WFTW Body: 

ಮತ್ತಾಯ 25:1-13 ರಲ್ಲಿ, ಯೇಸುವು 10 ಮಂದಿ ಕನ್ಯೆಯರ ಬಗ್ಗೆ ಮಾತನಾಡಿದ್ದಾರೆ. ಅವರಲ್ಲಿ ಯಾರೂ ವ್ಯಭಿಚಾರಿಗಳು ಆಗಿರಲಿಲ್ಲ ಎಂಬುದನ್ನು ಗಮನಿಸಿ (ಆತ್ಮಿಕ ವ್ಯಭಿಚಾರಿಕೆಯ ವಿವರಣೆಯನ್ನು ಯಾಕೋಬ 4:4 ರಲ್ಲಿ ನೋಡಿರಿ). ಅವರೆಲ್ಲರೂ ಕನ್ಯೆಯರಾಗಿದ್ದರು. ಬೇರೊಂದು ರೀತಿಯಲ್ಲಿ ಹೇಳುವದಾದರೆ, ಅವರು ಹೊಂದಿದ್ದ ಸಾಕ್ಷಿ ಮನುಷ್ಯರ ದೃಷ್ಟಿಯಲ್ಲಿ ಉತ್ತಮವಾದಂಥದ್ದು ಆಗಿತ್ತು. ಅವರೆಲ್ಲರ ದೀಪಗಳು ಉರಿದು ಪ್ರಕಾಶಿಸುತ್ತಿದ್ದವು (ಮತ್ತಾಯ 5:16) . ಅವರು ಸತ್ಕಾರ್ಯಗಳನ್ನು ಮಾಡುವುದನ್ನು ಎಲ್ಲಾ ಜನರು ನೋಡಿದ್ದರು. ಹಾಗಿದ್ದರೂ, ಈ ಎಲ್ಲಾ ಕನ್ಯೆಯರಲ್ಲಿ, ಐದು ಜನ ಮಾತ್ರ ಜ್ಞಾನಿಗಳಾಗಿದ್ದರು. ಆದರೆ ಪ್ರಾರಂಭದಲ್ಲಿ ಇದು ಇತರ ಎಲ್ಲರಿಗೆ ಸ್ಪಷ್ಟವಾಗಿರಲಿಲ್ಲ. ಇವರಲ್ಲಿ ಕೇವಲ ಐದು ಜನರು ಮಾತ್ರ ತಮ್ಮ ಪಾತ್ರೆಗಳಲ್ಲಿ ಎಣ್ಣೆಯನ್ನು ತೆಗೆದುಕೊಂಡಿದ್ದರು (ಮತ್ತಾಯ 25:4) .

ಆ ರಾತ್ರಿಯ ವೇಳೆಯಲ್ಲಿ ಆ ಪಾತ್ರೆಗಳ ಎಣ್ಣೆಯು ಕಣ್ಣಿಗೆ ಕಾಣಿಸುತ್ತಿರಲಿಲ್ಲ, ಆದರೆ ದೀಪಗಳ ಬೆಳಕು ಎಲ್ಲರಿಗೂ ಕಾಣಿಸುತ್ತಿತ್ತು. ಇದು ಕತ್ತಲೆ ತುಂಬಿರುವ ಈ ಲೋಕದ ಜನರ ದೃಷ್ಟಿಗೆ ಕಾಣದಿರುವ, ದೇವರ ಮುಂದಿರುವ, ನಮ್ಮ ರಹಸ್ಯ ಜೀವಿತದ ಬಗ್ಗೆ ಹೇಳಿದ ಮಾತಾಗಿದೆ. ನಾವೆಲ್ಲರೂ ಪಾತ್ರೆಗಳನ್ನು ಹೊಂದಿದವರಾಗಿದ್ದೇವೆ. ಆದರೆ ಪ್ರಶ್ನೆ ಏನಪ್ಪಾ ಎಂದರೆ, ನಮ್ಮ ಆ ಪಾತ್ರೆಯಲ್ಲಿ ಎಣ್ಣೆ ಇದೆಯಾ ಅಥವಾ ಇಲ್ಲವಾ ಎಂಬುದಾಗಿ.

ಸತ್ಯವೇದದ ಉದ್ದಕ್ಕೂ ಎಣ್ಣೆಯು ಪವಿತ್ರಾತ್ಮನನ್ನು ಸೂಚಿಸುವಂತ ಚಿಹ್ನೆಯಾಗಿದೆ ಮತ್ತು ಈ ಸಾಮ್ಯದಲ್ಲಿ, ನಮ್ಮ ಆತ್ಮದಲ್ಲಿ ಪವಿತ್ರಾತ್ಮನು ಉಂಟುಮಾಡುವ ದೇವರ ಜೀವವನ್ನು ಇದು ತೋರಿಸಿಕೊಡುತ್ತದೆ. ಒಳಗಡೆ ಅಂತಹ ಜೀವವಿದ್ದಾಗ ಹೊರಗಡೆ ಕಾಣಿಸುವ ನಡವಳಿಕೆ ’ಬೆಳಕು’ ಆಗಿರುತ್ತದೆ (ಯೋಹಾನ 1:4) . ಇಲ್ಲಿ ಎಣ್ಣೆಯು ಒಳಗಿನ ಅಂಶವಾಗಿದೆ. ಅನೇಕರು ತಮ್ಮ ಹೊರಗಡೆಯ ಸಾಕ್ಷಿಯ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ. ಇದು ಅವರ ಮೂರ್ಖತನವಾಗಿದೆ. ನಮಗೆ ಸಂಕಟ ಮತ್ತು ಪರೀಕ್ಷೆಗಳು ಬಂದಾಗ, ಹೊರಗಡೆಯ ಬೆಳಕು ಮಾತ್ರ ಸಾಲದು ಎಂಬ ವಿಷಯ ಗಮನಕ್ಕೆ ಬರುತ್ತದೆ. ನಮ್ಮನ್ನು ವಿಜಯೋತ್ಸವಕ್ಕೆ ನಡೆಸುವದಕ್ಕೆ, ನಮ್ಮಲ್ಲಿ ಆಂತರಿಕ ದೈವಿಕ ಜೀವಿತದ ಆ ಒಂದು ಅಂಶ ಇರುವಂಥದ್ದು ಅಗತ್ಯವಾಗಿದೆ.

"ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿ ಹೋದರೆ, ನಿನ್ನ ಬಲ ಕೊಂಚವೇ ಆಗಿದೆ" (ಜ್ಞಾನೋಕ್ತಿಗಳು 24:10) . ಜೀವನದಲ್ಲಿ ಸಂಕಟದ ಸಂದರ್ಭಗಳು ನಾವು ಎಷ್ಟು ಬಲಹೀನರು ಅಥವಾ ಎಷ್ಟು ಬಲಿಷ್ಟರು ಎನ್ನುವದನ್ನು ನಮಗೆ ತೋರಿಸುತ್ತವೆ. ಈ ಸಾಮ್ಯದಲ್ಲಿ ಸಂಕಟದ ಸಮಯ ಯಾವುದೆಂದರೆ, ಮದಲಿಂಗನು ತನ್ನ ಬರುವಿಕೆಯನ್ನು ತಡಮಾಡಿದ್ದು ಆಗಿತ್ತು. ನಮ್ಮ ಆತ್ಮಿಕತೆಯ ನಿಜಸ್ಥಿತಿಯನ್ನು ರುಜುವಾತುಪಡಿಸುವಂತ ಸಮಯ ಇದಾಗಿದೆ.

ನಂಬಿಕೆಯುಳ್ಳವನು ಕೊನೆಯ ತನಕ ತಾಳ್ಮೆಯನ್ನು ಪ್ರದರ್ಶಿಸುತ್ತಾನೆ ಮತ್ತು ರಕ್ಷಣೆಯನ್ನು ಹೊಂದುತ್ತಾನೆ. ಜೀವನದಲ್ಲಿ ಒಳಗಿನ ಅಂಶ (ಪವಿತ್ರಾತ್ಮ) ಯಾರಲ್ಲಿ ಇದೆ ಮತ್ತು ಯಾರಲ್ಲಿ ಇಲ್ಲ ಎನ್ನುವದನ್ನು ಸಹ ಏರುಪೇರುಗಳ ಸಮಯವು ರುಜುವಾತು ಪಡಿಸುತ್ತದೆ. ಅನೇಕರು ತಕ್ಷಣಕ್ಕೆ ಮೊಳಕೆಯೊಡೆದ ಬೀಜದಂತಿರುತ್ತಾರೆ, ಆದರೆ ಅವರಲ್ಲಿ ಒಳಗಿನ ಜೀವಿತ ಇರುವುದಿಲ್ಲ. ಅವರ ಹೃದಯದಲ್ಲಿ ಮಣ್ಣಿನ ಆಳವಿರುವುದಿಲ್ಲ (ಮಾರ್ಕ 4:5).

ಅದಕ್ಕಾಗಿ ಹೊಸ ವಿಶ್ವಾಸಿಗಳ ಆತ್ಮಿಕತೆಯನ್ನು ಅಥವಾ ಅವರ ಹೃದಯಪೂರ್ವಕತೆಯನ್ನು ನಿರ್ಣಯಿಸುವಂತದ್ದು ಕಷ್ಟವಾಗುತ್ತದೆ. ನಾವು ತಾಳ್ಮೆಯನ್ನು ಹೊಂದಿದ್ದರೆ, ಸಮಯವು ಎಲ್ಲವನ್ನೂ ಪ್ರಕಟ ಪಡಿಸುತ್ತದೆ. ಕ್ರಿಸ್ತನ ಬರೋಣಕ್ಕಾಗಿ ಸಿದ್ಧತೆ ಮಾಡಿಕೊಳ್ಳುವಂತ ಮಾರ್ಗ ಯಾವುದೆಂದರೆ, ಒಳಗಿನ ಜೀವಿತದ ಶುದ್ಧತೆಯನ್ನು ಹೊಂದಿರುವುದು ಮತ್ತು ದೇವರ ಮುಂದೆ - ನಮ್ಮ ಸುತ್ತಲಿರುವ ಜನರಿಗೆ ಕಾಣಿಸದೆ ಇರುವಂತ ನಮ್ಮ ಆಲೋಚನೆಗಳು, ಮನೋಭಾವಗಳು ಮತ್ತು ಉದ್ದೇಶಗಳಲ್ಲಿ - ನಂಬಿಗಸ್ಥಿಕೆಯನ್ನು ಹೊಂದಿರುವುದಾಗಿದೆ. ಇದನ್ನು ನಾವು ಹೊಂದಿಲ್ಲವಾದರೆ, ನಾವು ಕ್ರಿಸ್ತನ ಬರೋಣಕ್ಕೆ ಸಿದ್ಧವಾಗಿದ್ದೇವೆ ಅಂದುಕೊಂಡು ನಮ್ಮನ್ನು ನಾವೇ ವಂಚಿಸಿಕೊಳ್ಳುತ್ತೇವೆ.