ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಯೌವನಸ್ಥರಿಗೆ ಸಭೆ Struggling
WFTW Body: 

ಸತ್ಯವೇದದ ಪತ್ರಿಕೆಗಳಲ್ಲಿನ ಕಟ್ಟಕಡೆಯ ವಾಗ್ದಾನಗಳಲ್ಲಿ ಒಂದು ವಾಗ್ದಾನ ಯಾವುದೆಂದರೆ, ಕರ್ತನಾದ ಯೇಸುವು "ನಿಮ್ಮನ್ನು ಎಡವಿಬೀಳದಂತೆ ಕಾಪಾಡಲು ಶಕ್ತನಾಗಿದ್ದಾನೆ" (ಯೂದ. 24) ಎಂಬುದು. ಇದು ಸತ್ಯವಾದ ಮಾತು - ಕರ್ತನು ನಿಶ್ಚಯವಾಗಿಯೂ ನಾವು ಬಿದ್ದುಹೋಗದಂತೆ ನಮ್ಮನ್ನು ಕಾಪಾಡಲು ಸಮರ್ಥನು. ಆದರೆ ನಾವು ನಮ್ಮ ಚಿತ್ತವನ್ನು ಸಂಪೂರ್ಣವಾಗಿ ಆತನಿಗೆ ಒಪ್ಪಿಸಿ ಕೊಡದಿದ್ದಲ್ಲಿ, ಆತನು ನಮ್ಮನ್ನು ಬೀಳದಂತೆ ತಡೆಯಲಾರನು - ಏಕೆಂದರೆ ಆತನು ತನ್ನ ಚಿತ್ತವನ್ನು ಪಾಲಿಸುವಂತೆ ಯಾರನ್ನೂ ಎಂದಿಗೂ ಬಲಾತ್ಕಾರದಿಂದ ಒತ್ತಾಯಿಸುವುದಿಲ್ಲ.

ವಿಶ್ವಾಸಿಗಳಾದ ನಾವು ಕ್ರಿಸ್ತನೊಂದಿಗೆ ಹೊಂದಿರುವ ಸಂಬಂಧವನ್ನು, ನಿಶ್ಚಿತಾರ್ಥವಾಗಿ ವಿವಾಹದ ದಿನವನ್ನು ಎದುರು ನೋಡುತ್ತಿರುವ ಒಬ್ಬ ಕನ್ಯೆ ತನ್ನ ವರನೊಂದಿಗೆ ಇರಿಸಿಕೊಳ್ಳುವ ಸಂಬಂಧಕ್ಕೆ ಹೋಲಿಸಲಾಗಿದೆ (2 ಕೊರಿ. 11:2, ಪ್ರಕಟನೆ 19:7). ಇಲ್ಲಿ ಅಪೊಸ್ತಲ ಪೌಲನು ಆತಂಕ ವ್ಯಕ್ತಪಡಿಸಿರುವಂತೆ (2 ಕೊರಿ. 11:3), ’ಹವ್ವಳನ್ನು ಸೈತಾನನು ವಂಚಿಸಿದ ಹಾಗೆ ನಮ್ಮನ್ನೂ ಸಹ ವಂಚಿಸಿ ತಪ್ಪು ದಾರಿಗೆ ನಡೆಸಿ, ನಾವು ಕ್ರಿಸ್ತನನ್ನು ಸರಳವಾಗಿಯೂ ಸಂಪೂರ್ಣವಾಗಿಯೂ ಪ್ರೀತಿಸದಂತೆ ಮಾಡಬಹುದು’. ಹವ್ವಳು ಪರದೈಸಿನ ತೋಟದಲ್ಲಿದ್ದಳು ಮತ್ತು ಸೈತಾನನಿಂದ ವಂಚಿಸಲ್ಪಟ್ಟಳು - ಮತ್ತು ದೇವರು ಆಕೆಯನ್ನು ಆ ತೋಟದಿಂದ ಹೊರಕ್ಕೆ ಓಡಿಸಿಬಿಟ್ಟರು. ಕ್ರಿಸ್ತನೊಂದಿಗೆ "ನಿಶ್ಚಿತಾರ್ಥ" ಮಾಡಿಕೊಂಡಿರುವ ನಾವು, ಇವತ್ತಿನ ದಿನ ಪರದೈಸಿನ ಕಡೆಗೆ ಹೋಗುತ್ತಿದ್ದೇವೆ. ಆದರೆ ನಾವು ಸೈತಾನನಿಗೆ ನಮ್ಮನ್ನು ವಂಚಿಸುವ ಅವಕಾಶ ನೀಡಿದರೆ, ನಾವು ಪರದೈಸನ್ನು ಪ್ರವೇಶಿಸುವುದು ಅಸಾಧ್ಯವಾಗುತ್ತದೆ.

