"ಇಕ್ಕಟ್ಟಾದ ಬಾಗಿಲಿನಿಂದ ಒಳಕ್ಕೆ ಹೋಗಿರಿ. ನಾಶಕ್ಕೆ ಹೋಗುವ ಬಾಗಿಲು ದೊಡ್ಡದು, ದಾರಿ ಅಗಲವು; ದೊಡ್ಡದಾದ ಮತ್ತು ಅಗಲವಾದ ದಾರಿಯಲ್ಲಿ ಹೋಗುವವರು ಬಹು ಜನರು"(ಮತ್ತಾ. 7:13).
ನಾಶನವೆಂದರೆ ನಿತ್ಯನರಕ. ಯೇಸುವು ಪರ್ವತ ಪ್ರಸಂಗದಲ್ಲಿ ನರಕದ ಕುರಿತಾಗಿ ಮಾತನಾಡಿದರೇ? ನಿಶ್ಚಯವಾಗಿ ಮಾತನಾಡಿದರು. ಆತನು ಮೂರು ಬಾರಿ ಅದನ್ನು ಪ್ರಸ್ತಾಪಿಸಿದನು. ನಾವು ನಾಶದ ದಾರಿ ಯಾವುದೆಂದು ನೋಡಿಕೊಳ್ಳೋಣ. ಯೇಸುವು ಮತ್ತಾಯನು 5:22ರಲ್ಲಿ, "ನೀನು ನಿನ್ನ ಸಹೋದರನ ಮೇಲೆ ಸಿಟ್ಟುಗೊಳ್ಳುವುದಾದರೆ, ನೀನು ನ್ಯಾಯ ವಿಚಾರಣೆಗೆ ಗುರಿಯಾಗುವೆ. ಆ ಕೋಪದ ಫಲವಾಗಿ ಬಿರುಸಾದ ಮಾತನ್ನು ನುಡಿದರೆ, ಆಗ ನೀನು ನ್ಯಾಯಾಲಯದ ದೃಷ್ಟಿಯಲ್ಲಿ ತಪ್ಪಿತಸ್ಥನಾಗಿದ್ದೀ. ನಿನ್ನ ಕೋಪವು ಇನ್ನೂ ಹೆಚ್ಚಿನ ಕೋಪದ ಮಾತುಗಳಿಗೆ ಕಾರಣವಾದರೆ, ಆಗ ನೀನು ಅಗ್ನಿ ನರಕದಲ್ಲಿ ನಾಶನಾಗುವೆ," ಎಂದು ನುಡಿದರು. ಇದರ ನಂತರ ಯೇಸುವು ಮತ್ತಾಯನು 5:28ರಲ್ಲಿ, "ಒಬ್ಬ ಮನುಷ್ಯನು ಪರಸ್ತ್ರೀಯನ್ನು ನೋಡಿ ತನ್ನ ಮನಸ್ಸಿನಲ್ಲಿ ಆಕೆಯನ್ನು ಮೋಹಿಸಿದರೆ, ಆತನು ತನ್ನ ಬಲಗಣ್ಣನ್ನು ಕಿತ್ತು ಬಿಸಾಡುವುದು ಒಳ್ಳೆಯದು. ಇಲ್ಲವಾದರೆ, ಆತನು ನರಕಕ್ಕೆ ತಳ್ಳಲ್ಪಡುತ್ತಾನೆ. ನಿನ್ನ ಬಲಗೈ ನಿನ್ನನ್ನು ಲೈಂಗಿಕ ಪಾಪದಲ್ಲಿ ಸಿಕ್ಕಿಸುವುದಾದರೆ, ಅದನ್ನು ಕಡಿದು ಬಿಸಾಡುವುದು ಒಳ್ಳೆಯದು," ಎಂದರು. ಹಾಗೆ ಮಾಡದಿದ್ದರೆ, ಯೇಸುವು ಮತ್ತಾಯನು 5:30ರಲ್ಲಿ ಹೇಳಿದಂತೆ, ನೀನು ನರಕದಲ್ಲಿ ಕೊನೆಗೊಳ್ಳಬಹುದು. ನಾಶದ ದಾರಿ ಇದಾಗಿದೆ. ಅತಿಯಾದ ಕೋಪದ ದಾರಿ ಮತ್ತು ನಿಯಂತ್ರಣವಿಲ್ಲದ ಲೈಂಗಿಕ ಮೋಹದ ದಾರಿಯು ಅಗಲವಾದದ್ದು, ಮತ್ತು ಈ ದಾರಿಯನ್ನು ಜನರ ದೊಡ್ಡ ಗುಂಪು ಆರಿಸಿಕೊಳ್ಳುತ್ತದೆ. ಈ ಜಗತ್ತಿನಲ್ಲಿ ಕೋಪದಿಂದ ತುಂಬಿದ, ವಿಪರೀತ ಲೈಂಗಿಕ ಕಾಮದಿಂದ ತುಂಬಿದ, ಕಡಿವಾಣವಿಲ್ಲದ ಲೈಂಗಿಕ ಆಸೆಗಳನ್ನು ಹೊಂದಿರುವ ಮತ್ತು ಬಡ ಸ್ತ್ರೀಯರನ್ನು ಶೋಷಣೆಗೆ ಒಳಪಡಿಸುವ ಅನೇಕರು ಇದ್ದಾರೆ. ನಾಶನದ ಅಗಲವಾದ ದಾರಿ ಇದಾಗಿದೆ.
ಒಬ್ಬ ಮನುಷ್ಯನು ಕ್ರಿಸ್ತನಲ್ಲಿ ಹೊಸದಾಗಿ ಹುಟ್ಟಿದ್ದೇನೆಂದು ಹೇಳಿಕೊಂಡು, ಅಂತರ್ಜಾಲದಲ್ಲಿ ಅಸಹಾಯಕ ಸ್ತ್ರೀಯರು ಶೋಷಿಸಲ್ಪಡುತ್ತಿರುವ ಅಶ್ಲೀಲ ಲೈಂಗಿಕ ದೃಶ್ಯಗಳನ್ನು ನೋಡುವುದಾದರೆ ಏನು ಹೇಳೋಣ? ಈ ಕ್ರೈಸ್ತನು ಇತರರ ಮೇಲೆ ಕೋಪವನ್ನು ತೋರಿಸುವುದಾದರೆ ಏನೆನ್ನಬೇಕು? ಇದು ನಾಶದ ಮಾರ್ಗವಾಗಿದೆ. ಇವನು ಕ್ರೈಸ್ತನೆಂದು ಹೇಳಿಕೊಳ್ಳುತ್ತಾನೋ ಅಥವಾ ಕ್ರೈಸ್ತನಾಗಿಲ್ಲವೋ, ಎರಡೂ ಒಂದೇ ಆಗಿದೆ. ಅವನು ನಾಶದ ಮಾರ್ಗದಲ್ಲಿ ನಡೆಯುತ್ತಿದ್ದಾನೆ. ಆ ಮಾರ್ಗವು ಅಗಲವಾದ ಮಾರ್ಗವಾಗಿದೆ.
