WFTW Body: 

ಒಬ್ಬರನ್ನೊಬ್ಬರು ಕ್ಷಮಿಸುವ ವಿಷಯವನ್ನು ಪರಿಗಣಿಸಿರಿ. ಸ್ವಚಿತ್ತವನ್ನು ನಿರಾಕರಿಸುವಂತ ಯಾವ ವ್ಯಕ್ತಿಯೂ ತನ್ನ ಮನಸ್ಸಿನಲ್ಲಿ ಕಹಿಭಾವವನ್ನು ಅಥವಾ ಇನ್ನೊಬ್ಬನ ಕುರಿತಾಗಿ ದ್ವೇಷವನ್ನು ಇರಿಸಿಕೊಳ್ಳಲು ಅಥವಾ ಇನ್ನೊಬ್ಬ ವ್ಯಕ್ತಿಯನ್ನು ಕ್ಷಮಿಸದೇ ಇರಲು ಸಾಧ್ಯವಾಗುವುದಿಲ್ಲ.

ಒಂದು ಸಲ ಯೇಸುವು ಒಂದು ಸಾಮ್ಯವನ್ನು ಹೇಳಿದರು: ಯಜಮಾನನಿಂದ ಬಹಳ ದೊಡ್ಡ ಸಾಲವನ್ನು ಪಡಕೊಂಡಿದ್ದ ಒಬ್ಬ ಸೇವಕನನ್ನು ಆತನ ಯಜಮಾನನು ಕ್ಷಮಿಸಿದನು; ಆದಾಗ್ಯೂ ಆ ಸೇವಕನು ತನ್ನಿಂದ ಸ್ವಲ್ಪವೇ ಸಾಲವನ್ನು ಪಡೆದು ಅದನ್ನು ಹಿಂದಿರುಗಿಸದೇ ಇದ್ದ ಇನ್ನೊಬ್ಬ ಸೇವಕನನ್ನು ಕ್ಷಮಿಸಲಿಲ್ಲ. ಇದನ್ನು ಕೇಳಿದ ಯಜಮಾನನು ಕರುಣೆಯಿಲ್ಲದ ಆ ಸೇವಕನನ್ನು ಸೆರೆಗೆ ಹಾಕಿಸಿ ಚಿತ್ರಹಿಂಸೆಗೆ ಒಳಪಡಿಸಿದನು. "ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಸಹೋದರನನ್ನು ಮನಃಪೂರ್ವಕವಾಗಿ ಕ್ಷಮಿಸದೆ ಹೋದರೆ, ಪರಲೋಕದಲ್ಲಿರುವ ನನ್ನ ತಂದೆಯೂ ನಿಮಗೆ ಹಾಗೆಯೇ ಮಾಡುವರು"ಎಂದು ಯೇಸುವು ಹೇಳಿದರು (ಮತ್ತಾ. 18:35).ಚಿತ್ರಹಿಂಸೆಯ ಶಿಕ್ಷೆಯ ಬಗ್ಗೆ ಒಬ್ಬನಿಗೆ ಎಷ್ಟು ತಿಳುವಳಿಕೆ ಇದ್ದರೂ, ಕ್ಷಮಿಸಲು ಒಪ್ಪದಿರುವ ಮನೋಭಾವವನ್ನು ಯಾರು ಹೊಂದಿದ್ದಾರೋ ಅಥವಾ ಯಾರು ಸಹ-ವಿಶ್ವಾಸಿಗಳ ಬಗ್ಗೆ ಕಠಿಣವಾದ ಭಾವನೆಯನ್ನು ಇರಿಸಿಕೊಳ್ಳುತ್ತಾರೋ, ಅಂಥವರಿಗಾಗಿ ಆ ಶಿಕ್ಷೆಯು ಕಾದಿರಿಸಲ್ಪಟ್ಟಿದೆಯೆಂದು ಯೇಸುವು ನಿಖರವಾಗಿ ಹೇಳಿದರು. ಮನಃಪೂರ್ವಕವಾಗಿ ಕ್ಷಮಿಸುವದಕ್ಕೆ ಯೇಸುವು ಒತ್ತು ಕೊಟ್ಟಿದ್ದನ್ನು ಗಮನಿಸಿರಿ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಕ್ಷಮಾಪಣೆಯು ಕೇವಲ ತೋರಿಕೆಯಾಗಿರದೆ ಯಥಾರ್ಥ ಮನಸ್ಸಿನಿಂದ ಬರಬೇಕು. ನೀವು ನಿಮ್ಮ ಹೃದಯದಲ್ಲಿ ಕಹಿತನವನ್ನು ಇನ್ನೂ ಉಳಿಸಿಕೊಂಡು ಯಾರನ್ನೋ ಕ್ಷಮಿಸಿದ್ದಾಗಿ ಹೇಳುವುದರಲ್ಲಿ ಅರ್ಥವಿಲ್ಲ.

