WFTW Body: 

ಯೋನನು 3:1ರಲ್ಲಿ, "ಅನಂತರ ಎರಡನೇ ಬಾರಿ ದೇವರ ವಾಕ್ಯವು ಯೋನನಿಗೆ ಬಂದಿತು," (KJV ಅನುವಾದ) ಎಂದು ಬರೆಯಲ್ಪಟ್ಟಿದೆ. ನಾವು ಒಂದು ಸಲ ವಿಫಲರಾದಾಗ, ಕರ್ತನು ನಮಗೆ ಎರಡನೇ ಅವಕಾಶವನ್ನು ಒದಗಿಸುತ್ತಾನೆ, ಎನ್ನುವುದಕ್ಕಾಗಿ ಕರ್ತನನ್ನು ಕೊಂಡಾಡಿರಿ. ಯೋನನ ಗ್ರಂಥವು ನಮಗೆ ನೀಡುವ ಶ್ರೇಷ್ಠ ಸಂದೇಶಗಳಲ್ಲಿ ಇದು ಒಂದಾಗಿದೆ. ದೇವರು ತೋರಿಸಿರುವ ಹಾದಿಯಲ್ಲಿ ನೀವು ನಡೆದಿಲ್ಲವೇ? ದೇವರು ನಿಮಗೆ ಇನ್ನೊಂದು ಅವಕಾಶವನ್ನು ನೀಡಲು ಕಾದಿದ್ದಾರೆ. ಎರಡನೇ ಬಾರಿಯೂ ನೀವು ದೇವರನ್ನು ನಿರಾಶೆಗೊಳಿಸಿದಿರಾ? ಮೂರನೇ ಬಾರಿ ನಿಮಗೆ ಮತ್ತೊಂದು ಅವಕಾಶವನ್ನು ಅವರು ಕೊಡುತ್ತಾರೆ. ದೇವರು ಕೇವಲ ಎರಡು ಅವಕಾಶಗಳನ್ನು ಮಾತ್ರ ಕೊಡುವಂಥವರು ಅಲ್ಲ - ಏಕೆಂದರೆ ನಮ್ಮಲ್ಲಿ ಬಹಳಷ್ಟು ಮಂದಿ ನಮ್ಮ ಎರಡನೆಯ ಅವಕಾಶವನ್ನು ಬಹಳ ಹಿಂದೆಯೇ ಕೆಡಿಸಿಕೊಂಡಿದ್ದೇವೆ. ನೀವು ಲೆಕ್ಕವಿಲ್ಲದಷ್ಟು ಬಾರಿ ಸೋತಿದ್ದರೂ ಸಹ, ದೇವರು ನಿಮಗೆ ಇನ್ನೊಂದು ಅವಕಾಶವನ್ನು ನೀಡುವಂಥವರು ಆಗಿದ್ದಾರೆ! ನೀವು ಪೂರ್ಣ ಹೃದಯದಿಂದ ಪಶ್ಚಾತ್ತಾಪಪಡುವುದಾದರೆ, ಕರ್ತನು ನಿಮಗಾಗಿ ಇರಿಸಿದ ಸೇವೆಯನ್ನು ಪೂರೈಸುವಂತೆ ನಿಮ್ಮನ್ನು ಬಲಪಡಿಸಿ, ನಿಮಗೆ ಇನ್ನೊಂದು ಅವಕಾಶವನ್ನು ಒದಗಿಸಲು ಆತನು ಈಗಲೂ ಶಕ್ತನಾಗಿದ್ದಾನೆ.

