ಬಾಬಿ ಮ್ಯಾಕ್ ಡೋನಾಲ್ಡ್
(ಸಭಾ ಹಿರಿಯರು, ಎನ್ ಸಿ.ಸಿ ಎಫ್ ಚರ್ಚ್, ಸ್ಯಾನ್ ಜೋಸ್, ಕ್ಯಾಲಿಫೋರ್ನಿಯಾ, ಯು.ಎಸ್.ಎ)
"ಪ್ರವಾದಿಸುವುದನ್ನು ಆಶಿಸಿರಿ......." (1 ಕೊರಿಂಥ. 14:39)
1. ವ್ಯಾಖ್ಯಾನ. "ಪ್ರವಾದನೆಯು" ಜನರ ಭಕ್ತಿ ವೃದ್ಧಿಗಾಗಿ, ಎಚ್ಚರಿಕೆಗಾಗಿ ಅಥವಾ ಸಾಂತ್ವನಕ್ಕಾಗಿ ಮಾತನಾಡುವಂತದ್ದಾಗಿದೆ"...ಅಥವಾ ಮತ್ತೊಂದು ಮಾತಿನಲ್ಲಿ ಹೇಳಬೇಕೆಂದರೆ, "ಪ್ರೋತ್ಸಾಹಕ್ಕಾಗಿ, ಬಲಕ್ಕಾಗಿ ಮತ್ತು ಸಂತೈಸುವಿಕೆಗಾಗಿ" ಮಾತನಾಡುವಂತದ್ದಾಗಿದೆ (1 ಕೊರಿಂಥ . 14:3 - NLT ಅನುವಾದ). ಪ್ರೀತಿಯಲ್ಲಿ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿ ಮೇಲಕ್ಕೆತ್ತಬೇಕು ಎಂದು ಇಬ್ರಿಯ 3:13 ರಲ್ಲಿ ನಮಗೆ ಹೇಳಲ್ಪಟ್ಟಿದೆ. ಹಾಗಾಗಿ, ಪ್ರವಾದನೆಯಲ್ಲಿ ಪ್ರಾಥಮಿಕವಾಗಿ ಪ್ರೋತ್ಸಾಹದ ಮೇಲೆ ನಾವು ಗಮನ ಕೊಡಬೇಕು. ಹೀಗೆ ನಿರುತ್ಸಾಹಗೊಂಡಂತ ಜನರನ್ನು ಮೇಲಕ್ಕೆತ್ತಬಹುದಾಗಿದೆ ಮತ್ತು ಪಾಪದ ಮೂಲಕ ಕಠಿಣರಾಗದಂತೆ ಅವರನ್ನು ತಡೆಗಟ್ಟಬಹುದಾಗಿದೆ. ಇದನ್ನು ನಾವು ಉತ್ತಮವಾಗಿ ಮಾಡಿದಲ್ಲಿ, ಸವಾಲೊಡ್ಡುವಂತ, ಎಚ್ಚರಿಸುವಂತ ಮತ್ತು ಪಾಪದ ಅರಿವನ್ನು ಅವರಲ್ಲಿ ಹುಟ್ಟಿಸುವಂತ ಮಾತುಗಳನ್ನು ಆಡಲು ದೇವರು ನಮ್ಮನ್ನು ಸಮರ್ಥರನ್ನಾಗಿ ಮಾಡುತ್ತಾರೆ. ಅನ್ಯಭಾಷೆಗಳಲ್ಲಿ ಮಾತನಾಡುವ ವರಕ್ಕಿಂತ ಪ್ರವಾದನೆಯು ಉತ್ತಮ ವರವಾಗಿದೆ. ಏಕೆಂದರೆ ಪ್ರವಾದನೆಯು ಸಭೆಯಲ್ಲಿರುವಂತ ಜನರ ಭಕ್ತಿವೃದ್ಧಿಯನ್ನುಂಟು ಮಾಡುತ್ತದೆ, ಅದರಂತೆ"ಅನ್ಯಭಾಷೆಯು" ತನಗೆ ಮಾತ್ರ ಭಕ್ತಿವೃದ್ಧಿಯನ್ನುಂಟು ಮಾಡಿಕೊಳ್ಳುವಂತದ್ದಾಗಿದೆ (1 ಕೊರಿಂಥ. 14:4).
