WFTW Body: 

'2ಕೊರಿಂಥದವರಿಗೆ 7:1'ರಲ್ಲಿ, ದೇವರ ಭಯದಿಂದ ಕೂಡಿದವರಾಗಿ ಪರಿಪೂರ್ಣ ಪವಿತ್ರತೆಗೆ ನಡೆಯುವಂತೆ ನಮಗೆ ಆಜ್ಞಾಪಿಸಲಾಗಿದೆ. ಹಾಗಾಗಿ ಇಂದು ನಮ್ಮ ಪವಿತ್ರತೆಯು ಹಿಂದಿನ ವರ್ಷಕ್ಕಿಂತ ಹೆಚ್ಚು ಪರಿಪೂರ್ಣವಾಗಿರದಿದ್ದರೆ, ಅದು ನಮ್ಮಲ್ಲಿ ಸಾಕಷ್ಟು ದೇವರ ಭಯ ಇಲ್ಲದಿರುವುದನ್ನು ಸಾಬೀತು ಪಡಿಸುತ್ತದೆ. ಈ ವಿಷಯದಲ್ಲಿ ಹಿರಿಯರಾದ ನಾವು ಒಬ್ಬರಿಗೊಬ್ಬರು ಸಹಾಯ ಮಾಡಬೇಕಾಗಿದೆ - ಏಕೆಂದರೆ ನಮ್ಮ ಸಹೋದರರನ್ನು ಕಾಯುವುದು ನಮ್ಮ ಕರ್ತವ್ಯವಾಗಿದೆ. ಆದ್ದರಿಂದ ದೇವರು ಪ್ರತಿಯೊಂದು ದೇವಸಭೆಯಲ್ಲಿ ಒಬ್ಬರಿಗಿಂತ ಹೆಚ್ಚು ಸಭಾಹಿರಿಯರನ್ನು ನೇಮಿಸುತ್ತಾರೆ. ’ಇಬ್ರಿಯರಿಗೆ 3:13'ರಲ್ಲಿ, ಪಾಪದಿಂದ ಮೋಸಹೋಗಿ ಕಠಿಣರಾಗದಂತೆ ಪ್ರತಿನಿತ್ಯವೂ ಒಬ್ಬರನ್ನೊಬ್ಬರು ಎಚ್ಚರಿಸಬೇಕೆಂದು ನಮಗೆ ತಿಳಿಸಲಾಗಿದೆ. ಈ ರೀತಿಯಾಗಿ ಒಬ್ಬರಿಗೊಬ್ಬರು ಸಹಾಯ ಮಾಡುವ ಮೂಲಕ ನಾವು ಮೋಸಹೋಗದೆ ತಪ್ಪಿಸಿಕೊಳ್ಳಬಹುದು.

ಯೆಶಾಯನು 11:3'ರಲ್ಲಿ, ದೇವರ ಆತ್ಮನು ಯೇಸುವನ್ನು ’ದೇವರ ಭಯದಿಂದ ಚುರುಕಾಗಿ ನಡೆಯುವಂತೆ ಮಾಡಿದನು’ ಎಂದು ನಾವು ಓದುತ್ತೇವೆ. ನಾವು ಪವಿತ್ರಾತ್ಮನಿಗೆ ಅವಕಾಶ ನೀಡಿದರೆ - ಆತನು ನಾವು ಸಹ ದೇವರ ಭಯಕ್ಕೆ ಒಳಗಾಗುವಂತೆ ಮಾಡಬಲ್ಲನು. ನಾವು ನಿಜವಾಗಿ ಪವಿತ್ರಾತ್ಮಭರಿತರಾಗಿದ್ದರೆ, ನಮ್ಮಲ್ಲಿ ದೇವರ ಭಯಭಕ್ತಿಯು ತುಂಬಿರುತ್ತದೆ. ಯಾವಾಗಲೂ ದೇವರು ನಮ್ಮ ಪರವಾಗಿದ್ದಾರೆ ಮತ್ತು ಪವಿತ್ರಾತ್ಮನ ತುಂಬುವಿಕೆಗಾಗಿ ನಮ್ಮಲ್ಲಿರುವ ಆಸಕ್ತಿಗಿಂತ, ನಮ್ಮನ್ನು ಪವಿತ್ರಾತ್ಮನಿಂದ ತುಂಬಿಸಲು ದೇವರಿಗೆ ಹೆಚ್ಚಿನ ಆಸಕ್ತಿಯಿದೆ. ನಮ್ಮಲ್ಲಿ ಯಾವ ದೌರ್ಬಲ್ಯಗಳಿದ್ದರೂ, ನಾವು ಯಾರೇ ಆಗಿದ್ದರೂ, ದೇವರು ನಮ್ಮ ಮೂಲಕ ಒಂದು ದೊಡ್ಡ ಕಾರ್ಯವನ್ನು ಮಾಡಬಲ್ಲರು. ನಾವು ಮಾಡಬೇಕಾದದ್ದು ಇಷ್ಟೇ - ನಮ್ಮನ್ನು ತಗ್ಗಿಸಿಕೊಂಡು ಯಾವಾಗಲೂ ದೇವರ ಸಾನ್ನಿಧ್ಯದಲ್ಲಿ ಇರುವುದು. "ಯಾವಾಗಲೂ ದೇವರು ನಮ್ಮ ಪರವಾಗಿ, ನಮ್ಮ ಶರೀರಭಾವದ ವಿರುದ್ಧವಾಗಿ ಮತ್ತು ಸೈತಾನನ ವಿರುದ್ಧವಾಗಿ ಕಾರ್ಯ ಮಾಡುತ್ತಾರೆ."

