ಯೇಸು ಕ್ರಿಸ್ತನ ಒಬ್ಬ ಶಿಷ್ಯನು ತನ್ನ ನಿರ್ಧಾರಗಳನ್ನು ಮನುಷ್ಯರ ಭಯ ಅಥವಾ ಸಂದರ್ಭಗಳ ಭಯದ ನಿಮಿತ್ತವಾಗಿ ಕೈಗೊಳ್ಳಬಾರದು.
ನನ್ನ ಮನೆಯ ಚಾವಡಿಯಲ್ಲಿ ನೇತುಹಾಕಿರುವ ಒಂದು ಫಲಕದಲ್ಲಿ ದೊಡ್ಡದಾಗಿ ಈ ರೀತಿ ಬರೆಯಲ್ಪಟ್ಟಿದೆ: "ನೀವು ದೇವರಿಗೆ ಭಯಪಡುವುದಾದರೆ, ಬೇರೆ ಯಾವುದಕ್ಕೂ ಹೆದರಬೇಕಿಲ್ಲ." ಅದು ಯೆಶಾಯನು 8:12-13 (TLB)'ರಲ್ಲಿ ಕೊಡಲ್ಪಟ್ಟಿರುವ ಭಾವಾನುವಾದವಾಗಿದೆ. ಕಳೆದ 25 ವರ್ಷಗಳಲ್ಲಿ ನನಗೆ ಈ ವಚನವು ಬಹಳವಾಗಿ ಸಹಾಯಮಾಡಿದೆ.
ಈ ಭಯ ಅಥವಾ ಹೆದರಿಕೆಗೆ ಸಂಬಂಧಿಸಿದಂತೆ ನಾನು ಕರ್ತರಿಂದ ಕಲಿತುಕೊಂಡಿರುವ ಸತ್ಯಾಂಶಗಳಲ್ಲಿ ಕೆಲವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.
ಎಲ್ಲಕ್ಕೂ ಮೊದಲನೆಯದಾಗಿ, ಸೈತಾನನ ಶಸ್ತ್ರಾಗಾರದ ಆಯುಧಗಳಲ್ಲಿ ಭಯವು ಒಂದು ಪ್ರಮುಖ ಆಯುಧವಾಗಿದೆ, ಎಂಬುದನ್ನು ನಾನು ಕಲಿತುಕೊಂಡಿದ್ದೇನೆ.
ಎರಡನೆಯದಾಗಿ, ಕೆಲವೊಮ್ಮೆ ಭಯದ ಭಾವನೆಗಳು ನನ್ನ ಹೃದಯವನ್ನು ಪ್ರವೇಶಿಸಿದರೆ, ಅದಕ್ಕಾಗಿ ನನ್ನಲ್ಲಿ ತಪ್ಪಿತಸ್ಥ ಭಾವನೆ ಇರಬೇಕಿಲ್ಲವೆಂದು ನಾನು ಕಂಡುಕೊಂಡಿದ್ದೇನೆ - ಏಕೆಂದರೆ ನಾನು ಇನ್ನೂ ಶರೀರಧಾರಿಯಾಗಿದ್ದೇನೆ. ನಾವು ಈ ವಿಷಯದಲ್ಲಿ ವಾಸ್ತವಿಕವಾಗಿರಬೇಕು ಮತ್ತು ನಮ್ಮಲ್ಲಿ ಯಥಾರ್ಥತೆ ಇರಬೇಕು. ಅಪೊಸ್ತಲ ಪೌಲನು ಸಂಪೂರ್ಣವಾಗಿ ಪ್ರಾಮಾಣಿಕನಾಗಿದ್ದನು ಮತ್ತು ಕೆಲವು ವೇಳೆ "ತನ್ನೊಳಗೆ ಭಯವಿತ್ತು" ಎಂಬುದನ್ನು ಒಪ್ಪಿಕೊಂಡನು (2 ಕೊರಿ. 7:5).
