WFTW Body: 

ಯೆಹೋ. 1:1-2ರಲ್ಲಿ ಹೀಗೆ ಬರೆಯಲಾಗಿದೆ, "ಕರ್ತನ ಸೇವಕನಾದ ಮೋಶೆಯು ಸತ್ತ ಮೇಲೆ, ಅವನ ಶಿಷ್ಯನಾದ ನೂನನ ಮಗ ಯೆಹೋಶುವನಿಗೆ ಕರ್ತನು, ’ನನ್ನ ಸೇವಕನಾದ ಮೋಶೆಯು ಸತ್ತನು; ನೀನು ಈಗ ಎದ್ದು, ಈ ಯೋರ್ದನ್ ಹೊಳೆಯನ್ನು ದಾಟಿ ಹೋಗು.’" ಮೋಶೆಯ ನಂತರ ಯೆಹೋಶುವನನ್ನು ಸ್ವತಃ ದೇವರೇ ನಾಯಕನಾಗಿ ನೇಮಿಸಿ, ಮೇಲಕ್ಕೆ ಏರಿಸಿದರು. ನಮ್ಮನ್ನು ಸ್ವತಃ ದೇವರೇ ನಾಯಕತ್ವದ ಪದವಿಗೆ ನೇಮಿಸದಿದ್ದರೆ, ನಾವು ಪರಿಣಾಮಕಾರಿಯಾಗಿ ನಾಯಕತ್ವವನ್ನು ಚಲಾಯಿಸಲು ಸಾಧ್ಯವಿಲ್ಲ. ಯೆಹೋಶುವನು ಕಾಲಿಡುವ ಸ್ಥಳವನ್ನೆಲ್ಲಾ ಅವನಿಗೆ ಕೊಡುವುದಾಗಿ (ಯೆಹೋ. 1:3) ಮತ್ತು ಅವನ ಜೀವಿತದ ಉದ್ದಕ್ಕೂ ಅವನ ಮುಂದೆ ಯಾರೂ ನಿಲ್ಲಲಾರರೆಂದು (ಯೆಹೋ. 1:5) ಕರ್ತನು ಯೆಹೋಶುವನಿಗೆ ಹೇಳಿದನು. ಇದು ರೋಮಾ. 6:14ರಲ್ಲಿ "ಪಾಪವು ನಿಮ್ಮ ಮೇಲೆ ಅಧಿಕಾರ ನಡಿಸದು, ಏಕೆಂದರೆ ನೀವು ಕೃಪೆಗೆ ಅಧೀನರಾಗಿದ್ದೀರಷ್ಟೆ," ಎಂಬುದಾಗಿ ನಮಗೆ ಕೊಡಲ್ಪಟ್ಟಿರುವ ಹೊಸ ಒಡಂಬಡಿಕೆಯ ವಾಗ್ದಾನವನ್ನು ಸಾಂಕೇತಿಕವಾಗಿ ತೋರಿಸುತ್ತದೆ.

ಹಿಂದೆ ಕಾನಾನ್ ದೇಶವು ಅನೇಕ ದೊಡ್ಡ ಗಾತ್ರದ ಜನರಿಂದ ಆಳಲ್ಪಟ್ಟಿತ್ತು. ಆದರೆ ಅವರೆಲ್ಲರೂ ಸೋಲನ್ನು ಅನುಭವಿಸಲಿದ್ದರು. ಯಾವುದೇ ಪಾಪ (ಅದು ಎಷ್ಟು ಪ್ರಭಾವಶಾಲಿಯಾಗಿದ್ದರೂ) ನಮ್ಮನ್ನು ಸೋಲಿಸಲಾರದು. ಇದು ನಮಗಾಗಿ ಇರುವ ದೇವರ ಚಿತ್ತವಾಗಿದೆ. ಆದರೆ ಯೆಹೋಶುವನು ಪ್ರತಿಯೊಂದು ಸ್ಥಳಕ್ಕೂ ಸ್ವತಃ ನಡೆದು ಹೋಗಿ, ಅದನ್ನು ಕರ್ತನ ಹೆಸರಿನಲ್ಲಿ ಸ್ವಾಧೀನ ಮಾಡಿಕೊಳ್ಳಬೇಕಿತ್ತು. ಹಾಗೆ ಮಾಡಿದಾಗ ಮಾತ್ರ ಅದು ಅವನ ವಶವಾಗುತ್ತಿತ್ತು. ನಮಗೂ ಹಾಗೆಯೇ ಆಗುತ್ತದೆ. ನಾವು ನಮ್ಮ ಬಾಧ್ಯತೆಯನ್ನು ನಮ್ಮ ಹಕ್ಕೆಂದು ನಂಬಿಕೆಯಿಂದ ಪಡೆಯಬೇಕು. ನಾವು ದೇವರ ವಾಗ್ದಾನಗಳನ್ನು ’ನಮಗೆ ಸಲ್ಲಬೇಕಾದವು’ ಎಂದು ವಶಪಡಿಸಿಕೊಳ್ಳದೇ ಹೋದರೆ, ನಮ್ಮ ಜೀವನದಲ್ಲಿ ಅವುಗಳು ಎಂದಿಗೂ ಕೈಗೂಡುವುದಿಲ್ಲ.

