ಯೇಸುವು ನಮಗೆ ಕಲಿಸಿದ ಪ್ರಾರ್ಥನೆಯ ಮೊದಲ ಮೂರು ವಿನಂತಿಗಳು ಯಾವುವೆಂದರೆ, "ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ" "ನಿನ್ನ ರಾಜ್ಯವು ಬರಲಿ," ಮತ್ತು "ನಿನ್ನ ಚಿತ್ತವು ನೆರವೇರಲಿ." ಇವೆಲ್ಲವೂ ದೇವರಿಗೆ ಅನ್ವಯಿಸುವ ಸಂಗತಿಗಳು ಎಂಬುದನ್ನು ಗಮನಿಸಿರಿ. ಮಾನವನು ಸ್ವಭಾವತಃ ಸ್ವಾರ್ಥಿಯಾಗಿದ್ದಾನೆ. ನಾವು ಆದಾಮನಿಂದ ಪಡೆದಿರುವುದು ಸ್ವ-ಕೇಂದ್ರಿತ ಜೀವಿತ; ಇದರಿಂದಾಗಿ ನಾವು ಮೂಲತಃ ನಮ್ಮ ಬಗ್ಗೆ, ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ಬಗ್ಗೆ ಮಾತ್ರ ಯೋಚಿಸುತ್ತೇವೆ. ನಾನು, ನನ್ನದು, ನನ್ನ ಕುಟುಂಬ - ಬಹುತೇಕ ಜನರ ಆಲೋಚನೆಗಳು ಇಷ್ಟಕ್ಕೇ ಸೀಮಿತವಾಗಿರುತ್ತವೆ. ಇವರು ರಕ್ಷಿಸಲ್ಪಟ್ಟ ನಂತರವೂ ಇದೇ ನಾನು, ನನ್ನದು, ನನ್ನ ಕುಟುಂಬ ಎಂಬ ಆಲೋಚನೆ ಮುಂದುವರಿಯುತ್ತದೆ. ಅವರು ಕ್ರಿಸ್ತನನ್ನು ಸ್ವೀಕರಿಸಿದಾಗಲೂ, ಕ್ರಿಸ್ತನು "ನಾನು, ನನ್ನದು, ನನ್ನ ಕುಟುಂಬವನ್ನು ಹೇಗೆ ಆಶೀರ್ವದಿಸುತ್ತಾನೆ, ಎಂಬುದನ್ನೇ ಯೋಚಿಸುತ್ತಾರೆ. ಅದು ಕ್ರೈಸ್ತತ್ವವಲ್ಲ. ಈ ಮನೋಭಾವವೇ ನಮ್ಮ ಎಲ್ಲಾ ದುಃಖ ಮತ್ತು ಅಸಂತೋಷಗಳ ಮೂಲ ಕಾರಣವಾಗಿದೆ; ಇಂತಹ ಸ್ವ-ಕೇಂದ್ರಿತ ಜೀವನದಿಂದ ನಮ್ಮನ್ನು ಬಿಡುಗಡೆಗೊಳಿಸಲಿಕ್ಕಾಗಿ ಯೇಸುವು ಬಂದರು.
ಬಹುತೇಕ ಕ್ರೈಸ್ತರು ಸದಾಕಾಲ ಸಂತೋಷವಾಗಿರಲು ಸಾಧ್ಯವಾಗದಿರುವುದಕ್ಕೆ ಕಾರಣವೇನೆಂದರೆ, ಅವರು ತಮ್ಮಲ್ಲೇ ಕೇಂದ್ರಿಕೃತರಾಗಿರುವುದು. ಅವರಿಗೆ ಏನಾದರೂ ಒಳ್ಳೆಯದು ನಡೆದರೆ ಅವರು ಸಂತೋಷಿಸುತ್ತಾರೆ; ಆದರೆ ತಮ್ಮ ನಿರೀಕ್ಷೆಯಂತೆ ಆಗದಿದ್ದರೆ — ಉದಾಹರಣೆಗೆ ನೌಕರಿಯಲ್ಲಿ ನಿರೀಕ್ಷಿಸಿದ ಬಡ್ತಿ ಸಿಗದಿದ್ದಾಗ — ಅವರ ಸಂತೋಷ ಕಾಣೆಯಾಗುತ್ತದೆ. ಏಕೆ? ದೇವರು ಇನ್ನೂ ತಮ್ಮ ಸಿಂಹಾಸನದ ಮೇಲಿದ್ದಾರೆ. ನಿಮ್ಮ ಪಾಪಗಳು ಇನ್ನೂ ಕ್ಷಮಿಸಲ್ಪಟ್ಟಿವೆ. ಸೈತಾನನು ಈಗಲೂ ಸೋಲಿಸಲ್ಪಟ್ಟಿದ್ದಾನೆ! ಆದರೂ ನೀವು ಬಯಸಿದ್ದು ನಿಮಗೆ ಸಿಗಲಿಲ್ಲ ಎಂಬ ಕಾರಣಕ್ಕಾಗಿ ನಿಮ್ಮ ಸಂತೋಷ ಕಾಣೆಯಾಗುತ್ತದೆ. ನಮ್ಮ ಎಲ್ಲಾ ಸಮಸ್ಯೆಗಳ ಮೂಲ ಕಾರಣವಾಗಿರುವ ಈ ಸ್ವ-ಕೇಂದ್ರಿತ ಜೀವನದಿಂದ ನಮ್ಮನ್ನು ಹೊರತರಲು ಯೇಸುವು ಬಂದರು.