ನಾನು ಕಲಿತಿರುವ ಮೂರನೇ ವಿಷಯ (ಇದು ಅತ್ಯಂತ ಪ್ರಾಮುಖ್ಯವಾದದ್ದು) ಏನೆಂದರೆ, ಒಂದು ವೇಳೆ ನನ್ನಲ್ಲಿ ಭಯವಿದ್ದರೂ, ನಾನು ಭಯದ ನಿಮಿತ್ತವಾಗಿ ಎಂದಿಗೂ ಒಂದು ನಿರ್ಧಾರವನ್ನು ಕೈಗೊಳ್ಳಬಾರದು. ನನ್ನ ನಿರ್ಧಾರಗಳು ಯಾವಾಗಲೂ ದೇವರ ಮೇಲಿನ ನಂಬಿಕೆಯನ್ನು ಆಧರಿಸಿರಬೇಕು - ಇದು ಭಯಕ್ಕೆ ಸಂಪೂರ್ಣವಾಗಿ ವಿರುದ್ಧವಾದ ಸಂಗತಿಯಾಗಿದೆ. ನಾನು ಹಲವಾರು ವರ್ಷಗಳಿಂದ ಈ ರೀತಿಯಾಗಿ ಜೀವಿಸಲು ಪ್ರಯತ್ನಿಸಿದ್ದೇನೆ. ಮತ್ತು ದೇವರು ನನಗೆ ಸಹಾಯ ನೀಡಿದ್ದಾರೆ ಮತ್ತು ನನ್ನನ್ನು ಬಹಳವಾಗಿ ಉತ್ತೇಜಿಸಿದ್ದಾರೆ.
ಯೇಸುವು "ಭಯಪಡಬೇಡಿರಿ; ಹೆದರಬೇಡಿರಿ; ಅಂಜಬೇಡಿರಿ" ಎಂಬ ಮಾತುಗಳನ್ನು ಆಗಾಗ್ಗೆ ಏಕೆ ಹೇಳಿದ್ದೆಂದು ನನಗೆ ಈಗ ಅರ್ಥವಾಗಿದೆ.
ಇದು ಹೊಸ ಒಡಂಬಡಿಕೆಯಲ್ಲಿ ಒತ್ತಿ ಹೇಳಲಾಗಿರುವ ಈ ಕೆಳಗಿನ ಇನ್ನೊಂದು ಮಾತಿನಷ್ಟೇ ಪ್ರಾಮುಖ್ಯವಾದದ್ದಾಗಿದೆ:
"ಪಾಪ ಮಾಡಬೇಡ; ಪಾಪ ಮಾಡಬೇಡ; ಪಾಪ ಮಾಡಬೇಡ."
ಯೇಸುವು ಪಾಪವನ್ನು ಯಾವಾಗಲೂ ವಿರೋಧಿಸಿದರು ಮತ್ತು ಹಾಗೆಯೇ ಅವರು ಭಯವನ್ನು ಸಹ ಯಾವಾಗಲೂ ವಿರೋಧಿಸಿದರು. ನಾವು ದೇವರಿಗೆ ಮಾತ್ರ ಹೆದರಬೇಕು ಮತ್ತು ಇನ್ಯಾರಿಗೂ ಹೆದರಬಾರದು, ಎಂದು ಅವರು ನಮಗೆ ತಿಳಿಸಿದರು (ಮತ್ತಾ. 10:28). ಇದು ನಾವು ಕಲಿಯಬೇಕಾದ ಬಹಳ ಮುಖ್ಯವಾದ ಒಂದು ಪಾಠವಾಗಿದೆ, ಏಕೆಂದರೆ ಒಬ್ಬ ಆತ್ಮಿಕ ನಾಯಕನು ಭಯದ ನಿಮಿತ್ತವಾಗಿ ಯಾವತ್ತೂ ಯಾವುದೇ ನಿರ್ಧಾರವನ್ನು ಮಾಡಬಾರದು.
ನನ್ನ ಮನೆಯ ಚಾವಡಿಯಲ್ಲಿ ಹಲವು ವರ್ಷಗಳಿಂದ ನೇತುಹಾಕಲ್ಪಟ್ಟಿರುವ ಮತ್ತೊಂದು ವಚನ ಗಲಾತ್ಯದವರಿಗೆ 1:10' ಆಗಿದೆ:
"ನಾನು ಮನುಷ್ಯರನ್ನು ಮೆಚ್ಚಿಸುವುದಕ್ಕೆ ಪ್ರಯತ್ನಿಸುವುದಾದರೆ, ನಾನು ಕ್ರಿಸ್ತನ ದಾಸನಾಗಲಾರೆನು."