"ದೇವರ ಪ್ರೀತಿಯ ನಿಯಮವನ್ನು ನಾವು ಉಲ್ಲಂಘಿಸಿದಾಗ ಕ್ರಿಸ್ತನ ದೇಹದ ಕಾರ್ಯಕ್ಕೆ ನಾವು ಅಡ್ಡಿಯಾಗುತ್ತೇವೆ"

ನಾವು ದೇವರ ಪ್ರೀತಿಯ ನಿಯಮವನ್ನು ಉಲ್ಲಂಘಿಸಿದರೆ, ಆಗ ನಾವು ಕ್ರಿಸ್ತನ ದೇಹದ ಕಾರ್ಯಕ್ಕೆ ಅಡ್ಡಿಯಾಗುತ್ತೇವೆ. ಅಷ್ಟು ಮಾತ್ರವೇ ಅಲ್ಲ, ನಾವು ಸ್ವತಃ ನಮಗೂ ಸಹ ಹಾನಿ ಮಾಡಿಕೊಳ್ಳುತ್ತೇವೆ. ಡಾII ಎಸ್. ಐ. ಮ್ಯಾಕ್ಮಿಲನ್ರವರು "None of These Diseases" ಎಂಬ ಗ್ರಂಥದಲ್ಲಿ ಹೀಗೆ ಬರೆದಿದ್ದಾರೆ, "ನಾನು ಒಬ್ಬ ವ್ಯಕ್ತಿಯನ್ನು ದ್ವೇಷಿಸಲು ಪ್ರಾರಂಭಿಸಿದ ಕ್ಷಣದಲ್ಲೇ ನಾನು ಅವನ ಗುಲಾಮನಾಗುತ್ತೇನೆ. ಆ ವ್ಯಕ್ತಿಯು ನನ್ನ ಆಲೋಚನೆಗಳನ್ನು ನಿಯಂತ್ರಿಸುವುದರಿಂದ, ಆ ಪರಿಸ್ಥಿತಿಯಲ್ಲಿ ನಾನು ನನ್ನ ಕೆಲಸವನ್ನು ಆನಂದಿಸಲು ಸಾಧ್ಯವಾಗುವುದಿಲ್ಲ. ನನ್ನ ಮನಸ್ಸಿನ ಕಹಿಭಾವದ ಒತ್ತಡದಿಂದ ನನ್ನ ದೇಹದ ಗ್ರಂಥಿಗಳಲ್ಲಿ ಹಲವಾರು ಹಾರ್ಮೋನ್ ಗಳು ಉತ್ಪತ್ತಿಯಾಗುತ್ತವೆ ಮತ್ತು ನಾನು ಸ್ವಲ್ಪ ಕೆಲಸ ಮಾಡುವಷ್ಟರಲ್ಲೇ ದಣಿದು ಹೋಗುತ್ತೇನೆ. ಹಿಂದೆ ನಾನು ಆನಂದಿಸುತ್ತಿದ್ದ ಕಾರ್ಯಗಳು ಈಗ ನನ್ನನ್ನು ಬೇಸರಗೊಳಿಸುತ್ತವೆ. ನನಗೆ ರಜದ ಸಮಯವೂ ಸಹ ಈಗ ಆನಂದವನ್ನು ನೀಡುವುದಿಲ್ಲ. ನಾನು ದ್ವೇಷಿಸುವ ವ್ಯಕ್ತಿಯು ನಾನು ಹೋದಲ್ಲೆಲ್ಲಾ ನನ್ನನ್ನು ಹಿಂಬಾಲಿಸುತ್ತಾನೆ. ನನಗೆ ಆತನ ಬಿಗಿಹಿಡಿತದ ದಬ್ಬಾಳಿಕೆಯಿಂದ ಬಿಡುಗಡೆಸಿಗುತ್ತಿಲ್ಲ."

