WFTW Body: 

ದೇವರ ಮತ್ತು ಅವರ ಸೇವೆ ಮಾಡುವುದರ ಬಗ್ಗೆ ಸ್ವಾರ್ಥದ ಮನೋಭಾವದಿಂದಿರುವುದು ಕಾನೂನುಬದ್ಧತೆಯ (ಮಾಡಲೇಬೇಕೆಂಬ ಕಟ್ಟುಪಾಡಿಗೆ ಒಳಗಾದ) ಆತ್ಮದ ಗುರುತಾಗಿದೆ. ಸ್ವಾರ್ಥಿಯಾದವನು ದೇವರ ಸೇವೆ ಮಾಡಲು ಪ್ರಯತ್ನಿಸಬಹುದು. ಇಂತಹ ಮನೋಭಾವವು ಸೇವೆಯಲ್ಲಿ ಸಕ್ರಿಯವಾಗಿರಲೂಬಹುದು. ಆದರೆ ಅಂಥಹ ಸೇವೆಯು ಯಾವಾಗಲೂ ಮಾಡಲೇಬೇಕೆಂಬ ಕಟ್ಟುಪಾಡಿಗಾಗಿ ಮಾಡುವ ಸೇವೆಯಾಗಿರುತ್ತದೆ. ದೇವರ ಸೇವೆ ಮಾಡಿದುದಕ್ಕಾಗಿ ಇಂಥಹ ಸೇವೆಯು ಬಹುಮಾನವನ್ನು ನಿರೀಕ್ಷಿಸುತ್ತದೆ. ಹಿರೀಮಗನು ತನ್ನ ತಂದೆಗೆ ಹೇಳಿದ ಮಾತು ಇದು, "ನೋಡು, ಇಷ್ಟು ವರುಷ ನಿನ್ನ ಸೇವೆ ಮಾಡಿದ್ದೇನೆ, ಆದರೂ ನೀನು ನನಗೆ ನನ್ನ ಸ್ನೇಹಿತರ ಸಂಗಡ ಉಲ್ಲಾಸಪಡುವದಕ್ಕಾಗಿ ಒಂದು ಆಡನ್ನಾದರೂ ಕೊಡಲಿಲ್ಲ." ಹಿರೀಮಗನು ಇಷ್ಟು ವರ್ಷ ಬಹುಮಾನಕ್ಕಾಗಿ ತಂದೆಯ ಸೇವೆ ಮಾಡಿದ್ದನು, ಆದರೆ ಆ ವಿಷಯ ಇದುವರೆಗೆ ಪ್ರಕಟವಾಗಿರಲಿಲ್ಲ. ಈಗ ಉಂಟಾದ ಒತ್ತಡವು ಈ ನಿಜಾಂಶವನ್ನು ಪ್ರಕಟಿಸಿತು.

ಸ್ವಾರ್ಥಿಯಾದವನು ಹೀಗೆ ದೇವರ ಸೇವೆ ಮಾಡುತ್ತಾನೆ - ಅದು ಸ್ವಾತಂತ್ರ್ಯದಿಂದ, ಉಲ್ಲಾಸದಿಂದ ಮತ್ತು ಹೃತ್ಪೂರ್ವಕವಾಗಿ ಮಾಡಿದ ಸೇವೆಯಲ್ಲ, ಆದರೆ ಲಾಭಾಪೇಕ್ಷೆಯ ಸೇವೆ ಆಗಿರುತ್ತದೆ. ಅದು ದೇವರಿಂದ ಬಯಸುವಂಥದ್ದು ಯಾವುದೋ ಆತ್ಮಿಕ ಆಶೀರ್ವಾದ ಮತ್ತು ಆತ್ಮಿಕ ಕೊಡುಗೆಯೇ ಆಗಿರಬಹುದು. ಆದರೆ ಇಂತಹ ನಿರೀಕ್ಷೆಯಿಂದ ಮಾಡಿದ ಸೇವೆಯೂ ಸಹ ಕೇವಲ ಕಟ್ಟುಪಾಡಿಗೆ ಮಾಡಿದ ಸೇವೆಯಾಗಿರುತ್ತದೆ ಮತ್ತು ದೇವರು ಅದನ್ನು ಸ್ವೀಕರಿಸುವುದಿಲ್ಲ.