ಹಾಗಿದ್ದರೆ ನಾವು ಆಹಾರಕ್ಕಾಗಿ ಪ್ರಾರ್ಥಿಸಬಹುದೇ? ಖಂಡಿತವಾಗಿ ಪ್ರಾರ್ಥಿಸಬಹುದು. ಯೇಸು ಮತ್ತಾ. 6:11'ರಲ್ಲಿ ಪ್ರಾರ್ಥಿಸಲು ಕಲಿಸಿದ್ದು ಏನೆಂದರೆ, "ಇಂದು ನಮಗೆ ನಮ್ಮ ಅನುದಿನದ ಆಹಾರವನ್ನು ಕೊಡು".ಅನುದಿನದ ಆಹಾರ ಎಂದರೆ ಅದರಲ್ಲಿ ಆಹಾರ, ಬಟ್ಟೆ, ವಾಸಸ್ಥಳ ಮತ್ತು ಮಕ್ಕಳ ಶಿಕ್ಷಣವೂ ಒಳಗೊಂಡಿದೆ. ಏಕೆಂದರೆ ನಮ್ಮ ಮಕ್ಕಳು ಶಿಕ್ಷಣ ಪಡೆದು ನೌಕರಿ ಮಾಡಿ ತಮ್ಮ ಅನುದಿನದ ಆಹಾರವನ್ನು ಗಳಿಸಬೇಕಾಗಿದೆ. ಈ ವಿಷಯಗಳನ್ನು ಕೇಳುವುದರಲ್ಲಿ ತಪ್ಪಿಲ್ಲ. "ನಮ್ಮ ಪಾಪಗಳನ್ನು ಕ್ಷಮಿಸು ಮತ್ತು "ನಮ್ಮನ್ನು ಕೇಡಿನಿಂದ ಬಿಡಿಸು ಎಂಬವುಗಳೂ ಉತ್ತಮ ವಿನಂತಿಗಳೇ. ಆದರೆ ನಮ್ಮ ಬಗ್ಗೆ ಇರುವ ಈ ಮೂರು ವಿನಂತಿಗಳು ದೇವರ ನಾಮ, ದೇವರ ರಾಜ್ಯ ಮತ್ತು ದೇವರ ಮಹಿಮೆಗಾಗಿ ಇರುವ ವಿನಂತಿಗಳ ನಂತರ ಬರುತ್ತವೆ. ಯೇಸು ನಮ್ಮ ಆದ್ಯತೆಗಳನ್ನು ಬದಲಿಸುತ್ತಿದ್ದಾರೆ.
ಸರಿಯಾದ ಪ್ರಾರ್ಥನೆಯೆಂದರೆ, ದೇವರ ರಾಜ್ಯ, ಆತನ ನಾಮ ಮತ್ತು ಆತನ ಚಿತ್ತವನ್ನು ನಮ್ಮ ಯೋಚನೆಗಳಲ್ಲಿ ಮೊದಲ ಸ್ಥಾನದಲ್ಲಿ ಇರಿಸಿಕೊಂಡು ಪ್ರಾರ್ಥಿಸುವುದು. ಅಂದರೆ, ನಾನು ನನ್ನ ಜೀವಿತದ ಸಂಪೂರ್ಣ ದೃಷ್ಟಿಕೋನವನ್ನು ಬದಲಿಸಬೇಕು — ಈಗಿನಿಂದ ದೇವರ ನಾಮ, ದೇವರ ರಾಜ್ಯ ಮತ್ತು ದೇವರ ಮಹಿಮೆಯನ್ನು ಆಧಾರವಾಗಿ ಇಟ್ಟುಕೊಂಡು ಯೋಚಿಸಬೇಕು. ಇಂಥವನೇ ಒಬ್ಬ ನಿಜವಾದ ಆತ್ಮಿಕ ಕ್ರೈಸ್ತನು. ಯಾರಾದರೂ ಕರ್ತನ ಪ್ರಾರ್ಥನೆಯನ್ನು ಪಠಿಸಬಹುದು — ಒಂದು ಗಿಳಿಯೂ ಸಹ. ಆದರೆ ಆತ್ಮಿಕ ಜನರು ಮಾತ್ರ ಈ ಪ್ರಾರ್ಥನೆಯನ್ನು ಹೃದಯಪೂರ್ವಕವಾಗಿ ಪ್ರಾರ್ಥಿಸಬಲ್ಲರು, ಏಕೆಂದರೆ ಅವರ ಜೀವನದ ಪ್ರಮುಖ ಧ್ಯೇಯ ತಮ್ಮ ದೇಶದಲ್ಲಿ, ತಮ್ಮ ಸಭೆಯಲ್ಲಿ, ಮತ್ತು ತಮ್ಮಲ್ಲಿ ಹಾಗೂ ತಮ್ಮ ಕುಟುಂಬದಲ್ಲಿ ದೇವರ ನಾಮವು ಪರಿಶುದ್ಧವಾಗಲಿ ಎಂಬುದಾಗಿರುತ್ತದೆ.
"ದೇವರ ರಾಜ್ಯವು ಶೀಘ್ರದಲ್ಲೇ ಬರಬೇಕು. ದೇವರ ಆಳ್ವಿಕೆಯು ಸಭೆಯಲ್ಲಿ ಸ್ಥಾಪಿತವಾಗಬೇಕು. ಮತ್ತು ನನ್ನ ಜೀವಿತದಲ್ಲಿ, ನನ್ನ ಕುಟುಂಬದಲ್ಲಿ ಮತ್ತು ಎಲ್ಲೆಡೆ ದೇವರ ಚಿತ್ತವು ನೆರವೇರಬೇಕು". ಇಂತಹ ಧ್ಯೇಯವನ್ನು ಹೊಂದಿರುವುದೇ ಒಬ್ಬ ಆತ್ಮಿಕ ವ್ಯಕ್ತಿಯ ಲಕ್ಷಣವಾಗಿದೆ. ಈ ಮೂರು ಧ್ಯೇಯಗಳು ನಿನ್ನ ಹೃದಯದಲ್ಲಿ ಆದ್ಯತೆಯನ್ನು ಪಡೆಯದಿದ್ದರೆ ನೀನು ನಿನ್ನನ್ನು ಆತ್ಮಿಕ ವ್ಯಕ್ತಿ ಎಂಬುದಾಗಿ ಭಾವಿಸಬೇಡ. ನಿನ್ನ ಜೀವಿತವು ಇನ್ನೂ ನಿನ್ನಲ್ಲೇ ಕೇಂದ್ರಿತವಾಗಿದ್ದರೆ, ಬೇರೆಲ್ಲಾ ಕಾರ್ಯಗಳು ಅರ್ಥಹೀನವಾಗಿವೆ. ಅನೇಕ ಜನರ ಜೀವಿತವು ಮೊದಲಿನಿಂದಲೂ ಸ್ವ-ಕೇಂದ್ರಿತವಾಗಿ ಇರುವುದರಿಂದ, ಅವರು ಆತ್ಮಿಕವಾಗಿ ಹೊಸದಾಗಿ ಹುಟ್ಟಿದಾಗ, ಅವರು ಯೇಸುವನ್ನು ತಮ್ಮ ಸ್ವಂತ ಲಾಭಕ್ಕಾಗಿ ಮಾತ್ರ ಬಳಸಿಕೊಳ್ಳುತ್ತಾರೆ. ಅಷ್ಟೇ — ಅದು, ತಮ್ಮ ಪಾಪಗಳನ್ನು ಕ್ಷಮಿಸಲು, ತಮ್ಮ ಪ್ರಾರ್ಥನೆಗಳಿಗೆ ಉತ್ತರಿಸಲು, ತಮ್ಮನ್ನು ಆಶೀರ್ವದಿಸಲು, ಸಮೃದ್ಧಿ ಪಡಿಸಲು, ಮತ್ತು ತಮ್ಮ ರೋಗಗಳನ್ನು ಗುಣಪಡಿಸಲಿಕ್ಕಾಗಿ ಮಾತ್ರ. ಇದು ಕ್ರೈಸ್ತತ್ವವಲ್ಲ. ಇದು ಕ್ರೈಸ್ತತ್ವದ ಸೋಗು ಹಾಕಿದ ಸ್ವ-ಕೇಂದ್ರಿತ ಜೀವಿತವಾಗಿದೆ. ಯೇಸು ನಿಜವಾಗಿ ನಮ್ಮೊಳಗೆ ಬಂದಾಗ, ನಾವು ನಮ್ಮ ಸ್ವ-ಕೇಂದ್ರಿತ ಜೀವಿತದಿಂದ ತಿರುಗುತ್ತೇವೆ (ಪಶ್ಚಾತ್ತಾಪ ಪಡುತ್ತೇವೆ), ಆಗ ದೇವರೇ ನಮ್ಮ ಕೇಂದ್ರವಾಗುತ್ತಾರೆ.
