ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ
WFTW Body: 

ಅಪೊಸ್ತಲ ಪೌಲನು ಕೊಲೊಸ್ಸೆಯವರಿಗೆ 2:2ರಲ್ಲಿ, "ನಿಮ್ಮ ಹೃದಯಗಳು ಪ್ರೀತಿಯಿಂದ ಹೊಂದಿಕೆಯಾಗಿದ್ದು, ಬುದ್ಧಿಪೂರ್ವಕವಾಗಿ ನಿಶ್ಚಯವೆಂಬ ಭಾಗ್ಯವನ್ನು ಧೃಢವಾಗಿ ಪಡೆದು, ದೇವರು ತಿಳಿಸಿರುವ ಮರ್ಮವನ್ನು ಅಂದರೆ ಸ್ವತಃ ಕ್ರಿಸ್ತನನ್ನು ತಿಳಿದುಕೊಳ್ಳಬೇಕು, ಎಂದು ನಾನು ನಿಮಗೋಸ್ಕರ ವಿಜ್ಞಾಪನೆ ಮಾಡುತ್ತೇನೆ," ಎನ್ನುತ್ತಾನೆ (ಭಾವಾನುವಾದ). ಹೊಸ ಒಡಂಬಡಿಕೆಯಲ್ಲಿ ಕೆಲವು ಕಡೆ "ಮರ್ಮ" ಅಥವಾ "ರಹಸ್ಯ" ಎಂಬ ಪದವು ಕಂಡುಬರುತ್ತದೆ ಮತ್ತು ಅಲ್ಲಿ ಪ್ರಸ್ತಾಪಿಸಲಾದ ರಹಸ್ಯ ಅಥವಾ ಮರ್ಮವು ನಿಮಗೆ ದೇವರು ತನ್ನ ಪವಿತ್ರಾತ್ಮನ ಮೂಲಕ ತೋರಿಸಿದಾಗ ಮಾತ್ರ ಅರ್ಥವಾಗುವಂಥದ್ದು ಆಗಿರುತ್ತದೆ. 1ಕೊರಿಂಥದವರಿಗೆ 2:9-10ರಲ್ಲಿ ಹೀಗೆ ಹೇಳಲಾಗಿದೆ, "ದೇವರು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧ ಮಾಡಿರುವಂಥ ಎಲ್ಲವನ್ನು ಕಣ್ಣು ಕಾಣಲಿಲ್ಲ, ಕಿವಿ ಕೇಳಲಿಲ್ಲ, ಅದರ ಭಾವನೆಯು ಮನುಷ್ಯನ ಹೃದಯದಲ್ಲಿ ಹುಟ್ಟಲಿಲ್ಲ. ನಮಗಾದರೋ ದೇವರು ಅದನ್ನು ತನ್ನ ಆತ್ಮನ ಮೂಲಕ ಪ್ರಕಟಿಸಿದನು."

ಸತ್ಯವೇದದಲ್ಲಿ ಎರಡು ರಹಸ್ಯಗಳು ಮಾತ್ರ "ಬಹು ದೊಡ್ಡ" ರಹಸ್ಯಗಳೆಂದು ಕರೆಯಲ್ಪಟ್ಟಿವೆ. ಅವುಗಳಲ್ಲೊಂದು, ದೇವರು ಮಾನವ ಶರೀರಧಾರಿಯಾಗಿ ಬಂದರು ಎಂಬುದು ರಹಸ್ಯ ಸಂಗತಿಯಾಗಿದೆ (1 ತಿಮೊ. 3:16): "ದೇವಭಕ್ತಿಗೆ ಆಧಾರವಾಗಿರುವ ಸತ್ಯಾರ್ಥವು ಗಂಭೀರವಾದದ್ದು. ದೇವರು ಶರೀರಧಾರಿಯಾಗಿ ಪ್ರತ್ಯಕ್ಷನಾದನು." ಇದು ದೇವಭಕ್ತಿಯ ರಹಸ್ಯವೆಂದು ಕರೆಯಲ್ಪಟ್ಟಿದೆ, ಅಂದರೆ ದೈವಿಕ ಜೀವನವನ್ನು ಜೀವಿಸುವುದು ಹೇಗೆಂದು ತೋರಿಸುವ ರಹಸ್ಯ ಇದಾಗಿದೆ. ಎರಡನೆಯ "ರಹಸ್ಯ" ಯಾವುದೆಂದರೆ, ಸಭೆಯು ಕ್ರಿಸ್ತನ ಶರೀರ ಮತ್ತು ಕ್ರಿಸ್ತನ ಮದಲಗಿತ್ತಿಯಾಗಿದೆ ಎಂಬುದು ಮತ್ತೊಂದು ವಿಚಾರ. ಎಫೆಸದವರಿಗೆ 5:32ರಲ್ಲಿ ಹೀಗೆ ಹೇಳಲಾಗಿದೆ, "ನಾನು ಕ್ರಿಸ್ತನಿಗೂ, ಸಭೆಗೂ ಇರುವ ಸಂಬಂಧವನ್ನು ಕುರಿತು ಮಾತಾಡುತ್ತಾ ಇದ್ದೇನೆ; ಇದುವರೆಗೆ ಗುಪ್ತವಾಗಿದ್ದ ಈ ಸತ್ಯಾರ್ಥವು ಬಹು ಗಂಭೀರವಾದದ್ದು. ಅದೇನೆಂದರೆ, ಅವರಿಬ್ಬರೂ ಒಂದೇ ಶರೀರವಾಗಿರುವರು." ಕ್ರಿಸ್ತಸಭೆಯು ಕ್ರಿಸ್ತನೊಂದಿಗೆ ಒಂದೇ ಶರೀರವಾಗುವುದು ಎರಡನೆಯ ದೊಡ್ಡ ರಹಸ್ಯವಾಗಿದೆ.

