ಅಡವಿಯಲ್ಲಿ ಯೇಸುವು ಎದುರಿಸಿದ ಎರಡನೆಯ ಶೋಧನೆಯಲ್ಲಿ ಸೈತಾನನು ಆತನಿಗೆ "ನೀನು ದೇವರ ಮಗನಾಗಿದ್ದರೆ, ದೇವಾಲಯದ ಶಿಖರದಿಂದ ಕೆಳಕ್ಕೆ ಧುಮುಕಿ ದೇವರ ಸಂರಕ್ಷಣೆಯ ವಾಗ್ದಾನವನ್ನು ನಿನ್ನದಾಗಿಸಿಕೋ," ಎಂಬ ಸವಾಲನ್ನು ನೀಡಿದನು (ಮತ್ತಾ. 4:6). ಅದಲ್ಲದೆ, "ದೇವರು ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆ ಕೊಡುವರು; ನಿನ್ನ ಕಾಲಿಗೆ ಕಲ್ಲು ತಗಲೀತೆಂದು ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು." ಎಂದು ಕೀರ್ತನೆ. 91ನ್ನು ಸಹ ಅವನು ಉಲ್ಲೇಖಿಸಿದನು,
ಮತ್ತಾ. 4:7ರಲ್ಲಿ ಯೇಸುವು ಸೈತಾನನಿಗೆ, "ನೀನು ನಿನ್ನ ದೇವರಾದ ಕರ್ತನನ್ನು ಶೋಧಿಸಬಾರದು ಎಂಬುದಾಗಿ ಸಹ ಬರೆದಿದೆ," ಎಂದು ಉತ್ತರಿಸಿದನು. ಇದೊಂದು ಬಹಳ ಮುಖ್ಯವಾದ ತತ್ವವಾಗಿದೆ. ದಿನನಿತ್ಯದ ಪ್ರಾಯೋಗಿಕ ಜೀವನದಲ್ಲಿ ಇದು ಹೇಗೆ ಅನ್ವಯವಾಗುತ್ತದೆ? ಇಲ್ಲಿ ಯೇಸುವು ಎದುರಿಸಿದ ಶೋಧನೆ ಏನಾಗಿತ್ತೆಂದರೆ, ದೇವಾಲಯದ ಶಿಖರದ ಮೇಲಿನಿಂದ ಜಿಗಿದು, ಕೀರ್ತನೆ. 91ರ ವಾಗ್ದಾನದ ಪ್ರಕಾರ ದೇವಾಲಯದ ಅಂಗಳಕ್ಕೆ ಸುರಕ್ಷಿತನಾಗಿ ತಲುಪುವುದು, ಮತ್ತು ಇದರ ಮೂಲಕ ಜನರಿಂದ, "ಆಹಾ, ಇವನು ಶ್ರೇಷ್ಠನಾದ ದೇವಮನುಷ್ಯನು! ಅವನ ನಂಬಿಕೆಯನ್ನು ನೋಡಿರಿ, ಅವನು ದೇವರ ವಾಗ್ದಾನವನ್ನು ಪಡೆದುಕೊಂಡನು ಮತ್ತು ಗಾಯಗೊಳ್ಳಲೇ ಇಲ್ಲ," ಎಂಬ ಹೊಗಳಿಕೆಯನ್ನು ಗಳಿಸುವುದು. ಆದರೆ ಯೇಸುವಿನ ಪ್ರತಿಕ್ರಿಯೆ ಬೇರೆಯಾಗಿತ್ತು, "ನಾನು ದೇವರನ್ನು ಈ ರೀತಿ ಶೋಧಿಸಲಾರೆನು." ದೇವಾಲಯದ ಶಿಖರದಿಂದ ಇಳಿದು ಹೋಗಲು ಮೆಟ್ಟಲುಗಳು ಇರುವಾಗ, ಜಿಗಿಯುವ ಅಗತ್ಯವಿಲ್ಲ. ಇದನ್ನು ನಿರಾಕರಿಸುವುದರ ಮೂಲಕ ಯೇಸುವು ತೋರಿಸಿಕೊಟ್ಟದ್ದು ಏನೆಂದರೆ, ನಾವು ದೇವರು ಒದಗಿಸಿರುವ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು, ಆದಾಗ್ಯೂ ದೇವರು ನಮಗಾಗಿ ವಿಶೇಷ ಅದ್ಭುತಕಾರ್ಯವನ್ನು ಮಾಡಬೇಕು ಎಂದು ಅಪೇಕ್ಷಿಸುವ ಮೂಲಕ ಅವರನ್ನು ಶೋಧಿಸಬಾರದು.
