WFTW Body: 

1. ಯೋಹಾನನು ಯೇಸುವಿನ ಒಬ್ಬ ದಾಸನಾಗಿದ್ದನು:

ನಾವು ಪ್ರಕಟನೆ 1:1ರಲ್ಲಿ ಹೀಗೆ ಓದುತ್ತೇವೆ - ಯೇಸು ಕ್ರಿಸ್ತನ ಪ್ರಕಟನೆಯು; ಬೇಗನೆ ಸಂಭವಿಸ ಬೇಕಾಗಿರುವ ಸಂಗತಿಗಳನ್ನು ತನ್ನ ದಾಸರಿಗೆ ತೋರಿಸುವುದಕ್ಕಾಗಿ ಆತನು ಈ ಪ್ರಕಟನೆಯನ್ನು ದೇವರಿಂದ ಹೊಂದಿದನು; ಆತನು ತನ್ನ ದೂತನನ್ನು ಕಳುಹಿಸಿ ಅವನ ಮೂಲಕ ಆ ಸಂಗತಿಗಳನ್ನು ತನ್ನ ದಾಸನಾದ ಯೋಹಾನನಿಗೆ ತಿಳಿಸಿದನು (ಸೂಚಿಸಿದನು). ಈ ಪ್ರಕಟನೆ ಕೊಡಲ್ಪಟ್ಟದ್ದು ’ಕ್ರಿಸ್ತನ ದಾಸರಿಗೆ’ (ಅಂದರೆ, ಜೀತದಾಳುಗಳಿಗೆ). ಇದು ಜನಸಾಮಾನ್ಯರಿಗೆ ಕೊಡಲ್ಪಡಲಿಲ್ಲ. ಇದು ಇಚ್ಛಾಪೂರ್ವಕವಾಗಿ ಕರ್ತರ ಗುಲಾಮರಾದವರಿಗೆ ಮಾತ್ರ ಕೊಡಲ್ಪಟ್ಟಿದೆ. ಸಂಬಳ ಪಡೆಯುವ ಒಬ್ಬ ಸೇವಕ ಮತ್ತು ಒಬ್ಬ ಗುಲಾಮನ ನಡುವೆ ಒಂದು ವ್ಯತ್ಯಾಸವಿದೆ. ಸೇವಕನು ಸಂಬಳಕ್ಕಾಗಿ ದುಡಿಯುತ್ತಾನೆ. ಆದರೆ ಜೀತದಾಳು ತನ್ನ ಯಜಮಾನನ ಗುಲಾಮನಾಗಿದ್ದಾನೆ ಮತ್ತು ಆತನಿಗೆ ತನ್ನ ಸ್ವಂತದ ಯಾವುದೇ ಹಕ್ಕುಗಳಿಲ್ಲ. ಹಾಗಾದರೆ ಕರ್ತರ ಗುಲಾಮರು ಯಾರು? ಯಾರು ಸಂತೋಷವಾಗಿ ತಮ್ಮ ಸ್ವಂತದ ಎಲ್ಲಾ ಯೋಜನೆಗಳನ್ನು ಮತ್ತು ಆಕಾಂಕ್ಷೆಗಳನ್ನು, ತಮ್ಮ ಎಲ್ಲಾ ಹಕ್ಕುಗಳನ್ನು ಬಿಟ್ಟು ಕೊಟ್ಟಿದ್ದಾರೋ, ಮತ್ತು ಯಾರು ಈಗ ತಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ದೇವರ ಚಿತ್ತವನ್ನು ಮಾತ್ರ ಪೂರೈಸಲು ಬಯಸುತ್ತಾರೋ ಅಂಥವರು. ಇಂತಹ ವಿಶ್ವಾಸಿಗಳು ಮಾತ್ರ ನಿಜವಾದ ಗುಲಾಮರಾಗಿದ್ದಾರೆ. ಕರ್ತರಿಗೆ ಅನೇಕ ಸೇವಕರಿದ್ದಾರೆ, ಆದರೆ ಇಚ್ಛಾಪೂರ್ವಕ ದಾಸರು ಕೇವಲ ಕೆಲವರು. ದೇವರ ವಾಕ್ಯದ ಸರಿಯಾದ ಅರ್ಥವನ್ನು ತಿಳಿಯಲು ಅವರ ದಾಸರಿಗೆ ಮಾತ್ರ ಸಾಧ್ಯವಾಗುತ್ತದೆ. ಇತರರು ದೇವರ ವಾಕ್ಯವನ್ನು ಒಂದು ಪಠ್ಯ ಪುಸ್ತಕವನ್ನು ಅಭ್ಯಾಸ ಮಾಡಿದಂತೆ, ವಿಚಾರ ಶಕ್ತಿಯ ಮೂಲಕ ಅಭ್ಯಾಸಿಸಬಹುದು. ಆದರೆ ಅವರು ಅದರಲ್ಲಿ ಅಡಗಿರುವ ಆತ್ಮಿಕ ನಿಜಾಂಶಗಳನ್ನು ಎಂದಿಗೂ ಗ್ರಹಿಸಲಾರರು. ’ಯೋಹಾನನು 7:17'ರಲ್ಲಿ ಯೇಸುವು ಸ್ಪಷ್ಟವಾಗಿ ತಿಳಿಸಿದಂತೆ, ದೇವರ ಚಿತ್ತದಂತೆ ನಡೆಯುವುದರ ಮೂಲಕ ಮಾತ್ರವೇ ನಾವು ದೇವರ ಬೋಧನೆಯ ಅರ್ಥವನ್ನು ತಿಳಕೊಳ್ಳಬಹುದು.

