WFTW Body: 

1. ದೇವರು ನಮ್ಮನ್ನೂ ಸಹ ಯೇಸುವನ್ನು ಪ್ರೀತಿಸಿದ ಹಾಗೆ ಪ್ರೀತಿಸುತ್ತಾನೆ

”ನೀನು ನನ್ನನ್ನು ಪ್ರೀತಿಸಿದಂತೆ ಅವರನ್ನೂ ಪ್ರೀತಿಸಿದ್ದೀ” (ಯೋಹಾನ 17:23) ಇದು ನಾನು ಸತ್ಯವೇದದಲ್ಲಿ ಕಂಡುಕೊಂಡಿರುವ ಅತೀ ದೊಡ್ಡ ಸತ್ಯವಾಗಿದೆ. ಇದು ಒಬ್ಬ ಭರವಸೆಯಿಲ್ಲದ, ನಿರುತ್ಸಾಹಿ ವಿಶ್ವಾಸಿಯಾಗಿದ್ದ ನನ್ನನ್ನು, ಯಾವಾಗಲೂ ದೇವರಲ್ಲಿ ಸಂಪೂರ್ಣ ಭರವಸೆ ಹೊಂದಿರುವ ಮತ್ತು ಕರ್ತನ ಆನಂದದಿಂದ ತುಂಬಿರುವ ವಿಶ್ವಾಸಿಯನ್ನಾಗಿ ಮಾರ್ಪಡಿಸಿದೆ.

ಸತ್ಯವೇದದಲ್ಲಿ ದೇವರು ನಮ್ಮನ್ನು ಪ್ರೀತಿಸುತ್ತಾನೆಂದು ತಿಳಿಸುವ ಅನೇಕ ವಚನಗಳಿವೆ, ಆದರೆ ಆ ಪ್ರೀತಿಯ ಪ್ರಮಾಣ ಎಷ್ಟಿದೆಯೆಂದು ನಮಗೆ ತೋರಿಸುವದು ಇದೊಂದೇ ವಚನ - ಆತನು ಯೇಸುವನ್ನು ಪ್ರೀತಿಸಿದ ಹಾಗೆಯೇ ನಮ್ಮನ್ನು ಪ್ರೀತಿಸುತ್ತಾನೆ.

ನಮ್ಮ ಪರಲೋಕದ ತಂದೆಯು ತನ್ನ ಮಕ್ಕಳನ್ನು ಪಕ್ಷಪಾತವಿಲ್ಲದೇ ಪ್ರೀತಿಸುವದರಿಂದ, ಆತನು ತನ್ನ ಚೊಚ್ಚಲು ಮಗನಾದ ಯೇಸುವಿಗೆ ಮಾಡಿದ ಎಲ್ಲವನ್ನೂ ತನ್ನ ಮಕ್ಕಳಾದ ನಮಗೆ ಮಾಡಲು ಖಂಡಿತವಾಗಿ ಸಿದ್ಧನಿದ್ದಾನೆ. ಆತನು ಯೇಸುವಿಗೆ ಒದಗಿಸಿದ ಸಹಾಯವನ್ನು ನಮಗೂ ಒದಗಿಸುತ್ತಾನೆ. ಆತನಲ್ಲಿ ಯೇಸುವಿಗಾಗಿ ಇದ್ದ ಕಾಳಜಿ ನಮಗಾಗಿಯೂ ಇದೆ. ಆತನು ಯೇಸುವಿನ ದೈನಂದಿನದ ವಿವರಗಳನ್ನು ಯೋಜಿಸಿದಂತೆಯೇ ನಮ್ಮ ಜೀವನಕ್ಕಾಗಿಯೂ ಯೋಜಿಸುತ್ತಾನೆ. ದೇವರಿಗೆ ತಿಳಿಯದಂತೆ ಯಾವ ಘಟನೆಯೂ ನಮಗೆ ಸಂಭವಿಸುವದಿಲ್ಲ. ಮುಂದೆ ನಡೆಯಲಿರುವ ಪ್ರತಿಯೊಂದು ಆಗು-ಹೋಗುವಿಗೂ ಬೇಕಾದ ಸಮಾಧಾನ ಆತನಲ್ಲಿದೆ.