ಹಿರಿಯ ಮಗನು ಹಲವಾರು ವರ್ಷಗಳ ತನ್ನ ದುಡಿಮೆಗೆ ತನ್ನ ತಂದೆ ಸೂಕ್ತ ಪ್ರತಿಫಲವನ್ನು ಕೊಡದಿದ್ದುದನ್ನು ಕಠಿಣತೆ ಮತ್ತು ಕ್ರೂರತೆಯೆಂದು ಪರಿಗಣಿಸಿದನು. ಅವನು ಯಾರನ್ನು ಹೋಲುತ್ತಾನೆಂದರೆ, ಯಜಮಾನನಿಂದ ಒಂದು ತಲಾಂತು ಪಡೆದು ಅದರ ಬಗ್ಗೆ, "ನೀನು ನನಗೆ ಕೊಟ್ಟ ತಲಾಂತನ್ನು ನಾನು ಜೋಪಾನವಾಗಿ ಇಟ್ಟುಕೊಂಡಿದ್ದೇನೆ (ಅದನ್ನು ವ್ಯಾಪಾರಕ್ಕೆ ಬಳಸಿಕೊಂಡು ಹೆಚ್ಚಿಸಲಿಲ್ಲ), ಏಕೆಂದರೆ ನೀನು ಕಠಿಣ ವ್ಯವಹಾರದ ಮನುಷ್ಯನು (ನೀನು ನನ್ನ ಲಾಭದಲ್ಲಿ ಪಾಲು ಕೇಳುತ್ತೀ), ಹಾಗಾಗಿ ನಾನು ಭಯಪಟ್ಟೆನು" ಎಂದು ಲೆಕ್ಕ ಒಪ್ಪಿಸಿದ ನೌಕರನನ್ನು (’ ಲೂಕ. 19:21'). ಸ್ವಾರ್ಥವು ದೇವರನ್ನು ನೋಡುವ ರೀತಿ ಯಾವುದೆಂದರೆ, ದೇವರು ನಮ್ಮಿಂದ ಬಹಳಷ್ಟು ವಸೂಲಿ ಮಾಡುತ್ತಾರೆ ಮತ್ತು ಅವರನ್ನು ಮೆಚ್ಚಿಸಲು ಬಹಳ ಶ್ರಮಿಸಬೇಕು, ಎಂಬುದಾಗಿ. ಹಾಗಾಗಿ ಸ್ವಾರ್ಥಿಯು ನಿರಂತರ ಶ್ರಮೆಯಿಂದ ದೇವರ ಸೇವೆ ಮಾಡಿದರೂ, ತಾನು ನಿಷ್ಠುರನಾದ ದೇವರ ಬೇಡಿಕೆಗಳನ್ನು ಪೂರೈಸಲಿಲ್ಲವೆಂದು ತನ್ನನೇ ತಾನು ದೂಷಿಸುತ್ತಾನೆ.

