ಇಂದಿನ ಹೆಚ್ಚಿನ ಕ್ರೈಸ್ತ ವಿಶ್ವಾಸಿಗಳಲ್ಲಿ ಆದಿ ಕ್ರೈಸ್ತರಲ್ಲಿದ್ದ ಆತ್ಮಿಕ ಆಳ, ಸಮರ್ಪಣೆ ಅಥವಾ ಬಲ ಇವುಗಳಲ್ಲಿ ಯಾವುದೂ ಇದ್ದಂತೆ ತೋರುವುದಿಲ್ಲ.
ಇದಕ್ಕೆ ಕಾರಣವೇನೆಂದು ನೀವು ಹೇಳಬಲ್ಲಿರಾ?
ಅವರು ಸರಿಯಾಗಿ ಮಾನಸಾಂತರ ಹೊಂದದೆ ಇರುವುದೇ ಇದಕ್ಕೆ ಮೂಲಕಾರಣವಾಗಿದೆ.
"ದೇವರ ಕಡೆಗೆ ತಿರುಗಿಕೊಂಡು ಸುವಾರ್ತೆಯನ್ನು ನಂಬಿರಿ," ಎಂಬುದು ಸ್ವತಃ ಯೇಸುವು ಸಾರಿದ ಸಂದೇಶವಾಗಿತ್ತು (ಮಾರ್ಕ. 1:15). ಆತನು ತನ್ನ ಅಪೊಸ್ತಲರಿಗೂ ಅದೇ ಸಂದೇಶವನ್ನು ಸಾರುವಂತೆ ಆಜ್ಞಾಪಿಸಿದನು (ಲೂಕ. 24:47). ಅವರು ನಿಖರವಾಗಿ ಅದನ್ನೇ ಮಾಡಿದರು (ಅ.ಕೃ. 20:21).
ದೇವರ ವಾಕ್ಯವು ಈ ವಿಷಯವನ್ನು ಬಹು ಸ್ಪಷ್ಟವಾಗಿ ತಿಳಿಯಪಡಿಸುತ್ತದೆ. ನೀವು ನಿಜವಾಗಿ ಮತ್ತು ಸಂಪೂರ್ಣವಾಗಿ ಪರಿವರ್ತನೆ ಹೊಂದಬೇಕೆಂದು ಬಯಸುವುದಾದರೆ, ಮಾನಸಾಂತರ ಮತ್ತು ನಂಬಿಕೆಯನ್ನು ಪ್ರತ್ಯೇಕಿಸಬಾರದು. ದೇವರು ಇವೆರಡನ್ನೂ ಕೂಡಿಸಿದ್ದಾರೆ. ಹಾಗಾಗಿ ದೇವರು ಕೂಡಿಸಿದ್ದನ್ನು ಯಾವ ಮನುಷ್ಯನೂ ಅಗಲಿಸಬಾರದು.
ವಾಸ್ತವವಾಗಿ, ಮಾನಸಾಂತರ ಹಾಗೂ ನಂಬಿಕೆ ಇವೆರಡು ಅಂಶಗಳು ಕ್ರೈಸ್ತ ಜೀವಿತದ ಅಸ್ತಿವಾರದಲ್ಲಿ ಎಲ್ಲಕ್ಕೂ ಮೊದಲು ಸೇರಿಕೊಳ್ಳಬೇಕಾದ ಅಂಶಗಳಾಗಿವೆ (ಇಬ್ರಿ. 6:1). ನೀವು ಸರಿಯಾದ ಮಾನಸಾಂತರವನ್ನು ಅನುಭವಿಸದಿದ್ದರೆ, ನಿಮ್ಮ ಅಸ್ತಿವಾರವು ನಿಶ್ಚಯವಾಗಿ ದೋಷಪೂರಿತವಾಗಿರುತ್ತದೆ. ತರುವಾಯ, ಇದರ ಪರಿಣಾಮವಾಗಿ ನಿಮ್ಮ ಇಡೀ ಕ್ರೈಸ್ತ ಜೀವಿತವು ಭದ್ರತೆಯಿಲ್ಲದ್ದು ಆಗಿರುತ್ತದೆ.
ನಕಲಿ ಮಾನಸಾಂತರವನ್ನು ಹೊಂದಿದ ಕೆಲವರ ಉದಾಹರಣೆಗಳನ್ನು ನಾವು ಸತ್ಯವೇದದಲ್ಲಿ ಕಾಣುತ್ತೇವೆ.
