WFTW Body: 

ಇಬ್ರಿ. 3:7ರಲ್ಲಿ ದೇವರ ವಾಕ್ಯವು ನಮ್ಮನ್ನು ಈ ರೀತಿಯಾಗಿ ಎಚ್ಚರಿಸುತ್ತದೆ: "ನೀವು ಈ ಹೊತ್ತು ದೇವರ ಮಾತಿಗೆ ಕಿವಿಗೊಟ್ಟರೆ, ನಿಮ್ಮ ಹೃದಯಗಳನ್ನು ಕಠಿಣ ಮಾಡಿಕೊಳ್ಳಬೇಡಿರಿ". ಹಾಗೆಯೇ ಇಬ್ರಿ. 3:12 ರಲ್ಲಿ, "ನಿಮ್ಮೊಳಗೆ ಯಾವನಲ್ಲಿಯೂ ಅಪನಂಬಿಕೆಯುಳ್ಳ ಕೆಟ್ಟ ಹೃದಯವು ಇರಬಾರದು." ಇಲ್ಲಿ ಇಬ್ರಿಯ ಪತ್ರಿಕೆಯ ಬರಹಗಾರನು, ಪರಲೋಕ ಸ್ವಾಸ್ತ್ಯದ ಕರೆಗೆ ಓಗೊಟ್ಟಿರುವ ದೇವಜನರಾದ ತನ್ನ ಸಹೋದರರು, ಯೇಸುವು ಎಲ್ಲಾ ರೀತಿಯಲ್ಲಿ ತಮ್ಮಂತೆಯೇ ಮನುಷ್ಯನಾಗಿ ಈ ಲೋಕಕ್ಕೆ ಬಂದನು ಎಂಬ ಸತ್ಯಾಂಶವನ್ನು ನಂಬದಿರುವ ಅಪನಂಬಿಕೆಯ ಕೆಟ್ಟ ಹೃದಯವು ತಮ್ಮಲ್ಲಿ ಇರದಂತೆ ನೋಡಿಕೊಂಡು, ಭಯಭೀತಿಯಿಂದ ಇರಬೇಕೆಂದು ಎಚ್ಚರಿಸುತ್ತಿದ್ದಾನೆ. ನಿಮ್ಮ ಈಗಿನ ನಿಷ್ಪ್ರಯೋಜಕ ಜೀವಿತದ ಬಗ್ಗೆ ನಿಮ್ಮಲ್ಲಿ ಬೇಸರ ಉಂಟಾದಾಗ ಮಾತ್ರ, ಯೇಸುವು ನಿಮಗೆ ಜೀವಿಸುವ ರೀತಿಯನ್ನು ತೋರಿಸಲಿಕ್ಕಾಗಿ ನಿಮ್ಮಂತೆಯೇ ಮಾನವನಾಗಿ ಬಂದರು ಎಂಬ ಪ್ರಕಟನೆಯನ್ನು ದೇವರು ನಿಮಗೆ ನೀಡುತ್ತಾರೆ. ನಾನು ಒಂದು ಸಮಯದಲ್ಲಿ ಸಂಪೂರ್ಣ ಸೋತಿದ್ದ ಕ್ರೈಸ್ತನಾಗಿದ್ದೆ. ಆದರೆ ನಾನು ನನ್ನ ಸೋಲಿನ ಜೀವಿತವನ್ನು ಸಹಿಸಿಕೊಳ್ಳಲಾರದೆ ಬಳಲಿಹೋಗಿದ್ದೆ. ನಾನು ಹಗಲಿರುಳು ದೇವರ ಮುಂದೆ ಗೋಳಾಡುತ್ತಾ, ಹೀಗೆ ಪ್ರಾರ್ಥಿಸುತ್ತಿದ್ದೆ: "ಕರ್ತನೇ, ನನಗೆ ದಾರಿ ತೋರುತ್ತಿಲ್ಲ. ನಾನೊಬ್ಬ ಬೋಧಕನಾಗಿದ್ದರೂ, ನನ್ನ ಒಳಜೀವಿತದಲ್ಲಿ ಪಾಪವಿದೆ. ನನ್ನ ಆಲೋಚನೆಗಳಲ್ಲಿ, ನಾನು ಆಡುವ ಮಾತಿನಲ್ಲಿ ಮತ್ತು ನನ್ನ ಕುಟುಂಬ ಜೀವಿತದಲ್ಲಿ ನಾನು ಸೋತಿದ್ದೇನೆ. ನಾನು ಮರುಜನ್ಮ ಪಡೆದಿದ್ದೇನೆ ಮತ್ತು ನೀರಿನ ದೀಕ್ಷಾಸ್ನಾನ ಹೊಂದಿದ್ದೇನೆ. ಆದರೆ ನಾನು ಸೋತಿರುವೆನು. ನನಗೆ ಅರ್ಥವಾಗದ ಈ ಪರಿಸ್ಥಿತಿಯಲ್ಲಿ ನನಗೆ ದಾರಿ ತೋರಿಸಿ."

