ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ
WFTW Body: 

ಇಂದು ಕ್ರೈಸ್ತ ವಿಶ್ವಾಸಿಗಳು ಅನೇಕ ಕ್ಷೇತ್ರಗಳಲ್ಲಿ ಹಳೆಯ ಒಡಂಬಡಿಕೆಯ ಅಡಿಯಲ್ಲಿ ಜೀವಿಸುತ್ತಿದ್ದಾರೆ; ಅವರು ಹೊಸ ಒಡಂಬಡಿಕೆಯ ಪ್ರತಿಸ್ಥಾಪನೆ ಪಂಚಾಶತ್ತಮ ಹಬ್ಬದ ದಿನದಂದು ಆಯಿತು ಎಂಬುದನ್ನು ಅರ್ಥಮಾಡಿಕೊಂಡಿಲ್ಲ. ಒಂದು ವೇಳೆ ಭಾರತದ ಪ್ರಜೆಗಳು 1947ನೇ ಇಸವಿಯಲ್ಲಿ ತಾವು ಸ್ವಾತಂತ್ರ್ಯ ಗಳಿಸಿದೆವು, ಎಂಬುದನ್ನು ಅರಿಯದೇ ಇರುವುದಕ್ಕೆ ಇದನ್ನು ಹೋಲಿಸಬಹುದು. ಇಂತಹ ಅಜ್ಞಾನಿಗಳು ಇದ್ದಾರೆಂದು ನೀವು ಊಹಿಸುತ್ತೀರಾ? ಕ್ರೈಸ್ತ ವಿಶ್ವಾಸಿಗಳು ಇನ್ನೂ ಹಳೆಯ ಒಡಂಬಡಿಕೆಯ ಅಡಿಯಲ್ಲಿ ಜೀವಿಸುತ್ತಿರುವುದು ಇದರಷ್ಟೇ ಹಾಸ್ಯಾಸ್ಪದ ಸಂಗತಿಯಾಗಿದೆ.

ಕ್ರೈಸ್ತರಲ್ಲಿ ಹೆಚ್ಚಿನವರು ಹಲವು ಕ್ಷೇತ್ರಗಳಲ್ಲಿ ಹಳೆಯ ಒಡಂಬಡಿಕೆಯ ಅಡಿಯಲ್ಲಿ ಜೀವಿಸುತ್ತಿದ್ದಾರೆ. ಹಳೆಯ ಒಡಂಬಡಿಕೆಯ ಅವಧಿಯಲ್ಲಿ, ನೀವು ನಿಮ್ಮ ಪಾಪಗಳ ಕ್ಷಮಾಪಣೆಯನ್ನು ಮಾತ್ರ ಗಳಿಸಬಹುದಾಗಿತ್ತು (ಕೀರ್ತನೆಗಳು 103); ಹೊಸ ಒಡಂಬಡಿಕೆಯಲ್ಲಿ, ’ರೋಮಾಪುರದವರಿಗೆ 6:14'ರಲ್ಲಿ ಹೇಳಿರುವಂತೆ, ಪಾಪವು ನಿಮ್ಮ ಮೇಲೆ ಅಧಿಕಾರ ನಡೆಸದು. ಜನರು ಕೇವಲ ಪಾಪ ಕ್ಷಮಾಪಣೆಯನ್ನು ಹೊಂದಿದ್ದರೆ ಮತ್ತು ಪಾಪದ ಮೇಲೆ ಜಯ ಗಳಿಸದಿದ್ದರೆ, ಅವರು ಹಳೆಯ ಒಡಂಬಡಿಕೆಯ ಅಡಿಯಲ್ಲಿ ಜೀವಿಸುತ್ತಿದ್ದಾರೆ. ಹಳೆಯ ಒಡಂಬಡಿಕೆಯಲ್ಲಿ, ಜನರ ಸಮೂಹವಿತ್ತು; ಅದು ಒಂದುಗೂಡಿ ಒಂದು ದೇಹದಂತೆ ಕೆಲಸ ಮಾಡಲು ಸಾಧ್ಯವಿರಲಿಲ್ಲ. ಈ ದಿನ ಒಂದು ಕ್ರೈಸ್ತಸಭೆಯು ಇಂತಹ ಸ್ಥಿತಿಯಲ್ಲಿದ್ದರೆ - ಅದು ಐಕ್ಯತೆಯಿಂದ ಒಂದು ದೇಹದಂತೆ ಕೆಲಸ ಮಾಡಲು ಸಾಧ್ಯವಾಗದಿದ್ದರೆ - ಅದು ಒಂದು ಸಭೆಯಲ್ಲ, ಕೇವಲ ಹಳೆಯ ಒಡಂಬಡಿಕೆಯ ಒಂದು ಸಮೂಹವಾಗಿದೆ ಎಂದು ಸಾಬೀತಾಗುತ್ತದೆ. ದಶಮಾಂಶಕ್ಕೆ ಒತ್ತು ಕೊಡಲ್ಪಡುವುದು ಕೂಡ ಹಳೆಯ ಒಡಂಬಡಿಕೆಯ ಪದ್ಧತಿಯಾಗಿದೆ.