ಅರಸನಾದ ಸೌಲನು ದೇವರಿಗೆ ಅವಿಧೇಯನಾದಾಗ, ತಾನು ಪಾಪಮಾಡಿದ್ದೇನೆಂದು ಸಮುವೇಲನ ಮುಂದೆ ಒಪ್ಪಿಕೊಂಡನು. ಆದರೆ ಅದು ಜನರಿಗೆ ಗೊತ್ತಾಗಬಾರದೆಂದು ಅವನು ಅಪೇಕ್ಷಿಸಿದನು. ಅವನು ಇನ್ನೂ ಮನುಷ್ಯರ ಮಾನ್ಯತೆಯ ಹಂಬಲವನ್ನು ಬಿಡಲಿಲ್ಲ. ಅವನು ಯಥಾರ್ಥವಾದ ಮಾನಸಾಂತರವನ್ನು ಪಡೆದಿರಲಿಲ್ಲ. ಅವನು ತಾನು ಸಿಕ್ಕಿಹಾಕಿಕೊಂಡೆನೆಂದು ವಿಷಾದಿಸಿದನು (1 ಸಮು. 15:24-30). ಸೌಲನು ಮತ್ತು ಪಾಪದಲ್ಲಿ ಬಿದ್ದರೂ ತನ್ನ ಪಾಪವನ್ನು ಬಹಿರಂಗವಾಗಿ ಒಪ್ಪಿಕೊಂಡ ಅರಸನಾದ ದಾವೀದ ಇವರ ನಡುವಿನ ವ್ಯತ್ಯಾಸ ಇದೇ ಆಗಿತ್ತು (ಕೀರ್ತ. 51).
ಅರಸನಾದ ಅಹಾಬನು ಸೌಲನಂತ ಮತ್ತೊಬ್ಬ ವ್ಯಕ್ತಿಯಾಗಿದ್ದನು. ದೇವರು ಅವನನ್ನು ನ್ಯಾಯತೀರ್ಪಿಗೆ ಒಳಪಡಿಸುತ್ತಾರೆಂದು ಎಲೀಯನು ಅವನನ್ನು ಎಚ್ಚರಿಸಿದಾಗ, ಅವನು ತನ್ನ ದುಃಸ್ಥಿತಿಯ ಬಗ್ಗೆ ಶೋಕಿಸಿದನು. ಅವನು ಗೋಣೀತಟ್ಟನ್ನು ಸಹ ತೊಟ್ಟುಕೊಂಡು ತನ್ನ ಪಾಪಗಳಿಗಾಗಿ ದುಃಖಿಸಿದನು (1 ಅರಸು. 21:27-29). ಆದರೆ ಅವನು ನಿಜವಾಗಿ ಪಶ್ಚಾತ್ತಾಪ ಪಡಲಿಲ್ಲ. ಅವನು ಕೇವಲ ದೇವರ ನ್ಯಾಯತೀರ್ಪಿಗೆ ಹೆದರಿದನು!
-=-=-=-=-=-= "ನಿಜವಾದ ಮಾನಸಾಂತರದಲ್ಲಿ ನಮ್ಮ ಸಂಪೂರ್ಣ ವ್ಯಕ್ತಿತ್ವ - ನಮ್ಮ ಮನಸ್ಸು, ನಮ್ಮ ಭಾವನೆಗಳು ಮತ್ತು ನಮ್ಮ ಚಿತ್ತ - ಇವೆಲ್ಲವೂ ಒಳಗೊಂಡಿರುತ್ತವೆ" -=-=-=-=-=-=
ಇಸ್ಕರಿಯೋತ ಯೂದನ ದೃಷ್ಟಾಂತವು ನಕಲು ಮಾನಸಾಂತರದ ಒಂದು ಸ್ಪಷ್ಟ ಉದಾಹರಣೆಯಾಗಿದೆ. ಅವನು ಯೇಸುವಿಗೆ ಮರಣ ದಂಡನೆಯ ತೀರ್ಪು ಕೊಡಲ್ಪಟ್ಟದ್ದನ್ನು ನೋಡಿ ವಿಷಾದಿಸಿದನು ಮತ್ತು "ನಾನು ಪಾಪ ಮಾಡಿದ್ದೇನೆ," ಎಂದು ಹೇಳಿಕೊಂಡನು (ಮತ್ತಾ. 27:3-5). ಆದರೆ ಅವನು ತನ್ನ ಪಾಪವನ್ನು ಯಾಜಕರಿಗೆ ಅರಿಕೆ ಮಾಡಿದನು - ಈ ದಿನವೂ ಕೆಲವರು ಇದೇ ಸಂಪ್ರದಾಯವನ್ನು ಮುಂದುವರಿಸುತ್ತಿದ್ದಾರೆ! ಯೂದನು ಮಾನಸಾಂತರ ಪಡಲಿಲ್ಲ - ಆದರೆ ಆತನು ತಾನು ಮಾಡಿದ ಕಾರ್ಯಕ್ಕಾಗಿ ಬೇಸತ್ತಿರಬಹುದು. ಅವನು ಯಥಾರ್ಥವಾಗಿ ಪಶ್ಚಾತ್ತಾಪ ಪಟ್ಟಿದ್ದರೆ, ಮುರಿದ ಮನಸ್ಸಿನಿಂದ ಕರ್ತನ ಬಳಿಗೆ ಹೋಗಿ ಕ್ಷಮಾಪಣೆಯನ್ನು ಯಾಚಿಸುತ್ತಿದ್ದನು. ಆದರೆ ಆತನು ಅದನ್ನು ಮಾಡಲಿಲ್ಲ.
