ನಮ್ಮ ನಂಬಿಕೆಯು ದೃಢವಾಗಬೇಕಾದರೆ, ಅದು ದೇವರಿಗೆ ಸಂಬಂಧಿಸಿದ ಮೂರು ಸಂಗತಿಗಳಲ್ಲಿ ಸ್ಥಿರವಾಗಿ ನೆಲೆಯೂರಬೇಕು - ದೇವರ ಪರಿಪೂರ್ಣ ಪ್ರೀತಿ, ಆತನ ಮಿತಿಯಿಲ್ಲದ ಅಪಾರ ಬಲ ಮತ್ತು ಆತನ ಪರಿಪೂರ್ಣ ಜ್ಞಾನ. ನಮಗೆ ದೇವರ ಪ್ರೀತಿಯು ಸ್ಪಷ್ಟವಾಗಿ ಮನವರಿಕೆಯಾಗಿದ್ದರೆ, ಆತನ ಸಾರ್ವಭೌಮತ್ವದ ಬಗ್ಗೆಯೂ ನಮಗೆ ಅಷ್ಟೇ ಸ್ಪಷ್ಟ ಮನವರಿಕೆಯಾಗಬೇಕು.
ಈ ಕಾರಣಕ್ಕಾಗಿಯೇ ಯೇಸುಸ್ವಾಮಿಯು, ನಾವು ನಮ್ಮ ಪ್ರಾರ್ಥನೆಯನ್ನು ಆರಂಭಿಸುವಾಗ ದೇವರನ್ನು "ಪರಲೋಕದಲ್ಲಿರುವ ನಮ್ಮ ತಂದೆಯೇ," ಎಂದು ಸಂಬೋಧಿಸುವಂತೆ ಕಲಿಸಿದರು.
"ನಮ್ಮ ತಂದೆಯೇ" ಎಂಬುದು ದೇವರ ಪರಿಪೂರ್ಣ ಪ್ರೀತಿಯನ್ನು ನಮಗೆ ನೆನಪಿಸುತ್ತದೆ; ಮತ್ತು "ಪರಲೋಕದಲ್ಲಿರುವವರು" ಎಂಬುದು, ದೇವರು ಭೂಮಿಯ ಮೇಲೆ ನಡೆಯುವ ಎಲ್ಲವನ್ನೂ ಸಂಪೂರ್ಣ ಸಾರ್ವಭೌಮತ್ವದಿಂದ ಆಳುವ ಸರ್ವಶಕ್ತ ದೇವರು ಎಂಬುದನ್ನು ನಮಗೆ ನೆನಪಿಸುತ್ತದೆ. ಅವರು ದೇವರಾಗಿರುವುದರಿಂದ, ಪರಿಪೂರ್ಣ ಜ್ಞಾನಿಯೂ ಆಗಿದ್ದಾರೆ; ಆದ್ದರಿಂದ ಅವರು ನಮ್ಮ ಮಾರ್ಗಗಳನ್ನು ತನ್ನ ಜ್ಞಾನದ ಪ್ರಕಾರ ಪರಿಪೂರ್ಣವಾಗಿ ಯೋಜಿಸುತ್ತಾರೆ.
ದೇವರನ್ನು ಪರಿಗಣಿಸಿ ನೋಡುವಾಗ, "ಅವರ ಮಾರ್ಗವು ಯಾವ ದೋಷವೂ ಇಲ್ಲದ್ದು (ಆತನ ಜ್ಞಾನವು ಪರಿಪೂರ್ಣವಾದದ್ದಾಗಿದೆ) ..... ಮತ್ತು ಅವರೇ ನನ್ನ ಮಾರ್ಗವನ್ನು ಸರಾಗ ಮಾಡುತ್ತಾರೆ (ಆತನು ನನ್ನ ಸನ್ನಿವೇಶಗಳನ್ನು ಪರಿಪೂರ್ಣವಾಗಿ ಯೋಜಿಸುತ್ತಾನೆ)"(ಕೀರ್ತನೆಗಳು 18:30-32).
