WFTW Body: 

ಒಮ್ಮೆ ನಾನು ಯಾವುದೋ ಒಂದು ದೇಶಕ್ಕೆ (ಅಲ್ಲಿ ಸುವಾರ್ತೆ ಸಾರುವುದನ್ನು ನಿಷೇಧಿಸಲಾಗಿತ್ತು) ಪ್ರಯಾಣಿಸಲು ತಯಾರಿ ಮಾಡುತ್ತಿದ್ದಾಗ, ಕರ್ತರು ನನಗೆ "ಮತ್ತಾಯನು 28:18-19"ರ ವಚನಗಳನ್ನು ನೆನಪಿಸಿದರು. ಆಗ ನಾನು ನೋಡಿದ್ದೇನೆಂದರೆ, ಕರ್ತರು ನಮಗೆ ಎಲ್ಲಾ ದೇಶಗಳಿಗೆ ಹೋಗಿ ಜನರನ್ನು ಶಿಷ್ಯರನ್ನಾಗಿ ಮಾಡುವಂತೆ ಆಜ್ಞಾಪಿಸುವುದಕ್ಕೆ ಕಾರಣವೇನೆಂದರೆ - ಸ್ವರ್ಗದಲ್ಲೂ ಭೂಲೋಕದಲ್ಲೂ ಎಲ್ಲಾ ಅಧಿಕಾರ ಅವರಿಗೆ ಕೊಡಲ್ಪಟ್ಟಿದೆ. ನಾವು ಎಲ್ಲಿಗೆ ಹೋಗುವಾಗಲೂ ಇದರ ಆಧಾರದ ಮೇಲೆ ಹೋಗದಿದ್ದರೆ, ನಾವು ಹೋದಲ್ಲೆಲ್ಲಾ ತೊಂದರೆಗಳನ್ನು ಎದುರಿಸ ಬೇಕಾಗುತ್ತದೆ.

ಮತ್ತಾಯ 28ನೇ ಅಧ್ಯಾಯದಲ್ಲಿನ ಮಹಾ ಆದೇಶದಲ್ಲಿ "ಆದ್ದರಿಂದ" ಎಂಬ ಪದವು ಅತ್ಯಂತ ಪ್ರಮುಖ ಪದವಾಗಿದೆ. ಅನೇಕ ಬೋಧಕರು "ಹೊರಟುಹೋಗು" ಎಂಬ ಪದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ. ಅದು ಒಳ್ಳೆಯದು. ಆದರೆ ನಾವು ಹೋಗುವಾಗ ಯಾವ ಆಧಾರದ ಮೇಲೆ ಹೋಗತಕ್ಕದ್ದು? ನಮ್ಮ ಕರ್ತರು ಈ ಭೂಲೋಕದ ಎಲ್ಲಾ ಜನರ ಮೇಲೆ ಮತ್ತು ಎಲ್ಲಾ ದೆವ್ವಗಳ ಮೇಲೂ ಸಹ ಸಂಪೂರ್ಣ ಅಧಿಕಾರ ಹೊಂದಿರುವುದರ ಆಧಾರದ ಮೇಲೆ. ಇದನ್ನು ನೀವು ನಂಬದೇ ಹೋದರೆ, ನೀವು ಎಲ್ಲಿಗೂ ಹೋಗದೇ ಇರುವುದೇ ಉತ್ತಮ!

ಆ ಸಮಯದಲ್ಲಿ ಮತ್ತಾಯ 28ನೇ ಅಧ್ಯಾಯದ ಈ ವಾಕ್ಯವು ನನಗೆ ಒಂದು ಹೊಸ ಪ್ರಕಟನೆಯಾಗಿ ಬಂದಿತು. ಆಗ ನಾನು ಯಾವುದೇ ಹಿಂಜರಿಕೆಯಿಲ್ಲದೆ ಆ ದೇಶಕ್ಕೆ ಹೋಗಬಹುದೆಂದು ಅರಿತುಕೊಂಡೆ. ನಾನು ಆ ದೇಶವನ್ನು ಪ್ರವೇಶಿಸಿದಾಗ, ನನ್ನಲ್ಲಿ ಸಹಜವಾಗಿ ಭಯವಿತ್ತು. ಆದರೆ ನಾನು ಆ ಭಯದ ಆಧಾರದ ಮೇಲೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ.