ಹಾಗಾಗಿ ಇನ್ನೆಂದಿಗೂ ನಾವು ಭರವಸೆಯಿಲ್ಲದವರಾಗಿ ಇರುವ ಅಗತ್ಯವಿಲ್ಲ. ನಾವೂ ಸಹ ಭೂಲೋಕಕ್ಕೆ ಯೇಸುವು ಹೊಂದಿದ್ದಂತಹ ಖಚಿತವಾದ ಉದ್ದೇಶದೊಂದಿಗೆ ಕಳುಹಿಸಲ್ಪಟ್ಟಿದ್ದೇವೆ.

ಇವೆಲ್ಲಾ ನಿಮಗೂ ಸಹ ಅನ್ವಯಿಸುತ್ತವೆ - ಆದರೆ ನೀವು ಇದನ್ನು ನಂಬುವದಾದರೆ ಮಾತ್ರ.

ದೇವರ ವಾಕ್ಯವನ್ನು ನಂಬದಿರುವವನಿಗೆ ಯಾವ ಕಾರ್ಯವೂ ಜರಗಲಾರದು.

2. ದೇವರು ಪ್ರಾಮಾಣಿಕ ಜನರಲ್ಲಿ ಹರ್ಷಿಸುತ್ತಾರೆ

”ಆತನು ಬೆಳಕಿನಲ್ಲಿ ಇರುವಂತೆಯೇ ನಾವು ಬೆಳಕಿನಲ್ಲಿ ನಡೆದರೆ, ನಾವು ಒಬ್ಬರ ಸಂಗಡಲೊಬ್ಬರು ಅನ್ಯೋನ್ಯತೆಯಲ್ಲಿ ಇದ್ದೇವೆ” (1 ಯೋಹಾನ 1:7).

ಬೆಳಕಿನಲ್ಲಿ ನಡೆಯುವದು ಎಂದರೆ, ಮೊಟ್ಟಮೊದಲನೆಯದಾಗಿ ನಾವು ದೇವರಿಂದ ಏನನ್ನೂ ಮುಚ್ಚಿಡದೆ ಇರುವದು. ಇರುವದನ್ನು ಇರುವಂತೆಯೇ ಸಂಪೂರ್ಣವಾಗಿ ಆತನಿಗೆ ಹೇಳಬೇಕು. ಪ್ರಾಮಾಣಿಕತೆಯು ದೇವರ ಕಡೆಗೆ ನಾವು ಇಡಬೇಕಾದ ಮೊದಲ ಹೆಜ್ಜೆಯಾಗಿದೆ ಎಂದು ನಾನು ನಂಬಿದ್ದೇನೆ. ಅಪ್ರಾಮಾಣಿಕ ಜನರನ್ನು ದೇವರು ದ್ವೇಷಿಸುತ್ತಾನೆ. ಯೇಸುವು ಇತರ ಎಲ್ಲರಿಗಿಂತ ಹೆಚ್ಚಾಗಿ, ಕಪಟಿಗಳ ವಿರುದ್ಧವಾಗಿ ನುಡಿದಿದ್ದಾನೆ.

ದೇವರು ನಮ್ಮಿಂದ ಮೊದಲು ಬಯಸುವದು ಪವಿತ್ರತೆ ಅಥವಾ ಪರಿಪೂರ್ಣತೆಯನ್ನು ಅಲ್ಲ, ಆದರೆ ಪ್ರಾಮಾಣಿಕತೆಯನ್ನು. ನಿಜವಾದ ಪವಿತ್ರತೆಯು ಇಲ್ಲಿಂದ ಆರಂಭವಾಗುತ್ತದೆ. ಈ ನೀರಿನ ಬುಗ್ಗೆಯಿಂದಲೇ ಬೇರೆಲ್ಲವೂ ಹರಿದು ಬರುತ್ತವೆ. ನಾವೆಲ್ಲರೂ ಬಹಳ ಸುಲಭವಾಗಿ ಮಾಡಬಹುದಾದ ಒಂದು ಕೆಲಸ ಯಾವುದೆಂದರೆ, ಕಪಟತನವನ್ನು ಬಿಟ್ಟುಬಿಡುವದು.

