ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ಶಿಷ್ಯಂದಿರಿಗೆ
WFTW Body: 

"ನೀತಿಗಾಗಿ ಹಸಿದು ಬಾಯಾರಿದವರು ಧನ್ಯರು; ಅವರು ತುಂಬಿಸಲ್ಪಡುವರು (ಅಥವಾ ತೃಪ್ತಿ ಹೊಂದುವರು)," ಎಂದು ಯೇಸು ಹೇಳಿದರು (ಮತ್ತಾ. 5:6). ಆದ್ದರಿಂದ, ಒಬ್ಬ ವ್ಯಕ್ತಿಯು, "ಓ ಸಹೋದರರೇ, ನಾನು ಪಾಪದ ಮೇಲೆ ಜಯ ಹೊಂದಲು ಬಹಳ ಪ್ರಯತ್ನಿಸುತ್ತಿದ್ದೇನೆ, ಆದರೆ ಅದು ನನಗೆ ಸಾಧ್ಯವಾಗಿಲ್ಲ," ಎಂದು ಹೇಳುವುದಾದರೆ, ನಾನು ಆತನಿಗೆ ಈ ವಾಕ್ಯದ ಆಧಾರದ ಮೇಲೆ ಹೇಳುವುದು ಏನೆಂದರೆ, ನೀತಿವಂತನಾಗಲು ಆತನಲ್ಲಿ ನಿಜವಾದ ಹಸಿವು ಮತ್ತು ದಾಹವಿಲ್ಲ, ಎಂಬುದಾಗಿ. ಆತನಲ್ಲಿ ಪಾಪವನ್ನು ಜಯಿಸುವಂತ ತೀವ್ರವಾದ ಹಂಬಲವಿಲ್ಲ.

ಯೇಸುವು ಪಾಪವನ್ನು ಜಯಿಸಲು ಹೇಗೆ ಪ್ರಾರ್ಥಿಸಿದರೆಂಬುದಾಗಿ ಆಲೋಚಿಸಿರಿ. ಕ್ರಿಸ್ತನು ಭೂಲೋಕದಲ್ಲಿ ಇದ್ದಾಗ ಅವರು ಎಲ್ಲಾ ವಿಷಯಗಳಲ್ಲಿ ನಮ್ಮ ಹಾಗೆಯೇ ಶೋಧಿಸಲ್ಪಟ್ಟರು, ಆದರೆ ಪಾಪವನ್ನು ಮಾತ್ರ ಮಾಡಲಿಲ್ಲ ಎಂಬುದಾಗಿ ನಮಗೆ ಗೊತ್ತಿದೆ, ಆದರೆ ಅದು ಆತನಿಗೆ ಸುಲಭವಾಗಿರಲಿಲ್ಲ. ಯೇಸುವು ಶೋಧನೆಯನ್ನು ಹೇಗೆ ಎದುರಿಸಿದರು ಎಂಬುದಾಗಿ ಇಬ್ರಿ. 5'ನೇ ಅಧ್ಯಾಯವು ನಮಗೆ ತಿಳಿಸುತ್ತದೆ. ಅವರು ನಮ್ಮ ಹಾಗೆಯೇ ಸರ್ವ ವಿಷಯಗಳಲ್ಲಿ ಶೋಧನೆಗೆ ಗುರಿಯಾದರು ಎಂದು ನಾವು ಇಬ್ರಿ. 4:15'ರಲ್ಲಿ ಓದಿಕೊಳ್ಳುತ್ತೇವೆ, ಮತ್ತು ದೇವರ ವಾಕ್ಯವು ಅಲ್ಲಿಂದ ಮುಂದೆ, ಯೇಸುವು ಮೆಲ್ಕಿಜೆದೇಕನ ತರಹದ ಮಹಾಯಾಜಕನು, ಎಂಬುದಾಗಿ ತಿಳಿಸುತ್ತದೆ (ಇಬ್ರಿ. 5:6). ಮುಂದೆ 7ನೇ ವಚನವು, "ಕ್ರಿಸ್ತನು ತಾನು ಭೂಲೋಕದಲ್ಲಿ ಇದ್ದಾಗ ಮರಣಕ್ಕೆ ತಪ್ಪಿಸಿ ಕಾಪಾಡ ಶಕ್ತನಾಗಿರುವಾತನಿಗೆ ಬಲವಾಗಿ ಕೂಗುತ್ತಾ ಕಣ್ಣೀರನ್ನು ಸುರಿಸುತ್ತಾ ಪ್ರಾರ್ಥನೆ ವಿಜ್ಞಾಪನೆಗಳನ್ನು ಸಮರ್ಪಿಸಿದನು, ಮತ್ತು ದೇವರ ಮೇಲಣ ಭಯಭಕ್ತಿಯ ನಿಮಿತ್ತ ಕೇಳಲ್ಪಟ್ಟನು," ಎಂಬುದಾಗಿ ಹೇಳುತ್ತದೆ (ಇಬ್ರಿ. 