ಬರೆದಿರುವವರು :   ಝ್ಯಾಕ್ ಪೂನನ್
WFTW Body: 

1. ಅನ್ಯೋನ್ಯತೆ>

ಮೊದಲಗಿತ್ತಿಯು ಪರಮ ಗೀತ 2:4ರಲ್ಲಿ, "ಅವನು ನನ್ನನ್ನು ಎಷ್ಟು ಹೆಚ್ಚಾಗಿ ಪ್ರೀತಿಸುತ್ತಾನೆಂದು ಔತಣಶಾಲೆಯಲ್ಲಿದ್ದ ಎಲ್ಲರೂ ನೋಡಲಿಕ್ಕಾಗಿ, ಅವನು ನನ್ನನ್ನು ಅಲ್ಲಿಗೆ ಬರಮಾಡಿಕೊಂಡನು", ಎನ್ನುತ್ತಾಳೆ. ಇನ್ನೊಂದೆಡೆ, ತಂದೆಯು ದುಂದುಗಾರನಾಗಿದ್ದ ತನ್ನ ಮಗನನ್ನು ಮುದ್ದಿಟ್ಟು ಊಟದ ಮೇಜಿಗೆ ಕರೆದನು. ಯೇಸುವು ತನ್ನ ಶಿಷ್ಯರನ್ನು ಮೇಜಿನ ಸುತ್ತಲೂ ಕೂರಿಸಿ ತಾನೂ ಕುಳಿತುಕೊಂಡನು. ಊಟದ ಮೇಜು ಅನ್ಯೋನ್ಯತೆಯ ಒಂದು ಸಂಕೇತವಾಗಿದೆ. ನಾವು ನಮ್ಮ ಕರ್ತನ ಸೇವೆಗಾಗಿ ಊಟದ ಮೇಜಿಗೆ ಬರುವುದಿಲ್ಲ, ಆದರೆ ನಮ್ಮ ಕರ್ತನ ಅನ್ಯೋನ್ಯತೆಯನ್ನು ಆನಂದಿಸಲು ಅಲ್ಲಿಗೆ ಬರುತ್ತೇವೆ. ನಾವು ಅವನ ಸಂಗಡ ಊಟ ಮಾಡುತ್ತೇವೆ (ಪ್ರಕಟನೆ 3:20). ಸೇವೆಯು ನಮ್ಮ ಜೀವನದ ಪ್ರಾಥಮಿಕ ಆದ್ಯತೆ ಎಂದಿಗೂ ಆಗಬಾರದು. ಕರ್ತನನ್ನು ಪ್ರೀತಿಸುವುದು ಯಾವಾಗಲೂ ಮೊದಲ ಆದ್ಯತೆ ಆಗಿರಬೇಕು. 50 ವರ್ಷಗಳ ಕಾಲ ಕರ್ತನ ಪೂರ್ಣಾವಧಿ ಸೇವೆ ಮಾಡಿದ ನಂತರ, ನಾನು ಹೇಳಬಯಸುವುದು ಏನೆಂದರೆ, ನನ್ನನ್ನು ನನ್ನ ಕರ್ತನಿಗೆ ಸಮರ್ಪಿಸಿಕೊಳ್ಳುವುದೇ ನನ್ನ ಸಂಪೂರ್ಣ ಸೇವೆಯ ಮೂಲಸೂತ್ರವಾಗಿದೆ. ನಮ್ಮಲ್ಲಿ ಆ ಸಮರ್ಪಣಾ ಭಾವ ಕಡಿಮೆಯಾದರೆ, ದೇವರ ದೃಷ್ಟಿಯಲ್ಲಿ ನಮ್ಮ ಸೇವೆಯು ಯಾವ ಉಪಯೋಗವೂ ಇಲ್ಲದ್ದು ಎನಿಸುತ್ತದೆ. ಕ್ರಿಸ್ತನೊಂದಿಗೆ ಒಂದು ಆತ್ಮೀಯ, ಸ್ನೇಹದ, ಸಮರ್ಪಣಾಭಾವದ ಸಂಬಂಧದಿಂದ ಕರ್ತನ ಪ್ರತಿಯೊಂದು ಯಥಾರ್ಥವಾದ ಸೇವೆಯು ಆರಂಭಗೊಂಡು ಹೊರಹೊಮ್ಮುತದೆ.