ನಿನವೆ ಮಹಾ ಪಟ್ಟಣದ ಒಂದೊಂದು ಬೀದಿಯಲ್ಲೂ, "40 ದಿನಗಳಾದ ಮೇಲೆ ನಿನವೆಯು ನಾಶವಾಗುವದು," ಎಂದು ಸಾರುತ್ತಾ ಹೋಗಲು ಯೋನನಿಗೆ ಮೂರು ದಿನಗಳು ಬೇಕಾದವು. ಅಲ್ಲಿ ನಡೆದ ಆಶ್ಚರ್ಯಕರ ವಿಷಯವೇನೆಂದರೆ, ನಿನವೆ ಪಟ್ಟಣದ ಜನರು ಒಡನೆಯೇ ತಮ್ಮ ದುರ್ಮಾರ್ಗಗಳಿಂದ ತಿರುಗಿಕೊಂಡರು. ಈ ಜಗತ್ತಿನ ಇತಿಹಾಸದಲ್ಲಿ ನಡೆದ ಅತೀ ದೊಡ್ಡ ಮತ್ತು ಅತೀ ಶೀಘ್ರವಾದ ಉಜ್ಜೀವನ ಇದಾಗಿತ್ತು. ಇಲ್ಲಿ ನನ್ನನ್ನು ಉತ್ತೇಜಿಸುವ ಒಂದು ವಿಷಯವೆಂದರೆ, ನಿನವೆಯು ಒಂದು ದುಷ್ಟ ನಗರವಾಗಿದ್ದರೂ, ಅದು ತನ್ನ ದುರ್ಮಾರ್ಗದ ಬಗ್ಗೆ ಮನಮರುಗಿದಾಗ, ದೇವರು ಕನಿಕರಗೊಂಡರು. ಮುಂದೆ ಇನ್ನೂ ಕೆಲವು ವರ್ಷಗಳ ನಂತರ, ಆ ನಗರದ ದುಷ್ಟತನವು ಇನ್ನೂ ಬಹಳ ಹೆಚ್ಚಿದಾಗ, ಅದನ್ನು ನಿರ್ಮೂಲ ಮಾಡಬೇಕಾಗುತ್ತದೆ ಎಂದು ದೇವರು ತಿಳಿದಿದ್ದರು. ಆದರೆ ಪ್ರತಿಯೊಬ್ಬನು ಆ ಕ್ಷಣದಲ್ಲಿ ಹೇಗಿರುತ್ತಾನೋ ಅದರ ಪ್ರಕಾರ ದೇವರು ಅವನೊಂದಿಗೆ ನಡೆದುಕೊಳ್ಳುತ್ತಾರೆ - ಮತ್ತು ಆತನು ಹಿಂದೆ ಯಾವ ರೀತಿ ಇದ್ದನು ಅಥವಾ ಮುಂದಿನ ದಿನಗಳಲ್ಲಿ ಆತನು ಹೇಗೆ ನಡೆಯಲಿದ್ದಾನೆ, ಎಂಬುದಕ್ಕೆ ತಕ್ಕಂತೆ ಅಲ್ಲ. ದೇವರ ಹೆಸರು "ಇರುವಂತನು" ಎಂದಾಗಿದೆಯೇ ಹೊರತು, "ಹಿಂದೆ ಇದ್ದಾತನು" ಅಥವಾ "ಮುಂದೆ ಬರುವಂಥವನು" ಎಂದು ಅಲ್ಲ. ದೇವರಲ್ಲಿ ನಮಗಿಂತ ಹೆಚ್ಚಿನ ಅನುಕಂಪ ಮತ್ತು ಕರುಣೆ ಇದೆ.

