WFTW Body: 

ಹಳೆಯ ಒಡಂಬಡಿಕೆಯಲ್ಲಿ, ದೇವಜನರಲ್ಲಿ ಒಂದು ಶೇಷಭಾಗ ಇರುವುದಾಗಿ ಪ್ರವಾದಿಗಳು ಹೇಳಿದರು. ದೇವಜನರು ಆತ್ಮಿಕವಾಗಿ ಕ್ಷೀಣಿಸುತ್ತಿದ್ದರೂ, ಅವರ ನಡುವೆ ಕೆಲವರು ದೇವರಿಗೆ ನಂಬಿಗಸ್ತರಾಗಿ ಇರುತ್ತಾರೆಂದು ಅವರು ತಿಳಿಸಿದರು. ಪ್ರವಾದಿಗಳ ಸಂದೇಶಗಳಲ್ಲಿ ಜನರ ಆತ್ಮಿಕ ಬಲಪಡಿಸುವಿಕೆ, ಅಂದರೆ ಅವರ ಜೀರ್ಣೋದ್ದಾರವು ಮುಖ್ಯ ವಿಷಯವಾಗಿತ್ತು.

ಉದಾಹರಣೆಗಾಗಿ, ಹೋಶೇಯನು ಆತ್ಮಿಕ ವ್ಯಭಿಚಾರ ಮತ್ತು ದೇವರ ನಿಶ್ಚಲ ಪ್ರೀತಿಯ ಬಗ್ಗೆ ಮಾತನಾಡಿದನು. ಹಬಕ್ಕೂಕನು ನಂಬಿಕೆಯು ಎದುರಿಸುವ ವಿರೋಧ ಮತ್ತು ನಂಬಿಕೆಯ ಜಯದ ಕುರಿತಾಗಿ ಮಾತನಾಡಿದನು. ಜೆಕರ್ಯನಿಗೆ ದೇವಜನರು ಬಾಬೆಲಿನಿಂದ ಯೆರೂಸಲೇಮಿಗೆ ಹಿಂದಿರುಗುವ ವಿಚಾರದಲ್ಲಿ ಭಾರವಿತ್ತು. ಹಗ್ಗಾಯನಲ್ಲಿ ದೇವರ ಆಲಯವನ್ನು ಕಟ್ಟುವ ಭಾರವಿತ್ತು. ಪ್ರತಿಯೊಬ್ಬ ಪ್ರವಾದಿಯ ಹೃದಯದಲ್ಲಿ ದೇವರು ಒಂದೊಂದು ವಿಶೇಷ ಭಾರವನ್ನು ಇರಿಸಿದ್ದರು - ಆದರೆ ಅವರೆಲ್ಲರಲ್ಲೂ ದೇವಜನರಲ್ಲಿ ಪರಿಶುದ್ಧತೆ ಇಲ್ಲವೆಂಬ ಚಿಂತೆ ಇತ್ತು.

ಪವಿತ್ರತೆ ಮತ್ತು ದೇವರ ನಿಶ್ಚಲವಾದ ಪ್ರೀತಿ, ಇವೆರಡು ವಿಷಯಗಳ ಕುರಿತಾಗಿ ಎಲ್ಲಾ ಪ್ರವಾದಿಗಳಲ್ಲಿ ಭಾರವಿತ್ತು - ದೇವಜನರಿಗಾಗಿ ದೇವರ ಪ್ರೀತಿಯು ಬದಲಾಗದೇ ಇದ್ದರೂ, ಅವರು ಪವಿತ್ರತೆಯನ್ನು ಕಡೆಗಣಿಸಿ, ಆತ್ಮಿಕ ವ್ಯಭಿಚಾರದಲ್ಲಿ ತೊಡಗಿದ್ದಾರೆ ಮತ್ತು ಅಡ್ಡದಾರಿಯಲ್ಲಿ ಸಾಗುತ್ತಿದ್ದಾರೆ, ಎಂಬ ಭಾರ ಅವರಲ್ಲಿತ್ತು ದೇವರು ಯಾವಾಗಲೂ ತನ್ನ ಜನರನ್ನು ತನ್ನ ಬಳಿಗೆ ಕರೆತರಲು ಬಯಸುತ್ತಾರೆ. ದೇವರು ಅವರನ್ನು ಶಿಕ್ಷೆಗೆ ಗುರಿಪಡಿಸುತ್ತಾರೆ; ಆದರೆ ಅನಂತರ ಅವರನ್ನು ತನ್ನ ಬಳಿಗೆ ಸೇರಿಸಿಕೊಳ್ಳಲು ಬಯಸುತ್ತಾರೆ.

