WFTW Body: 

23ನೇ ಕೀರ್ತನೆಯುಕುರುಬನ ಕೀರ್ತನೆಯಾಗಿದೆ. ಕರ್ತನು ನಮ್ಮ ಕುರುಬನಾಗಿರುವಾಗ, ನಮಗೆ ಯಾವ ಕೊರತೆಯೂ ಇರುವುದಿಲ್ಲ (ಕೀರ್ತ. 23:1). ಆತನು ನಮ್ಮನ್ನು ತಂಗಿಸುತ್ತಾನೆ ಮತ್ತು ತಾನು ನಮ್ಮ ಮುಂದೆ ಹೋಗುತ್ತಾನೆ. ಕಳೆಗುಂದಿದ ನಮ್ಮನ್ನು ಆತನು ಉಜ್ಜೀವನ ಗೊಳಿಸುತ್ತಾನೆ ಮತ್ತು ಆತನೇ ನಮ್ಮನ್ನು ನೀತಿ ಮಾರ್ಗದಲ್ಲಿ ನಡೆಸುತ್ತಾನೆ. ನಾವು ಅನೇಕ ಬಾರಿ ಕರ್ತನಿಗಾಗಿ ಏನಾದರೂ ಮಾಡುವ ಬಗ್ಗೆ ಯೋಚಿಸುತ್ತೇವೆ. ಆದರೆ ಇಲ್ಲಿ, ಕರ್ತನು ನಮಗಾಗಿ ಮಾಡುವ ಕಾರ್ಯಗಳಿಗೆ ಪ್ರಾಧಾನ್ಯತೆ ನೀಡಲಾಗಿದೆ. ನಾವು ದೇವರ ಸೇವೆಯನ್ನು ಸಮರ್ಥವಾಗಿ ಮಾಡಬೇಕಾದರೆ, ಮೊದಲು ಅವರು ನಮ್ಮಲ್ಲಿ ಮಾಡುವ ಕಾರ್ಯವನ್ನು ಪೂರ್ಣಗೊಳಿಸಲು ನಾವು ಅನುಮತಿಸಬೇಕು. ನಾವು ಯಾವುದೇ ಕೇಡಿನ ಬಗ್ಗೆ ಭಯಪಡುವುದಿಲ್ಲ, ಏಕೆಂದರೆ ಕರ್ತನು ನಮ್ಮೊಂದಿಗೆ ಇದ್ದಾನೆ. ಆತನು ನಮಗೆ ಉಣಬಡಿಸುತ್ತಾನೆ ಮತ್ತು ಆತನು ನಮ್ಮ ತಲೆಗೆ ತೈಲವನ್ನು ಹಚ್ಚುತ್ತಾನೆ. ಇದರ ನಂತರ ನಮ್ಮ ಪಾತ್ರೆಗಳು ತುಂಬಿ ಹೊರಸೂಸಲು ಆರಂಭಿಸಿ, ನಾವು ನಿತ್ಯ ನಿವಾಸ ಸ್ಥಾನಕ್ಕೆ ಸೇರುವ ತನಕ, ಶುಭವೂ ಕೃಪೆಯೂ ನಮ್ಮನ್ನು ಹಿಂಬಾಲಿಸುತ್ತವೆ.

