ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಯೌವನಸ್ಥರಿಗೆ ಸಭೆ Struggling
WFTW Body: 

ಸೈತಾನನು ಭಯವನ್ನು ಹುಟ್ಟಿಸುವಂತವನಾಗಿದ್ದಾನೆ. ಯೇಸುವು ಹೇಗೆ ಪಾಪದ ವಿರುದ್ಧ ಇದ್ದರೋ, ಅದೇ ರೀತಿ ಭಯದ ವಿರುದ್ಧವೂ ಇದ್ದರು. ಅನೇಕ ಬಾರಿ ಯೇಸು ಜನರಿಗೆ ”ಭಯ ಪಡಬೇಡಿರಿ” (ಅಂಜಬೇಡಿರಿ) ಎಂಬುದಾಗಿ ಹೇಳಿದ್ದಾರೆ, ”ಪಾಪ ಮಾಡಬೇಡಿರಿ” ಎಂದು ಹೇಳಿರುವ ಪ್ರಕಾರವೇ ಇದನ್ನು ಹೇಳಿದ್ದಾರೆ. ಜನರು ಪಾಪದಲ್ಲಿ ಜೀವಿಸುವುದನ್ನು ಯೇಸು ಹೇಗೆ ವಿರೋಧ ಮಾಡುತ್ತಿದ್ದರೋ, ಅದರಂತೆ ಜನರು ಭಯದಲ್ಲಿ ಜೀವಿಸುವಂತದ್ದನ್ನು ಸಹ ಯೇಸು ವಿರೋಧ ಮಾಡುತ್ತಿದ್ದರು. ನಾವು ಕರ್ತನಲ್ಲಿ ಭರವಸೆ ಇಟ್ಟಿರುವದರಿಂದ, ಎಂದಿಗೂ ಭಯಪಡುವ ಅಗತ್ಯತೆ ಇಲ್ಲ. ಒಂದು ವೇಳೆ ನಾವು ಈ ವಿಷಯದಲ್ಲಿ ಅಕಸ್ಮಾತ್ ಆಗಿ ಜಾರಿ ಬಿದ್ದರೆ ಮತ್ತು ಯಾವುದಾದರೂ ಸಂದರ್ಭದಲ್ಲಿ ಭಯಪಟ್ಟವರಾದರೆ ಅಥವಾ ಚಿಂತೆಗೊಳಗಾದರೆ, ತಕ್ಷಣ ಇದರಿಂದ ಹೊರಬರಬೇಕು, ನಮ್ಮ ಭಯವನ್ನು ದೇವರಿಗೆ ಅರಿಕೆ ಮಾಡಬೇಕು ಮತ್ತು ನಮ್ಮನ್ನು ದೇವರು ನೋಡಿಕೊಳ್ಳುತ್ತಾರೆ ಎಂದು ಭರವಸೆ ಇರಿಸಬೇಕು.