"ನಮ್ಮ ಕರ್ತರು ಪ್ರತಿಯೊಬ್ಬ ಮಾನವನ ಮೇಲೆ ಅಧಿಕಾರವನ್ನು ಹೊಂದಿದ್ದಾರೆ. ರಾಜನಾದ ನೆಬೂಕದ್ನೆಚ್ಚರನೂ ಸಹ ಇದನ್ನು ಅರ್ಥಮಾಡಿಕೊಂಡಿದ್ದನು."

ಈ ಲೋಕದಲ್ಲಿ ಕರ್ತನಾದ ಯೇಸುವಿಗೆ ಸಂಪೂರ್ಣ ಅಧಿಕಾರವಿಲ್ಲದ ಕೆಲವು ರಾಷ್ಟ್ರಗಳಿವೆಯೆಂದು ನೀವು ಭಾವಿಸಿದರೆ, ನೀವು ಅಲ್ಲಿಗೆ ಹೋಗಬೇಡಿರೆಂದು ನಾನು ನಿಮಗೆ ಸಲಹೆ ನೀಡುತ್ತೇನೆ! ಹಾಗಿದ್ದಲ್ಲಿ ನಾನೂ ಸಹ ಅಲ್ಲಿಗೆ ಹೋಗುತ್ತಿರಲಿಲ್ಲ. ನಾನೂ ಹೆದರಿಕೊಳ್ಳುತ್ತಿದ್ದೆ. ಆದರೆ ದೇವರಿಗೆ ಸ್ತೋತ್ರವಾಗಲಿ, ಅಂತಹ ಜಾಗ ಭೂಲೋಕದ ಯಾವ ಪ್ರದೇಶದಲ್ಲೂ ಇಲ್ಲ! ಈ ಭೂಲೋಕದ ಪ್ರತಿಯೊಂದು ಮೂಲೆಯೂ ಸಹ ನಮ್ಮ ಕರ್ತರ ಅಧಿಕಾರಕ್ಕೆ ಒಳಪಟ್ಟಿದೆ.

ಇದೇ ರೀತಿ, ಎಲ್ಲೋ ಒಂದೆಡೆ ಯಾರೋ ಒಬ್ಬ ವ್ಯಕ್ತಿ (ಆತನ ವಿಶೇಷ ಬಲದ ನಿಮಿತ್ತವಾಗಿ) ಕರ್ತರ ಅಧಿಕಾರಕ್ಕೆ ಒಳಗಾಗದೇ ಇದ್ದಾನೆ ಎಂದು ನೀವು ಭಾವಿಸಿದರೆ, ಆಗ ನೀವು ಯಾವಾಗಲೂ ಆ ವ್ಯಕ್ತಿಯ ಭಯದಲ್ಲಿ ಜೀವಿಸಬೇಕಾಗುತ್ತದೆ. ಆದರೆ ದೇವರಿಗೆ ಸ್ತೋತ್ರವಾಗಲಿ, ಅಂತಹ ಮನುಷ್ಯನು ಎಲ್ಲಿಯೂ ಇಲ್ಲ. ನಮ್ಮ ಕರ್ತರಿಗೆ ಪ್ರತಿಯೊಬ್ಬ ಮನುಷ್ಯನ ಮೇಲೂ ಅಧಿಕಾರವಿದೆ. ರಾಜನಾದ ನೆಬೂಕದ್ನೆಚ್ಚರನು ಕೂಡ ಇದನ್ನು ಅರ್ಥಮಾಡಿಕೊಂಡನು - ನಾವು ದಾನಿಯೇಲನು 4:35ರಲ್ಲಿ ಇದರ ಬಗ್ಗೆ ಓದಿಕೊಳ್ಳುತ್ತೇವೆ.