34ನೇ ಕೀರ್ತನೆಯು ಕರ್ತನು ನೀತಿವಂತರ ಸಹಾಯಕನೆಂದು ತೋರಿಸಿಕೊಡುತ್ತದೆ. ಇದು ದಾವೀದನು ಅರಸನಾದ ಅಬೀಮೆಲೆಕನ ಎದುರು ಹುಚ್ಚನಂತೆ ನಟಿಸಿದ ಸಂದರ್ಭದಲ್ಲಿ ಕರ್ತನು ಆತನನ್ನು ನಿಶ್ಚಿತ ಸಾವಿನಿಂದ ಪಾರು ಮಾಡಿದಾಗ, ಆತನು ರಚಿಸಿದ ಕೀರ್ತನೆಯಾಗಿದೆ. ಆ ದಿನದಲ್ಲಿ ಆತನು ಹೀಗೆಂದನು, "ನಾನು ಕರ್ತನನ್ನು ಎಡೆಬಿಡದೆ ಕೊಂಡಾಡುವೆನು. ಕಷ್ಟದಲ್ಲಿದ್ದ ಈ ಮನುಷ್ಯನು ಮೊರೆಯಿಡಲು ಕರ್ತನು ಕೇಳಿದನು. ಕರ್ತನು ಸರ್ವೋತ್ತಮನೆಂದು ರುಚಿಸಿ ನೋಡಿರಿ" (ಕೀರ್ತ. 34:1,6,8). "ಕರ್ತನ ಭಯಭಕ್ತಿಯುಳ್ಳವರ ಸುತ್ತಲು ಆತನ ದೂತನು ದಂಡಿಳಿಸಿ ಕಾವಲಾಗಿದ್ದು ಕಾಪಾಡುತ್ತಾನೆ" (ಕೀರ್ತ. 34:7), ಎಂಬುದನ್ನು ದಾವೀದನು ಕಂಡುಕೊಂಡನು. ಅದಲ್ಲದೆ ಆತನು ನೋಡಿದ್ದು ಏನೆಂದರೆ, "ಕರ್ತನು ನೀತಿವಂತರನ್ನು ಕಟಾಕ್ಷಿಸುತ್ತಾನೆ; ಅವರು ಮೊರೆಯಿಡುವಾಗ ಕಿವಿಗೊಡುತ್ತಾನೆ"; "ಮುರಿದ ಮನಸ್ಸುಳ್ಳವರಿಗೆ ಕರ್ತನು ನೆರವಾಗುತ್ತಾನೆ" (ಕೀರ್ತ. 34:15, 18). ದಾವೀದನು ತನ್ನ ಅನುಭವದಿಂದ ಅರಿತುಕೊಂಡ ಇನ್ನೊಂದು ವಿಷಯ, "ನೀತಿವಂತನಿಗೆ ಸಂಭವಿಸುವ ಕಷ್ಟಗಳು ಅನೇಕ"(ಕೀರ್ತ. 34:19 a). ನೀವು ನೀತಿವಂತರಾಗಿದ್ದರೆ, ನೀವು ತೊಂದರೆಗಳನ್ನು ಅನುಭವಿಸುವುದಿಲ್ಲವೆಂದು ಒಂದು ಕ್ಷಣವೂ ಯೋಚಿಸದಿರಿ. ನೀವು ಹೆಚ್ಚಿನ ಕಷ್ಟಗಳನ್ನು ಅನುಭವಿಸುವಿರಿ. "ಆದರೆ ಕರ್ತನು ಅವೆಲ್ಲವುಗಳಿಂದ ನಿಮ್ಮನ್ನು ಬಿಡಿಸುತ್ತಾನೆ'' (ಕೀರ್ತ. 34:19 b). ಇದರ ನಂತರ ಮೆಸ್ಸಿಯನಿಗೆ ಸಂಬಂಧಿಸಿದ ಒಂದು ಪ್ರವಾದನೆ ಇಲ್ಲಿದೆ: "ಆತನು ಅವರ ಎಲುಬುಗಳನ್ನೆಲ್ಲಾ ಕಾಪಾಡುತ್ತಾನೆ; ಅವುಗಳಲ್ಲಿ ಒಂದಾದರೂ ಮುರಿದು ಹೋಗುವುದಿಲ್ಲ" (ಕೀರ್ತ. 34:20) - ಇದು ಶಿಲುಬೆಯ ಮೇಲೆ ಪೂರೈಸಲ್ಪಟ್ಟಿತು.