ಕರ್ತನ ಪ್ರಾರ್ಥನೆಯ ಕೊನೆಯಲ್ಲಿ ನಮ್ಮ ಕುರಿತಾದ ಮೂರು ವಿನಂತಿಗಳಲ್ಲಿ ಯೇಸುವು ಲೌಕಿಕ ಸಂಗತಿಗಳನ್ನು ಪ್ರಸ್ತಾಪಿಸಿದ್ದಾರೆ ("ಈ ಹೊತ್ತು ನಮಗೆ ನಮ್ಮ ಅನುದಿನದ ಆಹಾರವನ್ನು ದಯಪಾಲಿಸು"), ಆದರೆ ಇವುಗಳನ್ನು "ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರೆವೇರಲಿ" ಎಂಬುದರೊಂದಿಗೆ ಜೋಡಿಸಿದ್ದಾರೆ. ಹಾಗಾಗಿ ನಾನು ಹೀಗೆ ಪ್ರಾರ್ಥಿಸುತ್ತೇನೆ: "ನನ್ನ ತಂದೆಯೇ, ಪರಲೋಕದಲ್ಲಿ ದೇವದೂತರು ನಿಮ್ಮ ಚಿತ್ತವನ್ನು ತಕ್ಷಣ ವಿಧೇಯರಾಗಿ ನೆರವೇರಿಸುವಂತೆ, ನಾನು ಭೂಮಿಯಲ್ಲಿ ನಿಮ್ಮ ಚಿತ್ತವನ್ನು ನೆರವೇರಿಸಲು ಬಯಸುತ್ತೇನೆ; ಮತ್ತು ನಿಮ್ಮ ಚಿತ್ತವನ್ನು ನೆರವೇರಿಸಲಿಕ್ಕಾಗಿ ನನಗೆ ಆರೋಗ್ಯ ಬೇಕು. ಆದ್ದರಿಂದ ನನ್ನ ಅನುದಿನದ ಆಹಾರವನ್ನು ದಯಪಾಲಿಸು." ನೀವು ದೇವರ ಚಿತ್ತವನ್ನು ನೆರವೇರಿಸುವ ಉದ್ದೇಶದಿಂದ ಅನುದಿನದ ಆಹಾರಕ್ಕಾಗಿ ಪ್ರಾರ್ಥಿಸುತ್ತಿದ್ದೀರಾ, ಅಥವಾ ನಿಮ್ಮ ಸ್ವಂತ ಚಿತ್ತವನ್ನು ನೆರವೇರಿಸಲಿಕ್ಕಾಗಿ ಅದನ್ನು ಬೇಡಿಕೊಳ್ಳುತ್ತಿದ್ದೀರಾ? ಅದು ಪಾಪ ಮಾಡಲಿಕ್ಕಾಗಿಯೋ, ಅಥವಾ ದೇವರನ್ನು ಸಂತೋಷ ಪಡಿಸಲಿಕ್ಕಾಗಿಯೋ? ನಮ್ಮ ಪ್ರಾರ್ಥನೆ ಹೀಗಿರಬೇಕು: "ನನ್ನ ಇಂದಿನ ಆಹಾರದ ಮೂಲಕ ದೇವರಿಗಾಗಿ ಜೀವಿಸಲಿಕ್ಕಾಗಿ ನನಗೆ ಆರೋಗ್ಯ ಹಾಗೂ ಶಕ್ತಿಯನ್ನು ದಯಪಾಲಿಸು."
