WFTW Body: 

ನಾವು 1 ಸಮುವೇಲ 30 ನೇ ಅಧ್ಯಾಯದಲ್ಲಿ ಕೆಲವು ಕುತೂಹಲಕಾರಿ ವಿಷಯಗಳನ್ನು ಕಾಣುತ್ತೇವೆ. ದಾವೀದನು ಒಂದು ಕಷ್ಟಕರವಾದ ಸನ್ನಿವೇಶದಲ್ಲಿ ಸಿಲುಕಿದ್ದನು. ಅವನು ತನ್ನ ಜನರೊಂದಿಗೆ ಯುದ್ಧಕ್ಕೆ ತೆರಳಿದ್ದಾಗ ಅಮಾಲೇಕ್ಯರು ಬಂದು, ಆತನ ಜನರು ತಮ್ಮ ಕುಟುಂಬಗಳೊಂದಿಗೆ ವಾಸಿಸುತ್ತಿದ್ದ ಊರನ್ನು ನಾಶಗೊಳಿಸಿ, ಅವರ ಕುಟುಂಬಗಳನ್ನು ಸೆರೆಯಾಳುಗಳಾಗಿ ಹಿಡಕೊಂಡು ಹೋಗಿದ್ದರು. ಪರಿಸ್ಥಿತಿಯು ಎಷ್ಟು ಹದಗೆಟ್ಟಿತ್ತು ಎಂದರೆ, ಅವನ ಜೊತೆಗಾರರೆಲ್ಲರೂ ಅಳುವುದಕ್ಕೆ ಆರಂಭಿಸಿದರು ಮತ್ತು ತಮ್ಮ ತೊಂದರೆಗಳಿಗಾಗಿ ದಾವೀದನನ್ನು ದೂಷಿಸಲು ಶುರುಮಾಡಿದರು. ಎಂತಹ ಪರಿಸ್ಥಿತಿ ಉಂಟಾಯಿತು ಎಂದರೆ, ಅವರು ದಾವೀದನನ್ನು ಕಲ್ಲೆಸೆದು ಕೊಲ್ಲಲು ತಯಾರಿದ್ದರು (1 ಸಮು. 30:6). ಈ ಸಂದರ್ಭದಲ್ಲಿ ನಾವು ಈ ಸುಂದರವಾದ ವಚನವನ್ನು ಓದುತ್ತೇವೆ: "ಆದರೂ ಅವನು ತನ್ನ ದೇವರಾದ ಕರ್ತನಲ್ಲಿ ತನ್ನನ್ನು ಬಲಪಡಿಸಿಕೊಂಡನು" (1 ಸಮು. 30:6). ನಮ್ಮ ಸ್ನೇಹಿತರೇ ನಮ್ಮ ವಿರೋಧಿಗಳಾಗಿ ತಿರುಗಿದಾಗ, ನಾವು ಅನುಸರಿಸಬಹುದಾದ ಬಹಳ ಉತ್ತಮ ಉದಾಹರಣೆ ಇದಾಗಿದೆ.