ಆಗ ಕರ್ತನು ನನಗೆ, ಕ್ರಿಸ್ತನು ಶರೀರಧಾರಿಯಾಗಿ ಬಂದನು ಮತ್ತು ಎಲ್ಲಾ ವಿಷಯಗಳಲ್ಲಿ ನನ್ನಂತೆಯೇ ಶೋಧನೆಗಳನ್ನು ಎದುರಿಸಿದನು, ಆದರೆ ಪಾಪವನ್ನು ಮಾತ್ರ ಮಾಡದೆ ಪರಿಶುದ್ಧನಾಗಿ ಜೀವಿಸಿದನು ಎಂಬ ದೈವಿಕ ಜೀವಿತದ ರಹಸ್ಯವನ್ನು ತೋರಿಸಿಕೊಟ್ಟನು: ನಾನು ಪೂರ್ಣ ಹೃದಯದಿಂದ ಇದನ್ನು ನಂಬಿದೆನು - ಮತ್ತು ಇದು ನನ್ನ ಜೀವಿತವನ್ನು ಬದಲಾಯಿಸಿತು. ಇಲ್ಲಿ ನಮಗೆ ಕೊಡಲಾಗಿರುವ ಎಚ್ಚರಿಕೆ ಏನೆಂದರೆ, ನಮ್ಮ ಹೃದಯದಲ್ಲಿ ಅಪನಂಬಿಕೆಯಿದ್ದರೆ, ನಾವು ದೇವರಿಂದ ಸಂಪೂರ್ಣವಾಗಿ ದೂರ ಸರಿಯಲೂ ಸಾಧ್ಯವಿದೆ (ಇಬ್ರಿ. 3:12).

ಆದರೆ ಮುಂದಿನ ವಚನದಲ್ಲಿ, ’ದೇವರಿಂದ ದೂರ ಸರಿಯುವುದಕ್ಕೆ’ ಬದಲಾಗಿ, ನಾವು ಮಾಡಬಹುದಾದ ಇನ್ನೊಂದು ಆಯ್ಕೆಯನ್ನು ನಮಗೆ ಸೂಚಿಸಲಾಗಿದೆ, "ಈ ಹೊತ್ತು ಎಂಬ ಕಾಲವು ಇರುವ ತನಕ, ಪ್ರತಿನಿತ್ಯವೂ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ, ಒಬ್ಬರನ್ನೊಬ್ಬರು ಎಚ್ಚರಿಸಿರಿ" (ಇಬ್ರಿ. 3:13). ನಾಳೆಯ ದಿನ ಏನಾಗುತ್ತದೆಯೆಂದು ನಮಗೆ ತಿಳಿದಿಲ್ಲ. ಹಾಗಾಗಿ ನಾವು ಈ ದಿನ ಏನನ್ನಾದರೂ ಮಾಡೋಣ. ಈ ದಿನ ನಾವು ಯಾರನ್ನಾದರೂ ಪ್ರೋತ್ಸಾಹಿಸೋಣ. ಈ ದಿನ ಯಾರನ್ನಾದರೂ ಎಚ್ಚರಿಸೋಣ. ಈ ವಚನಗಳ ಆಲೋಚನೆಗೆ ತಕ್ಕಂತೆ ನಾವು ಮಾಡಬೇಕಾದದ್ದು ಏನೆಂದರೆ, ಮಾನವ ಶರೀರಧಾರಿಯಾಗಿ ಯೇಸುವು ನಮ್ಮಂತೆಯೇ ಆಗಿದ್ದನ್ನು ಗಮನಿಸಿ ನೋಡುವಂತೆ ಅವರನ್ನು ಪ್ರೋತ್ಸಾಹಿಸುವುದಾಗಿದೆ.