2. ಪ್ರವಾದನೆಯು ಪ್ರತಿಯೊಬ್ಬರಿಗೂ ಇರುವುದಾಗಿದೆ. ಪ್ರವಾದನೆಯ ವರವನ್ನು ಸಭೆಯಲ್ಲಿರುವಂತ ಎಲ್ಲರೂ ಹುಡುಕಬೇಕು (1 ಕೊರಿಂಥ 14:31 ರ ಪ್ರಕಾರವಾಗಿ). ಈ ವರವನ್ನು ಸಹೋದರಿಯರು ಸಹ ಹೊಂದಬಹುದಾಗಿದೆ, ಅದು ಕೇವಲ ಸಹೋದರರಿಗೆ ಮಾತ್ರವಿಲ್ಲ. ಸಹೋದರಿಯರು ಪ್ರವಾದಿಸುವಾಗ ತಮ್ಮ ತಲೆಗಳನ್ನು ಮುಚ್ಚಿಕೊಳ್ಳಬೇಕು. ಮತ್ತು ಅದಕ್ಕೆ ಕಾರಣ ಇದಾಗಿದೆ: 1 ಕೊರಿಂಥ 11:3-15 ನಮಗೆ ಕಲಿಸುವುದೇನೆಂದರೆ, ಪ್ರತಿ ಸ್ತ್ರೀಗೆ ಪುರುಷನು ತಲೆಯಾಗಿದ್ದಾನೆ. ಮತ್ತು ಸ್ತ್ರೀಯು ತನ್ನ ತಲೆಯನ್ನು ಮುಚ್ಚಿಕೊಳ್ಳುವುದರಿಂದ, ಪುರುಷನ ಮಹಿಮೆಯು ಸಭೆಯಲ್ಲಿ ಮುಚ್ಚಿದ್ದು ದೇವರ ಮಹಿಮೆಯು ಮಾತ್ರ ಕಾಣುತ್ತದೆ ಎಂದು ಆಕೆಯು ಮೌನವಾಗಿ ಸಾಕ್ಷೀ ಕರಿಸುವವಳಾಗಿರುತ್ತಾಳೆ.
3. ಇದು ವೈಯಕ್ತಿಕ ಎಂದು ಖಚಿತಪಡಿಸಿಕೊಳ್ಳಿರಿ. ಬೋಧನೆ ಮಾಡುವ ಸಲುವಾಗಿ ವಾಕ್ಯದ ಸಿದ್ಧತೆಯಲ್ಲಿರುವಾಗ, ಇದು ನಮ್ಮ ವೈಯಕ್ತಿಕ ಅನುಭವವೇ ಹೊರತು, ಕೇವಲ ಊಹೆಯಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ಯೇಸು ಮೊದಲೇ ಏನು ಅಭ್ಯಾಸ ಮಾಡಿದ್ದರೋ, ಅದರ ಬಗ್ಗೆ ಮಾತ್ರ ಮಾತನಾಡುತ್ತಿದ್ದರು (ಅ.ಕೃತ್ಯಗಳು 1:1 ಈ ರೀತಿ ಹೇಳುತ್ತದೆ : "ಯೇಸು ಮೊದಲು ಮಾಡಿದರು ಮತ್ತು ನಂತರ ಬೋಧಿಸಿದರು"). ನಾವು ಅಭ್ಯಾಸ ಮಾಡದೇ ಇರುವುದನ್ನು ಊಹಿಸಿ ಎಂದಿಗೂ ಬೋಧನೆ ಮಾಡಬಾರದು! ಹಂಚಿಕೊಳ್ಳಲು ನಮ್ಮ ಬಳಿ ಹೊಸ ವಿಷಯ ಯಾವುದು ಇಲ್ಲ ಎಂದರೆ, ನಾವು ಹಿಂದೆ ಮಾತನಾಡಿದ್ದನ್ನೇ ಪುನರುಚ್ಚರಿಸುವುದು ಉತ್ತಮ, ಆದರೆ ನಮ್ಮ ಜೀವಿತದಲ್ಲಿ ಎಂದಿಗೂ ಅಳವಡಿಸಿಕೊಳ್ಳದೆ ಇರುವುದನ್ನು ಹಂಚಿಕೊಳ್ಳಬಾರದು. ನಾವು ಕ್ರಿಸ್ತನಿಗೆ ವಿಧೇಯರಾಗುವಂತೆ ಜೀವಿಸಿದಲ್ಲಿ ಮಾತ್ರ ಕ್ರಿಸ್ತನ ಅಧಿಕಾರವು ನಮಗೆ ಬೆಂಬಲಿಸುತ್ತದೆ ಅಥವಾ ಸಹಾಯ ಮಾಡುತ್ತದೆ. ಹೀಗಾಗಿ, ನಾವು ದೇವರ ವಾಕ್ಯವನ್ನು ಅಧ್ಯಯನ ಮಾಡುವಾಗ, ನಾವು ಮಾಡಬೇಕಾದದ್ದು ಏನೆಂದರೆ, ನಮ್ಮ ಸ್ವಂತ ಜೀವಿತದಲ್ಲಿ ಮೊಟ್ಟ ಮೊದಲು ನಾವು ಆ ವಾಕ್ಯಕ್ಕೆ ವಿಧೇಯರಾಗಬೇಕು. ಆಗ ನಾವು ನಮ್ಮ ಜೀವಿತದಲ್ಲಿ ಏನು ಅಳವಡಿಸಿಕೊಂಡಿದ್ದೇವೋ ಮತ್ತು ಏನು ಅನುಭವಿಸಿದ್ದೇವೋ ಅದರ ಬಗ್ಗೆ ಮಾತನಾಡಲು ಶಕ್ತರಾಗುತ್ತೇವೆ.