ದೇವರು ನಿನವೆ ಪಟ್ಟಣಕ್ಕೆ ತೋರಿಸಿದ ಕರುಣೆಯನ್ನು ನೋಡಿದ ಯೋನನು ಉತ್ಸಾಹಗೊಂಡು ಹರ್ಷಿಸುತ್ತಾನೆಂದು ನಾವು ಅಂದುಕೊಳ್ಳಬಹುದು. ಆದರೆ ಯೋನನಲ್ಲಿ ಯಾವ ಉತ್ಸಾಹವೂ ಕಾಣಿಸಲಿಲ್ಲ. ಯೋನನಿಗೆ ಒಂದು ಪಾಠ ಕಲಿಸಬೇಕೆಂದು ಕರ್ತನು ಯೋನನಿಗೆ ನೆರಳಾಗಿ ಒಂದು ಸೋರೆಗಿಡದ ಬಳ್ಳಿಯು ಹರಡುವಂತೆ ಮಾಡಿದನು. ಯೋನನಿಗೆ ಆ ಸೋರೆಗಿಡದಿಂದ ಬಹಳ ಸಂತೋಷವಾಯಿತು. ಮಾರನೇ ದಿನ ಸೂರ್ಯೋದಯದ ಸಮಯಕ್ಕೆ ದೇವರು ಒಂದು ಹುಳಕ್ಕೆ ಆ ಸೋರೆಗಿಡವನ್ನು ತಿನ್ನುವಂತೆ ಅಪ್ಪಣೆ ಮಾಡಿ, ಆ ಗಿಡವನ್ನು ಸಾಯಿಸಿದರು. ಹಾಗಾಗಿ ಬಿಸಿಲು ಜೋರಾಗಿ ಯೋನನ ತಲೆಯ ಮೇಲೆ ಹೊಡೆಯಿತು, ಮತ್ತು ಆತನು ಸಿಟ್ಟಾಗಿ, "ನಾನು ಬದುಕುವದಕ್ಕಿಂತ ಸಾಯುವುದೇ ಲೇಸು," ಎಂದನು. ಆಗ ದೇವರು ಯೋನನಿಗೆ, "ಒಂದು ರಾತ್ರಿಯಲ್ಲಿ ಹುಟ್ಟಿ ಒಂದು ರಾತ್ರಿಯಲ್ಲಿ ನಾಶವಾದ ಇಂಥ ಗಿಡಕ್ಕಾಗಿ ನೀನು ಕನಿಕರಪಟ್ಟಿದ್ದಿ. ಎಡಗೈ ಬಲಗೈಯ ನಡುವಿನ ಅಂತರವನ್ನು ಅರಿಯದ 1,20,000 ಜನರೂ, ಬಹು ಪಶುಗಳೂ ಉಳ್ಳ ಆ ದೊಡ್ಡ ಪಟ್ಟಣವಾದ ನಿನವೆಗಾಗಿ ನಾನು ಕನಿಕರಪಡಬಾರದೋ?" ಎಂದರು (ಯೋನನು 4:11).

ಯೋನನು 4:11ರ ಈ ವಾಕ್ಯದಲ್ಲಿ - ಹಳೆಯ ಒಡಂಬಡಿಕೆಯ ಬೇರೆ ಎಲ್ಲಾ ವಚನಗಳಿಗಿಂತ ಹೆಚ್ಚಾಗಿ - ನಾಶವಾಗುತ್ತಿರುವ ಆತ್ಮಗಳಿಗಾಗಿ ದೇವರಲ್ಲಿರುವ ಅಪಾರ ಅನುಕಂಪವನ್ನು ನಾವು ಕಾಣುತ್ತೇವೆ. ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು, ಯಾರೂ ನಾಶವಾಗದಿರಲಿ ಎಂದು ತನ್ನ ಒಬ್ಬನೇ ಮಗನನ್ನು ಕೊಟ್ಟರು. ಯಾವುದೋ ಕಾರಣಕ್ಕಾಗಿ ಯೋನನು ಈ ವಿಷಯದಲ್ಲಿ ದೇವರ ಹೃದಯದಿಂದ ದೂರ ಸರಿದನು. ಇಂದಿನ ದಿನಗಳಲ್ಲೂ (ಯೋನನು ಮಾಡಿದಂತೆ) ಅನೇಕ ಬೋಧಕರು ತಮ್ಮ ಬೋಧನೆಯ ಮೂಲಕ ಉಜ್ಜೀವನವನ್ನು ಕಂಡಿದ್ದಾರೆ; ಆದರೆ ಅವರೂ ಸಹ ಯೋನನಂತೆ ದೇವರ ಅನುಕಂಪವುಳ್ಳ ಹೃದಯದೊಂದಿಗೆ ಸಂಪರ್ಕವನ್ನು ಇರಿಸಿಕೊಂಡಿಲ್ಲ. ಇಂತಹ ಬೋಧಕರಿಂದ ದೇವರು ಬಯಸುವ ಸೇವೆಯು ಕೈಗೂಡುವುದಿಲ್ಲ. ನೀವು ಬೋಧನೆಯ ಮೂಲಕ ಜನರನ್ನು ರಕ್ಷಣೆಗೆ ನಡೆಸಬಹುದು; ಆದರೆ ಅಂತ್ಯದಲ್ಲಿ, ಯೋನನಂತೆ, ನೀವು ದೇವರೊಂದಿಗೆ ಅನ್ಯೋನ್ಯತೆಯನ್ನು ಕಳೆದುಕೊಳ್ಳಬಹುದು.