ಕೆಲವು ಕ್ರೈಸ್ತ ಬೋಧಕರು, "ನಾವು ಸಂಕುಚಿತ ಮನೋಭಾವವನ್ನು ಹೊಂದಿರಬಾರದು. ಈ ಸಂಗತಿಗಳನ್ನು ಜಯಿಸುವವರು ಮಾತ್ರ ನಿತ್ಯಜೀವಕ್ಕೆ ಪ್ರವೇಶಿಸುತ್ತಾರೆಂದು ಹೇಳುವುದು ಸರಿಯಲ್ಲ," ಎಂದು ಬೋಧಿಸುತ್ತಾ ಜೀವಮಾರ್ಗವನ್ನು ಅಗಲಗೊಳಿಸುತ್ತಾರೆ. ಅದು ಸರಿಯಲ್ಲ, ಇವರು ಯೇಸುವು ಕಲಿಸಿದ್ದಕ್ಕೂ ಹೆಚ್ಚು ಅಗಲವಾಗಿ ನಿತ್ಯಜೀವದ ಬಾಗಿಲನ್ನು ತೆರೆಯುತ್ತಾರೆ. ಜೀವಮಾರ್ಗವು ಸೂಜಿಯ ಕಣ್ಣಿನ ಹಾಗಿದೆಯೆಂದು ಯೇಸುವು ಹೇಳಿದರು. ಸೂಜಿಯ ಕಣ್ಣಿನಲ್ಲಿ ಒಂದು ಒಂಟೆಯು ನುಗ್ಗಬಹುದೇ? ಇಲ್ಲ. ಆದಾಗ್ಯೂ, ತನ್ನ ಸ್ವಂತ ಸಂಪತ್ತು-ಸಾಧನೆಗಳ ಮೂಲಕ ಶ್ರೀಮಂತನಾಗಿರುವ ಒಬ್ಬ ಮನುಷ್ಯ ದೇವರ ರಾಜ್ಯವನ್ನು ಪ್ರವೇಶಿಸುವುದಕ್ಕಿಂತ ಹೆಚ್ಚು ಸುಲಭವಾಗಿ, ಒಂದು ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗುತ್ತದೆಂದು ಯೇಸುವು ಹೇಳಿದರು. ನಮ್ಮ "ಸಂಪತ್ತು" ಎಂದರೆ ಕೇವಲ ಐಶ್ವರ್ಯ ಮಾತ್ರವೇ ಅಲ್ಲ. ಅದು ನಮ್ಮ ಬುದ್ಧಿಶಕ್ತಿ ಆಗಿರಬಹುದು. ಸತ್ಯವೇದದ ಕುರಿತಾಗಿ ನಮ್ಮ ವಾಕ್ಯದ ಜ್ಞಾನ ಮತ್ತು ವಿಷಯಗಳನ್ನು ವಿವರಿಸುವ ಬುದ್ಧಿಶಕ್ತಿ ನಮ್ಮ ಸಂಪತ್ತಾಗಿರಬಹುದು. ನಾವು ನಮ್ಮ ಬುದ್ಧಿಶಕ್ತಿಯ ಬೋಧನೆಗಳ ಮೂಲಕ ದೇವರ ವಾಕ್ಯದ ಆಳವಾದ ಜ್ಞಾನವನ್ನು ಮರೆಮಾಚಬಹುದು. ನೀವು ನಾಶನದ ಅಗಲವಾದ ದಾರಿಯಲ್ಲಿ ನಡೆದು ದೇವರ ರಾಜ್ಯವನ್ನು ಪ್ರವೇಶಿಸಲಾರಿರಿ. ಆದರೆ ದೈವಿಕ ಜೀವಿತದ ಬಾಗಿಲು ಕಿರಿದಾಗಿದೆ, ಅದರ ದಾರಿ ಬಿಕ್ಕಟ್ಟಾಗಿದೆ. ಯೇಸುವು ಇದೇ ದಾರಿಯನ್ನು ಪರ್ವತ ಪ್ರಸಂಗದಲ್ಲಿ ಬೋಧಿಸಿದರು. ಯೇಸುವಿನ ಮಾತಿನ ಸಾರಾಂಶ ಏನೆಂದರೆ, "ನಾನು ಇಲ್ಲಿ ವಿಸ್ತಾರವಾಗಿ ವಿವರಿಸಿ ಹೇಳಿರುವಂತದ್ದು ಬಹಳ ಇಕ್ಕಟ್ಟಿನ ಬಾಗಿಲು ಹಾಗೂ ಬಿಕ್ಕಟ್ಟಿನ ದಾರಿಯಾಗಿದೆ, ಆದರೆ ಅದು ಜೀವಕ್ಕೆ ನಡೆಸುತ್ತದೆ. ಕೇವಲ ಕೆಲವು ಜನರು ಮಾತ್ರ ಅದನ್ನು ಕಂಡುಕೊಳ್ಳುತ್ತಾರೆ." ಜನರ ಒಂದು ದೊಡ್ಡ ಗುಂಪು ಪರ್ವತ ಪ್ರಸಂಗದಲ್ಲಿ ವಿವರಿಸಿದ ದಾರಿಯನ್ನು ಆರಿಸಿಕೊಳ್ಳುತ್ತದೆಂದು ನೀವು ನಿರೀಕ್ಷಿಸುತ್ತೀರಾ? ನಿಶ್ಚಯವಾಗಿ ಹಾಗೆ ಆಗುವುದಿಲ್ಲ.
