ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಯೌವನಸ್ಥರಿಗೆ ಮನೆ ಸಭೆ
WFTW Body: 

ನಾವು ದೇವರ ವಾಗ್ದಾನಗಳನ್ನು ಹೊಂದಲು ಬಾಧ್ಯರಾಗುವುದು ಕೇವಲ ನಂಬಿಕೆ ಮತ್ತು ತಾಳ್ಮೆಯ ಮೂಲಕ, ಎಂಬುದಾಗಿ ನಾವು ’ಇಬ್ರಿಯರಿಗೆ 6:12'ರಲ್ಲಿ ಓದಿಕೊಳ್ಳುತ್ತೇವೆ. ಆದ್ದರಿಂದ ಕೇವಲ ನಂಬಿಕೆ ಇದ್ದರೆ ಸಾಲದು. ’ಇಬ್ರಿಯರಿಗೆ 10:36' ಸಹ ಇದನ್ನೇ ತಿಳಿಸುತ್ತದೆ - "ದೇವರ ಚಿತ್ತವನ್ನು ನೆರವೇರಿಸಿದ ನಂತರ ವಾಗ್ದಾನಗಳನ್ನು ಹೊಂದುವದಕ್ಕೆ ನಿಮಗೆ ತಾಳ್ಮೆ ಅವಶ್ಯವಾಗಿದೆ." ಮೇಲೆ ಪ್ರಸ್ತಾಪಿಸಿದ ವಚನಗಳಲ್ಲಿ ’ತಾಳ್ಮೆ’ ಎಂಬ ಪದವನ್ನು ಆಂಗ್ಲ ಭಾಷೆಯ 'NASB Bible' ಅನುವಾದದಲ್ಲಿ ’ಸಹನೆ’ ಎಂಬುದಾಗಿ ಭಾಷಾಂತರಿಸಲಾಗಿದೆ - ಮತ್ತು ಇದು ಯಥಾರ್ಥವಾದ ವರ್ಣನೆಯಾಗಿದೆ.

ನಮಗೆ ಸಮಸ್ಯೆಗಳನ್ನು ಒಡ್ಡುವವರ ವಿರುದ್ಧವಾಗಿ ನಾವು ಎಂದಿಗೂ ಗುಣಗುಟ್ಟುವುದಿಲ್ಲ, ಏಕೆಂದರೆ ಇತರರು ನಮಗೆ ಮಾಡುವ ಎಲ್ಲಾ ಸಂಗತಿಗಳನ್ನು ದೇವರು ನಮ್ಮ ಒಳ್ಳೆಯದಕ್ಕಾಗಿಯೇ ಸಂಕಲ್ಪಿಸುತ್ತಾರೆ (ರೋಮಾ. 8:28). ’ರೋಮಾಪುರದವರಿಗೆ 8:28'ರ ಈ ವಚನವು ನೀರನ್ನು ಶುದ್ಧೀಕರಿಸುವ ಒಂದು ’ಫಿಲ್ಟರ್’ನಂತಿದೆ. ಜನರು ಅದರಲ್ಲಿ ಎಷ್ಟು ಕೊಳಕು ನೀರನ್ನಾದರೂ ಸುರಿಯಬಹುದು, ಅದರಿಂದ ಹೊರಬರುವ ನೀರು ಸಂಪೂರ್ಣ ಸ್ವಚ್ಛವಾಗಿಯೂ ಮತ್ತು ಪರಿಶುದ್ಧವಾಗಿಯೂ ಇರುತ್ತದೆ. ಜನರು ನಮಗೆ ಒಳ್ಳೆಯದು ಅಥವಾ ಕೆಟ್ಟದ್ದು, ಏನೇ ಮಾಡಿದರೂ - ಅವರು ನಮ್ಮನ್ನು ಹೊಗಳಲಿ ಅಥವಾ ಶಪಿಸಲಿ, ಅವರು ನಮಗೆ ಸಹಾಯ ಮಾಡಲಿ ಅಥವಾ ಹಾನಿ ಮಾಡಲಿ - ನಾವು ’ರೋಮಾಪುರದವರಿಗೆ 8:28'ರ ವಚನವನ್ನು ನಂಬುವುದಾದರೆ, ಇವೆಲ್ಲಾ ಕಾರ್ಯಗಳಿಂದಲೂ ನಾವು ಯಾವಾಗಲೂ ಒಳ್ಳೆಯದನ್ನೇ ಪಡೆಯುತ್ತೇವೆ! ಆದರೆ ನಾವು ’ನಂಬಬೇಕು’. ನಂಬಿಕೆಯು ನೀರನ್ನು ಶುದ್ಧೀಕರಿಸುವ ’ಫಿಲ್ಟರ್’ ಉಪಕರಣದ ’ಸ್ವಿಚ್’ನಂತೆ ಕೆಲಸ ಮಾಡುತ್ತದೆ. ಆ ಉಪಕರಣಕ್ಕೆ ’ನಂಬಿಕೆ’ ಎಂಬ ’ಸ್ವಿಚ್’ನಿಂದ ವಿದ್ಯುತ್ ಶಕ್ತಿಯು ಹರಿಯದಿದ್ದರೆ, ಅದು ಕೆಲಸ ಮಾಡುವುದಿಲ್ಲ.