2. ಮೆಚ್ಚುಗೆ

ಪರಮ ಗೀತ 4:1ರಲ್ಲಿ ಮದಲಿಂಗನು ತನ್ನ ಮೊದಲಗಿತ್ತಿಯನ್ನು ಪ್ರಶಂಸಿಸುತ್ತಾ, "ಆಹಾ, ನನ್ನ ಪ್ರಿಯಳೇ, ನೀನು ಎಷ್ಟು ಚೆಲುವೆ! ಆಹಾ, ನೀಸು ಎಷ್ಟು ಸುಂದರಿ!", ಎಂದು ಹೇಳುತ್ತಾನೆ. ನಾವು ಕರ್ತನಿಂದ ಇಂತಹ ಮಾತುಗಳನ್ನು ಕೇಳಿಸಿಕೊಳ್ಳುವುದು ಅವಶ್ಯ - ಇವುಗಳು ಕರ್ತನು ನಮ್ಮನ್ನು ನೋಡಿ ಬಹಳವಾಗಿ ಆನಂದಿಸುತ್ತಾನೆಂಬ ಭರವಸೆಯನ್ನು ನಮಗೆ ಕೊಡುತ್ತವೆ. ಗಂಡಂದಿರು ಹಾಗೂ ಹೆಂಡಂದಿರು ಸಹ ಇಂತಹ ಪ್ರೀತಿಯ ಉದ್ಗಾರಗಳನ್ನು ಪರಸ್ಪರವಾಗಿ ಲಾಲಿಸುವುದು ಬಹಳ ಅವಶ್ಯವಾಗಿದೆ. ಪರಮ ಗೀತದ ನಾಲ್ಕನೇ ಅಧ್ಯಾಯದಲ್ಲಿ ವರನು ತನ್ನ ವಧುವನ್ನು ಮೆಚ್ಚಿರುವುದನ್ನು ವಿಸ್ತಾರವಾಗಿ ವಿವರಿಸುತ್ತಾನೆ. ಆತ್ಮಿಕ ಬೆಳವಣಿಗೆಯ ಒಂದು ಕುರುಹು ಏನೆಂದರೆ, ನಾವು ಮಾತನಾಡುವುದಕ್ಕಿಂತ ಹೆಚ್ಚಾಗಿ ಕರ್ತನ ಮಾತನ್ನು ಲಾಲಿಸುವುದನ್ನು ಕಲಿಯುತ್ತೇವೆ. ವಧುವು ತನ್ನ ವರನ ಮಾತುಗಳನ್ನು ಕೇಳಿಸಿಕೊಂಡಾಗ, ಆತನು ಆಕೆಯನ್ನು ಮೆಚ್ಚಿ ನುಡಿಯುವ ಮಾತುಗಳು ಆಕೆಗೆ ಕೇಳಿಸುತ್ತವೆ. ಆತನು ಆಕೆಯ ಅಂಗ ಅಂಗವನ್ನೂ ಮೆಚ್ಚಿಕೊಳ್ಳುತ್ತಾನೆ ಮತ್ತು ಕೊನೆಗೆ, "ನನ್ನ ಪ್ರಿಯಳೇ, ನೀನು ಸರ್ವಾಂಗಸುಂದರಿ," ಎನ್ನುತ್ತಾನೆ (ಪರಮ ಗೀತ 4:7). ಮದಲಿಂಗನು ಮುಂದುವರಿದು ತನ್ನು ಮೊದಲಗಿತ್ತಿಯನ್ನು ಬಹಳವಾಗಿ ಕೊಂಡಾಡುತ್ತಾನೆ (ಪರಮ ಗೀತ 6:4-10). ಅವನು ಹೇಳುವಂತೆ, "ಆಕೆಯು ಎಲ್ಲಾ ಸ್ತ್ರೀಯರಲ್ಲಿ ಶ್ರೇಷ್ಠಳು ಮತ್ತು ದೋಷರಹಿತಳು. ನಾನು ಅವರೆಲ್ಲರಿಗಿಂತ ಹೆಚ್ಚಾಗಿ ಇವಳನ್ನು ಮೆಚ್ಚಿ ಆರಿಸಿಕೊಂಡಿದ್ದೇನೆ."