ನಮ್ಮ ಕರ್ತರು ಕಲ್ವಾರಿಯ ಶಿಲುಬೆಯ ಮೇಲೆ ಸೋಲಿಸದಿದ್ದಂತ ಒಂದು ದೆವ್ವವು ಎಲ್ಲೋ ಒಂದೆಡೆ ಇರುವುದಾದರೆ, ಮತ್ತು ಅದು ಹೇಗೋ ಸೋಲಿನಿಂದ ಪಾರಾಗಿ ಉಳಕೊಂಡಿದ್ದರೆ, ನಾವು ಯಾವಾಗಲೂ ಆ ದೆವ್ವದ ಭಯದಲ್ಲಿ ಜೀವಿಸಬೇಕಾಗುತ್ತದೆ. ಆದರೆ ಶಿಲುಬೆಯ ಮೇಲೆ ಸೋಲಿಸಲ್ಪಡದ ಇಂತಹ ಯಾವ ದೆವ್ವವೂ ಇಲ್ಲ. ಸ್ವತಃ ಸೈತಾನನೇ ಅಲ್ಲಿ ಶಾಶ್ವತವಾಗಿ ಸೋಲಿಸಲ್ಪಟ್ಟನು. ಈ ಜ್ಞಾನವು ನಮ್ಮನ್ನು ಸೈತಾನ ಮತ್ತು ಆತನ ದೆವ್ವಗಳ ಎಲ್ಲಾ ರೀತಿಯ ಭಯದಿಂದ ಸಂಪೂರ್ಣವಾಗಿ ಬಿಡುಗಡೆ ಮಾಡುತ್ತದೆ, ಮತ್ತು ನಮ್ಮ ಸೇವೆಯಲ್ಲಿ ನಮಗೆ ಹೆಚ್ಚಿನ ಧೈರ್ಯವನ್ನು ನೀಡುತ್ತದೆ.

ಹಾಗಾಗಿ ದೇವರು ನಮ್ಮನ್ನು ಎಲ್ಲಿಗೆ ಕಳುಹಿಸಿಕೊಟ್ಟರೂ ನಾವು ಹೋಗುತ್ತೇವೆ. ಕೆಲವು ಸ್ಥಳಗಳಲ್ಲಿ ಅಪಾಯಗಳಿರಬಹುದು. ಆದರೆ ನಮಗೆ ತಿಳಿದಷ್ಟು ಮಟ್ಟಿಗೆ ಕರ್ತನು ನಮ್ಮನ್ನು ಅಲ್ಲಿಗೆ ಕಳುಹಿಸುತ್ತಿರುವುದಾದರೆ, ಆಗ ನಾವು ಅಲ್ಲಿಗೆ ಹೋಗಲು ಭಯಪಡಬೇಕಾಗಿಲ್ಲ. ಒಂದು ಊರಿನಲ್ಲಿ ಕ್ರೈಸ್ತರು ಹಿಂಸೆಗೆ ಒಳಗಾಗಿದ್ದಾರೋ, ಇಲ್ಲವೋ ಎಂಬುದು ಮುಖ್ಯವಾದ ಪ್ರಶ್ನೆಯಲ್ಲ. ನಾವು ಕೇಳಬೇಕಾದ ಒಂದೇ ಪ್ರಶ್ನೆ ಏನೆಂದರೆ, ಕರ್ತರು ನಮ್ಮನ್ನು ಅಲ್ಲಿಗೆ ಹೋಗುವಂತೆ ಹೇಳಿದ್ದಾರೋ, ಇಲ್ಲವೋ ಎಂಬುದು. ಅವರು ಕಳುಹಿಸಿದ್ದರೆ, ಆಗ ಅವರ ಅಧಿಕಾರದ ಸಂಪೂರ್ಣ ಬೆಂಬಲ ನಮಗಿದೆ. ನಾವು ಯಾವುದೇ ರೀತಿಯ ಭಯಪಡುವ ಅವಶ್ಯಕತೆಯಿಲ್ಲ. ಆದರೆ ದೇವರು ನಮ್ಮನ್ನು ಒಂದು ಕಡೆಗೆ ಹೋಗಲು ಕರೆದಿಲ್ಲವಾದರೆ, ಆಗ ಜನರು ಎಷ್ಟೇ ಹೆಚ್ಚಾಗಿ ನಮ್ಮನ್ನು ಹೋಗುವಂತೆ ಒತ್ತಾಯಿಸಿದರೂ, ಅಥವಾ ನಮ್ಮ ಸಾಹಸದ ಮನೋಭಾವವು ನಮ್ಮನ್ನು ಹೋಗುವಂತೆ ಎಷ್ಟೇ ಮನವೊಲಿಸಿದರೂ, ನಾವು ಹೋಗಬಾರದು!

