ನಾವು ಪರಲೋಕವನ್ನು ಪ್ರವೇಶಿಸಿದಾಗ, ನಾವು ಭೂಲೋಕದ ರಸ್ತೆಗಳಲ್ಲಿ ಓಡಾಡುತ್ತಿದ್ದ ಸಂದರ್ಭಗಳಲ್ಲಿ ನಮ್ಮನ್ನು ಕಾಪಾಡಿದ ದೇವದೂತರನ್ನು ಭೇಟಿಯಾಗುತ್ತೇವೆ. ಆ ಕೊನೆಯ ದಿನದಲ್ಲಿ, ನಮ್ಮ ಭೂಲೋಕದ ಸಂಪೂರ್ಣ ಜೀವಿತದ ವೀಡಿಯೋ-ಟೇಪ್ ನಮಗೆ ತೋರಿಸಲ್ಪಡುತ್ತದೆ ಮತ್ತು ಸಾವಿರಾರು ದೇವದೂತರು ನಮ್ಮನ್ನು ಕಾಪಾಡಿದ್ದನ್ನು ನಾವು ಕಂಡುಕೊಳ್ಳುತ್ತೇವೆ ಮತ್ತು ನಾವು ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ನಾವು ರಸ್ತೆಗಳಲ್ಲಿ "ಸಾವಿನ ದವಡೆಯಿಂದ ಪಾರಾದ" ಕೆಲವು ಸನ್ನಿವೇಶಗಳನ್ನು ಮಾತ್ರ ಈಗ ನಾವು ಜ್ಞಾಪಿಸಿಕೊಳ್ಳುತ್ತೇವೆ. ಆದರೆ ಆ ದಿನದಲ್ಲಿ ನಾವು ಇನ್ನೂ ಎಷ್ಟೋ ಸನ್ನಿವೇಶಗಳಲ್ಲಿ "ಸ್ವಲ್ಪದರಲ್ಲಿ ತಪ್ಪಿಸಿಕೊಂಡೆವು" ಎಂಬುದನ್ನು ಕಂಡುಕೊಳ್ಳುತ್ತೇವೆ. ಹಾಗಾಗಿ ನಿಮ್ಮಲ್ಲಿ ಕೃತಜ್ಞತೆ ಇರಬೇಕು.
ಎಲ್ಲಾ ಸಂಗತಿಗಳು ನಮ್ಮ ಅನುಕೂಲಕ್ಕಾಗಿ ಒಟ್ಟಾಗಿ, ಅತ್ಯಂತ ಉತ್ತಮವಾಗಿ ಕೆಲಸ ಮಾಡುತ್ತವೆ. ಕೆಲವು ವರ್ಷಗಳ ಹಿಂದೆ ನನಗೆ ಸಂಭವಿಸಿದ ಒಂದು ಅಪಘಾತದ ನಂತರ ನಾನು ಹೀಗೆ ಪ್ರಾರ್ಥಿಸಿದೆ, "ಕರ್ತನೇ, ನೀವು ಕಲ್ವಾರಿಯ ಮೇಲೆ ನನಗಾಗಿ ಮಾಡಿದ ಕಾರ್ಯಕ್ಕಾಗಿ ನಾನು ಇನ್ನೂ ಸಂಪೂರ್ಣವಾಗಿ ಕೃತಜ್ಞತೆಯನ್ನು ಸಲ್ಲಿಸಿಲ್ಲ. ಹಾಗಾಗಿ ನಿಮಗೆ ’ಧನ್ಯವಾದ’ ಸಲ್ಲಿಸಲಿಕ್ಕೆ ನನಗೆ ಇನ್ನೂ ಸ್ವಲ್ಪ ಸಮಯ ನೀಡಿ". ಆ ಸಂದರ್ಭದಲ್ಲಿ ಈ ಮಾತು ನನಗೆ ಹೊಳೆಯಿತು: "ಕರ್ತನು ಶಿಲುಬೆಯ ಮೇಲೆ ನಮಗಾಗಿ ಮಾಡಿದ ಕಾರ್ಯಕ್ಕಾಗಿ ನಾವೆಲ್ಲರೂ ನಿರಂತರವಾದ ಕೃತಜ್ಞತೆಯ ಜೀವಿತವನ್ನು ಜೀವಿಸಬೇಕು".
