WFTW Body: 

ವಿಮೋಚನಕಾಂಡದ 15ನೇ ಅಧ್ಯಾಯವು ಇಸ್ರಾಯೇಲ್ಯರು ದೇವರನ್ನು ಸ್ತುತಿಸುವುದರೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಅವರು ದೇವರ ವಿರುದ್ಧವಾಗಿ ಗೊಣಗುಟ್ಟುವುದರೊಂದಿಗೆ ಕೊನೆಗೊಳ್ಳುತ್ತದೆ. ಇಸ್ರಾಯೇಲ್ಯರು ಅರಣ್ಯದಲ್ಲಿ ಇದೇ ರೀತಿಯ ನಡವಳಿಕೆಯನ್ನು ಪದೇ ಪದೇ ಪ್ರಕಟಪಡಿಸಿದರು. ಗಣಿತಶಾಸ್ತ್ರದಲ್ಲಿ ಕಂಡುಬರುವ ನಿರಂತರವಾಗಿ ಮೇಲೆ ಏರಿ ಕೆಳಗೆ ಇಳಿಯುವ "ಸೈನ್ ವೇವ್” ಎಂಬ ತರಂಗವು (ಅಲೆಯು) ಹೆಚ್ಚಿನ ವಿಶ್ವಾಸಿಗಳ ಜೀವನವನ್ನು ಉತ್ತಮವಾಗಿ ನಿರೂಪಿಸುತ್ತದೆ, ಅವರು ತಾವು ಬಯಸಿದ್ದನ್ನು ಪಡೆದಾಗ ದೇವರನ್ನು ಸ್ತುತಿಸುತ್ತಾರೆ, ಅದು ಎಲ್ಲಾದರೂ ತಪ್ಪಿಹೋದರೆ ದೇವರನ್ನು ದೂಷಿಸುತ್ತಾರೆ, ಸಮಸ್ಯೆಯಿಂದ ಹೊರಬಂದಾಗ ಮತ್ತೆ ದೇವರಿಗೆ ಕೃತಜ್ಞತೆ ಸಲ್ಲಿಸುತ್ತಾರೆ, ಮತ್ತೊಂದು ಸಮಸ್ಯೆ ತಲೆದೋರಿದಾಗ ಮತ್ತೆ ಸಂದೇಹ ಪಡುತ್ತಾರೆ. ಇದಕ್ಕೆ ಕಾರಣವೇನೆಂದರೆ, ಹೆಚ್ಚಿನ ವಿಶ್ವಾಸಿಗಳು - ನಿಖರವಾಗಿ ಇಸ್ರಾಯೇಲ್ಯರಂತೆಯೇ - ಕಣ್ಣಿಗೆ ಕಾಣುವುದರ ಆಧಾರದ ಮೇಲೆ ನಿರ್ಧಾರಗಳನ್ನು ಕೈಗೊಳ್ಳುತ್ತಾರೆಯೇ ಹೊರತು ನಂಬಿಕೆಯಿಂದಲ್ಲ. ಅವರು ಭಾನುವಾರ ಬೆಳಿಗ್ಗೆ ತಮ್ಮ ಸಭಾಕೂಟದಲ್ಲಿ (ಕೆಲವೊಮ್ಮೆ ಅನ್ಯಭಾಷೆಗಳಲ್ಲಿ) ದೇವರನ್ನು ಗಟ್ಟಿಯಾಗಿ ಸ್ತುತಿಸುತ್ತಾರೆ. ಆದರೆ ಭಾನುವಾರ ಮಧ್ಯಾಹ್ನದಿಂದಲೇ ಅವರು ಮಾತನಾಡುವ ರೀತಿ ಬದಲಾಗುತ್ತದೆ, ಈ ಬಾರಿ ಎಲ್ಲವೂ ಮಾತೃಭಾಷೆಯಲ್ಲಿ ನಡೆಯುತ್ತದೆ. ಅವರ ಮನೆಗಳಲ್ಲೂ ಮತ್ತು ಕಚೇರಿಗಳಲ್ಲೂ ಕೋಪಗೊಳ್ಳುವುದು, ಗೊಣಗುಟ್ಟುವುದು ಮತ್ತು ದೂಷಿಸುವುದು - ಇದೇ ನಡೆಯುತ್ತದೆ! ನಂತರ, ಮುಂದಿನ ಭಾನುವಾರ ಅವರ ಸೈನ್-ವೇವ್ ತರಂಗವು ಮತ್ತೊಮ್ಮೆ ಮೇಲಕ್ಕೆ ಹೋಗುತ್ತದೆ ಮತ್ತು ಅವರು ಪುನಃ ದೇವರನ್ನು ಸ್ತುತಿಸಲು ಪ್ರಾರಂಭಿಸುತ್ತಾರೆ.