66ನೇ ಕೀರ್ತನೆಯಲ್ಲಿ, ದಾವೀದನು ತನ್ನನ್ನು ಸುಸ್ಥಿತಿಗೆ ಕರೆತಂದ ದೇವರನ್ನು ಸ್ತುತಿಸುತ್ತಾನೆ. ಆದರೆ ಇಲ್ಲಿಗೆ ಬರುವಾಗ, ಹಲವು ಶೋಧನೆಗಳನ್ನು ದಾಟಿ ಬರಬೇಕಾಯಿತು. ಕೀರ್ತ. 66:10-12 ರಲ್ಲಿ, ರೋಗ, ಬೆಂಕಿ ಮತ್ತು ನೀರು ಮತ್ತು ಜನರ ದಬ್ಬಾಳಿಕೆಯನ್ನು ದಾಟಿ ಬರುವಂತೆ ದೇವರು ದಾವೀದನನ್ನು ನಡೆಸಿದರು, ಆ ಮೇಲೆ ಆತನನ್ನು ಆತ್ಮಿಕ ಸಮೃದ್ಧಿಯ ಸ್ಥಳಕ್ಕೆ ತಂದರು, ಎಂದು ನಾವು ಓದುತ್ತೇವೆ. ಇಲ್ಲಿ "ಸಮೃದ್ಧ ಸ್ಥಳ" ಎಂದು ಭಾಷಾಂತರವಾದ ಪದವು ಸತ್ಯವೇದದಲ್ಲಿ ಬೇರೆಡೆ ಒಂದು ಬಾರಿ ಮಾತ್ರ ಉಪಯೋಗಿಸಲ್ಪಟ್ಟಿದೆ - ಕೀರ್ತ. 23:5ರಲ್ಲಿ - ಅಲ್ಲಿ ಇದನ್ನು "ತುಂಬಿ ಹೊರಸೂಸುವದು" ಎಂದು ಭಾಷಾಂತರಿಸಲಾಗಿದೆ. ಹಾಗಾದರೆ, ನಮ್ಮನ್ನು ’ತುಂಬಿ ಹೊರಸೂಸುವ’ ಜೀವನಕ್ಕೆ ಒಯ್ಯುವ ದಾರಿ ಶೋಧನೆ ಮತ್ತು ಸಂಕಟದ ಮೂಲಕ ಸಾಗುತ್ತದೆ. ಇನ್ನೊಂದು ಅವಶ್ಯಕ ವಚನ ಕೀರ್ತ. 66: 18: "ನಾನು ಕೆಟ್ಟತನದ ಮೇಲೆ ಮನಸ್ಸಿಟ್ಟರೆ, ಕರ್ತನು ನನ್ನ ವಿಜ್ಞಾಪನೆಯನ್ನು ಕೇಳುವುದಿಲ್ಲ". ಪ್ರಾರ್ಥನೆಯು ದೇವರೊಂದಿಗೆ ಒಂದು ’ಫೋನ್ ಸಂಭಾಷಣೆ’ ಮಾಡಿದಂತೆ ಇರುತ್ತದೆ. ಆದರೆ ಅರಿಕೆ ಮಾಡದ ಪಾಪಗಳು ನಮ್ಮ ಹೃದಯಗಳಲ್ಲಿ ಇದ್ದಾಗ, ದೇವರು ನಮ್ಮ ಪ್ರಾರ್ಥನೆಯ ’ಫೋನ್ ಕರೆ’ಯನ್ನು ಎತ್ತಿಕೊಳ್ಳುವುದೇ ಇಲ್ಲ.

