ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಯೌವನಸ್ಥರಿಗೆ ಸಭೆ Struggling
WFTW Body: 

ನಮ್ಮ ಆತ್ಮಿಕ ಶಿಕ್ಷಣದ ಭಾಗವಾಗಿ ಕರ್ತನು ನಮ್ಮೆಲ್ಲರನ್ನು ಕೆಲವು ಕಷ್ಟಕರ ಅನುಭವಗಳ ಮೂಲಕ ಕರೆದೊಯ್ಯುತ್ತಾನೆ. ಉದಾಹರಣೆಗೆ, ಇತರರು ನಮ್ಮ ನಂಬಿಕೆಗಾಗಿ ನಮ್ಮನ್ನು ಅಪಹಾಸ್ಯ ಮಾಡುವುದನ್ನು ಕರ್ತನು ಅನುಮತಿಸಬಹುದು. ನಮ್ಮನ್ನು ಚುಡಾಯಿಸುವ ಹೆಚ್ಚಿನ ಜನರಲ್ಲಿ "ಕೀಳರಿಮೆಯ ಭಾವನೆ" ತುಂಬಿರುತ್ತದೆ, ಮತ್ತು ಅವರು ನಮ್ಮ ಬಗ್ಗೆ ಹೊಟ್ಟೆಕಿಚ್ಚುಪಡುತ್ತಾರೆ. ಹಾಗಾಗಿ ಅವರ ಬಗ್ಗೆ ನಮ್ಮಲ್ಲಿ ಕನಿಕರವಿರಬೇಕು. ಆದರೆ ಅವರ ಅಪಹಾಸ್ಯವು ನಮಗೆ ಒಳ್ಳೆಯದನ್ನು ಮಾಡುತ್ತದೆ, ಹೇಗೆಂದರೆ ನಾವು ಸ್ವಲ್ಪ ಸ್ವಲ್ಪವಾಗಿ ಜನರ ಅಭಿಪ್ರಾಯಗಳಿಂದ ಮುಕ್ತರಾಗುತ್ತೇವೆ. ಈಗ ನಾನು ನನ್ನ ಹಿಂದಿನ ಜೀವಿತವನ್ನು ತಿರುಗಿ ನೋಡಿದಾಗ ನನಗೆ ಕಾಣುವುದು ಏನೆಂದರೆ, ನನ್ನ ನಂಬಿಕೆಯ ಸಲುವಾಗಿ ನಾನು ನೌಕಾದಳದ ಹಡಗುಗಳಲ್ಲಿ ಸಹ-ಅಧಿಕಾರಿಗಳಿಂದ ಎದುರಿಸಿದ ಅಣಕಿಸುವಂತ ಮಾತುಗಳು (ನಾನು ಯೌವನಸ್ಥನಾಗಿದ್ದಾಗ) ಮತ್ತು ಆ ಮೇಲೆ ನಾನು ಎದುರಿಸಿರುವ ಅಪಹಾಸ್ಯಗಳು - ಇವೆಲ್ಲವೂ ನಾನು ಜನರನ್ನು ಮೆಚ್ಚಿಸುವುದರಿಂದ ಬಿಡುಗಡೆ ಹೊಂದಲು ನನಗೆ ಸಹಾಯ ಮಾಡಿದವು. ಈ ರೀತಿಯಾಗಿ ಕರ್ತರು ನನ್ನನ್ನು ನನ್ನ ಸೇವೆಗಾಗಿ ಸಿದ್ಧಪಡಿಸಿದರು.

