WFTW Body: 

ಅಬ್ರಹಾಮನು, "ದೇವರನ್ನು ಘನಪಡಿಸುವವನಾಗಿ, ಆತನು ತನ್ನ ವಾಗ್ದಾನವನ್ನು ನೆರವೇರಿಸುವದಕ್ಕೆ ಸಮರ್ಥನೆಂದು ಪೂರಾ ಭರವಸವಿಟ್ಟು, ದೃಢನಂಬಿಕೆಯುಳ್ಳವನಾದನು" (ರೋಮಾ. 4:21) em>

ನಾವು ಅಸಾಧ್ಯವಾದ ಪರಿಸ್ಥಿತಿಗಳಲ್ಲೂ ದೇವರ ಮೇಲೆ ನಂಬಿಕೆ ಇರಿಸಿದಾಗ, ದೇವರಿಗೆ ಶ್ರೇಷ್ಠವಾದ ಮಹಿಮೆ ಸಲ್ಲುತ್ತದೆ. ಎಂತಹ ಜಟಿಲವಾದ ಸಮಸ್ಯೆ ಎದುರಾದರೂ ದೇವರು ಅದನ್ನು ನಿಭಾಯಿಸಬಲ್ಲರು, ಎಂದು ನಮಗೆ ತಿಳಿದಿದೆ. ಅವರು ಸೈತಾನನು ತಂದೊಡ್ಡುವ ಪ್ರತಿಯೊಂದು ಆತಂಕವನ್ನು - ಅದು ಎಲ್ಲಿಂದಲಾದರೂ ಬರಲಿ - ಬಗೆಹರಿಸಲು ಶಕ್ತರಾಗಿದ್ದಾರೆ. ಒಬ್ಬ ರಾಷ್ಟ್ರಾಧ್ಯಕ್ಷನ ಹೃದಯವೂ ದೇವರ ಕೈಯಲ್ಲಿದೆ, ಅವರು ನಮಗೆ ಅನುಕೂಲವಾಗುವ ರೀತಿಯಲ್ಲಿ ಅದನ್ನು ತಿರುಗಿಸಲು ಶಕ್ತರಾಗಿದ್ದಾರೆ (ಜ್ಞಾನೋ. 21:1)

ಹಾಗಾಗಿ ನಾವು ಯಾವಾಗಲೂ, ಎಂತಹ ಸಂದರ್ಭದಲ್ಲೂ, ದೇವರಲ್ಲಿ ನಂಬಿಕೆ ಇರಿಸಬೇಕು ಮತ್ತು ಅವರು ಸೈತಾನನನ್ನು ನಮ್ಮ ಕಾಲುಗಳ ಕೆಳಗೆ ಹಾಕಿ ತುಳಿಸಿಬಿಡುವರು, ಎಂಬ ನಮ್ಮ ನಂಬಿಕೆಯನ್ನು ತಪ್ಪದೆ ಬಾಯಿಂದ ಆರಿಕೆ ಮಾಡಬೇಕು. ಆಗ ಸೈತಾನನು ಏನೇ ಮಾಡಲಿ, ನಾವು ಆತನನ್ನು ಸೋಲಿಸುತ್ತೇವೆ. ನನ್ನ ಸ್ವಂತ ಜೀವನದಲ್ಲಿ ಹೀಗೆ ಆಗಿದ್ದನ್ನು ನಾನು ಪದೇ ಪದೇ ನೋಡಿದ್ದೇನೆ.

