ನೀವು ದೇವರ ವಾಕ್ಯವನ್ನು ಗೌರವಿಸಲು ಕಲಿತಿದ್ದೀರೆಂದು ಸೈತಾನನು ಗಮನಿಸಿದಾಗ, ಅವನು ಏನು ಮಾಡುತ್ತಾನೆಂದರೆ, ದೇವರ ವಾಕ್ಯದ ನಿಜವಾದ ಅರ್ಥವನ್ನು ಯಾವುದೋ ಅಪಾರ್ಥಕ್ಕೆ ತಿರುಗಿಸಲು ಪ್ರಯತ್ನಿಸುತ್ತಾನೆ. ಅವನು ದೇವರ ವಾಕ್ಯವನ್ನು ತಪ್ಪಾದ ರೀತಿಯಲ್ಲಿ ಪ್ರಸ್ತುತಪಡಿಸಿ, ಅದು ತಪ್ಪಾದ ಅರ್ಥ ನೀಡುವಂತೆ ಮಾಡುತ್ತಾನೆ. ಅವನು ಯೇಸುವನ್ನು ಶೋಧಿಸಿದಾಗಲೂ ಇದನ್ನೇ ಮಾಡಿದನು!
ಆತನು ಮತ್ತಾ. 4:6 ರಲ್ಲಿ ಯೇಸುವಿಗೆ ನೀಡಿದ ಸವಾಲು ಏನೆಂದರೆ, "ನೋಡೋಣ, ನೀನು ದೇವರ ಮಗನಾಗಿದ್ದರೆ ದೇವಾಲಯದ ಶಿಖರದ ಮೇಲಿಂದ ಕೆಳಕ್ಕೆ ಧುಮುಕು; ದೇವರು ನಿನ್ನನ್ನು ಕಾಯುತ್ತಾರೆಂಬ ವಾಗ್ದಾನವನ್ನು ನಡೆಸಿಕೊಡಲು ನೀನು ಅವರನ್ನು ಕೇಳಬಹುದಲ್ಲಾ?" ಇಲ್ಲಿ ಆತನು ಕೀರ್ತನೆ 91ನ್ನು ಉಲ್ಲೇಖಿಸಿದನು - "ದೇವರು ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆಕೊಡುವನು; ನಿನ್ನ ಕಾಲು ಕಲ್ಲಿಗೆ ತಗಲದಂತೆ ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು."
ಸೈತಾನನು ನಿಮ್ಮನ್ನು ಪಾಪಕ್ಕೆ ಪ್ರೇರೇಪಿಸಲು ದೇವರ ವಾಕ್ಯವನ್ನು ಸಹ ಉಪಯೋಗಿಸುತ್ತಾನೆಂದು ಇದು ನಮಗೆ ಕಲಿಸುತ್ತದೆ.
ಯೇಸುಸ್ವಾಮಿಯು ಎದುರಿಸಿದ ಮೊದಲನೇ ಶೋಧನೆಯೂ ಇದಕ್ಕೆ ಸಂಬಂಧವನ್ನು ಹೊಂದಿದೆ. ಮೊದಲನೆಯ ಶೋಧನೆಯಲ್ಲಿ ಸೈತಾನನು ಯೇಸುವಿಗೆ ಕಲ್ಲನ್ನು ರೊಟ್ಟಿಯಾಗಿ ಬದಲಾಯಿಸುವಂತೆ ಸಲಹೆ ನೀಡಿದಾಗ, ಯೇಸುವು "ಎಲೇ, ಮನುಷ್ಯನು ರೊಟ್ಟಿ ತಿಂದ ಮಾತ್ರಕ್ಕೆ ಬದುಕುವದಿಲ್ಲ; ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು ಎಂದು ಬರೆದದೆ," ಅಂದರು. ಸೈತಾನನು ಆ ಮಾತಿನ ಮೂಲಕ ಯೇಸುವನ್ನು ಹಿಡಿಯಲು ಪ್ರಯತ್ನಿಸಿ, "ದೇವರ ಪ್ರತಿಯೊಂದು ಮಾತನ್ನು ಪಾಲಿಸಬೇಕು, ಹೌದಾ? ಸರಿ, ಹಾಗಿದ್ದರೆ ದೇವರ ವಾಕ್ಯ ಇದಾಗಿದೆ: ’ಆತನು ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆ ಕೊಡುವನು; ನಿನ್ನ ಕಾಲು ಕಲ್ಲಿಗೆ ತಗಲೀತೆಂದು ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು,’ ಎಂದು ಬರೆದಿದೆ; ಹಾಗಿರುವಾಗ, ನೀನು ಯಾಕೆ ದೇವಾಲಯದ ಶಿಖರದ ಮೇಲಿನಿಂದ ಕೆಳಕ್ಕೆ ಧುಮುಕಬಾರದು?" ಎಂದು ಪ್ರಶ್ನಿಸುತ್ತಾನೆ.