ಆ ಮೇಲೆ ದಾವೀದನು ಏನು ಮಾಡಬೇಕೆಂದು ಕರ್ತನನ್ನು ಕೇಳಿಕೊಂಡಾಗ, ಕರ್ತನು ಅಮಾಲೇಕ್ಯರನ್ನು ಬೆನ್ನಟ್ಟಿ ಹೋಗುವಂತೆ ತಿಳಿಸಿ, ದಾವೀದನು ಎಲ್ಲರನ್ನೂ ಬಿಡಿಸಿಕೊಂಡು ವಾಪಾಸು ಪಡೆಯುವ ಭರವಸೆಯನ್ನು ನೀಡುತ್ತಾನೆ (1 ಸಮು. 30:8). ಆದರೆ ಅಮಾಲೇಕ್ಯರನ್ನು ಬೆನ್ನಟ್ಟಲು ಯಾವ ದಿಕ್ಕಿಗೆ ಹೋಗಬೇಕೆಂದು ದಾವೀದನಿಗೆ ತಿಳಿದಿರಲಿಲ್ಲ. ದೇವರು ಅವನನ್ನು ಅಮಾಲೇಕ್ಯರು ಇದ್ದಲ್ಲಿಗೆ ಹೇಗೆ ನಡೆಸುತ್ತಾರೆ ಎನ್ನುವದು ಒಂದು ಅದ್ಭುತಕರ ಸಂಗತಿಯಾಗಿದೆ. ದಾರಿಯಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯು ಸಾಯುವ ಸ್ಥಿತಿಯಲ್ಲಿ ಇದ್ದಾಗ, ಇವರು ಅವನಿಗೆ ಕರುಣೆ ತೋರಿಸಿದ ಒಂದು ಚಿಕ್ಕ ಘಟನೆಯ ಮೂಲಕ ಇದು ಸಾಧ್ಯವಾಯಿತು. ಅಲ್ಲಿ ಮರುಭೂಮಿಯಲ್ಲಿ ದಾವೀದ ಮತ್ತು ಅವನ ಜೊತೆಗಾರರು ಜ್ವರದಿಂದ ಮತ್ತು ಹಸಿವಿನಿಂದ ಬಳಲಿ ಸಾಯುವಂತಿದ್ದ ಒಬ್ಬ ಐಗುಪ್ತದ ಮನುಷ್ಯನನ್ನು ಕಂಡರು. ಅವರು ಅವನನ್ನು ನೋಡಿ ಕನಿಕರಪಟ್ಟು, ಅವನಿಗೆ ಆಹಾರವನ್ನೂ, ಕುಡಿಯಲು ನೀರನ್ನೂ ಕೊಟ್ಟರು. ಅವನು ಚೇತರಿಸಿಕೊಂಡಾಗ, ಅವನ ಅನಾರೋಗ್ಯದ ಕಾರಣಕ್ಕಾಗಿ ಅಮಾಲೇಕ್ಯರು ಅವನನ್ನು ಆ ಮರುಭೂಮಿಯಲ್ಲಿ ಬಿಟ್ಟು ಹೋಗಿದ್ದರೆಂದು ತಿಳಿದುಬಂತು (1 ಸಮು. 30:11-13). ಇದರ ನಂತರ, ಇದೇ ಮನುಷ್ಯನು ದಾವೀದನನ್ನು ಅಮಾಲೇಕ್ಯರು ಇದ್ದಲ್ಲಿಗೆ ಕರೆದುಕೊಂಡು ಹೋಗುತ್ತಾನೆ.

ನಾವು ಅಪರಿಚಿತರಿಗೆ ತೋರಿಸುವ ಕರುಣೆಗೆ ದೇವರು ಉತ್ತಮ ಪ್ರತಿಫಲವನ್ನು ನೀಡುತ್ತಾರೆಂದು ಈ ಘಟನೆಯು ನಮಗೆ ಕಲಿಸುತ್ತದೆ. ಈ ರೀತಿಯಾಗಿ ದಾವೀದನು ಅಮಾಲೇಕ್ಯರನ್ನು ಹುಡುಕಿ ಸೋಲಿಸಿದನು. ಆ ಮೇಲೆ "ದಾವೀದನು ಅಮಾಲೇಕ್ಯರು ಒಯ್ದಿದ್ದ ಎಲ್ಲವನ್ನೂ ಬಿಡಿಸಿಕೊಂಡನು" ಎಂಬುದಾಗಿ ಮೂರು ಸಲ ಹೇಳಲಾಗಿದೆ (1 ಸಮು. 30:18-20) - ಇದು ಸೈತಾನನು ನಮ್ಮಿಂದ ಕದ್ದುಕೊಂಡಿರುವ ಎಲ್ಲವನ್ನೂ ಯೇಸುವು ಹಿಂದೆ ಪಡೆಯುವುದರ ಒಂದು ಸುಂದರವಾದ ಚಿತ್ರಣವಾಗಿದೆ!