ಯೇಸುವು ನಮ್ಮಂತೆಯೇ ರಕ್ತಮಾಂಸಧಾರಿಯಾಗಿ ಬಂದರು, ನಮ್ಮಂತೆಯೇ ಶೋಧಿಸಲ್ಪಟ್ಟರು, ಮತ್ತು ಪ್ರತಿಯೊಂದು ಶೋಧನೆಯನ್ನು ಜಯಿಸಿದರು, ಅದಲ್ಲದೆ ಈಗ ನಾವು ಅವರು ನಡೆದಂತೆ ನಡೆಯಬಹುದು, ಪಾಪವನ್ನು ಜಯಿಸಬಹುದು ಮತ್ತು ಹಾಗೆ ಮಾಡುವುದರ ಮೂಲಕ ನಾವು ಇದೇ ರೀತಿ ನಡೆಯುತ್ತಿರುವ ಇತರ ವಿಶ್ವಾಸಿಗಳ ಜೊತೆಯಲ್ಲಿ ಕ್ರಿಸ್ತನ ದೇಹವನ್ನು ಕಟ್ಟಬಹುದು - ಮೇಲಿನ ಎಲ್ಲಾ ಸಂಗತಿಗಳನ್ನು ನಾವು ಗ್ರಹಿಸ ಬೇಕಾದರೆ, ನಮಗೆ ಅವಶ್ಯವಾಗಿ ದೇವರಿಂದ ಪ್ರಕಟನೆ ಸಿಗಬೇಕು. ಯಾವನೇ ಆದರೂ ಈ ಪ್ರಪಂಚದಲ್ಲಿ ಮಾಡಬಹುದಾದ ಅತ್ಯಂತ ಶ್ರೇಷ್ಠ ಸೇವೆ ಯಾವುದೆಂದರೆ, ಅದು ಕ್ರೈಸ್ತ ಸಭೆಯನ್ನು ಕ್ರಿಸ್ತನ ದೇಹವಾಗಿ ಅಭಿವೃದ್ಧಿ ಪಡಿಸುವುದಾಗಿದೆ. ಇದಕ್ಕಿಂತ ಉನ್ನತವಾದ ಶ್ರೇಷ್ಠ ಕಾರ್ಯ ಯಾವುದೂ ಇರಲಾರದು. ಪೌಲನು ತನ್ನ ಸಮಸ್ತ ಜೀವಿತವನ್ನು ಇಂತಹ ಸಭೆಯ ನಿರ್ಮಾಣಕ್ಕಾಗಿ ಶ್ರಮಿಸುತ್ತಾ ಜೀವಿಸಿದನು.

