WFTW Body: 

1 ಯೋಹಾನ 1:3 ರಲ್ಲಿ ಅಪೊಸ್ತಲ ಯೋಹಾನನು ಹೀಗೆ ಬರೆದಿದ್ದಾನೆ, "ನಮಗಿರುವ ಅನ್ಯೋನ್ಯತೆಯು ತಂದೆಯ ಸಂಗಡ ಇರುವಂಥದು". ನಿಜವಾದ ಅನ್ಯೋನ್ಯತೆಯು ಶಿಲುಬೆಯ ಎರಡು ತೋಳುಗಳ (ಭಾಗಗಳ) ಹಾಗೆ, ಎರಡು ದಿಕ್ಕುಗಳಲ್ಲಿ ಕೆಲಸ ಮಾಡುತ್ತದೆ. ನಾವು ಶಿಲುಬೆಯ ಮೂಲಕ ದೇವರೊಂದಿಗೆ ಅನ್ಯೋನ್ಯತೆಗೆ ಮತ್ತು ಒಬ್ಬರು ಇನ್ನೊಬ್ಬರೊಂದಿಗೆ ಅನ್ಯೋನ್ಯತೆಗೆ ಬರುತ್ತೇವೆ. ಕ್ರಿಸ್ತ ಮತ್ತು ನಮ್ಮ ನಡುವೆ ಒಂದು ಶಿಲುಬೆಯಿದೆ; ಆತನು ಅದರ ಮೇಲೆ ಮರಣ ಹೊಂದಿದನು. ಇದರಿಂದಾಗಿ ನಮಗೆ ನಮ್ಮ ಕರ್ತನೊಡನೆ ಅನ್ಯೋನ್ಯತೆ ಸಾಧ್ಯವಾಗಿದೆ. ಇದರ ಹೊರತಾಗಿ ನಾವು ಎಂದಿಗೂ ದೇವರ ಅನ್ಯೋನ್ಯತೆಗೆ ಬರಲು ಸಾಧ್ಯವಿಲ್ಲ, ಏಕೆಂದರೆ ನಮ್ಮ ಸ್ವಂತ ಒಳ್ಳೆಯತನವು ಎಷ್ಟಕ್ಕೂ ಸಾಲದ್ದಾಗಿದೆ. ಹಾಗೆಯೇ ವಿಶ್ವಾಸಿಗಳಾದ ನಮ್ಮ ನಡುವೆಯೂ, ನಾವು ಪರಸ್ಪರ ಅನ್ಯೋನ್ಯತೆಯನ್ನು ಬಯಸಿದರೆ, ನಾವು ಪ್ರತಿಯೊಬ್ಬರು ನಮ್ಮ ಜೀವಿತಗಳಲ್ಲಿ ನಮ್ಮ ಶಿಲುಬೆಯ ಮೇಲೆ ಸಾಯಬೇಕು. ಇಂತಹ ಶಿಲುಬೆಯ ಮರಣವಿಲ್ಲದೆ ಅನ್ಯೋನ್ಯತೆಯು ಇರುವುದಿಲ್ಲ - ಲಂಬವಾದ ಅನ್ಯೋನ್ಯತೆ ಮತ್ತು ಅಡ್ಡವಾದ ಅನ್ಯೋನ್ಯತೆ. ಶಿಲುಬೆಯು ಜೀವ ಮತ್ತು ಅನ್ಯೋನ್ಯತೆಯ ರಹಸ್ಯವಾಗಿದೆ. ಶಿಲುಬೆಯಿಲ್ಲದೆ ಜೀವ ಇರುವುದಿಲ್ಲ ಮತ್ತು ಶಿಲುಬೆಯಿಲ್ಲದೆ ಅನ್ಯೋನ್ಯತೆಯು