WFTW Body: 

ಕರ್ತನೇ ನಮಗೆ ಸಹಾಯ ಮಾಡುತ್ತಾನೆ ಎಂಬುದಾಗಿ, ಆತನ ಮೇಲೆ ಎಲ್ಲಾ ಸಮಯದಲ್ಲಿ ನಾವು ಭರವಸೆ ಇಡಬೇಕು :

(1) ನಮ್ಮ ಶರೀರಭಾವದ ಪ್ರತಿಯೊಂದು ಕಾಮಾಸಕ್ತಿಯನ್ನು ಜಯಸುವುದಕ್ಕೆ,
(2) ಪ್ರತಿಯೊಂದು ಶೋಧನೆಯಲ್ಲಿ ದೇವರು ನಮಗಾಗಿ ಇರಿಸಿರುವ ಉದ್ದೇಶವನ್ನು ಪೂರೈಸುವುದಕ್ಕೆ,
(3) ಎಲ್ಲಾ ಸಂದರ್ಭಗಳಲ್ಲಿ ಜಯಶಾಲಿಗಳಾಗುವುದಕ್ಕೆ, ಮತ್ತು
(4) ದುಷ್ಟತನದ ಪ್ರತಿಯೊಂದು ಸನ್ನಿವೇಶದಲ್ಲಿ ಕ್ರಿಸ್ತನ ಸದ್ಗುಣಗಳನ್ನು ಪ್ರಕಟಿಸುವುದಕ್ಕೆ.
ಆಗ ನಾವು ಎಂದಿಗೂ ನಿರುತ್ಸಾಹಗೊಳ್ಳುವುದಿಲ್ಲ.

ನಂಬಿಕೆಯಿಲ್ಲದ ಪೀಳಿಗೆಗೆ ಮತ್ತು ಲೋಕದೊಂದಿಗೆ ರಾಜಿ ಮಾಡಿಕೊಳ್ಳುವ ಕ್ರೈಸ್ತ ಪ್ರಪಂಚಕ್ಕೆ ನಾವು ಜೀವಂತ ಸಾಕ್ಷಿ ನೀಡಬೇಕಾದದ್ದು ಏನೆಂದರೆ, ನಮಗಾಗಿ ಅದ್ಭುತ ಕಾರ್ಯಗಳನ್ನು ಮಾಡುವಂತ ಪ್ರೀತಿಸ್ವರೂಪರಾದ ತಂದೆಯು ಪರಲೋಕದಲ್ಲಿ ಇದ್ದಾರೆ, ಎಂಬುದಾಗಿ. ದೇವರು ನಿಮ್ಮ ಜೀವಿತಕ್ಕಾಗಿ ಒಂದು ಯೋಜನೆಯನ್ನು ಇಟ್ಟುಕೊಂಡಿದ್ದಾರೆ. ನೀವು ದಿನದಿಂದ ದಿನಕ್ಕೆ ಅವರನ್ನು ಮಹಿಮೆಪಡಿಸುವಾಗ, ನೀವು ಆ ಯೋಜನೆಯನ್ನು ಕಂಡುಕೊಳ್ಳುವಿರಿ. ಸರಿಯಾದ ಸಮಯದಲ್ಲಿ ಅವರು ಪ್ರತಿಯೊಂದು ಕ್ಷೇತ್ರದಲ್ಲಿ ನಿಮಗೆ ಅವಶ್ಯವಾದ ಬಾಗಿಲುಗಳನ್ನು ತೆರೆಯುತ್ತಾರೆ - ವಿಶ್ವಾಸಿಗಳ ಅನ್ಯೋನ್ಯತೆಗಾಗಿ, ನೌಕರಿಗಾಗಿ, ವಸತಿ ವ್ಯವಸ್ಥೆಗಾಗಿ, ಮತ್ತು ವಿವಾಹಕ್ಕಾಗಿ (ಇವೆಲ್ಲವುಗಳಿಗೆ ಸಮಯ ಪ್ರಾಪ್ತವಾದಾಗ). ಕರ್ತನನ್ನು ಸನ್ಮಾನಿಸುವವರು ಪ್ರತಿಯೊಂದು ಕ್ಷೇತ್ರದಲ್ಲಿ ಅತ್ಯುತ್ತಮವಾದದ್ದನ್ನೇ ಪಡೆಯುತ್ತಾರೆ - ಅವರು ಕಾಲೇಜಿನಲ್ಲಿ ಕಡಿಮೆ ಅಂಕ ಗಳಿಸಿದ್ದರೂ, ಅವರನ್ನು ಶಿಫಾರಸು ಮಾಡುವವರು ಅಥವಾ ಅವರಿಗೆ ಧನ ಸಹಾಯ ನೀಡುವವರು ಇಲ್ಲದಿದ್ದರೂ, ದೇಶದಲ್ಲಿ ಹಣಕಾಸಿನ ಸ್ಥಿತಿ ಹದಗೆಟ್ಟಿದ್ದರೂ ಪರವಾಗಿಲ್ಲ.