ದೇವರು ಇಂತಹ ಸೇವೆಯನ್ನು ನಮ್ಮಲ್ಲಿ ಯಾವ ವ್ಯಕ್ತಿಯಿಂದಲೂ ನಿರೀಕ್ಷಿಸುವುದಿಲ್ಲ. ಸತ್ಯವೇದ ಹೇಳುವುದು ಏನೆಂದರೆ, "ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು" (2 ಕೊರಿ. 9:7) . ಹಾಗೆಯೇ ಸೇವೆಯ ವಿಚಾರದಲ್ಲೂ, ದೇವರಿಗೆ ಉಲ್ಲಾಸ ತರುವಂಥದ್ದು ಸಂತೋಷವಾಗಿ ಮಾಡುವ ಸೇವೆ, ಆದರೆ ಅರೆಮನಸ್ಸಿನಿಂದ ಅಥವಾ ಅನಿವಾರ್ಯವಾಗಿ ಮಾಡುವ ಸೇವೆಯಲ್ಲ. ಮನಸ್ಸಿಲ್ಲದ ಸೇವೆಗಿಂತ ಸೇವೆ ಮಾಡದೇ ಇರುವುದು ಉತ್ತಮವೆಂದು ದೇವರು ಭಾವಿಸುತ್ತಾರೆ. ಒಬ್ಬನು ಪ್ರತಿಫಲಕ್ಕಾಗಿ ಸೇವೆ ಮಾಡುವಾಗ, ಒಂದಿಷ್ಟು ಸಮಯದ ನಂತರ ತನಗೆ ಸಾಕಷ್ಟು ಆಶೀರ್ವಾದ ಸಿಗಲಿಲ್ಲವೆಂದು ದೇವರ ಬಳಿ ದೂರುತ್ತಾನೆ. ಇನ್ನೊಬ್ಬನಿಗೆ ಆತನಿಗಿಂತ ಹೆಚ್ಚಿನ ಆಶೀರ್ವಾದ ದೊರೆತಾಗ, ದೂರುವಿಕೆ ಇನ್ನೂ ಹೆಚ್ಚುತ್ತದೆ.

ನಾವು ಯಾವಾಗಲಾದರೂ ನಮ್ಮ ಕೆಲಸ ಮತ್ತು ನಮ್ಮ ಆಶೀರ್ವಾದವನ್ನು ಇತರರೊಂದಿಗೆ ಹೋಲಿಸಿ ನೋಡುತ್ತೇವೆಯೇ? ಇದು ಕಟ್ಟುಪಾಡಿಗೆ ಮಾಡುವ ಸೇವೆಯ ಫಲಿತಾಂಶವಾಗಿದೆ. ಯೇಸುವು ಒಮ್ಮೆ ಹೇಳಿದ ಕೆಲಸಗಾರರ ಸಾಮ್ಯದಲ್ಲಿ, ಒಂದು ತೋಟದ ಯಜಮಾನನು ದಿನದ ಬೇರೆ ಬೇರೆ ಸಮಯದಲ್ಲಿ ಆಳುಗಳನ್ನು ಕೆಲಸಕ್ಕೆ ಸೇರಿಸಿಕೊಂಡನು. ಆತನು ದಿನದ ಕೊನೆಗೆ ಅವರೆಲ್ಲರಿಗೂ ಒಂದೊಂದು ಪಾವಲಿ ಕೂಲಿಯನ್ನು ಕೊಟ್ಟನು. ಆಗ ಎಲ್ಲರಿಗಿಂತ ಹೆಚ್ಚು ಸಮಯ ದುಡಿದಿದ್ದ ಆಳುಗಳು ಯಜಮಾನನ ಬಳಿಗೆ ಬಂದು, "ನೀನು ನಮಗೂ ಇತರ ಆಳುಗಳಿಗೂ ಸಮನಾದ ಕೂಲಿ ಹೇಗೆ ಕೊಟ್ಟೇ? ನಾವು ಹೆಚ್ಚು ಕೂಲಿ ಪಡೆಯಲು ಯೋಗ್ಯರು," ಅಂದರು. ಅವರು ಕೂಲಿಗಾಗಿ ದುಡಿದಿದ್ದರು, ಮತ್ತು ಅವರು ಮೊದಲೇ ಗೊತ್ತುಮಾಡಿದ್ದ ಕೂಲಿಯನ್ನು ಪಡೆದಾಗ, ಇತರರಿಗೆ ತಮಗೆ ಸಿಕ್ಕಿದಷ್ಟೇ ಕೂಲಿ ಕೊಡುವುದು ಸರಿಯಲ್ಲವೆಂದು ಗೊಣಗುಟ್ಟಿದರು (ಮತ್ತಾ. 20:1-16).