ಸಾಧ್ಯವಾಗುವುದಿಲ್ಲ. ಅನಾದಿಕಾಲದಿಂದಲೂ ಶಿಲುಬೆಯು ದೇವರ ಮನಸ್ಸಿನಲ್ಲಿ ಇತ್ತು. ಕುರಿಯಾದಾತನು "ಜಗದುತ್ಪತ್ತಿಗೆ ಮೊದಲೇ ಕೊಯ್ಯಲ್ಪಟ್ಟನು" (ಪ್ರಕ. 13:8 - KJV ಅನುವಾದ). ದೇವರಿಗೆ ಆರಂಭದಿಂದಲೇ ಅಂತ್ಯವು ತಿಳಿದಿದೆ ಮತ್ತು ಹಾಗಾಗಿ ತ್ರಯೇಕ ದೇವರಿಗೆ ಅನಾದಿಕಾಲದಿಂದಲೇ, ತ್ರಯೇಕ ದೇವರಲ್ಲಿ ಎರಡನೆಯ ವ್ಯಕ್ತಿಯು ಈ ಲೋಕಕ್ಕೆ ಮನುಷ್ಯನಾಗಿ ಬರಬೇಕಾಗುತ್ತದೆ ಮತ್ತು ಮಾನವನ ಪಾಪಗಳಿಗಾಗಿ ಶಿಲುಬೆಯ ಮರಣವನ್ನು ಅನುಭವಿಸ ಬೇಕಾಗುತ್ತದೆ, ಎನ್ನುವದು ತಿಳಿದಿತ್ತು. ಇದು ಆದಾಮನ ಪಾಪದ ನಂತರ ದೇವರು ಮಾಡಿದ ನಿರ್ಣಯವಲ್ಲ. ಇದು ಅನಾದಿಕಾಲದಿಂದಲೇ ಗೊತ್ತುಮಾಡಲ್ಪಟ್ಟಿತ್ತು. ಆದಾಮನು ಪಾಪ ಮಾಡಿದಾಗ ದೇವರು ಜೀವವೃಕ್ಷವನ್ನು ಕಾಯುವದಕ್ಕೆ ಒಂದು ಪ್ರಜ್ವಲಿಸುವ ಕತ್ತಿಯನ್ನು ಇರಿಸಿದರು. ಆ ಕತ್ತಿಯು ಯೇಸುವಿನ ಮೇಲೆ ಬಿತ್ತು ಮತ್ತು ಆತನನ್ನು ಕೊಂದಿತು. ಮತ್ತು ಅದೇ ಕತ್ತಿಯು ನಮ್ಮಲ್ಲಿರುವ ಆದಾಮನ ಜೀವಿತದ ಮೇಲೆಯೂ ಬೀಳಬೇಕು - "ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಲ್ಪಟ್ಟವರು" ಎಂಬ ನಮ್ಮ ಪದವಿಯನ್ನು ನಾವು ಒಪ್ಪಿಕೊಳ್ಳಬೇಕು (ಗಲಾ. 2:20) - ಆಗ ಮಾತ್ರ ನಾವು ಜೀವವೃಕ್ಷಕ್ಕೆ ಬಂದು, ದೇವರೊಂದಿಗೆ ಅನ್ಯೋನ್ಯತೆ ಮತ್ತು ಒಬ್ಬರೊಂದಿಗೆ ಒಬ್ಬರು ಅನ್ಯೋನ್ಯತೆಯನ್ನು ಹೊಂದುತ್ತೇವೆ.