ಅಪೊಸ್ತಲ ಪೌಲನು ತನ್ನ ಸುವಾರ್ತೆಯ ಹಕ್ಕನ್ನು ಯೇಸುವಿನ ನಾಮದಲ್ಲಿ ಕೇಳಿ ಪಡೆದನು ಮತ್ತು ಇದರ ಫಲವಾಗಿ ಒಂದು ಭವ್ಯ ಜೀವನದ ಅನುಭವವನ್ನು ಪಡೆದನು. ಅವನು 2 ಕೊರಿ. 2:14ರಲ್ಲಿ ಹೀಗೆನ್ನುತ್ತಾನೆ, "ನಮ್ಮನ್ನು ಯಾವಾಗಲೂ ಜಯೋತ್ಸವದೊಡನೆ ಮೆರೆಸುವ ದೇವರಿಗೆ ಸ್ತೋತ್ರವು." "ಯಾವಾಗಲೂ ಜಯೋತ್ಸವ" ಎನ್ನುವದು ಪೌಲನ ಜಯಗೀತೆಯಾಗಿತ್ತು - ಮತ್ತು ಇದೇ ಜಯಗೀತೆ ನಮ್ಮದೂ ಆಗಬಹುದು. ಆದರೆ ಹೆಚ್ಚಿನ ಕ್ರೈಸ್ತರು ಈ ಜಯದ ಜೀವಿತವನ್ನು ಪ್ರವೇಶಿಸುವುದಿಲ್ಲ. 6,00,000 ಇಸ್ರಾಯೇಲ್ಯರು ಐಗುಪ್ತವನ್ನು ಬಿಟ್ಟು ಹೊರಟರು; ಆದರೆ ಅವರಲ್ಲಿ ಕೇವಲ ಇಬ್ಬರು - ಯೆಹೋಶುವನು ಮತ್ತು ಕಾಲೇಬನು - ಕಾನಾನ್ ದೇಶವನ್ನು ಪ್ರವೇಶಿಸಿದರು. ಇಂದು ಕ್ರೈಸ್ತರು ಸಹ ಹೆಚ್ಚು ಕಡಿಮೆ ಅದೇ ಪ್ರಮಾಣದಲ್ಲಿ (6 ಲಕ್ಷ ಜನರಲ್ಲಿ ಇಬ್ಬರು) ಜಯದ ಜೀವಿತವನ್ನು ಪ್ರವೇಶಿಸುತ್ತಾರೆ.