ನಾವು ಜೀವಿಸುತ್ತಿರುವ ಕಾಲಮಾನವು ಎಂಥದ್ದೆಂದರೆ, ಕ್ರೈಸ್ತರ ನಡುವೆ ಬೇರೊಬ್ಬ ಯೇಸುವನ್ನು (ಶಿಷ್ಯತ್ವಕ್ಕಾಗಿ ಒತ್ತಾಯಿಸದವನು) ಘೋಷಿಸಲಾಗುತ್ತಿದೆ, ಕ್ರೈಸ್ತರು ಮತ್ತೊಂದು ಆತ್ಮವನ್ನು ಪಡೆಯುತ್ತಿದ್ದಾರೆ (ನಕಲಿ ವರಗಳನ್ನು ಕೊಡುವಂತ ಮತ್ತು ಜನರನ್ನು ಪವಿತ್ರಗೊಳಿಸಲು ವಿಫಲವಾಗಿರುವ ಆತ್ಮ), ಮತ್ತು ಬೇರೊಂದು ಸುವಾರ್ತೆಯನ್ನು (ಆರೋಗ್ಯ ಮತ್ತು ಐಶ್ವರ್ಯದ ಕುರಿತಾದ ಸುವಾರ್ತೆ) ಸಾರಲಾಗುತ್ತಿದೆ (2 ಕೊರಿ. 11:4). ಹಾಗಾಗಿ ನಾವು ನಮ್ಮ ಜೀವಿತ ಕಾಲದಲ್ಲಿ ಯೇಸುವನ್ನು, ಪವಿತ್ರಾತ್ಮನನ್ನು ಮತ್ತು ದೇವರ ಕೃಪೆಯ ಕುರಿತಾದ ಸುವಾರ್ತೆಯನ್ನು ಯಥಾರ್ಥವಾಗಿ ಎತ್ತಿ ಹಿಡಿದು ಪ್ರಕಟಿಸಬೇಕು.

"ಸದಾಕಾಲವೂ ದೇವರು ನಮ್ಮ ಪರವಾಗಿ, ನಮ್ಮ ಶರೀರಭಾವದ ವಿರುದ್ಧವಾಗಿ ಮತ್ತು ಸೈತಾನನ ವಿರುದ್ಧವಾಗಿ ಕಾರ್ಯ ಮಾಡುತ್ತಾರೆ."

ಕ್ಷಮೆ ಕೇಳುವಾಗ ನಮ್ಮನ್ನೇ ಸಮರ್ಥಿಸಿಕೊಳ್ಳದಿರುವುದು

ಒಂದು ವೇಳೆ ನಾವು ಮುರಿಯಲ್ಪಟ್ಟು, ಪಶ್ಚಾತ್ತಾಪಪಟ್ಟು, ಆತ್ಮದ ಬಡತನವನ್ನು ಹೊಂದಿರದಿದ್ದರೆ, ನಾವು ಯಾವುದೋ ತಪ್ಪು ಕೆಲಸ ಮಾಡಿದ್ದೇವೆಂದು ತಿಳಿದೊಡನೆ, ಸಂಪೂರ್ಣ ದೀನತೆಯಿಂದ ನಾವು ಕ್ಷಮೆ ಕೇಳುವುದನ್ನು ನಮ್ಮ ಮನಸ್ಸು ಒಪ್ಪುವುದಿಲ್ಲ (ಅಥವಾ ಹಿಂಜರಿಯುತ್ತದೆ).