ದೇವರ ಅತಿ ಶ್ರೇಷ್ಠ ಸೇವಕರು ಯಾರೆಂದರೆ, ಕ್ರಿಸ್ತನ ಸಭೆಯನ್ನು ಕಟ್ಟಲು ಆತನ ಜೊತೆಯಲ್ಲಿ ದುಡಿಯುವವರು. ದೈವಿಕ ಜೀವನವನ್ನು ಜೀವಿಸುವುದು ಅವಶ್ಯ; ಆದರೆ ಅದೊಂದೇ ಸಾಕಾಗುವುದಿಲ್ಲ. ಪೌಲನು ಮಾಡಿದ ಕಾರ್ಯವನ್ನು ನಾವು ಸಹ ಮಾಡಬೇಕಿದೆ - ಸಭೆಯನ್ನು ಕಟ್ಟುವದು. ಪೌಲನು ತನ್ನ ಜೀವಿತವನ್ನು ಸಮಾಜ ಸೇವೆಗಾಗಿ ವ್ಯಯಿಸಲಿಲ್ಲ. ಬಡ ಜನರಿಗೆ ಲೌಕಿಕ ಸಂಗತಿಗಳಲ್ಲಿ ಸಹಾಯ ಒದಗಿಸುವುದು ಒಳ್ಳೆಯದು, ಆದರೆ ಅದು ದೇವರ ನಿತ್ಯತ್ವದ ಉದ್ದೇಶವನ್ನು ಸಾಧಿಸುವುದಿಲ್ಲ. ನೀವು ಜನರಿಗೆ ಕೇವಲ ವಿದ್ಯಾಭ್ಯಾಸ ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ನೀಡುವುದರ ಮೂಲಕ ಅವರ ಜೀವನವನ್ನು ಸುಗಮ ಗೊಳಿಸಿದರೆ, ನರಕಕ್ಕೆ ಹೋಗುವ ದಾರಿಯನ್ನು ಅವರಿಗಾಗಿ ತಿಳಿಗೊಳಿಸಿದ ಹಾಗಾಯಿತು! ಅವರು ಮೊದಲು ಒಂದು ಒರಟಾದ ಮಾರ್ಗದಲ್ಲಿ ನರಕಕ್ಕೆ ಹೋಗುತ್ತಿದ್ದರು, ಆದರೆ ನೀವು ಅವರಿಗಾಗಿ ಆ ಮಾರ್ಗದ ಕೆಲವು ಅಡೆತಡೆಗಳನ್ನು ತೆಗೆದುಹಾಕಿದಿರಿ. ಪೌಲನು ಅರಿತುಕೊಂಡದ್ದು ಏನೆಂದರೆ, ಇತರ ಎಲ್ಲಾ ಸೇವೆಗಳಿಗಿಂತ ಹೆಚ್ಚು ಪ್ರಮುಖವಾದದ್ದು, ಜನರನ್ನು ಕ್ರಿಸ್ತನ ಬಳಿಗೆ ನಡೆಸುವುದು, ಅವರಿಗೆ ಒಂದು ದೈವಿಕ ಜೀವನದ ಮಾದರಿಯನ್ನು ತೋರಿಸಿಕೊಡುವುದು ಮತ್ತು ಆ ಮೇಲೆ ಅವರನ್ನು ಇತರರೊಂದಿಗೆ ಸೇರಿಸಿ ಒಂದು ದೇಹವಾಗಿ ಕಟ್ಟುವುದು. ನಮ್ಮಲ್ಲಿ ಯಾರೇ ಆಗಲಿ ಮಾಡಬಹುದಾದ ಸೇವೆಗಳಲ್ಲಿ ಅತ್ಯಂತ ಶ್ರೇಷ್ಠವಾದದ್ದು ಇದಾಗಿದೆ.

ಕ್ರಿಸ್ತನ ಹೆಸರಿನಲ್ಲಿ ಸಮಾಜ ಸೇವೆ ಮತ್ತು ಬಡಜನರ ಸೇವೆಯನ್ನು ಮಾಡುವ ಎಲ್ಲರನ್ನು ನಾವು ಗೌರವಿಸುತ್ತೇವೆ. ಆ ಕರೆಯನ್ನು ಪಡೆದಿರುವ ಪ್ರತಿಯೊಬ್ಬರನ್ನು ದೇವರು ಆಶೀರ್ವದಿಸಲಿ. ಆದರೆ ಪೌಲನು ಯಾವತ್ತೂ ಇದಕ್ಕೆ ಕೈ ಹಾಕಲಿಲ್ಲ - ಆತನ ಕಾಲದ ಸಮಾಜದಲ್ಲಿ ಎಷ್ಟೋ ಅವಶ್ಯಕತೆಗಳು ಇದ್ದವು. ಬಡವರಿಗೆ ಸಹಾಯ ಒದಗಿಸಿದ್ದಕ್ಕಾಗಿ ಕೆಲವರಿಗೆ ಪಾಪಂಚಿಕ "ನೊಬೆಲ್ ಶಾಂತಿ ಪುರಸ್ಕಾರ"ದಂತಹ ಮಾನ್ಯತೆ ಸಿಗಬಹುದು. ಆದರೆ ಯೇಸು ಮತ್ತು ಪೌಲರು ನಿಶ್ಚಯವಾಗಿ ನೊಬೆಲ್ ಶಾಂತಿ ಪುರಸ್ಕಾರದ ಅರ್ಹತೆಯನ್ನು ಹೊಂದಿರಲಿಲ್ಲ. ಕ್ರೈಸ್ತ ಸಭೆಯನ್ನು ಕಟ್ಟುವವರಿಗೆ ಯಾರೂ ನೊಬೆಲ್ ಪುರಸ್ಕಾರವನ್ನು ಕೊಡುವುದಿಲ್ಲ.

