WFTW Body: 

ಸ್ವಂತ ನ್ಯಾಯವಿಚಾರಣೆಯು ದೇವರ ಮನೆಯ ಒಂದು ವಿಭಿನ್ನವಾದ ಲಕ್ಷಣವಾಗಿರುತ್ತದೆ (1 ಪೇತ್ರ. 4:17) - ಅಂದರೆ, ದೇವರ ಸಾನ್ನಿಧ್ಯದಲ್ಲಿ ಜೀವಿಸುವುದರ ಫಲವಾಗಿ ನಮ್ಮನ್ನೇ ನ್ಯಾಯತೀರ್ಪು ಮಾಡಿಕೊಳ್ಳುವುದು. ಯೆಶಾಯ, ಯೋಬ ಮತ್ತು ಯೋಹಾನ ಇವರೆಲ್ಲರೂ ದೇವರನ್ನು ದೃಷ್ಟಿಸಿದ ಮೇಲೆ, ತಮ್ಮ ಸ್ವಂತ ಶೂನ್ಯತೆಯನ್ನು ಮತ್ತು ತಮ್ಮ ಪಾಪವನ್ನು ಕಂಡುಕೊಂಡರು (ಯೆಶಾ. 6:5; ಯೋಬ. 42:5,6; ಪ್ರಕ. 1:17 ನೋಡಿರಿ).

ಆದಾಮ ಮತ್ತು ಹವ್ವರು ದೇವರ ಪವಿತ್ರತೆಯನ್ನು ಭ್ರಷ್ಟಗೊಳಿಸಿದಾಗ, ಅವರು ಏದೆನ್ ತೋಟದಿಂದ ಹೊರಕ್ಕೆ ತಳ್ಳಲ್ಪಟ್ಟರು. ಆಗ ದೇವರು ಅಲ್ಲಿದ್ದ ಜೀವವೃಕ್ಷವನ್ನು ಕಾಯುವುದಕ್ಕಾಗಿ ಬೆಂಕಿಯ ಜ್ವಾಲೆಯಂತೆ ಪ್ರಜ್ವಲಿಸುವ ಕತ್ತಿಯನ್ನು ಹಿಡಿದಿದ್ದ ಕೆರೂಬಿಯರನ್ನು ನೇಮಿಸಿದರು. ಈ ಜೀವವೃಕ್ಷ ಯೇಸುವು ನಮಗೆ ಕೊಡುವುದಕ್ಕಾಗಿ ಬಂದ ನಿತ್ಯಜೀವದ (ದೇವರ ಸ್ವಭಾವ) ಸಂಕೇತವಾಗಿದೆ. ಕತ್ತಿಯು ನಾವು ದೇವರ ಸ್ವಭಾವವನ್ನು ಪಡೆಯುವುದಕ್ಕೆ ಮುಂಚೆ ನಮ್ಮ ಸ್ವಾರ್ಥತೆಯನ್ನು ಸಾಯಿಸಲಿಕ್ಕಾಗಿರುವ ಶಿಲುಬೆಯ ಚಿಹ್ನೆಯಾಗಿದೆ. ಮೊದಲು ಈ ಕತ್ತಿಯು ಯೇಸುವಿನ ಮೇಲೆ ಬಿದ್ದದ್ದು ಯಥಾರ್ಥವಾದ ಮಾತಾಗಿದೆ. ಆದರೆ ಆತನೊಂದಿಗೆ ನಾವೂ ಸಹ ಶಿಲುಬೆಗೆ ಹಾಕಲ್ಪಟ್ಟೆವು (ಗಲಾ. 2:20). ಅದಲ್ಲದೆ, "ಕ್ರಿಸ್ತ ಯೇಸುವಿನವರು ತಮ್ಮ ಶರೀರಭಾವವನ್ನು, ಅದರ ವಿಷಯಾಭಿಲಾಷೆ ಸ್ವೇಚ್ಛಾಭಿಲಾಷೆಗಳ ಸಹಿತ ಶಿಲುಬೆಗೆ ಹಾಕಿದ್ದಾರೆ" (ಗಲಾ. 5:24).