ಯೆಹೋಶುವ ಮತ್ತು ಕಾಲೇಬರು ವಾಗ್ದಾನ ಮಾಡಲ್ಪಟ್ಟ ದೇಶಕ್ಕೆ ಕಾಲಿರಿಸಲು ಕಾರಣ ಅವರಲ್ಲಿದ್ದ ಮನೋಭಾವ: "ದೇವರು ನಮಗೆ ಈ ದೇಶವನ್ನು ಸ್ವಾಧೀನ ಪಡಿಸಿಕೊಳ್ಳುವಂತೆ ಆದೇಶಿಸಿದ್ದಾರೆ, ಹಾಗಾಗಿ ನಾವು ಹಾಗೆ ಮಾಡಲು ಸಾಧ್ಯವಾಗುತ್ತದೆ". ಇದೇ ನಂಬಿಕೆಯಾಗಿದೆ. ನಂಬಿಕೆಯು ಕೇವಲ ದೇವರ ವಾಗ್ದಾನವನ್ನು ನೋಡುತ್ತದೆ ಮತ್ತು ನಮ್ಮೆದುರಿನ ಕಷ್ಟ-ಸಂಕಟಗಳನ್ನು ಎಂದಿಗೂ ನೋಡುವುದಿಲ್ಲ. ಮಿಕ್ಕಿದ ಇಸ್ರಾಯೇಲ್ಯರು ಹೇಳಿದ್ದು ಏನೆಂದರೆ, "ಇದು ಅಸಾಧ್ಯವಾದ ಕಾರ್ಯ. ಆ ದೈತ್ಯರು ದೊಡ್ಡ ಗಾತ್ರದವರು ಮತ್ತು ಬಲಶಾಲಿಗಳೂ ಆಗಿದ್ದಾರೆ." ಈ ದಿನವೂ ಕ್ರೈಸ್ತರು ಭಾವಿಸುವುದೇನೆಂದರೆ, ಆಮಿಷಗಳಾದ ಕೋಪ ಮತ್ತು ಕಣ್ಣಿನ ಕಾಮುಕತೆಯನ್ನು ಜಯಿಸುವುದು ಅಸಾಧ್ಯವಾಗಿದೆ, ಏಕೆಂದರೆ ಆ ಆಮಿಷಗಳು ಬಹಳ ಪ್ರಬಲವಾದವುಗಳು ಮತ್ತು ಅವು ಹಲವಾರು ವರ್ಷಗಳಿಂದ ಅವರ ಮೇಲೆ ಹಿಡಿತ ಇರಿಸಿವೆ. ಇಂತಹ ವಿಶ್ವಾಸಿಗಳು ತಮ್ಮ ಇಡೀ ಜೀವಿತವನ್ನು ಸೋಲಿನಲ್ಲೇ ಕಳೆಯುತ್ತಾರೆ ಮತ್ತು (ಆತ್ಮಿಕ ದೃಷ್ಟಿಯಿಂದ ಹೇಳುವುದಾದರೆ) ಅರಣ್ಯದಲ್ಲಿ ಸಾಯುತ್ತಾರೆ.

ಕರ್ತನು ಯೆಹೋಶುವನಿಗೆ ಕೊಟ್ಟ ವಾಗ್ದಾನ, "ನಾನು ನಿನ್ನ ಸಂಗಡ ಇರುವೆನು," ಎಂಬುದಾಗಿತ್ತು. ಹಾಗಾಗಿ ಯಾರೂ ಯೆಹೋಶುವನ ಮುಂದೆ ನಿಲ್ಲಲು ಆಗಲಿಲ್ಲ. ನಾವು ಪಾಪದ ಮೇಲೆ ಜಯ ಗಳಿಸುವುದು ಕೆಲವು ಆತ್ಮಿಕ ತತ್ವ-ಸಿದ್ಧಾಂತಗಳನ್ನು ನಂಬುವುದರ ಮೂಲಕವೋ ಅಥವಾ ಯಾವುದೋ ವಿಶಿಷ್ಟ ದೈವಿಕ ಅನುಭವದ ಮೂಲಕವೋ ಅಲ್ಲ. ಹಾಗೆ ಆಗುವುದಿಲ್ಲ. ನಾವು ಪಾಪದ ಮೇಲೆ ಜಯಗಳಿಸಲು ಸಾಧ್ಯವಾಗುವದು, ಕರ್ತನು ಪವಿತ್ರಾತ್ಮನ ಮೂಲಕ ನಿರಂತರವಾಗಿ ನಮ್ಮ ಜೊತೆಯಲ್ಲಿದ್ದಾಗ ಮಾತ್ರ. ಇಂದು ಕ್ರೈಸ್ತ ಪ್ರಪಂಚದಲ್ಲಿ ಯಾರ ಹೃದಯಗಳು ಪರಿಶುದ್ಧವಾಗಿವೆಯೋ, ಅಂಥವರನ್ನು ನಾಯಕರಾಗಿ ಬೆಂಬಲಿಸಿ ಬಲಪಡಿಸಲಿಕ್ಕಾಗಿ ದೇವರು ಕಾಯುತ್ತಿದ್ದಾರೆ.

