WFTW Body: 

ದೇವರು ನಮ್ಮ ಶತ್ರುಗಳಿಗೆ ತಾನು ಶತ್ರುವಾಗಿರುತ್ತೇನೆಂದು ವಾಗ್ದಾನ ಮಾಡಿದ್ದಾರೆ (ವಿಮೋಚನಕಾಂಡ 23:22). ಹಳೆಯ ಒಡಂಬಡಿಕೆಯಲ್ಲಿ ಇಸ್ರಾಯೇಲ್ಯರ ಶತ್ರುಗಳೆಲ್ಲರೂ ಮಾನವರೇ ಆಗಿದ್ದರು. ಇವತ್ತು ನಮ್ಮ ಶತ್ರುಗಳು ಸೈತಾನ (ಮತ್ತು ಆತನ ದುಷ್ಟ ಪಿಶಾಚಿಗಳು) ಮತ್ತು ನಮ್ಮ ಶರೀರದ ಆಶೆ-ಅಭಿಲಾಷೆಗಳು ಮಾತ್ರವೇ ಆಗಿವೆ. ನಾವು ಮನುಷ್ಯಮಾತ್ರದವರ ಸಂಗಡ ಹೋರಾಡುವುದಿಲ್ಲ (ಎಫೆಸದವರಿಗೆ 6:12). ನೀವು ಮನುಷ್ಯರೊಂದಿಗೆ ಎಂದಿಗೂ ಹೋರಾಡುವುದಿಲ್ಲವೆಂದು ನಿರ್ಧರಿಸಿದರೆ, ಆಗ ಮಾತ್ರ ದೇವರು ನಿಮಗಾಗಿ ಹೋರಾಡುತ್ತಾರೆ. ದೇವರು ಯಾವಾಗಲೂ ನಿಮ್ಮ ಪರವಾಗಿ ಸೈತಾನನನ್ನು ವಿರೋಧಿಸುತ್ತಾರೆ ಎಂಬುದನ್ನು ನೆನಪಿರಿಸಿಕೊಳ್ಳಿರಿ.

ದೇವರು ಪೇತ್ರನಲ್ಲಿ ಹೆಚ್ಚಾದ ಭರವಸೆಯನ್ನು ಹೊಂದಿದ್ದರಿಂದ ಮತ್ತು ಆತನಿಗಾಗಿ ಅವರು ಒಂದು ಶ್ರೇಷ್ಠವಾದ ಸೇವೆಯನ್ನು ಯೋಜಿಸಿದ್ದರಿಂದ, ಸೈತಾನನಿಗೆ ಪೇತ್ರನನ್ನು ಗೋಧಿಯಂತೆ ಒನೆಯುವ ಅವಕಾಶವನ್ನು ನೀಡಲಾಯಿತು. ಆದರೆ ಆ ಶೋಧನೆಯ ಸಮಯದಲ್ಲಿ ಪೇತ್ರನ ನಂಬಿಕೆ ಕುಂದಿ ಹೋಗಬಾರದೆಂದು ಯೇಸುವು ಅವನಿಗಾಗಿ ಪ್ರಾರ್ಥಿಸಿದರು. ನೀವು ಸೈತಾನನಿಂದ ಶೋಧಿಸಲ್ಪಡುವಾಗಲೆಲ್ಲಾ ಯೇಸುವು ನಿಮಗಾಗಿ ಪ್ರಾರ್ಥಿಸುತ್ತಾ ಇರುತ್ತಾರೆ, ಎಂಬ ತಿಳುವಳಿಕೆಯು ಬಹಳ ಪ್ರೋತ್ಸಾಹಕರ ಸಂಗತಿಯಾಗಿದೆ.