ಪ್ರತಿಯೊಂದು ಸಂಗತಿಯಲ್ಲೂ ದೇವರ ಒಂದು ಉದ್ದೇಶವಿದೆ. ಯಾಕೋಬನ ಬಗ್ಗೆ ಹೀಗೆ ಬರೆಯಲ್ಪಟ್ಟಿದೆ: "ಅವನು ನಂಬಿಕೆಯಿಂದ ತನ್ನ ಕೋಲಿನ ಮೇಲೆ ಬಾಗಿಕೊಂಡು ದೇವರನ್ನು ಆರಾಧಿಸಿದನು (ಅದು ವಾಸ್ತವವಾಗಿ ಊರುಗೋಲಾಗಿತ್ತು; ಅವನ ತೊಡೆಯ ಕೀಲನ್ನು ದೇವರು ಮುರಿದಿದ್ದರಿಂದ, ಈಗ ಅವನಿಗೆ ನಡೆಯಲು ಆಗುತ್ತಿರಲಿಲ್ಲ), ಮತ್ತು ಯಾಕೋಬನು ಇತರರನ್ನು ಆಶೀರ್ವದಿಸಿದನು" (ಇಬ್ರಿಯರಿಗೆ 11:21). ಹಿಂದೆ ಬಲಿಷ್ಠನೂ ಸ್ವಾವಲಂಬಿಯೂ ಆಗಿದ್ದ ಯಾಕೋಬನಿಗೆ ಆ ಊರುಗೋಲು ನಿರಂತರವಾಗಿ ಜ್ಞಾಪಿಸುತ್ತಿದ್ದುದು ಏನೆಂದರೆ, ಅಸಹಾಯಕನಾಗಿರುವ ಆತನು ಪ್ರತಿಯೊಂದು ಸಂಗತಿಗಾಗಿ ದೇವರನ್ನು ಆತುಕೊಳ್ಳಬೇಕು, ಎಂಬುದಾಗಿ. ಈ ರೀತಿಯಾಗಿ ಆತನು "ಇಸ್ರಾಯೇಲನು" ಎಂಬ ಹೆಸರನ್ನು ಪಡೆದನು - ದೇವರೊಂದಿಗೂ ಮನುಷ್ಯರೊಂದಿಗೂ ಬಲವನ್ನು ಹೊಂದಿದ್ದ "ದೇವರ ರಾಜಕುಮಾರನು" ಎನಿಸಿಕೊಂಡನು. ಅವನು ಈ ದುರ್ಬಲ ಸ್ಥಿತಿಗೆ ಬರುವುದರ ಮೂಲಕ (ಆ ವಚನದಲ್ಲಿ ಹೇಳಲಾಗಿರುವಂತೆ) ಇತರರನ್ನು ಆಶೀರ್ವದಿಸಲು ಸಾಧ್ಯವಾಯಿತು. ನಿಮಗೂ ಸಹ ಸ್ವಲ್ಪ ಮಟ್ಟಿಗೆ ಇಂತಹ ಅನುಭವ ಉಂಟಾಗಲಿ ಎಂಬುದು ನನ್ನ ಪ್ರಾರ್ಥನೆಯಾಗಿದೆ. ನಿಮ್ಮ ಮಾನವ ಬಲವು ಮುರಿಯಲ್ಪಟ್ಟು, ನೀವು ಕೇವಲ ದೇವರನ್ನು ಆತುಕೊಳ್ಳಬೇಕು ಮತ್ತು ನೀವು ಇಂತಹ ಅನುಭವವಿಲ್ಲದೆ ಮಾಡುತ್ತಿದ್ದುದಕ್ಕಿಂತ ಬಹಳ ಹೆಚ್ಚಾಗಿ ಇತರರನ್ನು ಆಶೀರ್ವದಿಸುವಂತಾಗಲಿ, ಎಂದು ನಾನು ಪ್ರಾರ್ಥಿಸುತ್ತೇನೆ.