ಇಂದು ಇಡೀ ಪ್ರಪಂಚದಲ್ಲಿ ಅನೇಕ ಕ್ರೈಸ್ತರ ಮತ್ತು ಕ್ರೈಸ್ತ ಕೆಲಸಗಾರರು ಉಪಯುಕ್ತತೆಯನ್ನು ಮತ್ತು ಅವರ ದೈಹಿಕ ಆರೋಗ್ಯವನ್ನೂ ಸಹ ಕೆಡಿಸುತ್ತಿರುವುದು ಯಾವುದೆಂದರೆ, ಅವರಲ್ಲಿ ಅಡಗಿರುವ ಗುಪ್ತ ದ್ವೇಷ ಮತ್ತು ಕಹಿತನ.

ಒಬ್ಬ ಸಹೋದರನಲ್ಲಿ ನಾವು ಆತನನ್ನು ನೋಯಿಸಿದ್ದೇವೆಂಬ ಭಾವನೆಯಿದ್ದರೆ (ಅದು ಸರಿಯೋ ಅಥವಾ ತಪ್ಪೋ ಆಗಿರಬಹುದು), ಆತನೊಂದಿಗೆ ಅನ್ಯೋನ್ಯತೆಯನ್ನು ಸರಿಪಡಿಸಿಕೊಳ್ಳಲು ಸೂಕ್ತಕ್ರಮ ಕೈಗೊಳ್ಳುವ ಮೊದಲ ಹೆಜ್ಜೆಯನ್ನು ನಾವು ತೆಗೆದುಕೊಳ್ಳಬೇಕೆಂದು ಯೇಸುವು ಕಲಿಸಿದ್ದಾರೆ. "ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಹತ್ತಿರ ತಂದಾಗ, ನಿನ್ನ ಗೆಳೆಯನ ಮನಸ್ಸಿನಲ್ಲಿ ನಿನ್ನ ಮೇಲೆ ಏನೋ ಆರೋಪವಿದೆಯೆಂದು ನಿನ್ನ ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು ಅಲ್ಲೇ ಬಿಟ್ಟು ಹೋಗಿ ಮೊದಲು ಆತನಿಂದ ಕ್ಷಮೆಯನ್ನು ಕೇಳು ಮತ್ತು ಆತನೊಂದಿಗೆ ಒಂದಾಗು; ಆಮೇಲೆ ಬಂದು ದೇವರಿಗೆ ನಿನ್ನ ಕಾಣಿಕೆಯನ್ನು ಕೊಡು," ಎಂದು ಯೇಸುವು ಹೇಳಿದರು (ಮತ್ತಾ. 5:23,24 - The Living Bible).

ಅದೇ ರೀತಿ ಯೇಸುವು ಹೇಳಿದ್ದೇನೆಂದರೆ, "ಇದಲ್ಲದೆ ನೀವು ನಿಂತುಕೊಂಡು ಪ್ರಾರ್ಥನೆ ಮಾಡುವಾಗ, ನಿಮಗೆ ಯಾರ ಮೇಲಾದರೂ ಕೆಟ್ಟ ಭಾವನೆಯಿದ್ದರೆ ಮೊದಲು ಅವರನ್ನು ಕ್ಷಮಿಸಿರಿ, ಆಗ ಪರಲೋಕದಲ್ಲಿರುವ ನಿಮ್ಮ ತಂದೆಯೂ ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸಿಬಿಡುವರು" (ಮಾರ್ಕ. 11:25 - The Living Bible).