ಈ ಉದಾಹರಣೆಗಳಿಂದ ನಾವು ಕಲಿತುಕೊಳ್ಳುವಂಥದ್ದು ಬಹಳವಿದೆ - ಯಾವುದು ಮಾನಸಾಂತರವಲ್ಲ, ಎಂಬುದರ ಕುರಿತಾಗಿ!
"ವಿಗ್ರಹಗಳನ್ನು ಬಿಟ್ಟುಬಿಟ್ಟು ದೇವರ ಕಡೆಗೆ ತಿರುಗಿಕೊಳ್ಳುವುದು" ನಿಜವಾದ ಮಾನಸಾಂತರವಾಗಿದೆ (1 ಥೆಸ. 1:9).
ವಿಗ್ರಹಗಳೆಂದರೆ ಅನ್ಯಜನರ ದೇವಾಲಯಗಳಲ್ಲಿ ಕಂಡುಬರುವ ಮರ ಹಾಗೂ ಕಲ್ಲಿನ ಮೂರ್ತಿಗಳು ಮಾತ್ರವೇ ಅಲ್ಲ. ಅವುಗಳಂತೆ ವಿಕಾರವಾಗಿ ಕಾಣಿಸದಿದ್ದರೂ ಅವುಗಳಷ್ಟೇ ಅಪಾಯಕರ ವಿಗ್ರಹಗಳನ್ನು ಜನರು ಇಂದು ಆರಾಧಿಸುತ್ತಿದ್ದಾರೆ. ಈ ವಿಗ್ರಹಗಳು ಯಾವುವೆಂದರೆ, ಭೋಗ, ಸುಖಸೌಲಭ್ಯ, ಹಣ, ಸ್ವಗೌರವ, ಸ್ವ-ಚಿತ್ತ ಇತ್ಯಾದಿ.
ನಾವೆಲ್ಲರೂ ಇವುಗಳನ್ನು ಅನೇಕ ವರ್ಷಗಳಿಂದ ಆರಾಧಿಸುತ್ತಾ ಬಂದಿದ್ದೇವೆ. ಇಂತಹ ವಿಗ್ರಹಗಳ ಆರಾಧನೆಯನ್ನು ಕೊನೆಗೊಳಿಸಿ, ಅವುಗಳನ್ನು ತ್ಯಜಿಸಿ, ದೇವರ ಕಡೆಗೆ ತಿರುಗಿಕೊಳ್ಳುವುದೇ ನಿಜವಾದ ಮಾನಸಾಂತರವಾಗಿದೆ.
ನಿಜವಾದ ಮಾನಸಾಂತರದಲ್ಲಿ ನಮ್ಮ ಸಂಪೂರ್ಣ ವ್ಯಕ್ತಿತ್ವ - ನಮ್ಮ ಮನಸ್ಸು, ನಮ್ಮ ಭಾವನೆಗಳು ಮತ್ತು ನಮ್ಮ ಚಿತ್ತ - ಇವೆಲ್ಲವೂ ಒಳಗೊಂಡಿರುತ್ತವೆ.