ಮಾನವರ ಬಾಯಿಯಿಂದ ಹೊರಡಲು ಅತೀ ಕಷ್ಟಕರವಾದ ಹತ್ತು ಪದಗಳು ಯಾವುವೆಂದರೆ, "ನಾನು ಕ್ಷಮೆ ಬೇಡುತ್ತೇನೆ. ನಾನು ಈ ತಪ್ಪು ಮಾಡಿದ್ದೇನೆ. ದಯವಿಟ್ಟು ನನ್ನನ್ನು ಮನ್ನಿಸಿರಿ".

ಮುರಿಯಲ್ಪದ ಆತ್ಮವು ನಾವು ಕ್ಷಮೆ ಕೇಳುವಾಗ ನಮ್ಮನ್ನೇ ಸಮರ್ಥಿಸಿಕೊಳ್ಳುವಂತೆ ಮಾಡುತ್ತದೆ. ನಾವು ಯಾವುದೇ ರೀತಿಯಲ್ಲಿ ನಮ್ಮನ್ನೇ ಸಮರ್ಥಿಸಿಕೊಂಡು ಕ್ಷಮೆ ಕೇಳಿದರೆ, ಅದು ಕ್ಷಮಾಯಾಚನೆಯೇ ಅಲ್ಲ. ತಪ್ಪನ್ನು ಒಪ್ಪಿಕೊಳ್ಳುವುದರಲ್ಲಿ ಒಂದೇ ಒಂದು ಚಿಟಿಕೆ ಸ್ವ-ಸಮರ್ಥನೆ ಇದ್ದರೆ, ನಾವು ಮುರಿಯಲ್ಪಟ್ಟಿಲ್ಲ ಎಂಬುದನ್ನು ಅದು ಖಚಿತ ಪಡಿಸುತ್ತದೆ. ಯೇಸುವು ಹೇಳಿದ ಪ್ರಕಾರ, ಮನುಷ್ಯರ ಮುಂದೆ ಒಬ್ಬನು ತನ್ನನ್ನು ನೀತಿವಂತನೆಂದು ತೋರಿಸಿಕೊಳ್ಳುವುದು ಫರಿಸಾಯತನದ ಲಕ್ಷಣವಾಗಿದೆ (ಲೂಕ. 16:15). ನಾವು ಮಾಡಿದ ತಪ್ಪು ನಮ್ಮ ಗಮನಕ್ಕೆ ಬಂದಾಗ, "ಅದನ್ನು ಆ ಕ್ಷಣವೇ ಅಂಗೀಕರಿಸಿ, ತಕ್ಷಣವೇ ಸರಿಪಡಿಸಬೇಕು". ಒಬ್ಬ ಮುರಿಯಲ್ಪಟ್ಟ ಮನುಷ್ಯನಿಗೆ ಇದು ಬಹಳ ಕಷ್ಟವೇನಲ್ಲ. ಆದರೆ ಮುರಿಯಲ್ಪಡದ ವ್ಯಕ್ತಿಯು ಇವೆರಡನ್ನು ಮಾಡಲು ತಡಮಾಡುತ್ತಾನೆ. ಒಂದು ವೇಳೆ ಆತನು ಕ್ಷಮೆ ಕೇಳಿದರೂ, ಅದರ ಜೊತೆಗೆ ಬೇರೊಬ್ಬರನ್ನು ದೂರುತ್ತಾನೆ. ಆದಾಮನು ಪಾಪ ಮಾಡಿದಾಗ, ಆತನು ತಾನು ತಿನ್ನಬಾರದಾದ ಹಣ್ಣನ್ನು ತಿಂದೆನೆಂದು ಒಪ್ಪಿಕೊಂಡರೂ, "ದೇವರು ತನಗೆ ಕೊಟ್ಟ ಆ ಸ್ತ್ರೀಯು ಆ ಹಣ್ಣನ್ನು ಕೊಟ್ಟಳು," ಎಂದು ತನ್ನನ್ನು ಸಮರ್ಥಿಸಿಕೊಂಡನು. ಆ ಮೂಲಕ ಆತನು ತನ್ನ ಹೆಂಡತಿಯನ್ನು ದೂರಿದನು; ಇದರ ಜೊತೆಗೆ ಇಂತಹ ಹೆಂಡತಿಯನ್ನು ತನಗೆ ಕೊಟ್ಟದ್ದಕ್ಕಾಗಿ ಆತನು ದೇವರನ್ನೂ ಸಹ ದೂರಿದನು! ಯಾವುದೇ ತಪ್ಪನ್ನು ಅಥವಾ ಪಾಪವನ್ನು ಅರಿಕೆ ಮಾಡಲು ಇದು ಒಳ್ಳೆಯ ಮಾರ್ಗವಲ್ಲ.

