ತದ ಮೂಲಕ ನಾವು ಸತತವಾಗಿ ನೀತೀಕರಿಸಲ್ಪಡುತ್ತೇವೆ - ಏಕೆಂದರೆ ನಾವು ಬೆಳಕಿನಲ್ಲಿ ನಡೆದರೆ, ಕ್ರಿಸ್ತನ ರಕ್ತವು ನಮ್ಮನ್ನು ಶುದ್ಧಿ ಮಾಡುತ್ತಾ, ಸತತವಾಗಿ ನಮ್ಮ ಸಕಲ ಪಾಪವನ್ನು - ನಮ್ಮ ಅರಿವಿಗೆ ಬಂದವುಗಳು ಹಾಗೂ ಅರಿವಿಗೆ ಬರದೇ ಇದ್ದವುಗಳನ್ನು - ನಿವಾರಣೆ ಮಾಡುತ್ತದೆ.

ಸತ್ಯವೇದವನ್ನು ನಾವು ಓದುವಾಗ ಮಾಡಬಹುದಾದ ಒಂದು ದೊಡ್ಡ ತಪ್ಪು ಯಾವುದೆಂದರೆ, ನಾವು ಗಣಿತದ ಅಧ್ಯಯನದಲ್ಲಿ ಮಾಡುವಂತೆ, ಸಮಸ್ಯೆಗಳನ್ನು ವಿವೇಚಿಸಿ ಬಗೆಹರಿಸುವ ವಿಧಾನಗಳನ್ನು ಉಪಯೋಗಿಸುವುದು. ನಾವು ದೇವರ ಮನಸ್ಸನ್ನು ಈ ರೀತಿಯಾಗಿ ಅರಿಯಲಾರೆವು, ಏಕೆಂದರೆ ದೇವರು ತನ್ನ ಕಾರ್ಯಗಳನ್ನು ಮಾಡುವುದು ಗಣಿತದ ಸೂತ್ರ-ವಿಧಾನಗಳ ಮೂಲಕವಲ್ಲ! ಹಾಗಾಗಿ ನಮ್ಮ ಹಿಂದಿನ ಜೀವಿತದಲ್ಲಿ ಹಲವಾರು ತಪ್ಪುಗಳನ್ನು ಮಾಡಿರುವ ನಾವು, ಇನ್ನು ಮುಂದೆ ನಮ್ಮ ಜೀವಿತದಲ್ಲಿ ದೇವರ ಪರಿಪೂರ್ಣ ಯೋಜನೆಯನ್ನು ಪೂರೈಸಲು ಸಾಧ್ಯವಿದೆಯೋ ಎಂಬುದನ್ನು ತಾರ್ಕಿಕವಾಗಿ ವಿವೇಚಿಸಬಾರದು. ಗಣಿತಶಾಸ್ತ್ರದ ಸಿದ್ದಾಂತಗಳ ಪ್ರಕಾರ ಅದು ಅಸಾಧ್ಯವಾದದ್ದು - ಏಕೆಂದರೆ ಗಣಿತದ ಸಮಸ್ಯೆಗಳಲ್ಲಿ, ಎಲ್ಲೋ ಒಂದು ಕಡೆ ತಪ್ಪಿದರೂ ಸಹ, ಕೊನೆಯ ಉತ್ತರ ಯಾವಾಗಲೂ ತಪ್ಪಾಗಿರುತ್ತದೆ. ನೀವು ಈ ತರ್ಕವನ್ನು ಉಪಯೋಗಿಸುವುದಾದರೆ ಹೀಗೆ ಹೇಳಬೇಕಾಗುತ್ತದೆ - ನಿಮ್ಮ ಜೀವಿತದಲ್ಲಿ ಹಿಂದೊಮ್ಮೆ ನೀವು ದೇವರ ಚಿತ್ತದ ಪ್ರಕಾರ ನಡೆಯದೇ ಹೋಗಿದ್ದರೆ (ನೀವು 2 ವರ್ಷದ ಮಗುವಾಗಿದ್ದಾಗ ಅಥವಾ 52ರ ವಯಸ್ಸಿನಲ್ಲಿ, ಯಾವಾಗಲಾದರೂ ಸರಿ), ಈಗ ನೀವು ಎಷ್ಟು ಹೆಚ್ಚಾಗಿ ಶ್ರಮಿಸಿದರೂ ಮತ್ತು ಎಷ್ಟು ಆಳವಾದ ಮಾನಸಾಂತರ ಹೊಂದಿದರೂ, ದೇವರ ಚಿತ್ತವನ್ನು ನೀವು ಪೂರೈಸಲಾರಿರಿ, ಏಕೆಂದರೆ ಅಂಕಗಣಿತದಲ್ಲಿ ನೀವು ಒಂದು ಹಂತದಲ್ಲಿ ತಪ್ಪಿದರೆ (ಅದು ಹಂತ 2 ಅಥವಾ ಹಂತ 52 ಆಗಿರಬಹುದು), ನಿಮ್ಮ ಕೊನೆಯ ಉತ್ತರ ತಪ್ಪಾಗಿಯೇ ಇರುತ್ತದೆ!!