ನಾನು ಹೇಳಿದಂತೆ, ನೀವು ದೇವರ ವಾಕ್ಯವನ್ನು ಗೌರವಿಸಲು ಕಲಿತಿರುವುದನ್ನು ಸೈತಾನನು ಗಮನಿಸಿದಾಗ, ಅವನು ಏನು ಮಾಡುತ್ತಾನೆಂದರೆ, ದೇವರ ವಾಕ್ಯದ ನಿಜವಾದ ಅರ್ಥವನ್ನು ಯಾವುದೋ ಅಪಾರ್ಥಕ್ಕೆ ತಿರುಗಿಸಲು ಪ್ರಯತ್ನಿಸುತ್ತಾನೆ. ಅವನು ದೇವರ ವಾಕ್ಯವನ್ನು ತಪ್ಪಾದ ರೀತಿಯಲ್ಲಿ ಪ್ರಸ್ತುತಪಡಿಸಿ, ಅದು ತಪ್ಪಾದ ಅರ್ಥ ನೀಡುವಂತೆ ಅದನ್ನು ಉಪಯೋಗಿಸುತ್ತಾನೆ. ನಾನು ನನ್ನ ಜೀವನದಲ್ಲಿ ಭೇಟಿಯಾಗಿರುವ ಹಲವಾರು ಕ್ರೈಸ್ತರ ಬಗ್ಗೆ ಹೇಳುವುದಾದರೆ, ಅವರು ತಮ್ಮ ಸ್ವಂತ ಇಚ್ಛೆಯ ಸಮರ್ಥನೆಗಾಗಿ ಒಂದು ದೇವರ ವಚನವನ್ನು ಅಲ್ಲಿಂದಲೋ ಇಲ್ಲಿಂದಲೋ ಆರಿಸಿಕೊಂಡು, ಅದಕ್ಕೆ ಅನ್ವಯಿಸದ ಸಂದರ್ಭದಲ್ಲಿ ಆ ವಚನವನ್ನು ತಪ್ಪಾಗಿ ಬಳಸಿಕೊಳ್ಳುತ್ತಾರೆ. ಸತ್ಯವೇದದ ಯಾವುದಾದರೂ ವಚನವನ್ನು ಆರಿಸಿಕೊಂಡು ಅದನ್ನು ನಿಮ್ಮ ಸ್ವಂತ ಉದ್ದೇಶಕ್ಕಾಗಿ ಬಳಸಿಕೊಳ್ಳುವುದು ತುಂಬಾ ಸುಲಭವಾದ ಕಾರ್ಯವಾಗಿದೆ. ಅನೇಕ ಜನರು ದೇವರ ವಾಕ್ಯದಲ್ಲಿ, ನಿಖರವಾಗಿ ತಾವು ಮಾಡಲು ಇಚ್ಛಿಸುವುದನ್ನು ಸಮರ್ಥಿಸುವ ವಚನವನ್ನು ಹುಡುಕಿ ತೆಗೆಯುತ್ತಾರೆ.
-=-=-=-=-=
"ನೀವು ಎರಡು ವಚನಗಳನ್ನು ಹೋಲಿಸಿ ನೋಡಿದಾಗ ಸತ್ಯಾಂಶವನ್ನು ಪಡೆಯುತ್ತೀರಿ. ದೇವರ ವಾಕ್ಯದ ಅಧ್ಯಯನ ಏಕೆ ಪ್ರಾಮುಖ್ಯವಾದದ್ದೆಂದರೆ, ಅದರ ಮೂಲಕವಾಗಿ ದೇವರು ನಿಮಗೆ ಹೇಳುತ್ತಿರುವ ಮಾತನ್ನು ನೀವು ಕೇಳಿಸಿಕೊಳ್ಳುತ್ತೀರಿ."