ಸಂಪೂರ್ಣ ಹಳೆಯ ಒಡಂಬಡಿಕೆಗೆ ಸೇರಿದಂತ ದಶಮಾಂಶ ಪದ್ಧತಿ ಇಂದು ಕ್ರೈಸ್ತ ಪ್ರಪಂಚದಲ್ಲಿ ಪ್ರಾಮುಖ್ಯತೆ ಪಡೆದಿರುವುದನ್ನು ನಾವು ಗಮನಿಸಿ, ಹೊಸ ಒಡಂಬಡಿಕೆಯ ಕೊಡುವಿಕೆಯ ಕುರಿತಾದ ಮೂಲತತ್ವಗಳನ್ನು ಸರಿಯಾಗಿ ತಿಳಿದುಕೊಳ್ಳುವುದು ಅವಶ್ಯವಾಗಿದೆ. ಹೊಸ ಒಡಂಬಡಿಕೆಯಲ್ಲಿ ನೀವು ದೇವರಿಗೆ ದಶಮಾಂಶವನ್ನು (10%) ಕೊಡಬೇಕೆಂಬ ಯಾವ ನಿಯಮವೂ ಇಲ್ಲ. ಸತ್ಯವೇದದಲ್ಲಿ ದಶಮಾಂಶವನ್ನು ಒಂದು ಆಜ್ಞಾರೂಪದಲ್ಲಿ ಕೊನೆಯದಾಗಿ ಉಲ್ಲೇಖಿಸಿರುವುದು ಮಲಾಕಿಯನ ಗ್ರಂಥದಲ್ಲಿ, ಅಂದರೆ ಹಳೆಯ ಒಡಂಬಡಿಕೆಯ ಅಡಿಯಲ್ಲಿ. ಇದನ್ನು ’ಮತ್ತಾಯ 23'ನೇ ಅಧ್ಯಾಯದಲ್ಲಿ ಯೇಸುವು ಉಲ್ಲೇಖಿಸಿದ್ದಾಗಿದೆ, ಇನ್ನೂ ಹಳೆಯ ಒಡಂಬಡಿಕೆಯ ಅಡಿಯಲ್ಲಿದ್ದ ಜನರಿಗೆ - ಅಂದರೆ ಫರಿಸಾಯರು ಮತ್ತು ಯೆಹೂದ್ಯರನ್ನು ಆತನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ. ಹೊಸ ಒಡಂಬಡಿಕೆಯ ಆರಂಭ ಪಂಚಾಶತ್ತಮ ಹಬ್ಬದ ದಿನದಂದು ಆಯಿತು ಮತ್ತು ಇದರ ನಂತರ, ದಶಮಾಂಶವನ್ನು ಕೊಡಬೇಕೆಂದು ಕ್ರೈಸ್ತರಿಗೆ ಹೇಳುವ ಒಂದೇ ಒಂದು ಆಜ್ಞೆಯೂ ಸಿಗುವುದಿಲ್ಲ. ದಶಮಾಂಶವು ಎಲ್ಲಿಯೂ ಉಲ್ಲೇಖಿಸಲ್ಪಟ್ಟಿಲ್ಲ.