ಆದುದರಿಂದ ಪಾಪವನ್ನು ತಕ್ಷಣವೇ ದೇವರಿಗೆ ಅರಿಕೆ ಮಾಡಿರಿ. ಪಾಪ ತುಂಬಿದ ಆಲೋಚನೆಗಳಿಗೆ ಯಾವುದೇ ”ಸಭ್ಯವಾದ” ಹೆಸರನ್ನು ನೀಡಬೇಡಿರಿ. ನಿಜವಾಗಿ ವ್ಯಭಿಚಾರದಿಂದ ತುಂಬಿರುವ ನಿಮ್ಮ ಕಣ್ನೋಟವನ್ನು, ”ನಾನು ದೇವರ ಸೃಷ್ಟಿಯ ಸೌಂದರ್ಯವನ್ನು ಆನಂದಿಸುತ್ತಿದ್ದೆ, ಅಷ್ಟೇ” ಎಂದು ವಿವರಿಸಬೇಡಿರಿ. ”ಕೋಪ”ವನ್ನು ”ನೀತಿಯುತ ಕೋಪ” ಎಂದು ಕರೆಯಬೇಡಿರಿ.

ನಿಮ್ಮಲ್ಲಿ ಯಥಾರ್ಥತೆ ಇಲ್ಲವಾದರೆ, ನೀವು ಪಾಪದ ಮೇಲೆ ಜಯವನ್ನು ಎಂದಿಗೂ ಸಾಧಿಸಲಾರಿರಿ.

”ಪಾಪ”ವನ್ನು ”ತಪ್ಪು ಕೆಲಸ” ಎಂದು ಯಾವತ್ತೂ ಕರೆಯಬೇಡಿರಿ, ಏಕೆಂದರೆ ಯೇಸುವಿನ ರಕ್ತವು ನಿಮ್ಮ ಎಲ್ಲಾ ಪಾಪಗಳನ್ನು ತೊಳೆಯುತ್ತದೆ, ಆದರೆ ನಿಮ್ಮ ತಪ್ಪುಗಳನ್ನಲ್ಲ!! ಆತನು ಯಥಾರ್ಥರಲ್ಲದ ಜನರನ್ನು ಶುದ್ಧಿಗೊಳಿಸುವದಿಲ್ಲ.

ಕೇವಲ ಯಥಾರ್ಥ ಜನರಿಗೆ ನಿರೀಕ್ಷೆ ಇದೆ. ”ತನ್ನ ಪಾಪಗಳನ್ನು ಮುಚ್ಚಿಕೊಳ್ಳುವವನು ವೃದ್ಧಿಯಾಗನು” (ಜ್ಞಾನೋಕ್ತಿಗಳು 28:13).

ದೇವರ ರಾಜ್ಯವನ್ನು ಪ್ರವೇಶಿಸಲು ಧಾರ್ಮಿಕ ನಾಯಕರಿಗಿಂತ ವೇಶ್ಯೆಯರು ಮತ್ತು ಭ್ರಷ್ಟರಿಗೆ ಹೆಚ್ಚು ನಿರೀಕ್ಷೆ ಇದೆಯೆಂದು ಯೇಸುವು ಹೇಳಲು ಏನು ಕಾರಣ (ಮತ್ತಾಯ 21:31)? ಏಕೆಂದರೆ ವೇಶ್ಯೆಯರು ಮತ್ತು ಭ್ರಷ್ಟರು ಪವಿತ್ರತೆಯ ತೋರಿಕೆ ಮಾಡುವದಿಲ್ಲ.

