WFTW Body: 

ಜ್ಞಾನೋಕ್ತಿಗಳು 4:12ರ ಭಾವಾನುವಾದದಲ್ಲಿ ಹೇಳಿರುವಂತೆ, ನೀವು ನಡೆಯಬೇಕಾದ ದಾರಿಯನ್ನು ದೇವರು ನಿಮಗೆ ಒಂದೊಂದೇ ಹೆಜ್ಜೆಯಾಗಿ ತೋರಿಸುತ್ತಾರೆ. ಒಂದು ಹೆಜ್ಜೆಯ ನಂತರ ಏನು ನಡೆಯುತ್ತದೆಂದು ನಿಮಗೆ ತಿಳಿದಿರಬೇಕಿಲ್ಲ. ನಿಮಗೆ ಕಾಣಿಸುವ ಒಂದು ಹೆಜ್ಜೆ ಹಾಕಿದರೆ ಸಾಕು, ಆಗ ನಿಮಗೆ ಅದರ ಮುಂದಿನ ಹೆಜ್ಜೆ ಎಲ್ಲಿ ಹಾಕಬೇಕೆಂದು ತಿಳಿಯುತ್ತದೆ. ದೇವರು ಈ ರೀತಿಯಾಗಿ ನಿಮ್ಮನ್ನು ನಡೆಸುತ್ತಾರೆ. ನಿಮಗೆ ಎದುರಾಗುವ ಬಾಗಿಲುಗಳು ಮುಚ್ಚಿರುವಂತೆ ತೋರಬಹುದು. ಆದರೆ ನೀವು ಅವುಗಳ ಹತ್ತಿರ ಹೋದಾಗ, ಅವು ತಾವಾಗಿಯೇ ತೆರೆಯುತ್ತವೆ. ಆದರೆ ನೀವು ಅವುಗಳ ಸಮೀಪ ಹೋಗುವ ವರೆಗೆ ಅವು ತೆರೆಯುವುದಿಲ್ಲ. ದೇವರು ಈ ರೀತಿಯಾಗಿ ನಿಮ್ಮನ್ನು ಮುಂದಕ್ಕೆ ನಡೆಸುತ್ತಾರೆ. ಹಾಗಾಗಿ ನಿಮ್ಮ ಮುಂದೆ ಒಂದು ಬಾಗಿಲು ಮುಚ್ಚಲ್ಪಟ್ಟಿದ್ದರೆ ಅನುಮಾನ ಅಥವಾ ಅಂಜಿಕೆಗೆ ಅವಕಾಶ ಕೊಡಬೇಡಿರಿ. ದೇವರು ನಿಮಗೆ ತೋರಿಸುವ ಹೆಜ್ಜೆಯನ್ನು ಹಾಕಿರಿ ಮತ್ತು ಮುಂದೆ ನಡೆಯಿರಿ. "ನಿನ್ನೆದುರಿನಲ್ಲಿ ಒಂದು ಬಾಗಿಲನ್ನು ತೆರೆದಿಟ್ಟಿದ್ದೇನೆ; ಯಾರೂ ಅದನ್ನು ಮುಚ್ಚಲಾರರು" (ಪ್ರಕ. 3:8).