ದೇವರು ನಿಮ್ಮ ಜೀವಿತವನ್ನು - ಅದರ ಪ್ರತಿಯೊಂದು ವಿವರವನ್ನೂ - ಪರಿಪೂರ್ಣವಾಗಿ ಯೋಜಿಸಿದ್ದಾರೆ. ಸೈತಾನನು ಯೇಸುವಿನ ಮೇಲೆ ದಾಳಿಮಾಡಲು ದೇವರು ಅನುಮತಿಸಿದ ಹಾಗೆಯೇ, ಸೈತಾನನು ನಿಮ್ಮ ಮೇಲೆ ದಾಳಿಮಾಡಲು ಅವರು ಅನುಮತಿಸುತ್ತಾರೆ. ಆದರೆ ಯೇಸುವು ತನ್ನ ಆತ್ಮವನ್ನು ಪರಿಶುದ್ಧವಾಗಿ ಇರಿಸಿಕೊಂಡರು ಮತ್ತು ನೀವೂ ಸಹ ನಿಮ್ಮ ಆತ್ಮವನ್ನು ಪರಿಶುದ್ಧವಾಗಿ ಇರಿಸಿಕೊಳ್ಳಲು ಸಾಧ್ಯವಿದೆ. ನೀವು ಎಂತಹ ಕಷ್ಟಕರ ಸನ್ನಿವೇಶಗಳಲ್ಲಿ ಸಿಲುಕಿದ್ದರೂ, "ದೇವರಿಗಾದರೋ ನಿಮ್ಮ ಜೀವನದ ಹಾದಿಯ ಪ್ರತಿಯೊಂದು ವಿವರವೂ ತಿಳಿದಿದೆ" (ಯೋಬನು 23:10 - Living Bible); ಮತ್ತು ಅವರು ಪ್ರತಿಯೊಂದು ವಿವರವನ್ನೂ ತನ್ನ ಹತೋಟಿಯಲ್ಲಿ ಇರಿಸಿಕೊಳ್ಳುತ್ತಾರೆ (ರೋಮಾ. 8:28). ಹಾಗಾಗಿ ನೀವು ಇದರಲ್ಲಿ ನೆಮ್ಮದಿ ಹೊಂದಿರಿ. "ಮನುಷ್ಯರ ಸಹಾಯವು ವ್ಯರ್ಥ" ಎಂದು ನೀವು ಮನಗಾಣುವ ಸಂದರ್ಭಗಳಲ್ಲಿ, ದೇವರ ಮೇಲೆ ಮಾತ್ರ ಭಾರ ಹಾಕುವುದು ಒಳ್ಳೆಯದು ಎಂಬುದನ್ನು ಅನುಭವಿಸಿ ತಿಳಿಯಿರಿ. ಆತ್ಮಿಕ ಬೆಳವಣಿಗೆಗೆ ಇದೊಂದೇ ದಾರಿಯಾಗಿದೆ. ’ಸಿ. ಟಿ. ಸ್ಟಡ್’ ಎಂಬುವರು ಒಮ್ಮೆ ಹೀಗೆ ಹೇಳಿದರು, "ನಾನು ಕಷ್ಟಕರ ಸನ್ನಿವೇಶಗಳನ್ನು ಒಳ್ಳೆಯ ಸೌಭಾಗ್ಯವೆಂದು ಇಷ್ಟಪಡುತ್ತೇನೆ, ಏಕೆಂದರೆ ಆ ಸಂದರ್ಭದಲ್ಲಿ ದೇವರು ನನಗಾಗಿ ಎಂತಹ ಅದ್ಭುತಗಳನ್ನು ಮಾಡುತ್ತಾರೆಂದು ನಾನು ನೋಡುತ್ತೇನೆ".
