WFTW Body: 

ಎಫೆಸದವರಿಗೆ 1:3ರಲ್ಲಿ ಹೀಗೆ ಹೇಳಲಾಗಿದೆ, "ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ, ತಂದೆಯೂ ಆಗಿರುವಾತನಿಗೆ ಸ್ತೋತ್ರ. ಆತನು ಪರಲೋಕದಲ್ಲಿನ ಸಕಲ ಆತ್ಮೀಯ ವರಗಳನ್ನು ನಮಗೆ ಕ್ರಿಸ್ತ ಯೇಸುವಿನಲ್ಲಿ ಅನುಗ್ರಹಿಸಿದ್ದಾನೆ." ಈ ವಚನದಲ್ಲಿ ನಮೂದಿಸಿರುವ ಎಲ್ಲಾ ಆಶೀರ್ವಾದಗಳು ಆತ್ಮಿಕವಾದವುಗಳು, ಭೌತಿಕ-ಸಂಬಂಧಿತ ವಸ್ತುಗಳಲ್ಲ. ಹಳೆಯ ಒಡಂಬಡಿಕೆಯಲ್ಲಿ ಇಸ್ರಾಯೇಲ್ಯರಿಗೆ ವಾಗ್ದಾನ ಮಾಡಲ್ಪಟ್ಟಂತವು ಲೌಕಿಕ ಆಶೀರ್ವಾದಗಳು ಆಗಿದ್ದವು. ನಾವು ಇದನ್ನು ’ಧರ್ಮೋಪದೇಶಕಾಂಡದ 28'ನೇ ಅಧ್ಯಾಯದಲ್ಲಿ ಓದಬಹುದು. ಯೇಸುವು ಒದಗಿಸಿರುವ ಕೃಪೆ ಮತ್ತು ಮೋಶೆಯು ತಂದ ನ್ಯಾಯಶಾಸ್ತ್ರದ ನಡುವಿನ ವ್ಯತ್ಯಾಸ ಇದೇ ಆಗಿದೆ. ಹಳೆಯ ಒಡಂಬಡಿಕೆಯಲ್ಲಿ ಇದಕ್ಕೆ ಸಮನಾದ ಒಂದು ವಚನ ಇದ್ದಿದ್ದರೆ, ಅದು ಈ ರೀತಿಯಾಗಿ ಇರುತ್ತಿತ್ತು: "ಸರ್ವಶಕ್ತನಾದ ದೇವರು ಆಗಿರುವಾತನಿಗೆ (’ನಮ್ಮ ತಂದೆ’ ಎಂದಲ್ಲ) ಸ್ತೋತ್ರ. ಆತನು ಭೂಲೋಕದಲ್ಲಿನ ಸಕಲ ಲೌಕಿಕ ವರಗಳನ್ನು ನಮಗೆ ಮೋಶೆಯಲ್ಲಿ ಅನುಗ್ರಹಿಸಿದ್ದಾನೆ." ಹಾಗಾಗಿ ಪ್ರಾಥಮಿಕವಾಗಿ ದೈಹಿಕ ಗುಣಪಡಿಸುವಿಕೆ ಮತ್ತು ಭೌತಿಕ ಸಂಗತಿಗಳಲ್ಲಿ ಆಶೀರ್ವಾದಕ್ಕಾಗಿ ತವಕಿಸುವ ವಿಶ್ವಾಸಿಗಳು ನಿಜವಾಗಿ ಹಳೆಯ ಒಡಂಬಡಿಕೆಗೆ ಹಿಂತಿರುಗಿದ್ದಾರೆ ಎನ್ನಬಹುದು. ಇಂತಹ "ವಿಶ್ವಾಸಿಗಳು" ವಾಸ್ತವಿಕವಾಗಿ ಇಸ್ರಾಯೇಲ್ಯರಾಗಿದ್ದಾರೆ ಮತ್ತು ಕ್ರೈಸ್ತರಲ್ಲ. ಇವರು ಮೋಶೆಯ ಅನುಯಾಯಿಗಳು, ಕ್ರಿಸ್ತನ ಹಿಂಬಾಲಕರಲ್ಲ.

