ಯೇಸುವಿನ ಜೀವಿತವು ಪರಿಪೂರ್ಣ ವಿಶ್ರಾಂತಿಯಿಂದ ಕೂಡಿದ ಜೀವಿತವಾಗಿತ್ತು. ಅವರಿಗೆ ಪ್ರತಿದಿನದ 24 ಗಂಟೆಗಳಲ್ಲಿ ತನ್ನ ತಂದೆಯ ಚಿತ್ತವನ್ನು ಸಂಪೂರ್ಣವಾಗಿ ನೆರವೇರಿಸಲು ಸಾಕಷ್ಟು ಸಮಯವಿತ್ತು. ಆದರೆ ಅವರು ತನ್ನ ಮನಸ್ಸಿಗೆ ಇಷ್ಟವಾದದ್ದನ್ನು ಮಾಡಲು ನಿರ್ಧರಿಸಿದ್ದರೆ, ಆಗ ದಿನದ 24 ಗಂಟೆಗಳು ಅವರಿಗೆ ಸಾಕಾಗುತ್ತಿರಲಿಲ್ಲ ಮತ್ತು ಅವರು ಹೆಚ್ಚಿನ ದಿನಗಳನ್ನು ಅವಿಶ್ರಾಂತಿಯಿಂದ ಕಳೆಯಬೇಕಾಗುತ್ತಿತ್ತು.
ಯೆರೂಸಲೇಮಿನ ದೇವಾಲಯದ ಸುಂದರ ದ್ವಾರವೆಂಬ ಬಾಗಿಲಿನ ಹೊರಗೆ, ಹುಟ್ಟುಕುಂಟನಾಗಿದ್ದ ಒಬ್ಬ ಭಿಕ್ಷುಕನು ಭಿಕ್ಷೆ ಬೇಡುತ್ತಿರುವುದನ್ನು ಯೇಸುವು ಅನೇಕ ಸಲ ನೋಡಿದ್ದರು. ಆದರೆ ಅವರು ಅವನನ್ನು ಗುಣಪಡಿಸಲಿಲ್ಲ, ಏಕೆಂದರೆ ಹಾಗೆ ಮಾಡಲು ಅವರಿಗೆ ತಂದೆಯಿಂದ ಯಾವುದೇ ಮಾರ್ಗದರ್ಶನ ಇರಲಿಲ್ಲ. ಮುಂದೆ, ಯೇಸುವು ಪರಲೋಕಕ್ಕೆ ಏರಿದ ನಂತರ - ತಂದೆಯ ಪರಿಪೂರ್ಣ ಸಮಯದಲ್ಲಿ - ಪೇತ್ರ ಯೋಹಾನರು ಆ ಮನುಷ್ಯನಿಗೆ ಸ್ವಸ್ಥತೆಯನ್ನು ದೊರಕಿಸಿಕೊಟ್ಟರು ಮತ್ತು ಇದರ ಫಲವಾಗಿ ಅನೇಕ ಜನರು ಕರ್ತನ ಕಡೆಗೆ ತಿರುಗಿಕೊಂಡರು (ಅ.ಕೃ. 3:1-4:4). ಆ ಮನುಷ್ಯನನ್ನು ಗುಣಪಡಿಸಲು ತಂದೆಯಾದ ದೇವರಿಂದ ನೇಮಕವಾದ ಸಮಯವು ಆಗ ಪ್ರಾಪ್ತವಾಯಿತು, ಅದಕ್ಕಿಂತ ಮುಂಚಿತವಾಗಿ ಅಲ್ಲ. ಯೇಸುವು ಆ ಮನುಷ್ಯನನ್ನು ಮೊದಲೇ ಗುಣಪಡಿಸಿದ್ದರೆ ಅದು ತಂದೆಯ ಚಿತ್ತವನ್ನು ಅಡ್ಡಿ ಪಡಿಸಿದಂತಾಗುತ್ತಿತ್ತು. ತಂದೆಯು ನಿರ್ಧರಿಸಿದ ಸಮಯವು ಅತ್ಯುತ್ತಮವಾದದ್ದೆಂದು ಯೇಸುವಿಗೆ ತಿಳಿದಿತ್ತು, ಆದ್ದರಿಂದ ಅವರು ಯಾವುದೇ ಕಾರ್ಯವನ್ನು ಮಾಡುವುದಕ್ಕೆ ಆತುರ ಪಡುತ್ತಿರಲಿಲ್ಲ.