ದೇವರು ನಿಮ್ಮ ದಾರಿಯನ್ನು ಹೆಚ್ಚು ಹೆಚ್ಚಾಗಿ ಬೆಳಕಿನಿಂದ ಪ್ರಕಾಶಿಸುವಂತೆ ಮಾಡುತ್ತಾರೆ, ಎಂದು ಜ್ಞಾನೋಕ್ತಿಗಳು 4:18ರಲ್ಲಿ ಹೇಳಲಾಗಿದೆ. ಇಲ್ಲಿ ಹೊಸದಾಗಿ ಹುಟ್ಟುವುದನ್ನು ಸೂರ್ಯೋದಯಕ್ಕೆ ಹೋಲಿಸಲಾಗಿದೆ ಮತ್ತು ಕ್ರಿಸ್ತನ ಪ್ರತ್ಯಕ್ಷತೆ ಅಥವಾ ಬರುವಿಕೆಯನ್ನು ಮಧ್ಯಾಹ್ನದ ಬೆಳಕಿಗೆ ಹೋಲಿಸಲಾಗಿದೆ. ನಿಮಗಾಗಿ ದೇವರ ಪರಿಪೂರ್ಣ ಚಿತ್ತವೇನೆಂದರೆ, ನೀವು ಹೊಸದಾಗಿ ಹುಟ್ಟಿದಾಗಿನಿಂದ ಕ್ರಿಸ್ತನ ಪ್ರತ್ಯಕ್ಷತೆಯ ವರೆಗೆ, ನಿಮ್ಮ ಜೀವಿತದಲ್ಲಿ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚಾಗಿ ಕ್ರಿಸ್ತನ ಸಾರೂಪ್ಯವನ್ನು ಹೊಂದುವುದಾಗಿದೆ. ಇದು ನೀತಿವಂತನ ಮಾರ್ಗವಾಗಿದೆ - ಮತ್ತು ಆ ಮಾರ್ಗದಲ್ಲಿ, ನೀವು ದೇವರ ವಾಕ್ಯದಿಂದ ಹೆಚ್ಚು ಹೆಚ್ಚಿನ ಪ್ರಕಟನೆಯನ್ನು ಮತ್ತು ನಿಮ್ಮ ಸ್ವಾರ್ಥತೆಯ ಮೇಲೆ ಹೆಚ್ಚು ಹೆಚ್ಚಿನ ಬೆಳಕನ್ನು ಹೊಂದುತ್ತೀರಿ, ಮತ್ತು ನೀವು ಎದುರಿಸುವ ವಾಸ್ತವಿಕ ಸನ್ನಿವೇಶಗಳನ್ನು ನಿಭಾಯಿಸಲು ನಿಮಗೆ ಹೆಚ್ಚು ಹೆಚ್ಚಿನ ಜ್ಞಾನ ದೊರಕುತ್ತದೆ. ನೀವು ಈ ಮಾರ್ಗದಲ್ಲಿ ನಡೆದರೆ, ಸೂರ್ಯನು ಆಕಾಶದಲ್ಲಿ ಎಂದಿಗೂ ಹಿಂದಕ್ಕೆ ಹೋಗದಿರುವ ಹಾಗೆ, ನೀವು ಎಂದಿಗೂ ಹಿಂದೆ ಸರಿಯುವುದಿಲ್ಲ.

ದೇವರು ನಮ್ಮನ್ನು ಕರೆದಿರುವುದು ಎಲ್ಲಕ್ಕಿಂತ ಮೊದಲು ಅವರನ್ನು ಆರಾಧಿಸುವುದಕ್ಕೆ - ಅಂದರೆ ನಮಗೆ ಅವರು ಮಾತ್ರ ಬೇಕೆಂದು ಬಯಸುವಂಥದ್ದು. ಹಾಗೆ ಮಾಡಿದಾಗ ಯೆಶಾಯನಿಗೆ ಕಾಣಿಸಿದ ದೇವರ ಪ್ರಭಾವ ನಿಮಗೂ ಸಹ ಕಾಣಿಸುತ್ತದೆ. ಯೆಶಾಯನು ಒಡನೆಯೇ ತನ್ನೊಳಗಿದ್ದ ಹೊಲಸು ಸ್ವಭಾವವನ್ನು ಸಹ ಕಂಡನು - ಹಾಗೆಯೇ ನಿಮಗೂ ಇದೇ ಅನುಭವ ಉಂಟಾಗುತ್ತದೆ (ಯೆಶಾ. 6:1-5). ಹಾಗಾಗಿ ಒಬ್ಬ ಆರಾಧಕನಾಗಿರಿ ಮತ್ತು ನಿಮ್ಮ ಜೀವನದಲ್ಲಿ ದೇವರು ನಿಮಗೆ ತೋರಿಸಿಕೊಡುವ ಕ್ರಿಸ್ತ-ಸ್ವಭಾವಕ್ಕೆ ವಿಭಿನ್ನವಾದ ಸಂಗತಿಗಳನ್ನು ಶುದ್ಧಗೊಳಿಸಿರಿ. ಆಗ ನೀವು ದೇವರ ಸ್ವಂತ ಸ್ವಭಾವದಲ್ಲಿ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚಾಗಿ ಪಾಲ್ಗೊಳ್ಳುವಂತೆ ಅವರು ಮಾಡುತ್ತಾರೆ. ನಾವು ದೇವರ ವಾಕ್ಯದಲ್ಲಿ ಯೇಸುವಿನ ಮಹಿಮೆಯನ್ನು ನೋಡುವಾಗ, ಪವಿತ್ರಾತ್ಮನು ನಮ್ಮನ್ನು ಬದಲಾಯಿಸಿ, ಅದೇ ಪ್ರಭಾವದ ಸಾರೂಪ್ಯದಲ್ಲಿ ನಾವು ಹಂತ ಹಂತವಾಗಿ ಬೆಳೆಯುವಂತೆ ಮಾಡುತ್ತಾನೆ (2 ಕೊರಿ. 3:18). ಬೇರೆ ಮಾತುಗಳಲ್ಲಿ ಹೇಳುವುದಾದರೆ, ನಾವು ಪವಿತ್ರಾತ್ಮನಿಗೆ ನಮ್ಮನ್ನು ಸಂಪೂರ್ಣವಾಗಿ ಒಪ್ಪಿಸಿಕೊಂಡರೆ, ನಮ್ಮ ಜೀವನದಲ್ಲಿ ಈ ದಿನ ಇರುವ ಪವಿತ್ರಾತ್ಮನ ಅಭಿಷೇಕವು ಕೆಲವು ವರ್ಷಗಳ ಹಿಂದೆ ಇದ್ದುದಕ್ಕಿಂತ ಹೆಚ್ಚಾಗಿರುತ್ತದೆ, ಮತ್ತು ಅದು 30 ವರ್ಷಗಳ ಹಿಂದಿನ ಅಭಿಷೇಕಕ್ಕಿಂತ ಬಹಳಷ್ಟು ಹೆಚ್ಚಾಗಿರುತ್ತದೆ.