ಸೈತಾನನು ಅನೇಕ ರೀತಿಯಲ್ಲಿ ದೇವರ ಕೆಲಸದ ಮೇಲೆ ಆಕ್ರಮಣ ಮಾಡುತ್ತಾನೆ. ಆದರೆ ದೇವರು ತನ್ನ ಮಕ್ಕಳ ಪ್ರಾರ್ಥನೆಗಳಿಗೆ ಉತ್ತರವನ್ನು ದಯಪಾಲಿಸುವವರಾಗಿದ್ದಾರೆ. ಯೇಸು ಸ್ವಾಮಿ ಒಂದು ಬಾರಿ ಈ ರೀತಿ ಹೇಳಿದರು - ಕೆಲವು ದೆವ್ವಗಳು ಪ್ರಾರ್ಥನೆ ಮತ್ತು ಉಪವಾಸಗಳಿಂದ ಮಾತ್ರವೇ ಹೊರ ದಬ್ಬಲ್ಪಡುತ್ತವೆ ಎಂಬುದಾಗಿ. ಅದರ ಅರ್ಥ ನಾವು ಉಪವಾಸ ಮತ್ತು ಪ್ರಾರ್ಥನೆ ಮಾಡದೇ ಹೋದರೆ, ಕೆಲವು ದೆವ್ವಗಳು ಎಲ್ಲಿ ಭದ್ರವಾಗಿ ಇದ್ದವೋ ಅಲ್ಲಿಯೇ ಉಳಿದುಕೊಂಡು ಬಿಡುತ್ತವೆ ಮತ್ತು ದೇವರ ಕೆಲಸಕ್ಕೆ ಅಡ್ಡಿ ಪಡಿಸುತ್ತವೆ. ಈ ಲೋಕದಲ್ಲಿ ದೇವರ ಕೆಲಸವು ನಮ್ಮ ಮೇಲೆ - ಅಂದರೆ ಕ್ರಿಸ್ತನ ದೇಹದ ಮೇಲೆ - ಅವಲಂಬಿತವಾಗುವಂತೆ ದೇವರು ಮಾಡಿದ್ದಾನೆ. ಇದು ಒಂದು ದೊಡ್ಡ ಸೌಭಾಗ್ಯವಾಗಿದೆ, ಹಾಗೆಯೇ ದೊಡ್ಡ ಜವಾಬ್ದಾರಿಯೂ ಸಹ ಆಗಿದೆ. ಕತ್ತಲೆಯ ಬಲವು ದೇವರ ಸಭೆಯ ವಿರುದ್ಧ ಮೆಲುಗೈ ಸಾಧಿಸಲು ಆಗುವುದಿಲ್ಲ ಎನ್ನುವದು ಕರ್ತನ ವಾಗ್ದಾನವಾಗಿದೆ.

ಅನೇಕ ಕ್ರಿಸ್ತ ವಿರೋಧಿ ಪಡೆಗಳು ಈ ಲೋಕದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ ದೇವರು ನಮಗೆ ಭಯದ ಆತ್ಮವನ್ನು ಕೊಟ್ಟಿಲ್ಲ. ಯಾರು ದೇವರನ್ನು ಸನ್ಮಾನಿಸುತ್ತಾರೋ, ಅವರು ದೇವರಿಂದ ಸನ್ಮಾನಿಸಲ್ಪಡುತ್ತಾರೆ. ಹಾಗಾಗಿ ನಾವು ಎಂದಿಗೂ ಭಯದಲ್ಲಿ ನಡೆಯುವವರು ಆಗಿರಬಾರದು. ದಾವೀದನು ಸೌಲನ ರಕ್ಷಾಕವಚವನ್ನು ಉಪಯೋಗಿಸಲು ಹೇಗೆ ನಿರಾಕರಿಸಿದನೋ, ಹಾಗೇ ನಾವು ಸಹ ಅಂಥಹ ಸಂದಿಗ್ಧ ಸಮಯಗಳಲ್ಲಿ ಯಾವ ಮನುಷ್ಯರ ಮೇಲಾಗಲಿ ಅಥವಾ ನಮ್ಮ ಭುಜಬಲದ ಮೇಲಾಗಲಿ ಅವಲಂಬಿಸಬಾರದು. ದಾವೀದನು ಗೊಲ್ಯಾತನನ್ನು ಆತ್ಮಿಕ ಅಸ್ತ್ರಗಳಿಂದ ಎದುರಿಸಿದನು - ಆ ಆಸ್ತ್ರ ಯಾವುದೆಂದರೆ, ಕರ್ತನ ನಾಮ. ನಾವು ಉಪಯೋಗಿಸುವ ಆಯುಧಗಳು ಸಹ ಆತ್ಮಿಕವಾದವುಗಳಾಗಿವೆ (ಅಂದರೆ ದೇವರ ಶಕ್ತಿ) (2 ಕೊರಿಂಥ 10:4). ಮತ್ತು ನಿಶ್ಚಯವಾಗಿ ನಾವು ಯಾವಾಗಲೂ ಜಯವನ್ನು ಗಳಿಸುವವರಾಗುತ್ತೇವೆ.

ಯೇಸುವು ನಮ್ಮನ್ನು ಒಂದು ದುಷ್ಟ ಲೋಕಕ್ಕೆ - "ತೋಳಗಳ ನಡುವೆ ಕುರಿಗಳನ್ನು ಕಳುಹಿಸಿದಂತೆ" - ಕಳುಸುತ್ತಿರುವದಾಗಿ ಹೇಳಿದರು. ಆದರೆ ಅದೇ ವಚನದಲ್ಲಿ "ನಾವು ಹಾವುಗಳಂತೆ ಜಾಣರು ಆಗಿರಬೇಕು" ಎಂಬುದಾಗಿಯೂ ಸಹ ಯೇಸುವು ಹೇಳಿದರು (ಮತ್ತಾಯ 10:16).

ನಮ್ಮ ದೇವರು ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವನ್ನು ಹೊಂದಿದ್ದಾನೆ ಹಾಗೂ ತಾನು ನಮ್ಮ ಸಂಗಡ ಎಲ್ಲಾ ಸಮಯದಲ್ಲಿ ಇರುವದಾಗಿಯೂ ಮತ್ತು ನಾವು ಲೋಕದ ಎಲ್ಲೆಡೆ ಶಿಷ್ಯರನ್ನು ಮಾಡುವುದಾದರೆ, ನಮ್ಮ ಪರವಾಗಿ ಆ ಆಧಿಕಾರವನ್ನು ಪ್ರಯೋಗಿಸುವದಾಗಿಯೂ ದೇವರು ವಾಗ್ದಾನ ಮಾಡಿದ್ದಾರೆ (ಮತ್ತಾಯ 28:19,20). ಆತನು ನಮ್ಮೊಟ್ಟಿಗೆ ಇರುವುದಾದರೆ ಅಷ್ಟು ಸಾಕು. ಆತನು ನಮ್ಮ ಕಡೆ ಇರುವುದಾದರೆ, ಇಡೀ ಲೋಕದ ವಿರೋಧವನ್ನೂ ಸಹ ನಾವು ಎದುರಿಸಬಹುದು.

ಯೇಸುವು ಹೇಳಿದ ಇನ್ನೊಂದು ಮಾತು, "ನೀವು ಇನ್ನು ಮುಂದೆ ಕಾತರ ಮತ್ತು ಗೊಂದಲಗಳಿಗೆ ಅವಕಾಶ ಕೊಡಬೇಡಿರಿ; ಮತ್ತು ನಿಮ್ಮ ಹೃದಯವು ಕಳವಳಗೊಂಡು ನಡುಗದೇ ಇರಲಿ ಮತ್ತು ನಿಮ್ಮಲ್ಲಿ ಹೇಡಿತನ ಹಾಗೂ ಅನಿಶ್ಚಿತತೆಯು ಇರದಂತೆ ನೋಡಿಕೊಳ್ಳಿರಿ" (ಯೋಹಾನ 14:27 -Amplified Bible).

ದೇವರ ವಾಕ್ಯವು ನಮಗೆ ಈ ರೀತಿ ಆದೇಶಿಸುತ್ತದೆ - "ಜನರು ಭಯಪಡುವ ವಿಷಯಗಳಿಗೆ ನೀನು ಭಯಪಡಬೇಡ. ಸರ್ವಶಕ್ತನಾದ ಯೆಹೋವನೊಬ್ಬನಿಗೇ ನೀನು ಭಯಪಡಬೇಕು; ಇನ್ಯಾವುದಕ್ಕೂ ಅಥವಾ ಇನ್ಯಾರಿಗೂ ಹೆದರಬೇಡ. ನೀನು ದೇವರಿಗೆ ಭಯಪಡುವುದಾದರೆ, ಬೇರೆ ಯಾವುದಕ್ಕೂ ಭಯಪಡುವ ಅಗತ್ಯವಿಲ್ಲ. ಆತನೇ ನಿನ್ನ ಆಶ್ರಯವಾಗುವನು" (ಯೆಶಾಯ 8:12-14 - Living Bible).