ಇಬ್ರಿಯರಿಗೆ ಬರೆದ ಪತ್ರಿಕೆಯಲ್ಲಿ, ಅಬ್ರಹಾಮನು ಮೆಲ್ಕಿಜೆದೇಕನಿಗೆ ಹತ್ತನೆಯ ಒಂದು ಭಾಗವನ್ನು (10%) ಕೊಟ್ಟದ್ದರ ಬಗ್ಗೆ ಒಂದು ಅಸ್ಪಷ್ಟ ಹೇಳಿಕೆಯಿದೆ, ಆದರೆ ಅಲ್ಲಿ ಅಬ್ರಹಾಮನು ಯಾವುದೇ ಕಟ್ಟಳೆ ಅಥವಾ ನಿಯಮವನ್ನು ಪಾಲಿಸುವುದಕ್ಕಾಗಿ ಇದನ್ನು ಕೊಡಲಿಲ್ಲ. ಆತನು ತನ್ನ ಇಚ್ಛಾನುಸಾರ ಎಷ್ಟಾದರೂ ಕೊಡಬಹುದಾಗಿತ್ತು. ಅದು 10% ಆಗಿತ್ತು, ಆದರೆ ಯಾವುದೇ ನಿಯಮಕ್ಕೆ ಅನುಸಾರವಾಗಿ ಅಬ್ರಹಾಮನು ಕೊಡಲಿಲ್ಲ, ಮತ್ತು ಅವನು ಕೊಡದಿದ್ದರೂ ಸಹ ಅದು ಪಾಪವಾಗಿರಲಿಲ್ಲ.

ಹೊಸ ಒಡಂಬಡಿಕೆಯಲ್ಲಿ, ಕೊಡುವಿಕೆಯ ಮೂಲತತ್ವಗಳು ಯಾವುವೆಂದರೆ, ಕೊಡುವಿಕೆ ರಹಸ್ಯವಾಗಿರಬೇಕು (ಮತ್ತಾ. 6:1-4), ಸಂತೋಷವಾಗಿ ಕೊಡಬೇಕು (2 ಕೊರಿಂಥದವರಿಗೆ 9:7), ಮತ್ತು ನಿಮ್ಮ ಸಂಪಾದನೆಗೆ ಅನುಗುಣವಾಗಿ ಕೊಡಬೇಕು (1ಕೊರಿಂಥದವರಿಗೆ 16:2). ಎಷ್ಟು ಭಾಗವನ್ನು ಕೊಡಬೇಕು ಎಂಬುದಾಗಿ ಯಾವ ನಿಯಮವೂ ಇಲ್ಲ. ದೇವರು ನಿಮ್ಮನ್ನು ಆಶೀರ್ವದಿಸಿ ಕೊಟ್ಟಿರುವುದರ ಮೇರೆಗೆ ನೀವು ಕೊಡಬಹುದು. ನಿಮ್ಮಲ್ಲಿ ಬಹಳಷ್ಟು ಇದ್ದರೆ, ಮತ್ತು ನಿಮಗೆ ಬೇಕಾಗಿರುವುದಕ್ಕಿಂತ ಹೆಚ್ಚು ಇದ್ದರೆ, ಆಗ ನೀವು ಹೆಚ್ಚು ಕೊಡಬಹುದು; ಮತ್ತು ನಿಮ್ಮಲ್ಲಿ ಕಡಿಮೆ ಇದ್ದರೆ, ನೀವು ಕೊಡಬೇಕಿಲ್ಲ. ಅದರಲ್ಲಿ ಯಾವ ತಪ್ಪೂ ಇಲ್ಲ, ಏಕೆಂದರೆ ದೇವರು ಕೋಟ್ಯಾಧಿಪತಿಯಾಗಿದ್ದಾರೆ, ಮತ್ತು ತನ್ನ ಬಡ ಮಕ್ಕಳಲ್ಲಿ ಯಾರಾದರೂ ತನಗೆ ಕೊಟ್ಟದ್ದರಿಂದ ತೊಂದರೆ ಮತ್ತು ಅಭಾವವಕ್ಕೆ ಒಳಗಾಗುವುದನ್ನು ದೇವರು ಬಯಸುವುದಿಲ್ಲ.