4. ದೀನತೆಯ ಹೃದಯವನ್ನು ಹೊಂದಿಕೊಳ್ಳಿರಿ. ನಾವು ಎಂದಿಗೂ ಸ್ವ-ಭರವಸೆಯ ಆತ್ಮದಲ್ಲಿ ಯಾವುದನ್ನೂ ಹಂಚಿಕೊಳ್ಳಬಾರದು. ಮತ್ತು ನಾವು ಜನರಿಗೆ ಎಂದಿಗೂ ಆ ರೀತಿ ಬೋಧಿಸಬಾರದು. ಹಾಗೂ ಜೀವಿತದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿದ್ದೇವೆ ಎಂಬ ಭಾವನೆಯನ್ನು ಎಂದೂ ನಾವು ಇತರರಿಗೆ ನೀಡಬಾರದು! ಇದರ ಬದಲಾಗಿ, ನಮ್ಮ ನಂಬಿಕೆಯ ಪ್ರಮಾಣಕ್ಕೆ ತಕ್ಕಂತೆ ನಾವು ಪ್ರವಾದಿಸಬೇಕು (ರೋಮಾ 12:6). ಮತ್ತು ನಾವು ದೀನತೆಯ ಹೃದಯದಿಂದ ಯಾವಾಗಲೂ ಮಾತನಾಡಬೇಕು. ಯೇಸುವನ್ನು ಮಾತ್ರ ಎತ್ತಿ ಹಿಡಿಯಬೇಕು. ಯೇಸು ಒಬ್ಬರೇ ಎತ್ತಲ್ಪಟ್ಟಾಗ, ಯೇಸು ತಾವೇ ತಮ್ಮ ಬಳಿಗೆ ಜನರನ್ನು ಸೆಳೆದುಕೊಳ್ಳುತ್ತಾರೆ (ಯೋಹಾನ 12:32). ಹೀಗಾಗಿ, ನಾವು ಆತನ ವಾಕ್ಯವನ್ನು ಸಾರುವಾಗ, ಎಲ್ಲಾ ಸಮಯದಲ್ಲಿ ದೀನತೆಯ ಹೃದಯವನ್ನು ಹೊಂದಿಕೊಳ್ಳಲು ಕರ್ತರು ಸಹಾಯ ಮಾಡಲಿ ಎಂದು ನಾವು ಹೆಚ್ಚಾಗಿ ಪ್ರಾರ್ಥನೆ ಮಾಡಬೇಕು.
ಯೇಸುವು ಯಾವಾಗಲೂ ಸರಳವಾಗಿ ಮಾತನಾಡಿದರು. ಅವರ ಬೋಧನೆಯಲ್ಲಿ ಅವರು ಪ್ರಾಯೋಗಿಕವಾಗಿದ್ದರು. ಅವರ ಮಾತುಗಳು ಯಾವಾಗಲೂ ಸುಲಭವಾಗಿ ಅರ್ಥವಾಗುತ್ತಿದ್ದವು.
5. ಶರೀರದಲ್ಲಿ ಯಾವ ಭರವಸೆಯನ್ನೂ ಇಡಬೇಡಿರಿ."ಶರೀರದಲ್ಲಿ ಭರವಸೆಯಿಲ್ಲದವರೂ ಆದ ನಾವೇ ಸುನ್ನತಿಯವರಾಗಿದ್ದೇವೆ" (ಫಿಲಿಪ್ಪಿ 3:3). ಬಹಿರಂಗವಾಗಿ ಮಾತನಾಡಲು ನಾವು ಧೈರ್ಯದ ಕೊರತೆಯನ್ನು ಹೊಂದಿದ್ದಲ್ಲಿ, ನಾವು ಹಿಂಜರಿಯಬಾರದು ಅಥವಾ ಹಿಂದಕ್ಕೆ ಸರಿಯಬಾರದು, ಆದರೆ ಬಲಕ್ಕಾಗಿ ಕರ್ತನನ್ನು ಹುಡುಕಬೇಕು ಮತ್ತು ಆತನು ನಮ್ಮನ್ನು ಬಲಪಡಿಸುತ್ತಾನೆ. ನಾವು ಬಹಿರಂಗವಾಗಿ ಮಾತನಾಡುವಂತೆ ಸ್ವಾಭಾವಿಕವಾಗಿ ಸಾಮರ್ಥ್ಯವನ್ನು ಹೊಂದಿದ್ದಲ್ಲಿ, ನೀವು ಅದರ ಮೇಲೆ ಆತುಕೊಂಡಿರದಂತೆ ಖಚಿತಪಡಿಸಿಕೊಳ್ಳಿರಿ; ಆದರೆ ನಮ್ಮನ್ನು ಬಲಪಡಿಸುವಂತೆ ಪ್ರಾರ್ಥನೆಯಲ್ಲಿ ಕರ್ತನ ಮೇಲೆ ಇನ್ನೂ ಹೆಚ್ಚಾಗಿ ಆತುಕೊಳ್ಳಿರಿ. ನಂಬಿಕೆ ಮತ್ತು ಕರ್ತನ ಮೇಲೆ ಆತುಕೊಳ್ಳುವಿಕೆಯು ಪ್ರವಾದನೆ ಮಾಡಲು ಬೇಕಾದ ಎರಡು ಪ್ರಮುಖ ಅಗತ್ಯತೆಗಳಾಗಿವೆ.