ಆ ಕೆರೂಬಿಯರಂತೆ, ಒಂದು ಸಭೆಯ ಹಿರಿಯರು ಈ ’ಕತ್ತಿ’ಯನ್ನು ಕೈಯಲ್ಲಿ ಹಿಡಿಯಬೇಕು ಮತ್ತು ಶರೀರಭಾವದ ಮರಣವು ನಮ್ಮನ್ನು ದೈವಿಕ ಜೀವನಕ್ಕೆ ನಡೆಸುವ ಏಕೈಕ ಮಾರ್ಗವಾಗಿದೆ ಎಂದು ಘೋಷಿಸಬೇಕು. ದೇವರೊಂದಿಗಿನ ಐಕ್ಯತೆಯನ್ನು ಮತ್ತೊಮ್ಮೆ ಸ್ಥಾಪಿಸುವ ದಾರಿಯು ಕತ್ತಿಯ ಮೂಲಕವಾಗಿ ಸಾಗುತ್ತದೆ. ಈ ಕತ್ತಿಯನ್ನು ಕೈಗೆತ್ತಿಕೊಳ್ಳದೇ ಇರುವುದರಿಂದ, ಇಂದು ಹೆಚ್ಚಿನ ಕ್ರೈಸ್ತಸಭೆಗಳು ಅನೀತಿಯೊಂದಿಗೆ ರಾಜಿ ಮಾಡಿಕೊಳ್ಳುವ ಜನರಿಂದ ತುಂಬಿವೆ ಮತ್ತು ಅವು ಕ್ರಿಸ್ತನ ದೇಹದ ಪ್ರತಿಬಿಂಬವಾಗಿ ಮುಂದುವರಿದಿಲ್ಲ.

ಒಂದು ಸಮಯದಲ್ಲಿ, "ಇಸ್ರಾಯೇಲ್ಯರು ಮೋವಾಬ್ ಸ್ತ್ರೀಯರೊಡನೆ ವ್ಯಭಿಚಾರ ಮಾಡುವದಕ್ಕೆ ಹೊರಟರು," (ಭಾವಾನುವಾದ) ಎಂದು ನಾವು ಅರಣ್ಯಕಾಂಡ 25:1ರಲ್ಲಿ ಓದುತ್ತೇವೆ. ಇದು ಎಷ್ಟು ಹೆಚ್ಚಿತೆಂದರೆ, ಇಸ್ರಾಯೇಲ್ಯರಲ್ಲಿ ಒಬ್ಬ ಮನುಷ್ಯನು ಒಬ್ಬ ಮಿದ್ಯಾನ್ ಸ್ತ್ರೀಯನ್ನು ತನ್ನ ಮಲಗುವ ಡೇರೆಗೆ ಕರಕೊಂಡು ಬಂದನು (ಅರಣ್ಯಕಾಂಡ 25:6). ಆದರೆ ಯಾಜಕರಲ್ಲಿ ಒಬ್ಬನು - ಫೀನೆಹಾಸನು - ಆ ದಿನ ಇಸ್ರಾಯೇಲ್ಯ ಜನಾಂಗವು ಮರಣದಂಡನೆಗೆ ಈಡಾಗಿ ಸಂಪೂರ್ಣ ನಾಶಗೊಳ್ಳುವುದನ್ನು ತಪ್ಪಿಸಿದನು. ದೇವರ ಗೌರವದ ವಿಷಯದಲ್ಲಿ ಅವನಲ್ಲಿ ಎಷ್ಟು ಅಭಿಮಾನವಿತ್ತು ಎಂದರೆ, ಅವನು ಒಡನೆಯೇ ಕೈಯಲ್ಲಿ ಒಂದು ಈಟಿಯನ್ನು ಹಿಡಿದು, ಆ ಇಸ್ರಾಯೇಲ್ಯನ ಹಿಂದೆ ಹೋಗಿ ಆತನನ್ನೂ ಆ ಸ್ತ್ರೀಯನ್ನೂ ಒಂದೇ ಏಟಿನಿಂದ ತಿವಿದು ಕೊಂದನು (ಅರಣ್ಯಕಾಂಡ 25:7,8). ಆಗ ವ್ಯಾಧಿಯನ್ನು ದೇವರು ತಡೆಹಿಡಿದರು (ಅರಣ್ಯಕಾಂಡ 25:9). ಆದರೆ ಅಷ್ಟರಲ್ಲಿ 24,000 ಜನರು ಸತ್ತಿದ್ದರು. ಆ ವ್ಯಾಧಿಯು ಎಷ್ಟು ಶೀಘ್ರವಾಗಿ ಹರಡುತ್ತಿತ್ತು ಎಂದರೆ, ಆ ದಿನ ಅಲ್ಲಿ "ಕತ್ತಿಯನ್ನು ಹಿಡಿದ ಒಬ್ಬ ’ಕೆರೂಬಿಯನು’" ಇದ್ದಿರದಿದ್ದರೆ, ಆ ರೋಗವು ಡೇರೆಗಳಲ್ಲಿದ್ದ ಸಮಸ್ತ ಇಸ್ರಾಯೇಲ್ ಜನಾಂಗವನ್ನು ನಾಶಗೊಳಿಸುತ್ತಿತ್ತು.