ಗಮನಿಸಬೇಕಾದ ಇನ್ನೊಂದು ವಿಷಯವೆಂದರೆ — ಈ ಇಡೀ ಪ್ರಾರ್ಥನೆಯಲ್ಲಿ "ನನಗೆ" ಮತ್ತು "ನನ್ನ" ಎಂಬ ಪದಗಳು ಕಾಣೆಯಾಗಿವೆ. ಇದು ಬಹಳ ಕುತೂಹಲಕಾರಿ ವಿಷಯವಲ್ಲವೇ? ನಮ್ಮ ಸ್ವಂತ ಪ್ರಾರ್ಥನೆಗಳಲ್ಲಿ "ನನಗೆ" ಮತ್ತು "ನನ್ನ" ಎಂಬ ಪದಗಳು ಆಗಾಗ್ಗೆ ಬರುತ್ತವೆ, ಆದರೆ ಯೇಸುಸ್ವಾಮಿ ನಮಗೆ ಕಲಿಸಿದ ಪ್ರಾರ್ಥನೆಯಲ್ಲಿ ಈ ಪದಗಳು ಸಂಪೂರ್ಣವಾಗಿ ಇಲ್ಲವಾಗಿವೆ. ಯೇಸು ಹೇಳುತ್ತಾರೆ, "ನಮಗೆ" ದಯಪಾಲಿಸು" — "ಸ್ವಾಮೀ, ಇದು ನನ್ನೊಬ್ಬನಿಗಾಗಿ ಮಾತ್ರವಲ್ಲ, ನನ್ನ ಸಹೋದರನ ಬಗ್ಗೆಯೂ ನಾನು ಚಿಂತಿಸುತ್ತೇನೆ, ಅವನಿಗೂ ಅನುದಿನದ ಆಹಾರ ಬೇಕು." "ನಮ್ಮ ತಪ್ಪುಗಳನ್ನು ನಮಗೆ ಕ್ಷಮಿಸು." — "ನನ್ನನ್ನು ಮಾತ್ರ ಕ್ಷಮಿಸಬೇಡ, ನನ್ನ ಸಹೋದರನನ್ನೂ ಕ್ಷಮಿಸು." "ನಮ್ಮನ್ನು ತಪ್ಪಿಸು ...." ಯಥಾರ್ಥನಾದ ಆತ್ಮಿಕ ವ್ಯಕ್ತಿ ಯಾರೆಂದರೆ, ತನ್ನ ಜೀವಿತವನ್ನು ದೇವರಲ್ಲಿ ಕೇಂದ್ರೀಕರಿಸಿದವನು ಮತ್ತು ಆತನು ತನ್ನ ಬಗ್ಗೆ ಯೋಚಿಸುವಾಗ ಕೇವಲ ತನ್ನ ಬಗ್ಗೆ ಮಾತ್ರವಲ್ಲ, ತನ್ನ ಸುತ್ತಲಿರುವ ಇತರರ ಬಗ್ಗೆ — ದೇವರ ಕುಟುಂಬದ ಭಾಗವಾಗಿರುವ ಇತರರ ಬಗ್ಗೆಯೂ ಯೋಚಿಸುತ್ತಾನೆ. ದೇವರು ಒಂದು ದೊಡ್ಡ ಕುಟುಂಬದ ತಂದೆಯಾಗಿರುವುದರಿಂದ, ಅವರ ಯಥಾರ್ಥನಾದ ಮಗನು ಇತರರ ಬಗ್ಗೆಯೂ ಯೋಚಿಸುತ್ತಾನೆ.
ಪ್ರಾರ್ಥನೆಯ ಸರಿಯಾದ ಕ್ರಮ ಹೀಗಿದೆ, ಮೊದಲು ಕ್ರಿಸ್ತನು, ನಂತರ ಇತರರು ಹಾಗೂ ನಾನು ಒಟ್ಟಾಗಿ; ಕೇವಲ ನಾನೊಬ್ಬನೇ ಅಲ್ಲ. ಒಬ್ಬ ಆತ್ಮಿಕ ವ್ಯಕ್ತಿ ಪ್ರಾರ್ಥಿಸುವ ರೀತಿ ಇದೇ ಆಗಿದೆ: ತನ್ನೊಬ್ಬನ ಅವಶ್ಯಕತೆಗಳಿಗಾಗಿ ಮಾತ್ರವಲ್ಲ. ಅವನು ಸ್ವಾಭಾವಿಕವಾಗಿ ತನ್ನ ಮಕ್ಕಳ ಬಗ್ಗೆ ಚಿಂತಿಸುತ್ತಾನೆ, ಆದರೆ ಇತರರ ಮಕ್ಕಳ ಬಗ್ಗೆಯೂ ಚಿಂತಿಸುತ್ತಾನೆ. ಅವನು ಅವರನ್ನು ತಾತ್ಸಾರದಿಂದ ನೋಡುವುದಿಲ್ಲ. ಇತರರ ಮಕ್ಕಳ ಬಗ್ಗೆ ನಮ್ಮ ಸ್ವಂತ ಮಕ್ಕಳಷ್ಟೇ ಭಾರ ಹೊಂದಿರುವುದು ಮನುಷ್ಯರಾದ ನಮ್ಮಿಂದ ಸಾಧ್ಯವಿಲ್ಲ. ನಾವು ವಾಸ್ತವಿಕವಾಗಿರಬೇಕು, ಆದರೆ ಅವರ ಬಗ್ಗೆ ಸ್ವಲ್ಪವಾದರೂ ಕಾಳಜಿ ಇರಲೇಬೇಕು. "ನಮ್ಮಅನುದಿನದ ಆಹಾರವನ್ನು ಈ ಹೊತ್ತು ನಮಗೆ ದಯಪಾಲಿಸು."
"ನಾವು ಬೇರೆಯವರ ಪಾಪಗಳನ್ನು ಕ್ಷಮಿಸಿದಂತೆಯೇ ನಮ್ಮ ಪಾಪಗಳನ್ನು ಕ್ಷಮಿಸು." ಇದೊಂದು ಬಹಳ ಪ್ರಾಮುಖ್ಯವಾದ ಬೇಡಿಕೆಯಾಗಿದೆ. ಯೇಸುವು ಕಲಿಸಿದ ಪ್ರಾರ್ಥನೆಯ ಅಂತ್ಯದಲ್ಲಿ ಅವರು ಇದನ್ನು ಪುನಃ ಹೇಳಿದ್ದಾರೆ. ಅವರು ಮತ್ತಾ. 6:14ರಲ್ಲಿ ಹೀಗೆ ಹೇಳಿದ್ದಾರೆ. "ನೀವು ಜನರ ತಪ್ಪುಗಳನ್ನು ಕ್ಷಮಿಸಿದರೆ, ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮ ತಪ್ಪುಗಳನ್ನೂ ಕ್ಷಮಿಸುವನು." ಈ ನಿಯಮ ಅಥವಾ ಷರತ್ತನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಬಹಳ ಪ್ರಾಮುಖ್ಯವಾದದು, ಯಾಕೆಂದರೆ ಈ ನಿಯಮವನ್ನು ಸ್ವತಃ ಯೇಸುವೇ ನಿಗದಿಪಡಿಸಿದ್ದಾರೆ: ಒಂದು ವೇಳೆ ನೀವು ಮನುಷ್ಯರನ್ನು ಕ್ಷಮಿಸದೆ ಹೋದರೆ, ಆಗ ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮ ಪಾಪಗಳನ್ನು ಕ್ಷಮಿಸುವುದಿಲ್ಲ. ಇದು ಸತ್ಯವೋ, ಅಥವಾ ಸುಳ್ಳೋ?
ನೀವು ನಿಮಗೆ ವಿರೋಧವಾಗಿ ಒಬ್ಬ ವ್ಯಕ್ತಿಯು ಮಾಡಿರುವಂತದ್ದನ್ನು ಕ್ಷಮಿಸದೇ ಹೋದರೆ, ದೇವರು ನಿಮ್ಮನ್ನು ಕ್ಷಮಿಸುವುದನ್ನು ತಡೆ ಹಿಡಿಯುತ್ತಾರೆಯೇ? ನಿಶ್ಚಯವಾಗಿ. ನೀವು ಬೇರೆಯವರನ್ನು ಕ್ಷಮಿಸದೆ ಹೋದರೆ ಅವರು ನಿಮ್ಮನ್ನು ಕ್ಷಮಿಸುವುದಿಲ್ಲ. ದಯಮಾಡಿ ಇದನ್ನು ನೆನಪಿರಿಸಿಕೊಳ್ಳಿರಿ. ದೇವರು ಮನುಷ್ಯರೊಂದಿಗೆ ವ್ಯವಹರಿಸುವ ವಿಷಯಕ್ಕೆ ಸಂಬಂಧಿಸಿದ ಮೂಲಭೂತ ನಿಯಮ ಏನೆಂದರೆ, ನಾವು ಇತರರೊಂದಿಗೆ ಯಾವ ರೀತಿ ನಡೆದುಕೊಳ್ಳುತ್ತೇವೋ, ಅದೇ ರೀತಿ ದೇವರು ನಮ್ಮೊಂದಿಗೆ ನಡೆದುಕೊಳ್ಳುತ್ತಾರೆ. ನಾವು ಇತರರಿಗೆ ಕರುಣೆ ತೋರಿಸುವುದಾದರೆ, ದೇವರು ನಮಗೆ ಕರುಣೆ ತೋರಿಸುತ್ತಾರೆ. ಒಂದು ವೇಳೆ ನಾವು ಇತರರನ್ನು ಕ್ಷಮಿಸಿದರೆ, ದೇವರು ನಮ್ಮನ್ನು ಕ್ಷಮಿಸುತ್ತಾರೆ. ನಾವು ಅದನ್ನು ಮತ್ತಾ. 5:7'ರಲ್ಲಿ ನೋಡಿದ್ದೇವೆ, "ಕರುಣೆ ಉಳ್ಳವರು ಧನ್ಯರು; ಅವರು ಕರುಣೆ ಹೊಂದುವರು." ಇಲ್ಲಿ ನಾವು ಈ ರೀತಿ ಹೇಳಬಹುದು - ಇತರರನ್ನು ಕ್ಷಮಿಸುವವರು ಧನ್ಯರು, ಅವರು ಕ್ಷಮಾಪಣೆ ಹೊಂದುವರು; ಮತ್ತು ಇತರರನ್ನು ಕ್ಷಮಿಸದೆ ಇರುವವರು ಕ್ಷಮಾಪಣೆ ಹೊಂದುವುದಿಲ್ಲ.
ಒಂದು ಸಾರಿ ಯೇಸುವು ಇದನ್ನು ಸ್ಪಷ್ಟವಾಗಿ ವಿವರಿಸಲು ಮತ್ತಾ. 18:21-35ರಲ್ಲಿ ಒಂದು ಕಥೆಯನ್ನು ದೃಷ್ಟಾಂತವಾಗಿ ಹೇಳಿದರು. ಇದು ನಾವು ಅರ್ಥ ಮಾಡಿಕೊಳ್ಳಬೇಕಾದ ಒಂದು ಬಹು ಮುಖ್ಯವಾದ ಸಾಮ್ಯವಾಗಿದೆ. ಒಬ್ಬ ಅರಸನಿಗೆ ಅನೇಕ ಸೇವಕರಿದ್ದರು ಮತ್ತು ಅವರೆಲ್ಲರೂ ಅವನು ನೀಡಿದ್ದ ಸಾಲವನ್ನು ತೀರಿಸುವುದಕ್ಕಾಗಿ ಬಹಳ ಹಣವನ್ನು ಕೊಡಬೇಕಾಗಿತ್ತು. ಒಬ್ಬ ಮನುಷ್ಯನು ಅವನಿಗೆ 10,000 ತಲಾಂತುಗಳ ಸಾಲವನ್ನು ತೀರಿಸಬೇಕಾಗಿತ್ತು. ಅದು ನೂರು ಕೋಟಿ ರೂಪಾಯಿಗಳಿಗೆ ಸಮನಾಗಿದೆ. ಇದು ಬಹಳ ದೊಡ್ಡ ಸಾಲವಾಗಿತ್ತು - ಎಂದಿಗೂ ತೀರಿಸಲಾಗದ ಸಾಲ. ಆ ಅರಸನು ಕರುಣೆಯುಳ್ಳವನು ಆಗಿದ್ದನು ಮತ್ತು ಅವನನ್ನು ಕ್ಷಮಿಸಿಬಿಟ್ಟನು. ಈ ಕ್ಷಮಿಸಲ್ಪಟ್ಟ ಸೇವಕನು ಹೊರಗೆ ಬಂದೊಡನೆ ಬೇರೊಬ್ಬ ಸೇವಕನನ್ನು ಕಂಡನು. ಅವನು ಈತನಿಗೆ ನೂರು ರೂಪಾಯಿಗಳ ಸಾಲವನ್ನು ತೀರಿಸಬೇಕಾಗಿತ್ತು. ಈತನು ಅವನ ಕುತ್ತಿಗೆಯನ್ನು ಹಿಡಿದು, "ನೀನು ನನ್ನ ಹಣವನ್ನು ತೀರಿಸದಿದ್ದರೆ, ನಾನು ನಿನ್ನನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗುತ್ತೇನೆ ಮತ್ತು ಸೆರೆಮನೆಗೆ ಹಾಕಿಸುತ್ತೇನೆ," ಎಂದು ಹೇಳಿ ಹಾಗೆಯೇ ಮಾಡಿದನು. ಇತರ ಸೇವಕರು ಇದನ್ನು ಕಂಡಾಗ ಅವರು ಅರಸನ ಬಳಿಗೆ ಹೋಗಿ ನಡೆದದ್ದನ್ನೆಲ್ಲಾ ತಿಳಿಸಿದರು. ಆ ಅರಸನು ಆ ಸೇವಕನನ್ನು ಕರೆದು ಹೀಗೆ ಹೇಳಿದನು, "ಎಲಾ ನೀಚನೇ, ನೀನು ನನ್ನಲ್ಲಿ ಕೇಳಿಕೊಂಡಾಗ ನಾನು ಆ ಸಾಲವನ್ನೆಲ್ಲಾ ಬಿಟ್ಟುಬಿಟ್ಟೆನಲ್ಲಾ. ನಾನು ನಿನ್ನನ್ನು ಕರುಣಿಸಿದ ಹಾಗೆ ನೀನು ಸಹ ನಿನ್ನ ಜೊತೆಯ ಸೇವಕನನ್ನು ಕರುಣಿಸಬಾರದಾಗಿತ್ತೇ?" ಎಂದು ಹೇಳಿ ಬಹಳ ಕೋಪಗೊಂಡನು. ಅರಸನು ಈ ಸೇವಕನು ಕೊಡಬೇಕಾದ ಸಾಲವನ್ನು ತೀರಿಸುವ ತನಕ ಆತನನ್ನು ಪೀಡಿಸುವವರ ಕೈಗೆ ಒಪ್ಪಿಸಿದನು.