ಕೊಲೊಸ್ಸೆಯವರಿಗೆ 4:17ನೇ ವಚನದಲ್ಲಿ, ಪೌಲನು ಅರ್ಖಿಪ್ಪನಿಗೆ, "ನೀನು ಕರ್ತನಿಂದ ಹೊಂದಿರುವ ಸೇವೆಯನ್ನು ನೆರವೇರಿಸುವುದಕ್ಕೆ ಎಚ್ಚರವಾಗಿರು," ಎಂಬುದಾಗಿ ಬಹಳ ಸುಂದರವಾದ ಒಂದು ಮಾರ್ಗದರ್ಶನವನ್ನು ಕೊಟ್ಟದ್ದರ ಬಗ್ಗೆ ನಾವು ಓದುತ್ತೇವೆ. ದೇವರು ಇತರರಿಗೆ ಕೊಟ್ಟಿರುವ ಸೇವೆಯ ಅವಕಾಶವನ್ನು ನೋಡಿ ಅಸಮಾಧಾನ ಹೊಂದಬೇಡಿರಿ. ದೇವರು ನಿಮಗೆ ಒಂದು ಪ್ರತ್ಯೇಕ ಸೇವೆಯನ್ನು ಕೊಟ್ಟಿದ್ದಾರೆ. ಅದರ ಕಡೆಗೆ ಗಮನ ಹರಿಸಿರಿ ಮತ್ತು ಅದಕ್ಕಾಗಿ ಎಷ್ಟು ದೊಡ್ಡ ಬೆಲೆಯನ್ನು ಕೊಡಬೇಕಾದರೂ ಪರವಾಗಿಲ್ಲ, ಆ ಸೇವೆಯನ್ನು ನೆರವೇರಿಸಿರಿ. ಮೇಲೆ ಹೇಳಿರುವ ವಾಕ್ಯದಲ್ಲಿ, ಅರ್ಖಿಪ್ಪನ ಜಾಗದಲ್ಲಿ ನಿಮ್ಮ ಹೆಸರನ್ನು ಬರೆಯಿರಿ ಮತ್ತು ಅದು ನಿಮ್ಮ ಹೃದಯಕ್ಕೆ ಕೊಡಲ್ಪಟ್ಟ ವಾಕ್ಯವೆಂದು ಅಂದುಕೊಳ್ಳಿರಿ. ನನ್ನ ಎಳೆ ಪ್ರಾಯದಲ್ಲಿ ನಾನು ಈ ವಚನವನ್ನು ಓದಿಕೊಂಡಾಗ, ನಾನು ನನ್ನ ಹೆಸರನ್ನು ಅರ್ಖಿಪ್ಪನ ಜಾಗದಲ್ಲಿ ಹಾಕಿದೆನು ಮತ್ತು ಕರ್ತನಿಂದ ಈ ಮಾತನ್ನು ಪಡೆದೆನು, "ನಾನು ನಿನಗೆ ಕೊಟ್ಟಿರುವ ಸೇವೆಯನ್ನು ನೆರವೇರಿಸುವುದಕ್ಕೆ ಎಚ್ಚರವಾಗಿರು. ಬೇರೆ ಸಂಗತಿಗಳನ್ನು ನೋಡಿ ಅಡ್ಡ ದಾರಿ ಹಿಡಿಯಬೇಡ ಮತ್ತು ಯಾವುದೋ ಬೇರೆ ಕಾರ್ಯಕ್ಕೆ ಕೈ ಹಾಕಬೇಡ." ನಾನು ನಿಮ್ಮೆಲ್ಲರಿಗೆ ಹೇಳುವ ಮಾತೆಂದರೆ, ದೇವರು ಒಂದು ಸಭೆಯನ್ನು ಕಟ್ಟುವುದಕ್ಕಾಗಿ ನಿಮ್ಮನ್ನು ಕರೆದಿದ್ದರೆ, ಸಮಾಜ ಸೇವೆಯ ಅಡ್ಡದಾರಿಯಲ್ಲಿ ಹೋಗಬೇಡಿರಿ. ದೇವರು ಒಂದು ಪ್ರವಾದನಾ ಸೇವೆಗೆ ನಿಮ್ಮನ್ನು ಕರೆದಿದ್ದಲ್ಲಿ, ನೀವು ಯಾವುದೋ ಒಂದು ಕ್ರೈಸ್ತ ಸಂಘಟನೆಗೆ ಸೇರಿಕೊಂಡು, ಒಬ್ಬ ನಿರ್ದೇಶಕನ ಉನ್ನತ ಸ್ಥಾನವನ್ನು ಪಡೆದುಕೊಳ್ಳ ಬೇಡಿರಿ. ದೇವರು ನಿಮಗೆ ಕೊಟ್ಟಿರುವ ಸೇವೆಗೆ ಗಮನ ಹರಿಸಿರಿ ಮತ್ತು ಅದನ್ನು ಪೂರೈಸಿರಿ.