6. ಹೆಚ್ಚು ಪ್ರಾರ್ಥಿಸಿರಿ. ನಾವು ಪ್ರಾರ್ಥಿಸಲೇಬೇಕು. ನಿಖರವಾಗಿ ಏನನ್ನು ಹಂಚಿಕೊಳ್ಳಬೇಕು ಮತ್ತು ಯಾವುದನ್ನು ಹಂಚಿಕೊಳ್ಳಬಾರದು ಎಂಬುದರ ಕುರಿತು ಜ್ಞಾನವನ್ನು ಕೇಳಬೇಕು (ಯಾಕೋಬ 1:5). ನಾವು ಮಾತನಾಡುವಾಗ, ಸರಿಯಾದ ಆತ್ಮದಲ್ಲಿ ಮಾತನಾಡುವಂತೆ ಮತ್ತು ಸರಿಯಾದ ಉದ್ದೇಶದಿಂದ ಮಾತನಾಡಲು ಶಕ್ತರಾಗುವಂತೆ ಪವಿತ್ರಾತ್ಮನ ಬಲಕ್ಕಾಗಿ ನಾವು ಕೇಳಿಕೊಳ್ಳಬೇಕು (ಲೂಕ 11:13). ಮತ್ತು ನಾವು ಮಾತನಾಡುವುದನ್ನು ಮುಗಿಸಿದ ನಂತರ ಪ್ರಾರ್ಥಿಸುವಂತ ಅಭ್ಯಾಸವನ್ನು ನಾವೆಲ್ಲರೂ ರೂಡಿಸಿಕೊಳ್ಳಬೇಕು, ಹಾಗೂ ಬಿತ್ತುವಂತ ಬೀಜವು ಒಳ್ಳೆಯ ಭೂಮಿಯಲ್ಲಿ ಬೀಳುವಂತೆ ಮತ್ತು ಅದು ಫಲವನ್ನು ಕೊಡುವಂತೆ ಸಹ ನಾವು ಪ್ರಾರ್ಥಿಸಬೇಕು; ಮತ್ತು ನಾವು ಏನನ್ನು ಹಂಚಿಕೊಂಡಿರುತ್ತೇವೋ, ಅದಕ್ಕಾಗಿ ಜನರು ನಮ್ಮನ್ನು ಹೊಗಳಿದರೆ, ಅದರಿಂದ ನಾವು ಗರ್ವಪಡದಂತೆ ಕಾಪಾಡಲು ಮತ್ತು ನಾವು ಹಂಚಿಕೊಂಡಿದ್ದರ ಬಗ್ಗೆ ಯಾರೂ ಸಹ ನಮ್ಮನ್ನು ಹೊಗಳದಿದ್ದಾಗ ನಾವು ನಿರುತ್ಸಾಹಗೊಳ್ಳದಂತೆಯೂ ಕರ್ತನಲ್ಲಿ ನಾವು ಪ್ರಾರ್ಥಿಸಬೇಕು. ನಾವು ಏನು ಮಾತನಾಡಬೇಕು ಎಂದು ಕರ್ತರು ಬಯಸುತ್ತಾರೋ ಅದನ್ನು ನಾವು ಮಾತನಾಡುವುದು ಮತ್ತು ದೀನತೆಯೊಂದಿಗೆ ಮಾತನಾಡುವುದು ಮಾತ್ರ ಮುಖ್ಯ ವಿಷಯವಾಗುತ್ತದೆ. ಇವುಗಳನ್ನು ನಾವು ಮಾಡಿದಾಗ, ದೇವರು ಮಹಿಮೆ ಹೊಂದುತ್ತಾರೆ ಮತ್ತು ಅದು ಮಾತ್ರ ಮುಖ್ಯ ವಿಷಯವಾಗುತ್ತದೆ.