ಮದಲಗಿತ್ತಿಯು ಲೋಕದೊಂದಿಗೂ, ಪಾಪದೊಂದಿಗೂ ವ್ಯಭಿಚಾರ ಮಾಡಿದರೆ, ಆಕೆಯ ಮದಲಿಂಗನು ಆಕೆಯನ್ನು ಮದುವೆಯಾಗಲು ಒಪ್ಪುವುದಿಲ್ಲ. ಇಂತಹ ಸೂಳೆಗಾರಿಕೆಯ ಸಭೆಯನ್ನೇ ’ಬಾಬೆಲ್’ಎಂದು ಉಲ್ಲೇಖಿಸಲಾಗಿದೆ (ಪ್ರಕಟನೆ 17), ಮತ್ತು ಕೊನೆಯಲ್ಲಿ ಈ ಸಭೆಯು ಕರ್ತನಿಂದ ತಿರಸ್ಕರಿಸಲ್ಪಡುತ್ತದೆ.

ನಿಮ್ಮ ಸುತ್ತಮುತ್ತಲಿನ ಇತರ ವಿಶ್ವಾಸಿಗಳು ಲೋಕದೊಂದಿಗೆ ಮತ್ತು ಪಾಪದೊಂದಿಗೆ ಮಾಡುವ ವ್ಯಭಿಚಾರವನ್ನು ನೀವು ಗಮನಿಸಿದರೂ, ನೀವು ಕರ್ತ ಯೇಸುವನ್ನು ಪ್ರೀತಿಸುವುದಾದರೆ, ನೀವು ಆತನಿಗೋಸ್ಕರ ಪರಿಶುದ್ಧವಾಗಿ ಜೀವಿಸುತ್ತೀರಿ. ಕೊನೆಯ ದಿನಗಳಲ್ಲಿ "ಅನೇಕರ ಪ್ರೀತಿಯು ತಣ್ಣಗಾಗುತ್ತದೆ," ಎಂದು ಯೇಸುವು ನಮ್ಮನ್ನು ಎಚ್ಚರಿಸಿದರು. (ಈ ಮಾತು ಖಂಡಿತವಾಗಿ ವಿಶ್ವಾಸಿಗಳ ಕುರಿತಾಗಿ ಹೇಳಲ್ಪಟ್ಟಿದೆ, ಯಾಕೆಂದರೆ ಅವರು ಮಾತ್ರವೇ ಕರ್ತನನ್ನು ಪ್ರೀತಿಸುತ್ತಾರೆ). ಆದರೆ "ಕಡೇವರೆಗೆ ತಾಳುವವನು ರಕ್ಷಣೆ ಹೊಂದುವನು"(ಮತ್ತಾಯನು 24:11-13).

"ನೀನು ಯೇಸುವನ್ನು ಪ್ರೀತಿಸುವುದಾದರೆ, ನಿನ್ನ ಹೃದಯವನ್ನು ಆತನಿಗಾಗಿ ನಿರ್ಮಲವಾಗಿ ಇರಿಸಿಕೊಳ್ಳುವೆ"

ಸೈತಾನನು ನಮ್ಮೆಲ್ಲರನ್ನು ಮೋಸಗೊಳಿಸಲು ಪ್ರಯತ್ನಿಸುತ್ತಾನೆ. ಆದರೆ ಸತ್ಯವೇದವು ನಮಗೆ ಕೊಡುವಂತ ಮತ್ತೊಂದು ಎಚ್ಚರಿಕೆ ಏನೆಂದರೆ, ಒಂದು ವೇಳೆ ನಾವು "ಸತ್ಯದ ಮೇಲೆ ಪ್ರೀತಿಯನ್ನು ಇಡದಿದ್ದರೆ ಮತ್ತು ಈ ಮೂಲಕ ರಕ್ಷಣೆಯನ್ನು ಪಡಕೊಳ್ಳದಿದ್ದರೆ, ಸ್ವತಃ ದೇವರೂ ಸಹ ನಮಗೆ ಅಸತ್ಯದಿಂದ ಉಂಟಾಗುವ ಭ್ರಮೆಯನ್ನು ಕಳುಹಿಸಿ, ನಾವು ಸೈತಾನನ ಸುಳ್ಳನ್ನು ನಂಬುವಂತೆ ಮಾಡುತ್ತಾರೆ" (2 ಥೆಸಲೋನಿಕದವರಿಗೆ 2:10,11).