ನಾವು ಯಾವುದೋ ಒಂದು ಸ್ಥಳಕ್ಕೆ ಯಾಕೆ ಹೋಗಬಯಸುತ್ತೇವೆಂದು ನಮ್ಮನ್ನೇ ಪ್ರಶ್ನಿಸಿಕೊಳ್ಳಬೇಕು. ಒಂದು ವೇಳೆ ನಾವು ಶಿಷ್ಯರನ್ನು ಮಾಡುವುದಕ್ಕಾಗಿ ಹೋಗುತ್ತಿದ್ದರೆ, ಮತ್ತು ಇದನ್ನು ಬಿಟ್ಟರೆ ಬೇರೆ ಯಾವ ಹೆಬ್ಬಯಕೆ ಅಥವಾ ಪ್ರಮುಖ ನಿರೀಕ್ಷೆಯೂ ನಮ್ಮಲ್ಲಿ ಇಲ್ಲವಾದರೆ, ಆಗ "ನಾನು ಯುಗದ ಸಮಾಪ್ತಿಯವರೆಗೂ ನಿಮ್ಮ ಸಂಗಡ ಯಾವಾಗಲೂ ಇರುತ್ತೇನೆ" ಎಂದು ಕರ್ತರು ವಾಗ್ದಾನ ಮಾಡಿದ ಪ್ರಕಾರ, ಅವರು ನಮ್ಮೊಂದಿಗೆ ಇರುತ್ತಾರೆಂದು ನಮಗೆ ಖಚಿತವಾಗುತ್ತದೆ. ಆದರೆ ನಮ್ಮಲ್ಲಿ ಬೇರೆ ಉದ್ದೇಶಗಳು ಇರಬಹುದು. ಕರ್ತರು "ನಮ್ಮ ಹೃದಯದ ಮನೋಭಾವವನ್ನು ಪರೀಕ್ಷಿಸುತ್ತಾರೆ"(ಯೆರೆಮೀಯನು 12:3) ಮತ್ತು ನಮ್ಮ ಉದ್ದೇಶಗಳನ್ನು ಪರೀಕ್ಷಿಸುತ್ತಾರೆ.

ತನ್ನನ್ನು ಕ್ರೈಸ್ತ ವಿಶ್ವಾಸಿಯೆಂದು ಹೇಳಿಕೊಳ್ಳುವ ಪ್ರತಿಯೊಬ್ಬನಿಗೆ ಕರ್ತರು ತನ್ನನ್ನು ಒಪ್ಪಿಸಿಕೊಡುವುದಿಲ್ಲ. ಇದನ್ನು ನಾವು ಯೋಹಾನನು 2:24ರ ವಚನದಲ್ಲಿ ಓದಿಕೊಳ್ಳುತ್ತೇವೆ. ಆದರೆ ನೀನು ಈ ಕೆಳಗಿನ ಮಾತನ್ನು ಯಥಾರ್ಥವಾಗಿ ಹೇಳಬಹುದೋ ಎಂದು ನಿನ್ನನ್ನೇ ಪ್ರಶ್ನಿಸಿಕೋ:

"ಕರ್ತನೇ, ನೀನು ನನ್ನನ್ನು ಈ ಸ್ಥಳಕ್ಕೆ ಹೋಗಲು ಕರೆದಿದ್ದಿಯೆಂದು ನನಗೆ ಅನ್ನಿಸುತ್ತಿದೆ, ನಾನು ಆ ಒಂದೇ ಕಾರಣಕ್ಕಾಗಿ ಅಲ್ಲಿಗೆ ಹೋಗುತ್ತಿದ್ದೇನೆ. ಅದಲ್ಲದೆ, ನಾನು ಶಿಷ್ಯರನ್ನು ಮಾಡಿ, ತಂದೆ, ಮಗ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ಅವರಿಗೆ ದೀಕ್ಷಾಸ್ನಾನ ಮಾಡಿಸಲಿಕ್ಕಾಗಿ ಹಾಗೂ ನೀನು ಆಜ್ಞಾಪಿಸಿರುವ ಪ್ರತಿಯೊಂದು ಸಂಗತಿಯನ್ನು ಅವರಿಗೆ ಬೋಧಿಸಲಿಕ್ಕಾಗಿ ಹೋಗುತ್ತಿದ್ದೇನೆ. ನಾನು ಹಣ ಮಾಡಲು ಅಥವಾ ನನಗಾಗಿ ಹೆಸರನ್ನು ಗಳಿಸಲು ಅಥವಾ ಬೇರೆ ಯಾವುದೇ ವೈಯಕ್ತಿಕ ಕಾರಣಕ್ಕಾಗಿ ಅಲ್ಲಿಗೆ ಹೋಗುತ್ತಿಲ್ಲ."