ಆದರೆ ದೇವರು ಹೇಳುವ ಮಾತು ಇದು: "ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ" (ಯೆಶಾಯ 55:8,9). ನಾನು ದೇವರಿಗೆ ಕೃತಜ್ಞನಾಗಿದ್ದೇನೆ, ಏಕೆಂದರೆ ದೇವರು ನಮಗಾಗಿ ಮಾಡುವ ಯೋಜನೆಗಳಿಗೆ ಲೆಕ್ಕಶಾಸ್ತ್ರದ ನಿಯಮಗಳು ಅನ್ವಯಿಸುವುದಿಲ್ಲ. ಹಾಗೇನಾದರೂ ಆಗಿದ್ದರೆ, ದೇವರ ಪರಿಪೂರ್ಣ ಚಿತ್ತವನ್ನು ಪೂರೈಸಲು ಒಬ್ಬ ಮಾನವನಿಗೂ (ಅಪೊಸ್ತಲನಾದ ಪೌಲನೂ ಸೇರಿದಂತೆ) ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ, ನಾವೆಲ್ಲರೂ ಒಂದಲ್ಲ ಒಂದು ಸನ್ನಿವೇಶದಲ್ಲಿ ಸೋತಿದ್ದೇವೆ. ಅನೇಕ ಬಾರಿ ನಾವು ವಿಶ್ವಾಸಿಗಳಾದ ನಂತರವೂ ಸಹ ಸೋತಿದ್ದೇವೆ. ವಿಶ್ವಾಸಿಗಳಾದ ನಂತರ ನಾವು ಉದ್ದೇಶಪೂರ್ವಕವಾಗಿ ಪಾಪ ಮಾಡಿದ್ದೇವೆ. ಯಥಾರ್ಥರಾದ ಪ್ರತಿಯೊಬ್ಬರೂ ಇದನ್ನು ಒಪ್ಪಿಕೊಳ್ಳುತ್ತಾರೆ. ಆದರೆ ವಿಸ್ಮಯಕಾರಿ ಸತ್ಯವೇನೆಂದರೆ, ಇದು ಹೀಗಿದ್ದರೂ ನಮ್ಮೆಲ್ಲರಿಗೆ ನಿರೀಕ್ಷೆ ಇದೆ.

ಗಣಿತಶಾಸ್ತ್ರವು ನಾವು ಮಾಡುವ ಅತಿ ಚಿಕ್ಕ ತಪ್ಪನ್ನೂ ಕಡ್ಡಾಯವಾಗಿ ಖಂಡಿಸುತ್ತದೆ. ಅದರಲ್ಲಿ ಒಂದು ಸಣ್ಣ ತಪ್ಪಿಗೂ ಜಾಗವಿಲ್ಲ. 2 + 2 ರ ಮೊತ್ತ 3.99999999 ಆಗಲಾರದು. ಅದು ಸರಿಯಾಗಿ 4 ಕ್ಕೆ ಸಮವಾಗುತ್ತದೆ. ಅದಕ್ಕಿಂತ ಜಾಸ್ತಿಯಾಗಲೀ ಅಥವಾ ಕಡಿಮೆಯಾಗಲೀ ಅಲ್ಲ. ಆದರೆ ದೇವರ ಯೋಜನೆಗಳು ಲೆಕ್ಕಶಾಸ್ತ್ರದಂತೆ ನಡೆಯುವದಿಲ್ಲ. ಆತನ ಯೋಜನೆಗೆ, ಸೋಲು ಅವಶ್ಯವಾಗಿ ಬೇಕಾಗುತ್ತದೆ. ಸೋಲಿನ ಹೊರತಾಗಿ, ನಾವುಗಳು ಮುರಿಯಲ್ಪಡುವುದಕ್ಕೆ ಬೇರೆ ಮಾರ್ಗವೇ ಇಲ್ಲ. ನಮ್ಮ ಆತ್ಮಿಕ ವಿದ್ಯಾಭ್ಯಾಸದಲ್ಲಿ, ’ಸೋಲು’ ಎಂಬ ಪಾಠವು ಬಹಳ ಮುಖ್ಯವಾದದ್ದು, ಎಂದು ನಾವು ಹೇಳಬಹುದು. ಒಂದು ಬಾರಿಯೂ ಸೋಲು ಕಾಣದೇ ಜೀವಿಸಿದವರು ಯೇಸುವು ಒಬ್ಬರೇ. ಆದರೆ ಮಿಕ್ಕ ನಾವೆಲ್ಲರೂ (ನಮ್ಮ ಮಧ್ಯದಲ್ಲಿ ಇರುವ ಅತ್ಯುತ್ತಮರೂ ಸೇರಿದಂತೆ) ಸೋಲುಗಳ ಮುಖಾಂತರ ದೇವರಿಂದ ಮುರಿಯಲ್ಪಡಬೇಕಾಯಿತು. ಪೇತ್ರ ಮತ್ತು ಪೌಲ, ಇವರಿಬ್ಬರು ಪದೇ ಪದೇ ಸೋಲುವದರ ಮುಖಾಂತರ ಮುರಿಯಲ್ಪಟ್ಟರು.