ದೇವರು ಹೀಗೆ ಹೇಳಿದ್ದಾರೆ - ”ನಾನು ನಿನ್ನನ್ನು ಎಂದಿಗೂ ಕೈಬಿಡುವುದಿಲ್ಲ, ಎಂದಿಗೂ ತೊರೆಯುವದಿಲ್ಲ". ಆದ್ದರಿಂದ ನಾವು ಧೈರ್ಯವಾಗಿ ಹೀಗೆ ಹೇಳಬಲ್ಲೆವು, ’ಕರ್ತನು ನನ್ನ ಸಹಾಯಕನು, ಭಯಪಡೆನು, ಮನುಷ್ಯನು ನನಗೆ ಏನು ಮಾಡಾನು?’ ''ಯೇಸು ಕ್ರಿಸ್ತನು ನಿನ್ನೆ ಇದ್ದಂತೆ ಇಂದಿಗೂ ಇದ್ದಾನೆ. ನಿರಂತರವೂ ಹಾಗೆಯೇ ಇರುವನು" (ಇಬ್ರಿಯ 13:5-8).

”ಭಯ”ಕ್ಕೆ ಸಂಬಂಧಪಟ್ಟಂತೆ ನಾವು ಎರಡು ಸಂಗತಿಗಳನ್ನು ನೆನಪಿಡಬೇಕು.

  • 1. ನಾವು ಭಯದಿಂದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಾರದು, ಆದರೆ ದೇವರ ಮೇಲಿನ ನಂಬಿಕೆಯ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುವವರಾಗಿರಬೇಕು.
  • 2. ಭಯವು ಸೈತಾನನ ಅಸ್ತ್ರವಾಗಿದೆ. ಹಾಗಾಗಿ ಯಾರೆಲ್ಲಾ ಇತರರನ್ನು ಹೆದರಿಸುತ್ತಾರೋ ಅಥವಾ ಬೆದರಿಕೆ ಹಾಕುತ್ತಾರೋ ಅವರು ಸೈತಾನನೊಟ್ಟಿಗೆ ಅನ್ಯೋನ್ಯತೆಯನ್ನು ಹೊಂದಿದವರಾಗಿದ್ದಾರೆ (ಅದು ಅವರಿಗೆ ಗೊತ್ತಿಲ್ಲವಾದರೂ ಸಹ). ಹಾಗಾಗಿ ನಾವು ಈ ಅಸ್ತ್ರವನ್ನು ಯಾರ ಮೇಲೂ ಸಹ ಪ್ರಯೋಗ ಮಾಡಬಾರದು (ಎಫೆಸ 6:10 ಮತ್ತು 2 ತಿಮೊಥೆ 1:7 ನ್ನು ನೋಡಿ).
  • ಇತರರು ನಮಗೆ ಮಾಡುವಂತ ಕೇಡನ್ನು ದೇವರು ಉಪಯೋಗಿಸಿಕೊಂಡು, ತನ್ನ ವಾಕ್ಯದ ಮೇಲೆ ಹೊಸ ಪ್ರಕಟನೆಯನ್ನು ಮತ್ತು ಹಿಂದೆ ನಾವು ಎಂದೂ ಹೊಂದಿರದಂತಹ ಮತ್ತು ಸಾಮಾನ್ಯ ಸಂದರ್ಭಗಳಲ್ಲಿ ನಮಗೆ ಸಿಗದಂತಹ ಆತನ ಕೃಪೆಯ ಹೊಸ ಅನುಭವಗಳನ್ನು ನಮಗೆ ಕೊಡುತ್ತಾನೆ.

    ದೇವರ ವಾಕ್ಯವು ಈ ರೀತಿಯಾಗಿ ಹೇಳುತ್ತದೆ, ”ನಮ್ಮ ಹೋರಾಟವು ಜನರ ವಿರುದ್ಧವಲ್ಲ. ನಾವು ಅಂಧಕಾರದ ಅಧಿಪತಿಗಳಿಗೂ ಅಧಿಕಾರಿಗಳಿಗೂ ಮತ್ತು ಈ ಲೋಕದ ಕತ್ತಲೆಯ ಶಕ್ತಿಗಳಿಗೂ ಆಕಾಶಮಂಡಲದ ದುಷ್ಟಶಕ್ತಿಗಳಿಗೂ ವಿರುದ್ಧವಾಗಿ ಹೋರಾಡುವವರಾಗಿದ್ದೇವೆ” (ಎಫೆಸ 6:12). ದೇವರು ನನಗೆ ಈ ಮೂಲಕ ತಿಳಿಸಿಕೊಟ್ಟಿದ್ದು ಏನೆಂದರೆ, ”ನಾನು ಸೈತಾನನ ಪಡೆಗಳ ವಿರುದ್ಧವಾಗಿ ಪರಿಣಾಮಕಾರಿಯಾಗಿ ಹೋರಾಡಬೇಕೆಂದರೆ, ಮನುಷ್ಯರೊಟ್ಟಿಗೆ ಎಂದಿಗೂ ಹೋರಾಡುವವನು ಆಗಿರಬಾರದು”.

    ಹಳೆ ಒಡಂಬಡಿಕೆಯ ಕೆಳಗೆ, ಇಸ್ರಾಯೇಲ್ಯರು ಮನುಷ್ಯರೊಟ್ಟಿಗೆ ಹೋರಾಡಿದರು. ಆದರೆ ಹೊಸ ಒಡಂಬಡಿಕೆಯಲ್ಲಿ, ನಾವು ಎಂದಿಗೂ ಮನುಷ್ಯರೊಟ್ಟಿಗೆ ಹೋರಾಡುವವರಾಗಿರದೇ, ಸೈತಾನನ ಮತ್ತು ಆತನ ದೆವ್ವಗಳ ವಿರುದ್ಧವಾಗಿ ಮಾತ್ರ ಹೋರಾಡುವವರಾಗಿದ್ದೇವೆ. ಯೇಸು ಸ್ವತಃ ತನ್ನ ಮಾದರಿಯನ್ನು ನಮಗೆ ತೋರಿಸಿದ್ದಾನೆ. ಅನೇಕ ವಿಶ್ವಾಸಿಗಳು ಸೈತಾನನ ವಿರುದ್ಧ ಜಯಗಳಿಸಲು ಸಮರ್ಥರಾಗಿರುವುದಿಲ್ಲ, ಏಕೆಂದರೆ ಅವರು ತಮ್ಮ ಹೆಂಡತಿಯರೊಟ್ಟಿಗೆ ಮತ್ತು ಗಂಡಂದಿರೊಟ್ಟಿಗೆ, ನೆರೆಹೊರೆಯವರೊಟ್ಟಿಗೆ ಮತ್ತು ಇತರ ವಿಶ್ವಾಸಿಗಳೊಟ್ಟಿಗೆ ಜಗಳವಾಡುತ್ತಿರುತ್ತಾರೆ.

    ಭವಿಷ್ಯದಲ್ಲಿ ನೀವು ಯಾವ ಮನುಷ್ಯರೊಟ್ಟಿಗೆ ಎಂದಿಗೂ ಜಗಳವಾಡುವುದಿಲ್ಲ ಎಂದು ನಿಶ್ಚಯಮಾಡಿಕೊಳ್ಳಿ ಮತ್ತು ಆಗ ನೀವು ಸೈತಾನನ ವಿರುದ್ಧ ಪರಿಣಾಮಕಾರಿಯಾಗಿ ಯುದ್ಧವನ್ನು ಮಾಡುವಿರಿ. ನಾವು ಧೃಢವಾಗಿ ದೇವರ ಮಾರ್ಗಗಳನ್ನು ಹಿಂಬಾಲಿಸುವುದಾದರೆ, ಸೈತಾನನನ್ನು ಮತ್ತು ಆತನ ಸಂಚುಗಳನ್ನು ಎಲ್ಲಾ ಸಮಯದಲ್ಲಿ ಸೋಲಿಸುವವರಾಗುತ್ತೇವೆ ಹಾಗೂ ನಾವು ಸತತವಾದ ವಿಜಯೋತ್ಸವದಲ್ಲಿ ಜೀವಿಸುವವರಾಗುತ್ತೇವೆ.