======================
"ನೀವು ದೇವರನ್ನು ಸನ್ಮಾನಿಸಲು ತವಕಿಸುವುದಾದರೆ, ನಿಮಗಾಗಿ ಆನಂದದಾಯಕ ಆಶ್ಚರ್ಯಗಳು ಕಾಯುತ್ತಿರುತ್ತವೆ, ಏಕೆಂದರೆ ಯಾವಾಗಲೂ ನಿಮ್ಮನ್ನು ಪ್ರೀತಿಸುವ ದೇವರು ನಿಮಗಾಗಿ ಮೌನವಾಗಿ ಯೋಜನೆಗಳನ್ನು ಮಾಡುತ್ತಿರುವರು."
======================
ಹದಿಹರೆಯದವರಲ್ಲಿ ಮತ್ತು ಇಪ್ಪತ್ತರ ವಯಸ್ಸನ್ನು ದಾಟಿದ ಯುವಕ-ಯುವತಿಯರಲ್ಲಿ ಮೂರ್ಖತನ ಬಹಳ ಸಾಮಾನ್ಯವಾಗಿ ವ್ಯಕ್ತವಾಗುತ್ತದೆ. ನೀವು ಜೀವನದುದ್ದಕ್ಕೂ ಕೆಟ್ಟ ಪರಿಣಾಮವನ್ನು ಉಂಟುಮಾಡುವ ಗಂಭೀರ ತಪ್ಪು ಕೆಲಸಗಳನ್ನು ಮಾಡದಂತೆ ತಡೆಯಲು ದೇವರ ಕೃಪೆಗೆ ಮಾತ್ರವೇ ಸಾಧ್ಯವಿದೆ. ಹಾಗಿರುವಾಗ ನೀವು ಎಲ್ಲಾ ವೇಳೆಯಲ್ಲಿ ದೇವರ ಭಯದಿಂದಲೂ, ಬಹಳ ಎಚ್ಚರಿಕೆಯಿಂದಲೂ ಜೀವಿಸಬೇಕಾಗಿದೆ.