ಇದರ ನಂತರ, ಆ ತರಂಗವು ಮತ್ತೆ ಕೆಳಗೆ ಹೋಗುತ್ತದೆ!! ದೇವರು ತನ್ನ ಹೊಸ ಒಡಂಬಡಿಕೆಯ ಮಕ್ಕಳು ಈ ರೀತಿ ಜೀವಿಸಬೇಕೆಂದು ಖಂಡಿತವಾಗಿಯೂ ಉದ್ದೇಶಿಸಲಿಲ್ಲ. ಒಬ್ಬ ವ್ಯಕ್ತಿಗೆ ಅನ್ಯಭಾಷೆಯ ವರವನ್ನು ಕೊಡುವ ಪವಿತ್ರಾತ್ಮನು, ಅವನು ಮಾತೃಭಾಷೆಯಲ್ಲಿ ಆಡುವ ಮಾತನ್ನೂ ನಿಯಂತ್ರಿಸಲಾರನೇ? ಪವಿತ್ರಾತ್ಮನು ಖಂಡಿತವಾಗಿಯೂ ಇದನ್ನು ಮಾಡಲು ಶಕ್ತನಾಗಿದ್ದಾನೆ. "ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ. ಎಲ್ಲದರಲ್ಲೂ ಕೃತಜ್ಞತೆ ಸಲ್ಲಿಸಿರಿ," ಎಂದು ಸತ್ಯವೇದವು ಹೇಳುತ್ತದೆ ( ಪಿಲಿಪ್ಪಿ 4:4 , ಎಫೆ. 5:20).

ಎಲ್ಲಾ ಸಮಯದಲ್ಲಿ ನಮಗಾಗಿ ದೇವರ ಚಿತ್ತ ಇದೇ ಆಗಿದೆ. ಆದರೆ ಅದನ್ನು ಪೂರೈಸುವುದಕ್ಕೆ ನಾವು ನಂಬಿಕೆಯಿಂದ ಜೀವಿಸಬೇಕು. ನಾವು ಎದುರಿಸುವ ಪ್ರತಿಯೊಂದು ಸಮಸ್ಯೆಗೆ ಪರಿಹಾರ ದೇವರ ಬಳಿ ಇದೆಯೆಂದು ನಾವು ನಂಬಬೇಕು.

ಇಸ್ರಾಯೇಲ್ಯರು ಮೋಶೆಯ ಮುಂದೆ ಗೊಣಗುಟ್ಟಿದಾಗ (ನೀರು ಕಹಿಯಾಗಿದೆಯೆಂದು), ಆತನು ಕರ್ತನಿಗೆ ಮೊರೆಯಿಟ್ಟನು ಮತ್ತು ಕರ್ತನು ಅವನಿಗೆ ಹೇಳಿದ್ದೇನೆಂದರೆ, "ಈ ಸಮಸ್ಯೆಗೆ ಪರಿಹಾರವು ಇಲ್ಲೇ ಇದೆ - ನಿನ್ನ ಮುಂದೆಯೇ ಇದೆ" (ವಿಮೋ. 15:25). ಕರ್ತನು ಮೋಶೆಗೆ ಒಂದು ಮರವನ್ನು ತೋರಿಸಿದನು. ಮೋಶೆಯು ಆ ಮರವನ್ನು ಕಡಿದು ನೀರಿನಲ್ಲಿ ಹಾಕಿದಾಗ ನೀರು ಸಿಹಿಯಾಗಿ ಮಾರ್ಪಟ್ಟಿತು.