ಸಭಾ ಸದಸ್ಯರು ತಮ್ಮಲ್ಲಿ ಯಾವುದೇ ಸಮಸ್ಯೆಗಳಿಲ್ಲವೆಂದು ಯೌವನಸ್ಥರಿಗೆ ತೋರಿಸಿಕೊಳ್ಳುವದು ಎಷ್ಟೋ ಯೌವನಸ್ಥರು ಸಭೆಗಳಿಂದ ಹೊರಹೋಗುವದಕ್ಕೆ ಕಾರಣವಾಗುತ್ತದೆ. ಆ ಯೌವನಸ್ಥರು, ”ಈ ಪವಿತ್ರ ಗುಂಪಿನ ಜನ ನಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವದಿಲ್ಲ!!” ಎಂದು ತಿಳಿಯುತ್ತಾರೆ. ಒಂದು ವೇಳೆ ಇದು ನಮ್ಮಲ್ಲಿ ನಿಜವಾಗಿದ್ದರೆ, ನಮ್ಮಲ್ಲಿ ಪಾಪಿಗಳನ್ನು ತನ್ನೆಡೆಗೆ ಸೆಳೆದ ಕ್ರಿಸ್ತನ ಪ್ರತಿರೂಪವಿಲ್ಲ.

3. ಸಂತೋಷವಾಗಿ ಕೊಡುವವನಲ್ಲಿ ದೇವರು ಹರ್ಷಿಸುತ್ತಾನೆ

”ಸಂತೋಷವಾಗಿ ಕೊಡುವವನನ್ನು ದೇವರು ಪ್ರೀತಿಸುತ್ತಾನೆ” (2 ಕೊರಿಂಥ. 9:7)

ದೇವರು ಈ ಕಾರಣಕ್ಕಾಗಿ ಮನುಷ್ಯನಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಕೊಟ್ಟಿದ್ದಾರೆ - ಪರಿವರ್ತನೆ ಹೊಂದುವದಕ್ಕೆ ಮೊದಲು ಮತ್ತು ಹೊಂದಿದ ನಂತರ, ಮತ್ತು ಪವಿತ್ರಾತ್ಮನಿಂದ ತುಂಬಿಸಲ್ಪಟ್ಟ ನಂತರವೂ ಸಹ.

ನಾವು ದೇವರಂತೆ ಇದ್ದರೆ, ನಾವೂ ಸಹ ಇತರರನ್ನು ನಿಯಂತ್ರಿಸಲು ಅಥವಾ ಅವರ ಮೇಲೆ ಒತ್ತಡ ಹೇರಲು ಬಯಸುವದಿಲ್ಲ. ಅವರು ನಮಗಿಂತ ಭಿನ್ನರಾಗಿದ್ದು, ನಮಗಿಂತ ವಿಭಿನ್ನವಾದ ಅಭಿಪ್ರಾಯವನ್ನು ಇರಿಸಿಕೊಂಡು, ತಮ್ಮದೇ ಆದ ಗತಿಯಲ್ಲಿ ಆತ್ಮಿಕವಾಗಿ ಬೆಳೆಯುವ ಸ್ವಾತಂತ್ರ್ಯವನ್ನು ನಾವು ಅವರಿಗೆ ನೀಡುವೆವು.

ಎಲ್ಲಾ ರೀತಿಯ ಕಡ್ಡಾಯವೂ ಸೈತಾನನಿಂದ ಬರುವಂಥದ್ದು ಆಗಿದೆ.

ಪವಿತ್ರಾತ್ಮನು ಜನರನ್ನು ತುಂಬುತ್ತಾನೆ, ಆದರೆ ದೆವ್ವಗಳು ಜನರನ್ನು ತಮ್ಮ ಅಧೀನದಲ್ಲಿ ಇರಿಸಿಕೊಳ್ಳುತ್ತವೆ. ಇವೆರಡರಲ್ಲಿ ಇರುವ ವ್ಯತ್ಯಾಸ ಇಷ್ಟೇ: ಪವಿತ್ರಾತ್ಮನು ಯಾರನ್ನಾದರೂ ತುಂಬಿದಾಗ, ಆತನು ಆ ವ್ಯಕ್ತಿಗೆ ಇಷ್ಟವಿದ್ದಂತೆ ನಡೆಯುವ ಸ್ವಾತಂತ್ರ್ಯವನ್ನು ಕೊಡುತ್ತಾನೆ. ಆದರೆ ದೆವ್ವ ಹಿಡಿದ ಜನರು ತಮ್ಮ ಸ್ವಾತಂತ್ರ್ಯವನ್ನು ಕಳಕೊಂಡು, ಅವುಗಳ ಹಿಡಿತಕ್ಕೆ ಒಳಗಾಗುತ್ತಾರೆ. ಪವಿತ್ರಾತ್ಮನ ತುಂಬಿಸುವಿಕೆಯ ಫಲ ಶಮೆ ದಮೆ (ಆತ್ಮ-ಸಂಯಮ) ಆಗಿದೆ ( ಗಲಾತ್ಯ. 5:22, 23). ಆದರೆ ದೆವ್ವದ ಹಿಡಿತದ ಫಲ, ಮನಸ್ಸಿನ ಹತೋಟಿ ಇಲ್ಲದಿರುವದು ಆಗಿದೆ.

