WFTW Body: 

ದೇವರ ಶ್ರೇಷ್ಠ ಆಜ್ಞೆಯನ್ನು ನೆರವೇರಿಸುವ ವಿಷಯದಲ್ಲಿ ಸಮತೋಲನವನ್ನು ತರುವುದು ನನ್ನ ಹೃದಯದಲ್ಲಿನ ಭಾರವಾಗಿದೆ. ಯೇಸುವು ಈ ಭೂಲೋಕವನ್ನು ಬಿಟ್ಟುಹೋಗುವ ಮುನ್ನ ತನ್ನ ಶಿಷ್ಯರಿಗೆ ಕೊನೆಯದಾಗಿ ನೀಡಿದ "ಶ್ರೇಷ್ಠ ಆಜ್ಞೆ"ಯನ್ನು ಪೂರೈಸುವುದು ಎಷ್ಟು ಪ್ರಾಮುಖ್ಯವೆಂಬುದು ಎಲ್ಲಾ ಕ್ರೈಸ್ತರಿಗೆ ತಿಳಿದಿದೆ.

ಆ ಶ್ರೇಷ್ಠ ಆಜ್ಞೆಯ ಮೊದಲನೇ ಭಾಗವನ್ನು ಮಾರ್ಕ. 16:15-16ರಲ್ಲಿ ಕಾಣಬಹುದು: "ನೀವು ಲೋಕದ ಎಲ್ಲಾ ಕಡೆಗೆ ಹೋಗಿ ಸುವಾರ್ತೆಯನ್ನು ಜಗತ್ತಿಗೆಲ್ಲಾ ಸಾರಿರಿ. ನಂಬಿ ದೀಕ್ಷಾಸ್ನಾನವನ್ನು ಮಾಡಿಸಿಕೊಳ್ಳುವವನು ರಕ್ಷಣೆ ಹೊಂದುವನು; ಆದರೆ ನಂಬದಿರುವವನು ದಂಡನೆಗೆ ಗುರಿಯಾಗುವನು." ಆದರೆ ಈ ಶ್ರೇಷ್ಠ ಆಜ್ಞೆಗೆ ಇನ್ನೊಂದು ಭಾಗವಿದೆ - ಇದನ್ನು ಎರಡನೇ ಭಾಗವೆಂದು ಕರೆಯಬಹುದು - ಮತ್ತಾ. 28:18-20ರಲ್ಲಿ ಇದನ್ನು ವಿವರಿಸಲಾಗಿದೆ. ಅಲ್ಲಿ ಯೇಸುವು ಹೀಗೆನ್ನುತ್ತಾರೆ: "ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ. ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ. ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳಬೇಕೆಂದು ಅವರಿಗೆ ಉಪದೇಶ ಮಾಡಿರಿ. ನೋಡಿರಿ, ನಾನು ಯುಗದ ಸಮಾಪ್ತಿಯ ವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ."

