WFTW Body: 

"ದೇವರು ಕರುಣಾನಿಧಿಯಾಗಿದ್ದಾರೆ"(ಎಫೆ. 2:4).ನಾವೆಲ್ಲರೂ ನಮ್ಮ ಮಾನಸಾಂತರದ ಸಂದರ್ಭದಲ್ಲಿ ಮೊಟ್ಟಮೊದಲು ಅನುಭವಿಸಿದ ದೈವಿಕ ಗುಣವು ದೇವರ ಕರುಣೆಯಾಗಿತ್ತು. ನಾವು ಯಥಾರ್ಥವಾಗಿ ದೈವಿಕ ಸ್ವಭಾವವನ್ನು ಬೆಳೆಸಿಕೊಂಡಿದ್ದರೆ, ಇತರರು ನಮ್ಮನ್ನು ಮೊದಲನೆಯ ಸಲ ಭೇಟಿಯಾದಾಗ ಪಡೆಯುವಂತ ಅನುಭವವೂ ಸಹ ಇದೇ ಆಗಿರಬೇಕು.

ನರಕದಲ್ಲಿ ಕರುಣೆ ಇರುವುದಿಲ್ಲ ಮತ್ತು ನಮ್ಮ ಶರೀರಭಾವದಲ್ಲಿಯೂ ಕರುಣೆ ಇರುವುದಿಲ್ಲ. ನಮ್ಮ ಶರೀರಭಾವವು ಸ್ವಾಭಾವಿಕವಾಗಿ ಇತರರೊಂದಿಗೆ ಕಠಿಣವಾಗಿ ವರ್ತಿಸುತ್ತದೆ ಮತ್ತು ಈ ಕಠಿಣ ಸ್ವಭಾವವು ದೈವಿಕ ಕಾಠಿಣ್ಯದ ಅಂಗವೆಂದು ನಾವು ನಮ್ಮನ್ನೇ ವಂಚಿಸಿಕೊಳ್ಳುವುದು ಸುಲಭ. ಪಾಪವು ಇಂತಹ ವಂಚನೆಗೆ ನಡೆಸುತ್ತದೆ.

ಇದೀಗ ನಾವು ಪರಲೋಕದ ಒಂದು ನೋಟವನ್ನು ನೋಡಲು ಸಾಧ್ಯವಿದ್ದರೆ, ದೇವರು ಸತತವಾಗಿ ಜನರನ್ನು ಕ್ಷಮಿಸುತ್ತಿರುವುದನ್ನು ನಾವು ಕಾಣುತ್ತೇವೆ. ಭೂಲೋಕದ ನಾಲ್ಕು ದಿಕ್ಕುಗಳಿಂದಲೂ ವಿಶ್ವಾಸಿಗಳು ಮತ್ತು ಅವಿಶ್ವಾಸಿಗಳು ನಿರಂತರವಾಗಿ ಆತನಿಗೆ ಮೊರೆಯಿಡುತ್ತಾ, ತಮ್ಮ ಪಾಪಗಳನ್ನು ಮತ್ತು ತಮ್ಮ ಅಪಜಯಗಳನ್ನು ಕ್ಷಮಿಸುವಂತೆ ಬೇಡಿಕೊಳ್ಳುತ್ತಿದ್ದಾರೆ. ಮತ್ತು ದೇವರು ಜನರನ್ನು ನಿರಂತರವಾಗಿ ಕ್ಷಮಿಸುತ್ತಲೇ ಇದ್ದಾರೆ - ಪ್ರತಿದಿನದ 24 ತಾಸುಗಳೂ ಸಹ. ಕೆಲವರು ಸಾವಿರ ಸಲ ಯಾವುದೋ ಪಾಪವನ್ನು ಮಾಡಿ ಅದಕ್ಕಾಗಿ ಪದೇ ಪದೇ ಕ್ಷಮೆ ಬೇಡುತ್ತಿರಬಹುದು. ಹಾಗಿದ್ದರೂ ದೇವರು ಕ್ಷಮಿಸುತ್ತಾರೆ, ಏಕೆಂದರೆ ಅದು ಅವರ ಸ್ವಭಾವವಾಗಿದೆ. ನಾವು ಸಹ ಇತರರನ್ನು ಹೀಗೆಯೇ ಮನ:ಪೂರ್ವಕವಾಗಿ ಕ್ಷಮಿಸಬೇಕೆಂದು ಯೇಸುವು ಹೇಳಿದರು (ಮತ್ತಾ. 18:35).