91ನೇ ಕೀರ್ತನೆಯು "ಪರಾತ್ಪರನ ಮರೆಹೊಕ್ಕಿದ" ಮನುಷ್ಯನ ಸೌಭಾಗ್ಯ ಮತ್ತು ಸುರಕ್ಷಿತತೆಯನ್ನು ಸಾರುತ್ತದೆ. ನಾವು ಮರೆಹೊಕ್ಕುವ ಸ್ಥಳ ಯೇಸುವಿನ ಗಾಯಗೊಂಡ ಪಕ್ಕೆಯಾಗಿದೆ. ನಾವು "ಸರ್ವಶಕ್ತನ ಆಶ್ರಯದಲ್ಲಿ" ಜೀವಿಸುತ್ತೇವೆ ಎನ್ನುವಾಗ, ದೇವರು ನಮ್ಮ ಮುಂದೆ ಹೋಗುತ್ತಾರೆ, ಮತ್ತು ನಾವು ಅವರ ನೆರಳಿನಲ್ಲಿ ನಡೆಯುತ್ತೇವೆ, ಎಂದು ಅರ್ಥ (ಕೀರ್ತ. 91:1). ಇಡೀ ಲೋಕದಲ್ಲಿ ಅತ್ಯಂತ ಸುರಕ್ಷಿತವಾದ ಸ್ಥಳ, ದೇವರ ಪರಿಪೂರ್ಣ ಚಿತ್ತದ ಮಧ್ಯದಲ್ಲಿ ಇರುತ್ತದೆ. ಕರ್ತರು ನಮ್ಮನ್ನು ನಮ್ಮ ಇಬ್ಬರು ಶತ್ರುಗಳಿಂದ - ಸೈತಾನ (ಬೇಟೆಗಾರ) ಮತ್ತು ಪಾಪ (ಮರಣಕರ ವ್ಯಾಧಿ) - ಬಿಡುಗಡೆ ಮಾಡುವ ವಾಗ್ದಾನವನ್ನು ನೀಡಿದ್ದಾರೆ (ಕೀರ್ತ. 91:3). ಅವರು ನಮ್ಮನ್ನು ’ಸುಲಭವಾಗಿ ಗೋಚರಿಸುವ ಪಾಪಗಳು’ (ಹಗಲು ಹಾರುವ ಬಾಣಗಳು) ಮತ್ತು ’ಅಗೋಚರ ಮೋಸಕರ ಪಾಪಗಳಿಂದ’ (ಕತ್ತಲೆಯಲ್ಲಿ ಸಂಚರಿಸುವ ವಿಪತ್ತುಗಳು) ರಕ್ಷಿಸುತ್ತಾರೆ (ಕೀರ್ತ. 91: 5,6). ನಮ್ಮ ಅಕ್ಕಪಕ್ಕದ 11,000 ಕ್ರೈಸ್ತರು ಪಾಪವನ್ನು ಜಯಿಸುವ ಜೀವಿತದಲ್ಲಿ ನಂಬಿಕೆ ಇರಿಸದಿದ್ದರೂ ಸರಿ, ನಾವು ಪಾಪಕ್ಕೆ ಸೋಲದಂತೆ ಕರ್ತರು ನಮ್ಮನ್ನು ಕಾಯುತ್ತಾರೆ (ಕೀರ್ತ. 91:7). ನಾವು ಅನೇಕ ಸಂಕಟಗಳನ್ನು ಎದುರಿಸ ಬೇಕಾಗಬಹುದು, ಆದರೆ ಅವೆಲ್ಲವುಗಳಿಂದ, ’ನಮಗೆ ಯಾವ ಕೇಡೂ ಸಂಭವಿಸದು' (ಕೀರ್ತ. 91:10). ನಾವು ಅವರ ಚಿತ್ತದಂತೆ ನಡೆಯುವಷ್ಟು ಕಾಲ, ನಮ್ಮನ್ನು ಕಾಯುವುದಕ್ಕೆ ಅವರು ತನ್ನ ದೂತರಿಗೆ ಅಪ್ಪಣೆ ಕೊಡುವರು (ಕೀರ್ತ. 91:11). ಸೈತಾನನು (’ಸಿಂಹ ಮತ್ತು ಘಟಸರ್ಪ’) ಯಾವಾಗಲೂ ನಮ್ಮ ಕಾಲುಗಳ ಕೆಳಗೆ ಹಾಕಿ ತುಳಿಯಲ್ಪಡುವನು (ಕೀರ್ತ. 91:13). ದೇವರು ನಮ್ಮ ಮೊರೆಗೆ ಸದುತ್ತರವನ್ನು ದಯಪಾಲಿಸಿ, ನಮ್ಮನ್ನು ಇಕ್ಕಟ್ಟಿನಿಂದ ಮೇಲಕ್ಕೆ ಎತ್ತುವರು ಮತ್ತು ನಮಗೆ ದೀರ್ಘಾಯುಷ್ಯವನ್ನು ಅನುಗ್ರಹಿಸಿ, ನಾವು ನಮಗೆ ನಿಯುಕ್ತವಾದ ಕಾರ್ಯವನ್ನು ಪೂರೈಸುವ ತನಕ ನಾವು ಸಾಯದಂತೆ ರಕ್ಷಿಸುವರು (ಕೀರ್ತ. 91: 15,16).