ನಾವು ಒಂದು ಕುಟುಂಬವಾಗಿ ಎದುರಿಸಿರುವ ಎಲ್ಲಾ ಶೋಧನೆಗಳನ್ನು ಜಯಿಸಿ ಮುಂದೆ ಸಾಗಲಿಕ್ಕೆ ಕರ್ತನು ನಮಗೆ ನೀಡಿರುವ ಕೃಪೆಗಾಗಿ ನಾನು ಕೃತಜ್ಞನಾಗಿದ್ದೇನೆ. ಜನರು ನಮ್ಮ ಬಗ್ಗೆ ಅಸೂಯೆಪಟ್ಟರು, ಮತ್ತು ಅವರು ನಮಗೆ ಕಿರುಕುಳ ಕೊಡುವಂತೆ ಸೈತಾನನು ಅವರನ್ನು ಪ್ರೇರೇಪಿಸಿದನು. ಆದರೆ ನಾವು ದೇವರಿಂದ ಪಡೆದ ಕೃಪೆಯ ಮೂಲಕ ಸೈತಾನನನ್ನು ಜಯಿಸಲು, ಮತ್ತು ನಮ್ಮನ್ನು ದೂಷಿಸಿ ನಮಗೆ ಹಾನಿ ಮಾಡಲು ಪ್ರಯತ್ನಿಸಿದ ಎಲ್ಲರ ಬಗ್ಗೆ ಉತ್ತಮ ಮನೋಭಾವವನ್ನು ಕಾಪಾಡಿಕೊಳ್ಳಲು ಸಾಧ್ಯವಾಯಿತು - ಅದಲ್ಲದೆ, ಅವರು ನಿಜವಾಗಿ ನಮಗೆ ಯಾವ ಹಾನಿಯನ್ನೂ ಮಾಡಲು ಸಾಧ್ಯವಾಗಲಿಲ್ಲ. 'ರೋಮಾಪುರದವರಿಗೆ 8:28'ರ ವಾಗ್ದಾನದ ಪ್ರಕಾರ, ಜನರು ಬಗೆದ ಎಲ್ಲಾ ಕಾರ್ಯಗಳು ನಮ್ಮ ಅನುಕೂಲಕ್ಕಾಗಿಯೇ ನಡೆದವು.

'ಇತರರು ನಮ್ಮ ಬಗ್ಗೆ ನುಡಿಯುವ ಎಲ್ಲಾ ಕೆಟ್ಟ ಮಾತುಗಳು ನಮ್ಮನ್ನು ಕೆಟ್ಟವರನ್ನಾಗಿ ಮಾಡುವುದಿಲ್ಲ, ಮತ್ತು ಇತರರು ನಮ್ಮ ಬಗ್ಗೆ ಹೇಳುವ ಎಲ್ಲಾ ಒಳ್ಳೇ ಮಾತುಗಳು ನಮ್ಮನ್ನು ಒಳ್ಳೆಯವರನ್ನಾಗಿ ಮಾಡುವುದಿಲ್ಲ', ಎಂಬುದನ್ನು ನೆನಪಿಡಿರಿ. ನಾವು ಏನಾಗುತ್ತೇವೆಂದು ಸ್ವತಃ ನಾವೇ ನಿರ್ಧರಿಸುತ್ತೇವೆ - ಮತ್ತು ಅದು ನಾವು ಪ್ರತಿನಿತ್ಯ ನಮ್ಮ ಶಿಲುಬೆಯನ್ನು ಹೊತ್ತುಕೊಂಡು ಯೇಸುವನ್ನು ಹಿಂಬಾಲಿಸುತ್ತೇವೋ, ಮತ್ತು ಇತರರು ನಮ್ಮ ಬಗ್ಗೆ ಏನೇ ಹೇಳಿದರೂ ಅಥವಾ ಅವರು ನಮಗೆ ಏನೇ ಮಾಡಿದರೂ, ನಾವು ಅವರಿಗೆ ಕ್ರಿಸ್ತನಂತೆ ಪ್ರತಿಕ್ರಿಯೆ ತೋರಿಸುತ್ತೇವೋ, ಎಂಬುದನ್ನು ಅವಲಂಬಿಸಿರುತ್ತದೆ.