ಅಪೊಸ್ತಲರ ಕೃತ್ಯಗಳು 8:39ರ ಉದಾಹರಣೆಯನ್ನು ನೋಡುವುದಾದರೆ, ಫಿಲಿಪ್ಪನು ಕಂಚುಕಿಗೆ ಉಪದೇಶಿಸಿದ ತರುವಾಯ, ಪವಿತ್ರಾತ್ಮನು ಆತನನ್ನು ಆಕಾಶದಲ್ಲಿ ಎತ್ತಿಕೊಂಡು ಹೋಗಿ ಅಜೋತ್ ಎಂಬಲ್ಲಿಗೆ ತಲುಪಿಸಿದ ನಿದರ್ಶನವನ್ನು ನಾವು ಕಾಣುತ್ತೇವೆ. ಇಂದಿನ ದಿನಗಳಲ್ಲಿ ಹೆಲಿಕಾಪ್ಟರಿನಂತೆ, ಪವಿತ್ರಾತ್ಮನು ಫಿಲಿಪ್ಪನನ್ನು ಆಕಾಶಕ್ಕೆ ಎತ್ತಿಕೊಂಡು ಹೋಗುವ ಕೆಲಸ ಮಾಡಿದನು. ಇಂದು ನೀವು ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಬೇಕಾದಾಗ ದೇವರಿಗೆ, "ದೇವರೇ, ನನಗೂ ಅದೇ ಅನುಭವವನ್ನು ನೀಡು," ಎಂದು ಹೇಳಿದಲ್ಲಿ ಅದು ದೇವರನ್ನು ಪರೀಕ್ಷೆಗೆ ಒಳಪಡಿಸಿದಂತೆ ಆಗುತ್ತದೆ. ದೇವರು ನಮ್ಮ ಉಪಯೋಗಕ್ಕಾಗಿ ಬಸ್ಸುಗಳು, ರೈಲುಗಾಡಿಗಳು, ಸ್ಕೂಟರ್‌ಗಳು ಮತ್ತು ವಿಮಾನಗಳನ್ನು ನಮಗೆ ಒದಗಿಸಿರುವಾಗ, ನಾವು ಅದಕ್ಕಾಗಿ ಪವಿತ್ರಾತ್ಮನನ್ನು ಏಕೆ ಕೇಳಬೇಕು?
"ದೇವರು ಕೆಲವರ ಜೀವಿತದಲ್ಲಿ ಕೆಲವು ವಿಶೇಷ ಕಾರ್ಯಗಳನ್ನು ಮಾಡುತ್ತಾರೆ. ಅವರು ಪ್ರತಿಯೊಬ್ಬ ವಿಶ್ವಾಸಿಯ ಜೀವನದಲ್ಲಿ ಪ್ರತಿಯೊಂದು ಸೂಚಕಕಾರ್ಯವನ್ನು ಮಾಡುವುದಿಲ್ಲ"
ದೇವರನ್ನು ಶೋಧನೆಗೆ ಒಳಪಡಿಸುವಂತ ಇನ್ನೊಂದು ವಿಧಾನವೆಂದರೆ, ಒಂದು ವಾಗ್ದಾನವನ್ನು ಸ್ವಂತ ಹಕ್ಕಿನಂತೆ ಪಡೆಯಲು ಪ್ರಯತ್ನಿಸಿ, ಅದರ ಮೂಲಕ ಇತರರ ಮುಂದೆ ದೇವರು ತನಗಾಗಿ ದೊಡ್ಡ ಅದ್ಭುತ ಕಾರ್ಯವನ್ನು ಮಾಡಿದ್ದಾರೆಂದು ಸಾಕ್ಷಿ ನೀಡುವುದು. ಉದಾಹರಣೆಗೆ ಕೆಲವು ಜನರು, ಅನಾರೋಗ್ಯದಲ್ಲಿರುವಾಗ ಪಕ್ಕದ ಬೀದಿಯಲ್ಲಿ ಔಷಧಿಗಳು ದೊರೆತರೂ, ತಮಗೆ ವೈದ್ಯಕೀಯ ಸಲಹೆ ಕೊಡಲು ವೈದ್ಯರು ಲಭ್ಯವಿದ್ದಾಗ್ಯೂ, "ನನ್ನನ್ನು ಸ್ವಸ್ಥ ಪಡಿಸಲಿಕ್ಕಾಗಿ ನಾನು ದೇವರನ್ನು ನಂಬುತ್ತೇನೆ, ವೈದ್ಯರ ಸೇವೆ ಮತ್ತು ಔಷಧಿಗಳು ಬಹಳ ಸಮೀಪವೇ ಇದ್ದರೂ, ನಾನು ಅವುಗಳನ್ನು ಉಪಯೋಗಿಸುವುದಿಲ್ಲ," ಎಂದು ಹೇಳಿಕೊಳ್ಳುತ್ತಾರೆ. ಕೆಲವು ಮೂರ್ಖ ಕ್ರೈಸ್ತರು, "ಕರ್ತನು ನನ್ನ ವೈದ್ಯನು, ನನಗೆ ಯಾವುದೇ ಔಷಧಿಯ ಅವಶ್ಯಕತೆಯಿಲ್ಲ," ಎಂದು ದೇವರ ವಾಗ್ದಾನವನ್ನು ಉಲ್ಲೇಖಿಸಿ, ತಮ್ಮನ್ನು ಮತ್ತು ತಮ್ಮ ಮಕ್ಕಳು ಹಾಗೂ ಹೆಂಡತಿಯರನ್ನು ಸಾವಿಗೆ ಒಳಪಡಿಸಿದ ಘಟನೆಗಳಿವೆ. ದೇವರು ನಮಗೆ ದೇವಾಲಯದಲ್ಲಿ ಮೆಟ್ಟಲುಗಳನ್ನು ಒದಗಿಸಿರುವಾಗ, ನೀವು ಅವನ್ನು ಬಳಸಬೇಕೆಂದು ಅವರು ಬಯಸುತ್ತಾರೆಯೇ ಹೊರತು, ಕೀರ್ತನೆ. 91ರಲ್ಲಿ ಕೊಟ್ಟಿರುವ ವಾಗ್ದಾನವು ನಮ್ಮ ಹಕ್ಕಾಗಿದೆಯೆಂದು ತೋರಿಸಲಿಕ್ಕಾಗಿ ನಾವು ದೇವಾಲಯದ ಮೇಲಿನಿಂದ ಧುಮುಕಲಿ ಎಂದು ಅವರು ಬಯಸುವುದಿಲ್ಲ. ಅದೇ ರೀತಿ ದೇವರು ನಮಗೆ ಔಷಧಿಗಳನ್ನು ಒದಗಿಸಿರುವಾಗ, ನಮಗೆ ಕಾಯಿಲೆ ಬಂದಾಗ ಅವನ್ನು ಬಳಸಲಿ ಎಂದು ದೇವರು ಬಯಸುತ್ತಾರೆಯೇ ಹೊರತು, ಮೂರ್ಖತನದಿಂದ ಯಾವುದೋ ವಾಗ್ದಾನವನ್ನು ಹಿಡಿದುಕೊಂಡು ದೇವರೇ ನಮ್ಮನ್ನು ಗುಣಪಡಿಸುತ್ತಾರೆ ಎಂದು ನಿರೀಕ್ಷಿಸುವುದಲ್ಲ. ಅದು ದೇವರು ಫಿಲಿಪ್ಪನನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಕಳಿಸಿದಂತೆ ನಮಗೂ ಮಾಡಲಿ, ಎಂದು ದೇವರಿಂದ ಬಯಸುವಂತ ಮೂರ್ಖತನಕ್ಕೆ ಸಮನಾಗಿದೆ.