ನಾನು ಕ್ರಿಸ್ತನಲ್ಲಿ ಹೊಸದಾಗಿ ಹುಟ್ಟಿದ ನಂತರದ ಈ 65 ವರ್ಷಗಳಲ್ಲಿ ಕ್ರೈಸ್ತ ಸಮುದಾಯವನ್ನು - ಕ್ರೈಸ್ತ ವಿಶ್ವಾಸಿಗಳು, ಕ್ರೈಸ್ತ ಮಂಡಲಿಗಳು, ಮತ್ತು ಕ್ರೈಸ್ತಸಭೆಗಳು ಇವರೆಲ್ಲರನ್ನು - ಸೂಕ್ಷ್ಮವಾಗಿ ಪರಿಶೀಲಿಸಿದ್ದೇನೆ, ಮತ್ತು ಹೆಚ್ಚಿನ ಕ್ರೈಸ್ತರು ಮಾರ್ಕ. 16:15ರಲ್ಲಿನ ಮಹಾ ಆಜ್ಞೆಯ ವಿಷಯಾಂಶವನ್ನು ಒತ್ತಿ ಹೇಳುವುದನ್ನು ನಾನು ಗಮನಿಸಿದ್ದೇನೆ. ಇದೇ ಮಹಾ ಆಜ್ಞೆಯ ಉಳಿದ ಅರ್ಧಭಾಗವನ್ನು, ಅಂದರೆ ಮತ್ತಾ. 28:19-20ರಲ್ಲಿನ ಆಜ್ಞೆಯನ್ನು ಕೇವಲ ಸ್ವಲ್ಪ ಜನರು ಮಾತ್ರ ಒತ್ತಿ ಹೇಳುತ್ತಾರೆ. ನನ್ನ ಊಹೆ ಏನೆಂದರೆ, ಸುಮಾರು 99% ಜನರು ಮಾರ್ಕ. 16:15ನ್ನು ತಮ್ಮ ಸೇವೆಯ ಪ್ರಾಥಮಿಕ ಕೇಂದ್ರಬಿಂದುವಾಗಿ ಇರಿಸಿಕೊಳ್ಳುತ್ತಾರೆ, ಮತ್ತು ಸುಮಾರು 1% ಜನರು ಮಾತ್ರ ಮತ್ತಾ. 28:19-20ರ ವಾಕ್ಯಕ್ಕೆ ಪ್ರಾಮುಖ್ಯತೆಯನ್ನು ಕೊಡುತ್ತಾರೆ. ಇದನ್ನು ಒಂದು ಚಿತ್ರಣದ ಮೂಲಕ ತೋರಿಸುವುದಾದರೆ, ಇದು ಒಂದು ದೊಡ್ಡ ಮರದ ದಿಮ್ಮಿಯನ್ನು ನೂರು ಜನರು ಹೊತ್ತು ಸಾಗಿಸಲು ಪ್ರಯತ್ನಿಸುವಾಗ, ಅವರಲ್ಲಿ 99 ಜನ ಆ ದಿಮ್ಮಿಯ ಒಂದು ತುದಿಯನ್ನು ಎತ್ತಿ ಹಿಡಿದುಕೊಂಡಿದ್ದರೆ, ಇನ್ನೊಂದು ತುದಿಯನ್ನು ಒಬ್ಬನೇ ಒಬ್ಬ ವ್ಯಕ್ತಿ ಮಾತ್ರ ಹಿಡಿದುಕೊಂಡು ಎತ್ತಲು ಒದ್ದಾಡುತ್ತಿರುವ ಹಾಗಿದೆ. ನಾನು ಕಾಣುತ್ತಿರುವ ಪರಿಸ್ಥಿತಿ ಇದಾಗಿದೆ.

"ಈ ಶ್ರೇಷ್ಠ ಆಜ್ಞೆಯನ್ನು ಆದಿಯಲ್ಲಿನ ಅಪೊಸ್ತಲರು ಮೊದಲ ಬಾರಿ ಕೇಳಿಸಿಕೊಂಡಾಗ, ಅವರ ಮನಸ್ಸಿನಲ್ಲಿ ಯಾವುದೇ ಸಂದೇಹ ಅಥವಾ ಅಸ್ಪಷ್ಟತೆ ಇರಲಿಲ್ಲ"