"ದೇವರ ಸ್ವಭಾವವೇ ಇಂಥದ್ದು. ಅದಲ್ಲದೆ, ನಾವು ಸಹ ದೇವರ ಈ ಸ್ವಭಾವವನ್ನು ಬೆಳೆಸಿಕೊಳ್ಳಬಹುದು ಎಂಬುದೇ ಹೊಸ ಒಡಂಬಡಿಕೆಯ ಶುಭ ಸಮಾಚಾರ ಅಥವಾ ಸುವಾರ್ತೆಯಾಗಿದೆ."

ನಾವು ನಮ್ಮ ಸಹೋದರರನ್ನು ಒಂದೇ ದಿನದಲ್ಲಿ ಏಳು ಸಾರಿ ಕ್ಷಮಿಸಬೇಕೆಂದು ಯೇಸುವು ಹೇಳಿದರು (ಲೂಕ. 17:4). 12 ತಾಸುಗಳನ್ನು ಒಂದು ದಿನ ಎಂದು ಪರಿಗಣಿಸಲಾಗುತ್ತಿತ್ತು. ಇದರ ಅರ್ಥ, ಒಂದು ದಿನ ಬೆಳಗ್ಗೆ 6 ಘಂಟೆಗೆ ನಿನ್ನ ಸಹೋದರನು ನಿನ್ನ ವಿರುದ್ಧವಾಗಿ ಪಾಪ ಮಾಡಿದರೆ, ಮತ್ತು 7 ಘಂಟೆಗೆ ನಿನ್ನಿಂದ ಕ್ಷಮೆ ಕೇಳಿದರೆ, ನೀನು ಅವನನ್ನು ಕ್ಷಮಿಸಬೇಕು. ಅವನು ಬೆಳಗ್ಗೆ 8 ಘಂಟೆಗೆ ನಿನ್ನ ವಿರುದ್ಧವಾಗಿ ಅದೇ ಪಾಪವನ್ನು ಮತ್ತೊಮ್ಮೆ ಮಾಡಿದರೆ ಮತ್ತು 9 ಘಂಟೆಗೆ ನಿನ್ನಿಂದ ಕ್ಷಮೆ ಯಾಚಿಸಿದರೆ, ನೀನು ಅವನನ್ನು ಮತ್ತೊಮ್ಮೆ ಕ್ಷಮಿಸಬೇಕು. ಅವನು ಬೆಳಗ್ಗೆ 10 ಘಂಟೆಗೆ ಮೂರನೇ ಬಾರಿ ಅದೇ ಪಾಪವನ್ನು ಮಾಡಿದರೆ ಮತ್ತು 11 ಘಂಟೆಗೆ ನಿನ್ನಿಂದ ಕ್ಷಮೆ ಕೇಳಿದರೆ, ಆಗಲೂ ನೀನು ಅವನನ್ನು ಕ್ಷಮಿಸಬೇಕು. ಅವನು ತಿರುಗಿ ಮಧ್ಯಾಹ್ನ 12 ಘಂಟೆಗೆ ಮತ್ತು 2 ಘಂಟೆಗೆ ಮತ್ತು 4 ಘಂಟೆಗೆ ಅದೇ ಪಾಪವನ್ನು ಮಾಡಿ ಪ್ರತೀ ಬಾರಿ ಒಂದು ಘಂಟೆಯ ನಂತರ ಕ್ಷಮಾಪಣೆಯನ್ನು ಕೇಳಿದರೆ, ನೀನು ಎಷ್ಟು ಸಲ ಅವನನ್ನು ಕ್ಷಮಿಸಿದೆಯೆಂದು ಲೆಕ್ಕಹಾಕದೆ, ಅವನು ಎಷ್ಟು ಸಲ ಪಾಪ ಮಾಡಿದ್ದರೂ ಅವನನ್ನು ಅದೇ ದಿನ ಕ್ಷಮಿಸಬೇಕು. ಒಬ್ಬ ಸಹೋದರನು ಏಳು ಬಾರಿ ತಪ್ಪು ಮಾಡುವ ವರೆಗೆ ದಾಖಲೆ ಇರಿಸಿಕೊಳ್ಳಬೇಕೆಂದು ಯೇಸುವು ನಮಗೆ ಹೇಳಿದ್ದಾಗಿ ಕೆಲವು ಕಾನೂನುವಾದಿಗಳು ವಾದಿಸಬಹುದು. ಒಂದು ಸಲ ಪೇತ್ರನು ಯೇಸುವನ್ನು ನಿಖರವಾಗಿ ಇದರ ಬಗ್ಗೆ ಪ್ರಶ್ನಿಸಿದಾಗ, ಸಹೋದರನನ್ನು ಏಳು ಬಾರಿ ಅಲ್ಲ, 490 ಬಾರಿ ಕ್ಷಮಿಸಬೇಕು, ಎಂಬ ಉತ್ತರ ಅವನಿಗೆ ಸಿಕ್ಕಿತು (ಮತ್ತಾ. 18:21,22).