ನೀನು ಮನುಷ್ಯರನ್ನು ಒಲಿಸಿಕೊಳ್ಳಲು ಪ್ರಯತ್ನಿಸುವುದಾದರೆ, ನೀನು ಎಂದಿಗೂ ಕರ್ತನ ಒಬ್ಬ ಸೇವಕನಾಗಲಾರೆ. ನಾನು ನನ್ನ ಅನುಭವದಿಂದ ಹೇಳುವುದು ಏನೆಂದರೆ, ಮನುಷ್ಯರ ಮೆಚ್ಚುಗೆಗಾಗಿ ತವಕಿಸುವುದರಿಂದ ಬಿಡುಗಡೆ ಪಡೆಯುವುದು ಸುಲಭವಲ್ಲ.
ನೀನು ಯಾರನ್ನಾದರೂ ಅಸಂತೋಷಗೊಳಿಸಿದರೆ ಆತನು ನಿನಗೆ ಒಂದಲ್ಲ ಒಂದು ರೀತಿಯಲ್ಲಿ ಕೇಡು ಮಾಡೇ ಮಾಡುತ್ತಾನೆ, ಎಂಬ ಭಯ ನಿನ್ನ ಹೃದಯದಲ್ಲಿದ್ದರೆ, ನೀನು ಯಾವಾಗಲೂ ಅವನನ್ನು ಮೆಚ್ಚಿಸಲು ಪ್ರಯತ್ನಿಸುವೆ. ಹಾಗೆ ಮಾಡಿದರೆ ನೀನು ದೇವರ ಸೇವಕನಾಗುವುದು ಅಸಾಧ್ಯ. ನೀನು ಎಂದಾದರೂ ಭಯದ ಆಧಾರದ ಮೇಲೆ ನಡೆಯುವುದಾದರೆ, ನಿನಗೆ ದಾರಿ ತೋರಿಸುತ್ತಿರುವವನು ಸೈತಾನನು, ದೇವರಲ್ಲ, ಎನ್ನುವುದು ಖಚಿತವಾಗುತ್ತದೆ.
"ನಾವು ಧೈರ್ಯವಾಗಿ, "ಕರ್ತನು ನಮ್ಮ ಸಹಾಯಕನು ಮತ್ತು ನಾವು ಭಯಪಡೆವು", ಎಂದು ಹೇಳುತ್ತೇವೆ. ಯಾವ ಮನುಷ್ಯನಾದರೂ ನಮಗೆ ಏನು ಮಾಡುತ್ತಾನೆ?"
ನಾವು ನಮ್ಮ ಜೀವನವನ್ನು ಹಿಂದೆ ತಿರುಗಿ ನೋಡುವುದಾದರೆ, ನಾವು ಹಿಂದೆ ಅನೇಕ ನಿರ್ಧಾರಗಳನ್ನು ಭಯದ ಆಧಾರದ ಮೇಲೆ ತೆಗೆದುಕೊಂಡಿದ್ದೇವೆಂದು ನಮಗೆ ತಿಳಿಯುತ್ತದೆ. ಆ ಎಲ್ಲಾ ನಿರ್ಧಾರಗಳಲ್ಲಿ ನಮಗೆ ದೇವರ ಮಾರ್ಗದರ್ಶನ ಇರಲಿಲ್ಲ. ಅವುಗಳಲ್ಲಿ ಕೆಲವು ನಿರ್ಧಾರಗಳಿಂದ ಗಂಭೀರ ಪರಿಣಾಮ ಉಂಟಾಗದೇ ಇದ್ದಿರಬಹುದು. ಆದಾಗ್ಯೂ ನಾವು ದೇವರ ಅತ್ಯುತ್ತಮವಾದುದನ್ನು ಕಳೆದುಕೊಂಡೆವು. ನಾವು ಭವಿಷ್ಯದ ದಿನಗಳಲ್ಲಿ ಹೀಗೆ ಮಾಡಬಾರದು.