ಹಿರಿಯ ಮಗನ ದೂರು ಇದೇ ಆಗಿತ್ತೆಂದು ನಾವು ನೋಡುತ್ತೇವೆ - "ನನ್ನ ತಮ್ಮನಿಗೆ ಇಷ್ಟು ದೊಡ್ಡ ಸ್ವಾಗತವನ್ನು ಕೊಟ್ಟದ್ದು ಸರಿಯಲ್ಲ. ನಿಷ್ಠೆಯಿಂದ ನಿನ್ನ ಸೇವೆ ಮಾಡಿದವನು ನಾನು, ಅವನಲ್ಲ."

ಇಸ್ರಾಯೇಲ್ಯರು ಅರೆಮನಸ್ಸಿನಿಂದ ದೇವರ ಸೇವೆ ಮಾಡಿದಾಗ, ದೇವರು ಮೊದಲೇ ಹೇಳಿದ್ದಂತೆ ಅವರನ್ನು ಶತ್ರುಗಳ ವಶಕ್ಕೆ ಒಪ್ಪಿಸಿದರು: "ನೀವು ಹರ್ಷಾನಂದದಿಂದ ನಿಮ್ಮ ದೇವರಾದ ಕರ್ತನನ್ನು ಸೇವಿಸದೆ ಹೋದದ್ದರಿಂದ ... ನೀವು ಆ ಶತ್ರುಗಳಿಗೆ ಸೇವಕರಾಗುವಿರಿ" (ಧರ್ಮೋ. 28:47) . ಹೌದು, ಕೇವಲ ನಿಯಮಕ್ಕೆ ತಕ್ಕಂತೆ ಮಾಡುವ ಸೇವೆಯು ದೇವರಿಗೆ ಸ್ವಲ್ಪವೂ ಹಿಡಿಸುವುದಿಲ್ಲ.

ಹಲವು ಬಾರಿ ಸ್ವಾರ್ಥಿಗಳಾದ ಕ್ರೈಸ್ತರು ತಾವು ಇತರರ ದೃಷ್ಟಿಯಲ್ಲಿ ಆತ್ಮಿಕರೆಂದು ಕಾಣಿಸಲಿಕ್ಕಾಗಿ ದೇವರ ಸೇವೆ ಮಾಡುತ್ತಾರೆ. ಅವರು ಕ್ರೈಸ್ತ ಕಾರ್ಯದಲ್ಲಿ ಪಾಲ್ಗೊಳ್ಳಲು ಕಾರಣ ಕ್ರಿಸ್ತನ ಬಗ್ಗೆ ಶುದ್ಧವಾದ ಮತ್ತು ಉತ್ಸಾಹಭರಿತ ಪ್ರೀತಿ ಅಲ್ಲ, ಆದರೆ ತಾವು ಏನಾದರೂ ಮಾಡದಿದ್ದರೆ ಇತರರು ತಾವು ಆತ್ಮಿಕರಲ್ಲವೆಂದು ಭಾವಿಸುತ್ತಾರೆ ಎಂಬ ಭಯ. ಅದಲ್ಲದೆ ಇಂತಹ ಜನರು ಹಣ ಸಂಪಾದನೆಗೆ ಸುಲಭ ಮಾರ್ಗವನ್ನು ಆರಿಸಿಕೊಂಡಾಗ, ದೇವರು ಅವರನ್ನು ಅಲ್ಲಿಗೆ ನಡೆಸಿದರೆಂದು ಎಲ್ಲರಿಗೆ ತೋರಿಸಿಕೊಳ್ಳಲು ಬಹಳ ಪ್ರಯತಿಸುತ್ತಾರೆ! ಅವರು ಹೀಗೆ ತಮ್ಮನ್ನು ಸಮರ್ಥಿಸಿಕೊಳ್ಳಲು ಕಾರಣ, ತಾವು ಆತ್ಮಿಕವಾಗಿ ಕೆಳಮಟ್ಟದವರೆಂದು ಇತರರು ಅಂದುಕೊಳ್ಳುತ್ತಾರೆ ಎಂಬ ಒಳಗಿರುವ ಭಯವೇ ಹೊರತು ಬೇರೇನೂ ಅಲ್ಲ! ಇಂತಹ ಕ್ರೈಸ್ತ ಸೇವೆ ಎಂತಹ ಪ್ರಯಾಸ ಮತ್ತು ದಾಸತ್ವದಿಂದ ಕೂಡಿದೆ.