ದೇವರ ಸ್ವಭಾವವೇ ಇಂಥದ್ದು. ಅದಲ್ಲದೆ, ನಾವು ಸಹ ದೇವರ ಈ ಸ್ವಭಾವವನ್ನು ಬೆಳೆಸಿಕೊಳ್ಳಬಹುದು ಎಂಬುದೇ ಹೊಸ ಒಡಂಬಡಿಕೆಯ ಶುಭ ಸಮಾಚಾರ ಅಥವಾ ಸುವಾರ್ತೆಯಾಗಿದೆ. ಇದರ ಬಗ್ಗೆ ಮಾತಾಡುವುದು ಸುಲಭ, ಆದರೆ ಈ ಸ್ವಭಾವವನ್ನು ನಿಜವಾಗಿಯೂ ಬೆಳೆಸಿಕೊಳ್ಳುವುದು ಸುಲಭವಲ್ಲ. ನಮ್ಮೆಲ್ಲರಿಗೆ ಈ ಅನುಭವ ಆಗಿದೆ. "ದೇವರ ರಾಜ್ಯವು ಬರೀ ಮಾತಿನಿಂದಲ್ಲ, ಅದು ದೇವರ ಬಲದಿಂದ ಜೀವಿಸುವುದಾಗಿದೆ"(1 ಕೊರಿ. 4:20).

ನಾವು ಅನೇಕ ಅದ್ಭುತ "ಸತ್ಯಾಂಶಗಳನ್ನು" ಮತ್ತು ಸಿದ್ಧಾಂತಗಳನ್ನು ಚೆನ್ನಾಗಿ ವಿವರಿಸುವುದರಿಂದ ದೇವರ ಮಹಿಮೆ ನಮ್ಮಿಂದ ಹೊರಹೊಮ್ಮುವುದಿಲ್ಲ, ಆದರೆ ನಾವು ಇತರರಿಗೆ ದೇವರ ಪ್ರೀತಿಯನ್ನು ತೋರಿಸಿದಾಗ ಆ ಮಹಿಮೆ ನಮ್ಮ ಸುತ್ತಲೂ ಹರಡುತ್ತದೆ.