7. ತಯಾರಿಯಲ್ಲಿ ಸಮಯ ಕಳೆಯಿರಿ. ಮಾತನಾಡುವುದು ನಮಗೆ ಕಷ್ಟಕರವಾಗುವುದಾದರೆ, ನಾವು ಹೇಳ ಬಯಸುವುದನ್ನು ಸರಿಯಾದ ಕ್ರಮದಲ್ಲಿ ಜೋಡಿಸಿಕೊಳ್ಳುವುದರಲ್ಲಿ ಬಹಳ ಸಮಯವನ್ನು ಕಳೆಯಬೇಕು. ನಾವು ನಮಗೆ ಕೊಟ್ಟ ಸಮಯದೊಳಗೆ ಮಾತನಾಡಬೇಕು ಮತ್ತು ನಾವು ಒತ್ತಿ ಹೇಳುವ ಮುಖ್ಯ ವಿಷಯಕ್ಕೆ ನಾವು ಸೀಮಿತವಾಗಬೇಕು. ನಾವು ಹಂಚಿ ಕೊಳ್ಳಬಯಸುವುದನ್ನು ಬರೆದುಕೊಂಡರೆ ನಾವು ನಮಗೆ ಕೊಟ್ಟ ಅಥವಾ ನಿಗದಿಪಡಿಸಿದ ಸಮಯದ ಮಿತಿಯಲ್ಲೇ ಇರಲು ಸಾಧ್ಯವಾಗುತ್ತದೆ. ಆದರೆ ನಾವು ಮೊದಲೇ ಶ್ರಮ ಪಡಬೇಕು. ಸತ್ಯವೇದವು ಹೇಳುವುದೇನೆಂದರೆ, ನಾವು ಬಿತ್ತಿದ್ದನ್ನು ಕೊಯ್ಯುತ್ತೇವೆ ಎಂಬುದು. (ಗಲಾತ್ಯ 6:7). ಜ್ಞಾನೋಕ್ತಿಗಳು 13:4 ಹೇಳುವುದೇನೆಂದರೆ, ಜಾಗ್ರತೆಯುಳ್ಳವನ ಪ್ರಾಣವು ಪುಷ್ಟಿಯಾಗುವದು. 1 ಕೊರಿಂಥ 14:40 ನಮಗೆ ಇದನ್ನು ಹೇಳುತ್ತದೆ - "ಎಲ್ಲವೂ ಮರ್ಯಾದೆಯಿಂದಲೂ ಕ್ರಮದಿಂದಲೂ ನಡೆಯಲಿ". ಆದ್ದರಿಂದ ಯಾವಾಗಲೂ ಸ್ಪಷ್ಟವಾಗಿ ಮತ್ತು ಕ್ರಮಬದ್ಧವಾಗಿ ಮಾತನಾಡುವುದನ್ನು ಕಂಡುಕೊಳ್ಳಿರಿ. ಒಬ್ಬ ಒಳ್ಳೆಯ ಅಡುಗೆಯವನು ಜನರು ಸುಲಭವಾಗಿ ಜೀರ್ಣ ಮಾಡುವ ಆಹಾರವನ್ನು ತಯಾರಿಸುವಂತೆ ನಾವೂ ಸಹ ಜನರು ದೇವರ ವಾಕ್ಯವನ್ನು ಸುಲಭವಾಗಿ ಸ್ವೀಕರಿಸುವಂತೆ ಅದನ್ನು ಬೋಧಿಸಬೇಕು. ಕೆಲವು ಸಲ ಕೆಲವು ವಿಷಯಗಳನ್ನು ಪುನ: ಪುನ: ಹೇಳಲು ನಾವು ಸಿದ್ದರಿರಬೇಕು. ಯಾವಾಗಲೂ ಹೊಸತನ್ನೇ ನಾವು ಹೇಳಬೇಕಾಗಿಲ್ಲ. ಕರ್ತನು ನಮ್ಮ ಹೃದಯದಲ್ಲಿ ಹಾಕಿರುವ ವಿಷಯ ಯಾವಾಗಲೂ ಅತಿ ಆಸಕ್ತಿದಾಯಕವಾಗಿರಲಿಕ್ಕಿಲ್ಲ. ಆದರೆ ನಾವು ಹಂಚಿಕೊಳ್ಳುವುದು ದೇವರು ಬಯಸಿದ್ದನ್ನು (ನಮಗೆ ತಿಳಿದಿರುವ ಮಟ್ಟಿಗೆ) ಎಂದು ನಮಗೆ ನಂಬಿಕೆ ಇದ್ದರೆ, ದೇವರು ಅದನ್ನು ಆಶೀರ್ವದಿಸುತ್ತಾರೆ ಎಂದು ನಾವು ನಂಬಬಹುದು.
8. ಅದನ್ನು ಸರಳವಾಗಿಡಿರಿ. ಯೇಸುವು ಯಾವಾಗಲೂ ಸರಳವಾಗಿ ಮಾತನಾಡಿದರು. ಅವರ ಬೋಧನೆಯಲ್ಲಿ ಅವರು ಪ್ರಾಯೋಗಿಕವಾಗಿದ್ದರು. ಅವರ ಮಾತುಗಳು ಯಾವಾಗಲೂ ಸುಲಭವಾಗಿ ಅರ್ಥವಾಗುತ್ತಿದ್ದವು. ಜನರು ಜಾಣ್ಮೆಯ ಪದಗಳನ್ನು ಮತ್ತು ಭಾಷಣದ ಕೌಶಲಗಳನ್ನು ಉಪಯೋಗಿಸಿದಾಗ, ಸತ್ಯವು ಕಳೆದುಹೋಗುವ (ಮರೆಯಾಗುವ) ಸಾಧ್ಯತೆಯಿದೆ. ನಾವು ಮಾತನಾಡುವಾಗ ಒಂದು ಮಗುವಿಗೆ ಕೂಡ ಅರ್ಥವಾಗುವಂತೆ ಹಾಗೂ ಆ ಮಗು ಕೂಡ ನಮ್ಮ ಮಾತಿನಿಂದ ಏನನ್ನಾದರೂ ಪಡೆಯುವಂತೆ ನಾವು ಮಾತನಾಡಬೇಕು.
9. ಯಾವಾಗ ನಿಲ್ಲಿಸಬೇಕೆಂದು ತಿಳಿಯಿರಿ. ಯೇಸು ಎಂದಿಗೂ ತನ್ನ ಸಂದೇಶಗಳನ್ನು ಅನಗತ್ಯವಾಗಿ ಉದ್ದ ಮಾಡಲಿಲ್ಲ. ಬೆಟ್ಟದ ಮೇಲೆ ನೀಡಿದ ಸಂದೇಶ ಕೇವಲ 20 ನಿಮಿಷಗಳಷ್ಟು ಉದ್ದವಾಗಿದೆ. ದೇವರು ಬಹಳ ಕಡಿಮೆ ಸಮಯದಲ್ಲಿ ಪ್ರಬಲವಾದ ಸಂದೇಶವನ್ನು ನೀಡಬಲ್ಲರು! ಹೆಚ್ಚು ಹೊತ್ತು ಮಾತನಾಡುವುದು ಅನೇಕರಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು. ಅದು ಅನೇಕರು ತಮ್ಮ ಗಮನವನ್ನು ಕಳೆದುಕೊಳ್ಳುವಂತೆ ಮಾಡಬಹುದು. ಪ್ರಮಾಣಕ್ಕಿಂತ ಗುಣಮಟ್ಟ ಮುಖ್ಯ. ಪ್ರಸಂಗಿ 6:11 ಹೇಳುತ್ತದೆ, “ಮಾತು ಹೆಚ್ಚಿದಷ್ಟು ಪರಿಣಾಮ ಕಡಿಮೆ, ಅವುಗಳಿಂದ ಮನುಷ್ಯನಿಗೆ ಏನು ಪ್ರಯೋಜನ?" (NLT ಅನುವಾದ). ಕೆಲವೇ ಜನರು ದೀರ್ಘಕಾಲದವರೆಗೆ ಜನರ ಗಮನವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ದೀರ್ಘವಾದ ಸಂದೇಶಗಳನ್ನು ಬೋಧಿಸುವುದಕ್ಕಿಂತ ದೇವರು ನಮ್ಮ ಹೃದಯದಲ್ಲಿ ಏನನ್ನು ಇಟ್ಟಿದ್ದಾನೋ ಅದನ್ನು ಸಂಕ್ಷಿಪ್ತವಾಗಿ ಮಾತನಾಡುವುದು ಉತ್ತಮ - ಮತ್ತು ಜನರು ಸಂದೇಶದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳಲು ಮತ್ತು ನಿರಂತರವಾಗಿ ತಮ್ಮ ಕೈಗಡಿಯಾರಗಳನ್ನು ನೋಡಲು ಅವಕಾಶ ನೀಡದಿರುವುದು ಉತ್ತಮ.
10. ಭಯಪಡಬೇಡಿರಿ ಅಥವಾ ಅಂಜಬೇಡಿರಿ, ಆದರೆ ಬಲವುಳ್ಳವರಾಗಿರ್ರಿ."ದೇವರು ನಮಗೆ ಕೊಟ್ಟಿರುವ ಆತ್ಮವು ಬಲದ ಆತ್ಮವೇ ಹೊರತು ಭಯದ ಆತ್ಮವಲ್ಲ" (2 ತಿಮೊಥೆ 1:7). ಕ್ರಿಸ್ತನು ಯಾರು ಎಂಬ ಕಾರಣದಿಂದ ನಾವು ಬಲವುಳ್ಳವರಾಗಿರಬಹುದು ಅಥವಾ ಧೈರ್ಯವುಳ್ಳವರಾಗಿರಬಹುದು ಮತ್ತು ನಮ್ಮ ಸ್ವಂತ ಜೀವಿತಗಳಲ್ಲಿ ಆತನು ಏನು ಮಾಡಿದ್ದಾನೋ, ಅದು ನಮಗೆ ತಿಳಿದಿರುವ ಕಾರಣದಿಂದ ನಾವು ಬಲವುಳ್ಳವರಾಗಿರಬೇಕು. ದೇವರು ನಮ್ಮ ಅಪರಿಪೂರ್ಣತೆಗಳನ್ನು ಉಪಯೋಗಿಸಿ, ಅದರ ಮುಖಾಂತರ ಇತರರನ್ನು ಆಶೀರ್ವದಿಸುತ್ತಾರೆ. ನಾವು ಮಾಡಬಹುದಾದ ಸ್ವಲ್ಪವನ್ನಷ್ಟೇ ಮಾಡಿದರೂ, ನಾವು ಮಾಡಲಾಗದ್ದನ್ನು ದೇವರು ಮಾಡುತ್ತಾರೆ ಮತ್ತು ನಾವು ಏನೇ ಮಾತನಾಡಿದರೂ ಅದನ್ನು ಆಶೀರ್ವದಿಸುತ್ತಾರೆ. ನಾವು ಬಾನೆಗಳನ್ನು ನೀರಿನಿಂದ ತುಂಬುವಂತದ್ದರಲ್ಲಿ ಸುಮ್ಮನೆ ನಂಬಿಗಸ್ಥರಾಗಿದ್ದರೂ (ಕಾನಾದಲ್ಲಿ ನಡೆದ ಪ್ರಕಾರ), ನಂತರ ಕರ್ತರು ನೀರನ್ನು ದ್ರಾಕ್ಷಾರಸವನ್ನಾಗಿ ಬದಲಾಯಿಸುತ್ತಾರೆ (ಯೋಹಾ. 2:1-11). ದೇವರು ಇದನ್ನು ಮಾಡುವಂತೆ ದೇವರಲ್ಲಿ ನಾವು ಭರವಸೆ ಇಡಬೇಕು. ನಾವು ಆತನಲ್ಲಿ ಭರವಸೆ ಇಡುವುದಾದಲ್ಲಿ, ದೇವರು ನಮ್ಮ ಬಲಹೀನತೆಗಳ ಮೂಲಕ ಅನೇಕರನ್ನು ಆಶೀರ್ವದಿಸುತ್ತಾರೆ.