ದೇವರು ಪ್ರೀತಿ, ಬಲ ಮತ್ತು ಜ್ಞಾನದಲ್ಲಿ ಪರಿಪೂರ್ಣರು ಆಗಿರದಿದ್ದರೆ, ನಮ್ಮ ನಂಬಿಕೆಗೆ ಅವಶ್ಯವಾದ ಭದ್ರ ಅಡಿಪಾಯ ನಮ್ಮಲ್ಲಿ ಇರುವುದಿಲ್ಲ. ಆದರೆ ಈ ಮೂರು ಸಂಗತಿಗಳೂ ದೇವರಲ್ಲಿ ಇರುವುದರಿಂದ, ನಾವು ಕದಲುವ ಸ್ಥಿತಿಗೆ ಎಂದಿಗೂ ಬರಬೇಕಿಲ್ಲ.
ನಂಬಿಕೆ ಎಂದರೆ, ಮಾನವನ ವ್ಯಕ್ತಿತ್ವವು ದೇವರ ಮೇಲೆ ಆತುಕೊಂಡು, ಆತನ ಪರಿಪೂರ್ಣ ಪ್ರೀತಿ, ಪರಿಪೂರ್ಣ ಬಲ ಮತ್ತು ಪರಿಪೂರ್ಣ ಜ್ಞಾನದ ಮೇಲೆ ಸಂಪೂರ್ಣ ವಿಶ್ವಾಸ ಇಡುವುದಾಗಿದೆ.
ದೇವರ ಜ್ಞಾನ ಪರಿಪೂರ್ಣವಾದದ್ದು ಎಂಬುದಾಗಿ ನಾವೆಲ್ಲರೂ ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇವೆ. ಭೂಮಿಯಿಂದ ಆಕಾಶವು ಎಷ್ಟು ಉನ್ನತವೋ ಅದಕ್ಕಿಂತ ಬಹಳ ಹೆಚ್ಚಾಗಿ ಆತನ ಮಾರ್ಗಗಳು ನಮ್ಮ ಮಾರ್ಗಗಳಿಗಿಂತ ಉನ್ನತವಾಗಿವೆ.
"ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ. ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ, ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳು, ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳು ಅಷ್ಟು ಉನ್ನತವಾಗಿವೆ"(ಯೆಶಾಯನು 55:8,9).
ಹಾಗಾಗಿ ಅನೇಕ ಸಾರಿ ನಾವು ಆತನು ನಡೆಸುವ ಕಾರ್ಯಗಳನ್ನು ಅಥವಾ ಆತನು ನಮ್ಮ ಕಾರ್ಯಗಳನ್ನು ನಿಯಂತ್ರಿಸುವ ರೀತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಒಂದು ಸಣ್ಣ ಮಗು ತನ್ನ ತಂದೆಯ ಎಲ್ಲಾ ಮಾರ್ಗಗಳನ್ನು ಹೇಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗದೋ, ಅದೇ ರೀತಿ ನಾವು ದೇವರ ಎಲ್ಲಾ ಮಾರ್ಗಗಳನ್ನು ಅರ್ಥಮಾಡಿಕೊಳ್ಳಲು ಆಗದೆ ಇರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಆದಾಗ್ಯೂ ನಾವು ಆತ್ಮಿಕವಾಗಿ ಬೆಳೆದು ಹೆಚ್ಚು ಹೆಚ್ಚಾಗಿ ದೈವಿಕ ಸ್ವಭಾವವನ್ನು ಪಡೆದುಕೊಳ್ಳುತ್ತಾ ಇರುವಾಗ, ನಾವು ದೇವರ ಮಾರ್ಗಗಳನ್ನು ಹೆಚ್ಚು ಹೆಚ್ಚಾಗಿ ಅರ್ಥ ಮಾಡಿಕೊಳ್ಳಲು ಪ್ರಾರಂಭಿಸುತ್ತೇವೆ.
