ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮನೆ ಸಭೆ
WFTW Body: 

ಭೂಲೋಕದಲ್ಲಿ ಎಲ್ಲಾ ಅಧಿಕಾರವೂ ನಮ್ಮ ಕರ್ತರಾದ ದೇವರ ಕೈಯಲ್ಲಿ ಇರುವುದರಿಂದ, ನೀವು ಎಲ್ಲಕ್ಕಿಂತ ಹೆಚ್ಚಾಗಿ ದೇವರ ರಾಜ್ಯಕ್ಕಾಗಿ ತವಕಿಸುವುದಾದರೆ ಮತ್ತು ದೇವರೊಬ್ಬರನ್ನೇ ಮೆಚ್ಚಿಸಲು ಬಯಸುವುದಾದರೆ, ನಿಮ್ಮ ಜೀವಿತಗಳಲ್ಲಿ ದೇವರ ಸಂಕಲ್ಪವು - ಅದರ ಪ್ರತಿಯೊಂದು ಅಂಶವೂ - ನೆರವೇರುವುದನ್ನು ಯಾರೂ ತಡೆಯಲಾರರು. ಪಿಲಾತನ ಎದುರು ಯೇಸುವು ಎರಡು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದರು:
(1) "ನನ್ನ ರಾಜ್ಯವು ಈ ಲೋಕದ್ದಲ್ಲ; ಹಾಗಾಗಿ ನಾನು ಲೌಕಿಕ ಸಂಗತಿಗಳಿಗಾಗಿ ಕಾದಾಡುವುದಿಲ್ಲ"(ಯೋಹಾ. 18:36).

(2) "ನನ್ನ ತಂದೆಯಾದ ದೇವರು ನಿನಗೆ ಕೊಟ್ಟಿರುವ ಅಧಿಕಾರಕ್ಕೆ ಹೊರತಾಗಿ, ನನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇರುವುದಿಲ್ಲ"(ಯೋಹಾ. 19:11).

ಪೌಲನು ತಿಮೊಥೆಯನಿಗೆ ಇವೆರಡು ಅಂಶಗಳ ಸಾಕ್ಷಿಯನ್ನೇ ನೆನಪಿಸಿ, ಆತನು ಕರ್ತನಿಗಾಗಿ ಒಳ್ಳೆಯ ಸಾಕ್ಷಿಯಾಗಿರಬೇಕೆಂದು ಹೇಳಿದನು (1 ತಿಮೊ. 6:13,14).

ನಾನು ಸಹ ಸಂಕಟದ ಸಂದರ್ಭಗಳಲ್ಲಿ ಹಾಗೂ ಜನರ ಕಿರುಕುಳಗಳ ನಡುವೆ, ದೇವರ ಮುಂದೆಯೂ, ಸೈತಾನನ ಮುಂದೆಯೂ ಮತ್ತು ಜನರ ನಡುವೆಯೂ ಇದನ್ನೇ ಅರಿಕೆಮಾಡಿದ್ದೇನೆ.

ನಿಮ್ಮ ಜೀವಿತದಲ್ಲಿ ಯಾವುದೇ ವಿಗ್ರಹ ಇಲ್ಲದಿದ್ದಲ್ಲಿ ಮಾತ್ರ ನೀವು ಯಾವಾಗಲೂ ಸಮಾಧಾನವನ್ನು ಹೊಂದಬಹುದು. ಅನೇಕ ಕ್ರೈಸ್ತರಿಗೆ ಒಳ್ಳೆಯ ನೌಕರಿಗಳು, ಉತ್ತಮ ಮನೆಗಳು ಮತ್ತು ಲೌಕಿಕ ಸೌಕರ್ಯಗಳು ವಿಗ್ರಹಗಳಾಗಿವೆ. ಇದು ಮರದ ತುಂಡಿನ ಅಥವಾ ಕಲ್ಲಿನ ಒಂದು ವಿಗ್ರಹದ ಆರಾಧನೆಗಿಂತ ಕಡಿಮೆಯಾದದ್ದೇನೂ ಅಲ್ಲ! ಆದರೆ ಅನೇಕ ಕ್ರೈಸ್ತರು ಇದನ್ನು ಅರಿತುಕೊಂಡಿಲ್ಲ. ಅಬ್ರಹಾಮನಿಗೆ ಇಸಾಕನು ಒಂದು ವಿಗ್ರಹವಾದಂತೆ, ದೇವರ ಆತ್ಮಿಕ ವರಗಳು ಸಹ (ಉದಾಹರಣೆಗೆ ಸೇವೆಯ ವರ) ಒಂದು ವಿಗ್ರಹವಾಗಬಹುದು. ದೇವರು ಮಾತ್ರವೇ ನಮಗೆ ಸರ್ವಸ್ವವೂ ಆದಾಗ ಮಾತ್ರ ಮತ್ತು ನಾವು ಪೂರ್ಣ ಹೃದಯದಿಂದ ಕರ್ತರಿಗೆ, "ಕರ್ತನೇ, ನಾನು ಇಹಲೋಕದಲ್ಲಿ ನಿನ್ನನ್ನಲ್ಲದೆ ಇನ್ನಾವುದನ್ನೂ ಮತ್ತು ಇನ್ನಾರನ್ನೂ ಬಯಸುವುದಿಲ್ಲ"(ಕೀರ್ತನೆಗಳು 73:25), ಎಂದು ಯಥಾರ್ಥವಾಗಿ ಹೇಳಲು ಸಾಧ್ಯವಾದಾಗ ಮಾತ್ರ, ನಾವು ವಿಗ್ರಹಾರಾಧನೆಯಿಂದ ಮುಕ್ತರಾಗಿದ್ದೇವೆಂದು ಹೇಳಬಹುದು ಮತ್ತು ಕರ್ತರನ್ನು ಆರಾಧಿಸಲು ಪ್ರಾರಂಭಿಸಬಹುದು. ನೀವೆಲ್ಲರೂ ಪ್ರತಿಯೊಂದು ವಿಗ್ರಹದಿಂದ ಮುಕ್ತರಾಗಿ ಕರ್ತರನ್ನು ಮಾತ್ರ ಆರಾಧಿಸಬೇಕು ಎಂಬುದಾಗಿ ನಾನು ಪ್ರಾರ್ಥಿಸುತ್ತೇನೆ.