ಕ್ರೈಸ್ತಸಭೆಯಲ್ಲೂ ಸಹ ನಿಜವಾದ ಪ್ರವಾದನಾ ಸೇವೆಯು ಹೀಗೆಯೇ ನಡೆಯಬೇಕು. ಇಂದಿನ ಕ್ರೈಸ್ತಸಭೆಯ ಒಬ್ಬ ಯಥಾರ್ಥ ಪ್ರವಾದಿಯು ಹಳೆಯ ಒಡಂಬಡಿಕೆಯ ಪ್ರವಾದಿಗಳ ಭಾರವನ್ನು - ದೇವಜನರು ಪರಿಶುದ್ಧರು ಆಗಬೇಕು ಎಂಬ ಭಾರವನ್ನು - ಹೊಂದಿರುತ್ತಾನೆ. ಇದಲ್ಲದೆ ದೇವರು ಸದಾಕಾಲವೂ ನಿಶ್ಚಲವಾದ, ತಾಳ್ಮೆಯುಳ್ಳ, ಅನುಕಂಪವುಳ್ಳ ಪ್ರೀತಿಯಿಂದ ಬಿದ್ದುಹೋಗಿರುವ ಜನರನ್ನು ತನ್ನ ಬಳಿಗೆ ಕರೆಯಲು ಮತ್ತು ಅವರನ್ನು ನಿಜವಾದ ಪರಿಶುದ್ಧತೆಗೆ ನಡೆಸಲು ಅಪೇಕ್ಷಿಸುವ ಹಾಗೆ, ಹಿಂದಿನ ಕಾಲದ ಆ ಪ್ರವಾದಿಗಳು ಅಪೇಕ್ಷಿಸಿದರು; ಇಂದಿನ ಪ್ರವಾದಿಯಲ್ಲೂ ಅಂತಹ ಹಂಬಲವಿರುತ್ತದೆ. ಪ್ರತಿಯೊಂದು ಸಭೆಯು ದೇವರಿಗಾಗಿ ಸೂಕ್ತವಾದ ರೀತಿಯಲ್ಲಿ ಜೀವಿಸಿ ಕಾರ್ಯಶೀಲವಾಗಲು, ಅಲ್ಲಿ ಒಂದು ಪ್ರವಾದನಾ ಸೇವೆಯ ಅವಶ್ಯಕತೆಯಿದೆ.