ನಾವು ನೆನಪಿನಲ್ಲಿ ಇಡಬೇಕಾದದ್ದು ಏನೆಂದರೆ, ನಾವು ದೇವರಿಗಾಗಿ ಮಾಡುವ ಯಾವುದೇ ಕೆಲಸವನ್ನು ಇಷ್ಟಪಟ್ಟು, ಸಂತೋಷವಾಗಿ, ಉಚಿತವಾಗಿ ಮತ್ತು ಒತ್ತಾಯವಿಲ್ಲದೆ ಮಾಡದಿದ್ದಲ್ಲಿ, ಅದು ನಿರ್ಜೀವ ಕಾರ್ಯವಾಗಿದೆ. ನಾವು ಪ್ರತಿಫಲಕ್ಕಾಗಿ ಅಥವಾ ವೇತನಕ್ಕಾಗಿ ಮಾಡಿದ ದೇವರ ಯಾವದೇ ಕೆಲಸ ಸತ್ತಿರುವ (ಗಣನೆಗೆ ಬಾರದ) ಕಾರ್ಯ ಆಗಿರುತ್ತದೆ. ನಾವು ಬೇರೆಯವರ ಒತ್ತಡದಿಂದ ದೇವರಿಗೆ ಕೊಡುವ ಹಣಕ್ಕೆ ದೇವರ ದೃಷ್ಟಿಯಲ್ಲಿ ಯಾವ ಬೆಲೆಯೂ ಇಲ್ಲ!!

ಹರ್ಷದಿಂದ ದೇವರಿಗಾಗಿ ಮಾಡಿದ ಒಂದು ಚಿಕ್ಕ ಕಾರ್ಯಕ್ಕೆ, ಒತ್ತಾಯಕ್ಕಾಗಿ ಅಥವಾ ಮನಃಸಾಕ್ಷಿಯ ಸಮಾಧಾನಕ್ಕಾಗಿ ಮಾತ್ರ ಮಾಡಿದ ಒಂದು ಮಹತ್ಕಾರ್ಯಕ್ಕಿಂತ ಹೆಚ್ಚಿನ ಬೆಲೆಯನ್ನು ದೇವರು ನೀಡುತ್ತಾರೆ.

4. ಈ ಲೋಕವು ಶ್ರೇಷ್ಠವೆಂದು ಪರಿಗಣಿಸುವ ಎಲ್ಲವೂ ದೇವರಿಗೆ ಅಸಹ್ಯಕರವಾಗಿದೆ

”ಮನುಷ್ಯರಲ್ಲಿ ಶ್ರೇಷ್ಠವೆನಿಸಿಕೊಳ್ಳುವಂಥದು ದೇವರ ದೃಷ್ಟಿಯಲ್ಲಿ ಅಸಹ್ಯವಾಗಿದೆ” (ಲೂಕ 16:15)

ಲೋಕದಲ್ಲಿ ಶ್ರೇಷ್ಠವೆಂದು ಪರಿಗಣಿಸಲಾಗುವಂಥದ್ದು ದೇವರ ದೃಷ್ಟಿಯಲ್ಲಿ ಬೆಲೆ ಇಲ್ಲದ್ದಾಗಿರುವದು ಮಾತ್ರವಲ್ಲ, ಅದು ಆತನಿಗೆ ನಿಜವಾಗಿ ಅಸಹ್ಯವಾಗಿದೆ.