ನಾವು ದೇವರ ವಾಕ್ಯದ ಸತ್ಯಾಂಶವನ್ನು ಸ್ವೀಕರಿಸಿದರೆ, ಮತ್ತು ಪವಿತ್ರಾತ್ಮನು ನಮಗೆ ತೋರಿಸುವಂತ ನಮ್ಮ ಸ್ವಂತ ಜೀವಿತದ ಪಾಪಗಳನ್ನು ಅರಿಕೆಮಾಡಿ ನಾವು ಪಾಪವನ್ನು ನಿರ್ಭಯವಾಗಿ ಎದುರಿಸಿದರೆ, ಮತ್ತು ಎಲ್ಲಾ ಪಾಪಗಳಿಂದ ಬಿಡುಗಡೆ ಹೊಂದಬೇಕೆಂಬ ಹಂಬಲ ನಮ್ಮಲ್ಲಿದ್ದರೆ, ನಾವು ಎಂದಿಗೂ ಮೋಸಹೋಗುವುದಿಲ್ಲ.

ಆದರೆ ನಾವು ದೇವರ ವಾಕ್ಯದಲ್ಲಿ ಸ್ಪಷ್ಟವಾಗಿ ಬರೆಯಲ್ಪಟ್ಟಿರುವ ಸತ್ಯಾಂಶವನ್ನು ಒಪ್ಪಿಕೊಳ್ಳದೇ ಹೋದರೆ, ಅಥವಾ ಪಾಪದಿಂದ ರಕ್ಷಣೆಗಾಗಿ ಹಾತೊರೆಯದೇ ಹೋದರೆ, ಆಗ ಸ್ವತ: ದೇವರೇ, ನಾವು ವಂಚಿಸಲ್ಪಡುವುದನ್ನೂ ಮತ್ತು ಸುಳ್ಳನ್ನು ನಿಜವೆಂದು ನಂಬುವುದನ್ನೂ ಅನುಮತಿಸುತ್ತಾರೆ - ಇದು ಕೇವಲ "ಶಾಶ್ವತ ಭದ್ರತೆ"ಯ ವಿಚಾರದಲ್ಲಿ ಮಾತ್ರವಲ್ಲದೆ, ಇತರ ವಿಷಯಗಳಲ್ಲಿಯೂ ನಿಜವಾಗಿದೆ.

ಹಾಗಾದರೆ ಇವೆಲ್ಲಾ ವಿಷಯಗಳ ಅಂತಿಮ ತೀರ್ಮಾನ ಇದಾಗಿದೆ:

ಕರ್ತನು ನಮ್ಮನ್ನು ಮೊದಲು ಪ್ರೀತಿಸಿದ್ದರಿಂದಲೇ ಮತ್ತು ನಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸಿದ್ದರಿಂದಲೇ, ನಾವು ಕರ್ತನನ್ನು ಪ್ರೀತಿಸುತ್ತೇವೆ. ಹಾಗಾಗಿ, ನಾವು ಕರ್ತನ ಕೃಪೆಯ ಮೂಲಕ, ಸದಾಕಾಲವೂ ಶುದ್ಧವಾದ ಮನಸ್ಸಾಕ್ಷಿಯನ್ನು ಇಟ್ಟುಕೊಳ್ಳುತ್ತೇವೆ ಮತ್ತು ಕಡೆಯ ತನಕ ಆತನನ್ನು ಪ್ರೀತಿಸುತ್ತೇವೆ ಹಾಗೂ ಆತನನ್ನು ಹಿಂಬಾಲಿಸುತ್ತೇವೆ - ಹೀಗೆ ನಾವು ಶಾಶ್ವತ ಭದ್ರತೆಯನ್ನು ಹೊಂದುತ್ತೇವೆ.

ಯೇಸುವನ್ನು ಹಿಂಬಾಲಿಸುವ ಪ್ರತಿಯೊಬ್ಬ ಶಿಷ್ಯನೂ ಶಾಶ್ವತ ಭದ್ರತೆಯಲ್ಲಿದ್ದಾನೆ.

ಆದರೆ ’ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರವಾಗಿರಲಿ’ (1 ಕೊರಿ. 10:12).

ಕಿವಿಯುಳ್ಳವನು ಕೇಳಿಸಿಕೊಳ್ಳಲಿ!