ದೇವರು ನಿಮ್ಮ ಹೃದಯದಲ್ಲಿ ಇರಿಸುವ ಭಾರವು ಹೆಚ್ಚಿನ ಸಂದರ್ಭಗಳಲ್ಲಿ ಅವರು ನಿಮಗಾಗಿ ನಿಗದಿ ಪಡಿಸಿರುವ ಸೇವೆಯ ಒಂದು ಸೂಚಕವಾಗಿರುತ್ತದೆ. ಹಾಗಾಗಿ ದೇವರಿಂದ ಒಂದು ಭಾರವನ್ನು ಹೊಂದುವುದಕ್ಕಾಗಿ ನೀವು ಕಾದುನಿಲ್ಲಿರಿ. ಹೃದಯದಲ್ಲಿ ಒಂದು ಭಾರವಿಲ್ಲದೆ ನೀವು ಕರ್ತನ ಸೇವೆ ಮಾಡುವುದಾದರೆ, ಸ್ವಲ್ಪ ಸಮಯದ ನಂತರ ನಿಮಗೆ ಕರ್ತನ ಸೇವೆಯಲ್ಲಿ ಬೇಸರ ಉಂಟಾಗುತ್ತದೆ, ಮತ್ತು ಕೊನೆಗೆ ನೀವು ಹಣ, ಜನಪ್ರಿಯತೆ ಅಥವಾ ಲೌಕಿಕ ಸುಖವನ್ನು ಹುಡುಕಲು ತೊಡಗುವ ಸಾಧ್ಯತೆಯಿದೆ. ಈ ದಿನ ಕರ್ತನ ಸೇವೆಯಲ್ಲಿ ತೊಡಗಿದ್ದೇವೆ ಎಂದು ಹೇಳಿಕೊಳ್ಳುವ ಅನೇಕರಲ್ಲಿ, ಅವರ ಸೇವೆಗಾಗಿ ದೇವರಿಂದ ಬಂದಿರುವ ಭಾರ ಇಲ್ಲದಿರುವುದು ಒಂದು ದೌರ್ಭಾಗ್ಯಕರ ಸಂಗತಿಯಾಗಿದೆ.

ದೇವರು ಒಬ್ಬ ವ್ಯಕ್ತಿಗೆ ಮಕ್ಕಳ ನಡುವೆ ಸೇವೆಯ ಭಾರವನ್ನು ಕೊಡಬಹುದು ಮತ್ತು ಇನ್ನೊಬ್ಬನಿಗೆ ಸುವಾರ್ತೆಯನ್ನು ಸಾರುವ ಭಾರವನ್ನು ಕೊಡಬಹುದು. ಮತ್ತೊಬ್ಬನಿಗೆ ದೇವಜನರಿಗೆ ದೇವರ ಬಗ್ಗೆ ಬೋಧಿಸುವ ಭಾರ ಕೊಡಲ್ಪಡಬಹುದು. ದೇವರು ಕ್ರಿಸ್ತನ ದೇಹದ ಬೇರೆಬೇರೆ ಅಂಗಗಳಿಗೆ ವಿಧವಿಧವಾದ ಭಾರಗಳನ್ನು ಕೊಡುತ್ತಾರೆ. ನಾವು ಇನ್ನೊಬ್ಬನ ಸೇವೆಯ ಅನುಕರಣೆ ಮಾಡಬಾರದು ಅಥವಾ ಆತನ ಭಾರವನ್ನು ಪಡಕೊಳ್ಳಲು ಪ್ರಯತ್ನ ಪಡಬಾರದು. ನಿಮ್ಮಲ್ಲಿರುವ ಭಾರವನ್ನು ಇತರರ ಮೇಲೆ ಹೊರಿಸಬೇಡಿರಿ; ಮತ್ತು ಬೇರೆ ಯಾರಾದರೂ ತಮ್ಮ ಭಾರವನ್ನು ನೀವು ವಹಿಸುವಂತೆ ನಿಮ್ಮನ್ನು ಒತ್ತಾಯ ಪಡಿಸದಂತೆ ಎಚ್ಚರ ವಹಿಸಿರಿ. ಸ್ವತಃ ದೇವರೇ ಒಂದು ಭಾರವನ್ನು - ಅವರು ನಿಮಗಾಗಿ ನಿಯೋಜಿಸಿರುವ ಭಾರವನ್ನು - ನಿಮಗೆ ನೀಡಲಿ.