ನಿಮ್ಮ ಜೀವಿತಕ್ಕಾಗಿ ದೇವರು ತಯಾರಿಸಿರುವ ಯೋಜನೆಯನ್ನು ತಳ್ಳಿಹಾಕಬೇಡಿರಿ. ನಾನು 19 1/2 ವಯಸ್ಸಿನವನು ಆಗಿದ್ದಾಗ ಕರ್ತನಾದ ಯೇಸುವಿಗೆ ನನ್ನ ಸ್ವಂತ ಜೀವಿತವನ್ನು ಪೂರ್ಣ ಹೃದಯದಿಂದ ಒಪ್ಪಿಸಿಕೊಟ್ಟೆನು. ಈಗ, ಹಲವಾರು ವರ್ಷಗಳ ನಂತರ ಸಂತೋಷದಿಂದ ಹಿಂತಿರುಗಿ ನೋಡುವಾಗ, ನನ್ನ ಜೀವಿತವನ್ನು ಉತ್ತಮ ಪಡಿಸಿಕೊಳ್ಳುವ ಸಲುವಾಗಿ "ನನ್ನ ದೃಷ್ಟಿಗೆ ಸರಿಯೆಂದು ಕಂಡದ್ದನ್ನು" ನಾನು ಒಂದು ವೇಳೆ ಮಾಡಿದ್ದಕ್ಕಿಂತ, ದೇವರು ನನ್ನ ಜೀವಿತದಲ್ಲಿ ಎಷ್ಟೋ ಉತ್ತಮವಾದದ್ದನ್ನು ಮಾಡಿದ್ದಾರೆ. ಇದರ ಅರ್ಥ ಇಷ್ಟು ವರ್ಷಗಳಲ್ಲಿ ನಾನು ಪಾಪ ಮಾಡಲಿಲ್ಲ, ಅಥವಾ ಯಾವುದೇ ಮೂರ್ಖತನದ ಕೆಲಸವನ್ನು ಮಾಡಲಿಲ್ಲ, ಅಥವಾ ಯಾವುದೇ ತಪ್ಪು ಮಾಡಲಿಲ್ಲವೆಂದಲ್ಲ. ನಾನು ಅವನ್ನೆಲ್ಲಾ ಮಾಡಿದ್ದೇನೆ - ಮತ್ತು ನನ್ನ ಹಿಂದಿನ ಜೀವಿತವನ್ನು ನೋಡುವಾಗ, ನನ್ನ ಮೂರ್ಖತನ ಮತ್ತು ನನ್ನಿಂದ ಉಂಟಾದ ದುರ್ಘಟನೆಗಳಿಗಾಗಿ ಈಗ ನನಗೆ ಬಹಳ ನಾಚಿಕೆಯಾಗುತ್ತದೆ. ಆದರೆ ದೇವರು ನನ್ನ ಮೇಲೆ ಕರುಣೆಯಿಟ್ಟು ಆ ಹಿಂದಿನ ಕಾರ್ಯಗಳನ್ನೆಲ್ಲಾ ಅಳಿಸಿ ಹಾಕಿದರು ಮತ್ತು ನನ್ನನ್ನು ಅಲ್ಲಿಂದ ಮುಂದಕ್ಕೆ ನಡೆಸಿದರು. ನಾನು ದೊಡ್ಡ ತಪ್ಪುಗಳನ್ನು ಮಾಡಿದ್ದರೂ, ಪ್ರಾಮಾಣಿಕವಾಗಿ ದೇವರ ಚಿತ್ತವನ್ನು ನೆರವೇರಿಸಲು ಇಷ್ಟಪಟ್ಟೆನೆಂದು ಅವರು ಕಂಡುಕೊಂಡರು ಎಂದು ನಾನು ನೆನೆಸುತ್ತೇನೆ. ಯಾರು ಎಷ್ಟೇ ತಪ್ಪುಗಳನ್ನು ಮಾಡಿದ್ದರೂ ದೇವರನ್ನು ಶ್ರದ್ಧೆಯಿಂದ ಹುಡುಕುತ್ತಾರೋ, ಅವರಿಗೆ ದೇವರು ಪ್ರತಿಫಲವನ್ನು ಕೊಡುತ್ತಾರೆ. ದೇವರ ಇಂತಹ ಒಳ್ಳೆಯತನ ಮತ್ತು ಕರುಣೆ ನಿಮ್ಮ ಜೀವಿತದುದ್ದಕ್ಕೆ ನಿಮ್ಮನ್ನು ಸಹ ಹಿಂಬಾಲಿಸುತ್ತದೆಂದು ನಾನು ನಂಬುತ್ತೇನೆ (ಕೀರ್ತನೆಗಳು 23:6).