"ಯಾವಾಗಲೂ ನಮ್ಮ ನಂಬಿಕೆ ಮತ್ತು ಭರವಸೆ ದೇವರಲ್ಲಿ ಮಾತ್ರವೇ ಇರಬೇಕು"

ಯಾವಾಗಲೂ ನಮ್ಮ ನಂಬಿಕೆ ಮತ್ತು ಭರವಸೆ ದೇವರಲ್ಲಿ ಮಾತ್ರವೇ ಇರಬೇಕು - ಮತ್ತು ಎಂದಿಗೂ ಮನುಷ್ಯನಲ್ಲಿ ಅಲ್ಲ, ಇಲ್ಲವಾದಲ್ಲಿ ಯೆರೆ. 17:5,6'ರ ಶಾಪವು ನಮ್ಮನ್ನು ಕಂಗಾಲುಗೊಳಿಸುವುದು: "ಕರ್ತನು ಹೀಗೆನ್ನುತ್ತಾನೆ, ಮಾನವಮಾತ್ರದವರಲ್ಲಿ ಭರವಸವಿಟ್ಟು ನರಜನ್ಮದವರನ್ನು ತನ್ನ ಭುಜಬಲವೆಂದು ತಿಳಿದು, ಕರ್ತನನ್ನು ತೊರೆಯುವ ಮನಸ್ಸುಳ್ಳವನು ಶಾಪಗ್ರಸ್ತನು. ಇವನು ಅಡವಿಯಲ್ಲಿನ ಜಾಲಿಗೆ ಸಮಾನನು; ಶುಭ ಸಂಭವಿಸಿದರೂ ಅವನು ಕಾಣನು; ಯಾರೂ ವಾಸಿಸದ ಚೌಳು ನೆಲವಾಗಿರುವ ಅರಣ್ಯದ ಬೆಗ್ಗಾಡಿನಲ್ಲಿ ವಾಸಿಸುವ ಸ್ಥಿತಿಯೇ ಅವನದು."

ನಮ್ಮ ನಿಜವಾದ ಸಂಪತ್ತು ಹಣ ಅಥವಾ ಆಸ್ತಿಯ ಆಧಾರದ ಮೇಲೆ ಎಣಿಸಲ್ಪಡುವುದಿಲ್ಲ, ಆದರೆ ಸೋಲುಗಳು ಹಾಗೂ ಕಷ್ಟಕರ ಬಾಧೆಗಳ ಮೂಲಕ ಪ್ರಾಪ್ತವಾಗುವ ದೇವರ ಜ್ಞಾನವೇ ನಮ್ಮ ಸಂಪತ್ತಾಗಿದೆ. ಇದನ್ನು ಯೆರೆ. 9:23,24 (LIVING BIBLE ಭಾಷಾಂತರ) ಈ ರೀತಿ ವರ್ಣಿಸುತ್ತದೆ: "ಜ್ಞಾನಿಯು ತನ್ನ ಜ್ಞಾನಕ್ಕೆ, ಪರಾಕ್ರಮಿಯು ತನ್ನ ಪರಾಕ್ರಮಕ್ಕೆ, ಐಶ್ವರ್ಯವಂತನು ತನ್ನ ಐಶ್ವರ್ಯಕ್ಕೆ ಹೆಚ್ಚಳಪಡದಿರಲಿ; ಹೆಚ್ಚಳಪಡುವವನು ತಾನು ನನ್ನನ್ನು ತಿಳಿದು, ನಾನು ಲೋಕದಲ್ಲಿ ಪ್ರೀತಿ, ನೀತಿ ನ್ಯಾಯಗಳನ್ನು ತೋರ್ಪಡಿಸುವ ಕರ್ತನಾಗಿರುವೆನು ಎಂದು ಗ್ರಹಿಸಿಕೊಂಡಿದ್ದೇನೆ, ಎಂಬುದಕ್ಕೇ ಹೆಚ್ಚಳಪಡಲಿ; ನನಗೆ ಪ್ರೀತಿ, ನೀತಿ ನ್ಯಾಯಗಳೇ ಆನಂದವು." ಅಂತಿಮವಾಗಿ ಇದೊಂದೇ ಮೌಲ್ಯವುಳ್ಳದ್ದಾಗಿದೆ. ಅದಕ್ಕೆ ಹೋಲಿಸಿದಾಗ, ಲೋಕದ ಪ್ರತಿಯೊಂದು ಸಾಧನೆಯೂ ಕಸಕ್ಕೆ ಸಮನಾಗಿದೆ. ನಾವು ಈ ಸತ್ಯಾಂಶವನ್ನು ಎಷ್ಟು ಬೇಗನೆ ಕಂಡುಕೊಳ್ಳುತ್ತೇವೋ, ನಾವು ಅಷ್ಟೇ ಹೆಚ್ಚು ಬುದ್ಧಿವಂತರಾಗುತ್ತೇವೆ.