5:7). ಇದು ಗೆತ್ಸೇಮನೆ ತೋಟದಲ್ಲಿ ಯೇಸುವಿನ ಭೂಲೋಕದ ಜೀವಿತದ ಕೊನೆಯ ದಿನದ ಬಗ್ಗೆ ಮಾತನಾಡುತ್ತಿಲ್ಲ, ಆದರೆ ಆತನು ಮಾನವನಾಗಿ ಭೂಲೋಕದಲ್ಲಿ ಜೀವಿಸಿದ ಸಂಪೂರ್ಣ ಕಾಲಾವಧಿ - ಅಂದರೆ 33 1/2 ವರ್ಷಗಳ ಕಾಲಾವಧಿಯಲ್ಲಿ ಪ್ರಾರ್ಥನೆ ವಿಜ್ಞಾಪನೆಗಳನ್ನು ಸಮರ್ಪಿಸುತ್ತಿದ್ದುದಾಗಿ ತಿಳಿಸುತ್ತದೆ.
ವಿಜ್ಞಾಪನೆಗಳೆಂದರೆ ತಂದೆಗೆ ಯೇಸುವು ಮಾಡಿದ ನಿರ್ದಿಷ್ಟ ಬೇಡಿಕೆಗಳು. ಅವು ಕೇವಲ "ನನ್ನನ್ನು ಆಶೀರ್ವದಿಸಿ" ಎನ್ನುವ ಸಾಮಾನ್ಯ ಪ್ರಾರ್ಥನೆಗಳಾಗಿರಲಿಲ್ಲ, ಅವು ನಿರ್ದಿಷ್ಟ ವಿನಂತಿಗಳಾಗಿದ್ದವು. ಆತನು ಈ ವಿಜ್ಞಾಪನೆಗಳನ್ನು ಗಟ್ಟಿಯಾಗಿ ಅಳುತ್ತಾ ಮತ್ತು ಕಣ್ಣೀರಿನೊಂದಿಗೆ ಅರ್ಪಿಸಿದನು. ಯಾವುದಕ್ಕಾಗಿ ಆತನು ಗಟ್ಟಿಯಾಗಿ ಅಳುತ್ತಾ ಕಣ್ಣೀರಿಡುತ್ತಾ ಪ್ರಾರ್ಥನೆ ಮಾಡಿದನು? ಯೇಸು ಹಾಗೆ ಪ್ರಾರ್ಥಿಸುವುದು ಅವಶ್ಯವಾಗಿತ್ತೇ? ನೀವು ನಿಮ್ಮ ಜೀವಿತದಲ್ಲಿ ಎಂದಾದರೂ ಹಾಗೆ ಕಣ್ಣೀರುಡುತ್ತಾ ಪ್ರಾರ್ಥಿಸಿದ ಸಮಯವನ್ನು ನೆನಪಿಸಿಕೊಳ್ಳಬಲ್ಲಿರಾ? ನಿಮ್ಮ ಮಗು ಅನಾರೋಗ್ಯದಿಂದ ಬಳಲುತ್ತಿದ್ದಾಗ, ಅಥವಾ ನೀವು ಬಹಳವಾಗಿ ಬಯಸಿದ್ದನ್ನು ಕಳೆದುಕೊಂಡಾಗ, ನೀವು ಅಳುತ್ತಾ ದೇವರಲ್ಲಿ ಪ್ರಾರ್ಥಿಸಿರಬಹುದು. ಆದರೆ ಯೇಸು ಅಂತಹ ಯಾವುದಕ್ಕಾಗಿಯೂ ಪ್ರಾರ್ಥಿಸಲಿಲ್ಲ. ನೀವು ಎಂದಾದರೂ ಗೋಳಾಡುತ್ತಾ ಪ್ರಾರ್ಥಿಸಿದ್ದೀರಾ? ಬಹುಶಃ ಯಾರಾದರೂ ಸತ್ತಾಗ ಅಥವಾ ಯಾವುದೋ ದುರಂತ ಸಂಭವಿಸಿದಾಗ ಹಾಗೆ ಪ್ರಾರ್ಥಿಸಿರಬಹುದು, ಆದರೆ ಯೇಸುವು ಪ್ರಾರ್ಥಿಸಿದ ಸಂದರ್ಭ ಇಂಥದ್ದಾಗಿರಲಿಲ್ಲ. ಆತನು ಮರಣದಿಂದ ತಪ್ಪಿಸಲು ಶಕ್ತನಾಗಿರುವಾತನಿಗೆ (ಅಂದರೆ ತಂದೆಯಾದ ದೇವರಿಗೆ) ಬಲವಾಗಿ ಕೂಗುತ್ತಾ ಕಣ್ಣೀರನ್ನು ಸುರಿಸುತ್ತಾ ಪ್ರಾರ್ಥನೆ ವಿಜ್ಞಾಪನೆಗಳನ್ನು ಸಮರ್ಪಿಸಿದನೆಂದು ಈ ವಚನ ಹೇಳುತ್ತದೆ. ಮತ್ತು ಆತನ ದೇವಭಯದ ನಿಮಿತ್ತವಾಗಿ ಆತನ ಪ್ರಾರ್ಥನೆಗೆ ಉತ್ತರ ದೊರಕಿತು.