ನಮಗೆ ಪ್ರತಿನಿತ್ಯ ಜೀವಿತಕ್ಕಾಗಿ ಕೊಡಲ್ಪಟ್ಟಿರುವ ಕರೆ ಏನೆಂದರೆ, ’ಯೇಸುವನ್ನು ಮಹಿಮೆ ಪಡಿಸುವುದಾಗಿದೆ’. ನಮ್ಮ ನಡತೆ ಮತ್ತು ನಾವು ಆಡುವ ನುಡಿಯು ಯಾವಾಗಲೂ ತೋರಿಸ ಬೇಕಾದದ್ದು ಏನೆಂದರೆ, "ಯೇಸುವನ್ನು ಯಾವಾಗಲೂ ದೃಷ್ಟಿಸಿ ನೋಡಿರಿ. ಆತನು ಎಂತಹ ಅದ್ಭುತ ರಕ್ಷಕನಾಗಿದ್ದಾನೆ! ಆತನು ನನ್ನ ಪಾಪಗಳನ್ನು ಕ್ಷಮಿಸಿದ್ದು ಮಾತ್ರವಲ್ಲದೆ, ನನ್ನ ಜೀವಿತವನ್ನೇ ಬದಲಾಯಿಸಿದನು. ಆತನು ನನ್ನ ಮನೆಯ ಜೀವಿತವನ್ನು ಬದಲಾಯಿಸಿದ್ದು ಅಷ್ಟೇ ಅಲ್ಲ, ನನ್ನಲ್ಲಿ ಪರಲೋಕದ ಸಂತೋಷವನ್ನು ತುಂಬಿಸಿ, ನಾನು ಯಾವಾಗಲೂ ಹರ್ಷಿಸುವಂತೆ ಮಾಡಿದ್ದಾನೆ. ಆತನು ಮರಣದ ಭಯವನ್ನು ನನ್ನಿಂದ ದೂರ ಸರಿಸಿದ್ದಾನೆ. ನೀವು ಸಹ ಯೇಸುವನ್ನು ಪರಿಗಣಿಸಿರಿ" ಎಂಬುದಾಗಿ. ನಮ್ಮ ಪ್ರತಿದಿನದ ಜೀವಿತವು ಇತರರಲ್ಲಿ ಒಂದು ಸವಾಲನ್ನು ಮತ್ತು ಪ್ರೋತ್ಸಾಹವನ್ನು ಉಂಟುಮಾಡಬೇಕು. ಜನರು ನಿಮ್ಮ ಮುಖವನ್ನು ನೋಡುವಾಗ, ಅವರಿಗೆ ಅಲ್ಲಿ ದೇವರ ಮಹಿಮೆಯ ಯಾವುದೋ ಒಂದು ಅಂಶ ಕಾಣಿಸಬೇಕು.

ದೇವರಿಂದ ದೂರ ಸರಿಯುವುದಕ್ಕೆ ಕೇವಲ 24 ಗಂಟೆಗಳು ಸಾಕಾಗುತ್ತವೆ ಎಂದು ಇಬ್ರಿ. 3:13 ನಮ್ಮನ್ನು ಎಚ್ಚರಿಸುತ್ತದೆ. ಈ ಕಾರಣಕ್ಕಾಗಿ ನಾವು ಪ್ರತಿನಿತ್ಯ ಒಬ್ಬರನ್ನೊಬ್ಬರು ಎಚ್ಚರಿಸಿ ಪ್ರೋತ್ಸಾಹಿಸುವುದು ಅತ್ಯವಶ್ಯವಾಗಿದೆ. ಕ್ರಿಸ್ತನ ದೇಹದಲ್ಲಿ ಒಬ್ಬರು ಇನ್ನೊಬ್ಬರ ಕುರಿತಾಗಿ ಕಾಳಜಿ ವಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕಾಯಿನನು, "ನನ್ನ ತಮ್ಮನನ್ನು ಕಾಯುವವನು ನಾನೋ?" ಎಂದು ಕೇಳಿದನು. ಆದರೆ ಕ್ರಿಸ್ತನ ದೇಹದಲ್ಲಿ ನಾವು ನಮ್ಮ ಅಣ್ಣ-ತಮ್ಮಂದಿರನ್ನು ಕಾಯುವವರು ಆಗಿದ್ದೇವೆ, ನಾವು ನಮ್ಮ ಅಕ್ಕ-ತಂಗಿಯರನ್ನು ಕಾಯುವವರು ಆಗಿದ್ದೇವೆ. ಒಬ್ಬನು ಜಾರಿ ಬೀಳುವುದನ್ನು ನೀವು ನೋಡುವಾಗ, ಅವನನ್ನು ಬಲಗೊಳಿಸಿರಿ. ನೀವು ಒಬ್ಬಳು ಬೀಳುವುದನ್ನು ಕಂಡರೆ, ಆಕೆಯನ್ನು ಮೇಲಕ್ಕೆ ಎತ್ತಿರಿ.