-=-=-=-=-=-=
ನಾವು ದೇವರಿಂದ ವಾಕ್ಯವನ್ನು ಪಡೆದುಕೊಳ್ಳುವುದರ ಪ್ರಾಮುಖ್ಯತೆಯನ್ನು ಅರಿತುಕೊಂಡು, ಸತ್ಯವೇದವನ್ನು ತಪ್ಪದೆ ಓದಿಕೊಳ್ಳುತ್ತಿರುವಾಗ, ಯೇಸುವು ಸೈತಾನನಿಂದ ಅನುಭವಿಸಿದ ಶೋಧನೆಯ ಹಿನ್ನೆಲೆಯಲ್ಲಿ, ಸೈತಾನನು ಬಂದು ದೇವರ ವಾಕ್ಯವನ್ನು ನಿಮಗೆ ತಪ್ಪಾಗಿ ಉಲ್ಲೇಖಿಸಬಹುದು, ಎಂಬುದನ್ನು ನೆನಪಿಟ್ಟುಕೊಳ್ಳಿರಿ. ಅದಕ್ಕಾಗಿಯೇ ನಾವು ದೇವರ ವಾಕ್ಯವನ್ನು ಅದರ ಸಂದರ್ಭಕ್ಕೆ ಅನುಸಾರವಾಗಿ ಅಧ್ಯಯನ ಮಾಡುವುದು ಪ್ರಾಮುಖ್ಯವಾಗಿದೆ, ಮತ್ತು ಯೇಸುವು ಹೇಳಿದಂತೆ, "ದೇವರ ಪ್ರತಿಯೊಂದು ಮಾತು" ಮುಖ್ಯವಾದದ್ದೆಂದು ತಿಳಿದು, ಕೇವಲ ಒಂದೇ ವಚನವನ್ನಲ್ಲ, ಸಮಸ್ತ ಸತ್ಯವೇದವನ್ನು ಅಧ್ಯಯನ ಮಾಡುವುದರ ಪ್ರಾಮುಖ್ಯತೆಯನ್ನು ನಾವು ತಿಳಿದುಕೊಳ್ಳಬೇಕು. ನಾವು ಕೇವಲ ಒಂದು ವಚನದ ಮೂಲಕ ಜೀವಿಸಲಾರೆವು (ಉದಾಹರಣೆಗೆ, "ಮನುಷ್ಯನು ದೇವರ ಬಾಯೊಳಗಿಂದ ಹೊರಡುವ ಪ್ರತಿಯೊಂದು ಮಾತಿನಿಂದ ಜೀವಿಸುತ್ತಾನೆ"), ಮತ್ತು ಅದಕ್ಕಾಗಿಯೇ ಇಡೀ ಸತ್ಯವೇದದ ದೈವೋಕ್ತಿಯನ್ನು ತಿಳಿದುಕೊಳ್ಳುವುದು ಅವಶ್ಯವಾಗಿದೆ. ಇದಕ್ಕಾಗಿ ಸತ್ಯವೇದದ ಅಧ್ಯಯನವು ಪ್ರಾಮುಖ್ಯವಾಗಿದೆ. ನಿಮ್ಮ ಎಳೆಪ್ರಾಯದಲ್ಲಿ ಯಾವುದೋ ನಿರ್ದಿಷ್ಟ ವಿಷಯದ ಬಗ್ಗೆ ದೇವರ ವಾಕ್ಯ ಏನು ಹೇಳುತ್ತದೆಂದು ನೀವು ತಿಳಿಯಲು ಬಯಸಿದರೆ, ದೇವರ ವಾಕ್ಯಜ್ಞಾನವನ್ನು ಹೊಂದಿರುವ ಹಿರಿಯ ವಿಶ್ವಾಸಿಗಳ ಬಳಿಗೆ ಹೋಗಿ ಅವರಿಂದ ಸಲಹೆಯನ್ನು ಪಡೆಯುವುದು ಒಳ್ಳೆಯದು. ಇದು ಕಷ್ಟಕರವಲ್ಲ, ತುಂಬಾ ಸುಲಭವಾದದ್ದು. ದೇವರ ಸಂಪೂರ್ಣ ದೈವೋಕ್ತಿಯ ಮೂಲಕ ಜೀವಿಸದೆ, ಕೇವಲ ಒಂದು ನಿರ್ದಿಷ್ಟ ವಾಕ್ಯದ ಮೂಲಕ ಜೀವಿಸಲು ಪ್ರಯತ್ನಿಸಿ, ತಮ್ಮಿಂದ ತಾವೇ ಮೋಸ ಹೋಗಿರುವ ಹಲವಾರು ಜನರನ್ನು ನಾನು ನೋಡಿದ್ದೇನೆ.