11. ಯಾವಾಗಲೂ ಹೃದಯದಿಂದ ಪ್ರವಾದನೆ ಮಾಡುವವರಾಗಿರ್ರಿ. ನಮ್ಮ ತಲೆಯಿಂದ (ಜ್ಞಾನದಿಂದ) ನಾವು ಬೋಧಿಸಬಾರದು. ಎಲ್ಲರೂ ಪ್ರವಾದಿಸಬಹುದು ಎಂದು ಸತ್ಯವೇದವು ಹೇಳುತ್ತದೆ (1 ಕೊರಿಂಥ14:31). ಆದರೆ ಎಲ್ಲರೂ ಉಪದೇಶಕರಾಗುವುದಿಲ್ಲ (1 ಕೊರಿಂಥ 12:29). ಉಪದೇಶವು ತುಂಬಾ ಮುಖ್ಯವಾದದ್ದು. ಆದರೆ ಕೆಲವೇ ಮಂದಿ ಮಾತ್ರ ಉಪದೇಶಕರಾಗಲು ಕರೆಯನ್ನು ಹೊಂದಿರುತ್ತಾರೆ; ಮತ್ತು ಒಂದು ವೇಳೆ ದೇವರು ನಮಗೆ ಅಂತಹ ಕರೆಯನ್ನು ಕೊಟ್ಟಿಲ್ಲ ಎಂದಲ್ಲಿ, ನಾವು ಎಂದಿಗೂ ಉಪದೇಶಿಸುವುದನ್ನು ಪ್ರಯತ್ನಿಸಬಾರದು. 1 ಕೊರಿಂಥ 8:1 ಈ ರೀತಿ ಹೇಳುತ್ತದೆ "ಜ್ಞಾನವು ನಮ್ಮನ್ನು ಅಹಂಕಾರದಿಂದ ತುಂಬಿಸುತ್ತದೆ". ಇದು ನಾವು ಇತರರನ್ನು ಕೀಳಾಗಿ ಕಾಣುವಂತೆ ಮಾಡುತ್ತದೆ. ನಾವು ಏನು ಹೇಳುತ್ತೇವೆ ಅದು ಮಾತ್ರ ಮುಖ್ಯವಲ್ಲ, ಆದರೆ ಅದನ್ನು ನಾವು ಹೇಗೆ ಹೇಳುತ್ತೇವೆ (ಮತ್ತು ಯಾವ ಉದ್ದೇಶದಿಂದ) ಎನ್ನುವುದು ಮುಖ್ಯವಾಗಿರುತ್ತದೆ. ಎಲ್ಲಾ ಸಮಯಗಳಲ್ಲಿ ನಮ್ಮ ಮನಸ್ಸಿನಲ್ಲಿ ನಾವು ಇತರರ ಒಳಿತನ್ನು ಹೊಂದಿಲ್ಲದಿದ್ದಲ್ಲಿ, ನಾವು ಜ್ಞಾನದ, ಸಿದ್ಧಾಂತದ ಮತ್ತು ಜನರ ಮನಸ್ಸನ್ನು ಹುರಿದುಂಬಿಸುವುದರ ಮತ್ತು ಅವರ ಮನಸ್ಸನ್ನು ರಂಜಿಸುವುದರ ಮೇಲೆ ಗಮನಹರಿಸುವುದರಲ್ಲಿ ಒಲವನ್ನು ಹೊಂದಿರುತ್ತೇವೆ! ಆದಾಗ್ಯೂ ನಮ್ಮ ಕರೆಯು, ಜನರನ್ನು ಮೇಲಕ್ಕೆತ್ತುವುದು ಮತ್ತು ಅವರಿಗೆ ಸವಾಲನ್ನೊಡ್ಡುವುದಾಗಿದೆ.