ಹಾಗಾದರೆ ದೇವರು ವಿಶ್ವಾಸಿಗಳಿಗೆ ಭೌತಿಕ ಸಂಗತಿಗಳಲ್ಲಿ ಆಶೀರ್ವಾದವನ್ನು ಮಾಡುವುದಿಲ್ಲವೆಂದು ಇದರ ಅರ್ಥವೇ? ದೇವರು ಆಶೀರ್ವದಿಸುತ್ತಾರೆ - ಆದರೆ ಬೇರೊಂದು ವಿಧದಲ್ಲಿ. ವಿಶ್ವಾಸಿಗಳು ಮೊದಲು ದೇವರ ರಾಜ್ಯ ಮತ್ತು ಅವರ ನೀತಿಗಾಗಿ ತವಕಿಸಿದರೆ, ಅವರ ಪ್ರತಿಯೊಂದು ಪ್ರಾಪಂಚಿಕ ಅವಶ್ಯಕತೆಯೂ ಪೂರೈಸಲ್ಪಡುತ್ತದೆ. ಹಳೆಯ ಒಡಂಬಡಿಕೆಯಲ್ಲಿ, ಜನರು ಲೌಕಿಕ ಸಂಗತಿಗಳನ್ನು ಆಶಿಸಿದರು ಮತ್ತು ಅವುಗಳನ್ನು ಧಾರಾಳವಾಗಿ ಪಡೆದರು - ಅನೇಕ ಮಕ್ಕಳು, ಬಹಳಷ್ಟು ಆಸ್ತಿ, ಹೆಚ್ಚಿನ ಹಣ, ವೈರಿಗಳ ವಿರುದ್ಧ ಜಯ, ಉತ್ತಮ ಸ್ಥಾನ-ಮಾನಗಳು, ಇತ್ಯಾದಿ. ಆದರೆ ಹೊಸ ಒಡಂಬಡಿಕೆಯಲ್ಲಿ ನಾವು ಆತ್ಮಿಕ ಆಶೀರ್ವಾದಗಳಿಗಾಗಿ ತವಕಿಸುತ್ತೇವೆ - ಆತ್ಮಿಕ ಮಕ್ಕಳು, ಆತ್ಮಿಕ ಸಂಪತ್ತು, ಆತ್ಮಿಕ ಗೌರವ, ಆತ್ಮಿಕ ಜಯ (ಸೈತಾನ ಮತ್ತು ಶರೀರಭಾವದ ಮೇಲೆ, ಮತ್ತು ಫಿಲಿಷ್ಟಿಯರು ಹಾಗೂ ಮಾನವರ ಮೇಲೆ ಅಲ್ಲ). ಆಗ ದೇವರ ಚಿತ್ತದ ಪ್ರಕಾರ ನಡೆಯುವುದಕ್ಕೆ ನಮಗೆ ಬೇಕಾದ ಲೌಕಿಕ ಅವಶ್ಯಕತೆಗಳು - ನಮ್ಮ ಆರೋಗ್ಯ ಮತ್ತು ಹಣಕಾಸು ಇಂಥವುಗಳು - ನಮಗೆ ಸೇರಿಸಿ ಕೊಡಲ್ಪಡುತ್ತವೆ. ಹಣದ ಎಷ್ಟು ಪ್ರಮಾಣವು ನಮ್ಮನ್ನು ಕೆಡಿಸುವುದಿಲ್ಲ ಎಂಬುದು ದೇವರಿಗೆ ತಿಳಿದಿದೆ, ಹಾಗಾಗಿ ಅವರು ನಮಗೆ ಅಷ್ಟನ್ನು ಒದಗಿಸುತ್ತಾರೆ.