ಯೇಸುವು ತಾನು ಎದುರಿಸಿದ ಪ್ರತಿಯೊಂದು ಅಡಚಣೆಯ ನಡುವೆ ಸಂತೋಷಿಸಲು ಸಾಧ್ಯವಾಯಿತು, ಏಕೆಂದರೆ ಪರಲೋಕದಲ್ಲಿದ್ದ ತನ್ನ ಸರ್ವಶಕ್ತರಾದ ತಂದೆಯು ತನಗಾಗಿ ಪ್ರತಿದಿನದ ದಿನಚರಿಯನ್ನು ನಿಯೋಜಿಸುತ್ತಾರೆಂಬ ಸಂಗತಿಯನ್ನು ಅವರು ಒಪ್ಪಿಕೊಂಡಿದ್ದರು. ಹಾಗಾಗಿ ಅವರ ಮನಸ್ಸು ಎಂದಿಗೂ ಅಡೆತಡೆಗಳಿಂದ ಅಶಾಂತವಾಗಲಿಲ್ಲ. ನಮ್ಮ ಆಂತರ್ಯಗಳಿಗೂ ಸಹ ಯೇಸುವಿನ ಜೀವವು ಪರಿಪೂರ್ಣ ವಿಶ್ರಾಂತಿಯನ್ನು ತರುತ್ತದೆ. ಇದರ ಅರ್ಥ ನಾವು ಏನೂ ಮಾಡದೆ ಸುಮ್ಮನಿರುತ್ತೇವೆಂದಲ್ಲ, ಆದರೆ ತಂದೆಯು ನಮ್ಮ ಜೀವಿತಕ್ಕಾಗಿ ಏನನ್ನು ಯೋಜಿಸಿದ್ದಾರೋ ನಾವು ಅದನ್ನು ಮಾತ್ರ ಮಾಡುವೆವು. ಆಗ ನಾವು ನಮ್ಮದೇ ಆದ ಪೂರ್ವನಿರ್ಧಾರಿತ ಕಾರ್ಯಕ್ರಮವನ್ನು ಕೈಗೊಳ್ಳುವುದಕ್ಕಿಂತ ದೇವರ ಚಿತ್ತವನ್ನು ನೆರವೇರಿಸುವುದಕ್ಕೆ ಹೆಚ್ಚಾಗಿ ಉತ್ಸುಕರಾಗಿರುತ್ತೇವೆ.
ಆದಾಗ್ಯೂ, ಶರೀರಾಧೀನ ಸ್ವಭಾವದ ಕ್ರೈಸ್ತರು ತಮ್ಮ ಸ್ವೇಚ್ಛಾನುಸಾರವಾಗಿ ನಡೆಯಲು ಎಷ್ಟು ಉತ್ಸುಕರಾಗಿರುತ್ತಾರೆಂದರೆ, ಅವರು ಬಹಳ ಬೇಗನೆ ಕೋಪಿಸಿಕೊಳ್ಳುತ್ತಾರೆ ಮತ್ತು ತಾಳ್ಮೆಯನ್ನು ಕಳೆದುಕೊಳ್ಳುತ್ತಾರೆ. ಅಂತಿಮವಾಗಿ ಅವರಲ್ಲಿ ಕೆಲವರು ನರದೌರ್ಬಲ್ಯತೆಗೆ ಒಳಗಾಗುತ್ತಾರೆ, ಇಲ್ಲವೇ ದೈಹಿಕ ಆರೋಗ್ಯವನ್ನು ಕಳೆದುಕೊಳ್ಳುತ್ತಾರೆ. ಮಾರ್ಥಳು ಕರ್ತ ಯೇಸು ಮತ್ತು ಆತನ ಶಿಷ್ಯರಿಗೆ ಮಾಡಿದ ಸೇವೆಯಲ್ಲಿ ಯಾವುದೇ ಪಾಪವಿರಲಿಲ್ಲ. ಆದರೂ ಅವಳು ಬೇಸತ್ತಳು ಮತ್ತು ಮರಿಯಳ ಬಗ್ಗೆ ಅಸಮಾಧಾನಗೊಂಡಳು. ಇದು ಶರೀರಭಾವದ ಸೇವೆಯ ಒಂದು ಸ್ಪಷ್ಟ ಚಿತ್ರಣವಾಗಿದೆ. ಶರೀರಭಾವದ ಕ್ರೈಸ್ತ ವಿಶ್ವಾಸಿಯು