ಪ್ರತಿಯೊಂದು ಕ್ರೈಸ್ತಸಭೆಯಲ್ಲಿ "ಕತ್ತಿಯನ್ನು ಹಿಡಿದ ಒಬ್ಬ ಕೆರೂಬಿಯನು" ಇರುವುದು ಎಷ್ಟು ಅಮೂಲ್ಯವಾದದ್ದೆಂದು ನೀವು ನೋಡಿದಿರಾ?

ಈ ದಿನ ಇಡೀ ಕ್ರೈಸ್ತ ಸಮಾಜದಲ್ಲಿ ಕತ್ತಿಯನ್ನು ಹೇಗೆ ಬಳಸಬೇಕೆಂದು ತಿಳಿದಿರುವ ಸಾಕಷ್ಟು ಮಂದಿ ’ಫೀನೆಹಾಸರು’ ಇಲ್ಲದೇ ಇರುವುದರಿಂದ, ವ್ಯಾಧಿಯು ವೇಗವಾಗಿ ಹರಡುತ್ತಿದೆ. ಎಷ್ಟೋ ಸಭಾಹಿರಿಯರು ಮತ್ತು ಬೋಧಕರು ಜನಪ್ರಿಯತೆ ಪಡೆಯಲಿಕ್ಕಾಗಿ, "ಮಿದ್ಯಾನರನ್ನು ಪ್ರೀತಿಸಿರಿ" ಎಂದು ನಮ್ಮನ್ನು ಸತತವಾಗಿ ಒತ್ತಾಯಿಸುತ್ತಾರೆ. ನಾವು ಸಭೆಯಲ್ಲಿ ಕತ್ತಿಯನ್ನು ಉಪಯೋಗಿಸುವುದು ತಪ್ಪೆಂದು ತೋರಿಸುವ ಸಾವಿರಾರು ತರ್ಕಗಳನ್ನು ಪಿಶಾಚನು ನಮಗೆ ಕೊಡುತ್ತಾನೆ. ಅವನು ತನ್ನ ವಾದದ ಸಮರ್ಥನೆಗಾಗಿ - ಯೇಸುವಿಗೆ ಅವನು ದೇವರ ವಚನವನ್ನು ತೋರಿಸಿದ ಹಾಗೆ - ಬೇಕಾದರೆ ದೇವರ ವಾಕ್ಯವನ್ನು ಸಹ ಉಲ್ಲೇಖಿಸುತ್ತಾನೆ.

ಫೀನೆಹಾಸನು ಯಾವುದೋ ವೈಯಕ್ತಿಕ ಲಾಭಕ್ಕಾಗಿ ಕತ್ತಿಯನ್ನು ಉಪಯೋಗಿಸಿದನೇ? ಇಲ್ಲ. ಇದಕ್ಕೆ ಪ್ರತಿಯಾಗಿ. ಅವನಿಗೆ ಬಹಳ ನಷ್ಟ ಉಂಟಾಯಿತು - ಎಲ್ಲದಕ್ಕೂ ಹೆಚ್ಚಾಗಿ, ದಯಾಪರನು ಮತ್ತು ಸಾಧು ಮನುಷ್ಯ ಎಂಬ ಒಳ್ಳೆಯ ಹೆಸರನ್ನು ಹಾಳು ಮಾಡಿಕೊಂಡನು!! ಅದಲ್ಲದೆ ಅವನು ಕೊಂದಿದ್ದ ಮನುಷ್ಯನ ಕುಟುಂಬದವರು ಮತ್ತು ಗೆಳೆಯರು ಅವನ ಮೇಲೆ ನಿಂದೆ ಮತ್ತು ಕೋಪದ ಸುರಿಮಳೆ ಮಾಡಿರಬಹುದು. ಆದರೆ ದೇವರ ನಾಮದ ಮಹಿಮೆ ಮತ್ತು ಮಾನ್ಯತೆಯು ಫೀನೆಹಾಸನ ಪ್ರೇರಣೆಯಾಗಿದ್ದವು. ಫೀನೆಹಾಸನ ಈ ಸೇವೆಯ ಮೇಲೆ ದೇವರು ತನ್ನ ಮೆಚ್ಚುಗೆಯ ಮೊಹರನ್ನು ಒತ್ತುತ್ತಾ ಹೀಗೆ ಹೇಳಿದರು, "ನಾನೇ ನನ್ನ ಗೌರವವನ್ನು ಕಾಪಾಡಿಕೊಳ್ಳುವ ಮೇರೆಗೆ ಫೀನೆಹಾಸನು ಅದನ್ನು ಕಾಪಾಡಿದ್ದಾನೆ" (ಅರಣ್ಯಕಾಂಡ 25:11). ಅಂತಿಮ ವಿಶ್ಲೇಷಣೆಯಲ್ಲಿ, ದೇವರ ಮೆಚ್ಚುಗೆಯ ಮೊಹರು ಮಾತ್ರವೇ ಮಹತ್ವವುಳ್ಳದ್ದು ಆಗಿದೆ. ಫೀನೆಹಾಸನ ವಿಚಾರವಾಗಿ ದೇವರು ಮುಂದುವರಿಸಿ ಹೀಗೆಂದರು, "ಅವನು ತನ್ನ ದೇವರ ಗೌರವವನ್ನು ಸ್ಥಾಪಿಸಿದಕ್ಕಾಗಿ, ನಾನು ಅವನ ಸಂಗಡ ಸ್ನೇಹದ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತೇನೆ" (ಅರಣ್ಯಕಾಂಡ 25:12,13). ಇಂದು ಅನೇಕ ಸಭೆಗಳಲ್ಲಿ ಸಮಾಧಾನವು ಕಾಣಿಸುವುದಿಲ್ಲ, ಏಕೆಂದರೆ ಅವರು ಮಾನವ ರೀತಿಯಲ್ಲಿ ಸಮಾಧಾನವನ್ನು ಹುಡುಕುತ್ತಾರೆ - ದೇವರ ಕತ್ತಿಯನ್ನು ಉಪಯೋಗಿಸುವುದಿಲ್ಲ. ಇದರ ಪರಿಣಾಮವಾಗಿ ಜಗಳ ಮತ್ತು ವ್ಯಾಜ್ಯಗಳು ಉಂಟಾಗುತ್ತವೆ. ಕ್ರಿಸ್ತನ ಸಮಾಧಾನವನ್ನು ಕೊಳ್ಳಲು - ಮನೆಯಲ್ಲೂ ಮತ್ತು ಸಭೆಯಲ್ಲೂ - ಒಂದು ಕತ್ತಿಯ ಮೂಲಕ ಬೆಲೆಯನ್ನು ತೆರಬೇಕಾಗುತ್ತದೆ (ಕತ್ತಿಯು ಸ್ವಾರ್ಥ-ಜೀವಿತವನ್ನು ಸಂಹರಿಸುತ್ತದೆ).