"ಕ್ರಿಸ್ತನು ನಿಜವಾಗಲೂ ನಮ್ಮೊಳಗೆ ಬಂದಾಗ, ನಾವು ನಮ್ಮ ಸ್ವ-ಕೇಂದ್ರಿತ ಜೀವಿತದಿಂದ ತಿರುಗುತ್ತೇವೆ, ಮತ್ತು ದೇವರು ನಮ್ಮ ಕೇಂದ್ರವಾಗುತ್ತಾರೆ".
ಬೇರೆ ಮಾತುಗಳಲ್ಲಿ ಹೇಳುವುದಾದರೆ, ಕ್ಷಮಿಸಲ್ಪಟ್ಟ ಸಾಲವು ಪುನಃ ಆತನ ತಲೆಯ ಮೇಲೆ ಹಾಕಲ್ಪಟ್ಟಿತು. ನೀವು ಇದನ್ನು ಹೇಗೆ ವಿವರಿಸುತ್ತೀರಿ? ನಮ್ಮನ್ನು ಕ್ಷಮಿಸುವ ದೇವರು, ನಮ್ಮ ಕ್ಷಮಾಪಣೆಯನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಾರೋ? ಈಗಾಗಲೇ ಕ್ಷಮಿಸಿದ ಪಾಪಗಳನ್ನು ಅವರು ಪುನಃ ನಮ್ಮ ತಲೆಯ ಮೇಲೆ ಹಾಕುತ್ತಾರೋ? ಈ ವಾಕ್ಯದ ಪ್ರಕಾರ, ಹೌದು. ದೇವರು ನಮ್ಮ ಪಾಪಗಳನ್ನು ಮರೆತುಬಿಟ್ಟಿದ್ದಾರೆ ಎಂಬುದಾಗಿ ಸತ್ಯವೇದವು ಎಲ್ಲಿಯೂ ಹೇಳುವುದಿಲ್ಲ. "ನಾನು ನಿಮ್ಮ ಪಾಪಗಳನ್ನು ಎಂದಿಗೂ ನನ್ನ ನೆನಪಿಗೆ ತರುವುದಿಲ್ಲ," ಎಂದು ಹೇಳುತ್ತಾರೆ; ಅದರ ಅರ್ಥವೇನೆಂದರೆ, "ನಾನು ನಿಮ್ಮ ಪಾಪಗಳನ್ನು ನಿಮ್ಮ ವಿರೋಧವಾಗಿ ಉಪಯೋಗಿಸುವುದಿಲ್ಲ," ಎಂಬುದಾಗಿದೆ.
ದೇವರು ಸಂಪೂರ್ಣವಾಗಿ ಮರೆತುಬಿಡುತ್ತಾರೆಂದು ಹೇಳುವ ಯಾವುದೇ ವಚನವಿಲ್ಲ. ನಾನು ಮಾಡಿದ ಪಾಪಗಳನ್ನು ಸ್ವತಃ ನಾನೇ ಮರೆಯಲು ಸಾಧ್ಯವಾಗದೇ ಇರುವಾಗ, ಅವುಗಳನ್ನು ದೇವರು ಮರೆಯಲು ಹೇಗೆ ಸಾಧ್ಯ? ಇಲ್ಲ. ಅವರಿಗೆ ಹಿಂದಿನ ಸಂಗತಿಗಳು ಈಗಲೂ ತಿಳಿದಿವೆ. ಆದರೆ ಅವರು ಅವುಗಳನ್ನು ನಮ್ಮ ವಿರುದ್ಧವಾಗಿ ಎತ್ತಿ ಹಿಡಿಯುವುದಿಲ್ಲ. ಈ ಸಾಮ್ಯವು ನಮಗೆ ಕಲಿಸುವುದು ಏನೆಂದರೆ, ನೀವು ಇತರರನ್ನು ಕ್ಷಮಿಸಿದರೆ, ದೇವರು ನಿಮ್ಮನ್ನು ಕ್ಷಮಿಸುತ್ತಾರೆ, ಮತ್ತು ನೀವು ಕ್ಷಮಿಸದಿದ್ದರೆ, ದೇವರು ನಿಮ್ಮನ್ನು ಕ್ಷಮಿಸುವುದಿಲ್ಲ ಎಂಬುದಾಗಿ.