ಬೇಗನೆ ಬೇಸರಗೊಳ್ಳುತ್ತಾನೆ ಮತ್ತು ಶೀಘ್ರವೇ ಸಿಟ್ಟಿಗೇಳುತ್ತಾನೆ. ಅವನು "ಸ್ವೇಚ್ಛೆಯಿಂದ ನಡೆಯುವುದನ್ನು" ನಿಲ್ಲಿಸಿಲ್ಲ ಮತ್ತು ದೇವರ ವಿಶ್ರಾಂತಿಯಲ್ಲಿ ಸೇರಿಲ್ಲ (ಇಬ್ರಿಯರಿಗೆ 4:10). ಅವನ ಉದ್ದೇಶಗಳು ಒಳ್ಳೆಯದೇ ಆಗಿರುತ್ತವೆ, ಆದರೆ ಆತನು ಮಾನಸಾಂತರ ಹೊಂದಿದ್ದರೂ, ತನ್ನ ಸ್ವಂತ ಕಾರ್ಯಗಳು ದೇವರ ದೃಷ್ಟಿಯಲ್ಲಿ "ಹೊಲೆಯ ಬಟ್ಟೆಗಳಂತೆ ಇವೆಯೆಂದು" ಅರಿತಿಲ್ಲ (ಯೆಶಾಯನು 64:6).
"ಕರ್ತನು ನಮ್ಮ ಕುರುಬನು; ಆತನು ತನ್ನ ಕುರಿಗಳನ್ನು ಹುಲ್ಲುಗಾವಲುಗಳಿಗೆ ನಡೆಸಿ ತಂಗಿಸುತ್ತಾನೆ"
ಮಾರ್ಥಳಂತೆ "ಸೇವೆ ಮಾಡುವವರು" ಎಷ್ಟೇ ಪ್ರಾಮಾಣಿಕರಾಗಿದ್ದರೂ, ಅವರ ಸೇವೆಯು ನಿಜವಾಗಿ ಕೇವಲ ಸ್ವಯಂಸೇವೆಯಾಗಿದೆ. ಅವರನ್ನು ದೇವರ ಸೇವಕರೆಂದು ಕರೆಯುವುದು ಸೂಕ್ತವಲ್ಲ, ಏಕೆಂದರೆ ಒಬ್ಬ ಸೇವಕನು ಸೇವೆ ಮಾಡುವದಕ್ಕೆ ಮೊದಲು ತನ್ನ ಯಜಮಾನನ ನಿರ್ದೇಶನಕ್ಕಾಗಿ ಕಾದಿರುತ್ತಾನೆ. ಯೇಸುವು ಎಂದಿಗೂ ನರದೌರ್ಬಲ್ಯತೆಗೆ ಅಥವಾ ಅಸ್ಥಿರತೆಗೆ ಒಳಗಾಗಲು ಸಾಧ್ಯವಿರಲಿಲ್ಲ, ಏಕೆಂದರೆ ಆತನು ತನ್ನ ಅಂತರಾಳದಲ್ಲಿ ಪರಿಪೂರ್ಣ ವಿಶ್ರಾಂತಿಯನ್ನು ಹೊಂದಿದ್ದನು. ಆತನು ನಮಗೆ ಹೀಗೆ ಹೇಳುತ್ತಾನೆ:
"ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಗುವುದು"(ಮತ್ತಾಯನು 11:29-30).
ಇದೇ ಯೇಸುವಿನ ಮಹಿಮೆಯಾಗಿದೆ; ಇದನ್ನು ದೇವರಾತ್ಮನು ದೇವರ ವಾಕ್ಯದಲ್ಲಿ ನಮಗೆ ತೋರಿಸುವುದಷ್ಟೇ ಅಲ್ಲದೆ, ಆ ಮಹಿಮೆಯನ್ನು ನಮಗೆ ಹಂಚುವುದಕ್ಕೆ ಮತ್ತು ನಮ್ಮ ಮೂಲಕ ಇತರರಿಗೆ ಅದನ್ನು ವ್ಯಕ್ತಪಡಿಸುವುದಕ್ಕೆ ಇಚ್ಛಿಸುತ್ತಾನೆ.