12. ಪ್ರವಾದನಾ ವರಕ್ಕಾಗಿ ಕಾತರಿಸಿರಿ. ಇತರರ ಮೇಲಿನ ಪ್ರೀತಿಯಿಂದ (1 ಕೊರಿಂಥ 14:1). ನಾವು ಮಾಡುವ ಪ್ರತಿಯೊಂದು ಕಾರ್ಯವು ಪ್ರೀತಿಯಿಂದ ಹೊರಹೊಮ್ಮಬೇಕು. ಪ್ರೀತಿಯಿಲ್ಲದ ಅತ್ಯುತ್ತಮ ಕಾರ್ಯವೂ ನಿಷ್ಪ್ರ ಯೋಜಕವಾಗಿದೆ. ಹಾಗಾಗಿ ಸಭೆಯ ಮೇಲಿನ ಪ್ರೀತಿಯಿಂದ ಮತ್ತು ಇನ್ನೊಬ್ಬರು ಬೆಳೆಯುವಂತೆ ಮಾಡಲು ಹಾಗೂ ಅವರಿಗೆ ಸಹಾಯ ಮಾಡಲು ನಾವು ಪ್ರವಾದನಾ ವರಗಳನ್ನು ಆಶಿಸಬೇಕು. ಸದಾ ಇದು ನಮ್ಮ ಉದ್ದೇಶವಾಗಿರಬೇಕು. ನಮ್ಮ ಸಹೋದರ ಝ್ಯಾಕ್ ಪೂನನ್ ಹೇಳಿದಂತೆ, "ದೇವರ ವಾಕ್ಯ ಮತ್ತು ದೇವಜನರು ಇವೆರಡೂ ಒಬ್ಬ ದೇವರ ಸೇವಕನ ಹೃದಯದಲ್ಲಿ ಸದಾಕಾಲ ಇರಬೇಕು".
13. ನಮ್ಮ ವೈಯಕ್ತಿಕ ಸಂಭಾಷಣೆಯಲ್ಲಿ ಸಹ ಪ್ರವಾದಿಸುವುದು. ನಾವು ಸಭಾ-ಕೂಟದಲ್ಲಿ ಸಾರ್ವಜನಿಕವಾಗಿ ಮಾತಾಡುವುದಕ್ಕೆ ಮಾತ್ರ ಪ್ರವಾದನೆ ಸೀಮಿತವಾಗಿಲ್ಲ. ನಾವು ಇತರರೊಂದಿಗೆ ಮಾತನಾಡುವಾಗಲೂ ಪ್ರವಾದನೆ ಮಾಡ ಬಹುದು. ದೂರವಾಣಿಯಲ್ಲಿ ಮಾತಾಡುವಾಗ, ಸಂದೇಶಗಳನ್ನು (ಮೆಸೇಜ್) ಕಳುಹಿಸುವಾಗ ಅಥವಾ ನಾವು ಯಾರ ಮನೆಯಲ್ಲಾದರೂ ಮಾತಾಡುವಾಗ ಅವರನ್ನು ಪ್ರೋತ್ಸಾಹಿಸಬಹುದು. ಪ್ರೋತ್ಸಾಹಿಸುವುದು ಒಂದು ಪ್ರವಾದನೆಯಾಗಿದೆ. ಪ್ರತಿ ದಿನವೂ ನಾವು ಜನರನ್ನು ಪ್ರೋತ್ಸಾಹಿಸಲು ಪ್ರಯತ್ನಿಸಬೇಕು (ಇಬ್ರಿಯ 3:13). ಹೀಗೆ ಮಾಡುವುದರಿಂದ ನಾವು ಪ್ರೀತಿಸುವ ಜನರು ಪಾಪದಿಂದ ತಮ್ಮ ಹೃದಯವನ್ನು ಕಠಿಣಗೊಳಿಸುವುದನ್ನು ತಡೆಯುತ್ತದೆ. ಮತ್ತೊಬ್ಬರನ್ನು ಆಶೀರ್ವದಿಸಲು ಬಯಸಿದರೆ ನಾವು ಹೀಗೆ ಮಾಡಬಹುದು. ಅವಕಾಶಗಳಿಗಾಗಿ ನಾವು ನಮ್ಮ ಕಣ್ಣುಗಳನ್ನು ತೆರೆದಿರಬೇಕು. ಕರ್ತನು ನಮ್ಮೊಂದಿಗೆ ಮಾತಾಡಿದ ವಿಷಯ ನಮ್ಮನ್ನು ಆಶೀರ್ವದಿಸಿದ್ದರೆ ಅದನ್ನು ಇತರರೊಂದಿಗೆ ಹಂಚಿಕೊಂಡು ಅವರನ್ನು ಆಶೀರ್ವದಿಸೋಣ. "ಸರಿಯಾದ ಸಮಯದಲ್ಲಿ ಸರಿಯಾದ ವಾಕ್ಯವನ್ನು ಹಂಚಿ ಕೊಳ್ಳುವುದೇ" ಪ್ರವಾದನೆಯಾಗಿದೆ. ಮತ್ತು ಅದು ಇತರರಿಗೆ ಹೆಚ್ಚಿನ ಆಶೀರ್ವಾದವನ್ನು ತರುತ್ತದೆ. (ಜ್ಞಾನೋಕ್ತಿ 15:23).
ದೇವರ ಮಹಿಮೆಗಾಗಿ ನಾವು ಪ್ರವಾದಿಸುವುದನ್ನು ಶ್ರದ್ಧೆಯಿಂದ ಎದುರು ನೋಡೋಣ.