"ನಂಬಿಕೆಯಲ್ಲಿ ನಡೆಯುವುದೆಂದರೆ, ಯಾವ ಸಮಸ್ಯೆಯೂ ಈ ದಿನ ಇದ್ದಕ್ಕಿದ್ದಂತೆ ಕಾಣಿಸಿಕೊಂಡು ದೇವರನ್ನು ಆಶ್ಚರ್ಯಪಡಿಸಲಾರದು, ಎಂಬುದಾಗಿ ನಂಬುವುದು."

ಅರಣ್ಯದಲ್ಲಿ ಆ ಮರವನ್ನು ಯಾರು ನೆಟ್ಟರು? ಒಬ್ಬ ಮನುಷ್ಯನು ನೆಟ್ಟನೋ ಅಥವಾ ದೇವರೋ? ನಿಸ್ಸಂದೇಹವಾಗಿ ದೇವರೇ! ಮನುಷ್ಯರು ಅರಣ್ಯದಲ್ಲಿ ಮರಗಳನ್ನು ನೆಡುವುದಿಲ್ಲ. ದೇವರು ಆ ಮರವನ್ನು ಮಾರಾ ಎಂಬ ಆ ಸ್ಥಳದಲ್ಲಿ (ಅರಣ್ಯದ ಮಧ್ಯದಲ್ಲಿ) ಬಹುಶಃ ನೂರು ವರ್ಷಗಳ ಹಿಂದೆಯೇ ನೆಟ್ಟಿದ್ದರು, ಏಕೆಂದರೆ ನೂರು ವರ್ಷಗಳ ನಂತರ ಅವರ ಮಕ್ಕಳು ಮಾರಾಕ್ಕೆ ಬರುತ್ತಾರೆ ಮತ್ತು ನೀರು ಕಹಿಯಾಗಿದ್ದುದನ್ನು ಕಂಡುಕೊಳ್ಳುತ್ತಾರೆ, ಎಂದು ದೇವರಿಗೆ ತಿಳಿದಿತ್ತು. ಹಾಗಾಗಿ ಅವರು ತನ್ನ ಮಕ್ಕಳ ಸಮಸ್ಯೆಗೆ ಒಂದು ಪರಿಹಾರವನ್ನು ನಿಜವಾಗಿ ನೂರು ವರ್ಷ ಮುಂಚಿತವಾಗಿಯೇ ಯೋಜಿಸಿದ್ದರು. ಇದೇ ದೇವರು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರಗಳನ್ನು ಆ ಸಮಸ್ಯೆಗಳನ್ನು ನೀವು ಎದುರಿಸುವುದಕ್ಕೆ ಬಹಳ ಮುಂಚೆಯೇ ಸಿದ್ಧಪಡಿಸಿದ್ದಾರೆಂದು ನಿಮಗೆ ತಿಳಿದಿದೆಯೇ?