ಕರ್ತನು ನಮ್ಮ ಕುರುಬನು; ಆತನು ತನ್ನ ಕುರಿಗಳನ್ನು ಹುಲ್ಲುಗಾವಲುಗಳಿಗೆ ನಡೆಸಿ ಅಲ್ಲಿ ತಂಗಿಸುತ್ತಾನೆ. ಕುರಿಗಳು ತಾವಾಗಿಯೇ ತಮ್ಮ ಕಾರ್ಯಗಳನ್ನು ಯೋಜಿಸುವುದಿಲ್ಲ ಅಥವಾ ಮುಂದೆ ಯಾವ ಹುಲ್ಲುಗಾವಲಿಗೆ ಹೋಗಬೇಕೆಂದು ಅವುಗಳು ನಿರ್ಧರಿಸುವುದಿಲ್ಲ. ಅವು ಕೇವಲ ತಮ್ಮ ಕುರುಬನನ್ನು ಹಿಂಬಾಲಿಸುತ್ತವೆ. ಆದರೆ ಯಾರು ಈ ರೀತಿಯಾಗಿ ತಮ್ಮ ಕುರುಬನನ್ನು ಹಿಂಬಾಲಿಸಲು ಬಯಸುತ್ತಾರೋ ಅವರು ತಮ್ಮ ಸ್ವಂತ ಆತ್ಮವಿಶ್ವಾಸ ಹಾಗೂ ದುರಭಿಮಾನವನ್ನು ತ್ಯಜಿಸಬೇಕು. ಯೇಸುವು ತನ್ನನ್ನು ತಗ್ಗಿಸಿಕೊಂಡು ತನ್ನ ತಂದೆಯನ್ನು ಹಿಂಬಾಲಿಸಿದರು. ಆದರೆ ಶರೀರಾಧೀನ ಸ್ವಭಾವದ ಕ್ರೈಸ್ತರು ಕುರಿಗಳಂತೆ ನಡೆಯಲು ಬಯಸುವುದಿಲ್ಲ ಮತ್ತು ಹಾಗಾಗಿ ಅವರು ತಮ್ಮ ಬುದ್ಧಿಶಕ್ತಿಯನ್ನು ಆಧರಿಸಿಕೊಂಡು ನಡೆದು ದಾರಿ ತಪ್ಪುತ್ತಾರೆ. ನಮ್ಮ ಬುದ್ಧಿಶಕ್ತಿಯು ದೇವರು ನೀಡಿರುವ ಒಂದು ಅದ್ಭುತಕರ ಹಾಗೂ ಬಹಳ ಉಪಯುಕ್ತ ವರವಾಗಿದೆ. ಆದರೆ ಅದು ನಮ್ಮನ್ನು ಜೀವನದಲ್ಲಿ ಸರ್ವಾಧಿಕಾರಿಯ ಸ್ಥಾನಕ್ಕೆ ಏರಿಸಿದರೆ, ಆಗ ಅದು ಎಲ್ಲಾ ವರಗಳಿಗಿಂತಲೂ ಹೆಚ್ಚು ಅಪಾಯಕಾರಿಯಾಗಬಹುದು.