’ದೇವರ ಹೃದಯದೊಂದಿಗೆ ಅನ್ಯೋನ್ಯತೆಯನ್ನು ಹೊಂದಿರುವದು,’ ಸುವಾರ್ತಾ ಸೇವೆಯ ತಳಹದಿಯಾಗಿದೆ. ದೇವರು ಕತ್ತಲೆಯಲ್ಲಿರುವ ಜನರಿಗಾಗಿ ಅಪಾರ ಅನುಕಂಪವನ್ನು ಹೊಂದಿದ್ದಾರೆ. ಸತ್ಯವೇದವು ತಿಳಿಸುವಂತೆ,"ದೇವರ ಚಿತ್ತವೇನೆಂದರೆ, ಎಲ್ಲರೂ ತನ್ನ ಕಡೆಗೆ ತಿರುಗಿಕೊಂಡು, ಸತ್ಯದ ಜ್ಞಾನಕ್ಕೆ ಸೇರಬೇಕು", ಎಂಬುದಾಗಿ. ದೇವರು ಇದಕ್ಕಾಗಿ ಹಂಬಲಿಸುತ್ತಾರೆ. ನಾವು ದೇವರ ಹೃದಯವನ್ನು ಹೆಚ್ಚು ಹೆಚ್ಚಾಗಿ ಸಮೀಪಿಸುವಾಗ, ನಾವೂ ಸಹ ಅವರಲ್ಲಿರುವ ಭಾರವನ್ನು ಹೊಂದುತ್ತೇವೆ. ಒಂದು ವೇಳೆ ದೇವರು ನಿಮ್ಮನ್ನು ಒಬ್ಬ ಸುವಾರ್ತಿಕನಾಗಿ ಕರೆದಿದ್ದರೆ, ಅವರು ನಿಮಗೆ ಕಳೆದು ಹೋಗಿರುವ ಆತ್ಮಗಳಿಗಾಗಿ ಅನುಕಂಪವನ್ನು ನೀಡುತ್ತಾರೆ. ದೇವರು ನಿಮ್ಮನ್ನು ಒಬ್ಬ ಉಪದೇಶಕನಾಗಿ ಕರೆದರೆ, ಅವರು ನಿಮಗೆ ಮೋಸಹೋಗಿ ಕುರುಡರಾಗಿರುವಂಥ ವಿಶ್ವಾಸಿಗಳಿಗಾಗಿ ಹಾಗೂ ಜಯಶಾಲಿ ಜೀವನಕ್ಕೆ ಕಾಲಿಡಲು ಸಾಧ್ಯವಾಗದೆ ಇರುವ ಜನರಿಗಾಗಿ ಅನುಕಂಪವನ್ನು ಕೊಡುತ್ತಾರೆ. ನಾವು ನಮಗೆ ಕೊಡಲ್ಪಡುವ ದೇವರ ಸೇವೆಯನ್ನು ಯಥಾರ್ಥವಾಗಿ ಪೂರೈಸಲು ದೇವರ ಹೃದಯದೊಂದಿಗೆ ಅನ್ಯೋನ್ಯತೆಯನ್ನು ಹೊಂದುವದು ಅತೀ ಆವಶ್ಯವಾಗಿದೆ.