ಹಳೆಯ ಒಡಂಬಡಿಕೆಯಲ್ಲಿ, ಇಬ್ರಿಯ ಭಾಷೆಯ ’ರೆವಯ್ಯ’ (ಇದರ ಅರ್ಥ ’ಸಂಪೂರ್ಣತೆ’) ಎಂಬ ಪದವು ಕೇವಲ ಎರಡು ಸಲ ಮಾತ್ರ ಬಳಕೆಯಾಗಿದೆ:
(1) ಕೀರ್ತನೆಗಳು 23:5 - "ಉಕ್ಕಿ ಹರಿಯುವುದು" (KJV ಅನುವಾದ), "ತುಂಬಿ ಹೊರಸೂಸುವುದು" (NASB ಅನುವಾದ)
(2) ಕೀರ್ತನೆಗಳು 66:12 - "ಶ್ರೀಮಂತ ಸ್ಥಳ" (KJV ಅನುವಾದ), "ಸಮೃದ್ಧಿ" (NASB ಅನುವಾದ)

ಇವೆರಡು ವಚನಗಳನ್ನು ಜೊತೆಯಾಗಿ ನೋಡಿದಾಗ, ನಮಗೆ ಈ ಕೆಳಗಿನ ಆತ್ಮಿಕ ಸತ್ಯಾಂಶವು ತಿಳಿದು ಬರುತ್ತದೆ: ದೇವರು ನಮ್ಮ ತಲೆಗಳನ್ನು ತೈಲದಿಂದ ಅಭಿಷೇಕಿಸಿದ ನಂತರ (ಕೀರ್ತನೆಗಳು 23:5), ಅವರು ನಮ್ಮನ್ನು ಬಲೆಯಲ್ಲಿ ಸಿಲುಕಿಸುತ್ತಾರೆ (ಕಷ್ಟಕರ ಪರಿಸ್ಥಿತಿಗಳು), ನಮ್ಮ ಮೇಲೆ ಬಹಳ ಭಾರವಾದ ಹೊರೆಯನ್ನು ಹೊರಿಸುತ್ತಾರೆ (ಆದರೆ ನಮ್ಮ ಶಕ್ತಿ ಮೀರುವ ಶೋಧನೆಯಲ್ಲ), ನಮ್ಮ ತಲೆಯ ಮೇಲೆ ಮನುಷ್ಯರು ಸವಾರಿ ಮಾಡುವ ಅವಕಾಶವನ್ನು ಉಂಟುಮಾಡುತ್ತಾರೆ, ಮತ್ತು ನಮ್ಮನ್ನು ಬೆಂಕಿಯ ಮೂಲಕವೂ, ನೀರಿನ ಮೂಲಕವೂ ನಡೆಸುತ್ತಾರೆ (ಕೀರ್ತನೆಗಳು 66:11,12), ಮತ್ತು ಇವೆಲ್ಲವುಗಳ ಮೂಲಕ ನಮ್ಮನ್ನು ನಮ್ಮ ಪಾತ್ರೆಗಳು ತುಂಬಿ ಹೊರಸೂಸುವ ಸ್ಥಳಕ್ಕೆ ಬರಮಾಡುತ್ತಾರೆ. ಹಾಗಾಗಿ ನಾವು ಅಭಿಷೇಕದಿಂದ ಹೊರಸೂಸುವಿಕೆಗೆ ತಲುಪುವುದಕ್ಕೆ ಅನೇಕ ಶೋಧನೆಗಳನ್ನು ದಾಟಿ ಹೋಗಬೇಕಾಗುತ್ತದೆ. ಇದರ ನಂತರವೇ ನಾವು ಉಕ್ಕಿ ಹರಿಯುವ ಜೀವನಕ್ಕೆ ಬರುತ್ತೇವೆ.