ನಮ್ಮಲ್ಲಿ ಸ್ವಾಭಾವಿಕವಾಗಿ ಭಯವಿರುತ್ತದೆ. ಏಕೆಂದರೆ ನಾವು ಮನುಷ್ಯಮಾತ್ರದವರು. ಉದಾಹರಣೆಗೆ, ಈಗ ನೀವು ಕುಳಿತಿರುವ ಜಾಗದಲ್ಲಿ ನಿಮ್ಮೆದುರು ಒಂದು ನಾಗರಹಾವು ಹಠಾತ್ತಾಗಿ ಕಾಣಿಸಿದರೆ, ನೀವು ಸ್ವಾಭಾವಿಕವಾಗಿ ಆಘಾತಗೊಳ್ಳುತ್ತೀರಿ ಮತ್ತು ಒಡನೆಯೇ ಮೇಲಕ್ಕೆ ಜಿಗಿಯುತ್ತೀರಿ - ಮತ್ತು ನಿಮ್ಮ ದೇಹದ ರಕ್ತದೊತ್ತಡವು ಮೇಲೇರುತ್ತದೆ. ಅದು ಸಹಜವಾದದ್ದು. ಆದರೆ ನೀವು ಹೋಗುವ ಕಡೆಯೆಲ್ಲಾ - ಪ್ರತಿಯೊಂದು ಕುರ್ಚಿಯ ಕೆಳಗೆ - ಒಂದು ನಾಗರಹಾವು ಇದೆಯೋ ಎಂಬ ಭಯದಲ್ಲಿ ನೀವು ಜೀವಿಸುವುದು ಸರಿಯಲ್ಲ!
ಹಾಗೆಯೇ ನಾವು ಯಾರಿಗಾದರೂ ಹೆದರುತ್ತಾ ಜೀವಿಸುವುದೂ ಸಹ ಸರಿಯಲ್ಲ.
ನಾವು ಎಂದಿಗೂ ಮನುಷ್ಯರ ಭಯ ಅಥವಾ ಸೈತಾನನ ಭಯದ ಆಧಾರದ ಮೇಲೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಾರದು. ನಾವು ನಮ್ಮ ಪ್ರತಿಯೊಂದು ನಿರ್ಧಾರವನ್ನು ದೇವರ ಭಯದಿಂದ ಮತ್ತು ನಮ್ಮ ಪರಲೋಕದ ತಂದೆಯಲ್ಲಿ ಸಂಪೂರ್ಣ ಭರವಸೆಯಿಂದ ಕೈಗೊಳ್ಳಬೇಕು. ಇದು ನಾವು ಪವಿತ್ರಾತ್ಮನಿಂದ ನಡೆಸಲ್ಪಡುತ್ತಿರುವುದರ ಸ್ಪಷ್ಟವಾದ ಸೂಚನೆಯಾಗಿದೆ.
ಇಬ್ರಿಯರಿಗೆ 13:6ರಲ್ಲಿ ಕೊಡಲ್ಪಟ್ಟಿರುವ ವಚನವು ಕರ್ತನ ಕೈಕೆಳಗಿರುವ ನಮ್ಮಲ್ಲರಿಗೆ ಬಹಳ ಮುಖ್ಯವಾದ ಒಂದು ವಚನವಾಗಿದೆ. ಅಲ್ಲಿ ಹೀಗೆ ಹೇಳಲ್ಪಟ್ಟಿದೆ:
"ನಾವು ಧೈರ್ಯವಾಗಿ, ಕರ್ತನು ನಮ್ಮ ಸಹಾಯಕನು ಮತ್ತು ನಾವು ಭಯಪಡೆವು, ಎಂದು ಹೇಳುತ್ತೇವೆ. ಯಾವ ಮನುಷ್ಯನಾದರೂ ನಮಗೆ ಏನು ಮಾಡಾನು?"
ನಾವು ಇದನ್ನು ನಂಬಿದರೆ, ಅದು ನಮ್ಮ ಜೀವನದಲ್ಲಿ ಎಷ್ಟು ಪ್ರಚಂಡವಾದ ಅಧಿಕಾರವನ್ನು ನಮಗೆ ಒದಗಿಸುತ್ತದೆ! ನಾವು ಮನುಷ್ಯರಿಗೆ ಭಯಪಡುವಾಗ, ಅಥವಾ ಅವರನ್ನು ಮೆಚ್ಚಿಸಲು, ಅವರ ಹೊಗಳಿಕೆಯನ್ನು ಗಳಿಸಲು ಅಥವಾ ಅವರ ಮುಂದೆ ನಮ್ಮನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುವಾಗ, ಸೈತಾನನು ನಮ್ಮ ಆತ್ಮಿಕ ಅಧಿಕಾರದ ಬಹಳಷ್ಟು ಅಂಶವನ್ನು ನಮ್ಮಿಂದ ಕಸಿದುಕೊಳ್ಳುತ್ತಾನೆ. ಇವೆಲ್ಲಾ ಸ್ವಭಾವಗಳನ್ನು ನಾವು ಸಂಪೂರ್ಣವಾಗಿ ತೆಗೆದುಹಾಕಬೇಕಿದೆ.