ಒಂದು ವೇಳೆ ನೀವು ಇದನ್ನು ಯಥಾರ್ಥವಾಗಿ ಹೇಳಲು ಸಾಧ್ಯವಾದರೆ, ಆಗ ಕರ್ತರ ಅಧಿಕಾರವು ಯಾವಾಗಲೂ ನಿಮಗೆ ಬೆಂಬಲವಾಗಿ ಇರುವುದು ನಿಶ್ಚಯ.

ಆಗ ನಿಮ್ಮ ಹೆಂಡತಿ, ಮಕ್ಕಳಿಗೆ ಏನಾಗುತ್ತದೋ ಎಂಬುದಾಗಿ, ಅಥವಾ ನಿಮ್ಮ ಹಣದ ಅವಶ್ಯಕತೆಗಳು ಹೇಗೆ ಪೂರೈಸಲ್ಪಡುತ್ತವೆಯೋ ಎಂಬುದರ ಕುರಿತಾಗಿ ನೀವು ಚಿಂತಿಸುತ್ತಾ, ಭಯದಲ್ಲಿ ಜೀವಿಸಬೇಕಾಗಿಲ್ಲ. ಅಲ್ಲಿ ಮುಖ್ಯವಾದ ಒಂದೇ ಒಂದು ಪ್ರಶ್ನೆ ಏನೆಂದರೆ - "ದೇವರು ನಿಮ್ಮನ್ನು ಕರೆದಿದ್ದಾರೋ, ಇಲ್ಲವೋ?" ಎಂಬುದು. ದೇವರು ನಿಮ್ಮನ್ನು ಅಲ್ಲಿಗೆ ಕಳುಹಿಸುತ್ತಿದ್ದಾರೋ, ಅಥವಾ ಒಬ್ಬ ಮನುಷ್ಯನು ಕಳುಹಿಸುತ್ತಿದ್ದಾನೋ? ಅಥವಾ ನಿಮ್ಮ ಸಾಹಸದ ಆತ್ಮವು ನಿಮ್ಮನ್ನು ಅಲ್ಲಿಗೆ ನಡೆಸುತ್ತಿದೆಯೋ?

ನಿಮಗೆ ದೇವರ ಕಾರ್ಯಕ್ರಮಕ್ಕಿಂತ ಹೆಚ್ಚಾಗಿ ನಿಮ್ಮ ಸ್ವಂತದ ಕಾರ್ಯಕ್ರಮವಿದ್ದರೆ, ಆಗ ದೇವರ ವಾಕ್ಯದಿಂದ ನಿಮ್ಮ ಆದರಣೆಗಾಗಿ ಒಂದು ವಾಗ್ದಾನವನ್ನೂ ಸಹ ನಾನು ಕೊಡಲಾರೆ. ಆದರೆ ನಿಮ್ಮ ಕಾರ್ಯಕ್ರಮವು ದೇವರ ಕಾರ್ಯಕ್ರಮವೇ ಆಗಿದ್ದರೆ - ಶಿಷ್ಯರನ್ನು ಮಾಡುವುದು, ತಂದೆ, ಮಗ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ಅವರಿಗೆ ದೀಕ್ಷಾಸ್ನಾನ ಮಾಡಿಸುವುದು ಮತ್ತು ಯೇಸುವು ಆಜ್ಞಾಪಿಸಿದ್ದೆಲ್ಲವನ್ನು ಅವರು ಮಾಡುವಂತೆ ಕಲಿಸಿಕೊಡುವುದು - ಆಗ ಮನುಷ್ಯರಿಗಾಗಲೀ ಅಥವಾ ದೆವ್ವಗಳಿಗಾಗಲೀ ನೀವು ಭಯಪಡಬೇಕಿಲ್ಲವೆಂದು ನಾನು ನಿಮಗೆ ಭರವಸೆ ಕೊಡುತ್ತೇನೆ.