"ಹೊಸ ಒಡಂಬಡಿಕೆಯಲ್ಲಿ ಕೊಡುವಿಕೆಯ ಮೂಲತತ್ವ ಏನೆಂದರೆ, ರಹಸ್ಯವಾಗಿ, ಸಂತೋಷದಿಂದ ಮತ್ತು ನಿಮ್ಮ ಸಂಪಾದನೆಯ ಮೇರೆಗೆ ಕೊಡುವಂಥದ್ದು ಆಗಿದೆ”

ನೀವು ಈ ಮೂಲತತ್ವಗಳನ್ನು ಅರ್ಥಮಾಡಿಕೊಳ್ಳದಿದ್ದರೆ, ಅನೇಕ ಸಭಾ ಹಿರಿಯರು ಮತ್ತು ಬೋಧಕರುಗಳು ನಿಮ್ಮಿಂದ ದೋಚಿಕೊಳ್ಳುತ್ತಾರೆ ಮತ್ತು ನಿಮ್ಮನ್ನು ಆರ್ಥಿಕವಾಗಿ ದುರುಪಯೋಗ ಪಡಿಸುತ್ತಾರೆ. ನೀವು ನೆನಪಿನಲ್ಲಿ ಇರಿಸಿಕೊಳ್ಳಬೇಕಾದದ್ದು ಏನೆಂದರೆ, ಕೊಡುವಿಕೆ ರಹಸ್ಯವಾಗಿರಬೇಕು. ನೀವು ಕೊಡುವುದು ಎಷ್ಟು ಎಂಬುದನ್ನು ತಿಳಿಸಬೇಕೆಂದು ಯಾವುದೇ ಸಭೆ ಒತ್ತಾಯಿಸಿದರೆ, ವಾಸ್ತವವಾಗಿ ’ಮತ್ತಾಯನು 6:1-4'ರ ದೇವರ ವಾಕ್ಯವನ್ನು ಉಲ್ಲಂಘಿಸುವಂತೆ ನಿಮಗೆ ಹೇಳಿದಂತೆ ಆಗುತ್ತದೆ. ನಮ್ಮ ಎಲ್ಲಾ ಕೊಡುವಿಕೆಗಳು ಸಾಧ್ಯವಿದ್ದಷ್ಟು ಮಟ್ಟಿಗೆ ರಹಸ್ಯ, ಸ್ವೇಚ್ಛಾಪೂರಿತ ಮತ್ತು ಸಂತೋಷಕರ ಆಗಿರಬೇಕು.