ನಾವು ಶಾಲೆಯಲ್ಲಿ ಮೇಲಿನ ತರಗತಿಗಳಿಗೆ ಹೋಗುತ್ತಿರುವಾಗ, ನಾವು ಬರೆಯುವ ಗಣಿತ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಹೆಚ್ಚು ಹೆಚ್ಚು ಕಠಿಣವಾದ ಪ್ರಶ್ನೆಗಳನ್ನು ಒಳಗೊಂಡಿರುವಂತೆ, ನಾವು ಈ ಲೋಕದಲ್ಲಿರುವಾಗ ದೇವರು ನಮಗೆ ಒಂದು ಆತ್ಮಿಕ ಶಿಕ್ಷಣವನ್ನು ನೀಡಲು ಬಯಸುವುದರಿಂದ, ಸಮಯ ಕಳೆದಂತೆ ನಮ್ಮ ಸಮಸ್ಯೆಗಳು ಹೆಚ್ಚು ಹೆಚ್ಚು ಕಠಿಣವಾಗುವುದನ್ನು ನಾವು ನಿರೀಕ್ಷಿಸಬಹುದು. ಆದಾಗ್ಯೂ, ನಾವು ಕಠಿಣ ಗಣಿತ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಕೆಳಗಿನ ತರಗತಿಗೆ ತಿರುಗಿ ಹೋಗಲು ಖಂಡಿತವಾಗಿ ಬಯಸುವುದಿಲ್ಲ! ಇದೇ ತರಹ ನಾವು ದೇವರ ಕೃಪೆಯಲ್ಲಿ ಬೆಳೆಯುತ್ತಿರುವಾಗ, ನಮಗೆ ಎದುರಾಗುವ ಸನ್ನಿವೇಶಗಳು ಹೆಚ್ಚು ಹೆಚ್ಚು ಜಟಿಲವಾಗುವುದನ್ನು ದೇವರು ಅನುಮತಿಸುತ್ತಾರೆ, ಎಂಬುದು ನಮಗೆ ಆಶ್ಚರ್ಯವನ್ನು ಉಂಟುಮಾಡಬಾರದು. ನಾವು ಇವುಗಳ ಮುಖಾಂತರ ಬಲಿಷ್ಠರು, ಧೈರ್ಯಶಾಲಿಗಳು ಮತ್ತು ದೃಢವಾದ ಕ್ರೈಸ್ತರಾಗುತ್ತೇವೆ.

ಎಲ್ಲಾ ವೇಳೆಯಲ್ಲಿ ನಮ್ಮ ಮನಸ್ಸಾಕ್ಷಿಯು ನಮ್ಮನ್ನು ಯಾವುದೇ ವಿಷಯದಲ್ಲಿ ದೂಷಿಸದಂತೆ ಎಚ್ಚರ ವಹಿಸಿರಿ. ನಾವು ಹಾಗೆ ನಡೆದುಕೊಂಡಾಗ ಮಾತ್ರ ದೇವರ ಮುಂದೆ ನಾವು ಧೈರ್ಯದಿಂದ ಬರಬಹುದು (1 ಯೋಹಾನ 3:21,22) ಮತ್ತು ನಮ್ಮ ಸಮಸ್ಯೆಗಳನ್ನು ಪರಿಹರಿಸುವಂತೆ ಅವರನ್ನು ಕೇಳಿಕೊಳ್ಳಬಹುದು. ಪರಿಶೋಧನೆಯ ಸಮಯದಲ್ಲಿ ದೇವರನ್ನು ಜ್ಞಾನಕ್ಕಾಗಿ ಬೇಡಿಕೊಳ್ಳುವುದೆಂದರೆ (ಯಾಕೋಬ. 1:1-7) , ಯಾವುದೇ ಸಮಸ್ಯೆ ನಮ್ಮನ್ನು ಎದುರಿಸಿದಾಗ, ಅದಕ್ಕೆ ಪರಿಹಾರ ಕೊಡುವಂತೆ ದೇವರನ್ನು ಕೇಳಿಕೊಳ್ಳುವುದು. ದೇವರ ಬಳಿ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇರುವುದರಿಂದ, ನಾವು ನಾನಾ ವಿಧವಾದ ಕಷ್ಟಗಳಲ್ಲಿ ಸಿಕ್ಕಿಕೊಂಡಾಗ, ಅದನ್ನು ’ಆನಂದಕರವಾದದ್ದು’ ಎಂದು ಎಣಿಸಬೇಕೆಂದು ಇಲ್ಲಿ ಯಾಕೋಬನು ಹೇಳುತ್ತಾನೆ, ಏಕೆಂದರೆ ದೇವರು ಆ ಸಮಸ್ಯೆಯನ್ನು ನಮ್ಮ ಪರವಾಗಿ ಬಗೆಹರಿಸುವಾಗ, ನಮಗೆ ದೇವರ ಒಂದು ಹೊಸ ಅನುಭವ ಲಭಿಸುತ್ತದೆ.