ನಮ್ಮ ಹಿಂದಿನ ಜೀವಿತದ ಸೋಲುಗಳೂ ಸಹ - ಅವು ಎಷ್ಟು ಆಳವಾದವು ಅಥವಾ ಎಷ್ಟು ದೊಡ್ಡವು ಆಗಿದ್ದರೂ - ನಾವು ಹಿಂದಿನ ತಪ್ಪುಗಳನ್ನು ಸರಿಪಡಿಸಲು ಇನ್ನು ಮುಂದೆ ಪೂರ್ಣ ಹೃದಯದಿಂದ ಶ್ರಮಿಸುತ್ತೇವೆಂದು ನಿರ್ಧರಿಸುವುದಾದರೆ, ಅವು ನಮ್ಮ ಜೀವಿತದಲ್ಲಿ ದೇವರ ಸಂಕಲ್ಪ ನೆರವೇರುವುದನ್ನು ತಡೆಗಟ್ಟಲಾರವು.

=========================================================================
ನೆನಪಿನಲ್ಲಿಡಿ, 'ಮರಣ'ಕ್ಕೆ ಸಮಾನವಾದ ಯಾವುದೇ ಪರಿಸ್ಥಿತಿಯಿಂದಲೂ ಕರ್ತನು ಪುನರುತ್ಥಾನವನ್ನು ತರಬಲ್ಲನು. ನೀವು ಮಾಡಬೇಕಾಗಿರುವ ಕಾರ್ಯ - ದೇವರೊಂದಿಗೆ ಪ್ರಾಮಾಣಿಕವಾಗಿ ನಡೆದುಕೊಳ್ಳುವುದು.
=========================================================================

ನಾನು ರಕ್ಷಣೆ ಹೊಂದಿದ ನಂತರ ಅನೇಕ ಬಾರಿ ಕರ್ತನನ್ನು ನಿರಾಸೆಗೊಳಿಸಿದ್ದೇನೆ. ಆದರೆ 1975ನೇ ಇಸವಿಯಲ್ಲಿ ನಾನು ಒಂದು ನಿರ್ಧಾರವನ್ನು ಮಾಡಿದೆ (ಆಗ ನಾನು ಸುಮಾರು ೩೬ ವರ್ಷದವನಾಗಿದ್ದೆ, ಮತ್ತು ನನ್ನ ಮನೆಯಲ್ಲಿ ನಾವು ಸಭೆಯಾಗಿ ಕೂಡಲು ಪ್ರಾರಂಭಿಸಿದೆವು); ಅದೇನೆಂದರೆ, ಕರ್ತನಿಗೆ ವಿಧೇಯರಾಗಿ ನಡೆಯುತ್ತಿರುವ ಇತರರಿಗಿಂತ ಹೆಚ್ಚು ಪೂರ್ಣ ಹೃದಯದಿಂದ ನಾನು ನಡೆಯುತ್ತೇನೆ, ಎಂಬುದಾಗಿ. ಈಗ ಅನೇಕ ವರ್ಷಗಳ ನಂತರ ನಾನು ಏನು ಹೇಳಬಲ್ಲೆ ಎಂದರೆ, ದೇವರು ನನ್ನ ನಿರ್ಧಾರವನ್ನು ಗೌರವಿಸಿ, ನನಗೆ ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚಾಗಿ ಕೃಪೆಯನ್ನು ನೀಡಿದ್ದಾರೆ. ಹಾಗಾಗಿ ನನ್ನ ಸ್ವಂತ ಅನುಭವದಿಂದ ನನಗೆ ಏನು ತಿಳಿದಿದೆ ಎಂದರೆ, ದೇವರು ದೋಷವಿಲ್ಲದ ಜನರನ್ನು ಅಥವಾ ಎಂದಿಗೂ ಪಾಪದಲ್ಲಿ ಬೀಳದಿರುವ ಮತ್ತು ವಿಫಲರಾಗದಿರುವ ಜನರನ್ನು ಆರಿಸಿಕೊಳ್ಳುವುದಿಲ್ಲ. ನಿಜ ಹೇಳುವುದಾದರೆ, ಹಲವು ಸಲ ದೇವರು ಅಧಿಕವಾಗಿ ಸೋತಿರುವವರನ್ನು ಹೆಚ್ಚಾಗಿ ಉಪಯೋಗಿಸಿಕೊಳ್ಳುತ್ತಾರೆ. ಇದು ನಮ್ಮ ಸಭೆಗೆ ಬಂದಿರುವ ಅತ್ಯಂತ ಕೆಟ್ಟ ಪಾಪಿಗಳ ಬಗ್ಗೆ ನನಗೆ ಹೆಚ್ಚಿನ ನಿರೀಕ್ಷೆ ನೀಡಿರುವ ಸಂಗತಿಯಾಗಿದೆ.