ಎಫೆಸದವರಿಗೆ 1:3ರಲ್ಲಿ "ಆತ್ಮೀಯ ವರಗಳು" ಎಂಬ ಪದಗಳನ್ನು "ಪವಿತ್ರಾತ್ಮನ ಆಶೀರ್ವಾದಗಳು" ಎಂದೂ ಸಹ ಭಾಷಾಂತರಿಸಬಹುದು. ಈಗಾಗಲೇ ದೇವರು ನಮಗೆ ಕ್ರಿಸ್ತನಲ್ಲಿ ಪವಿತ್ರಾತ್ಮನ ಎಲ್ಲಾ ಆಶೀರ್ವಾದಗಳನ್ನು ಕೊಟ್ಟಿದ್ದಾರೆ. ನಾವು ಯೇಸುವಿನ ಹೆಸರಿನಲ್ಲಿ ಇವುಗಳನ್ನು ಕೇಳಿ ಪಡೆಯುವುದನ್ನಷ್ಟೇ ಮಾಡಬೇಕಿದೆ. ಒಬ್ಬ ಭಿಕ್ಷುಕಿ ಯುವತಿಯು ರಸ್ತೆಯ ಬದಿಯಲ್ಲಿ ಕುಳಿತುಕೊಂಡು ಭಿಕ್ಷೆ ಬೇಡುವುದರ ಕುರಿತಾಗಿ ಯೋಚಿಸಿರಿ. ಒಬ್ಬ ಧನಿಕನಾದ ರಾಜಕುಮಾರನು ಅಲ್ಲಿಗೆ ಬರುತ್ತಾನೆ ಮತ್ತು ಆಕೆಯೊಂದಿಗೆ ವಿವಾಹ ಮಾಡಿಕೊಳ್ಳಲು ನಿಶ್ಚಯಿಸುತ್ತಾನೆ ಮತ್ತು ಕೋಟ್ಯಾಂತರ ಮೌಲ್ಯದ ಹಣವನ್ನು ಒಂದು ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡುತ್ತಾನೆ - ಆ ಖಾತೆಯಿಂದ ಆ ಹುಡುಗಿಯು ತನಗೆ ಬೇಕಾದಷ್ಟು ಹಣವನ್ನು ಯಾವುದೇ ನಿರ್ಬಂಧವಿಲ್ಲದೆ, ಯಾವ ಗಳಿಗೆಯಲ್ಲಾದರೂ ಕೇಳಿ ಪಡೆಯಬಹುದು. ಆಕೆ ಎಷ್ಟು ಭಾಗ್ಯವಂತೆ! ಒಂದು ಸಮಯದಲ್ಲಿ ಆಕೆಯ ಬಳಿ ಒಂದು ಭಿಕ್ಷಾಪಾತ್ರೆಯಲ್ಲಿ ಕೆಲವು ನಾಣ್ಯಗಳ ಹೊರತಾಗಿ ಇನ್ನೇನೂ ಇರಲಿಲ್ಲ. ಆದರೆ ಈಗ ಆಕೆ ಸೊಗಸಾದ ಬಟ್ಟೆಗಳನ್ನು ಧರಿಸಿಕೊಂಡು, ವೈಭವದ ಜೀವನ ಜೀವಿಸುತ್ತಿದ್ದಾಳೆ. ಆಕೆಯು ಬ್ಯಾಂಕಿನಿಂದ ತನಗೆ ಇಷ್ಟಪಟ್ಟಷ್ಟು ಹಣವನ್ನು ಕೇಳಿ ಪಡೆಯಬಹುದು, ಏಕೆಂದರೆ ಆಕೆಯ ಬಳಿ ರಾಜಕುಮಾರನು ಸಹಿ ಮಾಡಿರುವ ಅನೇಕ ಚೆಕ್ಕುಗಳಿವೆ. ಆತ್ಮಿಕವಾಗಿ, ಇದು ನಮ್ಮ ಪರಿಸ್ಥಿತಿಯಾಗಿದೆ.