2. ಆತನು ಕೊನೆಯ ವರೆಗೆ ಒಬ್ಬ ಸಹೋದರನಾಗಿದ್ದನು:

ನಾವು ಪ್ರಕಟನೆ 1:9ರಲ್ಲಿ ಹೀಗೆ ಓದುತ್ತೇವೆ: "ನಿಮ್ಮ ಸಹೋದರನೂ, ಯೇಸುವಿನ ನಿಮಿತ್ತ ಹಿಂಸೆಯಲ್ಲಿಯೂ, ರಾಜ್ಯದಲ್ಲಿಯೂ, ತಾಳ್ಮೆಯಲ್ಲಿಯೂ ನಿಮ್ಮೊಂದಿಗೆ ಪಾಲುಗಾರನೂ ಆಗಿರುವ ಯೋಹಾನನೆಂಬ ನಾನು, ದೇವರ ವಾಕ್ಯಕ್ಕೋಸ್ಕರವೂ, ಯೇಸುವಿನ ವಿಷಯವಾದ ಸಾಕ್ಷಿಗೋಸ್ಕರವೂ ಪತ್ಮೊಸ್ ದ್ವೀಪದಲ್ಲಿದ್ದೆನು." ಇಲ್ಲಿ ನಾವು ಓದುವಂತೆ, ಯೋಹಾನನು ತನ್ನನ್ನು "ನಿಮ್ಮ ಸಹೋದರ" ಎಂದು ಕರೆದುಕೊಳ್ಳುತ್ತಾನೆ. ಆ ಸಮಯದಲ್ಲಿ ಯೇಸುವು ಆರಿಸಿಕೊಂಡಿದ್ದ ಹನ್ನೆರಡು ಅಪೊಸ್ತಲರಲ್ಲಿ ಯೋಹಾನನು ಮಾತ್ರ ಬದುಕಿದ್ದನು. ಪತ್ಮೊಸ್ ದ್ವೀಪದಲ್ಲಿ ಕರ್ತರು ಅವನಿಗೆ ಈ ಪ್ರಕಟನೆಯನ್ನು ಕೊಟ್ಟಾಗ, ಅವನ ವಯಸ್ಸು ಸುಮಾರು 95 ವರ್ಷವಾಗಿತ್ತು. ಅವನು ಈಗಾಗಲೇ ಸುಮಾರು 65 ವರ್ಷಗಳಿಗಿಂತ ಹೆಚ್ಚು ಸಮಯ ದೇವರೊಂದಿಗೆ ನಡೆದಿದ್ದನು. ಆದರೆ ಅವನು ಕೇವಲ ಸಹೋದರ ಮಾತ್ರನಾಗಿದ್ದನು. ಅವನು "ಪೋಪ್ ಯೋಹಾನನು" ಅಥವಾ "ರೆವರೆಂಡ್ ಯೋಹಾನನು" ಆಗಿರಲಿಲ್ಲ. ಅವನು "ಪಾದ್ರಿ" (ಅಥವಾ "ಪಾಸ್ಟರ್") ಯೋಹಾನನು ಕೂಡ ಆಗಿರಲಿಲ್ಲ! ಅವನು ಕೇವಲ ಒಬ್ಬ ಸಾಮಾನ್ಯ ಸಹೋದರನಾಗಿದ್ದನು. ಯೇಸುವು ತನ್ನ ಶಿಷ್ಯರು ಎಲ್ಲಾ ಶಿರೋನಾಮೆಗಳನ್ನು ತಿರಸ್ಕರಿಸಿ, ತಮ್ಮನ್ನು ಸಹೋದರರೆಂದು ಮಾತ್ರ ಉಲ್ಲೇಖಿಸಬೇಕೆಂದು ಕಲಿಸಿದ್ದರು (ಮತ್ತಾ. 23:8-11). ಮತ್ತು ಅಪೊಸ್ತಲರು ಆತನ ಮಾತನ್ನು ಅಕ್ಷರಶಃ ಪಾಲಿಸಿದರು, ಮತ್ತು ಇಂದು ಹಲವರು ಮಾಡುತ್ತಿರುವಂತೆ ಮಾಡಲಿಲ್ಲ. ಕ್ರಿಸ್ತನೊಬ್ಬನೇ ನಮಗೆ ಮುಖ್ಯಸ್ಥನು ಮತ್ತು ನಾಯಕನು ಆಗಿದ್ದಾನೆ. ಮಿಕ್ಕವರಾದ ನಾವೆಲ್ಲರೂ ಎಷ್ಟು ದೇವರ ಸೇವೆ ಮಾಡಿದರೂ, ಅಥವಾ ಸಭೆಯಲ್ಲಿ ಎಷ್ಟು ಅನುಭವ ಹೊಂದಿದ್ದರೂ, ಸಹೋದರರು ಆಗಿರುತ್ತೇವೆ.