ಅಪೊಸ್ತಲ ಯೋಹಾನನು ಹೇಳಿರುವಂತೆ, ಪರಿಪೂರ್ಣ ಸಂತೋಷವು ಅನ್ಯೋನ್ಯತೆಯ ಫಲವಾಗಿದೆ (1 ಯೋಹಾನ 1:4). ಸಂತೋಷವು ಕ್ರೈಸ್ತ ಜೀವಿತದಲ್ಲಿ ಒಂದು ಪ್ರಮುಖ ಅಂಶವಾಗಿದೆ, ಏಕೆಂದರೆ ಪರಲೋಕದ ಪರಿಸರವು ಸಂತೋಷದಿಂದ ತುಂಬಿದೆ. ಪರಲೋಕದಲ್ಲಿ ಬೇಸರ ಅಥವಾ ಖಿನ್ನತೆ ಇಲ್ಲ. ದೇವದೂತರು ಎಂದಿಗೂ ನಿರುತ್ಸಾಹ ಪಡುವುದಿಲ್ಲ. ಅವರು ಯಾವಾಗಲೂ ಜೀವದಿಂದಲೂ, ಸಂತೋಷದಿಂದಲೂ ತುಂಬಿರುತ್ತಾರೆ. ಇದಲ್ಲದೆ ನಾವು ದೇವರ ಅನ್ಯೋನ್ಯತೆಯನ್ನು ಹೊಂದಿದ್ದರೆ ನಾವು ಸಹ ಈ ಆನಂದವನ್ನು ಪಡೆಯಬಹುದು. ಪವಿತ್ರಾತ್ಮನು ಪರಲೋಕದ ಆ ಪರಿಸರವನ್ನು ನಮ್ಮ ಹೃದಯಗಳಿಗೆ ತರಲಿಕ್ಕಾಗಿ ಬಂದಿದ್ದಾನೆ - ಮತ್ತು ಪರಿಪೂರ್ಣ ಆನಂದವು ಅದರ ಒಂದು ಭಾಗವಾಗಿದೆ. ಸೈತಾನನು ನಿಮಗೆ ಹೇಳ ಬಯಸುವ ಮಾತು ಏನೆಂದರೆ, ನೀವು ನಿಮ್ಮ ಜೀವನವನ್ನು ದೇವರಿಗೆ ಸಂಪೂರ್ಣವಾಗಿ ಸಮರ್ಪಿಸಿದರೆ, ಆಗ ಗೋಳಾಟ, ಬೇಸರ, ಕೊರಗು ಮತ್ತು ಅಳುಮುಖ ನಿಮ್ಮ ಪಾಲಾಗುತ್ತದೆ, ಎಂಬುದಾಗಿ. ಕೆಲವು ಕ್ರೈಸ್ತರ ಮುಖಲಕ್ಷಣವು ಇಂತಹ ಭಾವನೆಯನ್ನು ಮೂಡಿಸುತ್ತದೆ ಎಂಬುದು ಒಂದು ದುರದೃಷ್ಟಕರ ನಿಜಸಂಗತಿಯಾಗಿದೆ. ನಾನು ಕೇಳಿರುವ ಒಂದು ದೃಷ್ಟಾಂತದಲ್ಲಿ, ಒಬ್ಬ ಜೋಲು ಮುಖದ ಕ್ರೈಸ್ತನು ಯಾರೋ ಒಬ್ಬರಿಗೆ ಸಾಕ್ಷಿ ನೀಡುತ್ತಾ, "ನೀವು ಕ್ರಿಸ್ತನನ್ನು ನಿಮ್ಮ ಹೃದಯದೊಳಗೆ ಬರುವಂತೆ ಆಹ್ವಾನಿಸಲು ಬಯಸುವಿರಾ?" ಎಂದು ಕೇಳಿದನು. ಆ ವ್ಯಕ್ತಿಯು ಈತನ ಮುಖವನ್ನು ನೋಡಿ, "ಕ್ಷಮಿಸಿ, ಅದು ನನಗೆ ಬೇಕಿಲ್ಲ. ಆಗಲೇ ನನ್ನ ಬಳಿ ಸಾಕಷ್ಟು ಸಮಸ್ಯೆಗಳಿವೆ!" ಎಂದು ಉತ್ತರಿಸಿದನು. ಇಂತಹ ಕಳಪೆಯಾದ ಸಾಕ್ಷಿಯು ನಮ್ಮ ಅತಿ ಶ್ರೇಷ್ಠನಾದ ಕರ್ತನಿಗೆ ಉಚಿತವಾದದ್ದಲ್ಲ. ನಿಮ್ಮ ಜೀವನ ಮತ್ತು ನಿಮ್ಮ ಮನೆಯು ಕರ್ತನ ಪ್ರಜ್ವಲಿಸುವ ಆನಂದವನ್ನು ಹೊರಸೂಸದೇ ಇದ್ದರೆ, ಆಗ ನಿಮ್ಮ ಜೀವನದಲ್ಲಿ ಏನೋ ಕೊರತೆಯಿದೆ. ನೀವು ಯಾವುದೋ ವಿಷಯದಲ್ಲಿ ದೇವರ ಚಿತ್ತವನ್ನು ಕಂಡುಕೊಂಡಿಲ್ಲ.