ಕರ್ತನು ಯೆಹೋಶುವನಿಗೆ ಹೀಗೆಂದನು: "ನೀನು ಸ್ಥಿರಚಿತ್ತದಿಂದಿರು, ಧೈರ್ಯದಿಂದಿರು. ನೀನು ಈ ಜನರನ್ನು ಎಷ್ಟೋ ವರ್ಷಗಳಿಂದ ತಮ್ಮ ವೈರಿಗಳಿಂದ ಆಳಲ್ಪಡುತ್ತಿರುವ ಈ ದೇಶವನ್ನು ಸ್ವಾಧೀನ ಪಡಿಸುವಂತೆ ನಡೆಸುವೆ" (ಯೆಹೋ. 1:6). ನಾವು ಯಾವ ಪಾಪದಿಂದಲೂ ಭಯಭೀತರಾಗಬಾರದು. ದೇವಜನರು ಶರೀರದಲ್ಲಿನ ಪಾಪಗಳನ್ನು ಜಯಿಸುವಂತೆ ನಾವು ಅವರಿಗೆ ಸಹಾಯ ಮಾಡಬೇಕು. ಏಕೆಂದರೆ, ಹಲವಾರು ವರ್ಷಗಳಿಂದ ಅವರ ಶರೀರಗಳು ಪಾಪದಿಂದ ಆಳಲ್ಪಟ್ಟಿವೆ. ಅವರನ್ನು ಕೇವಲ ನಂಬಿಕೆಗೆ ಮತ್ತು ಎರಡು ದೀಕ್ಷಾಸ್ನಾನಗಳಿಗೆ ನಡೆಸಿದರೆ ಸಾಲದು - ಮನೆಯ ಬಾಗಿಲಿನ ನಿಲುವುಕಂಬಕ್ಕೆ ಕುರಿಯ ರಕ್ತವನ್ನು ಹಚ್ಚುವುದು, ಕೆಂಪು ಸಮುದ್ರವನ್ನು ದಾಟುವುದು ಮತ್ತು ಮೇಘಸ್ತಂಭದಿಂದ ಆವರಿಸಲ್ಪಡುವುದು - ಇಷ್ಟು ಮಾತ್ರ ಸಾಕಾಗುವುದಿಲ್ಲ. ಅದು ಕೇವಲ ಆರಂಭವಾಗಿದೆ. ಅದು ಶಿಶುವಿಹಾರ ಶಾಲೆಯ ಮೊದಲ ಪಾಠವಾಗಿದೆ, ಅಷ್ಟೇ. ನಮ್ಮ ಮಕ್ಕಳು ಶಿಶುವಿಹಾರ ತರಗತಿಯಲ್ಲಿ ಉತ್ತೀರ್ಣರಾದಾಗ ನಾವು ಅವರ ವಿದ್ಯಾಭ್ಯಾಸವನ್ನು ನಿಲ್ಲಿಸುತ್ತೇವೋ? ಇಲ್ಲ. ಆದರೆ ಇಂದಿನ ಕ್ರೈಸ್ತ ಪ್ರಪಂಚದಲ್ಲಿ ಇದೇ ನಡೆಯುತ್ತಿದೆ.

ಮೇಘಸ್ತಂಭವು - ಅಂದರೆ, ಪವಿತ್ರಾತ್ಮನ ದೀಕ್ಷಾಸ್ನಾನವು - ಇಸ್ರಾಯೇಲ್ಯರನ್ನು ವಾಗ್ದಾನ ಮಾಡಿದ ದೇಶಕ್ಕೆ ನಡೆಸುವುದಕ್ಕಾಗಿ ಬಂತು. ಎರಡು ವರ್ಷದಲ್ಲಿ ಆ ದೇಶಕ್ಕೆ ಸೇರಬೇಕಾಗಿದ್ದವರು, 40 ವರ್ಷಗಳ ವರೆಗೆ ಸೇರಲಿಲ್ಲ, ಏಕೆಂದರೆ ಅವರ ನಾಯಕರಲ್ಲಿ ನಂಬಿಕೆ ಇರಲಿಲ್ಲ. "ಸಾರಿದ ವಾರ್ತೆಯು ನಂಬಿಕೆಗೆ ಆಧಾರವಾಗಿದೆ" (ರೋಮಾ. 10:17). ಸಭಾಕೂಟಗಳಲ್ಲಿ ಈ ಸತ್ಯಾಂಶಗಳನ್ನು ಬೋಧಿಸದಿದ್ದಾಗ, ಅವರಲ್ಲಿ ನಂಬಿಕೆ ಹೇಗೆ ಉಂಟಾಗುತ್ತದೆ? ಆಗ ಅವರು ಪಾಪದ ಮೇಲೆ ಜಯವನ್ನು ಹೇಗೆ ಗಳಿಸುತ್ತಾರೆ?