ಕರ್ತರು ತನ್ನ ಶಿಷ್ಯರಿಗೆ, "ತಂದೆಯೇ, ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವಂತೆ ಭೂಲೋಕದಲ್ಲೂ ನೆರವೇರಲಿ" ಎಂದು ಪ್ರಾರ್ಥಿಸಲು ಕಲಿಸಿದರು. ಪರಲೋಕದಲ್ಲಿ ದೇವರ ಚಿತ್ತವು ಹೇಗೆ ನೆರವೇರುತ್ತದೆ? ಅಲ್ಲಿ ದೇವದೂತರು ದೇವರಿಗೋಸ್ಕರ ಏನಾದರೂ ಮಾಡೋಣ ಎನ್ನುತ್ತಾ ಯದ್ವಾತದ್ವಾ ಓಡಾಡುವುದಿಲ್ಲ. ಹಾಗೆ ಮಾಡಿದರೆ ಸ್ವರ್ಗದಲ್ಲಿ ಗೊಂದಲ ಉಂಟಾಗುತ್ತದೆ. ಅವರು ಏನು ಮಾಡುತ್ತಾರೆ? ಅವರು ದೇವರ ಸನ್ನಿಧಿಯಲ್ಲಿ ಅವರ ಆಜ್ಞೆಯನ್ನು ಕೇಳಿಸಿಕೊಳ್ಳುವುದಕ್ಕಾಗಿ ಕಾಯುತ್ತಾರೆ ಮತ್ತು ಅದರ ನಂತರ ದೇವರು ತಮಗೆ ವೈಯಕ್ತಿಕವಾಗಿ ಏನು ಮಾಡಲು ಆಜ್ಞಾಪಿಸುತ್ತಾರೋ ನಿಖರವಾಗಿ ಅದನ್ನೇ ಮಾಡುತ್ತಾರೆ. ಗಬ್ರಿಯೇಲನೆಂಬ ದೇವದೂತನು ಜಕರೀಯನಿಗೆ ಹೇಳಿದ ಮಾತುಗಳನ್ನು ಗಮನಿಸಿರಿ, "ನಾನು ದೇವರ ಸನ್ನಿಧಿಯಲ್ಲಿ ನಿಲ್ಲುವ ಗಬ್ರಿಯೇಲನು; ಮತ್ತು ನಾನು ನಿನಗೆ ಈ ಮಾತನ್ನು ಹೇಳುವುದಕ್ಕಾಗಿ ಕಳುಹಿಸಲ್ಪಟ್ಟಿದ್ದೇನೆ" (ಲೂಕನು 1:19). ಯೇಸುವು ಕೂಡ ಇದೇ ನಿಲುವನ್ನು ಸ್ವೀಕರಿಸಿದರು - ತನ್ನ ತಂದೆಯ ಸನ್ನಿಧಿಯಲ್ಲಿ ಕಾಯುವುದು, ಅವರ ಧ್ವನಿಯನ್ನು ಕೇಳಿಸಿಕೊಳ್ಳುವುದು ಮತ್ತು ಅವರ ಚಿತ್ತಕ್ಕೆ ವಿಧೇಯರಾಗುವುದು.
ಶರೀರಾಧೀನ ಸ್ವಭಾವದ ಕ್ರೈಸ್ತರು ಬಹಳ ಶ್ರಮಿಸಿ ಕೆಲಸ ಮಾಡಬಹುದು ಮತ್ತು ಹೆಚ್ಚು ತ್ಯಾಗ ಮಾಡಬಹುದು, ಆದರೆ ನಾವು ನಿತ್ಯತ್ವದ ಸ್ಪಷ್ಟವಾದ ಬೆಳಕಿನಲ್ಲಿ ನೋಡುವಾಗ, "ಅವರು ರಾತ್ರಿಯಿಡೀ ಶ್ರಮಿಸಿದರು ಮತ್ತು ಏನನ್ನೂ ಹಿಡಿಯಲಿಲ್ಲ" ಎಂಬ ಸಂಗತಿಯು ಪ್ರಕಟವಾಗುತ್ತದೆ. ಆದರೆ ಪ್ರತಿದಿನ ತಮ್ಮ ಶಿಲುಬೆಯನ್ನು ಹೊತ್ತುಕೊಂಡು, ಕರ್ತನಿಗೆ ವಿಧೇಯರಾದ (ತಮ್ಮ ಶರೀರಾಧೀನ ಸ್ವಭಾವದ ಜೀವನವನ್ನು ನಿರಾಕರಿಸಿ, ಅದನ್ನು ಮರಣದಂಡನೆಗೆ ಒಳಪಡಿಸಿದವರು) ವಿಶ್ವಾಸಿಗಳ ಬಲೆಗಳಲ್ಲಿ ಆ ದಿನ ಮೀನುಗಳು ತುಂಬಿರುತ್ತವೆ (ಯೋಹಾನನು 21:1-6).
"ನಾನು ನನ್ನ ಶಿಷ್ಯನಿಗಾಗಿ ಯೋಜಿಸುವ ಕೆಲಸವನ್ನು ಮಾಡುವುದನ್ನು ಬಿಟ್ಟು ಬೇರೆ ಕಡೆಗೆ ತಿರುಗುವವನು ದೇವರ ರಾಜ್ಯಕ್ಕೆ ಯೋಗ್ಯನಲ್ಲ," ಎಂದು ಯೇಸುವು ಹೇಳಿದರು (ಲೂಕನು 9:62 - The Living Bible ಭಾವಾನುವಾದ).