ನೀತಿಗಾಗಿ ಹಸಿದು ಮತ್ತು ಬಾಯಾರುವುದು ಎಂದರೇನು ಎಂಬುದರ ಕುರಿತು ಈ ವಚನವು ಕಲಿಸುವ ಹಲವಾರು ವಿಷಯಗಳಿವೆ. ನೀತಿವಂತಿಕೆಯು ಯೇಸುವಿಗೆ ಬಹಳ ಸಲೀಸಾಗಿ, ನಮಗಿಂತ ವಿಭಿನ್ನವಾದ ರೀತಿಯಲ್ಲಿ ಒದಗಿ ಬರಲಿಲ್ಲ. ಆತನು ಅದಕ್ಕಾಗಿ ನಮ್ಮಂತೆಯೇ ಹಸಿವು ಮತ್ತು ಬಾಯಾರಿಕೆಯೊಂದಿಗೆ ಹೋರಾಡಿದನು. ಏಕೆಂದರೆ ಅವನು ನಮಗೆ ಮಾದರಿಯಾಗುವ ಉದ್ದೇಶದಿಂದ ನಮ್ಮಂತೆಯೇ ಸಾಮಾನ್ಯ ಮನುಷ್ಯನಾಗಿ ಬಂದರು ಸಹ ಆತನು ನಾವು ಎದುರಿಸುವ ಪ್ರತಿಯೊಂದು ಸನ್ನಿವೇಶವನ್ನು, ಪ್ರತಿಯೊಂದು ಶೋಧನೆಯನ್ನು ಎದುರಿಸಿದನು ಮತ್ತು ಆ ಶೋಧನೆಯನ್ನು ಜಯಸಲು ನಾವು ಹೋರಾಡುವ ರೀತಿಯಲ್ಲಿಯೇ ಆತನು ಹೋರಾಡಿದನು. ಆತನನ್ನು ಮರಣದಿಂದ ರಕ್ಷಿಸಲು ಶಕ್ತನಾದವನಿಗೆ ಪ್ರಾರ್ಥಿಸುವುದು ಎಂಬುದರ ಅರ್ಥ ಇದೇ ಆಗಿದೆ.
ಯಾವ ಸಾವಿನ ಬಗ್ಗೆ ಸತ್ಯವೇದವು ಮಾತನಾಡುತ್ತಿದೆ? ಯೇಸು ಕಲ್ವಾರಿಗೆ ಹೋಗಲು ಹೆದರಲಿಲ್ಲ. ಆತನು ನಮ್ಮನ್ನು ಎಷ್ಟು ಪ್ರೀತಿಸಿದನೆಂದರೆ, ನಮ್ಮನ್ನು ನಮ್ಮ ಪಾಪಗಳಿಂದ ರಕ್ಷಿಸಲು ಆತನು ಸಾವಿರ ಸಲ ಕಲ್ವಾರಿಗೆ ಹೋಗುವುದಕ್ಕೂ ಸಿದ್ಧನಿದ್ದನು. ಆತನು ಶರೀರದ ಮರಣಕ್ಕೆ ಭಯಪಡಲಿಲ್ಲ. ಕ್ರೈಸ್ತ ಹುತಾತ್ಮರು ಹಾಡುತ್ತಾ ಮರಣಕ್ಕೆ ತಮ್ಮನ್ನು ಒಪ್ಪಿಸಿಕೊಟ್ಟಿರುವಾಗ, ಯೇಸುವು ಎಂದಾದರೂ ಅದಕ್ಕೆ ಭಯಪಡಲು ಸಾಧ್ಯವಿತ್ತೇ? ಆತನ ಪ್ರಾರ್ಥನೆ "ಕೇಳಲ್ಪಟ್ಟಿತು" ಎಂದು ಸಹ ಆ ವಚನವು ಹೇಳುತ್ತದೆ, ಆದರೆ ಆತನ ದೇಹವು ಮರಣದಿಂದ ರಕ್ಷಿಸಲ್ಪಡಲಿಲ್ಲ. ಹಾಗಾದರೆ ಆ ಪ್ರಾರ್ಥನೆ ಯಾವ ರೀತಿ ಕೇಳಲ್ಪಟ್ಟಿತು? ಮೇಲಿನ ಎರಡು ಅಂಶಗಳನ್ನು ನೋಡುವಾಗ, ಆತನು ಇನ್ನೊಂದು ವಿಧವಾದ ಮರಣದಿಂದ ತನ್ನನ್ನು ತಪ್ಪಿಸಲಿಕ್ಕಾಗಿ ಪ್ರಾರ್ಥಿಸಿದನು ಎಂಬುದನ್ನು ಅದು ಸೂಚಿಸುತ್ತದೆ.