ಒಂದು ಮನೆಯು ಬೆಂಕಿ ಹತ್ತಿ ಉರಿಯುತ್ತಿರುವಾಗ, ಅಲ್ಲಿರುವಂತ ಅತ್ಯಂತ ಅಮೂಲ್ಯ ವಸ್ತುವನ್ನು ರಕ್ಷಿಸಲು ಜನರು ಪ್ರಯತ್ನಿಸುತ್ತಾರೆ. ಆ ಮನೆಯೊಳಗೆ ಒಂದು ಚಿಕ್ಕ ಮಗುವಿದ್ದರೆ, ಅದರ ತಂದೆತಾಯಿ ಅದನ್ನು ರಕ್ಷಿಸಲು ಮುಂದಾಗುತ್ತಾರೆ, ಮತ್ತು ಅಲ್ಲಿರುವ ಹಳೆಯ ವಾರ್ತಾಪತ್ರಿಕೆಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುವುದಿಲ್ಲ. ಅದೇ ರೀತಿ ಪೇತ್ರನು ಉರಿಯುತ್ತಿರುವ ಬೆಂಕಿಯಂತ ಒಂದು ಸನ್ನಿವೇಶವನ್ನು ಎದುರಿಸಿದಾಗ ಆತನ ನಂಬಿಕೆಯು ಕುಂದ ಬಾರದು, ಎಂದು ಯೇಸುವು ಪ್ರಾರ್ಥಿಸಿದರು. ಆ ನಂಬಿಕೆ ಮಾತ್ರವೇ ಅತೀ ಅಮೂಲ್ಯವಾದ ಸಂಗತಿಯಾಗಿತ್ತು. ಮಿಕ್ಕ ಸಂಗತಿಗಳು ಹಳೆಯ ವಾರ್ತಾಪತ್ರಿಕೆಗಳಂತೆ ಇದ್ದವು - ಅಂದರೆ ಉಪಯೋಗವಿಲ್ಲದವುಗಳು.

ನೀವು ಸೈತಾನನಿಂದ ಶೋಧಿಸಲ್ಪಡುವ ಸಮಯದಲ್ಲಿ ನಿಮ್ಮ ನಂಬಿಕೆಯು ಕುಂದಿ ಹೋಗಲೇ ಬಾರದು. ನಿಮ್ಮಲ್ಲಿ ನಂಬಿಕೆಯಿದ್ದರೆ, ಪ್ರಾಣಸಂಕಟವೇ ಬಂದರೂ ಸಹ, ನೀವು ಈ ರೀತಿ ಅರಿಕೆ ಮಾಡುವಿರಿ: "ಪರಲೋಕದಲ್ಲಿರುವ ನನ್ನ ತಂದೆಯು ನನ್ನನ್ನು ಬಹಳವಾಗಿ ಪ್ರೀತಿಸುತ್ತಾರೆ ಮತ್ತು ಅವರು ಭೂಲೋಕವನ್ನೂ ಪರಲೋಕವನ್ನೂ ಆಳುವವರಾಗಿದ್ದಾರೆ. ಯೇಸು ಕ್ರಿಸ್ತನು ಶಿಲುಬೆಯ ಮೇಲೆ ಸೈತಾನನನ್ನು ಸೋಲಿಸಿದ್ದಾನೆ. ಸೈತಾನನು ಒಬ್ಬ ಸುಳ್ಳುಗಾರನು ಮತ್ತು ಆತನಿಗೆ ನನ್ನ ಜೀವನದ ಮೇಲೆ ಯಾವ ಹಕ್ಕೂ ಇಲ್ಲ. ದೇವರು ಎಲ್ಲಾ ಸಂಗತಿಗಳನ್ನು ನನ್ನ ಹಿತಕ್ಕೆ ಅನುಕೂಲವಾಗುವಂತೆ ಸಂಕಲ್ಪಿಸುತ್ತಿದ್ದಾರೆ." ನಂಬಿಕೆಯನ್ನು ಕುಂದಿ ಹೋಗದಂತೆ ಕಾಪಾಡಿಕೊಳ್ಳುವ ಒಬ್ಬ ವ್ಯಕ್ತಿಯು ಈ ರೀತಿಯಾಗಿ ಅರಿಕೆ ಮಾಡುತ್ತಾನೆ. ಶೋಧನೆಯ ಮೂಲಕ ಹಾದುಹೋದ ನಂತರ ಪೇತ್ರನು ಮಾನಸಾಂತರ ಹೊಂದುತ್ತಾನೆ ಮತ್ತು ಅನಂತರ ಆತನು ತನ್ನ ಸಹೋದರರನ್ನು ದೃಢಪಡಿಸುತ್ತಾನೆ, ಎಂದು ಯೇಸುವು ಆತನಿಗೆ ತಿಳಿಸಿದರು (ಲೂಕ. 22:31,32). ನಾವು ಶೋಧಿಸಲ್ಪಟ್ಟಾಗ ನಮ್ಮ ನಂಬಿಕೆಯು ಕುಂದಿ ಹೋದರೆ, ನಾವು ಇತರರನ್ನು ಬಲಪಡಿಸಲು ಸಾಧ್ಯವಾಗುವುದಿಲ್ಲ.