"ನೀವು ದೇವರನ್ನು ಸನ್ಮಾನಿಸಲು ತವಕಿಸುವುದಾದರೆ, ಆನಂದದಾಯಕ ಆಶ್ಚರ್ಯಗಳು ನಿಮಗಾಗಿ ಕಾಯುತ್ತಿವೆ, ಏಕೆಂದರೆ ನಿಮ್ಮನ್ನು ಪ್ರೀತಿಸುವ ದೇವರು ಯಾವಾಗಲೂ ನಿಮಗಾಗಿ ಮೌನವಾಗಿ ಯೋಜನೆಗಳನ್ನು ಸಿದ್ಧಪಡಿಸುತ್ತಿರುವರು" (ಚೆಫನ್ಯನು 3:17 ಭಾವಾನುವಾದ). ಅದರಲ್ಲಿ ನಿಮ್ಮ ಭವಿಷ್ಯದ ಪ್ರತಿಯೊಂದು ವಿವರವು ಒಳಗೊಂಡಿರುತ್ತದೆ - ಲೌಕಿಕವಾದದ್ದು ಮತ್ತು ಆತ್ಮಿಕವಾದದ್ದು. ನೀವು ನಿಮ್ಮ ಜೀವಿತದ ಪ್ರತಿದಿನ ದೇವರನ್ನು ಸನ್ಮಾನಿಸಲು ನಿರ್ಧರಿಸಿದರೆ, ದೇವರು ನಿಮಗಾಗಿ ನೇಮಿಸಿದ ಅತ್ಯುತ್ತಮವಾದದ್ದನ್ನು ನೀವು ಹೊಂದುವಿರಿ. ಲೌಕಿಕ ಜನರಂತೆ ನಾವು ನಮ್ಮ ಭವಿಷ್ಯಕ್ಕಾಗಿ ಯೋಜನೆಗಳನ್ನು ಹಾಕಿಕೊಳ್ಳುವುದಿಲ್ಲ. ಲೌಕಿಕ ಸಂಗತಿಗಳಾದ ನೌಕರಿ ಇತ್ಯಾದಿಗಳ ಬಗ್ಗೆಯೂ ದೇವರು ನಮ್ಮ ಪರವಾಗಿ ಕೆಲಸ ಮಾಡುತ್ತಾರೆ ಮತ್ತು ನಮಗೆ ಯೋಗ್ಯತೆ ಇಲ್ಲದಿದ್ದರೂ ಅವರು ವಿಶೇಷವಾದ ಬಹುಮಾನಗಳನ್ನು ನಮಗೆ ನೀಡುತ್ತಾರೆ. ಆದುದರಿಂದ ನಮಗೆ ಭವಿಷ್ಯದ ಬಗ್ಗೆ ಸ್ವಲ್ಪವೂ ಆತಂಕವಿಲ್ಲ. ಯೇಸುವು ನಮಗೆ ಕಲಿಸಿದ ಹಾಗೆ, ನಾವು ದಿನದಿಂದ ದಿನಕ್ಕೆ ಜೀವಿಸುತ್ತೇವೆ, ಮತ್ತು ಆಕಾಶದ ಹಕ್ಕಿಗಳಂತೆ ಕಳವಳ ಮತ್ತು ಉದ್ವೇಗವಿಲ್ಲದೆ ಬಾಳುತ್ತೇವೆ. ಕರ್ತನಿಗೆ ಸ್ತೋತ್ರವಾಗಲಿ!