ಜಗತ್ತಿನ ಎಲ್ಲಾ ರೀತಿಯ ಗೌರವವು, ದೇವರಿಗೆ ಅಸಹ್ಯಕರವಾಗಿ ಇರುವದರಿಂದ, ಇದು ನಮಗೂ ಸಹ ಅಸಹ್ಯಕರವಾಗಿ ಇರಬೇಕು.

ಹಣವನ್ನು ಲೋಕದ ಎಲ್ಲಾ ಜನರು ಬಹಳ ಉಪಯುಕ್ತವೆಂದು ತಿಳಿಯುತ್ತಾರೆ. ದೇವರು ತಿಳಿಸುವದು ಏನೆಂದರೆ, ಹಣವನ್ನು ಪ್ರೀತಿಸುವವರು ಮತ್ತು ಐಶ್ವರ್ಯಕ್ಕಾಗಿ ತವಕಿಸುವವರು ಒಂದಲ್ಲ ಒಂದು ದಿನ ಈ ಕೆಳಗಿನ ಪರಿಣಾಮಗಳಿಗೆ ಗುರಿಯಾಗುವರು, ಎಂದು (1 ತಿಮೋಥೆ 6:9,10). ಅ) ಅವರು ಶೋಧನೆಗೆ ಗುರಿಯಾಗುವರು; ಆ) ಅವರು ಕುತಂತ್ರಕ್ಕೆ ಸಿಲುಕುವರು; ಇ) ಅವರು ಹುಚ್ಚು ಆಸೆಗಳಿಗೆ ಬಲಿಯಾಗುವರು; ಈ) ಅವರು ಹಾನಿಕರ ದುರಾಶೆಗಳಿಗೆ ಸಿಕ್ಕಿಬೀಳುವರು; ಉ) ಅವರು ನಷ್ಟಕ್ಕೆ ಗುರಿಯಾಗುವರು; ಊ) ಅವರು ವಿನಾಶದ ಕಡೆಗೆ ನುಗ್ಗುವರು; ಋ) ಅವರು ನಂಬಿಕೆಯಿಂದ ತಪ್ಪಿಹೋಗುವರು; ಋ) ಅವರು ಅನೇಕ ವೇದನೆಗಳಿಗೆ ತುತ್ತಾಗುವರು. ನಾನು ವಿಶ್ವಾಸಿಗಳಿಗೆ ಈ ಸ್ಥಿತಿ ಬರುವದನ್ನು ಎಲ್ಲಾ ಕಡೆ ಮತ್ತೆ ಮತ್ತೆ ಕಂಡಿದ್ದೇನೆ. ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಕರ್ತನ ಪ್ರವಾದನಾ ವಾಕ್ಯವು ಬಹಳ ಅಪರೂಪವಾಗಿ ಕೇಳಿಬರುವದಕ್ಕೆ ಕಾರಣಗಳಲ್ಲಿ ಒಂದು ಮುಖ್ಯವಾದುದು, ಅಧಿಕಾಂಶ ಬೋಧಕರು ಹಣದ ವ್ಯಾಮೋಹಕ್ಕೆ ಒಳಗಾಗಿದ್ದಾರೆ. ಯೇಸುವು ತಿಳಿಸಿದಂತೆ, ಹಣದ ವಿಷಯದಲ್ಲಿ ಅಪನಂಬಿಗಸ್ಥರಾಗಿ ಇರುವವರಿಗೆ ದೇವರ ನಿಜವಾದ ಐಶ್ವರ್ಯ (ಅವುಗಳಲ್ಲಿ ಪ್ರವಾದನಾ ವಾಕ್ಯವು ಒಂದಾಗಿದೆ) ಕೊಡಲ್ಪಡುವದಿಲ್ಲ (ಲೂಕ 16:11). ಹೀಗಾಗಿ ಸಭಾಕೂಟಗಳಲ್ಲಿ ಮತ್ತು ಸಮ್ಮೇಳನಗಳಲ್ಲಿ ತುಂಬಾ ಬೇಸರಿಕೆ ನೀಡುವ ಬೋಧನೆಗಳನ್ನು ಮತ್ತು ಸಾಕ್ಷಿಗಳನ್ನು ಕೇಳುತ್ತೇವೆ.