ನಾವು ದಿನಾಲೂ ದೇವರ ಚಿತ್ತದಂತೆ ನಡೆಯ ಬೇಕಾದರೆ, ನಾವು ಪ್ರತಿದಿನ ದೇವರ ಮಾತನ್ನು ಆಲಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಯೇಸುವು ಮರಿಯಳನ್ನು ತೋರಿಸಿ ಹೇಳಿದ ಹಾಗೆ (ಲೂಕ. 10:42), ನಮಗೆ ಬೇರೆಲ್ಲವುಗಳಿಗಿಂತ ಹೆಚ್ಚಾಗಿ ಬೇಕಾಗಿರುವ ವಿಷಯ ಅವರ ವಾಕ್ಯವನ್ನು ಆಲಿಸುವುದಾಗಿದೆ. ಸತ್ಯವೇದದ ಶುರುವಿನಲ್ಲಿ ಮೊದಲನೇ ಅಧ್ಯಾಯದಲ್ಲಿ, ದೇವರು ಪ್ರತಿ ದಿನ ತನ್ನ ವಾಕ್ಯವನ್ನು ನುಡಿದರೆಂದು ನಾವು ಓದುತ್ತೇವೆ - ಮತ್ತು ಇದರ ಪರಿಣಾಮವಾಗಿ ಭೂಮಿಯು ಪ್ರತಿದಿನ ಸ್ವಲ್ಪ ಸ್ವಲ್ಪವಾಗಿ ಮಾರ್ಪಟ್ಟಿತು. ಈ ವರ್ಷ ನಾವು ಕ್ರಿಸ್ತನ ಸಾರೂಪ್ಯಕ್ಕೆ ಬದಲಾಗುವುದಕ್ಕೆ ನಮಗೆ ಅತಿ ಮುಖ್ಯವಾಗಿ ಬೇಕಾಗಿರುವದು ಏನೆಂದರೆ, ಪ್ರತಿ ದಿನ ದೇವರ ಮಾತನ್ನು ಕೇಳಿಸಿಕೊಳ್ಳುವುದು ಮತ್ತು ಅದಕ್ಕೆ ವಿಧೇಯರಾಗುವುದು. ಸತ್ಯವೇದವನ್ನು ಅರ್ಥ ಮಾಡಿಕೊಳ್ಳುವುದರ ರಹಸ್ಯ, ಮೊದಲನೆಯದಾಗಿ ಕರ್ತನೊಂದಿಗೆ ಒಂದು ಅನ್ಯೋನ್ಯ ಸಂಬಂಧವನ್ನು ಇರಿಸಿಕೊಳ್ಳುವುದಾಗಿದೆ. ದೇವರ ವಾಕ್ಯದಲ್ಲಿ ಪವಿತ್ರಾತ್ಮನ ಪ್ರೇರಣೆಯಿಂದ ಬರೆಯಲ್ಪಟ್ಟಿರುವ ಸಂಗತಿಗಳ ಅರ್ಥವನ್ನು ಪವಿತ್ರಾತ್ಮನು ವಿವರಿಸಬಲ್ಲನು. ಹಾಗಿರುವಾಗ ಆದಿ ಶಿಷ್ಯರು ಯೇಸುವಿನೊಂದಿಗೆ ನಡೆದ ಹಾಗೆ ನೀವು ನಡೆಯಿರಿ, ಮತ್ತು ಆತನ ಸಂಭಾಷಣೆಯನ್ನು ಕೇಳಿಸಿಕೊಳ್ಳಲು ಹಂಬಲಿಸಿರಿ. ಆಗ ಅವರ ಕಣ್ಣುಗಳು ತೆರೆದಂತೆ ನಿಮ್ಮ ಕಣ್ಣುಗಳು ತೆರೆಯುತ್ತವೆ ಮತ್ತು ಅವರ ಹೃದಯವು ದಗದಗಿಸಿ ಕುದಿದಂತೆ ನಿಮ್ಮ ಹೃದಯವು ಕುದಿಯುತ್ತದೆ.