ನಿಮ್ಮನ್ನು ಪ್ರೋತ್ಸಾಹಿಸುವವರು ಅಥವಾ ನಿಮಗೆ ಬುದ್ಧಿ ಹೇಳುವವರು ಯಾರೂ ಇಲ್ಲವಾದರೆ, ನಿಮಗಾಗಿ ಪವಿತ್ರಾತ್ಮನು ಇದ್ದಾನೆ ಮತ್ತು ಸತ್ಯವೇದವು ಇದೆ. ಅಪೊಸ್ತಲನಾದ ಪೌಲನು ಅನೇಕ ಸಂದರ್ಭಗಳಲ್ಲಿ - ಸತ್ಯವೇದದಲ್ಲಿರುವ ತನ್ನ ವಚನಗಳ ಮೂಲಕ - ನನಗೆ ಖುದ್ದಾಗಿ ಬುದ್ಧಿ ಹೇಳಿದ್ದಾನೆ ಮತ್ತು ನನ್ನನ್ನು ಪ್ರೋತ್ಸಾಹಿಸಿದ್ದಾನೆ. ಹಾಗೆಯೇ ಪೇತ್ರ, ಯಾಕೋಬ ಮತ್ತು ಯೋಹಾನರು ಸಹ ನನಗೆ ಬುದ್ಧಿ ಹೇಳಿ, ನನ್ನನ್ನು ಪ್ರೋತ್ಸಾಹಿಸಿದ್ದಾರೆ. ಅನೇಕ ವೇಳೆ ನನ್ನನ್ನು ಹುರಿದುಂಬಿಸಿ ಪ್ರೋತ್ಸಾಹಿಸಲು ನನ್ನ ಬಳಿ ಇತರ ಸಹೋದರರು ಇಲ್ಲದಿದ್ದಾಗ, ಸತ್ಯವೇದದ ಹಾಳೆಗಳ ಮೂಲಕ ಈ ಅಪೊಸ್ತಲರು ನನ್ನ ಬಳಿಗೆ ಬಂದು, ನನ್ನನ್ನು ಹುರಿದುಂಬಿಸಿದ್ದಾರೆ. ನಮ್ಮೆಲ್ಲರಿಗೆ ಪ್ರತಿದಿನ ಪ್ರೋತ್ಸಾಹಕರ ಮಾತುಗಳನ್ನು ಹೇಳಲು, ಪೇತ್ರ, ಯಾಕೋಬ ಮತ್ತು ಯೋಹಾನರು ನಮ್ಮೊಂದಿಗೆ ನಮ್ಮ ಕೊಠಡಿಯಲ್ಲಿ ಇರಬಹುದು ಎನ್ನುವದು ಒಂದು ಅದ್ಭುತಕರ ಸಂಗತಿಯಲ್ಲವೇ? ನೀವು ಅವರಿಗೆ ನಿಮ್ಮನ್ನು ಪ್ರೋತ್ಸಾಹಿಸುವ ಅವಕಾಶವನ್ನು ಏಕೆ ನೀಡುತ್ತಿಲ್ಲ? ಅವರು ಸತ್ಯವೇದದ ಹಾಳೆಗಳ ನಡುವೆಯೇ ಉಳಿದಿರುವಂತೆ ನೀವು ಏಕೆ ತಡೆಯುತ್ತೀರಿ?

ಸತ್ಯವೇದದ ಕುರಿತಾಗಿ ತಿಳಿಸುವ ಇತರ ಅನೇಕ ಗ್ರಂಥಗಳಿಗಿಂತ ಹೆಚ್ಚಾಗಿ, ನೀವು ಖುದ್ದಾಗಿ ಸತ್ಯವೇದವನ್ನೇ ಓದುವುದು ಅವಶ್ಯವಾಗಿದೆ. ಪೇತ್ರ, ಪೌಲ ಮತ್ತು ಯೋಹಾನರು ಬರೆದ ಪತ್ರಿಕೆಗಳು ಏನು ಹೇಳುತ್ತವೆ ಎಂಬ ವಿಚಾರವಾಗಿ ಎಲ್ಲಾ ಶ್ರೇಷ್ಠ ಸತ್ಯವೇದ ಪಂಡಿತರು ಬರೆದಿರುವ ಟಿಪ್ಪಣಿಗಳನ್ನು ನಾನು ಓದಲು ಬಯಸುವುದಿಲ್ಲ. ನಾನು ನೇರವಾಗಿ ಅವರಿಂದಲೇ ಕೇಳಿಸಿಕೊಳ್ಳಲು ಉತ್ಸುಕನಾಗಿದ್ದೇನೆ. ಹಾಗಾಗಿ ನಾನು ಸತ್ಯವೇದವನ್ನೇ ಖುದ್ದಾಗಿ ಓದುತ್ತೇನೆ - ಸತ್ಯವೇದದ ಕುರಿತಾಗಿ ಬರೆಯಲ್ಪಟ್ಟ ಪುಸ್ತಕಗಳನ್ನಲ್ಲ.