"ಕರ್ತನು ಶಿಲುಬೆಯ ಮೇಲೆ ನಮಗಾಗಿ ಮಾಡಿದ ಕಾರ್ಯಕ್ಕಾಗಿ ನಾವೆಲ್ಲರೂ ನಿರಂತರ ಕೃತಜ್ಞತೆಯ ಜೀವಿತವನ್ನು ಜೀವಿಸಬೇಕು"
ತಂದೆಯಾದ ದೇವರು ನಮ್ಮನ್ನು ಆರಿಸಿಕೊಂಡರು, ದೇವಕುಮಾರನು ತನ್ನ ರಕ್ತವನ್ನು ಸುರಿಸಿ ನಮ್ಮನ್ನು ಖರೀದಿಸಿದನು ಮತ್ತು ಈಗ ಪವಿತ್ರಾತ್ಮನು ಮುದ್ರೆ ಹಾಕಿ ನಮ್ಮನ್ನು ದೇವರ ಸ್ವಕೀಯ ಪ್ರಜೆಗಳಾಗಿ ಮಾಡಿದ್ದಾನೆ, ಎಂಬುದನ್ನು ನಾವು ಅರಿತುಕೊಂಡಾಗ ಅದು ನಮಗೆ ಸಂಪೂರ್ಣ ನೆಮ್ಮದಿಯನ್ನು ತರುತ್ತದೆ (ಎಫೆಸದವರಿಗೆ 1:1-13). ನಮ್ಮ ರಕ್ಷಣೆಯು ಸಂಪೂರ್ಣವಾಗಿ ದೇವರ ಕೃಪೆಯಿಂದಲೇ ಉಂಟಾಯಿತು. ನಾವು ನಂಬಿಕೆಯಿಂದ "ಒಪ್ಪಿಕೊಳ್ಳುತ್ತೇನೆ" ಎಂದು ಮಾತ್ರ ಹೇಳುವುದಕ್ಕಾಗಿ ದೇವರು ಕಾದಿದ್ದರು ಮತ್ತು ಆ ಮೇಲೆ ದೇವರ ವರದಿಂದ ಎಲ್ಲವೂ ಪ್ರಾಪ್ತವಾಯಿತು (ಎಫೆಸದವರಿಗೆ 2:1-8). ನಾವು ’ರೋಬೋಟ್’ ಯಂತ್ರಗಳಲ್ಲ, ಹಾಗಾಗಿ ನಮ್ಮ ಒಪ್ಪಿಗೆಯಿಲ್ಲದೆ ದೇವರು ನಮ್ಮನ್ನು ರಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ.
ದೇವರು ನಮ್ಮನ್ನು ಜಗದುತ್ಪತ್ತಿಗೆ ಮುಂಚೆ ಆರಿಸಿಕೊಂಡರು - ಅಂದರೆ, ನಾವು ಒಳ್ಳೆಯದನ್ನಾಗಲೀ ಕೆಟ್ಟದ್ದನ್ನಾಗಲೀ ಮಾಡುವುದಕ್ಕೆ ಮುಂಚೆ (ರೋಮಾ. 9:11) - ಮತ್ತು ನಮಗೆ ಕ್ರಿಸ್ತ ಯೇಸುವಿನಲ್ಲಿ ಸಕಲ ಆತ್ಮೀಯ ವರಗಳನ್ನು ಅನುಗ್ರಹಿಸುವುದಾಗಿ ನಿಶ್ಚಯಿಸಿದರು. ಆದ್ದರಿಂದ ಅವರು ನಮ್ಮ ಕುರಿತಾಗಿ ಮಾಡಿದ ನಿರ್ಧಾರವನ್ನು ಎಂದಿಗೂ ಬದಲಾಯಿಸುವುದಿಲ್ಲ.