WFTW Body: 

ನಾವು ಜೀವಿಸುತ್ತಿರುವ ದಿನಗಳು ಮಹಾ ವಂಚನೆಯ ದಿನಗಳಾಗಿವೆ ಮತ್ತು ಯೇಸುವು ನಮ್ಮನ್ನು ಎಚ್ಚರಿಸಿದ ಪ್ರಕಾರ, ಇದು ಜನರ ಪ್ರೀತಿಯು ತಣ್ಣಗಾಗಿ, ಒಬ್ಬರಿಗೊಬ್ಬರು (ಸಹೋದರನು ಸಹೋದರನನ್ನು ವಿರೋಧಿಸಿ) ದ್ರೋಹ ಬಗೆಯುವ ಕಾಲವಾಗಿದೆ. ಆದ್ದರಿಂದ ನಾವು ಎಲ್ಲರಿಗಾಗಿ ಪ್ರೀತಿಯನ್ನು ಉಳಿಸಿಕೊಳ್ಳುವುದು ಮಾತ್ರವಲ್ಲದೆ, ಜಾಣತನದಿಂದ ಪದೇ ಪದೇ ನಮ್ಮನ್ನು ಜಗಳಕ್ಕೆ ಮತ್ತು ವಾಗ್ವಾದಕ್ಕೆ ಎಳೆಯುವ ಜನರಿಂದ ದೂರವಿರಬೇಕು.

ಕ್ರೈಸ್ತರಾದ ನಾವು, ಎಂದಿಗೂ ಯಾರಿಗೂ ಕೇಡು ಬಗೆಯುವುದಿಲ್ಲ ಮತ್ತು ಎಂದಿಗೂ ಮನುಷ್ಯರೊಂದಿಗೆ ಹೋರಾಡುವುದಿಲ್ಲ. ಆದರೆ ನಾವು ತಪ್ಪಾದ ಬೋಧನೆಗಳನ್ನು ಬಹಿರಂಗಪಡಿಸುವುದನ್ನು ಮುಂದುವರೆಸುತ್ತೇವೆ.

ನಾವು"ಎಲ್ಲಾ ದೀನದರಿದ್ರರಿಗೆ ನ್ಯಾಯ ಒದಗಿಸುವುದಕ್ಕಾಗಿ ಹಾಗೂ ಬಡತನದಲ್ಲಿ ಮತ್ತು ಕೊರತೆಯಲ್ಲಿರುವ ಜನರ ಹಕ್ಕುಗಳನ್ನು ಕಾಪಾಡಲಿಕ್ಕಾಗಿ ನಮ್ಮ ಧ್ವನಿಯೆತ್ತಲು ಸಿದ್ಧರಾಗಿರಬೇಕು" (ಜ್ಞಾನೋಕ್ತಿಗಳು 31:8,9). ದೇವರು, ಎದುರು ಬೀಳುವಂತ ಸ್ವಭಾವವನ್ನು ಹೊಂದಿದ ಅಬ್ಷಾಲೋಮನ ಸಲಹೆಗಾರ ಅಹೀತೋಫೆಲನ ಆಲೋಚನೆಗಳನ್ನು ವ್ಯರ್ಥಗೊಳಿಸಿ ಅಬ್ಷಾಲೋಮನ ಶಿಬಿರದಲ್ಲಿ ಗೊಂದಲ ಉಂಟುಮಾಡಲಿ, ಎಂದು ದಾವೀದನು ಪ್ರಾರ್ಥಿಸಿದನು (2 ಸಮುವೇಲನು 15:31) ಮತ್ತು ದೇವರು ಆ ಪ್ರಾರ್ಥನೆಗೆ ಉತ್ತರಿಸಿದರು (2 ಸಮುವೇಲನು 17:23). ಆದಾಗ್ಯೂ, ಯೇಸುವು ತನ್ನನ್ನು ಹಿಂಸೆಪಡಿಸಿದವರನ್ನು ತಂದೆಯಾದ ದೇವರು ಕ್ಷಮಿಸಲಿ ಎಂದು ಪ್ರಾರ್ಥಿಸಿದರು. ಆದರೆ ಇತರರನ್ನು ನೋಯಿಸುವವರನ್ನು ಯೇಸುವು ನಿರ್ದಯವಾಗಿ ಖಂಡಿಸಿದರು (ಆತನು ಫರಿಸಾಯರನ್ನು ಹೇಗೆ ಖಂಡಿಸಿದನೆಂದು ಮತ್ತಾಯನು 23'ರಲ್ಲಿ ನೋಡಿರಿ).