ಇದರ ನಂತರ ಕೊನೆಯ ಬೇಡಿಕೆ ಏನೆಂದರೆ, "ನಮ್ಮನ್ನು ಶೋಧನೆಯೊಳಗೆ ಸೇರಿಸಬೇಡ." ಇದರ ಅರ್ಥವೇನು? ದೇವರು ನಮ್ಮ ಶಕ್ತಿಯನ್ನು ಮೀರಿದ ಶೋಧನೆಯನ್ನು ಬರಗೊಡಿಸುವುದಿಲ್ಲ (1 ಕೊರಿ. 10:13). ಆದರೆ ಇದರ ಕುರಿತಾಗಿ ಪ್ರಾರ್ಥಿಸುವುದು ಒಳ್ಳೆಯದು. ಏಕೆಂದರೆ ಕೆಲವು ಶೋಧನೆಗಳು ನಮ್ಮ ಸಾಮರ್ಥ್ಯಕ್ಕೆ ಮೀರಿವೆ. ಅವುಗಳನ್ನು ನಾವು ಎದುರಿಸಲು ಸಾಧ್ಯವಿಲ್ಲ ಎಂಬುದನ್ನು ನಾವು ತಿಳಿದುಕೊಳ್ಳುವುದು ಒಳ್ಳೆಯದು. ದೇವರು ನಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಮಗೆ ಬರಗೊಡಿಸುವುದಿಲ್ಲವೆಂದು ನಮಗೆ ತಿಳಿದಿದೆ. ಆದರೂ ಶೋಧನೆಗೆ ಗುರಿಪಡಿಸಬೇಡಿ, ಎಂದು ನಾವು ದೇವರನ್ನು ಬೇಡಿಕೊಳ್ಳುವುದು ಅವಶ್ಯವಾಗಿದೆ. "ಈ ಕೇಡಿನಿಂದ ನಮ್ಮನ್ನು ತಪ್ಪಿಸಿ," ಎಂದು ನಾನು ಹೇಳುವಾಗ, ನಾನು ನನ್ನ ದೀನ ಸ್ಥಿತಿಯನ್ನು ವ್ಯಕ್ತಪಡಿಸುತ್ತೇನೆ ಮತ್ತು ಹೀಗೆ ಬೇಡಿಕೊಳ್ಳುತ್ತೇನೆ: "ಈ ಶೋಧನೆಯನ್ನು ಹೇಗೆ ಎದುರಿಸಬೇಕೆಂದು ನನಗೆ ತೋಚುತ್ತಿಲ್ಲ. ಈ ಶೋಧನೆಯನ್ನು ಜಯಿಸುವ ಸಾಮರ್ಥ್ಯ ನನಗಿಲ್ಲ. ಓ ಕರ್ತನೇ, ನನ್ನ ತಂದೆಯೇ, ದಯಮಾಡಿ ನನ್ನ ಶಕ್ತಿಗೆ ಮೀರಿದ ಬಲವಾದ ಶೋಧನೆಗೆ ನನ್ನನ್ನು ಕರೆದೊಯ್ಯಬೇಡ." ನಾನು ಈ ರೀತಿ ಪ್ರಾರ್ಥಿಸುವಾಗ, ನನ್ನ ಬಲಹೀನತೆ ಹಾಗೂ ಅಸಹಾಯಕ ಸ್ಥಿತಿಯನ್ನು ನಾನು ದೇವರ ಮುಂದೆ ಇರಿಸುತ್ತೇನೆ. ಇದು ಶೋಧನೆಯ ಕುರಿತಾಗಿ ನಮಗೆ ಇರಬೇಕಾದ ಒಳ್ಳೆಯ ಮನೋಭಾವವಾಗಿದೆ.
ನಾವು ಶೋಧನೆಯಿಂದ ಸೋಲಿಸಲ್ಪಡದಂತ ಬಲಶಾಲಿಗಳು, ಎಂಬುದಾಗಿ ನಾವು ಭಾವಿಸಬಾರದು. ಇಂತಹ ಮನೋಭಾವದಿಂದ ಎಷ್ಟೋ ಜನರು ಪಾಪದ ಮೇಲೆ ಜಯವನ್ನು ಸಾಧಿಸುವುದಿಲ್ಲ. ಹೆಚ್ಚಿನ ಕ್ರೈಸ್ತರು ಪಾಪದಿಂದ ಸೋಲಲು ಕಾರಣವೇನೆಂದರೆ ಅವರಲ್ಲಿರುವ ಅತಿಯಾದ ಆತ್ಮವಿಶ್ವಾಸ. ಅವರು ತಮ್ಮಲ್ಲಿ ಸಾಮರ್ಥ್ಯವಿದೆ ಎಂದು ಭಾವಿಸುತ್ತಾರೆ. ಒಳ್ಳೆಯ ನಿರ್ಣಯಗಳನ್ನು ತೆಗೆದುಕೊಂಡು ಮನಸ್ಸನ್ನು ಗಟ್ಟಿ ಮಾಡಿಕೊಂಡರೆ ತಾವು ಜಯಿಸಬಲ್ಲೆವು, ಎಂದು ಅವರು ಯೋಚಿಸುತ್ತಾರೆ. ಇಲ್ಲ, ಅದು ಆಗುವುದಿಲ್ಲ. ನಾವು ದೇವರ ಮುಂದೆ ಹೀಗೆ ಅರಿಕೆ ಮಾಡಬೇಕು, "ಕರ್ತನೇ, ನನ್ನ ಬಲವನ್ನು ಮೀರಿದ ಶೋಧನೆಗೆ ನನ್ನನ್ನು ಒಳಪಡಿಸಬೇಡ, ಮತ್ತು ನಾನು ಯಾವುದೇ ಶೋಧನೆಯನ್ನು ಎದುರಿಸುವಾಗ, ನನ್ನನ್ನು ಕೇಡಿನಿಂದ ತಪ್ಪಿಸು. ಏಕೆಂದರೆ ನಾನು ಸ್ವಂತ ಬಲದಿಂದ ಕೆಟ್ಟದ್ದನ್ನು ಜಯಿಸಲಾರೆ."ಕೆಟ್ಟತನದ ಮೇಲೆ ಜಯವು ನನ್ನ ಶಕ್ತಿಗೆ ಮೀರಿದ್ದು ಎಂದು ನಾನು ತಿಳಿದುಕೊಂಡಾಗ ಮಾತ್ರ, ಇತರರನ್ನು ಕ್ಷಮಿಸುವ ವಿಷಯದಲ್ಲೂ ಸಹ, ನಾವು ಯೇಸುವು ಇಲ್ಲಿ ಕಲಿಸಿರುವಂತೆ ಪ್ರಾರ್ಥಿಸುತ್ತೇವೆ. ಯಾರನ್ನಾದರೂ ಕ್ಷಮಿಸುವುದು ನಿಮಗೆ ಕಷ್ಟಕರವಾಗಿದ್ದರೆ -- ಯಾರಾದರೂ ನಿಮಗೆ ಅಥವಾ ನಿಮ್ಮ ಕುಟುಂಬಕ್ಕೆ ಭಯಾನಕ ಹಾನಿಯನ್ನು ಮಾಡಿದ್ದರೆ ಮತ್ತು ಆ ವ್ಯಕ್ತಿಯು ಮಾಡಿದ ಕೆಟ್ಟತನಕ್ಕಾಗಿ ನಿಮಗೆ ಆ ವ್ಯಕ್ತಿಯನ್ನು ಕ್ಷಮಿಸಲು ತುಂಬಾ ಕಷ್ಟವೆನಿಸಿದರೆ - ಆಗ ನೀವು ದೇವರ ಕೃಪೆಗಾಗಿ ಬೇಡಿಕೊಳ್ಳಬಹುದು. ಹೀಗೆ ಪ್ರಾರ್ಥಿಸಿರಿ, "ಕರ್ತನೇ, ದಯಮಾಡಿ ಕ್ಷಮಿಸದೇ ಇರುವಂತ ಈ ದುಷ್ಟತನದ ಆತ್ಮದಿಂದ ನನ್ನನ್ನು ಬಿಡುಗಡೆಗೊಳಿಸು. ಈ ವ್ಯಕ್ತಿಯನ್ನು ಕ್ಷಮಿಸಲು ನನ್ನಲ್ಲಿ ಬಲವಿಲ್ಲ, ಆದರೂ ಅವನನ್ನು ಕ್ಷಮಿಸಲು ನನಗೆ ಸಹಾಯ ಮಾಡುವಂತೆ ನಿನ್ನನ್ನು ಬೇಡಿಕೊಳ್ಳುತ್ತೇನೆ."