ಪರ್ವತ ಪ್ರಸಂಗವು ಕ್ರೈಸ್ತರಲ್ಲದವರಿಗೆ ಕೊಡಲ್ಪಟ್ಟಿಲ್ಲ. ಅದು ಶಿಷ್ಯರಲ್ಲದವರಿಗೆ ಉಪಯೋಗವಿಲ್ಲ. ಯಾರು ತಮ್ಮ ಜೀವಿತದಲ್ಲಿ ಈಗಾಗಲೇ ಮಾನಸಾಂತರ ಹಾಗೂ ಕ್ರಿಸ್ತನಲ್ಲಿ ನಂಬಿಕೆಯೆಂಬ ಅಸ್ತಿವಾರವನ್ನು ಇರಿಸಿದ್ದಾರೋ ಮತ್ತು ಯಾರು ಹೊಸದಾಗಿ ಹುಟ್ಟಿ ದೇವರ ಮಕ್ಕಳಾಗಿದ್ದಾರೋ, ಅವರಿಗಾಗಿ ಅದು ಕೊಡಲ್ಪಟ್ಟಿದೆ. ಮೊದಲು ಇದನ್ನು ಮಾಡದೆ ಒಬ್ಬ ವ್ಯಕ್ತಿ ಪರ್ವತ ಪ್ರಸಂಗವನ್ನು ಅನುಸರಿಸುವುದು, ಅಸ್ತಿವಾರವಿಲ್ಲದೆ ಮನೆಯನ್ನು ಕಟ್ಟಿದಂತೆ. ಆದರೆ ಇಲ್ಲಿ, ಕರ್ತನನ್ನು ಹಿಂಬಾಲಿಸುವ ಶಿಷ್ಯರ ಬಗ್ಗೆ ಉಲ್ಲೇಖಿಸಲಾಗಿದೆ. ಅವರು ಬಹಳ ಕಿರಿದಾದ ಬಾಗಿಲಿಗೆ ಬರುತ್ತಾರೆ, ಮತ್ತು ಅದನ್ನು ಕಂಡುಕೊಳ್ಳುವವರು ಬಹಳ ಸ್ವಲ್ಪ ಮಂದಿ ಮಾತ್ರ. ಮತ್ತಾಯನು 5-7ನೇ ಅಧ್ಯಾಯಗಳಲ್ಲಿ ಬರೆದಿರುವ ಈ ಸಂಗತಿಗಳಿಗೆ ವಿಧೇಯರಾಗಲು ಜನರ ದೊಡ್ಡ ಗುಂಪು ನುಗ್ಗಿ ಬರುವುದನ್ನು ನಾನು ನಿರೀಕ್ಷಿಸುವುದಿಲ್ಲ.