ಸತ್ಯವೇದವು ಶರೀರದ ಸಾವು ಮತ್ತು ಆತ್ಮದ ಸಾವಿನ ಬಗ್ಗೆ ಮಾತನಾಡುತ್ತದೆ. "ಪಾಪವು ತುಂಬಾ ಬೆಳೆದಾಗ ಅದು ಮರಣವನ್ನು ಹುಟ್ಟಿಸುತ್ತದೆ," ಎಂದು ಯಾಕೋಬ. 1'ನೇ ಅಧ್ಯಾಯದಲ್ಲಿ ಹೇಳಲ್ಪಟ್ಟಿದೆ. ನೀವು ಆಶಾಪಾಶಕ್ಕೆ ಒಳಗಾಗಿ ಅದರ ಸೆಳೆತಕ್ಕೆ ಶರಣಾದರೆ, ಅದು ಪಾಪಕ್ಕೆ ಕಾರಣವಾಗುತ್ತದೆ, ಮತ್ತು ಮರಣದಲ್ಲಿ ಕೊನೆಗೊಳ್ಳುತ್ತದೆ. ಯೇಸುವು ಬಿಡುಗಡೆಗಾಗಿ ಕೇಳಿಕೊಂಡದ್ದು ಇಂತಹ ಶೋಧನೆಯ ಕ್ಷಣದ ಮರಣದಿಂದ (ಆತ್ಮಿಕ ಮರಣ); ಅಂದರೆ, ತಾನು ಯಾವುದೇ ರೀತಿಯ ಶೋಧನೆಯಿಂದ - ಆಲೋಚನೆ, ಭಾವನೆ, ಉದ್ದೇಶ, ಮಾತು ಅಥವಾ ಕಾರ್ಯಗಳಲ್ಲಿ - ಪ್ರೇರೇಪಿಸಲ್ಪಟ್ಟು, ಆ ಪಾಪದ ಮೂಲಕ ತನ್ನ ಜೀವಿತದಲ್ಲಿ ಆತ್ಮಿಕ ಮರಣಕ್ಕೆ ಅವಕಾಶ ಕೊಡಬಾರದು ಎಂಬುದಾಗಿ. ಯೇಸುವು ಸಂಪೂರ್ಣ ಪರಿಶುದ್ಧತೆಗಾಗಿ ಮತ್ತು ತಂದೆಯ ಮೆಚ್ಚುಗೆಯನ್ನು ಗಳಿಸುವುದಕ್ಕಾಗಿ ಬಹಳ ಉತ್ಸುಕನಾಗಿದ್ದುದರಿಂದ, ಆತನು ಜೋರಾಗಿ ಗೋಳಿಡುತ್ತಾ ಕಣ್ಣೀರಿನೊಂದಿಗೆ ಪ್ರಾರ್ಥಿಸಲು ಹಿಂಜರಿಯಲಿಲ್ಲ.