ನಮ್ಮ ದೇಹದ ಅಂಗಾಂಗಗಳಲ್ಲಿ ನಾವು ಪ್ರತಿ ದಿನ ಅತಿ ಹೆಚ್ಚಾಗಿ ಬಳಸುವ ಅಂಗ ನಮ್ಮ ನಾಲಿಗೆಯಾಗಿದೆ. ಯೇಸುವು ಅವರ ನಾಲಿಗೆಯನ್ನು ಇತರರನ್ನು ಪ್ರೋತ್ಸಾಹಿಸುವುದಕ್ಕೆ ಬಳಸಿದರು, ಮತ್ತು ಅದು ಈ ರೀತಿಯಾಗಿ ದೇವರ ಕೈಯಲ್ಲಿ ಜೀವ ನೀಡುವ ಒಂದು ಸಾಧನವಾಯಿತು. ಅವರು ಬಳಲಿಹೋದ ಜನರಿಗೆ ಸಂತೈಸುವ ಮಾತುಗಳನ್ನು ಹೇಳಿ, ಅವರ ಭಾರವಾದ ಹೃದಯಗಳನ್ನು ಚೇತರಿಸಿದರು. ಯೆಶಾಯನು 50:4ರಲ್ಲಿ ಹೇಳಿರುವಂತೆ, ಯೇಸುವು ತನ್ನ ತಂದೆಯ ಧ್ವನಿಯನ್ನು ಪ್ರತಿ ದಿನ ಕೇಳುವಂತೆ ತನ್ನ ಕಿವಿಯನ್ನು ಜಾಗರೂಕಗೊಳಿಸಿದ್ದರಿಂದ, ತನ್ನನ್ನು ಭೇಟಿಯಾದ ಪ್ರತಿಯೊಬ್ಬ ಬಳಲಿದ ವ್ಯಕ್ತಿ ಸುಧಾರಿಸುವಂತೆ ಆತನಿಗೆ ಎಂತಹ ಮಾತನ್ನು ಆಡಬೇಕೆಂದು ಆತನು ಬಲ್ಲವನಾಗಿದ್ದನು. ನಾವು ಪ್ರತಿ ದಿನ ದೇವರ ಮಾತನ್ನು ಆಲಿಸುವ ಅಭ್ಯಾಸವನ್ನು ಬೆಳೆಸಿಕೊಂಡರೆ, ಆಗ ನಾವು ಸಹ ಪ್ರತಿ ದಿನ ನಮ್ಮ ಸುತ್ತಲಿರುವ ಬಳಲಿದ ಹೃದಯಗಳಿಗೆ ಇಂತಹ ಆಶೀರ್ವಾದ ತರುವಂತ ಸೇವೆಯನ್ನು ಮಾಡಬಹುದು. ನಾವು ನಮ್ಮ ಪ್ರತಿ ದಿನದ ಸಂಭಾಷಣೆಯಲ್ಲಿ ಉಪಯೋಗವಿಲ್ಲದ ಎಲ್ಲಾ ಮಾತುಗಳನ್ನು ತೆಗೆದುಹಾಕಿ, ಅಮೂಲ್ಯವಾದ ಮಾತುಗಳನ್ನು ಮಾತ್ರ ಬಳಸುವ ನಿರ್ಧಾರ ಮಾಡಿದರೆ, ಆಗ ದೇವರು ನಮಗೆ ಅವರ ವಾಣಿಯನ್ನು ಕೊಡುತ್ತಾರೆ ಮತ್ತು - ಅವರು ಯೆರೆಮೀಯನನ್ನು ಬಳಸಿಕೊಂಡಂತೆ - ನಮ್ಮನ್ನು ಅವರ ಬಾಯಿಯಂತೆ ಬಳಸಿಕೊಳ್ಳುತ್ತಾರೆ (ಯೆರೆ. 15:19).