ಎಲೀಷನು ಶೂನೇಮಿನ ಸ್ತ್ರೀಯನ್ನು, 'ನಿನಗೂ ನಿನ್ನ ಮಗನಿಗೂ ಕ್ಷೇಮವೋ?' ಎಂದು ವಿಚಾರಿಸಿದಾಗ, ಆಕೆಯ ಮಗನು ಆಗ ತಾನೇ ಮರಣ ಹೊಂದಿದ್ದರೂ, 'ಹೌದು, ಎಲ್ಲವೂ ಕ್ಷೇಮ', ಎಂದು ಆಕೆ ಉತ್ತರಿಸಿದಳು (2 ಅರಸುಗಳು 4:8,26)! ಆಕೆಯಲ್ಲಿ ಆಶ್ಚರ್ಯಕರವಾದ ನಂಬಿಕೆಯಿತ್ತು - ಆಕೆ ಎಂತಹ ಜವಾಬು ನೀಡಿದಳು! ದೇವರು ಆ ನಂಬಿಕೆಗಾಗಿ ಆಕೆಯನ್ನು ಸನ್ಮಾನಿಸಿ, ಮರಣ ಹೊಂದಿದ್ದ ಆಕೆಯ ಮಗನನ್ನು ಮರಣದಿಂದ ಎಬ್ಬಿಸಿದರು! ದೇವರು ತನ್ನನ್ನು ನಂಬುವವರಿಗಾಗಿ ಅದ್ಭುತ ಕಾರ್ಯಗಳನ್ನು ಮಾಡುತ್ತಾರೆ. ಅಂತಹ ಜನರು ಎಂದಿಗೂ ಯಾವುದೇ ಪರಿಸ್ಥಿತಿಯಲ್ಲೂ ಅವಮಾನಕ್ಕೆ ಗುರಿಯಾಗುವುದಿಲ್ಲ. ನೀವು ಎಲ್ಲಾ ವೇಳೆಯಲ್ಲಿ - ಯಾವಾಗಲಾದರೂ ಕಷ್ಟಕರ ಸನ್ನಿವೇಶಗಳನ್ನು ಎದುರಿಸುವಾಗ, ಅಥವಾ ಕೆಲವೊಮ್ಮೆ ನೀವು ದೇವರನ್ನು ಶೋಚನೀಯವಾಗಿ ವಿಫಲಗೊಳಿಸಿದಾಗ (ಹೀಗೂ ಸಹ ಆಗಬಹುದು) - ದೇವರಲ್ಲಿ ಇಂತಹ ನಂಬಿಕೆಯಿಂದ ಬಾಳುವವರಾಗಿರಿ.

ಕರ್ತನು "ಮರಣಕ್ಕೆ ಸಮಾನವಾದ" ಯಾವುದೇ ಪರಿಸ್ಥಿತಿಯಲ್ಲಿ ಪುನರುತ್ಥಾನವನ್ನು ತರಬಲ್ಲನು, ಎಂಬುದನ್ನು ನೆನಪಿಡಿರಿ. ನೀವು ಮಾಡಬೇಕಾದ ಒಂದೇ ಒಂದು ಕಾರ್ಯವೆಂದರೆ ಆತನೊಂದಿಗೆ ಪ್ರಾಮಾಣಿಕವಾಗಿ ನಡೆದುಕೊಳ್ಳುವುದು. (ನೀವು ನಿಮ್ಮ ಪಾಪಗಳನ್ನು ಯಾರಿಗೂ ಅರಿಕೆ ಮಾಡುವುದು ಬೇಡ, ಆದರೆ ನೀವು ಕರ್ತನೊಂದಿಗೆ ಸಂಪೂರ್ಣವಾಗಿ ಪ್ರಾಮಾಣಿಕರಾಗಿರಬೇಕು).