"ಯೇಸುವು ಆಶ್ಚರ್ಯಪಟ್ಟರು" ಎಂದು ನಾವು ಎರಡು ಸಲ ಮಾತ್ರ ಓದುತ್ತೇವೆ - ಒಂದು ಸಲ ’ನಂಬಿಕೆಯನ್ನು’ ನೋಡಿದಾಗ, ಮತ್ತು ಇನ್ನೊಂದು ಸಲ ’ನಂಬದೇ ಇದ್ದುದನ್ನು’ ನೋಡಿದಾಗ. ರೋಮ್ ರಾಜ್ಯದ ಶತಾಧಿಪತಿಯು, ’ಯೇಸುವು ಒಂದು ಮಾತು ಹೇಳಿದರೆ ಸಾಕು, ನನ್ನ ಆಳಿಗೆ ಗುಣವಾಗುವದು" ಎಂದಾಗ (ಆ ಆಳು ಅನೇಕ ಮೈಲಿಗಳಷ್ಟು ದೂರದಲ್ಲಿದ್ದನು), ಯೇಸುವು "ಆತನಲ್ಲಿದ್ದ ಅಂಥ ದೊಡ್ಡ ನಂಬಿಕೆಯನ್ನು ನೋಡಿ ಆಶ್ಚರ್ಯಪಟ್ಟರು" (ಮತ್ತಾ. 8:10) . ಇನ್ನೊಮ್ಮೆ ಅವರು ತನ್ನ ಸ್ವಂತ ಊರಿಗೆ ಬಂದಾಗ, ಅಲ್ಲಿನ ಜನರು ಅವರನ್ನು ನಂಬಲು ನಿರಾಕರಿಸಿದಾಗ, "ಅವರು ತನ್ನನ್ನು ನಂಬದೆ ಹೋದದ್ದಕ್ಕೆ ಆಶ್ಚರ್ಯಪಟ್ಟರು" (ಮಾರ್ಕ. 6:6) . ಆ ಶತಾಧಿಪತಿಯಲ್ಲಿ ಎಷ್ಟು ದೀನತೆಯಿತ್ತೆಂದರೆ, ಕರ್ತನಾದ ಯೇಸುವು ತನ್ನ ಮನೆಗೆ ಬರತಕ್ಕಷ್ಟು ಯೋಗ್ಯತೆಯೂ ಸಹ ತನ್ನಲ್ಲಿ ಇಲ್ಲವೆಂದು ಆತನು ಕರ್ತನಿಗೆ ಹೇಳಿದನು.