ಎಲ್ಲಾ ಜನರ ಮೇಲೆ ಹಾಗೂ ಎಲ್ಲಾ ಸನ್ನಿವೇಶಗಳ ಮೇಲೆ ದೇವರ ಸಂಪೂರ್ಣ ಸಾರ್ವಭೌಮತ್ವದ ವಿಚಾರದಲ್ಲಿ ಎಷ್ಟೋ ವಿಶ್ವಾಸಿಗಳು ಸಂದೇಹ ಪಡುತ್ತಾರೆ. ಅವರು ಕೇವಲ ಬಾಯಿಮಾತಿನಲ್ಲಿ ದೇವರ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳುತ್ತಾರೆ, ಆದರೆ ದಿನನಿತ್ಯದ ಜೀವಿತದಲ್ಲಿ ಅದು "ಕಾರ್ಯ ಸಾಧಿಸುತ್ತದೆ" ಎಂಬುದಾಗಿ ಅವರು ನಂಬುವುದಿಲ್ಲ. ಆದಾಗ್ಯೂ ಸತ್ಯವೇದದ ಉದ್ದಕ್ಕೂ ಕೊಡಲ್ಪಟ್ಟಿರುವ ಉದಾಹರಣೆಗಳಲ್ಲಿ ತೋರಿಸಲ್ಪಟ್ಟಿರುವುದು ಏನೆಂದರೆ, ದೇವರು ತನ್ನ ಜನರ ಪರವಾಗಿ ಸಾರ್ವಭೌಮತ್ವದಿಂದ ಕಾರ್ಯ ಮಾಡಿದ್ದಾರೆ ಮತ್ತು ಹಲವು ಬಾರಿ ನಮ್ಮ ಆಲೋಚನೆಯನ್ನು ಮೀರುವಂತ ರೀತಿಯಲ್ಲಿ ಕಾರ್ಯ ಸಾಧಿಸಿದ್ದಾರೆ.
"ನಿಮ್ಮ ಜೀವಿತಕ್ಕಾಗಿ ದೇವರು ಸಿದ್ಧಪಡಿಸಿರುವ ಯೋಜನೆಯನ್ನು ಕೆಡಿಸಲು ಅಥವಾ ವಿಫಲಗೊಳಿಸಲು ಸಕಲ ಸೃಷ್ಟಿಯಲ್ಲಿ ಶಕ್ತವಾಗಿರುವಾತನು ಒಬ್ಬ ವ್ಯಕ್ತಿ ಮಾತ್ರ - ಆ ವ್ಯಕ್ತಿ ಸ್ವತಃ ನೀವೇ ಆಗಿದ್ದೀರಿ"
ದೇವರು ತನ್ನ ಜನರ ಪರವಾಗಿ ಮಾಡಿರುವ ಅದ್ಭುತ ಕಾರ್ಯಗಳ ಬಗ್ಗೆ ನಮ್ಮಲ್ಲಿ ಅನೇಕರಿಗೆ ಸ್ಪಷ್ಟ ಪರಿಚಯವಿದೆ. ಉದಾಹರಣೆಗೆ, ಇಸ್ರಾಯೇಲ್ಯರನ್ನು ಐಗುಪ್ತದಿಂದ ಬಿಡಿಸಿ ತಂದದ್ದು. ಆದರೆ ಅನೇಕ ಸಾರಿ ಸೈತಾನನು ದೇವಜನರ ಮೇಲೆ ಆಕ್ರಮಣ ಮಾಡಿದಾಗ, ಸೈತಾನನ ಕಾರ್ಯಗಳನ್ನು ಆತನ ಮೇಲೆಯೇ ತಿರುಗಿಸಿದ ದೇವರ ಅತಿ ದೊಡ್ಡ ಅದ್ಭುತವನ್ನು ನೋಡುವಲ್ಲಿ ನಾವು ವಿಫಲರಾಗಿದ್ದೇವೆ.