ಒಂದು ಕ್ರೈಸ್ತಸಭೆಯನ್ನು ಪರಿಶುದ್ಧತೆಯಲ್ಲಿ ಉಳಿಸಿಕೊಳ್ಳ ಬೇಕಾದರೆ, ಅದರ ನಾಯಕರಾದವರು ದೇವರ ನಾಮದ ಗೌರವಕ್ಕಾಗಿ ರೋಷಾಗ್ನಿಯಂತೆ ಉರಿಯುವಂತವರು ಆಗಿರಬೇಕು. ದಯಾಪರರು ಮತ್ತು ಸಾಧು ಸ್ವಭಾವದವರೆಂಬ ಒಳ್ಳೆಯ ಹೆಸರನ್ನು ಪಡೆಯುವ ಗುರಿಯನ್ನು ಬಿಟ್ಟುಬಿಡಬೇಕು, ಮತ್ತು ಅವರ ಕಾಳಜಿ ದೇವರ ನಾಮದ ಮಹಿಮೆಗಾಗಿ ಮಾತ್ರವೇ ಇರಬೇಕು.

ಯೇಸುವಿನಲ್ಲಿ ದೇವರ ನಾಮದ ಪ್ರಖ್ಯಾತಿಯನ್ನು ಬಯಸಿದ ಇಂತಹ ತೀವ್ರ ಉತ್ಸಾಹ ಇದ್ದುದರಿಂದ, ಯೆಹೂದ್ಯರ ದೇವಾಲಯದಲ್ಲಿ ಹಣದ ದಳ್ಳಾಳಿಗಳನ್ನು ಮತ್ತು ಪಾರಿವಾಳ ಮಾರುವವರನ್ನು ಹೊರಕ್ಕೆ ತಳ್ಳುವಂತೆ ಮಾಡಿತು. "ನಿನ್ನ ಆಲಯಾಭಿಮಾನವು ಬೆಂಕಿಯಂತೆ ನನ್ನನ್ನು ದಹಿಸುತ್ತದೆ," (ಯೋಹಾ. 2:17). ಇದು ’ಕ್ರಿಸ್ತನ ಸ್ವಾರೂಪ್ಯ’ದ ಒಂದು ಪ್ರಮುಖ ಅಂಶ ಆಗಿದೆ. ಆದರೆ ಕ್ರಿಸ್ತ ಸಾರೂಪ್ಯವು ಒಬ್ಬನನ್ನು ಜನರು ಮೆಚ್ಚದಂತವನು ಮತ್ತು ತಪ್ಪಾಗಿ ತಿಳಿಯುವಂತವನು ಆಗಿ ಮಾಡುವುದಾದರೆ, ಎಷ್ಟು ಜನರಿಗೆ ಅದರಲ್ಲಿ ಆಸಕ್ತಿ ಇರುತ್ತದೆ?