ದಾವೀದನು ಯುದ್ಧವನ್ನು ಮುಗಿಸಿ ಪಾಳೆಯಕ್ಕೆ ಹಿಂದಿರುಗಿದಾಗ, ದಾರಿಯಲ್ಲಿ ಅತಿ ಬಳಲಿಕೆಯ ಕಾರಣದಿಂದಾಗಿ ಹಿಂದೆ ಉಳಕೊಂಡಿದ್ದ ಅವನ 200 ಮಂದಿ ಜೊತೆಗಾರರು ಅವರನ್ನು ಎದುರುಗೊಳ್ಳಲು ಬಂದರು. ಇವರು ಹಿಂದೆ ಉಳಕೊಂಡು, ಅವರ ಸಾಮಾನನ್ನು ಕಾಯ್ದುಕೊಂಡಿದ್ದರು. ದಾವೀದನ ಜೊತೆಗಾರರಲ್ಲಿ ಕೆಲವು ದುಷ್ಟರೂ ಮೂರ್ಖರೂ ಆಗಿದ್ದವರು, ಈ 200 ಮಂದಿ ಯುದ್ಧಕ್ಕೆ ಬಾರದ್ದರಿಂದ, ಸಿಕ್ಕಿದ್ದ ಕೊಳ್ಳೆಯಲ್ಲಿ ಇವರಿಗೆ ಪಾಲು ಸಿಗಬಾರದೆಂದು ಹೇಳಿದರು. ಆದರೆ ಇಲ್ಲಿ ದಾವೀದನ ಹೃದಯ ವಿಶಾಲತೆ ನಮಗೆ ನೋಡಲಿಕ್ಕೆ ಸಿಗುತ್ತದೆ. ಅವನು "ಯುದ್ಧ ಮಾಡಿದವನಿಗೆ ಸಿಕ್ಕುವಷ್ಟು ಪಾಲು, ಸಾಮಾನು ಕಾಯ್ದವನಿಗೂ ಸಿಕ್ಕಬೇಕು," ಎಂದು ಹೇಳುತ್ತಾನೆ. ಅವನು ಇಸ್ರಾಯೇಲ್ಯರಲ್ಲಿ ಇದನ್ನು ಕಟ್ಟಳೆಯಾಗಿ ನೇಮಿಸಿದ್ದರಿಂದ, ಈ ದಿನದ ವರೆಗೂ ಅದು ನಡೆಯುತ್ತಾ ಬಂದಿದೆ.

ದಾವೀದನು ಈ ಎಲ್ಲಾ ಕಷ್ಟಗಳನ್ನೂ, ಶೋಧನೆಗಳನ್ನೂ (ಸುಮಾರು 13 ವರ್ಷಗಳ ಅವಧಿಯಲ್ಲಿ) ಎದುರಿಸುವುದರ ಮೂಲಕ, ಕೊನೆಗೆ ಒಬ್ಬ ದೇವರ ಮನುಷ್ಯನು ಎನಿಸಿಕೊಂಡನು ಮತ್ತು ಒಬ್ಬ ಯಶಸ್ವಿಯಾದ ರಾಜನಾದನು. ಹಲವಾರು ವರ್ಷಗಳ ನಂತರ, ಅವನು ಹೀಗೆ ಬರೆಯುತ್ತಾನೆ: "ದೇವರೇ, ನನ್ನನ್ನು ಶೋಧಿಸಿದಿ; ಬೆಳ್ಳಿಯನ್ನು ಪುಟಕ್ಕೆ ಹಾಕುವ ಮೇರೆಗೆ ಶುದ್ಧಮಾಡಿದಿ. ನನ್ನನ್ನು ಬಲೆಯಲ್ಲಿ ಸಿಕ್ಕಿಸಿದಿ; ನನ್ನ ಸೊಂಟಕ್ಕೆ ಭಾರವಾದ ಕೊರಡನ್ನು ಕಟ್ಟಿದಿ; ಮನುಷ್ಯರು ನನ್ನ ತಲೆಯ ಮೇಲೆಯೇ ತಮ್ಮ ರಥವನ್ನು ಹಾಯಿಸುವಂತೆ ಮಾಡಿದಿ. ನಾನು ಉರಿಯುವ ಬೆಂಕಿಯನ್ನೂ, ಹಿಮದಂತಹ ತಣ್ಣನೆ ನೀರನ್ನೂ ದಾಟಬೇಕಾಯಿತು. ಆದರೆ ಕೊನೆಗೆ ನನ್ನನ್ನು ಆತ್ಮಿಕ ಸಮೃದ್ಧಿ ಮತ್ತು ಪವಿತ್ರಾತನ ಅಭಿಷೇಕದ ಸುಕ್ಷೇಮಕ್ಕೆ ಪಾರು ಮಾಡಿದ್ದಿ; ಈಗ ನನ್ನ ಪಾತ್ರೆಯು ತುಂಬಿ ಹೊರಸೂಸಿ, ಅಸಂಖ್ಯಾತ ಜನರಿಗೆ ಅದು ಸೌಭಾಗ್ಯನಿಧಿಯಾಗಿದೆ. ದೇವರಿಗೆ ಸ್ತೋತ್ರವಾಗಲಿ" (ಕೀರ್ತನೆ 66:10-13 - ಭಾವಾನುವಾದ).