ಯೋಸೇಫನ ಪ್ರಕರಣವು ಒಂದು ಶ್ರೇಷ್ಠ ದೃಷ್ಟಾಂತವಾಗಿದೆ. ಯಾಕೋಬನ ಹನ್ನೊಂದನೇ ಮಗನಿಗೆ 30 ವರ್ಷ ವಯಸ್ಸಾಗುವಷ್ಟರಲ್ಲಿ ಅವನನ್ನು ಐಗುಪ್ತದೇಶದ ಎರಡನೇ ಮುಖ್ಯ ಅಧಿಪತಿಯನ್ನಾಗಿ ಮಾಡಲು ದೇವರು ಒಂದು ಯೋಜನೆಯನ್ನು ಹೊಂದಿದ್ದರು.
ಯೋಸೆಫನು ದೇವಭಯವುಳ್ಳ ಒಬ್ಬ ಹುಡುಗನಾಗಿದ್ದನು. ಆದುದರಿಂದ ಸೈತಾನನು ಆತನನ್ನು ದ್ವೇಷಿಸುತ್ತಿದ್ದನು. ಹಾಗಾಗಿ ಸೈತಾನನು ಯೋಸೇಫನನ್ನು ನಾಶಗೊಳಿಸಲು ಆತನ ಅಣ್ಣಂದಿರನ್ನು ಪ್ರಚೋದಿಸಿದನು. ಆದರೆ ಅವರು ಯೋಸೇಫನನ್ನು ಸಾಯಿಸದಂತೆ ದೇವರು ನೋಡಿಕೊಂಡರು. ಆದಾಗ್ಯೂ, ಆತನ ಅಣ್ಣಂದಿರು ಅವನನ್ನು ಕೆಲವು ಇಷ್ಮಾಯೇಲ್ಯ ವ್ಯಾಪಾರಿಗಳಿಗೆ ಮಾರಿಬಿಟ್ಟರು. ಆದರೆ ಆ ವ್ಯಾಪಾರಿಗಳು ಯೋಸೇಫನನ್ನು ಎಲ್ಲಿಗೆ ಕರೆದೊಯ್ದರು ಎಂದು ನೀವು ಭಾವಿಸುತ್ತೀರಿ? ಅವರು ಅವನನ್ನು ನೇರವಾಗಿ ಐಗುಪ್ತದೇಶಕ್ಕೆ ಕರೆದೊಯ್ದರು! ಈ ರೀತಿಯಾಗಿ ದೇವರ ಯೋಜನೆಯ ಮೊದಲ ಹಂತವು ಪೂರೈಸಿತು!
ಐಗುಪ್ತದೇಶದಲ್ಲಿ, ಯೋಸೇಫನನ್ನು ಪೋಟೀಫರನು ಖರೀದಿಸಿದನು. ಇದೂ ಸಹ ದೇವರ ಯೋಜನೆಯಾಗಿತ್ತು. ಪೋಟೀಫರನ ಹೆಂಡತಿಯು ಒಬ್ಬ ದುಷ್ಟ ಮಹಿಳೆಯಾಗಿದ್ದಳು. ಅವಳು ಯೋಸೇಫನಲ್ಲಿ ಮೋಹಿತಳಾಗಿ, ಅವನನ್ನು ತನ್ನ ಕಡೆಗೆ ಆಕರ್ಷಿಸಲು ಬಹಳವಾಗಿ ಪ್ರಯತ್ನಿಸಿದಳು. ಅಂತಿಮವಾಗಿ ಅವಳ ಯೋಜನೆಯು ಯಶಸ್ವಿಯಾಗದಿದ್ದಾಗ, ಅವಳು ಯೋಸೇಫನ ಮೇಲೆ ಸುಳ್ಳು ಆರೋಪ ಹೊರಿಸಿ ಅವನು ಸೆರೆಮನೆಗೆ ಹಾಕಲ್ಪಡುವಂತೆ ಮಾಡಿದಳು. ಆದರೆ ಯೋಸೇಫನು ಸೆರೆಮನೆಯಲ್ಲಿ ಯಾರನ್ನು ಭೇಟಿಯಾದನೆಂದು ನೀವು ಭಾವಿಸುತ್ತೀರಿ? ಫರೋಹನ ಪಾನದಾಯಕನನ್ನು! ಅದೇ ಸಮಯದಲ್ಲಿ ಫರೋಹನ ಪಾನದಾಯಕನೂ ಸಹ ಜೈಲಿಗೆ ಹಾಕಲ್ಪಡುವಂತೆ ದೇವರು ಯೋಜಿಸಿದ್ದರು, ಇದರಿಂದಾಗಿ ಯೋಸೇಫನು ಪಾನದಾಯಕನನ್ನು ಸೆರೆಮನೆಯಲ್ಲಿ ಸಂಧಿಸಿಧನು. ಇದು ದೇವರ ಯೋಜನೆಯ ಎರಡನೆಯ ಹಂತವಾಗಿತ್ತು.