ಈ ಅಂಶವನ್ನು ಚೆನ್ನಾಗಿ ಸ್ಪಷ್ಟ ಪಡಿಸುವಂತ ಒಂದು ಹಾಸ್ಯ ಭರಿತ ಉದಾಹರಣೆಯನ್ನು ನಾನು ನಿಮಗೆ ಕೊಡುತ್ತೇನೆ. ಒಬ್ಬ ಯೌವನಸ್ಥನು "ಕೃಪಾ" ಎಂಬ ಹುಡುಗಿಯನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದಾನೆಂದು ಅಂದುಕೊಳ್ಳಿ. ಆತನು ದೇವರ ಚಿತ್ತವನ್ನು ಹುಡುಕಲು ಬಯಸುತ್ತಾನೆ ಅಥವಾ ಅದನ್ನು ಹುಡುಕುತ್ತಿದ್ದೇನೆಂದು ಯೋಚಿಸುತ್ತಾನೆ, ಆದಾಗ್ಯೂ ಆತನು ಈಗಾಗಲೇ ಆ ಹುಡುಗಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದಾನೆ. ಸತ್ಯಾಂಶವೆಂದರೆ, ಆತನು ಆಕೆಯನ್ನೇ ಮದುವೆಯಾಗಲು ಬಯಸುತ್ತಾನೆ, ಆದರೆ ಆತನಿಗೆ ಹೆಸರಿಗೆ ದೇವರ ಮೆಚ್ಚುಗೆಯೂ ಬೇಕಾಗಿದೆ. ಹೀಗಿರುವಾಗ, ಒಂದು ದಿನ ಅವನು 2ಕೊರಿಂಥದವರಿಗೆ 12:9 ರಲ್ಲಿನ "ನನ್ನ ಕೃಪೆಯೇ ನಿನಗೆ ಸಾಕು," ಎಂಬ ವಚನವನ್ನು ಓದಿಕೊಳ್ಳುತ್ತಾನೆ ಮತ್ತು ಆತನಿಗೆ ಮನದಟ್ಟಾಗುವುದೇನೆಂದರೆ "ಆಹಾ, ದೇವರು ನನ್ನೊಂದಿಗೆ ಮಾತಾಡಿದ್ದಾರೆ, ಕೃಪಾಳೇ ನನಗೆ ಸರಿಯಾದ ಕನ್ಯೆಯಾಗಿದ್ದಾಳೆ." ಯಥಾವತ್ತಾಗಿ, ಆತನು ತನ್ನ ಮನಸ್ಸಿನ ಆಸೆಯನ್ನು ಪೂರೈಸಿಕೊಳ್ಳುತ್ತಿದ್ದಾನೆ, ಅಷ್ಟೇ. ಈಗ ಮತ್ತೊಬ್ಬ ಯೌವನಸ್ಥ ಹುಡುಗನ ಬಗ್ಗೆ ಆಲೋಚಿಸಿರಿ. ಆತನ ತಂದೆತಾಯಿಯರು ಕೃಪಾಳೆಂಬ ಹುಡುಗಿಯನ್ನು ಆತನಿಗಾಗಿ ನೋಡಿದ್ದಾರೆ. ಆದರೆ ಆತನಿಗೆ ಆಕೆ ಸ್ವಲ್ಪವೂ ಹಿಡಿಸಲಿಲ್ಲ ಮತ್ತು ಆತನಿಗೆ ಆಕೆಯಲ್ಲಿ ಆಸಕ್ತಿ ಇರುವುದಿಲ್ಲ. ಹಾಗಾಗಿ ಆತನು ತನ್ನ ತಂದೆ ತಾಯಿಗೆ, "ನಾನು ಇದರಲ್ಲಿ ದೇವರ ಚಿತ್ತ ಏನಿದೆಯೆಂದು ತಿಳಿಯಲು ಬಯಸುತ್ತೇನೆ," ಎಂದು ಹೇಳುತ್ತಾನೆ. ಈತನೂ ಸಹ ಸತ್ಯವೇದದಲ್ಲಿ ಅದೇ 2ಕೊರಿಂಥದವರಿಗೆ 12:9 ರ ವಚನ - "ನನ್ನ ಕೃಪೆಯೇ ನಿನಗೆ ಸಾಕು." ಓದಿಕೊಳ್ಳುತ್ತಾನೆ. ಆತನು ತನ್ನ ತಂದೆ ತಾಯಿಗೆ, "ದೇವರು ನನಗೆ ಹೇಳಿರುವುದು ಏನೆಂದರೆ, ಆತನ ಕೃಪೆಯೇ ನನಗೆ ಸಾಕು. ಆದ್ದರಿಂದ ಈ ಕೃಪಾ ಎನ್ನುವಾಕೆ ನನಗೆ ಬೇಡ, ನನಗೆ ದೇವರ ಕೃಪೆಯೇ ಸಾಕು," ಎಂದು ಹೇಳುತ್ತಾನೆ. ಒಂದೇ ವಚನದಿಂದ ಇಬ್ಬರು ಯುವಕರು ತಮ್ಮ ಸ್ವಂತದ ಆಸೆಗಳನ್ನು ತೃಪ್ತಿಪಡಿಸಿಕೊಳ್ಳಲು ಎರಡು ವಿಭಿನ್ನವಾದ ಉತ್ತರಗಳನ್ನು ಕಂಡುಕೊಂಡರು, ಎಂಬುದಾಗಿ ನೀವು ಇಲ್ಲಿ ನೋಡುತ್ತೀರಿ. ಅವರು ಏನು ಮಾಡಲು ಬಯಸುತ್ತಾರೋ ದೇವರ ವಾಕ್ಯದಲ್ಲಿ ಅದನ್ನೇ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಸೈತಾನನು ಹೇಗೆ ದೇವರ ಒಂದು ವಾಕ್ಯವನ್ನು ತನಗೆ ಬೇಕಾದಂತೆ ತಿರುಗಿಸಿ ನಿಮಗೆ ತೋರಿಸುತ್ತಾನೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ಆತನು ಯೇಸುವಿಗೆ ಇದನ್ನು ಮಾಡಲು ಪ್ರಯತ್ನಿಸಿದ್ದರೆ, ನಿಮಗೂ ಅದನ್ನೇ ಮಾಡಲು ಪ್ರಯತ್ನಿಸಲಾರನೆಂದು ನೀವು ಯೋಚಿಸುತ್ತೀರಾ?