ನಂಬಿಕೆಯಲ್ಲಿ ನಡೆಯುವುದೆಂದರೆ ಇದನ್ನು ನಂಬುವುದಾಗಿದೆ. ಈ ದಿನ ಇದ್ದಕ್ಕಿದ್ದಂತೆ ಯಾವುದೇ ಸಮಸ್ಯೆಯು ಕಾಣಿಸಿಕೊಂಡರೆ, ಅದು ದೇವರಿಗೆ ಆಶ್ಚರ್ಯವೆನಿಸುವುದಿಲ್ಲ. ಸೈತಾನನು ನಮಗೆ ಯಾವ ಸಮಸ್ಯೆಯನ್ನು ಸಿದ್ಧಪಡಿಸುತ್ತಿದ್ದಾನೆ ಎಂಬುದು ದೇವರಿಗೆ ಮೊದಲೇ ಗೊತ್ತಿರುವುದು ಮಾತ್ರವಲ್ಲದೆ, ಅವರು ಮೊದಲೇ ಅವೆಲ್ಲವುಗಳನ್ನು ಪರಿಹರಿಸುವ ಮಾರ್ಗವನ್ನು ಸಹ ಸಿದ್ಧಪಡಿಸಿದ್ದಾರೆ! ಆದುದರಿಂದ ನಾವು ಪ್ರತಿಯೊಂದು ಸಮಸ್ಯೆಯನ್ನು ಧೈರ್ಯದಿಂದ ಎದುರಿಸಬಹುದು.

ನಾನು 65 ವರ್ಷಗಳು ವಿಶ್ವಾಸಿಯಾಗಿ ಈ ರೀತಿಯ ಅನೇಕ ಸಮಸ್ಯೆಗಳನ್ನು ಎದುರಿಸಿದ ನಂತರ, ಈ ಸತ್ಯದ ಕುರಿತಾಗಿ ಸಾಕ್ಷಿ ನುಡಿಯಬಲ್ಲೆ. ನಾನು ಇದುವರೆಗೆ ಎದುರಿಸಿರುವ ಒಂದು ಸಮಸ್ಯೆಗಾದರೂ ಪರಿಹಾರ ಮಾರ್ಗ ದೇವರಿಗೆ ತಿಳಿಯದೇ ಇದ್ದುದನ್ನು ನಾನು ಕಂಡಿಲ್ಲ. ನಾನು ನನ್ನ ಜೀವಿತದಲ್ಲಿ ಮಾರಾದ ಕಹಿ ನೀರಿಗೆ ಬರುವುದಕ್ಕೆ ಬಹಳ ಮುನ್ನ ಅವರು ಆ ನೀರನ್ನು ಸಿಹಿ ಮಾಡುವಂತ ಮರಗಳ ಬೀಜಗಳನ್ನು ಬಿತ್ತಿದ್ದಾರೆ. ಯಾವಾಗಲೂ ನಮಗಾಗಿ ಪ್ರೀತಿಯಿಂದ ಮೌನವಾಗಿ ಯೋಜನೆಗಳನ್ನು ಮಾಡುತ್ತಿರುವ ಅದ್ಭುತನಾದ ನಮ್ಮ ಪ್ರೀತಿಯ ತಂದೆಯಲ್ಲಿ ನಂಬಿಕೆ ಇರಿಸಿ ನಡೆಯುವಂತೆ ನಾನು ನಿಮ್ಮನ್ನು ಪ್ರೇರೇಪಿಸುತ್ತೇನೆ (ಚೆಫನ್ಯನು 3:17 ಭಾವಾನುವಾದ) - ಮತ್ತು ನೀವು ಸತತವಾಗಿ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಜಯಿಸುತ್ತೀರಿ. ನೀವು ಮುಂದೆ ಎಂದಿಗೂ ದೂರುವುದಿಲ್ಲ ಮತ್ತು ಗೊಣಗುಟ್ಟುವುದಿಲ್ಲ ಮತ್ತು ನಿಮ್ಮ ಬಾಯಿಯಿಂದ ಕೋಪದ ನುಡಿಗಳು ಹೊರಡುವುದಿಲ್ಲ, ಆದರೆ ದೇವರಿಗೆ ಕೇವಲ ಸ್ತೋತ್ರ ಮತ್ತು ಕೃತಜ್ಞತೆಗಳು ಹೊರಡುತ್ತವೆ.