ಮಾನಸಾಂತರವೆಂದರೆ, ಮೊದಲನೆಯದಾಗಿ, ಪಾಪ ಹಾಗೂ ಲೋಕದ ಕುರಿತಾಗಿ ನಮ್ಮ ಮನಸ್ಸನ್ನು ಬದಲಾಯಿಸುವುದಾಗಿದೆ. ನಮ್ಮ ಪಾಪವು ನಮ್ಮನ್ನು ದೇವರಿಂದ ಪ್ರತ್ಯೇಕಿಸಿದೆ ಎಂಬುದರ ಅರಿವು ನಮಗೆ ಉಂಟಾಗುತ್ತದೆ. ಇದಲ್ಲದೆ, ಈ ಲೋಕದ ಸಂಪೂರ್ಣ ಜೀವನ ಮಾರ್ಗವು ದೇವರ ವಿರುದ್ಧವಾಗಿದೆ, ಎಂಬುದನ್ನು ಸಹ ನಾವು ಕಂಡುಕೊಳ್ಳುತ್ತೇವೆ. ಅದಲ್ಲದೆ, ದೇವರನ್ನು ಗೌರವಿಸದೇ ಜೀವಿಸುವ ಜೀವನ ಮಾರ್ಗವನ್ನು ಬಿಟ್ಟುಬಿಡಬೇಕೆಂದು ನಾವು ಇಚ್ಛಿಸುತ್ತೇವೆ.
ಎರಡನೆಯದಾಗಿ, ಮಾನಸಾಂತರದಲ್ಲಿ ನಮ್ಮ ಭಾವನೆಗಳು ಸಹ ಒಳಗೊಂಡಿರುತ್ತವೆ. ನಾವು ಇದು ವರೆಗೆ ಜೀವಿಸಿದ ಜೀವನಕ್ಕಾಗಿ ನಾವು ಮರುಗುತ್ತೇವೆ (2 ಕೊರಿ. 7:10). ನಾವು ನಮ್ಮ ಹಿಂದಿನ ನಡವಳಿಕೆಯನ್ನು ದ್ವೇಷಿಸುತ್ತೇವೆ. ಅದಕ್ಕೂ ಹೆಚ್ಚಾಗಿ, ಯಾರಿಗೂ ಕಾಣಿಸದಂತೆ ನಮ್ಮೊಳಗೆ ಅಡಗಿರುವ ಮಹಾ ದುಷ್ಟತನವನ್ನು ನಾವು ಕಂಡುಕೊಂಡು, ಅದಕ್ಕಾಗಿ ಹೇಸಿಕೊಳ್ಳುತ್ತೇವೆ (ಯೆಹೆಜ್ಕೇಲನು 36:31).
ನಾವು ನಮ್ಮ ಸ್ವೇಚ್ಛಾ ಜೀವನದಿಂದ ದೇವರನ್ನು ಬಹಳವಾಗಿ ನೋಯಿಸಿದ್ದಕ್ಕಾಗಿ ಅತ್ತು ಗೋಳಾಡುತ್ತೇವೆ. ಸತ್ಯವೇದದ ಅನೇಕ ಶ್ರೇಷ್ಠ ಪುರುಷರು ತಮ್ಮ ಪಾಪಗಳ ಅರುಹನ್ನು ಹೊಂದಿದಾಗ ಅವರ ಪ್ರತಿಕ್ರಿಯೆ ಇದೇ ಆಗಿತ್ತು. ದಾವೀದ (ಕೀರ್ತ. 51), ಯೋಬ (ಯೋಬನು 42:6) ಮತ್ತು ಪೇತ್ರ (ಮತ್ತಾ. 26:75) - ಇವರೆಲ್ಲರೂ ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪ ಪಟ್ಟಾಗ ವ್ಯಥೆಗೊಂಡು ಅತ್ತರು.
ನಾವು ನಮ್ಮ ಪಾಪಗಳಿಗಾಗಿ ದುಃಖಿಸಿ ಗೋಳಾಡಬೇಕೆಂದು ಯೇಸುವು ಮತ್ತು ಅಪೊಸ್ತಲರುಗಳು ಸಹ ನಮ್ಮನ್ನು ಪ್ರೋತ್ಸಾಹಿಸಿದ್ದಾರೆ (ಮತ್ತಾ. 5:4; ಯಾಕೋಬ. 4:9). ಇದೇ ದೇವರ ಕಡೆಗೆ ತಿರುಗಿಕೊಳ್ಳುವ ಮಾರ್ಗವಾಗಿದೆ.