ಈ ಕಾರಣಕ್ಕಾಗಿ, ಕರ್ತನು ದೇವರ ವಾಕ್ಯವನ್ನು ಕಲಿಸುವಂತಹ ವರವನ್ನು ನನಗೆ ಕೊಟ್ಟ ನಂತರ ನಾನು ಬೋಧಿಸಲು ಪ್ರಾರಂಭಿಸಿದಾಗ, ಕರ್ತನ ಶ್ರೇಷ್ಠ ಆಜ್ಞೆಯ ಮತ್ತೊಂದು ಭಾಗಕ್ಕೆ ಒತ್ತು ನೀಡುವುದು ಕರ್ತನು ನನಗೆ ಕೊಟ್ಟಿರುವ ಆಜ್ಞೆಯಾಗಿದೆಯೆಂದು ನಾನು ಅರಿತುಕೊಂಡೆನು. ಈ ಎರಡನೆಯ ಭಾಗವು ಕೇವಲ 1% ಮಾತ್ರ ನೆರವೇರಿಸಲ್ಪಟ್ಟಿದೆ ಮತ್ತು ಸರಿಯಾದ ಸಮತೋಲನ 50%-50% ಆಗಿರಬೇಕು. ಆ ಶ್ರೇಷ್ಠ ಆಜ್ಞೆಯ ಮೊದಲನೆಯ ಭಾಗವನ್ನು ನಾವು ಸುವಾರ್ತಾ ಸೇವೆ ಎಂಬುದಾಗಿ ತಿಳಿದಿದ್ದೇವೆ. ಅದು ಸಾಮಾನ್ಯವಾಗಿ ಮಿಷನರಿ (ಸುವಾರ್ತಾ-ಪ್ರಚಾರ) ಕೆಲಸವೆಂಬುದಾಗಿ ಕರೆಯಲ್ಪಡುತ್ತದೆ, ಮತ್ತು ಅನೇಕ ವೇಳೆ ಇದನ್ನು ಪೂರೈಸುವುದಕ್ಕಾಗಿ ಯಾರೂ ಹೋಗದಿರುವ ಸ್ಥಳಗಳಿಗೆ ಹೋಗಬೇಕಾಗುತ್ತದೆ. ಸುವಾರ್ತೆಯ ಈ ಸಂದೇಶವನ್ನು ಈ ವರೆಗೆ ಯಾರೂ ತಲುಪದಿರುವ ಸ್ಥಳಗಳಿಗೆ ತಲುಪಿಸುವುದು ಬಹಳ ಅವಶ್ಯಕವಾದ ಕಾರ್ಯವಾಗಿದೆ (ಆ ಸಂದೇಶ ಯಾವುದೆಂದರೆ, ಮನುಷ್ಯನು ಪಾಪದಲ್ಲಿದ್ದಾನೆ, ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ, ಕ್ರಿಸ್ತನು ಇಡೀ ಲೋಕದ ಪಾಪಗಳ ನಿವಾರಣೆಗಾಗಿ ಸತ್ತನು ಮತ್ತು ಆತನು ಮರಣದಿಂದ ಜೀವಂತವಾಗಿ ಎದ್ದು ಬಂದನು, ಕ್ರಿಸ್ತನು ತಂದೆಯಾದ ದೇವರ ಬಳಿಗೆ ಹೋಗುವದಕ್ಕೆ ಇರುವಂತ ಒಂದೇ ಮಾರ್ಗವಾಗಿದ್ದಾನೆ ಮತ್ತು ಕ್ರಿಸ್ತನನ್ನು ನಂಬಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವವನು ರಕ್ಷಣೆ ಹೊಂದುವನು ಮತ್ತು ನಂಬದಿರುವವನು ದಂಡನೆಗೆ ಗುರಿಯಾಗುತ್ತಾನೆ, ಎಂಬ ಸತ್ಯಾಂಶಗಳು).

ಆದರೆ ಶ್ರೇಷ್ಠ ಆಜ್ಞೆಯ ಈ ಭಾಗವನ್ನು ನೆರವೇರಿಸಿದ ನಂತರ ಅಲ್ಲಿಗೇ ನಿಲ್ಲಿಸಬೇಕೆಂದು ಕರ್ತನು ಬಯಸಿದನೇ? ಒಬ್ಬ ವ್ಯಕ್ತಿಯು ನಂಬಿಕೆಯನ್ನು ಪಡೆದು, ತಾನು ಪಾಪಿಯೆಂದು ಒಪ್ಪಿಕೊಂಡು, ಕ್ರಿಸ್ತನನ್ನು ತನ್ನ ರಕ್ಷಕನಾಗಿ ಸ್ವೀಕರಿಸಿದರೆ ಸಾಕೇ? ಖಂಡಿತವಾಗಿಯೂ ಸಾಲದು. ಮತ್ತಾ. 28:19ರಲ್ಲಿ, ನಾವು ಎಲ್ಲಾ ಜನಾಂಗಗಳಿಗೆ ಹೋಗಿ ಶಿಷ್ಯರನ್ನು ಮಾಡಬೇಕೆಂದು ಕರ್ತನು ನಮಗೆ ಆಜ್ಞಾಪಿಸುತ್ತಾನೆ.