"ಯೇಸುವು ಕಲ್ವಾರಿಯ ಮರಣಕ್ಕೆ ಅಂಜಲಿಲ್ಲ. ಅವರು ನಮ್ಮನ್ನು ಎಷ್ಟು ಹೆಚ್ಚಾಗಿ ಪ್ರೀತಿಸಿದರೆಂದರೆ, ನಮ್ಮನ್ನು ನಮ್ಮ ಪಾಪಗಳಿಂದ ಬಿಡುಗಡೆಗೊಳಿಸಲು ಸಾವಿರ ಸಲ ಕಲ್ವಾರಿಗೆ ಹೋಗುವುದಕ್ಕೂ ಅವರು ಸಿದ್ಧರಾಗಿದ್ದರು"

ನಜರೇತಿನಲ್ಲಿ 30 ವರ್ಷಗಳ ಕಾಲ ಹಾಗೂ ತನ್ನ ಸೇವೆಯ ಮೂರೂವರೆ ವರ್ಷಗಳ ಕಾಲ (ಅಂದರೆ ಇಡೀ ಜೀವಿತದಲ್ಲಿ), ಆತನ ಪ್ರಾರ್ಥನೆ, "ತಂದೆಯೇ, ನಾನು ಎಂದಿಗೂ ಪಾಪ ಮಾಡಲು ಬಯಸುವುದಿಲ್ಲ. ಎಂದಿಗೂ ನನ್ನ ಸ್ವಂತ ಚಿತ್ತದಂತೆ ನಡೆಯಲು (ಅದು ಸಕಲ ಪಾಪಗಳ ಮೂಲವಾಗಿದೆ) ಬಯಸುವುದಿಲ್ಲ," ಎಂದು. ಗೆತ್ಸೇಮನೆಯಲ್ಲಿ ಆತನು ಅದೇ ಉದ್ದೇಶಕ್ಕಾಗಿ ಹೋರಾಡುತ್ತಾ ಪ್ರಾರ್ಥಿಸಿದಾಗ, ಆತನ ಬೆವರು ರಕ್ತದ ದೊಡ್ಡ ಹನಿಗಳಂತೆ ಸುರಿಯಿತು, ಏಕೆಂದರೆ ಆತನು ಎಂದಿಗೂ ತನ್ನ ಸ್ವಂತ ಚಿತ್ತವನ್ನು ಮಾಡಲು ಬಯಸಲಿಲ್ಲ; ಹಾಗಾಗಿ, ದೇವಭಯದ ನಿಮಿತ್ತವಾಗಿ, ಆತನ ಪ್ರಾರ್ಥನೆಗೆ ಉತ್ತರ ದೊರಕಿತು.

ಹಾಗಾದರೆ ಈ ವಚನದ ಪ್ರಕಾರ, ದೇವಭಯದ ಗುರುತು ಏನು? ದೇವಭಯದ ಒಂದು ಗುರುತು ಏನೆಂದರೆ ದೇವರನ್ನು ಯಾವುದೇ ರೀತಿಯಲ್ಲಿ ಅಸಂತೋಷಗೊಳಿಸದಂತೆ ನಡೆಯಬೇಕೆಂದು ನೀವು ದೇವರನ್ನು ಬಹಳ ಆಸಕ್ತಿಯಿಂದ ಬೇಡಿಕೊಳ್ಳುವುದು. ಮತ್ತು ಆತನು ರಕ್ಷಿಸಲ್ಪಟ್ಟನು, ಆತನ ಪ್ರಾರ್ಥನೆಗಳು ಕೇಳಲ್ಪಟ್ಟವು ಮತ್ತು ಆತನು ಎಂದಿಗೂ ಪಾಪ ಮಾಡಲಿಲ್ಲ. ಬಹುಶಃ ನಾವು ಪಾಪ ಮಾಡುವುದಕ್ಕೆ ಕಾರಣವೇನೆಂದರೆ ಪಾಪದ ಬಿಡುಗಡೆಗಾಗಿ ನಾವು ಅಷ್ಟೊಂದು ತವಕಿಸುತ್ತಿಲ್ಲ. "ಜಾರತ್ವದಿಂದ ದೂರ ಓಡಿಹೋಗು” ಎಂದು ಸತ್ಯವೇದ ಹೇಳುತ್ತದೆ. ದೈವಿಕ ಜೀವಿತದ ರಹಸ್ಯ ಇಲ್ಲಿ ಅಡಗಿದೆ. ಮೊದಲನೇ ಹೆಜ್ಜೆ ಏನೆಂದರೆ . "ನೀತಿಗಾಗಿ ಹಸಿದು ಬಾಯಾರಿದವರು ಧನ್ಯರು." ಮತ್ತು ಅಲ್ಲೇ ಒಂದು ವಾಗ್ದಾನವು ಕೊಡಲ್ಪಟ್ಟಿದೆ: ನೀವು ತೃಪ್ತಿಗೊಳ್ಳುವಿರಿ! ಇದರ ಬಗ್ಗೆ ಸಂಶಯವೇ ಇಲ್ಲ.