ನಾವು ಎಲ್ಲಾ ಸಂದರ್ಭಗಳಲ್ಲೂ ನಮ್ಮ ಸ್ವಚಿತ್ತವನ್ನು ನಿರಾಕರಿಸಬೇಕು, ನಮ್ಮ ಗರ್ವವನ್ನು ಬಿಟ್ಟುಬಿಡಬೇಕು. ಮತ್ತು ಇತರರೊಂದಿಗೆ ಕೆಟ್ಟುಹೋಗಿರುವ ಅನ್ಯೋನ್ಯತೆಯನ್ನು ಮತ್ತೊಮ್ಮೆ ಬೆಳೆಸಿಕೊಳ್ಳಲು ನಾವು ಎರಡನೇ (ಇನ್ನೊಂದು) ಮೈಲಿಯನ್ನು ನಡೆಯಲು (ಅಂದರೆ ಅಧಿಕವಾಗಿ ಶ್ರಮಿಸಲು) ನಾವು ಸಿದ್ಧರಿರಬೇಕು. ಕೆಲವೊಮ್ಮೆ, ನಾವು ಐಕ್ಯತೆಗಾಗಿ ಎಷ್ಟೇ ಪ್ರಯತ್ನಿಸಿದರೂ, ಒಬ್ಬ ಸಹೋದರನು ನಮ್ಮೊಂದಿಗೆ ಕಠಿಣವಾಗಿ ನಡೆಯಬಹುದು ಮತ್ತು ನಮ್ಮೊಂದಿಗೆ ಕರುಣೆಯಿಲ್ಲದೆ ವರ್ತಿಸಬಹುದು; ಆದರೆ ನಾವು ನಮ್ಮ ಪ್ರಯತ್ನವನ್ನು ಯಥಾರ್ಥವಾಗಿ ಮಾಡಿದ್ದರೆ, ಆಗ ದೇವರ ದೃಷ್ಟಿಯಲ್ಲಿ ನಾವು ನಮ್ಮ ಜವಾಬ್ದಾರಿಯನ್ನು ನಿಭಾಯಿಸಿದ್ದೇವೆ.

ಯೇಸುವು ಸ್ಪಷ್ಟವಾಗಿ ಹೇಳಿರುವಂತೆ, ಕರ್ತನ ದೇಹಕ್ಕೆ ಸೇರಿದ ಯಾವುದೇ ಸದಸ್ಯನೊಂದಿಗೆ ನಮ್ಮ ಸಂಬಂಧವು ಕೆಟ್ಟುಹೋಗಿದ್ದರೆ ಮತ್ತು ನಾವು ಆ ಸಂಬಂಧವನ್ನು ಸರಿಪಡಿಸಲು ಯಾವುದೇ ಪ್ರಯತ್ನ ಮಾಡದಿದ್ದರೆ, ದೇವರು ನಮ್ಮ ಆರಾಧನೆಯನ್ನಾಗಲೀ, ನಮ್ಮ ಸೇವೆಯನ್ನಾಗಲೀ ಅಥವಾ ನಾವು ಅವರಿಗೆ ಅರ್ಪಿಸುವ ಯಾವುದೇ ಕಾಣಿಕೆಯನ್ನು ಸ್ವೀಕರಿಸಲಾರರು. ಎಷ್ಟು ಮಂದಿ ಕ್ರೈಸ್ತ ವಿಶ್ವಾಸಿಗಳು ಯೇಸುವಿನ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ, ಎಂದು ನಾನು ಕೆಲವೊಮ್ಮೆ ಯೋಚಿಸುತ್ತೇನೆ. ಅನೇಕರು ದೇವರ ಆಜ್ಞೆಗಳನ್ನು ಹಗುರವಾಗಿ ತೆಗೆದುಕೊಳ್ಳುತ್ತಾರೆ ಮತ್ತು ಆ ಮೂಲಕ ಕ್ರಿಸ್ತನ ದೇಹಕ್ಕೆ ಆತ್ಮಿಕ ಮರಣವನ್ನು ತರುತ್ತಾರೆ.

ಅಪೊಸ್ತಲ ಪೌಲನು ನಮಗೆ ತಿಳಿಸಿರುವುದು ಏನೆಂದರೆ, "ಮತ್ತೊಬ್ಬರನ್ನು ಮನ್ನಿಸುವುದಕ್ಕೆ ಇನ್ನೊಂದು ಕಾರಣ, ಆ ಮೂಲಕ ಸೈತಾನನು ಕುಯುಕ್ತಿಯಿಂದ ನಮ್ಮನ್ನು ವಂಚಿಸಿ ನಷ್ಟಪಡಿಸುವುದನ್ನು ತಪ್ಪಿಸುತ್ತೇವೆ"(2 ಕೊರಿ. 2:11 - The Living Bible).