ಹಾಗಾಗಿ ಸುವಾರ್ತಾ ಸಂದೇಶದಲ್ಲಿ ಸಂತೋಷಹೊಂದಿರಿ ಮತ್ತು ದೇವರ ಕರುಣೆಯು ನಿಮ್ಮನ್ನು ಮಾನಸಾಂತರಕ್ಕೆ ನಡೆಸಲಿ. ಅದು ನಿಮ್ಮನ್ನು ಸಂತುಷ್ಟ ಜೀವಿತಕ್ಕೆ ಹಾಗೂ ದೇವರಲ್ಲಿ ಪರಿಪೂರ್ಣ ವಿಶ್ರಾಂತಿಗೆ ನಡೆಸಲಿ - "ದೇವರು ತನ್ನ ಪ್ರಿಯ ಪುತ್ರನಲ್ಲಿ ನಿಮ್ಮನ್ನು (ಶಾಶ್ವತವಾಗಿ) ಸ್ವೀಕರಿಸಿಕೊಂಡಿದ್ದಾನೆ" (ಎಫೆಸ 1:6- KJV) ಎಂಬುದನ್ನು ಅರಿತುಕೊಂಡಾಗ ಈ ವಿಶ್ರಾಂತಿಯು ಬರುತ್ತದೆ. ಪ್ರತಿದಿನ ನಾವು ಎಷ್ಟೋ ತಪ್ಪುಗಳನ್ನು ಮಾಡುತ್ತೇವೆ. ನಾವು ಜಾರಿ ಪಾಪದೊಳಗೆ ಬೀಳುತ್ತೇವೆ - ಅದು ಅಕಸ್ಮಿಕವಾಗಿ ಅಥವಾ ನಮ್ಮ ಅರಿವಿಗೆ ಬಾರದೆಯೂ ಸಹ ನಡೆಯಬಹುದು. ಕೆಲವೊಮ್ಮೆ ನಾವು ಅತಿ ಹೆಚ್ಚಿನ ಒತ್ತಡಕ್ಕೆ ಒಳಗಾಗಿ, ನಿರಾಶೆ ಹಾಗೂ ನಿರುತ್ಸಾಹದ ಅನುಭವವನ್ನು ಹೊಂದುವದೂ ಇದೆ - ಇದು ನಮ್ಮನ್ನು ಇನ್ನೂ ಹೆಚ್ಚು ಪಾಪ ಮಾಡುವ ಶೋಧನೆಗೆ ಒಳಗಾಗಿಸುತ್ತದೆ. ದೇವರು ನಮ್ಮ ಮೇಲಿರುವ ಒತ್ತಡಗಳನ್ನು ಅರ್ಥಮಾಡಿಕೊಳ್ಳುತ್ತಾನೆ ಮತ್ತು ದಯಾಶೀಲನಾಗಿದ್ದಾನೆ. ಆತನು ನಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಮಗೆ ಬರಗೊಡಿಸದೆ, ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ತಪ್ಪಿಸಿಕೊಳ್ಳುವ ಮಾರ್ಗವನ್ನು ನಮಗಾಗಿ ಸಿದ್ದಪಡಿಸುತ್ತಾನೆ. ಆತನು ನಮ್ಮಲ್ಲಿ ಪ್ರತಿಯೊಬ್ಬರ ಜೀವಿತದ ಪ್ರತಿಯೊಂದು ಅಂಕು ಡೊಂಕನ್ನೂ ಸರಿಪಡಿಸ ಬಲ್ಲನು. ಕ್ರೈಸ್ತ ಜೀವಿತವು ಮಾನವನ ಚಿಂತನೆಯಂತೆ ಸಾಗುವುದಿಲ್ಲ. ಅದು ಪರಲೋಕದ ತಂದೆಯ ಅದ್ಭುತ ಪವಾಡಗಳನ್ನು ನಡೆಸುವ ಪ್ರಭಾವಕ್ಕೆ ತಕ್ಕಂತೆ, ಆತನ ಪರಿಪೂರ್ಣ ಜ್ಞಾನ ಮತ್ತು ದೈವಿಕ ಪ್ರೀತಿಗೆ ತಕ್ಕಂತೆ ನಡೆಯುತ್ತದೆ.

ಯಾರೂ ಸಹ ತಮ್ಮ ಜೀವಿತ ಪ್ರತಿಯೊಂದು ಹೆಜ್ಜೆಯೂ ಪರಿಪೂರ್ಣವಾಗಿ ಸಾಗುವಂತೆ ’ಸರಿಹೊಂದಿಕೆ’ ಮಾಡಲು ಸಾಧ್ಯವಿಲ್ಲ. ನಮ್ಮೆಲ್ಲರನ್ನು- ನಮ್ಮಲ್ಲಿ ಅತ್ಯುತ್ತಮರನ್ನೂ ಸಹ - ನೀತೀಕರಿಸುವಾತನು ದೇವರೇ. ಹಾಗಾಗಿ ಯಾರು ಕೂಡ ದೇವರ ಮುಂದೆ ಹೆಚ್ಚಳ ಪಡುವದು ಅಸಾಧ್ಯ.