ಈ ಶ್ರೇಷ್ಠ ಆಜ್ಞೆಯನ್ನು ಮೊದಲ ಬಾರಿ ಕೇಳಿಸಿಕೊಂಡ ಆದಿ ಸಭೆಯ ಅಪೊಸ್ತಲರ ಮನಸ್ಸಿನಲ್ಲಿ, "ಶಿಷ್ಯರು" ಎಂದರೇನು ಎಂಬ ಯಾವುದೇ ಸಂದೇಹ ಅಥವಾ ಅಸ್ಪಷ್ಟತೆ ಇರಲಿಲ್ಲ. ಯಾಕೆಂದರೆ ಯೇಸುವು ಲೂಕ. 14ನೇ ಅಧ್ಯಾಯದಲ್ಲಿ ಅವರಿಗೆ ಅದನ್ನು ಸ್ಪಷ್ಟವಾಗಿ ವಿವರಿಸಿದ್ದನು. ನಾವು ಲೂಕ. 14:25ನ್ನು ಓದಿದರೆ ತಿಳಿಯುವುದೇನೆಂದರೆ, ಒಂದು ದೊಡ್ಡ ಜನ ಸಮೂಹವು ತನ್ನನ್ನು ಹಿಂಬಾಲಿಸುತ್ತಿರುವುದನ್ನು ಯೇಸುವು ನೋಡಿದಾಗ, ತಾನು ಅದುವರೆಗೆ ಯಾರಿಗೂ ಹೇಳಿರದ ಬಹಳ ಕಠಿಣವಾದ ಮಾತುಗಳನ್ನು ಅವರಿಗೆ ಹೇಳಿದ್ದನ್ನು ಕಾಣುತ್ತೇವೆ.

ಮುಂದಿನ ಕೆಲವು ವಾರಗಳಲ್ಲಿ, ನಾವು ಈ "ಶಿಷ್ಯತ್ವದ ಷರತ್ತುಗಳನ್ನು" ಹೆಚ್ಚಿನ ಆಳದಲ್ಲಿ ಪರಿಶೀಲಿಸಲಿದ್ದೇವೆ. ನಾವು ಕೆಲವು ಪ್ರಶ್ನೆಗಳ ಮೂಲಕ ನಮ್ಮನ್ನು ಪರೀಕ್ಷಿಸಿಕೊಳ್ಳುವುದು ಒಳ್ಳೆಯದು:
ನಾವು ಯೇಸು ವಿವರಿಸಿದ ಶಿಷ್ಯತ್ವವನ್ನು ಅನುಸರಿಸುತ್ತೇವೆಯೇ? ಮತ್ತು ಶ್ರೇಷ್ಠ ಆಜ್ಞೆಯ ವಿಷಯದಲ್ಲಿ ಸೂಕ್ತ ಸಮತೋಲನವುಳ್ಳ ತಿಳುವಳಿಕೆಯನ್ನು ನಾವು ಹೊಂದಿದ್ದೇವೆಯೇ? ಮತ್ತು ಯೇಸುವು ಶಿಷ್ಯತ್ವಕ್ಕೆ ನೀಡುವ ಪ್ರಾಮುಖ್ಯತೆಯನ್ನು ನಾವು ಅರ್ಥಮಾಡಿಕೊಂಡಿದ್ದೇವೆಯೇ?