ಕೊನೆಯದಾಗಿ, ಮಾನಸಾಂತರದಲ್ಲಿ ನಮ್ಮ ಚಿತ್ತವು ಸೇರಿರುತ್ತದೆ. ನಮ್ಮ ಹಠಮಾರಿತನದ ಸ್ವ-ಚಿತ್ತವನ್ನು - ಅಂದರೆ, ‘ಸ್ವಂತ ಮಾರ್ಗವನ್ನೇ’ ಬಯಸುವ ಸ್ವಭಾವವನ್ನು - ಯೇಸುವಿಗೆ ಅಧೀನಪಡಿಸಿ, ಯೇಸುವನ್ನು ನಮ್ಮ ಜೀವಿತದ ಒಡೆಯನನ್ನಾಗಿ ಮಾಡಬೇಕು. ಅಂದರೆ, ಇನ್ನು ಮುಂದೆ ನಾವು ಏನು ಮಾಡಬೇಕೆಂದು ದೇವರು ಬಯಸುತ್ತಾರೋ - ಅದು ಎಷ್ಟು ವೆಚ್ಚವುಳ್ಳದ್ದು, ನಮ್ಮನ್ನು ಎಷ್ಟು ತಗ್ಗಿಸುವಂಥದ್ದು ಆಗಿದ್ದರೂ - ನಾವು ಅದನ್ನು ಕೈಗೊಳ್ಳಲು ಸಿದ್ಧ ಮನಸ್ಸನ್ನು ಹೊಂದಿರಬೇಕು.
ತಪ್ಪಿಹೋದ ಮಗನು ಮುರಿಯಲ್ಪಟ್ಟವನಾಗಿಯೂ, ತನ್ನ ತಂದೆ ಏನೇ ಹೇಳಿದರೂ ಅದನ್ನು ಮಾಡಲು ಸಿದ್ದ ಮನಸ್ಸುಳ್ಳವನಾಗಿಯೂ ಮನೆಗೆ ಹಿಂದಿರುಗಿದನು. ಇದೇ ನಿಜವಾದ ಮಾನಸಾಂತರವಾಗಿದೆ (ಲೂಕ. 15:11-24).
ನಾವು ನಮ್ಮ ಜೀವಿತಕಾಲದಲ್ಲಿ ಮಾಡಿರುವ ಪ್ರತಿಯೊಂದು ಪಾಪವನ್ನು ದೇವರಿಗೆ ಅರಿಕೆ ಮಾಡಬೇಕಾಗಿಲ್ಲ. ಹೇಗೂ ಅವೆಲ್ಲವನ್ನು ನೆನಪಿಸಿಕೊಳ್ಳುವುದು ಅಸಾಧ್ಯಕರವೇ! ತಪ್ಪಿಹೋದ ಮಗನು ಹಾಗೆ ಮಾಡಲಿಲ್ಲ. ಅವನು ಹೇಳಿದ್ದು ಇಷ್ಟೇ, "ಅಪ್ಪಾ, ನಾನು ಪಾಪ ಮಾಡಿದ್ದೇನೆ." ನಾವು ಸಹ ಇದನ್ನೇ ಹೇಳಬೇಕಾಗಿದೆ.
ಆದರೆ ಇಸ್ಕರಿಯೋತ ಯೂದನು ಸಹ "ನಾನು ಪಾಪ ಮಾಡಿದೆನು," ಎಂದು ಹೇಳಿದ್ದನ್ನು ಜ್ಞಾಪಿಸಿಕೊಳ್ಳಿರಿ. ಆದಾಗ್ಯೂ, ಅವನ ಅರಿಕೆಗೂ ತಪ್ಪಿಹೋದ ಮಗನ ಅರಿಕೆಗೂ ಬಹಳಷ್ಟು ವ್ಯತ್ಯಾಸವಿದೆ. ದೇವರು ಕೇವಲ ನಾವು ಹೇಳುವ ಮಾತುಗಳನ್ನಷ್ಟೇ ಗಮನಿಸುವುದಿಲ್ಲ. ಅವರು ನಮ್ಮ ಮಾತುಗಳ ಹಿಂದೆ ಇರುವಂತ ನಮ್ಮ ಮನೋಭಾವವನ್ನು ವಿವೇಚಿಸಿ, ಅದಕ್ಕೆ ತಕ್ಕಂತೆ ನಮ್ಮೊಂದಿಗೆ ವ್ಯವಹರಿಸುತ್ತಾರೆ.