ಈಗ ನಾವು ಪರಲೋಕದ ಬ್ಯಾಂಕಿಗೆ ಹೋಗಿ ಪವಿತ್ರಾತ್ಮನ ಒಂದೊಂದು ವರವನ್ನೂ ಕೇಳಿ ಪಡೆಯಬಹುದು, ಏಕೆಂದರೆ ಅವೆಲ್ಲವೂ ಕ್ರಿಸ್ತನ ಹೆಸರಿನಲ್ಲಿ ನಮಗೆ ಸೇರಿವೆ. ನಾವು ಕ್ರಿಸ್ತನೊಂದಿಗೆ ವಧುವಿನ ಸಂಬಂಧವನ್ನು ಹೊಂದಿದ್ದರೆ, ಮತ್ತು ನಾವು "ಕರ್ತನೇ, ನಿನ್ನ ಮದಲಗಿತ್ತಿಯಾದ ನಾನು, ಜೀವಿತದ ಪ್ರತಿ ದಿನ ನಿನಗೆ ಯಥಾರ್ಥಳಾಗಿ ಇರಲು ಬಯಸುತ್ತೇನೆ," ಎಂದು ಹೇಳುವುದಾದರೆ, ಆಗ ಕ್ರಿಸ್ತನ ನಾಮದಲ್ಲಿ ಪರಲೋಕದ ಸಕಲ ಸಂಪತ್ತು ನಮ್ಮದಾಗಿದೆ. ಆಗ ಪವಿತ್ರಾತ್ಮನ ಎಲ್ಲಾ ಆಶೀರ್ವಾದಗಳು ನಮಗೆ ಲಭಿಸುತ್ತವೆ. ನಾವು ಅವುಗಳನ್ನು ಪಡೆಯುವುದಕ್ಕೆ ಅರ್ಹರೆಂದು ದೇವರನ್ನು ಒಪ್ಪಿಸಲು ಪ್ರಯಾಸ ಪಡುವುದು ಬೇಡ - ಏಕೆಂದರೆ ನಾವು ಅವುಗಳಲ್ಲಿ ಒಂದಕ್ಕೂ ಅರ್ಹರಲ್ಲ. ಆ ಭಿಕ್ಷುಕಿ ಹುಡುಗಿಯು ತನಗೆ ಉಚಿತವಾಗಿ ದೊರೆತ ಸಂಪತ್ತಿಗೆ ತಾನು ಅರ್ಹಳೆಂದು ಭಾವಿಸುತ್ತಾಳೆಂದು ನೀವು ಯೋಚಿಸುತ್ತೀರಾ? ಖಂಡಿತವಾಗಿ ಇಲ್ಲ. ದೇವರ ಕರುಣೆ ಮತ್ತು ಕೃಪೆಯೇ ನಾವು ಎಲ್ಲವನ್ನೂ ಪಡೆಯುವುದಕ್ಕೆ ಕಾರಣವಾಗಿದೆ. ನಾವು ಪರಲೋಕದ ಎಲ್ಲಾ ಸಂಗತಿಗಳನ್ನು ತೆಗೆದುಕೊಳ್ಳಬಹುದು, ಏಕೆಂದರೆ ಅವೆಲ್ಲವೂ ನಮಗೆ ಕ್ರಿಸ್ತನಲ್ಲಿ ಉಚಿತವಾಗಿ ಕೊಡಲ್ಪಟ್ಟಿವೆ. ನಾವು ನಮ್ಮ ಪ್ರಾರ್ಥನೆಗಳು ಅಥವಾ ಉಪವಾಸಗಳ ಮೂಲಕ ಅವುಗಳನ್ನು ಸಂಪಾದಿಸುವುದು ಅಸಾಧ್ಯವಾದ ಮಾತಾಗಿದೆ. ಅನೇಕರು ಪವಿತ್ರಾತ್ಮನ ಅಶೀರ್ವಾದಗಳನ್ನು ಪಡೆಯುವುದಿಲ್ಲ, ಏಕೆಂದರೆ ಅವರು ಅವುಗಳನ್ನು ಈ ರೀತಿಯಾಗಿ ಸಂಪಾದಿಸಲು ಪ್ರಯತ್ನಿಸುತ್ತಾರೆ! ನಾವು ಅವುಗಳನ್ನು ಹಾಗೆ ಪಡೆಯಲು ಆಗುವುದಿಲ್ಲ. ನಾವು ಅವೆಲ್ಲವನ್ನು ಕ್ರಿಸ್ತನ ಯೋಗ್ಯತೆಯ ಮೂಲಕವೇ ಸ್ವೀಕರಿಸಬೇಕು.