ನಾವು ಜನರ ಮುಂದೆ ಕಾಣಿಕೆಯ ಬುಟ್ಟಿಯನ್ನು ಚಾಚಿ, ಅವರು ಸಂತೋಷದಿಂದ ಕೊಡಲು ಇಷ್ಟಪಡದಿರುವಾಗ, ಅವರನ್ನು ಕೊಡುವಂತೆ ಒತ್ತಾಯಿಸುವುದನ್ನು ನಾನು ವೈಯಕ್ತಿಕವಾಗಿ ಒಪ್ಪದಿರುವುದಕ್ಕೆ ಇದೇ ಕಾರಣವಾಗಿದೆ. ಅವರ ಪಕ್ಕದಲ್ಲಿ ಕುಳಿತಿರುವ ಜನರು ಅವರನ್ನು ಗಮನಿಸುತ್ತಿರುವಾಗ, ಅವರು ರಹಸ್ಯವಾಗಿ ಕೊಡುವ ಅವಕಾಶ ಇರಲಾರದು. ಇದಕ್ಕೆ ಸೂಕ್ತವಾದ ರೀತಿ ಸಭೆಯಲ್ಲಿ ಒಂದು ಕಡೆ ಒಂದು ಕಾಣಿಕೆಯ ಡಬ್ಬಿಯನ್ನು ಇರಿಸಿ, ಜನರು ರಹಸ್ಯವಾಗಿ, ಸಂತೋಷದಿಂದ ಮತ್ತು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೊಡುವುದಕ್ಕೆ ಅವಕಾಶ ಮಾಡಿಕೊಡುವುದು, ಎಂಬುದಾಗಿ ನಾನು ನಂಬುತ್ತೇನೆ. ಆದರೆ ಬಹಳ ಕೆಲವು ಸಭೆಗಳು ಮಾತ್ರ ಇದಕ್ಕೆ ಅವಕಾಶ ಮಾಡಿಕೊಡುತ್ತಾರೆ, ಏಕೆಂದರೆ ಹೆಚ್ಚಿನ ಕ್ರೈಸ್ತ ಬೋಧಕರಲ್ಲಿ ಮತ್ತು ಹೆಚ್ಚಿನ ಕ್ರೈಸ್ತಸಭೆಗಳಲ್ಲಿ ಅತಿಯಾದ ಹಣದಾಶೆ ಇದೆ.

ನೆನಪಿರಿಸಿಕೊಳ್ಳಿರಿ, "ನಿಮ್ಮ ನೀತಿಯು ಫರಿಸಾಯರ ನೀತಿಗಿಂತ ಹೆಚ್ಚಿನದಾಗಬೇಕು" ಎಂಬ ’ಮತ್ತಾಯನು 5:20'ರ ವಚನ, ಇಲ್ಲಿಂದ ಮುಂದಿನ ಪರ್ವತ ಪ್ರಸಂಗದ ಬಹುತೇಕ ಅಂಶಕ್ಕೆ ಸೂಕ್ತ ಶಿರೋನಾಮೆಯಾಗಿದೆ: "ನಮ್ಮ ನೀತಿಯ ಮಟ್ಟವನ್ನು ಶಾಸ್ತ್ರಿಗಳ ಮತ್ತು ಫರಿಸಾಯರ ನೀತಿಗಿಂತಲೂ ಉತ್ತಮವಾಗಿಸಿಕೊಂಡು, ನಾವು ಪರಲೋಕ ರಾಜ್ಯವನ್ನು ಪ್ರವೇಶಿಸುವ ವಿಧಾನ."

ಕಾಣೆಕೆ ಕೊಡುವ ವಿಚಾರದಲ್ಲಿ, ಕಪಟಿಗಳಾಗಿದ್ದ ಫರಿಸಾಯರು ಜನರ ಮುಂದೆ ತೋರಿಸಿಕೊಳ್ಳುತ್ತಾ ಕೊಡುತ್ತಿದ್ದುದನ್ನು ಅನುಸರಿಸದೆ, ನಾವು ಸಂಪೂರ್ಣವಾಗಿ ವಿಭಿನ್ನರಾಗಿ ಇರಬೇಕೆಂದು ಯೇಸುವು ಹೇಳುತ್ತಾರೆ. ನಿಮ್ಮ ಧರ್ಮಕಾರ್ಯಗಳನ್ನು ಜನರ ಮುಂದೆ ಮಾಡಬಾರದೆಂದು ಯೇಸುವು ಹೇಳಿದರು. ಇದೇ ಮೂಲತತ್ವವಾಗಿದೆ. ಜನರ ಗಮನ ಸೆಳೆಯಲಿಕ್ಕಾಗಿ ಇದನ್ನು ಮಾಡಬಾರದೆಂದು ಯೇಸುವು ಹೇಳಿದರು.