ದೇವರ ಯೋಜನೆಯ ಮೂರನೇ ಹಂತವೆಂದರೆ, ಫರೋಹನ ಪಾನದಾಯಕನು ಎರಡು ವರ್ಷಗಳ ಕಾಲ ಯೋಸೆಫನನ್ನು ಮರೆತುಬಿಡುವಂತೆ ಅನುಮತಿಸಿದ್ದು. "ಆದಾಗ್ಯೂ, ಮುಖ್ಯಪಾನದಾಯಕನು ಯೋಸೇಫನನ್ನು ನೆನಪುಮಾಡದೆ ಮರೆತುಬಿಟ್ಟನು. ಎರಡು ವರ್ಷಗಳಾದ ಮೇಲೆ, ಫರೋಹನಿಗೆ ಒಂದು ಕನಸುಬಿತ್ತು ..... ಆಗ ಪಾನದಾಯಕರ ಮುಖ್ಯಸ್ಥನು ಫರೋಹನೊಡನೆ ಮಾತನಾಡಿದನು ...(ಆದಿಕಾಂಡ 40:23,41:1-9).
ದೇವರ ವೇಳಾಪಟ್ಟಿಯ ಪ್ರಕಾರ ಯೋಸೇಫನು ಸೆರೆಮನೆಯಿಂದ ಬಿಡುಗಡೆಯಾಗುವ ಸಮಯ ಅದೇ ಆಗಿತ್ತು.
’ಕೀರ್ತನೆಗಳು 105:19-20' ಹೀಗೆ ಹೇಳುತ್ತದೆ, "ಅವನು ತನ್ನ ಮಾತು ನೆರವೇರುವ ತನಕ ಕರ್ತನ ವಾಕ್ಯದಿಂದ ಶೋಧಿತನಾದನು. ಅರಸನು ಅಪ್ಪಣೆಮಾಡಿ ಅವನನ್ನು ತಪ್ಪಿಸಿದನು, ಜನಪತಿಯು ಅವನನ್ನು ಬಿಡಿಸಿದನು."
ಈಗ ಯೋಸೇಫನಿಗೆ 30 ವರ್ಷ ವಯಸ್ಸಾಗಿತ್ತು. ದೇವರ ಸಮಯ ಬಂದಾಗಿತ್ತು. ಆಗ ದೇವರು ಫರೋಹನಿಗೆ ಒಂದು ಕನಸುಬೀಳುವಂತೆ ಮಾಡಿದರು. ಅದೇ ಸಮಯಕ್ಕೆ ದೇವರು ಪಾನದಾಯಕನಿಗೆ ಯೋಸೆಫನು (ಎರಡು ವರ್ಷಗಳ ಹಿಂದೆ) ತನ್ನ ಕನಸಿನ ಅರ್ಥ ವಿವರಣೆಯನ್ನು ನೀಡಿದ್ದನ್ನು ಮತ್ತೆ ನೆನಪಿಸಿದರು. ಈ ರೀತಿಯಾಗಿ ಯೋಸೇಫನು ಫರೋಹನ ಸನ್ನಿಧಿಗೆ ಬರಲು ಸಾಧ್ಯವಾಯಿತು ಮತ್ತು ಆತನು ಐಗುಪ್ತದ ಎರಡನೇ ಅಧಿಪತಿಯಾದನು (ಆಳುವವನು). ದೇವರು ಯೋಸೇಫನ ಜೀವಿತದ ಘಟನೆಗಳನ್ನು ಸಮಯಕ್ಕೆ ತಕ್ಕಂತೆ ಹೊಂದಿಸಿದ ರೀತಿ ಅಷ್ಟೊಂದು ಪರಿಪೂರ್ಣವಾಗಿತ್ತು!