ಯೋಹಾನನು ಮುಂದುವರಿದು ಹೇಳುವುದು ಏನೆಂದರೆ, ನೀವು ಜೀವ, ಅನ್ಯೋನ್ಯತೆ ಮತ್ತು ಆನಂದವನ್ನು ಬಯಸುವುದಾದರೆ, ಆಗ ನೀವು ಮೊದಲು ಅರ್ಥ ಮಾಡಿಕೊಳ್ಳ ಬೇಕಾದ ವಿಷಯ ಇದು - ದೇವರು ಬೆಳಕಾಗಿದ್ದಾರೆ ಮತ್ತು ಅವರಲ್ಲಿ ಎಷ್ಟು ಮಾತ್ರವೂ ಕತ್ತಲೆಯಿಲ್ಲ (1 ಯೋಹಾನ 1:5) - ಒಂದಿಷ್ಟೂ ಸುಳ್ಳು ಇಲ್ಲ, ಸ್ವಲ್ಪವೂ ಅಶುದ್ಧತೆಯಿಲ್ಲ, ಎಳ್ಳಷ್ಟೂ ದ್ವೇಷ, ಅಹಂಕಾರಗಳಿಲ್ಲ, ಇತ್ಯಾದಿ. ನಿಮಗೆ ಯಾವತ್ತೂ ಸುಳ್ಳು ಹೇಳದಿರುವಂತ, ಯಾರನ್ನೂ ಎಂದಿಗೂ ದ್ವೇಷಿಸದಿರುವಂತ, ಯಾರ ವಿಚಾರವಾಗಿಯೂ ನೀವು ಅಸೂಯೆ ಪಡದಿರುವಂತ ಮತ್ತು ಯಾವಾಗಲೂ ಅಹಂಕಾರ ಪಡದಿರುವಂತ ಜೀವನವನ್ನು ಜೀವಿಸುವ ಇಚ್ಛೆ ಇದೆಯೇ? ಇಂತಹ ಜೀವನವನ್ನು ನೀವು ಆರಿಸಿಕೊಂಡರೆ, ನೀವು ಯಾವಾಗಲೂ ಬೇಸರ ಅಥವಾ ನಿರುತ್ಸಾಹಕ್ಕೆ ಒಳಗಾಗುವುದಿಲ್ಲ. ಹಗಲಿರುಳು ಕರ್ತನಲ್ಲಿ ಆನಂದಿಸುವ ಜೀವನವನ್ನು ನೀವು ಜೀವಿಸುವಿರಿ. ಈ ಶಾಪಗ್ರಸ್ತ ಭೂಮಿಯ ಮೇಲೆ ಇಂತಹ ಜೀವನವನ್ನು ಜೀವಿಸಲು ಸಾಧ್ಯವಿದೆಯೇ? ಹೌದು, ಸಾಧ್ಯವಿದೆ. ಫಿಲಿಪ್ಪಿಯವರಿಗೆ 4:4 ರ ವಚನವು, ಯಾವಾಗಲೂ ಕರ್ತನಲ್ಲಿ ಸಂತೋಷಿಸುವಂತೆ ನಮಗೆ ಆಜ್ಞಾಪಿಸುತ್ತದೆ. ಈ ವಾಕ್ಯವು ಇಲ್ಲಿ ಭೂಮಿಯ ಮೇಲಿರುವ ಜನರಿಗಾಗಿ ಬರೆಯಲ್ಪಟ್ಟಿದೆ ಮತ್ತು ಪರಲೋಕದಲ್ಲಿ ಇರುವವರಿಗಾಗಿ ಅಲ್ಲ! ನೀವು ಅಪೊಸ್ತಲ ಯೋಹಾನನು ಪತ್ಮೊಸ್ ದ್ವೀಪದಲ್ಲಿ ಹಿಂಸಿಸಲ್ಪಟ್ಟಂತೆ ಹಿಂಸೆಗೆ ಒಳಗಾದರೂ, ಅಥವಾ ನಿಮ್ಮ ಆರಾಮದಾಯಕವಾದ ಮನೆಯೊಳಗೆ ಕುಳಿತಿದ್ದರೂ, ಈ ಭೂಲೋಕದಲ್ಲಿ ನಿಮ್ಮ ಸಂತೋಷವು ಪರಿಪೂರ್ಣವಾಗಿರಲು ಸಾಧ್ಯವಿದೆ. ನೀವು ಎಲ್ಲಾ ವೇಳೆಯಲ್ಲಿ ದೇವರ ಬೆಳಕಿನಲ್ಲಿ ನಡೆಯುವುದಾಗಿ ನಿರ್ಧರಿಸಿದರೆ, ಆಗ ನಿಮ್ಮ ಸಂತೋಷವು ನಿಮ್ಮ ಪರಿಸ್ಥಿತಿಗಳ ಮೇಲೆ ಎಂದಿಗೂ ಅವಲಂಬಿಸುವುದಿಲ್ಲ.

ಆದರೆ ನಾವು ದೇವರ ಸಂಗಡ ಅನ್ಯೋನ್ಯತೆ ಉಳ್ಳವರಾಗಿದ್ದೇವೆಂದು ಹೇಳಿಕೊಂಡು ಕತ್ತಲೆಯಲ್ಲಿ ನಡೆದರೆ, ಆಗ ನಾವು ಸತ್ಯವನ್ನು ಅನುಸರಿಸುತ್ತಿಲ್ಲ. ಅನೇಕ ಕ್ರೈಸ್ತರು ದೇವರ ಸಂಗಡ ಅನ್ಯೋನ್ಯತೆ ಹೊಂದಿರುವುದಾಗಿ ಹೇಳಿಕೊಳ್ಳುತ್ತಾರೆ, ಆದರೆ ಪಾಪದಲ್ಲಿ ನಡೆಯುತ್ತಾರೆ. ನೀವು ಅವರ ಮುಖಗಳನ್ನು ನೋಡಿದಾಗ, ಅವರಲ್ಲಿ ಕರ್ತನ ಆನಂದವು ಇಲ್ಲವೆಂದು ನಿಮಗೆ ತಿಳಿಯುತ್ತದೆ. ಅವರ ನಡಿಗೆಯಲ್ಲಿ ಉತ್ಸಾಹವಿಲ್ಲ, ಅವರ ತುಟಿಗಳಲ್ಲಿ ಹಾಡಿನ ಧ್ವನಿಯಿಲ್ಲ, ಮತ್ತು ಅವರ ಕಣ್ಣುಗಳಲ್ಲಿ ಹೊಳಪಿಲ್ಲ. ದೇವರ ಅನ್ಯೋನ್ಯತೆಯ ಆನಂದವನ್ನು ಅವರು ಕಂಡುಕೊಂಡಿಲ್ಲ. ವಿಶ್ವಾಸಿಗಳಾಗಿ ನಮ್ಮ ವಯಸ್ಸು ಹೆಚ್ಚುತ್ತಿರುವಾಗ, ನಾವು ದೇವರೊಂದಿಗೆ ನಡೆಯುತ್ತಿದ್ದರೆ, ನಮ್ಮ ಆನಂದವು ಹೆಚ್ಚುತ್ತಾ ಹೋಗುತ್ತದೆ.