ಅಪೊಸ್ತಲ ಪೌಲನು ತನ್ನ ಪ್ರಾಣವನ್ನು ಸಹ ಅಮೂಲ್ಯವೆಂದು ಪರಿಗಣಿಸಲಿಲ್ಲ, ಕೇವಲ ತನ್ನ ಓಟದಲ್ಲಿ ಉಲ್ಲಾಸದಿಂದ ಗುರಿ ತಲುಪುವುದೇ ಅವನ ಅಪೇಕ್ಷೆಯಾಗಿತ್ತು (ಅಪೊಸ್ತಲರ ಕೃತ್ಯಗಳು 20:24 - KJV ಭಾಷಾಂತರ). ತಂದೆತಾಯಿಯರು ತಮ್ಮ ಚಿಕ್ಕ ಮಗುವನ್ನು ಶಾಲೆಗೆ ಸೇರಿಸುವಾಗ, ಅವನು ವಿದ್ಯಾಭ್ಯಾಸ ಮುಗಿಸಿ ಪದವಿಯನ್ನು ಪಡೆಯುವ ದಿನವನ್ನು ಎದುರು ನೋಡುತ್ತಾರೆ. ದೇವರಲ್ಲೂ ಇದೇ ಅಪೇಕ್ಷೆಯಿದೆ. ಅವರು ನಮ್ಮ ಜೀವಿತಕ್ಕಾಗಿ ಒಂದು ಯೋಜನೆಯನ್ನು ಹಾಕಿಕೊಂಡಿದ್ದಾರೆ. ಈ ಲೋಕದಲ್ಲಿ ದೇವರು ನಮಗಾಗಿ ನಿಗದಿ ಪಡಿಸಿರುವ ಉದ್ದೇಶವನ್ನು ನಾವು ಪೂರೈಸಬೇಕು. ನಾವು ನಮ್ಮ ಲೌಕಿಕ ಜೀವಿತದಲ್ಲಿ ಅನೇಕ ತಪ್ಪುಗಳನ್ನು ಮಾಡಬಹುದು ಮತ್ತು ಅನಾಹುತಗಳಿಗೆ ಕಾರಣರಾಗಬಹುದು ಹಾಗೂ ಮೂರ್ಖತನದಿಂದ ಸಮಯವನ್ನು ವ್ಯರ್ಥಗೊಳಿಸಬಹುದು. ಆದರೆ ಇವೆಲ್ಲವೂ ಶಾಲೆಯಲ್ಲಿ ಗಣಿತದ ಸಮಸ್ಯೆಯನ್ನು ಬಗೆಹರಿಸುವಾಗ ನಾವೆಲ್ಲರೂ ಮಾಡಿರುವ ತಪ್ಪುಗಳಂತೆ ಇರುವುದಕ್ಕಾಗಿ ನಾವು ಸ್ತೋತ್ರ ಸಲ್ಲಿಸಬೇಕಾಗಿದೆ. ನಮ್ಮ ನೌಕರಿ, ಮದುವೆ ಮುಂತಾದ ಪ್ರಮುಖ ವಿಷಯಗಳಿಗಾಗಿ ದೇವರು ಒಂದು ಸಂಪೂರ್ಣ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಆದರೆ ಪವಿತ್ರತೆಯ ವಿಷಯದಲ್ಲಿ ನಾವು ದೇವರ ಚಿತ್ತದ ಪ್ರಕಾರ ನಡೆಯಲು ತವಕಿಸಿದರೆ ಮಾತ್ರ ಇವೆಲ್ಲವೂ ಕೈಗೂಡುತ್ತವೆ. ನಾವು ಪೂರ್ಣಹೃದಯದಿಂದ ಪವಿತ್ರತೆಯನ್ನು ಅನುಸರಿಸಿದರೆ, ನಮ್ಮ ಜೀವಿತದ ಇತರ ಎಲ್ಲಾ ಲೌಕಿಕ ವಿಷಯಗಳಲ್ಲಿ ದೇವರು ತಮ್ಮ ಯೋಜನೆಯು ಪೂರ್ಣಗೊಳ್ಳುವಂತೆ ನೋಡಿಕೊಳ್ಳುತ್ತಾರೆ.