ಕರ್ತನು ಯೆಹೋಶುವನಿಗೆ, "ನಿನಗೆ ಬೋಧಿಸಿದ ಧರ್ಮೋಪದೇಶವನ್ನೆಲ್ಲ ಕೈಕೊಂಡು ನಡೆಯುವುದರಲ್ಲಿ ಸ್ಥಿರಚಿತ್ತನಾಗಿರು, ಪೂರ್ಣ ಧೈರ್ಯದಿಂದಿರು. ಅದನ್ನು ಬಿಟ್ಟು ಎಡಕ್ಕಾದರೂ ಬಲಕ್ಕಾದರೂ ಹೋಗಬೇಡ," ಎಂದು ಹೇಳಿದನು (ಯೆಹೋ. 1:7). ದೇವರ ವಚನವು "ಪಾಪವು ನಿನ್ನ ಮೇಲೆ ಅಧಿಕಾರ ನಡೆಸದು" ಎಂದು ಹೇಳುವಾಗ (ರೋಮಾ. 6:14), ಆ ವಾಕ್ಯವನ್ನು ನಂಬು ಮತ್ತು ಇತರರ ಮುಂದೆ ಅದನ್ನು ಅರಿಕೆ ಮಾಡು. ಎಡಕ್ಕೂ ಬಲಕ್ಕೂ ತಿರುಗಬೇಡ. ಹಾಗೆಂದರೆ, ಆ ವಾಗ್ದಾನದ ವ್ಯಾಪ್ತಿಯನ್ನು ಸೀಮಿತಗೊಳಿಸಬೇಡ. ಅದು ಕೇವಲ ಕೆಲವು ಪಾಪಗಳಿಗೆ ಅನ್ವಯಿಸುವಂತೆ ಅದನ್ನು ತಗ್ಗಿಸಬೇಡ. ಅದೇ ವೇಳೆ, ಅಲ್ಲಿ ಹೇಳಿರುವದಕ್ಕೂ ಹೆಚ್ಚಾಗಿ ಅದರ ಅರ್ಥವನ್ನು ವಿಸ್ತರಿಸಬೇಡ. ಭೂಲೋಕದಲ್ಲಿ ನಾವು ಜೀವಿಸುವಾಗ, ಕ್ರಿಸ್ತನಂತೆ ನಾವೂ ಪರಿಪೂರ್ಣರು ಆಗಬಹುದೆಂದು ಹೇಳಬೇಡ.

ನಾವು ಭೂಲೋಕದಲ್ಲಿ ದೋಷವಿಲ್ಲದ ಪರಿಪೂರ್ಣರು ಆಗುವುದಿಲ್ಲ. ಆ ವಾಗ್ದಾನವು ಹಾಗೆ ಹೇಳಿಲ್ಲ. ಆ ವಚನವು ಕೇವಲ ನಮಗೆ ಅರಿವಾದ ಪಾಪದ ಮೇಲೆ ಜಯ ಗಳಿಸುವ ವಿಷಯವನ್ನು ಉಲ್ಲೇಖಿಸುತ್ತದೆ (ಬುದ್ಧಿಪೂರ್ವಕ ಪಾಪ). ನಾವು ಕ್ರಿಸ್ತನನ್ನು ಸಂಪೂರ್ಣವಾಗಿ ಹೋಲುವುದು ಆತನು ಪ್ರತ್ಯಕ್ಷನಾದಾಗ ಮಾತ್ರ. ಈ ವಿಷಯವನ್ನು 1 ಯೋಹಾ. 3:2ರಲ್ಲಿ ಬಹಳ ಸ್ಪಷ್ಟವಾಗಿ ತೋರಿಸಲಾಗಿದೆ. ಹಾಗಾಗಿ ನಾವು ದೇವರ ವಾಕ್ಯವನ್ನು ಮೀರುವುದು ಬೇಡ, ಅದಲ್ಲದೆ ನಾವು ದೇವರ ವಾಕ್ಯದ ವಾಗ್ದಾನವನ್ನು ಮೊಟಕುಗೊಳಿಸಿ ನಂಬುವುದು ಸಹ ಸರಿಯಲ್ಲ.