ನಾವು ದೇವರ ಹೃದಯದೊಂದಿಗೆ ಹೆಚ್ಚುಹೆಚ್ಚಾಗಿ ಅನ್ಯೋನ್ಯತೆಯನ್ನು ಅನುಭವಿಸುವಾಗ, ನಾವೂ ಸಹ ಅವರ ಭಾರವನ್ನು ಹೊಂದುತ್ತೇವೆ. ದೇವರು ನಿಮ್ಮನ್ನು ಒಬ್ಬ ಸುವಾರ್ತಿಕನಾಗಿ ಕರೆದಿದ್ದರೆ, ಅವರು ನಿಮಗೆ ಕಳೆದುಹೋಗಿರುವ ಜನರಿಗಾಗಿ ಒಂದು ಅನುಕಂಪವನ್ನು ಕೊಡುತ್ತಾರೆ. ದೇವರು ನಿಮ್ಮನ್ನು ಒಬ್ಬ ಆತ್ಮಿಕ ಶಿಕ್ಷಕನಾಗಿ ಕರೆದಿದ್ದರೆ, ಕುರುಡರಾಗಿ ಮತ್ತು ವಂಚನೆಗೆ ಒಳಗಾಗಿ ಜಯದ ಜೀವಿತವನ್ನು ಪ್ರವೇಶಿಸಲು ವಿಫಲರಾಗಿರುವ ವಿಶ್ವಾಸಿಗಳಿಗಾಗಿ ಅನುಕಂಪವನ್ನು ಅವರು ನಿಮಗೆ ಕೊಡುತ್ತಾರೆ. ನಾವು ನಮ್ಮ ಸೇವೆಯನ್ನು ಫಲಪ್ರದವಾಗಿ ಪೂರೈಸಲು, ದೇವರ ಹೃದಯದೊಂದಿಗೆ ಅನ್ಯೋನ್ಯತೆಯ ಮೂಲಕ ಅವರ ಅನುಕಂಪವನ್ನು ಹೊಂದುವುದು ಅವಶ್ಯವಾಗಿದೆ.

ಅನೇಕ ಮಂದಿ ಅವರಲ್ಲಿರುವ ನಿರ್ದಿಷ್ಟ ಭಾರವನ್ನು - ಸಾಮಾನ್ಯವಾಗಿ ಸುವಾರ್ತಾ ಪ್ರಚಾರದ ಭಾರವನ್ನು - ನಾನು ಹೊಂದುವಂತೆ ನನ್ನನ್ನು ಒತ್ತಾಯಿಸಿದ್ದಾರೆ. ಆದರೆ ನಾನು ಯಾವಾಗಲೂ ಅಂತಹ ಒತ್ತಡಗಳನ್ನು ವಿರೋಧಿಸಿದ್ದೇನೆ. ದೇವರು ಇನ್ನೊಬ್ಬರಿಗೆ ಕೊಟ್ಟಿರುವ ಭಾರದಲ್ಲಿ ನನಗೆ ಆಸಕ್ತಿಯಿಲ್ಲ. ದೇವರು ನನಗೆ ಒಂದು ನಿರ್ದಿಷ್ಟ ಭಾರವನ್ನು ಕೊಟ್ಟಿದ್ದಾರೆ ಮತ್ತು ನಾನು ಅದೊಂದೇ ಭಾರವನ್ನು ಪೂರೈಸುವ ದೃಢ ಸಂಕಲ್ಪವನ್ನು ಹೊಂದಿದ್ದೇನೆ. ಪ್ರವಾದಿಗಳು ತಮ್ಮ ಭಾರ ಮತ್ತು ದೇವರು ಕೊಟ್ಟ ತಮ್ಮ ಸೇವೆಯಿಂದ ತಮ್ಮನ್ನು ದೂರ ಸರಿಸಲು ಯಾರಿಗೂ ಸ್ವಲ್ಪವಾದರೂ ಅವಕಾಶವನ್ನು ಕೊಡಲಿಲ್ಲ.