ಆದಾಗ್ಯೂ ’ಕೀರ್ತನೆಗಳು 51' ರಲ್ಲಿ, ದಾವೀದನು ತನ್ನ ಪಾಪವನ್ನು ಒಪ್ಪಿಕೊಂಡ ರೀತಿಯನ್ನು ಗಮನಿಸಿರಿ. ಅಲ್ಲಿ ನಮಗೆ ಸ್ಪಷ್ಟವಾಗಿ ಕಾಣಿಸುವುದು ಏನೆಂದರೆ, ದಾವೀದನ ಮಾತಿನಲ್ಲಿ ಸ್ವ-ಸಮರ್ಥನೆಯ ವಾಸನೆಯೂ ಸಹ ಇರಲಿಲ್ಲ. ಇದು ನಿಜವಾಗಿ ಮುರಿಯಲ್ಪಟ್ಟ ಮನುಷ್ಯನ ಲಕ್ಷಣವಾಗಿದೆ. ’ಕೀರ್ತನೆಗಳು 51'ನ್ನು ನೀವು ವಿವರವಾಗಿ ಧ್ಯಾನಿಸಬೇಕೆಂದು ಮತ್ತು ಮುರಿಯಲ್ಪಡುವಿಕೆಯ ಅರ್ಥವನ್ನು ಕರ್ತನಾದ ಯೇಸುವಿನಿಂದ ಅರಿತುಕೊಂಡು, ನಿಮ್ಮ ಪಾಪಗಳನ್ನು ಅರಿಕೆ ಮಾಡುವುದು ಹೇಗೆಂದು ಕಲಿತುಕೊಳ್ಳ ಬೇಕೆಂದು ನಾನು ನಿಮಗೆ ಸಲಹೆ ನೀಡುತ್ತೇನೆ. ಇದಲ್ಲದೆ, ನೀವು ನಿಮ್ಮನ್ನು ಸಮರ್ಥಿಸಿಕೊಳ್ಳಲು ಒಂದು ಸುಳ್ಳನ್ನೂ ಸಹ ಹೇಳಬಹುದು. ಅದು ಬಹಳ ಚಿಕ್ಕ ಸುಳ್ಳಾಗಿರಬಹುದು - ನೀವು ಒಳ್ಳೆಯವರಂತೆ ತೋರಿಸಿಕೊಳ್ಳುವುದಕ್ಕಾಗಿ, ನೀವು ಯಾವುದೋ ವಿಷಯವನ್ನು ಮರೆಮಾಚಿ, ವಿವರಣೆಯನ್ನು ಸ್ವಲ್ಪ ದೊಡ್ಡದಾಗಿಸಿ ಹೇಳಬಹುದು. ಒಂದು ಸುಳ್ಳನ್ನು ಹೇಳುವುದು ಸುಲಭ, ಆದರೆ ಒಂದೇ ಒಂದು ಸುಳ್ಳನ್ನು ಹೇಳುವುದು ಕಷ್ಟವೇ ಸರಿ - ಯಾಕೆಂದರೆ, ಒಂದು ಸುಳ್ಳನ್ನು ಹೇಳಿದ ನಂತರ, ಆ ಸುಳ್ಳನ್ನು ನಿಜವೆಂದು ತೋರಿಸಲು ನಾವು ಇನ್ನೂ ಕೆಲವು ಸುಳ್ಳುಗಳನ್ನು ಹೇಳಬೇಕಾಗುತ್ತದೆ. ನಾವು ಸುಳ್ಳು ಹೇಳುವುದನ್ನು ದ್ವೇಷಿಸಿ, ಸತ್ಯವನ್ನು ಮನಃಪೂರ್ವಕವಾಗಿ ಪ್ರೀತಿಸಬೇಕು. ಇಲ್ಲವಾದರೆ ನಾವು ನಮ್ಮ ಜೀವನದಲ್ಲಿ ಪವಿತ್ರಾತ್ಮನ ಅಭಿಷೇಕವನ್ನು ಕಳೆದುಕೊಳ್ಳುತ್ತೇವೆ ಮತ್ತು ದೇವರಿಗೆ ಇಷ್ಟವಾಗುವ ಜೀವನವನ್ನು ಜೀವಿಸಲಾರೆವು; ಮತ್ತು ಅದು ನಮ್ಮ ಅತಿ ದೊಡ್ಡ ನಷ್ಟವಾಗಿ ಪರಿಣಮಿಸುತ್ತದೆ.