ಈಗ ಬುದ್ಧಿವಂತೆಯರಾದ ಕನ್ಯೆಯರ ಸಾಮ್ಯದ ಕುರಿತು ಒಂದು ಮಾತು:

ನಾವು ಒಂದು ಸಾಮ್ಯದ ವ್ಯಾಖ್ಯಾನ, ಅಂದರೆ ಅದರ ಅರ್ಥ ವಿವರಣೆಯನ್ನು ಒಂದು ಸಲ ಕೇಳಿಸಿಕೊಂಡರೆ, ತಕ್ಷಣವೇ ಆ ಅರ್ಥ ವಿವರಣೆಯು ಅಚ್ಚು ಹಾಕಿದಂತೆ ನಮ್ಮ ಮನಸ್ಸುಗಳಲ್ಲಿ ಎಷ್ಟು ಗಟ್ಟಿಯಾಗಿ ಬರೆಯಲ್ಪಡುತ್ತದೆ ಎಂದರೆ, ಕರ್ತನು ನಮಗೆ ಅದೇ ಸಾಮ್ಯದ ಇನ್ನೊಂದು ವಿವರಣೆಯನ್ನು ಕೊಡಲು ಸಾಧ್ಯವಾಗುವುದೇ ಇಲ್ಲ. ಸ್ವಲ್ಪ ಸಮಯದ ಹಿಂದೆ, ನಾನು ಕರ್ತನ ಬಳಿ ಕೇಳಿದ್ದೇನೆಂದರೆ, ನಾನು ಈ ಸ್ಥಿತಿಯಿಂದ ಹೊರಬಂದು ಸಾಮ್ಯವನ್ನು ಅದರ ಸನ್ನಿವೇಶಕ್ಕೆ ಅನುಸಾರವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿ ಎಂಬುದಾಗಿ - ಯಾವಾಗಲೂ ಯಾವುದೇ ಸಾಮ್ಯದ ಅರ್ಥ ವಿವರಣೆ ಮಾಡುವ ಅತ್ಯುತ್ತಮ ವಿಧಾನ ಇದಾಗಿದೆ.

ಮತ್ತಾಯನು 24:12'ರಲ್ಲಿ ಯೇಸುವು ಹೇಳಿದ್ದೇನೆಂದರೆ, ಕೊನೆಯ ದಿನಗಳಲ್ಲಿ ಬಹುಜನರ ಪ್ರೀತಿಯು ತಣ್ಣಗಾಗಿ ಆರಿಹೋಗುವುದು; ಆದರೆ ಯಾರು ಕೊನೆಯ ವರೆಗೆ ತಾಳುತ್ತಾರೋ (ತಮ್ಮೊಳಗಿನ ಪ್ರೀತಿಯು ಕುಗ್ಗದಂತೆ) ಅವರು ರಕ್ಷಣೆ ಹೊಂದುವರು (ಅಥವಾ, ದೇವರ ಆಲಯವನ್ನು ಪ್ರವೇಶಿಸುವರು) (ಮತ್ತಾ. 24:13). ಇದರ ನಂತರ ಯೇಸುವು ಕನ್ಯೆಯರ ಕುರಿತಾದ ಸಾಮ್ಯವನ್ನು ಹೇಳಿದರು - ಐದು ಮಂದಿ ಕನ್ಯೆಯರ ದೀಪವು ಆರಿಹೋಯಿತು ಮತ್ತು ಇನ್ನು ಐದು ಮಂದಿ ಕನ್ಯೆಯರು ತಮ್ಮ ದೀಪವನ್ನು ಕೊನೆಯ ವರೆಗೂ ಕಾಪಾಡಿಕೊಂಡರು ಮತ್ತು ಮದುವೆಯ ಮನೆಯನ್ನು ಪ್ರವೇಶಿಸಿದರು (ಮತ್ತಾಯನು 25). ಹಾಗಾಗಿ ಯೇಸುವು "ಎಣ್ಣೆ"ಯೆಂದು ಹೇಳಿದ್ದು, ನಮಗೆ ಪವಿತ್ರಾತ್ಮನಿಂದ ಕೊಡಲ್ಪಡುವ ದೈವಿಕ ಪ್ರೀತಿಯ ಕುರಿತಾಗಿ ಇರಬೇಕು. ಹಾಗಾದರೆ, ಮದಲಿಂಗನು ಬರುವಾಗ ನಾವು ದೇವರ ಆಲಯವನ್ನು ಪ್ರವೇಶಿಸಬೇಕಾದರೆ, ನಾವು ದೈವಿಕ ಪ್ರೀತಿಯನ್ನು ಕೊನೆಯ ವರೆಗೂ ಉಳಿಸಿಕೊಳ್ಳಬೇಕು. ನಮ್ಮ ದೀಪವು ಕೊನೆಯ ವರೆಗೂ ಉರಿಯುತ್ತಿರುವಂತೆ "ಹೆಚ್ಚಿನ ಎಣ್ಣೆಯನ್ನು" ಇರಿಸಿಕೊಳ್ಳುವುದು ಎಂಬುದರ ಅರ್ಥ-ವಿವರಣೆ ಇದಾಗಿದೆ.

"ಪ್ರೀತಿಸುವುದಕ್ಕೆ ಯಾವುದೇ ಕಾರಣವಿಲ್ಲದಿದ್ದರೂ ಯೇಸುವು ಜನರನ್ನು ಪ್ರೀತಿಸಿದರು. ನಾವು ಅವರ ಮಾದರಿಯನ್ನು ಅನುಸರಿಸೋಣ ಮತ್ತು ಕೊನೆಯ ತನಕ ಪ್ರೀತಿಯಿಂದ ನಡೆಯೋಣ."