ಪ್ರತಿಯೊಬ್ಬ ಗಂಡನು ತನ್ನ ಪತ್ನಿಯನ್ನು ಈ ರೀತಿಯಾಗಿ ನೋಡಬೇಕು: ಜಗತ್ತಿನಲ್ಲಿ ಅನೇಕ ಆಕರ್ಷಕ ಸ್ತ್ರೀಯರು ಇದ್ದಾರೆ, ಆದರೆ ನನ್ನ ಪತ್ನಿಯ ಹಾಗೆ ಯಾರೂ ಇಲ್ಲ. ನನ್ನ ದೃಷ್ಟಿಯಲ್ಲಿ ಆಕೆಗೆ ಪ್ರಥಮ ಸ್ಥಾನ ಸಲ್ಲುತ್ತದೆ. ಕರ್ತನು ನಮ್ಮ ಕುರಿತಾಗಿ ಇದೇ ಮಾತನ್ನು ಹೇಳುತ್ತಾನೆ. ಆತನು ಜಗತ್ತಿನ ಎಲ್ಲಾ ಜಾಣರಿಗಿಂತ, ಮತ್ತು ಎಲ್ಲಾ ಐಶ್ವರ್ಯವಂತರಿಗಿಂತ, ಶ್ರೇಷ್ಠ ಜನರಿಗಿಂತ ನಮ್ಮನ್ನು ಹೆಚ್ಚಾಗಿ ಮೆಚ್ಚುತ್ತಾನೆ. ಪರಮ ಗೀತ 7:1-9ರಲ್ಲಿ, ವರನು ತನ್ನ ವಧುವನ್ನು ಹೇಗೆ ಪ್ರಶಂಸಿಸುತ್ತಾನೆಂದು ನಾವು ಓದುತ್ತೇವೆ. ನಾವು ಸ್ಪಷ್ಟವಾಗಿ ತಿಳಕೊಳ್ಳಬೇಕಾದದ್ದು ಏನೆಂದರೆ, ನಮ್ಮಲ್ಲಿ ಅನೇಕ ನ್ಯೂನ್ಯತೆಗಳು ಮತ್ತು ಕುಂದುಕೊರತೆಗಳು ಇದ್ದಾಗ್ಯೂ, ನಮ್ಮ ಕರ್ತನು ನಮ್ಮನ್ನು ಯಥಾರ್ಥವಾಗಿ ಮೆಚ್ಚಿಕೊಂಡು ಪ್ರಶಂಸಿಸುತ್ತಾನೆ. ಅನೇಕ ವಿಶ್ವಾಸಿಗಳು ಕರ್ತನು ತಮ್ಮನ್ನು ಮೆಚ್ಚುತ್ತಾನೆಂದು ನಂಬದೇ ಇರುವುದರಿಂದ, ಯಾವಾಗಲೂ ಸ್ವ-ನಿಂದನೆಯ ಮನೋಭಾವದೊಂದಿಗೆ ಜೀವಿಸುತ್ತಾರೆ.

3. ಗೆಳೆತನ

ಪರಮ ಗೀತ 5:16ರಲ್ಲಿ, ವಧುವು ವರನನ್ನು ಶ್ಲಾಘಿಸುತ್ತಾಳೆ, "ಅವನು ಸರ್ವಾಂಗದಲ್ಲಿಯೂ ಮನೋಹರನು; ಇವನೇ ಎನ್ನ ಇನಿಯನು; ಇವನೇ ನನ್ನ ಪ್ರಿಯನು". ಯೇಸುವು ನಿಮ್ಮ ರಕ್ಷಕನು ಮಾತ್ರವಲ್ಲ, ಆತನು ನಿಮ್ಮ ಸ್ನೇಹಿತನೂ ಆಗಿದ್ದಾನೆಂದು ನೀವು ಹೇಳಬಲ್ಲಿರಾ? ನಿಮ್ಮ ಇಹಲೋಕದ ಪತಿ/ ಪತ್ನಿಯ ವಿಷಯವೇನು? ಆತನು/ ಆಕೆಯು ಈ ಜಗತ್ತಿನಲ್ಲಿ ನಿಮ್ಮ ಅತ್ಯುತ್ತಮ ಗೆಳೆಯ/ ಗೆಳತಿ ಆಗಿರುವರೇ? ಇದು ಹೀಗೆ ಆಗಿರಬೇಕು. ಅನೇಕ ಗಂಡಂದಿರು ಮತ್ತು ಹೆಂಡಂದಿರು ತಾವು ಒಬ್ಬರನ್ನೊಬ್ಬರು ಪ್ರೀತಿಸುವುದಾಗಿ ಹೇಳುತ್ತಾರೆ, ಆದರೆ ಅವರು ಪರಸ್ಪರ ಅತ್ಯುತ್ತಮ ಸ್ನೇಹಿತರು ಆಗಿರುವುದಿಲ್ಲ. ಅವರ ಆಪ್ತ ಗೆಳೆಯರು ಬೇರೆಲ್ಲೋ ಇರುತ್ತಾರೆ. ಇದು ಬೇಸರದ ಸಂಗತಿ. ಯೇಸುವು ನನ್ನ ಅತೀ ಹತ್ತಿರದ ಮತ್ತು ಆತೀ ಪ್ರಿಯ ಸ್ನೇಹಿತನು ಆಗಿದ್ದಾನೆ - ನನ್ನ ಹೆಂಡತಿಗಿಂತಲೂ ನಿಕಟ ಸ್ನೇಹಿತನು. ಆದರೆ ಈ ಜಗತ್ತಿನ ಜನರಲ್ಲಿ, ನನ್ನ ಪತ್ನಿಯು ನನ್ನ ಅತೀ ಹತ್ತಿರದ ಮತ್ತು ಅತ್ಯುತ್ತಮ ಸ್ನೇಹಿತೆಯಾಗಿದ್ದಾಳೆ - ಮತ್ತು ನನ್ನ ಜೀವಿತವಿಡೀ ಆಕೆಯು ಅದೇ ರೀತಿ ಇರುತ್ತಾಳೆ. ಇದು ನನ್ನ ಕ್ರೈಸ್ತ ಜೀವನ ಮತ್ತು ನನ್ನ ವೈವಾಹಿಕ ಜೀವನವನ್ನು ಅತೀ ಹೆಚ್ಚಿನ ಸಂತೋಷದಿಂದ ತುಂಬಿಸಿದೆ.