ನೀವು ಬೃಹತ್ ಪ್ರಮಾಣದ ಸಭೆಗಳಲ್ಲಿ ಸಾವಿರಗಟ್ಟಲೆ ಜನರು ಕುಳಿತಿರುವುದನ್ನು ನೋಡುವಾಗ, ಇವರು ಜೀವಮಾರ್ಗವನ್ನು ಕಂಡುಕೊಂಡಿರುವ "ಕೆಲವೇ ಜನರೋ", ಎಂದು ಆಶ್ಚರ್ಯ ಪಡಬಹುದು. ಇಲ್ಲವಾದಲ್ಲಿ, ಇವರು ಸುಳ್ಳು ಬೋಧಕರಿಂದ ತಪ್ಪು ದಾರಿಗೆ ನಡೆಸಲ್ಪಟ್ಟು, ಅಗಲವಾದ ದಾರಿಯಲ್ಲಿ ನಾಶಕ್ಕೆ ಹೋಗುತ್ತಿರುವ ಜನರಾಗಿದ್ದಾರೋ? ನಾವು ಯಾವ ಜನರನ್ನೂ ತೀರ್ಪು ಮಾಡಲು ಬಯಸುವುದಿಲ್ಲ. ಒಂದು ಚಿಕ್ಕ ಊರಿನಲ್ಲಿ ಪರ್ವತ ಪ್ರಸಂಗಕ್ಕೆ ವಿಧೇಯರಾಗಿ ಯೇಸುವನ್ನು ಅನುಸರಿಸುವ 30,000 ಜನರು ಇದ್ದರೆ, ನಾನು ಅದಕ್ಕಾಗಿ ಬಹಳ ಹರ್ಷಿಸುತ್ತೇನೆ. 3,000 ಜನರು ಕೂಡಿಬರುವ ಒಂದು ಕ್ರೈಸ್ತಸಭೆಯು ಕ್ರಿಸ್ತನನ್ನು ಅನುಸರಿವುದಾದರೆ, ನಾನು ಅದಕ್ಕಾಗಿ ಸಂತೋಷಿಸುತ್ತೇನೆ. ಭೂಲೋಕದಲ್ಲಿ ಕ್ರಿಸ್ತನನ್ನು ಅನುಸರಿಸದೇ ಕೇವಲ ಪರಲೋಕಕ್ಕೆ ಹೋಗಲು 3,00,000 ಜನರು ಬಯಸುವುದಾದರೆ, ನಾನು ಅದಕ್ಕಾಗಿ ಸಂತೋಷಿಸುವುದಿಲ್ಲ. ನಾನು ವೀಕ್ಷಿಸಿ ತಿಳಕೊಂಡಿರುವುದು ಏನೆಂದರೆ, ಹೆಚ್ಚಿನ ಸಭೆಗಳಲ್ಲಿ ಕುಳಿತಿರುವ ಜನರು ಭೂಲೋಕದಲ್ಲಿ ಕ್ರಿಸ್ತನನ್ನು ಹಿಂಬಾಲಿಸದೆ ಪರಲೋಕಕ್ಕೆ ಹೋಗಲು ಇಚ್ಛಿಸುವವರು ಆಗಿದ್ದಾರೆ. ಅದು ಯೇಸು ಕ್ರಿಸ್ತನ ನಿಜವಾದ ಕ್ರೈಸ್ತಸಭೆಯಲ್ಲ. ಆ ಸಭೆಯನ್ನು ಪಾತಾಳಲೋಕದ ಬಲವು ನಿಶ್ಚಯವಾಗಿ ಸೋಲಿಸುತ್ತದೆ, ಮತ್ತು ಅಲ್ಲಿ ಬೋಧಕರು ಬಾಗಿಲನ್ನು ಎಷ್ಟು ವಿಶಾಲವಾಗಿ ತೆರೆಯುತ್ತಾರೆಂದರೆ, ಜನರ ಒಂದು ದೊಡ್ಡ ಗುಂಪು ಯಾವ ಬೆಲೆಯನ್ನೂ ಕೊಡದೆ ಅಲ್ಲಿಗೆ ಪ್ರವೇಶಿಸಬಹುದು. ಅಲ್ಲಿ ಬಾಗಿಲು ಎಷ್ಟು ಅಗಲವಾಗಿದೆಯೆಂದರೆ, ನೀವು ಹಣದಾಸೆಯನ್ನು ಇರಿಸಿಕೊಂಡು ದೇವರನ್ನು ಸಹ ಪ್ರೀತಿಸುತ್ತೀರಿ ಎಂದು ಯೋಚಿಸಬಹುದಾಗಿದೆ. ಆ ಸಭೆಗಳಲ್ಲಿ ಬಾಗಿಲನ್ನು ಅಗಲಗೊಳಿಸಿದ್ದಾರೆ, ಮತ್ತು ತಾವು ಶಿಷ್ಯರನ್ನು ಸಿದ್ಧಗೊಳಿಸುತ್ತಿದ್ದೇವೆ ಎಂಬುದಾಗಿ ತಮ್ಮನ್ನೇ ವಂಚಿಸಿಕೊಳ್ಳುತ್ತಿದ್ದಾರೆ.