3. ಆತನು ಪವಿತ್ರಾತ್ಮ ಭರಿತನಾಗಿದ್ದನು:

ಪ್ರಕಟನೆ 1:9,10ರಲ್ಲಿ ನಾವು ಗಮನಿಸ ಬಹುದಾದ ವಿಷಯ, ಯೋಹಾನನು "ಪವಿತ್ರಾತ್ಮ ಭರಿತನು ಆಗಿದ್ದುದರಿಂದ" ಕರ್ತರ ವಾಣಿಯನ್ನು ಕೇಳಿದನು. ನಾವು ಪವಿತ್ರಾತ್ಮನಿಂದ ತುಂಬಿದ್ದರೆ, ನಾವು ಕೂಡ ಆ ವಾಣಿಯನ್ನು ಕೇಳಲು ಸಾಧ್ಯವಾಗುತ್ತದೆ. ಇವೆಲ್ಲವೂ ನಾವು ಯಾವುದರ ಮೇಲೆ ಮನಸ್ಸನ್ನು ಇಟ್ಟಿದ್ದೇವೆ ಎಂಬುದರ ಮೇಲೆ ಆಧರಿಸಿದೆ. ನಮ್ಮ ಆಲೋಚನೆಗಳು ಈ ಲೋಕದ್ದಾಗಿದ್ದರೆ, ನಮಗೆ ಕೇಳಿಸುವಂತ ಮಾತುಗಳು ಕೂಡ ಲೌಕಿಕ ವಿಷಯಗಳು ಆಗಿರುತ್ತವೆ.

4. ಆತನು ದೀನಭಾವವುಳ್ಳ ಸಹೋದರನಾಗಿದ್ದನು:

ನಾವು ’ಪ್ರಕಟನೆ 1:17'ರಲ್ಲಿ ಕಂಡುಕೊಳ್ಳುವುದು ಏನೆಂದರೆ, ಹಿಂದೆ ಯೇಸುವಿನ ಕೊನೆಯ ಭೋಜನದ ವೇಳೆ ಆತನ ಎದೆಯ ಮೇಲೆ ಒರಗಿದ್ದ ಯೋಹಾನನು, ಈಗ ಸತ್ತ ಮನುಷ್ಯನಂತೆ ಆತನ ಪಾದಗಳ ಮೇಲೆ ಬೀಳುತ್ತಾನೆ. ಯೋಹಾನನು ಈಗಾಗಲೇ 65 ವರ್ಷಗಳ ಕಾಲ ದೇವರೊಂದಿಗೆ ನಡೆದಿದ್ದನು. ಅವನು ನಿಸ್ಸಂದೇಹವಾಗಿ ಈ ಸಮಯದಲ್ಲಿ ಭೂಮಿಯ ಮೇಲೆ ಜೀವಿಸಿದ್ದ ಅತ್ಯಂತ ದೈವಿಕ ಮನುಷ್ಯನಾಗಿದ್ದನು. ಆದರೂ ಅವನು ಕರ್ತನ ಸನ್ನಿಧಿಯಲ್ಲಿ ನೆಟ್ಟಗೆ ನಿಲ್ಲಲು ಸಾಧ್ಯವಾಗಲಿಲ್ಲ. ದೇವರನ್ನು ಯಾರು ಹೆಚ್ಚು ಅರಿತಿದ್ದಾರೋ, ಅವರಲ್ಲಿ ಎಲ್ಲರಿಗಿಂತ ಹೆಚ್ಚಾಗಿ ದೇವರ ಭಯಭಕ್ತಿ ಇರುತ್ತದೆ. ದೇವರನ್ನು ಯಾರು ಬಹಳ ಕಡಿಮೆ ತಿಳಿದಿದ್ದಾರೋ, ಅವರು ದೇವರೊಂದಿಗೆ ಬಹಳ ಅನ್ಯೋನ್ಯತೆ ಹೊಂದಿರುವ ಕಳಪೆ ಪ್ರದರ್ಶನ ಮಾಡುತ್ತಾರೆ. ಕರ್ತರ ಮುಂದೆ ಪರಲೋಕದ ಸೆರಾಫಿಯರು ತಮ್ಮ ಮುಖಗಳನ್ನು ಮುಚ್ಚಿಕೊಳ್ಳುತ್ತಾರೆ (ಯೆಶಾಯನು 6:2,3). ಯೋಬನು ಮತ್ತು ಯೆಶಾಯನು ದೇವರ ಮಹಿಮೆಯನ್ನು ಕಣ್ಣಾರೆ ಕಂಡಾಗ, ತಮ್ಮೊಳಗಿದ್ದ ಪಾಪವನ್ನು ಕಂಡುಕೊಂಡರು ಮತ್ತು ಪಶ್ಚಾತಾಪಪಟ್ಟು ದುಃಖಿಸಿದರು (ಯೋಬ. 42:5,6; ಯೆಶಾಯನು 6:5). "ದೇವದೂತರು ಕಾಲಿಡಲು ಹಿಂಜರಿಯುವ ಜಾಗಕ್ಕೆ ಮೂರ್ಖರು ಒಳನುಗ್ಗುತ್ತಾರೆ"!! ಇದು ಶರೀರಭಾವದ ವಿಶ್ವಾಸಿಯ ಮೂಢತನವಾಗಿದೆ. ನಾವು ಕರ್ತರನ್ನು ಹೆಚ್ಚು ಹೆಚ್ಚಾಗಿ ತಿಳಿದುಕೊಳ್ಳುತ್ತಿರುವಾಗ, ಭಯಭಕ್ತಿಯಿಂದ ಬೆರಗಾಗಿ ಅವರನ್ನು ಆರಾಧಿಸುತ್ತಾ, ಅವರ ಪಾದಗಳ ಮುಂದೆ ಸಾಷ್ಟಾಂಗವಾಗಿ ಅಡ್ಡಬಿದ್ದು, ನಮ್ಮ ಮುಖವನ್ನು ನೆಲದ ಧೂಳಿನಲ್ಲಿ ಇರಿಸುತ್ತೇವೆ. ಆಗ ಮಾತ್ರವೇ ನಾವು ದೇವರ ಮಹಿಮೆಯನ್ನು ನಿರಂತರವಾಗಿ ನೋಡುತ್ತೇವೆ, ಮತ್ತು ನಮ್ಮ ಸ್ವಂತ ಜೀವಿತದಲ್ಲಿ ಕ್ರಿಸ್ತನ ಸಾರೂಪ್ಯ ಇಲ್ಲದಿರುವುದನ್ನು ಕಾಣುತ್ತೇವೆ. ಆಗ ಮಾತ್ರವೇ ನಾವು ಇತರರನ್ನು ನ್ಯಾಯತೀರ್ಪು ಮಾಡುವುದನ್ನು ನಿಲ್ಲಿಸಿ ನಮ್ಮನ್ನೇ ನ್ಯಾಯವಿಚಾರಣೆ ಮಾಡುತ್ತೇವೆ. ಆಗ ಮಾತ್ರವೇ ಪತ್ಮೊಸ್ ದ್ವೀಪದಲ್ಲಿ ಯೋಹಾನನು ಅನುಭವಿಸಿದಂತೆ, ದೇವರ ಶಕ್ತಿಯು ನಮ್ಮನ್ನು ಸ್ಪರ್ಶಿಸಿದ ಅನುಭವ ನಮಗೆ ಆಗುತ್ತದೆ.

5. ಆತನು ಶೋಧನೆಯನ್ನು ಅನುಭವಿಸಿ ನೋಡಿದನು :

ಪ್ರಕಟನೆ 1:9ರಲ್ಲಿ, "ಯೇಸುವು ಅನುಭವಿಸುವ ಹಿಂಸೆಯಲ್ಲಿ ಪಾಲುಗಾರನು" ಎಂದು ಸಹ ಯೋಹಾನನು ತನ್ನ ಬಗ್ಗೆ ಉಲ್ಲೇಖಿಸುತ್ತಾನೆ. ಯೇಸುವಿನ ಪ್ರತಿಯೊಬ್ಬ ಯಥಾರ್ಥ ಶಿಷ್ಯನು "ಯೇಸುವಿನಲ್ಲಿ ಇರುವಂತ ಹಿಂಸೆಯಲ್ಲಿ ಪಾಲ್ಗೊಳ್ಳಲು" ತನ್ನ ಭೂಲೋಕದ ಜೀವಿತವಿಡೀ ಸಿದ್ಧನಾಗಿರಬೇಕು. ಯೋಹಾನನು ಆರಾಮದ ಜೀವಿತ ಜೀವಿಸುತ್ತಿರುವಾಗ ಆತನಿಗೆ ಈ ಪ್ರಕಟನೆಯು ಪ್ರಕಟವಾಗಲಿಲ್ಲ. ಆತನು "ದೇವರ ವಾಕ್ಯಕ್ಕೋಸ್ಕರವೂ, ಯೇಸುವಿನ ವಿಷಯವಾದ ಸಾಕ್ಷಿಗೋಸ್ಕರವೂ" ಯಥಾರ್ಥವಾಗಿ ಜೀವಿಸಿದ್ದರ ಪರಿಣಾಮವಾಗಿ ಪತ್ಮೊಸ್ ದ್ವೀಪದಲ್ಲಿ ಶೋಧನೆಯನ್ನು ಅನುಭವಿಸುತ್ತಿದ್ದ ಸಮಯದಲ್ಲಿ, ಈ ಪ್ರಕಟನೆಯನ್ನು ಪಡೆದನು (ಪ್ರಕಟನೆ 1:9). ಅಂತ್ಯದಿನಗಳಲ್ಲಿ ದೇವಜನರು ಕ್ರಿಸ್ತವಿರೋಧಿಯ ಮೂಲಕ ಅನುಭವಿಸಲಿರುವ ಮಹಾ ಸಂಕಟಕಾಲದ ಕುರಿತಾಗಿ ಬರೆಯುವುದಕ್ಕಾಗಿ, ಆತನು ಸ್ವತಃ ಶೋಧನೆಯ ಅನುಭವವನ್ನು ಪಡೆಯುವುದು ಅವಶ್ಯವಾಗಿತ್ತು. ದೇವರು ನಮಗೆ ಶೋಧನೆಗೆ ಒಳಗಾಗಿರುವ ಜನರ ಸೇವೆಯ ಅವಕಾಶವನ್ನು ಕೊಡುವುದಕ್ಕೆ ಮೊದಲು, ನಮ್ಮನ್ನು ಸಂಕಟಗಳು ಮತ್ತು ಶೋಧನೆಗಳ ಮೂಲಕ ಕರೆದೊಯ್ಯುತ್ತಾರೆ.