ನಮ್ಮ ಈ ಮಾರ್ಗದಲ್ಲಿ ಬರುವ ಎಲ್ಲಾ ಶೋಧನೆಗಳು - ಇವು ಬೇರೆಯವರ ತಪ್ಪುಗಳಿಂದ ಉಂಟಾಗಿರಬಹುದು ಅಥವಾ ದುಷ್ಟ ಜನರ ಉದ್ದೇಶ ಪೂರ್ವಕ ದುಷ್ಟತನದಿಂದ ಬಂದಿರಬಹುದು, ಅಥವಾ ಆಕಸ್ಮಿಕವಾದ ಶೋಧನೆ ಆಗಿರಬಹುದು - ಇವೆಲ್ಲಾ ಸಂದರ್ಭಗಳಲ್ಲಿ ನಾವು ಸಂತೋಷಿಸಬಹುದು, ಏಕೆಂದರೆ ಇವೆಲ್ಲವೂ ನಮ್ಮ ಹಿತಕ್ಕಾಗಿಯೇ ಕೆಲಸ ಮಾಡುತ್ತವೆ - ಅಂದರೆ, ಇವುಗಳಿಂದಾಗಿ ನಾವು ಕ್ರಿಸ್ತನ ಸಾರೂಪ್ಯಕ್ಕೆ ಬರುವಂತೆ (’ರೋಮಾಪುರದವರಿಗೆ 8:29'ರಲ್ಲಿ ಹೇಳಿರುವಂತೆ) ದೇವರು ನಡೆಸುತ್ತಾರೆ.

ನಂಬಿಕೆ ಎಂಬುದು "ದೇವರ ಜ್ಞಾನ, ಬಲ ಮತ್ತು ಪ್ರೀತಿಯಲ್ಲಿ ಇರಿಸುವ ಸಂಪೂರ್ಣ ಭರವಸೆ"ಯಾಗಿದೆ - ಅಂದರೆ, ದೇವರು ನಮ್ಮ ಜೀವನದಲ್ಲಿ ಇಂತಹ ಸನ್ನಿವೇಶಗಳನ್ನು ಅನುಮತಿಸುವುದು ಮಾತ್ರವಲ್ಲದೆ, ವಾಸ್ತವವಾಗಿ ಇವುಗಳಿಂದ ನಮಗೆ ಅತ್ಯುತ್ತಮ ಫಲಿತಾಂಶ ಸಿಗುವಂತೆ ಅವುಗಳನ್ನು ನಿಯಂತ್ರಿಸಿ ಮಾರ್ಪಡಿಸುತ್ತಾರೆ, ಎಂಬ ಭರವಸೆಯಾಗಿದೆ.