ಈ ಪ್ರಕರಣದಲ್ಲಿ ದೇವರು ಮಾಡಿದಂತೆ ನಾವು ಎಲ್ಲಾ ವಿಷಯಗಳನ್ನು ಹೊಂದಿಸಿ ಯೋಜನೆ ಮಾಡಲು ನಮ್ಮಿಂದ ಎಂದಿಗೂ ಸಾಧ್ಯವಾಗುತ್ತಿರಲಿಲ್ಲ. ಯೋಸೇಫನ ಜೀವಿತವನ್ನು ಯೋಜಿಸುವ ಅವಕಾಶ ನಮಗೆ ಸಿಕ್ಕಿದ್ದರೆ, ನಾವು ಬಹುಶಃ ಆತನಿಗೆ ಜನರಿಂದ ಯಾವ ಹಾನಿಯೂ ಉಂಟಾಗದಂತೆ ತಡೆಯುತ್ತಿದ್ದೆವು. ಆದರೆ ದೇವರು ತಯಾರಿಸಿದ ಯೋಜನೆಯು ಅದಕ್ಕಿಂತ ಉತ್ತಮವಾಗಿತ್ತು.
ಜನರು ನಮಗೆ ಮಾಡುವ ಕೆಡುಕನ್ನು ನಮಗಾಗಿ ದೇವರು ಉದ್ದೇಶಿಸಿರುವ ಕಾರ್ಯಗಳನ್ನು ಪೂರೈಸುವಂತೆ ತಿರುಗಿಸುವುದು ಇನ್ನೂ ಶ್ರೇಷ್ಠ ಪವಾಡವಾಗಿದೆ! ಸೈತಾನನು ನಮ್ಮ ವಿರುದ್ಧ ಮಾಡುವ ಯೋಜನೆಗಳನ್ನು ಆತನ ಉದ್ದೇಶಕ್ಕೆ ವಿರುದ್ಧವಾಗಿ ತಿರುಗಿಸಿ, ದೇವರಿಂದ ಕರೆಯಲ್ಪಟ್ಟವರ ಅನುಕೂಲಕ್ಕಾಗಿ ಎಲ್ಲಾ ಕಾರ್ಯಗಳನ್ನು ನಡೆಸುವಲ್ಲಿ ದೇವರು ಬಹಳ ಸಂತೋಷಪಡುತ್ತಾರೆ.
ಈ ಘಟನೆಗಳು ನಮ್ಮ ಸನ್ನಿವೇಶಗಳಿಗೆ ಹೇಗೆ ಅನ್ವಯಿಸುತ್ತವೆಂದು ತಿಳಿದುಕೊಳ್ಳೋಣ.
ದುಷ್ಟ ಜನರ ಬಗ್ಗೆ, ನಮ್ಮ ಮೇಲೆ ಅಸೂಯೆ ಪಡುವಂತ ಸ್ವಂತ ಸಹೋದರರ ಬಗ್ಗೆ, ನಮ್ಮ ಮೇಲೆ ಸುಳ್ಳು ಆರೋಪ ಹೊರಿಸುವ ಮಹಿಳೆಯರ ಬಗ್ಗೆ, ನಮಗೆ ಸಹಾಯ ಮಾಡುವುದಾಗಿ ಭರವಸೆ ನೀಡಿ ಮರೆತುಬಿಡುವ ಸ್ನೇಹಿತರ ಬಗ್ಗೆ, ಅಥವಾ ಅನ್ಯಾಯವಾಗಿ ಸೆರೆಮನೆಗೆ ಹಾಕಲ್ಪಡುವುದರ ಬಗ್ಗೆ, ನಮ್ಮ ಮನೋಭಾವ ಹೇಗಿರಬೇಕು?