ಪರ್ವತ ಪ್ರಸಂಗದ ಅಂತ್ಯದಲ್ಲಿ ಯೇಸುವು ದೈವಿಕ ಜೀವಿತದ ಬಾಗಿಲು ಬಹಳ ಕಿರಿದಾಗಿದೆಯೆಂದು ವಿವರಿಸಿ ಹೇಳಿದ್ದನ್ನು, ಮತ್ತು ಆ ಜೀವಿತದ ದಾರಿ ಬಹಳ ಬಿಕ್ಕಟ್ಟಿನ ದಾರಿಯೆಂದು ತಿಳಿಸಿದ್ದನ್ನು ನಾವು ಬಹಳ ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಇವುಗಳನ್ನು ಯಥಾರ್ಥವಾಗಿ ಕಂಡುಕೊಳ್ಳುವಂತ ಜನರು ಬಹಳ ಕೆಲವು ಇದ್ದಾರೆ.
ಯೇಸುವು ಇದನ್ನು ಹೇಳಿದ ನಂತರ ಮುಂದೆ ಹೇಳಿದ ಮಾತು, "ಸುಳ್ಳು ಪ್ರವಾದಿಗಳ ವಿಷಯದಲ್ಲಿ ಎಚ್ಚರವಾಗಿರಿ" (ಮತ್ತಾ. 7:15). ಈ ಮಾತನ್ನು ಸರಿಯಾಗಿ ತಿಳಿದುಕೊಳ್ಳುವುದಕ್ಕೆ, ಯಾರು ಸುಳ್ಳು ಪ್ರವಾದಿಗಳು ಎಂಬುದನ್ನು ನಾವು ಅರಿತುಕೊಳ್ಳಬೇಕು. ಕ್ರೈಸ್ತಸಭೆಗೆ ಬಂದು ಇತರ ಧರ್ಮಗಳ ಬಗ್ಗೆ ಮಾತನಾಡುವವರು, ಮತ್ತು ಇತರ ಧರ್ಮಗಳ ಯಾವುದಾದರೂ ಧರ್ಮಗ್ರಂಥದಿಂದ ಬೋಧನೆ ಮಾಡಲು ಶುರುಮಾಡುವವರು ಈ ಸುಳ್ಳುಪ್ರವಾದಿಗಳಲ್ಲಿ ಸೇರಿದ್ದಾರೋ? ಇಲ್ಲ. ಸುಳ್ಳು ಪ್ರವಾದಿಗಳು "ಕುರೀವೇಷದಲ್ಲಿ ನಿಮ್ಮ ಬಳಿಗೆ ಬರುತ್ತಾರೆ." ಕುರೀವೇಷದ ಅರ್ಥ, ಯೇಸು ಕ್ರಿಸ್ತನ ಸೇವಕನಂತೆ ಮತ್ತು ಯೇಸುವಿನ ಕುರಿಯಂತೆ ತೋರಿಕೆ ಮಾಡುವುದು. ಅವರು ಕುರಿಗಳ ವೇಷ ಧರಿಸಿಕೊಳ್ಳುತ್ತಾರೆ. ನೋಡುವಾಗ ಅವರು ಕುರಿಗಳಂತೆ ಕಾಣಿಸುತ್ತಾರೆ. ಅವರು ತಮ್ಮ ಕೈಯಲ್ಲಿ ಸತ್ಯವೇದವನ್ನು ಹಿಡಿದುಕೊಂಡು ಬರುತ್ತಾರೆ, ಆದರೆ ಅವರು ಜೀವಮಾರ್ಗವನ್ನು ಅಗಲವಾಗಿ ಮಾಡುತ್ತಾರೆ. ಅವರು ದೇವರ ವಾಕ್ಯದ ಆಜ್ಞೆಗಳನ್ನು ಅಲ್ಲಗಳೆದು, "ಈ ಆಜ್ಞೆ ಅನಾವಶ್ಯಕವಾಗಿದೆ," ಅಥವಾ "ಈ ವಾಕ್ಯದ ನಿಖರವಾದ ಅರ್ಥ ಹೀಗಿಲ್ಲ .." ಎಂದು ಹೇಳುತ್ತಾರೆ. ಅವರು ದೇವರ ವಾಕ್ಯದ ಹಲವಾರು ಸಂಗತಿಗಳಿಗೆ ವಿಭಿನ್ನವಾದ ವಿವರಣೆ ನೀಡುತ್ತಾರೆ. ಅವರು ಫಿಲಿಪ್ಪಿಯವರಿಗೆ 4:4ರಲ್ಲಿ, "ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ," ಎಂಬ ವಾಕ್ಯವನ್ನು ಹೀಗೆ ವಿವರಿಸುತ್ತಾರೆ, "ಇದರ ಅರ್ಥ 24/7 ಎಂದಲ್ಲ. ಸಾಮಾನ್ಯವಾಗಿ, ಹೆಚ್ಚಿನ ವೇಳೆ ಹೀಗೆ ಮಾಡಬೇಕು." ಫಿಲಿಪ್ಪಿಯವರಿಗೆ 4:6ರಲ್ಲಿ, "ಯಾವ ಸಂಬಂಧವಾಗಿಯೂ ಚಿಂತೆ ಮಾಡಬೇಡಿರಿ," ಎಂದು ಹೇಳಿರುವುದನ್ನು ಅವರು, "ಇದರ ಅರ್ಥ ಎಲ್ಲಾ ಸಂದರ್ಭಗಳಲ್ಲಿ ಎಂದಲ್ಲ. ಸಾಮಾನ್ಯವಾಗಿ ಚಿಂತಿಸಬೇಡಿರಿ ಎಂದು ಇದರ ಅರ್ಥ," ಎಂದು ವಿವರಿಸುತ್ತಾರೆ. 1 ಥೆಸಲೋನಿಕದವರಿಗೆ 5:18ರಲ್ಲಿ, "ಎಲ್ಲದರಲ್ಲಿಯೂ ಕೃತಜ್ಞತಾಸ್ತುತಿ ಮಾಡಿರಿ, ಇದೇ ಕ್ರಿಸ್ತ ಯೇಸುವಿನಲ್ಲಿ ತೋರಿ ಬಂದ ದೇವರ ಚಿತ್ತ," ಎಂಬ ವಾಕ್ಯದ ಕುರಿತಾಗಿ ಇವರು, "ನಿಜವಾಗಿ ಪ್ರತಿಯೊಂದು ವಿಷಯದಲ್ಲಿ ಎಂಬ ಅರ್ಥವಲ್ಲ," ಎನ್ನುತ್ತಾರೆ.
ನೀವು ಕಡೇ ದಿನದಲ್ಲಿ ಯೇಸು ಕ್ರಿಸ್ತನ ಮುಂದೆ ನಿಲ್ಲುವಾಗ, ದೇವರ ಮಾತಿನ ಅರ್ಥ ನಿಖರವಾಗಿ ದೇವರ ವಾಕ್ಯದ ಪ್ರಕಾರವೇ ಆಗಿತ್ತು ಎಂಬ ಸತ್ಯಾಂಶವನ್ನು ಕಂಡುಕೊಳ್ಳುತ್ತೀರಿ. ಕ್ರಿಸ್ತನ ಮಾತಿನ ಅರ್ಥ ನಿಖರವಾಗಿ ಆತನು ನುಡಿದಂತೆಯೇ ಇತ್ತು. ಒಂದು ವೇಳೆ ಮೇಲೆ ತೋರಿಸಿರುವ ಸತ್ಯವೇದದ ವಾಕ್ಯಗಳನ್ನು ನೀವು ನಂಬದೇ ಹೋದರೆ, ನೀವು ಯರ್ಥಾರ್ಥರಾಗಿ ಈ ವಾಕ್ಯಗಳನ್ನು ಅಳಿಸಿಬಿಡಬೇಕು ಅಥವಾ ಸತ್ಯವೇದದ ಆ ಪುಟಗಳನ್ನು ಹರಿದು ಬಿಸಾಡಬೇಕು.