"ಅವರು ನನ್ನನ್ನು ಕಾರಣವಿಲ್ಲದೆ ದ್ವೇಷಿಸಿದರು" ಎಂದು ಯೇಸುವು ಹೇಳಿದರು (ಯೋಹಾ. 15:25). ಆದರೆ ಇದಕ್ಕೆ ಪ್ರತಿಯಾಗಿ, ಆತನು ಅವರನ್ನು ಯಾವುದೇ ಕಾರಣವಿಲ್ಲದೆ ಪ್ರೀತಿಸಿದನು. ನಾವು ಆತನ ಮಾದರಿಯನ್ನು ಅನುಸರಿಸೋಣ ಮತ್ತು ಕೊನೆಯ ತನಕ ಪ್ರೀತಿಯಿಂದ ನಡೆಯೋಣ. ಹೀಗೆ ಮಾಡದಿದ್ದರೆ "ಸ್ವಚಿತ್ತಕ್ಕೆ ಸಾಯುವುದು" ಒಂದು ಕೆಲಸಕ್ಕೆ ಬಾರದ ಸಿದ್ಧಾಂತವಾಗುತ್ತದೆ - ಇದರ ಬಗ್ಗೆ ಪ್ರಸಂಗಿಸುವ ಅನೇಕ ಬೋಧಕರಿಗೆ ಹಾಗೆಯೇ ಆಗಿದೆ. ನಾನು ನೋಡಿರುವ ಪ್ರಕಾರ ಅನೇಕ "ವಿಶ್ವಾಸಿಗಳು" ಶಿಲುಬೆಯ ದಾರಿಯಲ್ಲಿ ನಡೆಯುವುದರ ಬಗ್ಗೆ ಮಾತನಾಡುತ್ತಾರೆ, ಆದರೆ ಅವರಲ್ಲಿ ಪ್ರೀತಿಯು ಇಲ್ಲದಿರುವುದು ಮಾತ್ರವಲ್ಲ, ಸಾಮಾನ್ಯ ಮಾನವ ಸಭ್ಯತೆ ಮತ್ತು ಸೌಜನ್ಯವೂ ಸಹ ಅವರಲ್ಲಿ ಇಲ್ಲವಾಗಿದೆ. ಅವರು ತಮ್ಮ "ಶುದ್ಧ ಸಿದ್ಧಾಂತ"ದ ಬಗ್ಗೆ ಮಹಿಮೆಪಡುತ್ತಾರೆ, ಆದರೆ ಅವರ ಜೀವನವು ದುರ್ವಾಸನೆಯನ್ನು ಹೊಂದಿದೆ. ನಮ್ಮ ಸಿದ್ಧಾಂತವು ನಿಜವಾಗಿ ಶುದ್ಧವಾಗಿದ್ದರೆ, ಆಗ ನಮ್ಮ ಜೀವಿತದಿಂದ ಯೇಸುವಿನ ಪ್ರೀತಿಯ ಸುವಾಸನೆಯು ಸುತ್ತಲೂ ಹರಡುತ್ತದೆ.

19ನೇ ಶತಮಾನದ ಕ್ವೇಕರ್ ಎಂಬ ಸುವಾರ್ತಾ ಬೋಧಕರಾದ (ಮಿಷನರಿ) "ಸ್ಟೀವನ್ ಗ್ರೆಲ್ಲೇ" ಎಂಬವರು ಹೀಗೆ ಹೇಳಿದರು, "ನಾನು ಈ ಭೂಮಿಯ ಮೇಲೆ ಒಂದು ಸಲ ಮಾತ್ರ ಹಾದುಹೋಗುತ್ತೇನೆ. ಆದ್ದರಿಂದ ನಾನು ಮಾಡ ಬಹುದಾದ ಯಾವುದೇ ಒಳ್ಳೆಯ ಕೆಲಸವಾಗಲೀ, ಅಥವಾ ನಾನು ಯಾವುದೇ ಸಹ-ಜೀವಿಗೆ ತೋರಿಸುವಂತ ಯಾವುದೇ ದಯೆಯಾಗಲೀ, ನಾನು ಈಗಲೇ ಅದನ್ನು ಮಾಡಲು ಬಯಸುತ್ತೇನೆ. ನಾನು ಅದನ್ನು ಮುಂದಕ್ಕೆ ಹಾಕಬಾರದು ಅಥವಾ ನಿರ್ಲಕ್ಷಿಸಬಾರದು - ಏಕೆಂದರೆ ನಾನು ಇನ್ನೊಂದು ಸಲ ಈ ದಾರಿಯಲ್ಲಿ ಹೋಗುವುದಿಲ್ಲ." ಈ ಸಲಹೆಯನ್ನು ಪಾಲಿಸುವಂತೆ ನಾನು ನಿಮ್ಮನ್ನು ಪ್ರೋತ್ಸಾಹಿಸಲು ಇಷ್ಟಪಡುತ್ತೇನೆ.