ಕ್ರಿಸ್ತನಿಗಾಗಿ ನಮ್ಮಲ್ಲಿರುವ ಪ್ರೀತಿಯಿಂದ ಹೊರಹೊಮ್ಮುವ ಸೇವೆಯಲ್ಲಿ ಎಂತಹ ಉಲ್ಲಾಸ ಮತ್ತು ಎಷ್ಟು ಸ್ವಾತಂತ್ರ್ಯ ಇರುತ್ತದೆ! ಪ್ರೀತಿಯು ನಮ್ಮ ಜೀವನದ ವ್ಯವಹಾರಗಳು ಸಲೀಸಾಗಿ ಮತ್ತು ಘರ್ಷಣೆಗಳಿಲ್ಲದೆ ಸಾಗುವಂತೆ ಮಾಡುವ ತೈಲವಾಗಿದೆ! ಯಾಕೋಬನು ರಾಹೇಲಳಿಗೋಸ್ಕರ ಏಳು ವರ್ಷ ದುಡಿದನು. ಮತ್ತು ಸತ್ಯವೇದದಲ್ಲಿ ಹೇಳಿರುವಂತೆ, ಅವನು ಆಕೆಯಲ್ಲಿ ಬಹಳ ಪ್ರೀತಿಯನ್ನು ಇಟ್ಟಿದ್ದರಿಂದ, ಅವನಿಗೆ ಆ ಏಳು ವರ್ಷಗಳು ಸ್ವಲ್ಪ ದಿವಸದಂತೆ ಕಾಣಿಸಿತು (ಆದಿ. 29:20) ! ನಾವು ಮಾಡುವ ದೇವರ ಸೇವೆಯು ಪ್ರೀತಿಯಿಂದ ಚಿಮ್ಮುವಾಗ ಹೀಗೆಯೇ ಆಗುತ್ತದೆ. ಆ ಸೇವೆಯಲ್ಲಿ ಸ್ವಲ್ಪವೂ ದಣಿವು ಮತ್ತು ಶ್ರಮೆ ಕಾಣಿಸುವುದಿಲ್ಲ.

ಕ್ರಿಸ್ತ ಮತ್ತು ಕ್ರೈಸ್ತಸಭೆಯ ನಡುವಿನ ಸಂಬಂಧವು ಪತಿ-ಪತ್ನಿಯರ ನಡುವಿನ ಸಂಬಂಧದ ಹಾಗೆ ಇರುತ್ತದೆಂದು ಸತ್ಯವೇದವು ಕಲಿಸಿಕೊಡುತ್ತದೆ. ಪತಿಯು ತನ್ನ ಪತ್ನಿಯಿಂದ ಮುಖ್ಯವಾಗಿ ಏನನ್ನು ನಿರೀಕ್ಷಿಸುತ್ತಾನೆ? ಆಕೆಯ ಸೇವೆಯನ್ನಲ್ಲ. ಅವನು ಆಕೆಯನ್ನು ವಿವಾಹ ಮಾಡಿಕೊಂಡದ್ದರ ಮುಖ್ಯ ಉದ್ದೇಶ ಅಡುಗೆ ಮಾಡಿ ಊಟ ಬಡಿಸಲಿಕ್ಕೆ ಅಲ್ಲ ಮತ್ತು ಬಟ್ಟೆಯನ್ನು ಒಗೆದುಕೊಡಲಿಕ್ಕೆ ಅಲ್ಲ. ಆತನು ಮುಖ್ಯವಾಗಿ ಬಯಸುವುದು ಆಕೆಯ ಪ್ರೀತಿಯನ್ನು. ಅದು ಇಲ್ಲವಾದರೆ, ಬೇರೆಲ್ಲವೂ ವ್ಯರ್ಥವೆನಿಸುತ್ತದೆ. ದೇವರು ಸಹ ನಮ್ಮಲ್ಲಿ ಇದನ್ನೇ ಬಯಸುತ್ತಾರೆ.