ನಾನು ಒಂದು ಸಂದರ್ಭದಲ್ಲಿ ನನ್ನ ಯಾವುದೋ ಲೌಕಿಕ ಅವಶ್ಯಕತೆಗಾಗಿ ಪ್ರಾರ್ಥಿಸುತ್ತಿದ್ದಾಗ, ಕರ್ತನು ನನಗೆ ಈ ಪಾಠವನ್ನು ಹೇಗೆ ಕಲಿಸಿದನೆಂದು ನನಗೆ ಜ್ಞಾಪಕವಿದೆ. ನಾನು ಹೀಗೆ ಹೇಳಿದೆನು, "ಕರ್ತನೇ, ಈ ಅನೇಕ ವರ್ಷಗಳಿಂದ ನಾನು ನಿನ್ನ ಸೇವೆ ಮಾಡಿದ್ದೇನೆ. ಹಾಗಾಗಿ ದಯವಿಟ್ಟು ನೀನು ಇದನ್ನು ನನಗಾಗಿ ಮಾಡು" ಎಂಬುದಾಗಿ. ಕರ್ತನ ಪ್ರತ್ಯುತ್ತರ ಹೀಗಿತ್ತು, "ಇಲ್ಲ, ನೀನು ನಿನ್ನ ಹೆಸರಿನಲ್ಲಿ ಬಂದರೆ, ನಾನು ಅದನ್ನು ಮಾಡಲಾರೆ." ನನಗೆ ಆ ದಿನ ಕರ್ತನ ಹೆಸರಿನಲ್ಲಿ ಪ್ರಾರ್ಥಿಸುವುದರ ಅರ್ಥವೇನೆಂದು ತಿಳಿಯಿತು. ಆ ದಿನ ನಾನು ತಿಳಿದುಕೊಂಡದ್ದು ಏನೆಂದರೆ, ಕರ್ತನ ಬಳಿಗೆ ಬರುವಂತ ಆಗ ತಾನೇ ಮಾನಸಾಂತರ ಹೊಂದಿದ ಒಬ್ಬ ಹೊಸ ವಿಶ್ವಾಸಿ ಮತ್ತು 1959ನೇ ಇಸವಿಯಲ್ಲಿ ಮಾನಸಾಂತರ ಹೊಂದಿದ ನಾನು, ನಾವಿಬ್ಬರೂ ದೇವರ ಬಳಿಗೆ ನಿಖರವಾಗಿ ಒಂದೇ ವಿಷಯದ ಆಧಾರದ ಮೇಲೆ ಬಂದಿದ್ದೇವೆ - ಕೇವಲ ಯೇಸು ಕ್ರಿಸ್ತನ ಯೋಗ್ಯತೆಯಿಂದಾಗಿ. ಆ ಹೊಸ ವಿಶ್ವಾಸಿಯು ಪರಲೋಕದ ಬ್ಯಾಂಕಿಗೆ ಯೇಸು ಕ್ರಿಸ್ತನು ಸಹಿಮಾಡಿದ ಚೆಕ್ಕಿನೊಂದಿಗೆ ಬರಬೇಕು. ನಾನು ಸಹ ಯೇಸುವು ಸಹಿ ಮಾಡಿರುವ ಒಂದು ಚೆಕ್ಕಿನ ಆಧಾರದ ಮೇಲೆ ಮಾತ್ರ ಅಲ್ಲಿಗೆ ಬರಬಹುದು. ನಾನು ಎಷ್ಟೋ ವರ್ಷಗಳ ಕಾಲ ದೇವರಿಗೆ ಪ್ರಾಮಾಣಿಕನಾಗಿ ನಡೆದಿದ್ದೇನೆಂದು ಹೇಳಿಕೊಂಡು ದೇವರ ಬಳಿಗೆ ಬಂದರೆ, ಆಗ ನಾನು ಪರಲೋಕದ ಬ್ಯಾಂಕಿಗೆ ನಾನು ಸಹಿ ಮಾಡಿರುವ ಚೆಕ್ಕಿನೊಂದಿಗೆ ಬರುತ್ತಿದ್ದೇನೆ. ಪರಲೋಕದ ಬ್ಯಾಂಕ್ ಆ ಚೆಕ್ಕನ್ನು ತಿರಸ್ಕರಿಸುತ್ತದೆ. ನಮ್ಮ ಹಲವಾರು ಪ್ರಾರ್ಥನೆಗಳಿಗೆ ಉತ್ತರ ಸಿಗದೇ ಇರುವುದಕ್ಕೆ ಕಾರಣ ಇದೇ ಆಗಿದೆ. ನಾವು ಯೇಸುವಿನ ಹೆಸರಿನಲ್ಲಿ ಹೋಗುತ್ತಿಲ್ಲ. ನಾವು ನಮ್ಮ ಹೆಸರಿನಲ್ಲಿ ಹೋಗುತ್ತಿದ್ದೇವೆ. ನಾವು ದೇವರಿಗಾಗಿ ಬಹಳ ಹೆಚ್ಚು ತ್ಯಾಗ ಮಾಡಿರುವುದರಿಂದ ಆತನು ನಮ್ಮ ಪ್ರಾಥನೆಗೆ ಉತ್ತರ ಕೊಡಬೇಕೆಂದು ನಾವು ಯೋಚಿಸುತ್ತೇವೆ. ನಾವು 70 ವರ್ಷಗಳ ಕಾಲ ಯಥಾರ್ಥವಾಗಿ ಜೀವಿಸಿದ್ದರೂ ಸಹ, ಕರ್ತನ ಮುಂದೆ ಬರುವಾಗ, ಒಬ್ಬ ಹೊಸದಾಗಿ ಮಾನಸಾಂತರ ಹೊಂದಿದ ಮನುಷ್ಯನು ಯಾವುದರ ಆಧಾರದ ಮೇಲೆ ಅಲ್ಲಿಗೆ ಬರುತ್ತಾನೋ ಅದೇ ಆಧಾರದ ಮೇಲೆ - ಯೇಸುವಿನ ಹೆಸರಿನ ಆಧಾರದ ಮೇಲೆ - ನಾವು ಅಲ್ಲಿಗೆ ಬರಬಹುದು. ಈ ಪ್ರಕಟನೆಗಾಗಿ ನಾನು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ, ಏಕೆಂದರೆ ಇದರ ನಂತರ ನಾನು ದೇವರ ಬಳಿಗೆ ನಾನೇ ಸ್ವತಃ ಸಹಿ ಹಾಕಿರುವ ಚೆಕ್ಕನ್ನು ಯಾವತ್ತೂ ಒಯ್ಯಲಿಲ್ಲ!! ಹಾಗೆ ಮಾಡುವ ಪ್ರಚೋದನೆ ನನಗೆ ಬಂದಾಗ ನಾನು ಹೀಗೆ ಹೇಳುತ್ತೇನೆ, "ಆ ಚೆಕ್‍ನಿಂದ ಹಣ ಪಡೆಯಲು ಆಗುವುದಿಲ್ಲ. ನಾನು ಯೇಸುವಿನ ಹೆಸರಿನಲ್ಲಿ ಮತ್ತು ಆತನ ಯೋಗ್ಯತೆಯ ಆಧಾರದ ಮೇಲೆ ಮಾತ್ರ ಹೋಗುವೆನು." ಈ ರೀತಿಯಾಗಿ ನಮಗೆ ಪರಲೋಕದಲ್ಲಿನ ಪವಿತ್ರಾತ್ಮನ ಪ್ರತಿಯೊಂದು ಆಶೀರ್ವಾದವೂ ಕ್ರಿಸ್ತನಲ್ಲಿ ಅನುಗ್ರಹಿಸಲ್ಪಟ್ಟಿದೆ.