ದೇವರು ನಮ್ಮಲ್ಲಿರುವ ಅಹಂಕಾರವನ್ನು ನೋಡಿ, ಅದನ್ನು ಬೆಳಕಿಗೆ ತಂದು ನಾಶಗೊಳಿಸುವ ಉದ್ದೇಶದಿಂದ, ನಮ್ಮ ಜೀವನದಲ್ಲಿ ಯಾವುದೋ ಒಂದು ಸಣ್ಣ ಘಟನೆ ನಡೆದು ಅದರ ಮೂಲಕ ನಾವು ಒಂದಲ್ಲ ಒಂದು ರೀತಿಯಲ್ಲಿ ಮುಗ್ಗರಿಸಿ ಬೀಳುವುದನ್ನು ಅನುಮತಿಸುತ್ತಾರೆ (’ಯೆಹೆಜೇಲ್ಕನು 3:20'ನ್ನು ನೋಡಿರಿ "... ನಾನು ಅವನ ಮುಂದೆ ಒಂದು ಆತಂಕವನ್ನು ಒಡ್ಡುವೆನು ..."). ಅದಲ್ಲದೆ ನಾವು ಎಡವಿ ಬಿದ್ದಾಗ ಈ ಕೆಳಗಿನ ವಿಷಯಗಳನ್ನು ಮಾಡುತ್ತೇವೆಯೇ, ಎಂದು ಕರ್ತರು ಪರೀಕ್ಷಿಸಿ ನೋಡುತ್ತಾರೆ:(1) ನಾವು ಎಡವಿ ಬೀಳುವುದಕ್ಕೆ ನಮ್ಮ ಅಹಂಕಾರವೇ ಕಾರಣವೆಂದು ಅರಿಕೆ ಮಾಡುವುದು, (2) ನಮ್ಮ ಪಾಪವನ್ನು ಅರಿಕೆ ಮಾಡುವುದು, (3) ದೇವರ ಮುಂದೆ ನಮ್ಮನ್ನು ತಗ್ಗಿಸಿಕೊಳ್ಳುವುದು, ಮತ್ತು (4) ಮನುಷ್ಯರೊಂದಿಗೆ ಎಲ್ಲಾ ವಿಷಯಗಳನ್ನು ಸರಿಪಡಿಸಿಕೊಳ್ಳುವುದು. ನಾವು ನಮ್ಮನ್ನು ತೀರ್ಪು ಮಾಡಿಕೊಂಡು ಇವೆಲ್ಲಾ ಕಾರ್ಯಗಳನ್ನು ಮಾಡಿದರೆ, ನಾವು ನ್ಯಾಯ ವಿಚಾರಣೆಗೆ ಒಳಗಾಗುವುದಿಲ್ಲ. ಆದರೆ ನಾವು ನಮ್ಮನ್ನು ಸಮರ್ಥಿಸಿಕೊಂಡರೆ, ನಾವು ಮುರಿಯಲ್ಪಡುವುದಿಲ್ಲ ಮತ್ತು ಒಂದು ದಿನ ಲೋಕದವರ ಸಂಗಡ ಅಪರಾಧಿಗಳೆಂದು ನಿರ್ಣಯಿಸಲ್ಪಡುತ್ತೇವೆ (1 ಕೊರಿ. 11:31,32).