ಕೆಲವೊಮ್ಮೆ ಜನರು ನೋಡುವುದನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ, ಮತ್ತು ನಾವು ಕಾಣಿಕೆ ಕೊಡುವುದನ್ನು ಜನರು ಅಕಸ್ಮಾತ್ತಾಗಿ ನೋಡಿದರೆ, ಅಥವಾ ಅವರಿಗೆ ಕಾಣದಂತೆ ಮಾಡುವ ಮಾರ್ಗವೇ ಇಲ್ಲದಿದ್ದಲ್ಲಿ, ನಾವು ತಪ್ಪಿತಸ್ಥ ಭಾವನೆಯನ್ನು ಹೊಂದಬೇಕಿಲ್ಲ, ಆದರೆ ಜನರ ಮೆಚ್ಚುಗೆಗಾಗಿ ನಾವು ಈ ಕಾರ್ಯಗಳನ್ನು ಮಾಡದಂತೆ ನೋಡಿಕೊಳ್ಳಬೇಕು. ಅದೇ ಇಲ್ಲಿ ಹೇಳಿರುವ ಅಂಶವಾಗಿದೆ. ಇಲ್ಲವಾದಲ್ಲಿ ನಮಗೆ ಪರಲೋಕದಲ್ಲಿರುವ ತಂದೆಯಿಂದ ಫಲ ದೊರೆಯುವುದಿಲ್ಲ. ಈ ವಚನದ ಪ್ರಕಾರ (ಮತ್ತಾಯನು 6:1), ಕರ್ತನ ಕಾರ್ಯಕ್ಕಾಗಿ ಕೊಟ್ಟಿರುವಂತ ಅನೇಕ ಮಂದಿಗೆ ಪರಲೋಕದಲ್ಲಿ ಯಾವುದೇ ಪ್ರತಿಫಲ ದೊರೆಯುವುದಿಲ್ಲ, ಏಕೆಂದರೆ ತಾವು ಎಷ್ಟು ಕೊಟ್ಟೆವು ಎಂಬುದನ್ನು ಜನರು ನೋಡಬೇಕೆಂದು ಅವರು ಬಯಸಿದರು.

ನೀವು ರಹಸ್ಯವಾಗಿ ಕೊಡುವುದಾದರೆ, ನಿಮ್ಮ ತಂದೆಯಾದ ದೇವರು ರಹಸ್ಯವಾಗಿ ನೋಡಿ ನಿಮಗೆ ಪ್ರತಿಫಲವನ್ನು ಕೊಡುತ್ತಾರೆ. ನಾವು ಈ ಆಜ್ಞೆಯನ್ನು ಪಾಲಿಸಿದರೆ, ಆಗ ಕ್ರಿಸ್ತನು ಹಿಂದಿರುಗಿ ಬರುವ ಭವಿಷ್ಯದ ದಿನದಲ್ಲಿ, ತ್ಯಾಗದ ಮನಸ್ಸಿನಿಂದ ಮತ್ತು ರಹಸ್ಯವಾಗಿ ಕೊಟ್ಟವರಿಗಾಗಿ ಅದ್ಭುತ ಹಾಗೂ ಶ್ರೇಷ್ಠ ಬಹುಮಾನವನ್ನು ಕಾದಿರಿಸುತ್ತೇನೆಂದು ದೇವರು ವಾಗ್ದಾನ ಮಾಡಿದ್ದಾರೆ.