ಈ ಎಲ್ಲಾ ಜನರನ್ನು ಮತ್ತು ಅವರ ಎಲ್ಲಾ ಕಾರ್ಯಗಳನ್ನು - ಉದ್ದೇಶಪೂರ್ವಕವಾಗಿ ಮಾಡಲ್ಪಟ್ಟವುಗಳು ಅಥವಾ ಆಕಸ್ಮಿಕವಾಗಿ ನಡೆದಂತ ವಿಷಯಗಳು - ನಮ್ಮ ಜೀವಿತಕ್ಕಾಗಿ ದೇವರ ಸಂಕಲ್ಪವನ್ನು ಪೂರೈಸುವಂತೆ ಒಟ್ಟಾಗಿ ಕಾರ್ಯ ಸಾಧಿಸುವಂತೆ ಈ ವಿಷಯಗಳನ್ನು ಬಳಸಿಕೊಳ್ಳುವಷ್ಟು ದೇವರು ಬಲವುಳ್ಳ ಸಾರ್ವಭೌಮರಾಗಿದ್ದಾರೆಂದು ನಾವು ನಂಬಿದ್ದೇವೆಯೇ? ಯೋಸೆಫನಿಗೆ ಅಂತಹ ಅದ್ಭುತವಾದ ಕಾರ್ಯಗಳನ್ನು ಮಾಡಿರುವ ದೇವರು ನಮಗಾಗಿಯೂ ಅದನ್ನೇ ಮಾಡುವುದಿಲ್ಲವೇ? ಅವರು ಖಂಡಿತವಾಗಿಯೂ ಮಾಡಬಲ್ಲರು ಮತ್ತು ಮಾಡುತ್ತಾರೆ.
ಆದರೆ ಯೋಸೇಫನ ಜೀವಿತಕ್ಕಾಗಿ ದೇವರ ಯೋಜನೆಯನ್ನು ಯಾರು ಹಾಳು ಮಾಡಬಹುದಾಗಿತ್ತೆಂದು ನಾನು ನಿಮಗೆ ಹೇಳುತ್ತೇನೆ. ಒಬ್ಬನೇ ಒಬ್ಬ ವ್ಯಕ್ತಿ - ಅದು ಸ್ವಂತ ಯೋಸೇಫನೇ. ಪೋಟೀಫರನ ಹೆಂಡತಿಯ ಅಮಿಷಕ್ಕೆ ಅವನು ಬಲಿಯಾಗಿದ್ದರೆ, ಖಂಡಿತವಾಗಿ ಅವನು ದೇವರಿಂದ ತಿರಸ್ಕರಿಸಲ್ಪಡುತ್ತಿದ್ದನು.
ನಿಮ್ಮ ಜೀವಿತಕ್ಕಾಗಿ ದೇವರ ಯೋಜನೆಯನ್ನು ಹಾಳು ಮಾಡುವ ಮತ್ತು ನಿರಾಶೆಗೊಳಿಸುವ ಏಕೈಕ ವ್ಯಕ್ತಿ ವಿಶ್ವದಲ್ಲಿ ಇರುವುದಾದರೆ, ಅದು ಸ್ವತಃ ನೀವೇ. ಇದನ್ನು ಬೇರೆ ಯಾರೂ ಮಾಡಲಾರರು. ನಿಮ್ಮ ಮಿತ್ರರಲ್ಲ, ನಿಮ್ಮ ಶತ್ರುಗಳೂ ಅಲ್ಲ, ದೇವದೂತರೂ ಅಲ್ಲ, ಸೈತಾನನೂ ಅಲ್ಲ, ನೀವು ಮಾತ್ರ. ಈ ಸತ್ಯವನ್ನು ನಾವು ಅರಿತಾಗ, ಅದು ನಮ್ಮ ಅನೇಕ ಭಯಗಳನ್ನೂ, ಭ್ರಮೆಗಳನ್ನೂ ತೆಗೆದುಹಾಕಿ, ನಮಗೆ ಹಾನಿ ಮಾಡುವವರ ಬಗ್ಗೆ ತಪ್ಪು ಮನೋಭಾವದಿಂದ ನಮ್ಮನ್ನು ಬಿಡುಗಡೆಗೊಳಿಸುತ್ತದೆ.