ನೀವು ಸತ್ಯವೇದವು ದೇವರ ವಾಕ್ಯವೆಂದು ಹೇಳಿ, ಆ ವಾಕ್ಯವನ್ನು ಪಾಲಿಸದಿದ್ದರೆ, ನೀವು ಅಪ್ರಾಮಾಣಿಕರು ಮತ್ತು ಕಪಟಿಗಳಾಗಿದ್ದೀರಿ. ದೇವರು ಈ ಕಪಟತನವನ್ನು ನ್ಯಾಯತೀರ್ಪು ಮಾಡುತ್ತಾರೆ. ದೇವರು ಒಬ್ಬ ಪ್ರಾಮಾಣಿಕ ವ್ಯಕ್ತಿಯನ್ನು ಪ್ರೀತಿಸುತ್ತಾರೆ. ಕಪಟ ಕ್ರೈಸ್ತರಿಗಿಂತಲೂ ಹೆಚ್ಚಾಗಿ ದೇವರು ಅನೇಕ ನಾಸ್ತಿಕರನ್ನು ಪ್ರೀತಿಸುತ್ತಾರೆಂದು ನಾನು ನಂಬುತ್ತೇನೆ, ಏಕೆಂದರೆ ಅವರಲ್ಲಿ ಪ್ರಾಮಾಣಿಕತೆ ಇದೆ. ಅವರು ದೇವರಿದ್ದಾರೆಂದು ನಂಬುವುದಿಲ್ಲ. ಅವರು ದೇವರಿಲ್ಲ ಎಂಬಂತೆ ನಡೆದುಕೊಳ್ಳುತ್ತಾರೆ. ಒಬ್ಬ ಲೌಕಿಕ ವ್ಯಾಪಾರಿಯು ಹಣವೇ ದೇವರು, ಬೇರೆ ದೇವರಿಲ್ಲ ಎನ್ನುತ್ತಾನೆ. ಅವನು ಹಣವನ್ನು ಆರಾಧಿಸುತ್ತಾನೆ, ಮತ್ತು ಇದರಲ್ಲಿ ಅವನು ಪ್ರಾಮಾಣಿಕನಾಗಿದ್ದಾನೆ. ಆದರೆ ಯೇಸು ಕ್ರಿಸ್ತನು ನಿಜವಾದ ದೇವರು ಮತ್ತು ಸತ್ಯವೇದವು ದೇವರ ವಾಕ್ಯವೆಂದು ಹೇಳುವ ಕ್ರೈಸ್ತರು, ತಮ್ಮ ಸುತ್ತಮುತ್ತಲಿನ ಲೌಕಿಕ ಜನರಂತೆ ಜೀವಿಸುವುದಾದರೆ, ಅವರು ಕಪಟಿಗಳಾಗಿದ್ದಾರೆ. ಯೇಸುವಿನ ಭೂಲೋಕದ ಜೀವಿತದಲ್ಲಿ, ಅವರು ಇತರರಿಗಿಂತ ಹೆಚ್ಚಾಗಿ ಕಪಟಿಗಳನ್ನು ತಪ್ಪಿತಸ್ತರೆಂದು ಖಂಡಿಸಿದರು, ಎಂಬುದನ್ನು ನೆನಪಿಟ್ಟುಕೊಳ್ಳಿರಿ. ವ್ಯಭಿಚಾರಿಣಿಯು ಕಾಪಾಡಲ್ಪಟ್ಟಳು. ಶಿಲುಬೆಗೆ ಹಾಕಲ್ಪಟ್ಟ ಕಳ್ಳನು ರಕ್ಷಿಸಲ್ಪಟ್ಟನು. ಕೊಲೆಗಾರನು ರಕ್ಷಣೆಗೆ ಪಾತ್ರನಾದನು. ಆದರೆ ಕಪಟಿಗಳು ನರಕಕ್ಕೆ ಹೋದರು.