ಯೇಸುವು ಪೇತ್ರನನ್ನು "ಸೈತಾನನೇ" ಎಂಬುದಾಗಿ ಸಂಬೋಧಿಸಿದಾಗಲೂ ಪೇತ್ರನು ನೊಂದುಕೊಳ್ಳದೇ ಇದ್ದುದರಿಂದ, ಯೇಸುವು ಪೇತ್ರನ ಮೂಲಕ ಅನೇಕ ಕಾರ್ಯಗಳನ್ನು ಪೂರೈಸಲು ಸಾಧ್ಯವಾಯಿತು (ಮತ್ತಾಯನು 16:23). ಆದರೆ ಇಸ್ಕರಿಯೋತ ಯೂದನಿಗಾಗಿ ಯೇಸುವು ಪ್ರಾರ್ಥಿಸಲೇ ಇಲ್ಲ, ಏಕೆಂದರೆ ಯೇಸುವು ಬೇಥಾನ್ಯದಲ್ಲಿ ಆತನ ಒಂದು ಚಿಕ್ಕ ತಪ್ಪನ್ನು ತಿದ್ದುಪಡಿ ಮಾಡಿದ್ದಕ್ಕಾಗಿ ಆತನು ನೊಂದುಕೊಂಡು ಸಿಟ್ಟಾದನು (’ಯೋಹಾನನು 12:4-8' ಈ ವಚನದೊಂದಿಗೆ ’ಮತ್ತಾಯನು 26:8-15'ನ್ನು ಓದಿಕೊಳ್ಳಿರಿ).

ಕರ್ತನಾದ ಯೇಸುವು ನಿನ್ನನ್ನು ತಿದ್ದಿದಾಗ ನೀನು ಮನನೊಂದುಕೊಳ್ಳಬಾರದು. ಪ್ರತಿಯೊಬ್ಬರ ಮೂಲಕವೂ ದೇವರು ಒಂದು ದೊಡ್ಡ ಉದ್ದೇಶವನ್ನು ಈಡೇರಿಸಲು ಯೋಜಿಸಿದ್ದಾರೆ. ಆ ಉದ್ದೇಶ ದೊಡ್ಡದಾದಷ್ಟೂ, ಅಷ್ಟೇ ಹೆಚ್ಚಾಗಿ ಸೈತಾನನ ಮೂಲಕ ನೀವು ಶೋಧಿಸಲ್ಪಡುವುದನ್ನು ದೇವರು ಅನುಮತಿಸುತ್ತಾರೆ. ಆದರೆ ನೀವು ಪ್ರತಿಯೊಂದು ಶೋಧನೆಯಲ್ಲೂ ಗೆಲ್ಲುತ್ತೀರಿ ಮತ್ತು ವಿಶೇಷ ಜಯಶಾಲಿಗಳಾಗುತ್ತೀರಿ.