WFTW Body: 

ನಾವು ’ನ್ಯಾಯಸ್ಥಾಪಕರು 6ನೇ ಅಧ್ಯಾಯ’ದಲ್ಲಿ ಓದುವಂತೆ, ದೇವರು ಇಸ್ರಾಯೇಲಿನ ವಿಮೋಚಕನಾಗಿ ಗಿದ್ಯೋನನನ್ನು ಎಬ್ಬಿಸಿದರು. "ಗಿದ್ಯೋನನು ಕರ್ತನ ಆತ್ಮನಿಂದ ಹೊದಿಸಲ್ಪಟ್ಟನು" (ನ್ಯಾಯ. 6:34 - margin). ಪವಿತ್ರಾತ್ಮನು ಗಿದ್ಯೋನನ ಮೇಲೆ ಉಡುಪಿನಂತೆ ತೊಡಿಸಲ್ಪಟ್ಟನು. ಆಗ ಗಿದ್ಯೋನನು ಆತ್ಮನ ಬಲವನ್ನು ಹೊಂದಿದನು ಮತ್ತು ಕೊಂಬನ್ನು ಊದಿ, ರಣರಂಗಕ್ಕೆ ಹೊರಟನು ಮತ್ತು ಕರ್ತರು ಅವನಿಗೆ ಜಯವನ್ನು ಕೊಟ್ಟರು. ಆದರೆ ಗಿದ್ಯೋನನು ಕೊನೆಯ ವರೆಗೆ ಕರ್ತರಿಗೆ ನಂಬಿಗಸ್ತನಾಗಿ ನಡೆಯಲಿಲ್ಲ.

ಉತ್ತಮವಾಗಿ ಆರಂಭಿಸಿದ ಅನೇಕ ಜನರ ದುಃಖಕರ ಕಥೆ ಇದೇ ರೀತಿಯಾಗಿದೆ - ಹಳೆಯ ಒಡಂಬಡಿಕೆಯ ಅಡಿಯಲ್ಲಿ ಮಾತ್ರವಲ್ಲದೆ ಈ ದಿವಸವೂ ಕೂಡ. ಇಸ್ರಾಯೇಲ್ಯರು ತಮ್ಮ ಅರಸನಾಗಿ ಗಿದ್ಯೋನನು ಆಳಬೇಕೆಂದು ಇಚ್ಛಿಸಿದಾಗ, ಅವನು ಕೊಟ್ಟ ಜವಾಬು, "ನಾನಾಗಲೀ, ನನ್ನ ಮಗನಾಗಲೀ ನಿಮ್ಮನ್ನು ಆಳುವುದಿಲ್ಲ; ಕರ್ತನೇ ನಿಮ್ಮ ಅರಸನಾಗಿ ಇರುವನು" (ನ್ಯಾಯ. 8:22,23). ಇದು ಶ್ರೇಷ್ಠ ಆತ್ಮಿಕ ಮನೋಭಾವದಂತೆ ಕಾಣಿಸಬಹುದು. ಆದರೆ ಆತನ ಮುಂದಿನ ಮಾತನ್ನು ಕೇಳಿರಿ: "ನಿಮ್ಮಲ್ಲಿ ಪ್ರತಿಯೊಬ್ಬನೂ ನನಗೆ ಒಂದೊಂದು ಬಂಗಾರದ ಓಲೆಯನ್ನು ಕೊಡಿರಿ" (ನ್ಯಾಯ. 8:24). ಹಾಗಾಗಿ ಎಲ್ಲಾ ಇಸ್ರಾಯೇಲ್ಯರು ತಮ್ಮ ಓಲೆಗಳನ್ನು ಗಿದ್ಯೋನನಿಗೆ ಕೊಟ್ಟರು ಮತ್ತು ಆತನು 1700 ತೊಲೆಗಳಷ್ಟು (ಸುಮಾರು 20 kg) ಬಂಗಾರ ಮತ್ತು ಅದರ ಜೊತೆಗೆ ಬಹಳಷ್ಟು ಇತರ ಆಭರಣಗಳು ಮತ್ತು ಬೆಲೆಬಾಳುವ ಉಡುಪುಗಳನ್ನು ಸಂಗ್ರಹಿಸಿದನು (ನ್ಯಾಯ. 8:26). ಗಿದ್ಯೋನನು ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾದನು - ಇದು ಅನೇಕ ಬೋಧಕರು ತಮ್ಮ ಸಭಾಸದರಿಂದ ದಶಮಾಂಶಗಳು ಮತ್ತು ಕಾಣಿಕೆಗಳನ್ನು ಸಂಗ್ರಹಿಸಿ ಕೋಟ್ಯಾಧಿಪತಿಗಳಾಗಿ, ಅದನ್ನು ತಮ್ಮ ಸ್ವಂತಕ್ಕಾಗಿ ಉಪಯೋಗಿಸಿಕೊಳ್ಳುವ ಹಾಗಿದೆ! ಸಂಗ್ರಹಿಸಿದ ಬಂಗಾರದ ಸ್ವಲ್ಪ ಅಂಶವನ್ನು ಗಿದ್ಯೋನನು ಒಂದು ಏಫೋದನ್ನು ಮಾಡಲು ಬಳಸಿದನು ಮತ್ತು ಇಸ್ರಾಯೇಲ್ಯರು ಅದನ್ನು ಆರಾಧಿಸಿದರು (ನ್ಯಾಯ. 8:27). ಈ ಮಹಾ ಪುರುಷನು ಈ ರೀತಿಯಾಗಿ ಹಿಂಜಾರಿದನು.

ಒಬ್ಬ ಮನುಷ್ಯ ತನ್ನ ಜೀವನವನ್ನು ಹೇಗೆ ಆರಂಭಿಸುತ್ತಾನೆ ಎಂಬುದು ಮುಖ್ಯವಲ್ಲ, ಆದರೆ ಅದನ್ನು ಹೇಗೆ ಕೊನೆಗೊಳಿಸುತ್ತಾನೆ ಎಂಬುದು ಮುಖ್ಯವಾದ ವಿಷಯವಾಗಿದೆ. ಒಂದು ಓಟದ ಸ್ಪರ್ಧೆಯಲ್ಲಿ ’ಜಯಶಾಲಿ’ ಎಂಬ ಬಿರುದನ್ನು ಚೆನ್ನಾಗಿ ಅಂತಿಮ ಗುರಿ ತಲುಪಿದವರು ಪಡೆಯುತ್ತಾರೆಯೇ ಹೊರತು, ಓಟವನ್ನು ಉತ್ತಮವಾಗಿ ಆರಂಭಿಸಿದವರು ಅಲ್ಲ (1 ಕೊರಿ. 9:24). ನಮಗೆ ಕೊಡಲ್ಪಟ್ಟ ಆದೇಶವೇನೆಂದರೆ, "ಜನರು ಹೇಗೆ ಅಂತ್ಯವನ್ನು ತಲುಪಿದರು ಎಂಬುದನ್ನು ಪರಿಗಣಿಸಿರಿ" (ಇಬ್ರಿ. 13:7 - margin). ಬೋಧಕರಲ್ಲಿ ಅನೇಕರು ಆರಂಭದ ದಿನಗಳಲ್ಲಿ ದೇವರಿಂದ ಬಹಳ ಪ್ರಬಲವಾದ ರೀತಿಯಲ್ಲಿ ಉಪಯೋಗಿಸಲ್ಪಟ್ಟು, ಅನಂತರ ಗಿದ್ಯೋನನಂತೆ ಹಿಂಜಾರಿದ್ದಾರೆ ಮತ್ತು ತಮ್ಮ ಜೀವಿತದ ಕೊನೆಯಲ್ಲಿ ಹಣ ಮತ್ತು ಆಸ್ತಿಪಾಸ್ತಿಯನ್ನು ಗಳಿಸುವ ಪ್ರಯಾಸದಲ್ಲಿ ಸಿಲುಕಿದ್ದಾರೆ! ಅವರು ತಮ್ಮಲ್ಲಿದ್ದ ಆತ್ಮನ ಅಭಿಷೇಕವನ್ನು ಕಳೆದುಕೊಂಡು, ಜೀವಿತದ ಕೊನೆಯಲ್ಲಿ ತಮ್ಮ ಮಕ್ಕಳಿಗಾಗಿ ಸಂಪತ್ತನ್ನು ಮತ್ತು ಚಿನ್ನದ ಓಲೆಗಳನ್ನು ಸಂಗ್ರಹಿಸುವುದಕ್ಕೆ ತೊಡಗುತ್ತಾರೆ! ನಿಮ್ಮಲ್ಲಿ ಉತ್ತಮವಾಗಿ ಆರಂಭಿಸಿರುವ ಜನರಿಗೆ ನಾನು ಇದನ್ನು ಹೇಳಲು ಬಯಸುತ್ತೇನೆ: ಗಿದ್ಯೋನನಿಂದ ಒಂದು ಪಾಠವನ್ನು ಕಲಿಯಿರಿ, ಇಲ್ಲವಾದಲ್ಲಿ ನಿಮ್ಮ ಸ್ಥಿತಿಯೂ ಅವನಂತೆಯೇ ಆಗಬಹುದು. ನೀವು ದೇವರನ್ನೂ ಧನವನ್ನೂ ಒಂದಾಗಿ ಸೇವೆ ಮಾಡಲು ಆಗುವುದಿಲ್ಲ.

’ನ್ಯಾಯಸ್ಥಾಪಕರು 13ನೇ ಅಧ್ಯಾಯ’ದಲ್ಲಿ, ಸಂಸೋನನು ಒಬ್ಬ ಬಹಳ ಬಲಿಷ್ಠನಾದ ವಿಮೋಚಕನಾಗಿದ್ದನು, ಆದರೆ ಆತನು ತನ್ನ ಕಾಮಾಭಿಲಾಷೆಯ ಗುಲಾಮನಾಗಿದ್ದನು, ಎಂದು ನಾವು ನೋಡುತ್ತೇವೆ. ಪೌಲನು 1 ಕೊರಿ. 9:27ರಲ್ಲಿ ಹೀಗೆ ಹೇಳುತ್ತಾನೆ, "ನಾನು ನನ್ನ ದೇಹವನ್ನು ಜಜ್ಜಿ ಸ್ವಾಧೀನ ಪಡಿಸಿಕೊಳ್ಳದಿದ್ದಲ್ಲಿ, ಇತರರಿಗೆ ಬೋಧಿಸಿದ ಮೇಲೆ ನಾನೇ ಅಯೋಗ್ಯನು ಎನಿಸಿಕೊಂಡೇನೋ ಎಂಬ ಭಯ ನನ್ನಲ್ಲಿ ಇದೆ." ಈ ವಚನವನ್ನು "Living Bible"ನಲ್ಲಿ ಈ ರೀತಿಯಾಗಿ ಭಾವಾನುವಾದ ಮಾಡಲಾಗಿದೆ: "ನಾನು ನನ್ನ ದೇಹದ ಇಚ್ಛೆಯಂತೆ ಅಲ್ಲ, ಆದರೆ ದೇಹಕ್ಕೆ ಅವಶ್ಯವಾದುದನ್ನು ಮಾಡುವಂತೆ ನೋಡಿಕೊಳ್ಳುತ್ತೇನೆ." ಅದರ ಅರ್ಥ, ನಮ್ಮ ದೇಹಕ್ಕೆ ಇಷ್ಟವಾದ ಆಹಾರವನ್ನಲ್ಲ, ಆದರೆ ಅದಕ್ಕೆ ಅವಶ್ಯವಾದುದನ್ನು ತಿನ್ನುವಂತೆ; ಅದರ ಇಷ್ಟದಂತೆ ನಿದ್ರಿಸುವುದು ಅಲ್ಲ, ಆದರೆ ಅದಕ್ಕೆ ಅವಶ್ಯವಿದ್ದಷ್ಟು ಸಮಯ ನಿದ್ರೆ ಮಾಡುವಂತೆ ನೋಡಿಕೊಳ್ಳುವುದು. ನಾವು ನಮ್ಮ ಕಣ್ಣುಗಳು ’ಅವಶ್ಯವಾದುದನ್ನು ನೋಡುವಂತೆ’ ನಿಯಂತ್ರಿಸಬೇಕು, ಮತ್ತು ಅವುಗಳ ಇಷ್ಟ ಪ್ರಕಾರವಾದುದನ್ನು ಅಲ್ಲ; ನಾವು ನಮ್ಮ ನಾಲಿಗೆ ’ನುಡಿಯ ಬೇಕಾದುದನ್ನು ನುಡಿಯುವಂತೆ’ ನಿಯಂತ್ರಿಸಬೇಕು, ಮತ್ತು ಅದರ ಇಷ್ಟ ಪ್ರಕಾರವಾದುದನ್ನು ಅಲ್ಲ;

ನಾವು ನಮ್ಮ ದೇಹದ ಕಾಮನೆಗಳನ್ನು ನಿಯಂತ್ರಿಸದೇ ಇದ್ದಾಗಲೂ, ಶ್ರೇಷ್ಠವಾದ ಸಂದೇಶಗಳನ್ನು ನೀಡಲು ಸಾಧ್ಯವಾಗುತ್ತದೆ, ಆದರೆ ಕೊನೆಯ ದಿನದಲ್ಲಿ ನಾವು ಕರ್ತರಿಂದ ಹೊರದಬ್ಬಲ್ಪಡುತ್ತೇವೆ. ನಾವು "ದೇಹದ ಕಾಮನೆಗಳನ್ನು ಹೇಗೆ ಶಿಸ್ತಿಗೆ ಒಳಪಡಿಸುತ್ತೇವೆ" ಎಂಬುದರ ಮೇಲೆ ಬಹಳಷ್ಟು ಸಂಗತಿಗಳು ಅವಲಂಬಿತವಾಗಿವೆ. ಸಾವಿರಾರು ಜನರಿಗೆ ಆಶೀರ್ವಾದ ನಿಧಿಯಾಗುವಂತ ಅದ್ಭುತ ಸೇವೆಯನ್ನು ಪಡೆದಿದ್ದ ಸಂಸೋನನ ಕಥೆಯಿಂದ ನಾವು ಈ ಸಂದೇಶವನ್ನು ಪಡಕೊಳ್ಳುತ್ತೇವೆ. ಅಂತ್ಯದಲ್ಲಿ ಸ್ವತಃ ಆತನೇ ಅನರ್ಹನಾದನು, ಎಂಬುದೇ ಬೇಸರದ ಸಂಗತಿ.

ಹಲವಾರು ದೊಡ್ಡ ಬೋಧಕರು ಬೆಡಗಿನ ಸ್ತ್ರೀಯರ ಮೋಹದಿಂದ ಸೂರೆಗೊಂಡಿದ್ದಾರೆ. ನೀವು ಅಂತಹ ಬೋಧಕರ ವರಗಳಿಂದ ಪ್ರಭಾವಿತರಾಗಬೇಡಿ, ಅಥವಾ ಅವರು ಕಟ್ಟಿರುವ ವಿಶಾಲವಾದ ಸಂಸ್ಥೆಗಳನ್ನು ನೋಡಿ ಮರುಳಾಗದಿರಿ!! ಒಬ್ಬ ನಾಯಕನು ಪಾಪದಲ್ಲಿ ಬೀಳುವುದು ಒಬ್ಬ ಸಾಮಾನ್ಯ ವಿಶ್ವಾಸಿಯು ಅದೇ ಪಾಪದಲ್ಲಿ ಬೀಳುವುದಕ್ಕಿಂತ ಬಹಳ ಹೆಚ್ಚು ಗಂಭೀರವಾದ ವಿಷಯವಾಗಿದೆ. ಯಾರಿಗೆ ಹೆಚ್ಚು ಕೊಡಲ್ಪಟ್ಟಿದೆಯೋ, ಅವರಿಂದ ಅಷ್ಟೇ ಹೆಚ್ಚಿನದನ್ನು ನಿರೀಕ್ಷಿಸಲಾಗುತ್ತದೆ. ನೀವು ನಿಮ್ಮ ವಿರುದ್ಧ ಲಿಂಗದೊಂದಿಗಿನ ಸಂಬಂಧದಲ್ಲಿ ನಂಬಿಗಸ್ತರು ಆಗಿಲ್ಲವಾದರೆ, ಒಬ್ಬ ಸಭಾ ಹಿರಿಯನು ಅಥವಾ ಸಭಾ ನಾಯಕನು ಆಗಲು ಹವಣಿಸಿ, ದೇವರ ನಾಮಕ್ಕೆ ಅಗೌರವವನ್ನು ತರಬೇಡಿರಿ. ನೀವು ಪಾಪದಲ್ಲಿ ಜೀವಿಸುತ್ತಿರುವಾಗ, ಜನರ ಮುಂದೆ ದೇವಭಕ್ತನಂತೆ ತೋರಿಕೆ ಮಾಡದಿರಿ. ನೀವು ಹಾಗೆ ಜೀವಿಸುತ್ತಾ ಮುಂದುವರೆದರೆ, ಒಂದು ದಿನ ದೇವರು ನಿಮ್ಮ ಕಪಟತನವನ್ನು ಎಲ್ಲರ ಮುಂದೆ ಬಹಿರಂಗ ಗೊಳಿಸುವರು. ನೀವು ’ಪಾಪವನ್ನು ಮರೆಮಾಡಬಲ್ಲ ಜಾಣ’ನೆಂದು ನಿಮ್ಮ ಬಗ್ಗೆ ಯೋಚಿಸಬಹುದು. ಆದರೆ ದೇವರ ಮುಂದೆ ನಿಮ್ಮ ಜಾಣತನವು ಸಾಕಾಗುವುದಿಲ್ಲ. ಅವರು ನಿಮ್ಮ ಕಪಟತನವನ್ನು ಹಿಂದೆಂದೂ ನಡೆದಿರದ ರೀತಿಯಲ್ಲಿ, ಎಲ್ಲರ ಮುಂದೆ ಪ್ರಕಟ ಗೊಳಿಸುವರು.

’ನ್ಯಾಯಸ್ಥಾಪಕರು’ 16ನೇ ಅಧ್ಯಾಯದಲ್ಲಿ, ಸಂಸೋನನು ಹೇಗೆ ತನ್ನ ಶಕ್ತಿಯನ್ನು ಕಳಕೊಂಡನು ಮತ್ತು ಹೇಗೆ ಅವನ ಕಣ್ಣುಗಳು ಕಿತ್ತುಹಾಕಲ್ಪಟ್ಟವು, ಎಂಬುದನ್ನು ನಾವು ಓದುತ್ತೇವೆ. ಬೋಧಕರು ಸ್ತ್ರೀಯರನ್ನು ಮೋಹಿಸಲು ತೊಡಗಿದಾಗ, ಅವರು ಇದೇ ಪರಿಸ್ಥಿತಿಗೆ ಬರುತ್ತಾರೆ: ’ಅವರ ಆತ್ಮಿಕ ದೃಷ್ಟಿಯು ಕಿತ್ತುಹಾಕಲ್ಪಡುತ್ತದೆ.’ ಇದರ ನಂತರ ಅವರಿಗೆ ಸರಿಯಾಗಿ ಕಣ್ಣು ಕಾಣಿಸುವುದಿಲ್ಲ. ಅವರ ಮೂಲ ಬೋಧನೆಗಳು ಸುವಾರ್ತಾ ಪ್ರಸಾರವನ್ನೇ ಮಾಡಬಹುದು ಮತ್ತು ಅವರ ವಾಕ್ಚಾತುರ್ಯವು ಮೊದಲಿನ ಹಾಗೆಯೇ ಇರಬಹುದು. ಆದರೆ ಹಿಂದೆ ಅವರಲ್ಲಿದ್ದ ಆತ್ಮಿಕ ದೃಷ್ಟಿಯು ಈಗ ಇರುವುದಿಲ್ಲ. ಸಂಸೋನನು ಒಬ್ಬ ಗುಲಾಮನಾದನು. ಆದರೆ ನಾವು ದೇವರಿಗೆ ಸ್ತೋತ್ರ ಸಲ್ಲಿಸಬೇಕಾದ ವಿಷಯ, ಜೀವಿತದ ಕೊನೆಯಲ್ಲಿ ಅವನು ತನ್ನ ಪಾಪವನ್ನು ಅರಿಕೆ ಮಾಡುವಷ್ಟು ತಿಳುವಳಿಕೆಯನ್ನು ಪಡಕೊಂಡನು. ಅವನು ಪಶ್ಚಾತ್ತಾಪ ಪಟ್ಟನು ಮತ್ತು ಅವನು ಸಾಯುವಾಗ ತನ್ನ ಸಂಗಡ ಅನೇಕ ಫಿಲಿಷ್ಟಿಯರನ್ನು ಸಾಯಿಸಿದನು (ನ್ಯಾಯ. 16:23-31).

’ನ್ಯಾಯಸ್ಥಾಪಕರು’ 13-16ನೇ ಅಧ್ಯಾಯಗಳ ಸೊಂಸೋನನ ಕಥೆಯು, ’ಎರಡು ಸಿಂಹಗಳ’ ಕಥೆಯಾಗಿದೆ - ಒಂದು ಹೊರಗಿನ ಸಿಂಹ ಹಾಗೂ ಮತ್ತೊಂದು ಅವನ ಹೃದಯದೊಳಗೆ ಇದ್ದಂಥ ಸಿಂಹ. ಅವನು ’ಹೊರಗಿನ ಸಿಂಹವನ್ನು’ ಮಣಿಸಿ ಸೋಲಿಸಿದನು, ಆದರೆ ಅವನಿಗೆ ತನ್ನೊಳಗೆ ಇದ್ದುದನ್ನು ಸೋಲಿಸಲು ಕೈಲಾಗಲಿಲ್ಲ. ಇದು ನಮಗೆ ಕಲಿಸಿಕೊಡುವುದು ಏನೆಂದರೆ, ’ಕಾಮಾಭಿಲಾಷೆಯ ಸಿಂಹ’ವು ಅರಣ್ಯದ ಯಾವುದೇ ಸಿಂಹಕ್ಕಿಂತ ಬಹಳ ಹೆಚ್ಚು ಬಲಶಾಲಿ ಮತ್ತು ಭಯಾನಕವಾಗಿದೆ. ಅರಣ್ಯದಲ್ಲಿ ಒಂದು ಸಿಂಹವು ನಿಮ್ಮ ಕಡೆಗೆ ಓಡುತ್ತಾ ಬರುತ್ತಿದ್ದರೆ ನೀವು ಏನು ಮಾಡುವಿರಿ? ನೀವು ಹಿಂದಕ್ಕೆ ತಿರುಗಿ ಓಡುತ್ತೀರಿ. ’ಕಾಮದ ಸಿಂಹ’ವು ನಿಮ್ಮನ್ನು ಎದುರಿಸಿದಾಗ, ನೀವು ಅದೇ ರೀತಿ ಮಾಡುವಿರಾ? "ಜಾರತ್ವದಿಂದ ದೂರಕ್ಕೆ ಓಡಿರಿ," (1 ಕೊರಿ. 6:18), ಎಂದು ಸತ್ಯವೇದವು ನಮ್ಮನ್ನು ಎಚ್ಚರಿಸುತ್ತದೆ. ಅದನ್ನು ಸೋಲಿಸಲು ಇರುವ ಒಂದೇ ಒಂದು ಮಾರ್ಗ ಇದಾಗಿದೆ - ಎಂದಿಗೂ ಅಂತಹ ಪ್ರಚೋದನೆಯನ್ನು ಸಮೀಪಿಸದಿರಿ. ನಿಮ್ಮನ್ನು ಮರುಳುಮಾಡುವ ಒಬ್ಬ ಹೆಣ್ಣಿನ ಸಮೀಪಕ್ಕೂ ಹೋಗಬೇಡಿರಿ. ನೀವು ಹಸಿದ ಸಿಂಹದಿಂದ ಎಷ್ಟು ದೂರವಿರುತ್ತೀರೋ, ಸ್ವೇಚ್ಛಾಚಾರಿ ಸ್ತ್ರೀಯರಿಂದಲೂ ಅಷ್ಟೇ ದೂರವಿರಿ.

ಸಂಸೋನನು ಹಳೆಯ ಒಡಂಬಡಿಕೆಯ ಅಡಿಯಲ್ಲಿ ಜೀವಿಸಿದ ವ್ಯಕ್ತಿಯಾಗಿದ್ದನು. ಹಾಗಾಗಿ ಇಂದು ಯಾರೇ ಆಗಲೀ, ತಮ್ಮ ಜಾರತ್ವಕ್ಕೆ ಸಂಸೋನನ ಉದಾಹರಣೆಯನ್ನು ತೋರಿಸಲು ಸಾಧ್ಯವಿಲ್ಲ. ಸಂಸೋನನಿಗೆ ಹೊಸ ಒಡಂಬಡಿಕೆ ದೊರೆತಿರಲಿಲ್ಲ, ಅವನು ಕಲ್ವಾರಿಯ ಶಿಲುಬೆಗೆ ಮೊದಲು ಜೀವಿಸಿದ್ದ ವ್ಯಕ್ತಿಯಾಗಿದ್ದನು, ಇಂದು ನಮಗೆ ಯೇಸುವಿನ ಉದಾಹರಣೆ ಇರುವ ಹಾಗೆ ಅವನಿಗೆ ಯಾವ ಉದಾಹರಣೆಯೂ ಇರಲಿಲ್ಲ, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ನಮ್ಮೊಳಗೆ ಜೀವಿಸುವ ಸಹಾಯಕನಾಗಿ ಪವಿತ್ರಾತ್ಮನು ಬಂದಿರುವ ಹಾಗೆ ಅವನಿಗೆ ಯಾವ ಸಹಾಯಕನೂ ಸಿಕ್ಕಿರಲಿಲ್ಲ. ಪರಲೋಕದ ತಂದೆ ಇರುವ ಅತಿ ಪವಿತ್ರ ಸ್ಥಳದ ಅನ್ಯೋನ್ಯತೆಯ ಸೌಭಾಗ್ಯ ಆ ದಿನಗಳಲ್ಲಿ ತೆರೆಯಲ್ಪಟ್ಟಿರಲಿಲ್ಲ. ಸಂಸೋನನಿಗೆ ದೇವಜನರ ಅನ್ಯೊನ್ಯತೆಯ ಸೌಭಾಗ್ಯವೂ ದೊರೆತಿರಲಿಲ್ಲ. ಇಂದು ನಮಗೆ ಇವೆಲ್ಲವೂ ದೊರೆತಿವೆ. ಹಾಗಾಗಿ ಪಾಪದಲ್ಲಿ ಜೀವಿಸುವದಕ್ಕೆ ನಮಗೆ ಯಾವ ನೆಪವೂ ಇಲ್ಲ.