ಒಮ್ಮೆ ಕಾನಾನ್ಯದ ಒಬ್ಬ ಸ್ತ್ರೀಯು ತನ್ನ ಮಗಳನ್ನು ಗುಣಪಡಿಸುವಂತೆ ಕರ್ತನನ್ನು ಕೇಳಿಕೊಂಡಾಗ (ಆ ಹುಡುಗಿ ಅನೇಕ ಮೈಲಿಗಳಷ್ಟು ದೂರದಲ್ಲಿದ್ದಳು), ಯೇಸುವು ಈ ಸ್ತ್ರೀಯ ನಂಬಿಕೆಯನ್ನು ಬಹಳ ಅಪರೂಪವಾದ ನಂಬಿಕೆಯೆಂದು ಪ್ರಶಂಸಿಸಿದರು (ಮತ್ತಾ. 15:28). ಯೇಸುವು ಆಕೆಗೆ ಒಂದು ಚಿತ್ರಣದ ಮೂಲಕ, ನಾಯಿಮರಿಗಳಿಗೆ ಮಕ್ಕಳ ರೊಟ್ಟಿಯನ್ನು ಹಾಕುವುದು ಸರಿಯಲ್ಲವೆಂದು ಉತ್ತರ ನೀಡಿದಾಗ, ಆಕೆ ಒಡನೆಯೇ ಸಂಪೂರ್ಣ ದೀನತೆಯಿಂದ ತನ್ನ ಸ್ಥಾನ ಒಂದು ನಾಯಿಯ ಹಾಗೆ ಮೇಜಿನ ಕೆಳಗೆ ಎಂದು ಒಪ್ಪಿಕೊಂಡಳು. ಆಕೆ ಬೇಸರಿಸಲಿಲ್ಲ.

ಮೇಲಿನ ಎರಡು ಉದಾಹರಣೆಗಳನ್ನು ಹೋಲಿಸಿದಾಗ, ಅವುಗಳಲ್ಲಿ ಒಂದು ಸಾಮಾನ್ಯ ಸಂಗತಿಯನ್ನು ನಾವು ಕಾಣುತ್ತೇವೆ: ಅದು ಏನೆಂದರೆ ’ದೀನತೆ ಮತ್ತು ನಂಬಿಕೆಯ ನಡುವೆ ಬಹಳ ನಿಕಟ ಸಂಬಂಧವಿದೆ’. ನಾವು ಹೆಚ್ಚು ದೀನರಾದಷ್ಟು, ನಮ್ಮ ಸ್ವಂತ ಆತ್ಮವಿಶ್ವಾಸ ಕಡಿಮೆಯಾದಷ್ಟು, ನಮ್ಮ ಸ್ವ-ಪ್ರತಿಭೆ ಮತ್ತು ಸಾಧನೆಗಳ ಬಗ್ಗೆ ಯೋಚಿಸುವುದನ್ನು ನಾವು ಕಡಿಮೆ ಮಾಡಿದಷ್ಟು, ನಾವು ಹೆಚ್ಚಿನ ನಂಬಿಕೆಯನ್ನು ಪಡೆಯಲು ಸಾಧ್ಯವಾಗುತ್ತದೆ. ನಮ್ಮ ಸ್ವಾಭಿಮಾನವು ಹೆಚ್ಚಿದಷ್ಟು, ನಮ್ಮ ನಂಬಿಕೆಯು ಕಡಿಮೆಯಾಗುತ್ತದೆ. ಕರ್ತನ ಮುಂದೆ ನಿಲ್ಲುವ ಯೋಗ್ಯತೆ ನಮ್ಮಲ್ಲಿಲ್ಲವೆಂದು ನಾವು ಯಾವಾಗಲೂ ತಿಳಿದಿರಬೇಕು. ದೇವರು ಇದಕ್ಕೆ ಅವಕಾಶ ನೀಡಿರುವುದು ಅವರು ನಮಗೆ ತೋರಿಸಿದ ಮಹಾ ಕೃಪೆಯಾಗಿದೆ. ನಾವು ಎಂದಿಗೂ ಅದನ್ನು ಅಲ್ಪವಾಗಿ ಎಣಿಸಬಾರದು. ಆದುದರಿಂದ, ದೀನತೆಯನ್ನು ಪಡೆಯಲಿಕ್ಕಾಗಿ ನಿಮ್ಮ ಸಂಪೂರ್ಣ ಹೃದಯವನ್ನು ಒಪ್ಪಿಸಿಕೊಡಿರಿ.