ಯೇಸುವು ಸೈತಾನನಿಗೆ ಕೊಟ್ಟ ಪ್ರತ್ಯುತ್ತರ ಏನಾಗಿತ್ತು? ಯೇಸುವು ಆತನಿಗೆ ಬಹಳ ಕುತೂಹಲಕಾರಿಯಾದ ಪ್ರತ್ಯುತ್ತರ ನೀಡಿದರು. ಸೈತಾನನು ಮತ್ತಾ. 4:6ರಲ್ಲಿ, "ಹೀಗೆ ಬರೆದದೆಯಲ್ಲಾ," ಎಂದು ಹೇಳಿದಾಗ, ಯೇಸುವು ಅವನಿಗೆ ಮತ್ತಾ. 4:7ರಲ್ಲಿ, "ಹೀಗೂ ಬರೆದದೆ," ಎಂದು ಉತ್ತರಿಸಿದರು. ಅಂದರೆ, "ಇನ್ನೊಂದು ಕಡೆ ಹೀಗೆ ಬರೆದದೆ," ಎಂಬುದಾಗಿ. "ಹೀಗೂ ಬರೆದದೆ," ಎಂಬುದರ ಅರ್ಥ ಇದು. ಇದು ನಮಗೆ ಕಲಿಸಿಕೊಡುವುದು ಏನೆಂದರೆ, "ಹೀಗೆ ಬರೆಯಲ್ಪಟ್ಟಿದೆ" ಎಂಬುದರಲ್ಲಿ ಸಂಪೂರ್ಣ ಸತ್ಯವು ಕಾಣಲ್ಪಡದೆ, "ಹೀಗೆ ಬರೆದದೆ, ಮತ್ತು ಇನ್ನೊಂದು ಕಡೆ ಹೀಗೆ ಬರೆದದೆ," ಎಂಬುದರಲ್ಲಿ ಮಾತ್ರ ಸಂಪೂರ್ಣ ಸತ್ಯಾಂಶವು ಕಂಡುಬರುತ್ತದೆ.
ನೀನು ಎರಡು ವಚನಗಳನ್ನು ಜೊತೆಯಾಗಿ ಹೋಲಿಸಿ ನೋಡಿದಾಗ ಸತ್ಯವನ್ನು ಪಡೆದುಕೊಳ್ಳುವೆ. ಆದ್ದರಿಂದ ದೇವರ ವಾಕ್ಯವನ್ನು ಅಧ್ಯಯನ ಮಾಡುವುದರ ಮೂಲಕ ದೇವರು ನಿನಗೆ ಏನು ಹೇಳಲು ಬಯಸುತ್ತಿದ್ದಾರೆಂದು ಕೇಳಿಸಿಕೊಳ್ಳುವುದು ಪ್ರಾಮುಖ್ಯವಾಗಿದೆ. ಇಲ್ಲದಿದ್ದಲ್ಲಿ, ನೀನು ಸತ್ಯವೇದದಿಂದ ಒಂದೇ ಒಂದು ವಚನವನ್ನು ಆರಿಸಿಕೊಂಡು ಸಂಪೂರ್ಣವಾಗಿ ತಪ್ಪು ದಾರಿಯಲ್ಲಿ ನಡೆಯಬಹುದು.