ನಾವು ನೆನಪಿಡಬೇಕಾದ ಮತ್ತೊಂದು ಸಂಗತಿಯೆಂದರೆ, ದೇವರು ನಿರ್ದಿಷ್ಟ ಜನರಿಗೆ ನಿರ್ದಿಷ್ಟವಾದ ಅದ್ಭುತಗಳನ್ನು ಮಾಡುತ್ತಾರೆ. ಪ್ರತಿಯೊಬ್ಬ ವಿಶ್ವಾಸಿಗೂ ದೇವರು ಪ್ರತಿಯೊಂದು ಅದ್ಭುತವನ್ನು ಮಾಡುವುದಿಲ್ಲ. ನಾವು ದೇವರ ವಾಕ್ಯಗಳನ್ನು ಅಭ್ಯಾಸಿಸುವಾಗ ಬಹಳ ಜಾಗರೂಕರಾಗಿರಬೇಕು, ಇತರರಿಂದ ಸ್ವಲ್ಪ ಗೌರವವನ್ನು ಗಳಿಸುವುದಕ್ಕಾಗಿ ನಾವು ವಿಶೇಷವಾದ ಸಂಗತಿಯನ್ನು ಮಾಡಲು ಪ್ರಯತ್ನಿಸಬಾರದು. ಮನುಷ್ಯರ ದೃಷ್ಟಿಯಲ್ಲಿ ಗೌರವವನ್ನು ಪಡೆದುಕೊಳ್ಳುವ ಬಯಕೆ ನಮ್ಮ ಶರೀರ ಭಾವದಲ್ಲಿ ಆಳವಾಗಿ ಬೇರೂರಿದೆ, ಕೆಲವೊಮ್ಮೆ ನಮಗೆ ಅದರ ಅರಿವು ಕೂಡ ಇರುವುದಿಲ್ಲ. ಯೇಸು ಸ್ವಾಮಿಯು ತನ್ನ ಶಿಷ್ಯರು ವಿರೋಧಿಸಬೇಕೆಂದು ಕಲಿಸಿಕೊಟ್ಟ ಅತಿ ದೊಡ್ಡ ಸಂಗತಿಗಳಲ್ಲಿ ಇದೂ ಒಂದು. ಇಲ್ಲಿ ಎಲ್ಲಕ್ಕೂ ಹೆಚ್ಚಿನ ಶೋಧನೆ ಯಾವುದೆಂದರೆ, ಗೌರವಕ್ಕಾಗಿ ತವಕಿಸುವುದು, ಜನರ ಮೆಚ್ಚುಗೆಗಾಗಿ ದೇವರ ವಾಗ್ದಾನದಲ್ಲಿ ಹೇಳಿರುವಂತೆ, ದೇವಾಲಯದ ಶಿಖರದಿಂದ ಜಿಗಿದು ಯಾವ ಕೇಡನ್ನೂ ಅನುಭವಿಸದೆ ಅದರ ಹೊರಗಣ ಆವರಣಕ್ಕೆ ಇಳಿಯುವುದು.
ಆದರೆ ಈ ಶೋಧನೆಯು ಸಾಮಾನ್ಯ ವಿಷಯಗಳಲ್ಲೂ ಕಾಣಿಸಿಕೊಳ್ಳಬಹುದು. ಮತ್ತಾಯನು 6ನೇ ಅಧ್ಯಾಯದಲ್ಲಿ ಯೇಸು ಸ್ವಾಮಿಯು, "ನೀವು ಪ್ರಾರ್ಥಿಸುವಾಗ ನಿಮ್ಮ ಪ್ರಾರ್ಥನೆಯನ್ನು ಕೇಳಿಸಿಕೊಳ್ಳುವ ಜನರಿಂದ ನಿಮಗೆ ಗೌರವ ಬರಬೇಕೆಂದು ಬಯಸಿ ಪ್ರಾರ್ಥನೆ ಮಾಡಬೇಡಿರಿ ಮತ್ತು ಉಪವಾಸ ಮಾಡುವಾಗ ನೀವು ಎಷ್ಟು ದಿವಸ ಉಪವಾಸ ಮಾಡಿದ್ದೀರೆಂಬುದನ್ನು ಎಲ್ಲರಿಗೂ ತಿಳಿಸಬೇಡಿರಿ," ಎಂದು ಹೇಳಿದರು. ನೀವು ಇವೆಲ್ಲವನ್ನು ಗೌರವವನ್ನು ಪಡೆದುಕೊಳ್ಳುವ ಸಲುವಾಗಿ ಮಾಡುತ್ತೀರಿ. ಆತನು ಹೇಳಿದ ಇನ್ನೊಂದು ಸಂಗತಿ, "ನೀವು ಧರ್ಮಕಾರ್ಯಗಳನ್ನು ಮಾಡುವಾಗ, ನೀವು ಅದನ್ನು ಯಾರಿಗೂ ತಿಳಿಸಬೇಡಿರಿ." ಆದರೂ ಅನೇಕ ಕ್ರೈಸ್ತರು ಈ ಆಜ್ಞೆಗಳನ್ನು ಪಾಲಿಸದೆ ಮನುಷ್ಯರಿಂದ ಬರುವ ಗೌರವವನ್ನು ಅಪೇಕ್ಷಿಸಿ, ದೇವರನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ.