"ನಾನು ನಿಮ್ಮನ್ನು ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ಮಾಡುವೆನು" (ಮತ್ತಾ. 4:19) ಎಂಬ ಸರಳ ಹೇಳಿಕೆಯನ್ನು ಪರಿಗಣಿಸೋಣ. ನಿಮ್ಮನ್ನು ಮನುಷ್ಯರ ಬೆಸ್ತರನ್ನಾಗಿ ಮಾಡುವವರು ಯಾರು? ಕ್ರಿಸ್ತನು. ಯಾವ ಮನುಷ್ಯನೂ ಸಹ ನಿಮ್ಮನ್ನು ಮನುಷ್ಯರ ಬೆಸ್ತರನ್ನಾಗಿ ಮಾಡಲು ಆಗುವುದಿಲ್ಲ. ನೀವು ಬೈಬಲ್ ಕಾಲೇಜಿನಲ್ಲಿ ವರ್ಷಗಟ್ಟಲೆ ಕಳೆದರೂ, ಅದು ನಿಮ್ಮನ್ನು ಮನುಷ್ಯರ ಬೆಸ್ತರನ್ನಾಗಿ ಮಾಡುವುದಿಲ್ಲ. ಸತ್ಯವೇದ ಅಧ್ಯಯನ ಮಾಡುವುದರಿಂದಲೋ, ಸುವಾರ್ತೆಯ ಸಾರುವಿಕೆಯ ಸವಾಲನ್ನು ಕೇಳಿ ನಾನು ಸಹ ಇದನ್ನು ಮಾಡುತ್ತೇನೆಂದು ಕೈ ಎತ್ತುವುದರಿಂದಲೋ, ಅಥವಾ ದೇವರ ಕೆಲಸಕ್ಕಾಗಿ ನಿಮ್ಮ ಜೀವನವನ್ನು ಸಮರ್ಪಿಸುವ ಉದ್ದೇಶದಿಂದ ಮೊಣಕಾಲೂರಿ ಪ್ರಾರ್ಥಿಸುವುದರಿಂದಲೋ ನೀವು ಮನುಷ್ಯರ ಬೆಸ್ತರಾಗುವುದಿಲ್ಲ; ಮನುಷ್ಯರ ಬೆಸ್ತರಾಗಲು ಬಯಸುವವರಿಗೆ ಕರ್ತರು ಹೇಳುವುದು ಏನೆಂದರೆ, "ನನ್ನನ್ನು ಹಿಂಬಾಲಿಸಿರಿ." ಸತ್ಯವೇದ ಅಧ್ಯಯನವೂ ಅಲ್ಲ, ಆದರೆ "ನನ್ನನ್ನು ಹಿಂಬಾಲಿಸಿ" ಅಷ್ಟೇ.
ಆದಿಯಲ್ಲಿನ ಕ್ರೈಸ್ತರ ಬಳಿ ಸತ್ಯವೇದ ಇರಲಿಲ್ಲ. ಅವರು ಹೇಗೆ ಮನುಷ್ಯರನ್ನು ಹಿಡಿಯುವ ಬೆಸ್ತರಾಗಬಹುದಿತ್ತು? ಯೇಸುವನ್ನು ಹಿಂಬಾಲಿಸುವ ಮೂಲಕ. ನಾವು ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಈ ಅಧ್ಯಯನದ ಆರಂಭದಲ್ಲಿ ನಾವು ಕಲಿತಂತೆ, ನಾವು ಖಂಡಿತವಾಗಿ ಧರ್ಮಶಾಸ್ತ್ರವನ್ನು ಅಧ್ಯಯನ ಮಾಡಬೇಕು: "ಮನುಷ್ಯನು ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದ ಬದುಕುವನು"(ಮತ್ತಾ. 4:4). ಆದರೆ ನಾವು ಸತ್ಯವೇದದ ವಿಗ್ರಹಾರಾಧನೆ ಮಾಡಬಾರದು. ಸತ್ಯವೇದದ ಆರಾಧಕರು ಆಗದಿರಿ. ಸತ್ಯವೇದವು ಯೇಸುವನ್ನು ಸರಿಯಾದ ರೀತಿಯಲ್ಲಿ ಹಿಂಬಾಲಿಸಲು ನಮಗೆ ಸಹಾಯ ಮಾಡುತ್ತದೆ. ಪವಿತ್ರಾತ್ಮನು ದೇವರ ವಾಕ್ಯದ ಮೂಲಕ ನಮಗೆ ಯೇಸು ಕ್ರಿಸ್ತನ ಮಹಿಮೆಯನ್ನು ತೋರಿಸುತ್ತಾನೆ. ಯೇಸುವನ್ನು ಹಿಂಬಾಲಿಸುವುದೇ ಮನುಷ್ಯರ ಬೆಸ್ತರಾಗುವ ಮಾರ್ಗವಾಗಿದೆ. ಸ್ವತಃ ಯೇಸು ಕ್ರಿಸ್ತನೇ ನಿಮ್ಮನ್ನು ಮನುಷ್ಯರ ಬೆಸ್ತರನ್ನಾಗಿ ಮಾಡುತ್ತಾನೆ, ಯಾವುದೇ ಸತ್ಯವೇದ ತರಬೇತಿ ಸಂಸ್ಥೆಯಲ್ಲ. ದೇವರು ಮನುಷ್ಯರನ್ನು ಬಳಸಿಕೊಳ್ಳಬಹುದು, ಆದರೆ ಅಂತಿಮವಾಗಿ ಕ್ರಿಸ್ತನು ನಿಮ್ಮೊಂದಿಗೆ ವೈಯಕ್ತಿಕ ಸಂಬಂಧವನ್ನು ಹೊಂದಲು ಬಯಸುತ್ತಾನೆ, ಮತ್ತು ಆತನು ಮಾತ್ರ ನಿಮ್ಮನ್ನು ಮನುಷ್ಯರ ಬೆಸ್ತರನ್ನಾಗಿ ಮಾಡಬಲ್ಲನು.
ಮನುಷ್ಯರನ್ನು ಹಿಡಿಯುವ ಬೆಸ್ತರು ಎಂದರೇನು? ಮನುಷ್ಯರನ್ನು ಹಿಡಿಯುವದು ಎಂದರೆ, ಸಮುದ್ರ ಅಥವಾ ನದಿಗೆ ಹೋಗಿ ತಮ್ಮ ಬಲೆಯನ್ನು ಬೀಸಿ, ಮೀನನ್ನು ಹಿಡಿದು ತರುವಂತ ಬೆಸ್ತರ ಹಾಗೆಯೇ ಮಾಡುವುದು. ಅವರು ಒಂದು ಪರಿಸರದಿಂದ ಮೀನನ್ನು ಹಿಡಿದು ಅವನ್ನು ಇನ್ನೊಂದು ಪರಿಸರಕ್ಕೆ ತರುತ್ತಾರೆ. ಸ್ವಾಭಾವಿಕವಾಗಿ ಮೀನಿಗೆ ಭೂಮಿಯ ಪರಿಸರವು ಸರಿ ಹೊಂದುವುದಿಲ್ಲ; ಅದು ಸಮುದ್ರದಲ್ಲಿ ಆರಾಮವಾಗಿರುತ್ತದೆ! ಮತ್ತು ಆ ಮೀನುಗಾರನು ಮೀನನ್ನು ನೀರಿನಿಂದ ಮೇಲಕ್ಕೆತ್ತಿ ಭೂಮಿಗೆ ತರುತ್ತಾನೆ, ಅದು ಹಿಂದೆ ಜೀವಿಸಿದ್ದ ಪರಿಸರದಿಂದ ಸಂಪೂರ್ಣ ವಿಭಿನ್ನವಾದ ಪರಿಸರಕ್ಕೆ ಆತನು ಅದನ್ನು ತರುತ್ತಾನೆ.
"ಒಬ್ಬ ವ್ಯಕ್ತಿಯು ಭೂಮಿಯ ರಾಜ್ಯದಿಂದ ಪರಲೋಕ ರಾಜ್ಯಕ್ಕೆ ನಡೆಸಲ್ಪಟ್ಟಾಗ - ಮೀನು ನೀರಿನಿಂದ ಭೂಮಿಗೆ ಬಂದಂತೆ - ಅವನು ಸಂಪೂರ್ಣ ವಿಭಿನ್ನ ಪರಿಸರಕ್ಕೆ ಬರುತ್ತಾನೆ. ಪರಲೋಕ ರಾಜ್ಯದಲ್ಲಿ ನಮ್ಮನ್ನು ನೆಮ್ಮದಿಯಾಗಿ ಇರಿಸುವ ಕಾರ್ಯವನ್ನು ಪವಿತ್ರಾತ್ಮನು ಮಾಡುತ್ತಾನೆ."
ಈ ಕಾರ್ಯವು ಒಂದು ಸಿಂಹವನ್ನೋ ಅಥವಾ ಆನೆಯನ್ನೋ ಸೆರೆಹಿಡಿದು, ಅದನ್ನು ಒಂದು ಆವರಣದಲ್ಲಿ ಅಥವಾ ಒಂದು ಪಂಜರದೊಳಗೆ ಹಾಕಿದಂತೆ ಅಲ್ಲ, ಎಂಬುದನ್ನು ಅರ್ಥಮಾಡಿಕೊಳ್ಳುವುದು ಅವಶ್ಯವಾಗಿದೆ, ಏಕೆಂದರೆ ಸಿಂಹವು ಭೂಮಿಯ ಪರಿಸರದ ಜೀವನಕ್ಕೆ ಒಗ್ಗಿಕೊಂಡಿದೆ, ಸಮುದ್ರಕ್ಕೆ ಅಲ್ಲ. ಆದರೆ ನೀವು ಮೀನನ್ನು ಹಿಡಿದಾಗ, ಅದು ತನ್ನ ಪರಿಸರದಿಂದ ಸಂಪೂರ್ಣವಾಗಿ ಹೊರಕ್ಕೆ ಬಂದಿದೆ, ಮತ್ತು ಅದನ್ನು ಸಂಪೂರ್ಣ ವಿಭಿನ್ನವಾದ ಮತ್ತೊಂದು ಪರಿಸರಕ್ಕೆ ತರಲಾಗಿದೆ. ಭೂಮಿ ಮತ್ತು ನೀರು ಪರಸ್ಪರ ವಿರುದ್ಧ ಪರಿಸರಗಳಾಗಿವೆ. ಆದ್ದರಿಂದ ಮನುಷ್ಯರನ್ನು ಹಿಡಿಯುವ ಬೆಸ್ತನು - ಮನುಷ್ಯರ ನಿಜವಾದ ಬೆಸ್ತನು - ಈ ಲೋಕದ ನೀರಿನಲ್ಲಿ ಇರುವಂತ ಜನರ ಬಳಿಗೆ ಹೋಗಿ, ಅಲ್ಲಿಂದ ಅವರನ್ನು ಹೊರತಂದು, ಅವರನ್ನು ಒಂದು ಸಂಪೂರ್ಣ ವಿಭಿನ್ನ ಪರಿಸರಕ್ಕೆ, ಅಂದರೆ ದೇವರ ರಾಜ್ಯಕ್ಕೆ ತರುವಂಥವನು.
ನೀವು ಒಬ್ಬ ವ್ಯಕ್ತಿಯನ್ನು ಭೂಲೋಕದ ರಾಜ್ಯದಿಂದ ಹೊರತಂದು ಪರಲೋಕದ ರಾಜ್ಯಕ್ಕೆ ಸೇರಿಸದಿದ್ದರೆ, ನೀವು ನಿಜವಾಗಿ ಆ ಮೀನನ್ನು ಹೊರತೆಗೆದಿಲ್ಲ. ಬಹುಶಃ ನೀವು ಆ ಮೀನನ್ನು ಬಲೆಯಲ್ಲೇ ಬಿಟ್ಟಿರಬಹುದು, ಆದರೆ ಅದು ಇನ್ನೂ ನೀರಿನಲ್ಲೇ ಇದ್ದರೆ, ನೀವು ನಿಜವಾಗಿ ಅದನ್ನು ಹೊರತೆಗೆದಿಲ್ಲ. ನೀವು ನಿಜವಾಗಿ ಮನುಷ್ಯರನ್ನು ಹಿಡಿಯುವ ಬೆಸ್ತರಾಗಿಲ್ಲ. ಯಾವ ಬೆಸ್ತನು ತಾನು ಹಿಡಿದ ಮೀನನ್ನು ಬಲೆಯಲ್ಲೇ ಬಿಟ್ಟು, ಆ ಮೀನು ನೀರಿನಲ್ಲೇ ಆರಾಮವಾಗಿರಲಿ, ಎಂದು ಅದನ್ನು ಬಿಡುತ್ತಾನೆ? ನೀವು ಆ ಮೀನನ್ನು ಭೂಮಿಗೆ ತಂದೊಡನೆ, ಅದು ಹೇಗೆ ವರ್ತಿಸುತ್ತದೆಂದು ನೋಡಿರಿ. ಅದನ್ನು ನೆಲದ ಮೇಲೆ ಹಾಕಿದೊಡನೆ ಅದು ವಿಲವಿಲನೆ ಒದ್ದಾಡುತ್ತದೆ, ಮತ್ತು ಹೇಳುತ್ತದೆ, "ಹೇ, ನನಗೆ ಇಲ್ಲಿ ಹಿತಕರವಾಗಿಲ್ಲ!"
ಒಬ್ಬ ವ್ಯಕ್ತಿಯು ಭೂಮಿಯ ರಾಜ್ಯದಿಂದ ಪರಲೋಕ ರಾಜ್ಯಕ್ಕೆ ವರ್ಗಾವಣೆ ಹೊಂದಿದಾಗ - ನೀರಿನಿಂದ ಹೊರಬಿದ್ದು ಒಣನೆಲದ ಮೇಲೆ ಹಾಕಲ್ಪಟ್ಟ ಮೀನಿನಂತೆ - ಆತನು ಸಂಪೂರ್ಣವಾಗಿ ವಿಭಿನ್ನವಾದ ವಾತಾವರಣಕ್ಕೆ ಹಾಕಲ್ಪಟ್ಟಿದ್ದಾನೆ. ಪವಿತ್ರಾತ್ಮನು ನಾವು ಪರಲೋಕ ರಾಜ್ಯಕ್ಕೆ ಚೆನ್ನಾಗಿ ಒಗ್ಗಿಕೊಳ್ಳುವಂತೆ ಮಾಡುತ್ತಾನೆ. ಆದ್ದರಿಂದ, ನೀವು ನೂರು ಜನರು "ಕರ್ತನಾದ ಯೇಸುವೇ, ನನ್ನ ಹೃದಯದೊಳಕ್ಕೆ ಬಾ" ಎಂದು ಹೇಳುವಂತೆ ಮಾಡಿದ್ದರಿಂದ ನಿಮ್ಮ ಕೆಲಸವನ್ನು ಪೂರ್ತಿಗೊಳಿಸಿದ್ದೀರಿ ಮತ್ತು ಈಗ ನೀವು "ಮನುಷ್ಯರನ್ನು ಹಿಡಿಯುವ ಬೆಸ್ತರಾಗಿದ್ದೀರೆಂದು" ಭಾವಿಸಬೇಡಿರಿ. ದುರದೃಷ್ಟವಶಾತ್, ಅನೇಕ ವಿಶ್ವಾಸಿಗಳು ಹೀಗೆಯೇ ಭಾವಿಸಿದ್ದಾರೆ. ಮನುಷ್ಯರನ್ನು ಹಿಡಿಯುವ ಬೆಸ್ತರೆಂದರೆ ಏನೆಂದು ಅವರು ಸರಿಯಾಗಿ ಧ್ಯಾನಿಸಿಲ್ಲ, ಏಕೆಂದರೆ ಅವರನ್ನು ಮನುಷ್ಯರ ಬೆಸ್ತರನ್ನಾಗಿ ಮಾಡಿರುವವರು ಇತರ ಮನುಷ್ಯರು ಮತ್ತು ಧಾರ್ಮಿಕ ಬೋಧಕರುಗಳು - ಕ್ರಿಸ್ತನಲ್ಲ. ಕ್ರಿಸ್ತನು ನಿನ್ನನ್ನು ಮನುಷ್ಯರನ್ನು ಹಿಡಿಯುವ ಬೆಸ್ತನನ್ನಾಗಿ ಮಾಡಿದ್ದಾದರೆ, ಆತನು ಇಲ್ಲೇ ಎರಡು ವಚನಗಳ ಹಿಂದೆ ಬೋಧಿಸಿದ ಮೂಲತತ್ವವನ್ನು ಅದು ಆಧರಿಸಿರುತ್ತದೆ, "ಪಶ್ಚಾತ್ತಾಪಪಡಿರಿ, ಪರಲೋಕರಾಜ್ಯವು ಸಮೀಪಿಸಿದೆ." ನಾವು ಈ ’ಮೀನುಗಳಿಗೆ’ ದೇವರ ಕಡೆಗೆ ತಿರುಗಿಕೊಂಡು ಪರಲೋಕರಾಜ್ಯಕ್ಕಾಗಿ ತವಕಿಸಬೇಕೆಂದು, ಮತ್ತು ಅವರು ಇದುವರೆಗೆ ಇದ್ದ ಪರಿಸರಕ್ಕಿಂತ ಸಂಪೂರ್ಣ ವಿಭಿನ್ನವಾದ ಪರಿಸರವನ್ನು ಪ್ರವೇಶಿಸಬೇಕೆಂದು ನಾವು ಅವರಿಗೆ ಕಲಿಸಬೇಕು.
ಇದೇ ಒಬ್ಬ ಮೀನುಗಾರನು ಮಾಡುತ್ತಿರುವುದು. ಅವನು ಮೀನನ್ನು ಸಮುದ್ರದೊಳಗಿಂದ ತೆಗೆದುಕೊಂಡು ಭೂಮಿಯ ಒಣ ನೆಲದ ಮೇಲೆ ತರುತ್ತಾನೆ. ಮತ್ತು ನಾವು ಕೂಡ ನಿಜವಾಗಿ ಮನುಷ್ಯರನ್ನು ಹಿಡಿಯುವ ಬೆಸ್ತರಾದರೆ ಜನರನ್ನು ಈ ಭೂ ರಾಜ್ಯದಿಂದ ತೆಗೆದು ಪರಲೋಕದ ರಾಜ್ಯಕ್ಕೆ, ಸೈತಾನನ ರಾಜ್ಯದಿಂದ ತೆಗೆದು ದೇವರ ರಾಜ್ಯದೊಳಗೆ ಸೇರಿಸಬೇಕು. ಕೇವಲ ಯೇಸು ಮಾತ್ರ ನಮ್ಮನ್ನು ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ಮಾಡಬಲ್ಲನು ಹೊರತು ಬೇರೆ ಯಾರೂ ಅದನ್ನು ಮಾಡಲಾರರು.
ಕೇವಲ ಸೌವಾರ್ತಿಕರು ಮಾತ್ರವೇ ಮನುಷ್ಯರನ್ನು ಹಿಡಿಯುವ ಬೆಸ್ತರಲ್ಲ. ಸೌವಾರ್ತಿಕರು ಕೇವಲ ಆ ಕೆಲಸದ ಒಂದು ಭಾಗವನ್ನು ಮಾತ್ರ ಮಾಡುತ್ತಾರೆ. ಪ್ರವಾದಿಗಳು, ಅಪೊಸ್ತಲರು, ಬೋಧಕರು, ಕುರುಬರು, ಉಪದೇಶಕರೂ ಕೂಡ ಈ ಕೆಲಸದಲ್ಲಿ ತಮ್ಮ ಭಾಗವನ್ನು ಪೂರ್ಣಗೊಳಿಸಬೇಕಾಗಿದೆ. ಆ ಕೆಲಸ ಏನೆಂದರೆ - ಜನರನ್ನು ಪರಲೋಕ ರಾಜ್ಯವೆಂಬ ಒಂದು ಹೊಸ ವಾತಾವರಣದಲ್ಲಿ ನಿಜವಾಗಿಯೂ ಹಿತಕರವಾಗಿ ಹಾಗೂ ನೆಮ್ಮದಿಯಾಗಿ ಇರುವಂತೆ ಮಾಡುವುದು.
ಸಂಪೂರ್ಣವಾದ ಕೆಲಸ ಏನೆಂದರೆ, ಒಬ್ಬ ವ್ಯಕ್ತಿಯನ್ನು ಸಮುದ್ರದೊಳಗಿಂದ ತೆಗೆದು ಭೂಮಿಯ ಒಣ ನೆಲದ ಮೇಲೆ ಇಡುವುದು, ಭೂ ರಾಜ್ಯದಿಂದ ತೆಗೆದು ಪರಲೋಕ ರಾಜ್ಯದೊಳಗೆ ಸೇರಿಸುವುದು. ಮತ್ತು ಇದನ್ನು ಮಾಡುವ ಮಾರ್ಗವೆಂದರೆ- ಯೇಸು ಕ್ರಿಸ್ತನನ್ನು ಹಿಂಬಾಲಿಸುವುದು. ನಾನು ಯೇಸುವನ್ನು ಹಿಂಬಾಲಿಸಿದ್ದೇ ಆದಲ್ಲಿ ನಾನು ಆತನು ಮಾಡಿದಂತೆಯೇ ಮಾಡುತ್ತೇನೆ.