ಪ್ರಾರ್ಥನೆಯೆಂದರೆ ನಮ್ಮ ದೌರ್ಬಲ್ಯವನ್ನು ಅಂಗೀಕರಿಸಿ, ಅಸಹಾಯಕತೆಯಿಂದ ದೇವರ ಮೇಲೆ ಆತುಕೊಳ್ಳುವುದಾಗಿದೆ. ದೇವರು ಪರಲೋಕದಲ್ಲಿರುವ ನನ್ನ ತಂದೆಯಾಗಿದ್ದಾರೆ, ನನ್ನ ಸಕಲ ಪಾಪಗಳಿಂದ ನನ್ನನ್ನು ಬಿಡುಗಡೆಗೊಳಿಸಲಿಕ್ಕಾಗಿ ಅವರು ತನ್ನ ಮಗನನ್ನು ಸಾಯುವುದಕ್ಕಾಗಿ ಕಳುಹಿಸಿದರು; ಹಾಗಿರುವಾಗ ಅವರು ನನಗೆ ಸಹಾಯ ಮಾಡೇ ಮಾಡುತ್ತಾರೆಂಬ ವಿಶ್ವಾಸವೇ ನಂಬಿಕೆಯಾಗಿದೆ. ರೋಮಾ. 8:32'ರಲ್ಲಿ ಹೇಳಿರುವಂತೆ, "ಸ್ವಂತ ಮಗನನ್ನು ಉಳಿಸಿಕೊಳ್ಳದೆ ಆತನನ್ನು ನಮ್ಮೆಲ್ಲರಿಗೋಸ್ಕರ ಒಪ್ಪಿಸಿಕೊಟ್ಟನಲ್ಲಾ; ಮಗನನ್ನು ಕೊಟ್ಟ ಮೇಲೆ ಸಮಸ್ತವನ್ನೂ ನಮಗೆ ದಯಪಾಲಿಸದೆ ಇರುವನೇ!"
ಈ ಪ್ರಾರ್ಥನೆಯು ಮತ್ತಾ. 6:13'ರಲ್ಲಿ ಹೀಗೆ ಕೊನೆಗೊಳ್ಳುತ್ತದೆ. "ಯಾಕಂದರೆ, ರಾಜ್ಯವೂ, ಬಲವೂ, ಮಹಿಮೆಯೂ ಸದಾಕಾಲ ನಿನ್ನವೇ. ಆಮೆನ್."
ನಾವು ನಮ್ಮ ಪ್ರಾರ್ಥನೆಯನ್ನು ಇದೇ ರೀತಿ ಕೊನೆಗೊಳಿಸುವುದು ಬಹಳ ಪ್ರಮುಖವಾಗಿದೆ. ಮತ್ತು ನಾವು ಹೀಗೆ ಹೇಳುವುದು ಸೂಕ್ತವಾಗಿದೆ, "ಎಲ್ಲಾದರ ಕೊನೆಯಲ್ಲಿ, ಕರ್ತನೇ, ನೀನು ನನ್ನ ಪ್ರಾರ್ಥನೆಗೆ ಉತ್ತರಿಸಿ, ನಾನು ನಿನ್ನಲ್ಲಿ ಬೇಡಿದ್ದೆಲ್ಲವನ್ನೂ ಅನುಗ್ರಹಿಸಿದಾಗ, ರಾಜ್ಯವು ನಿನ್ನದು ಮತ್ತು ಬಲವು ನಿನ್ನದು ಎಂದು ನಾನು ಒಪ್ಪಿಕೊಳ್ಳುತ್ತೇನೆ. ಈ ರೀತಿಯಾದ ಜೀವಿತವನ್ನು ಜೀವಿಸಲು ನನ್ನಲ್ಲಿ ಶಕ್ತಿಯಿಲ್ಲ; ಪಾಪವನ್ನು ಜಯಿಸಲು ನನ್ನಲ್ಲಿ ಬಲವಿಲ್ಲ. ಆ ಬಲವು ನಿನ್ನದು. ಮತ್ತು ನಾನು ಪಾಪವನ್ನು ಜಯಿಸಿದಾಗ, ಅದರ ಮಹಿಮೆಯೂ ಕೂಡ ನಿನ್ನದೇ ಆಗಿರುತ್ತದೆ."
ಈ ಪ್ರಾರ್ಥನೆಯು "ಆಮೆನ್"ನೊಂದಿಗೆ ಕೊನೆಗೊಳ್ಳುತ್ತದೆ. ಇದರ ಅರ್ಥವೇನೆಂದರೆ, "ಹಾಗೆಯೇ ಆಗಲಿ."