ನಿಮ್ಮಲ್ಲಿ ಯಾವುದೇ ಭಾರ ಇಲ್ಲವಾದಲ್ಲಿ, ದೇವರ ಬಳಿಗೆ ಹೋಗಿ ಒಂದು ಭಾರವನ್ನು ಕೊಡುವಂತೆ ನೀವು ಅವರನ್ನು ಕೇಳಬೇಕು. ಕ್ರಿಸ್ತನ ದೇಹದಲ್ಲಿ ನೀವು ಪೂರೈಸಬೇಕಾದ ಒಂದು ನಿರ್ದಿಷ್ಟ ಕಾರ್ಯವನ್ನು ಅವರು ಇರಿಸಿದ್ದಾರೆ ಮತ್ತು ಅದು ಏನೆಂದು ನೀವು ತಿಳಿದುಕೊಳ್ಳಲೇ ಬೇಕು.

ಅನೇಕ ಬೋಧಕರು ಸೇವೆಯಿಂದ ಸೇವೆಗೆ ಅಲೆಯುತ್ತಿರುತ್ತಾರೆ - ಅವರಿಗೆ ಯಾವ ಕ್ರೈಸ್ತ ಸಂಘಟನೆಯಲ್ಲಿ ಅಧಿಕ ಸಂಬಳ ಸಿಗುತ್ತದೋ, ಅಲ್ಲಿಗೆ ಅವರು ಹೋಗುತ್ತಾರೆ. ಉದಾಹರಣೆಗಾಗಿ, ಆರಂಭದಲ್ಲಿ ಅವರಲ್ಲಿ ಒಂದು ರೇಡಿಯೋ ಸಂದೇಶದ ಸೇವೆಯ "ಭಾರ" ಕಂಡುಬರಬಹುದು. ಆದರೆ ಒಂದು ಮಕ್ಕಳ ಸುವಾರ್ತಾ ಸೇವಾ ಸಂಘಟನೆಯು ಹೆಚ್ಚಿನ ಸಂಬಳದ ಪ್ರಸ್ತಾಪವನ್ನು ಅವರ ಮುಂದಿಟ್ಟರೆ, ಒಡನೆಯೇ ಅವರಲ್ಲಿ ಮಕ್ಕಳ ಸುವಾರ್ತಾ ಪ್ರಸಾರದ "ಭಾರ" ಕಾಣಿಸಿಕೊಳ್ಳುತ್ತದೆ! ಸ್ವಲ್ಪ ಸಮಯದ ನಂತರ, ಒಂದು ಕ್ರೈಸ್ತ ಸಾಹಿತ್ಯ ಸಂಸ್ಥೆಯಿಂದ ಅವರಿಗೆ ಇನ್ನೂ ಅಧಿಕ ಸಂಬಳದ ಪ್ರಸ್ತಾಪ ಬಂದರೆ, ಒಡನೆಯೇ ಅವರ "ಭಾರವು" ಸಾಹಿತ್ಯ ಸೇವೆಯ ಕಡೆಗೆ ತಿರುಗುತ್ತದೆ!! ಇಂತಹ ಬೋಧಕರು ಕರ್ತನ ಸೇವೆ ಮಾಡುತ್ತಿಲ್ಲ. ಅವರು ಬಾಬೆಲಿನ "ವ್ಯಾಪಾರಗಳಲ್ಲಿ" ತೊಡಗಿರುವ ಧಾರ್ಮಿಕ ಮನುಷ್ಯರಾಗಿದ್ದಾರೆ.

ದೇವರು ನಿಮಗೆ ಒಂದು ಭಾರವನ್ನು ಕೊಟ್ಟಾಗ, ಯಾವುದೋ ಒಂದು ಸಂಸ್ಥೆಯು ನಿಮಗೆ ಇನ್ನೂ ಹೆಚ್ಚಿನ ಪ್ರಾಪಂಚಿಕ ಪ್ರತಿಫಲದ ಅವಕಾಶವನ್ನು ಒದಗಿಸಿದ ಕಾರಣಕ್ಕಾಗಿ, ನೀವು ಆ ಭಾರವನ್ನು ಬಿಟ್ಟುಬಿಡಬಾರದು.